ಕನಸಿನೂರು

ಅವನು ಗುಬ್ಬಾರಗಳ ಹೊತ್ತು ನನ್ನ ಬಾಗಿಲಿಗೆ ಬಂದಿದ್ದ
ಕೆಂಪು ನೀಲಿ ಹಸಿರು ಹಳದಿ ಕಿತ್ತಳೆ
ಕಾಮನಬಿಲ್ಲಿನ ಬಣ್ಣಗಳನ್ನೆಲ್ಲ ಹೊತ್ತು ತಂದಿದ್ದ
ನಸುನಗುತ್ತ ನನ್ನ ಬಳಿ ಬಂದ
“ಚೆಂದದ ಹುಡುಗಿ ನೀ, ಇಕೋ ಈ ಕೆಂಪು ಗುಬ್ಬಾರ” ಎಂದ
ಬಂದ ಹಾಗೇ ಸರಸರನೆ ನಡೆದ
ನನ್ನನ್ನು ತನ್ನೊಳಗೆ ಸೆಳೆದ
ಮೊರೆವ ಗಾಳಿ ಕೊರೆವ ಚಳಿ
ಭೋರ್ಗರೆವ ಕಡಲು ನಲಿವ ನವಿಲು
ಅರಿಯದ ನಾಡು ತಿಳಿಯದ ಜನ
ಕನಸ ಕಟ್ಟುತ್ತ ನೆನಪನುಳಿಸುತ್ತ
ಒಮ್ಮೆ ಅವನ ಹಿಂದೆ ಮತ್ತೊಮ್ಮೆ ಅವನ ಮುಂದೆ
ಅಲೆಯುತ್ತಿದ್ದೇನೆ ಕನಸುಗಳ ಬೆಂಬೆತ್ತಿ ಓಡುತ್ತಲೇ ಇದ್ದೇನೆ

ಮಂಜುಳಾ ಮೂಲತಃ ಮೈಸೂರಿನವರು. ಸದ್ಯ ಕ್ಯಾಲಿಫೋರ್ನಿಯಾವಾಸಿ
ಮೈಸೂರು ವಿಶ್ವ ವಿದ್ಯಾನಿಲಯ ಹಾಗು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಪದವಿ.
ಕಥೆ, ಲೇಖನಗಳು ಕನ್ನಡ ಹಾಗು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
‘ಕಥಾಗುಚ್ಛ’ (ಕಥಾ ಸಂಗ್ರಹ), ‘ಇನ್ ದ ಲ್ಯಾಂಡ್ ಆಫ್ ಗೋಲ್ಡನ್ ಗೇಟ್ ಬ್ರಿಜ್’ (ಲೇಖನಗಳ ಸಂಗ್ರಹ) ಪ್ರಕಟಿತ ಪುಸ್ತಕಗಳು