‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ… ನೀವು ನಿಮ್ಮ ಮೂಲ ಕಥೆಯನ್ನೇ ಹಾಡಿರಿ… ನಮಗೆ ಬೇಕಿರುವುದು ನಿಮ್ಮ ಸಿನಿಮಾ ಹಾಡುಗಳಲ್ಲ…’
ಸಂಗಾತ ಪುಸ್ತಕ ಪ್ರಕಟಿಸಿರುವ ಮಂಜುನಾಥ್ ಲತಾ ಅವರ “ಕಥಾಗತ” ಬಹುಮಾನಿತ ಕತೆಗಳ ಪುಸ್ತಕದ ಒಂದು ಕತೆ ನಿಮ್ಮ ಓದಿಗೆ

 

ಕಳೆದೆರಡು ತಿಂಗಳಿಂದಲೂ ಯಾವೊಂದೂ ಸಾವು ಸಂಭವಿಸದಿರುವುದು ಅವರನ್ನೆಲ್ಲ ಆತಂಕಕ್ಕೀಡು ಮಾಡಿದ್ದುದು ಸರಿಯಷ್ಟೆ. ಸಪೂರಾಕೃತಿಯ, ನೀಳಮೂಗಿನ, ಒಣಗಿದ ಬೇರಿನಂತಿರುವ ಚೆನ್ನಮಲ್ಲನು ಅವರಲ್ಲಿ ಮುಖ್ಯನಾದವನಾಗಿದ್ದು ಉಳಿದವರಲ್ಲಿ ಶಿವರಾಜ, ಮುದ್ದುರಂಗ, ಗೌರಿಪುಟ್ಟ ಮತ್ತು ಕುಮಾರಸ್ವಾಮಿ ಸೇರಿದ್ದರು.

ಇಷ್ಟೊಂದು ದೊಡ್ಡ ಊರಲ್ಲಿ ಎರಡು ತಿಂಗಳಾದರೂ ಸಾವಾದ ಮನೆಯಿಂದ ತಮಗೆ ಸುದ್ದಿಯೇ ಬರಲಿಲ್ಲವೆಂದು ಹೆಚ್ಚು ಚಿಂತೆಗೀಡಾಗಿದ್ದವನು ಚೆನ್ನಮಲ್ಲನು. ಒಂದು ಸಾವಾದರೂ ಸಾಕು; ಕನಿಷ್ಠ ಅವನು ಇಪ್ಪತ್ತು ದಿನ ಬಾಳುತ್ತಿದ್ದುದು ಅದಕ್ಕಿದ್ದ ಕಾರಣವು. ಸಾವಿನ ಮನೆಯಲ್ಲಿ ಅವರೆಲ್ಲ ಮಾಡುವ ಭಜನೆಗಾಗಿ ಸಿಕ್ಕುವ ಒಂದಿಷ್ಟು ಭತ್ತ, ಖಾರದ ಪುಡಿ, ಸೌದೆ ಸೊಪ್ಪು, ಕಾಳು ಕಡ್ಡಿ ಅವನ ಸಂಸಾರವನ್ನು ಸರಿಸುಮಾರು ಇಪ್ಪತ್ತು ದಿನದವರೆಗೆ ನೂಕುತ್ತಿದ್ದುದಲ್ಲದೆ, ಅವೆಲ್ಲಕ್ಕಿಂತಲೂ ಹೆಚ್ಚಾಗಿ ಮೂರ್ನಾಲ್ಕು ಹಿಡಿ ಭಂಗಿ ಸೊಪ್ಪು ಮತ್ತು ಹತ್ತು ಬಾಟಲಿ ಸಾರಾಯಿಗಾಗುವಷ್ಟು ಕಾಸು ಅವನ ಕೈಸೇರುತ್ತಿದ್ದುದೂ ಇನ್ನೊಂದು ಕಾರಣವಾಗಿತ್ತು. ಅಷ್ಟೂ ಸಾಮಾನು ಸರಂಜಾಮು ಉಳಿದ ನಾಲ್ಕು ಮಂದಿಗೂ ಸೇರಬೇಕಾಗಿದ್ದರೂ ಬೇರಾವ ದುಡಿಮೆಯನ್ನೂ ಸಂಪಾದನೆಯನ್ನೂ ಕಾಣದ ಚೆನ್ನಮಲ್ಲನಿಗೇ ಅದನ್ನೆಲ್ಲ ಅವರು ಧಾರೆಯೆರೆದು ನೀಡಿಬಿಡುತ್ತಿದ್ದುದು ಅವರ ನಡುವಿನ ವಿಶೇಷ ಸಂಗತಿಯಾಗಿದ್ದಿತು.

ಹೀಗಿರಲಾಗಿ ಈಗ ‘ಸಾವಾದ ಮನೆಯವರ ಆಕ್ರಂದನವೇ ತನ್ನ ಕಿವಿಗೆ ಬೀಳುತ್ತಿಲ್ಲವಲ್ಲ ಧರೆಗುರುವೇ’ ಎಂದು ಚೆನ್ನಮಲ್ಲನು ಹೆಜ್ಜೆ ಹೆಜ್ಜೆಗೂ ಕಂಗಾಲಾಗಿದ್ದನು. ಮತ್ತೊಂದೆಡೆ ಹೋದ ಒಂದು ಸಾವಿನ ಸಂದರ್ಭದ ಭಜನೆಮೇಳದಲ್ಲಿ ಕುಮಾರಸ್ವಾಮಿ ತಂದು ಮಡಗಿದ ಜಗಳ ಅವರೆಲ್ಲರಲ್ಲೂ ವೈಮನಸ್ಸು ಹುಟ್ಟುಹಾಕಿದ್ದು ಅವನ ಚಿಂತೆಯನ್ನು ಇಮ್ಮಡಿಗೊಳಿಸಿದ್ದಿತು.

ಅದೇನಾಗಿತ್ತೆಂದರೆ, ಎಂದಿನಂತೆ ಉಪ್ಪಾರ ಕೇರಿಯಲ್ಲೊಂದು ಸಾವಾಗಿತ್ತು. ಎಲ್ಲಿದ್ದರೂ ಇವರಿಗೆ ಸಾವಿನ ವಾಸನೆ ಮೂಗಿಗೆ ಬಡಿಯುತ್ತಿತ್ತಲ್ಲವೇ, ಹಾಗಾಗಿ ಇವರು ಮಧ್ಯಾಹ್ನವೇ ಸಾವಾದ ಮನೆಯ ಮುಂದೆ ಹಾಜರಾದರು. ಸತ್ತಿರುವುದು ತಾಲ್ಲೂಕಾಫೀಸಿನಲ್ಲಿ ಅಟೆಂಡರ್ ಆಗಿದ್ದ ಲಿಂಗಶೆಟ್ಟಿ; ಸುತ್ತಿ ಬಳಸಿ ಅವರೆಲ್ಲರಿಗೂ ಸಂಬಂಧಿಕನೇ ಆಗಿದ್ದುದು ಅವರ ಸಂತಸವನ್ನು ಮುಮ್ಮಡಿಗೊಳಿಸಿತ್ತು. ಇವರು ಭಜನೆಗೆ ನಾಕು ಸಾವಿರವೇ ಬೇಕೆಂದರು. ಲಿಂಗಶೆಟ್ಟಿಯ ಮಗನೂ ಹಿಂದೆ ಮುಂದೆ ಯೋಚಿಸುವಂಥವನಾಗಿರಲಿಲ್ಲವಾದ್ದರಿಂದ, ಹತ್ತು ಸಾವಿರವಾದರೂ ಸರಿ; ಕೊಟ್ಟು ತನ್ನ ಅಪ್ಪನ ಆತ್ಮವನ್ನು ಸ್ವರ್ಗಕ್ಕೆ ಸೇರಿಸುವಂಥನಾಗಿದ್ದರಿಂದ ಆ ನಾಕು ಸಾವಿರ ಕೊಡಲು ಒಪ್ಪಿಕೊಂಡು ಮುಂಗಡವಾಗಿ ಒಂದೆರಡು ಸಾವಿರ ಕೊಡಲು ಮುಂದಾದನು. ಆಗಲೇ ಕುಮಾರಸ್ವಾಮಿ ಕೈ-ಬಾಯಿ ಅಡ್ಡಮಾಡಿದನು.

“ಇವ್ರಗ್ಯಾಕೆ ಅಷ್ಟು ದುಡ್ಡು? ಮೂರು ಪದ ಹಾಡಿ ಹನ್ನೆರಡು ಗಂಟೆಗೇ ಎಣ್ಣೆ ಹೊಡ್ದು, ಭಂಗಿ ಕುಡ್ದು ಮಲಗಿಬಿಡೋಕಾ? ಹಂಗಾಗೋದಾದ್ರ ನಾನು ಮಳವಳ್ಳಿ ಮಾದೇಸ್ವಾಮಿನೇ ಕರಿಸ್ತೀನಿ…. ಇನ್ನೊಂದೈದು ಸಾವಿರವಾಗ್ಲಿ…. ಜನನೂ ಕೂತು ಕಥ ಕೇಳ್ತಾರ… ನೀನು ಒಪ್ಕಬೇಡ ನಾಗೇಂದ್ರ…” ಎಂದು ನಾಗೇಂದ್ರನ ಕೈಯಿಂದ ಹಣ ಕಿತ್ತುಕೊಳ್ಳಲನುವಾದನು.

ಅವನು ಹಾಗಂದುದೇ ಚೆನ್ನಮಲ್ಲನು ಕ್ರುದ್ಧನಾದನು; ಆದರೂ ತೋರಗೊಡದೆ “ಮಳವಳ್ಳಿ ಮಾದೇಸ್ವಾಮಿ ಯಾಕ? ನೀನೇ ಇದ್ದಯಲ್ಲಾ ಕುಮಾರಸ್ವಾಮಿ; ಸಾಕು! ನೀನೇ ಅವನಿಗಿಂತ್ಲೂ ಚೆಂದಾಗಿ ಹಾಡ್ತಿಯಲ್ಲಾ ಸಿನಿಮಾ ಪದವಾ? ನಿನಗೇ ಹತ್ತು ಸಾವಿರ ಕೊಟ್ಟು ಹಾಡುಸ್ತನ ಬುಡು ನಾಗೇಂದ್ರ” ಎಂದು ಚುಚ್ಚಿದನು.

ಅವನು ಹಾಗೆ ಚುಚ್ಚಿದ್ದು ಕುಮಾರಸ್ವಾಮಿಗೆ ಚೆನ್ನಾಗಿಯೇ ತಾಕಿತು. ಅವನು ಇನ್ನಷ್ಟು ಕೆರಳಿ “ಇಲ್ಲ ನಿನ್ನನ್ನ ಕಟ್ಟಿಕೊಂಡ್ರ ಐವತ್ತು ವರ್ಷದಿಂದ ಹಾಡ್ತಿದ್ದ ಪದನೇ ಹಾಡಬೇಕಾಯ್ತದ… ಜನ ಎದ್ದು ಹೋಯ್ತರ ಅಷ್ಟೆ… ಜನ ಸೇರಬೇಕು ಅಂದ್ರ ಸಿನಿಮಾ ಪದನೂ ಹಾಡ್ಬೇಕಾಯ್ತದ… ಇನ್ನೊಂದ್ ಪದನೂ ಹಾಡ್ಬೇಕಾಯ್ತದ…” ಎಂದನು.

ಹೆಣ ಮುಂದಿಟ್ಟುಕೊಂಡು ಇದೇನಪ್ಪಾ ಇವರ ಕದನ ಎಂದು ಚಿಂತಾಕ್ರಾಂತರಾದ ನಾಗೇಂದ್ರನ ದೊಡ್ಡಪ್ಪ-ಚಿಕಪ್ಪಂದಿರು ಎದ್ದು ಬಂದು ‘ಯಾವುದೋ ಒಂದು ಕಥೆನೋ ಪದವೋ ಹಾಡಿ ರಾತ್ರಿ ತುಂಬಿಸಿ ಅವನ ಆತ್ಮನ ಸ್ವರ್ಗಕ್ಕೆ ಸೇರ್ಸಿ… ಇದೇನ ಚೆನ್ನಮಲ್ಲ ನೀನು ಹಟ ಹಿಡಿದಿರೋದು…. ಒಂದು ಕಾಸು ಹೆಚ್ಚುಕಮ್ಮಿ ಮಾಡ್ಕೊಂಡು ಭಜನ ಮುಗಿಸಿಕೊಡು’ ಎಂದು ರಾಜಿ ಮಾಡಿ ಸುಮ್ಮನಾಗಿಸಲು ನೋಡಿದರು.

ಅಷ್ಟಕ್ಕೂ ಸುಮ್ಮನಾಗದ ಕುಮಾರಸ್ವಾಮಿ “ಆದ್ರ ಒಂದ್ಮಾತು… ನೀವು ಭಜನ ಮಾಡೋದಾದ್ರ ಎಣ್ಣೆ ಹೊಡಿಬಾರ್ದು… ಭಂಗಿ ಸೇದಬಾರದು…. ಹಾಗಾದ್ರ ಮಾತ್ರ ನಾನು ನಿಮ್ಮೊಂದಿಗೆ ಹಾಡ್ತೀನಿ…” ಎಂದನು.

ಚೆನ್ನಮಲ್ಲ ಅದನ್ನು ಸುತಾರಾಂ ಒಪ್ಪದೆ ಹೋದನು. ‘ತಾನು ಮಂಟೇದರನ ಗುಡ್ಡನಾದ ಕಾಲದಿಂದಲೂ ಯಾವೊಂದು ಸಾವಿನ ಮನೆಯಲ್ಲೂ ಭಂಗಿ ಸೇದದೆ, ಸಾರಾಯಿ ಕುಡಿಯದೆ ಹಾಡಿದ್ದಿಲ್ಲ; ಹಾಡಲಾಗುವುದೂ ಇಲ್ಲ… ಒಂದೊಳ್ಳೆಯ ಕಾರ್ಯವಾದರೆ ನಾನು ಹಾಗೇ ಹಾಡ್ತೀನಿ… ಸಾವಿಗಲ್ಲ’ ಎಂದು ಪಟ್ಟು ಹಿಡಿದು ಕುಂತನು.

ಹತ್ತುಹಲವು ದಿನಗಳ ತರುವಾಯ ತಮಗೆ ಒಂದೊಳ್ಳೆ ಸಾವಿನ ಪದ ಸಿಕ್ಕಿದೆ; ಹಾಡಿ ನಮ್ಮ ಬಾಯಿ ಕೆರೆತ ನಿವಾರಣೆಯಾದಂತೆ ಆಗುತ್ತದೆಯೆಂತಲೂ ಲೋಕ ಮರೆತು ತೇಲಾಡುವ ನೀಲಿಗ್ಯಾನಕ್ಕೆ ಅವಕಾಶವಾಗುತ್ತದೆಂತಲೂ ಇದ್ದ ಮುದ್ದುರಂಗ, ಗೌರಿಪುಟ್ಟ ಇತ್ಯಾದಿಗಳು ಈ ಚೆನ್ನಮಲ್ಲನ ಹಟದಿಂದ ಅದಕ್ಕೂ ಕತ್ತರಿ ಬಿದ್ದೀತೆಂದು ಹೆದರಿದವು. ಕೊನೆಗೆ ಗೌರಿಪುಟ್ಟ ಹಾಗೂ ಶಿವರಾಜ ಚೆನ್ನಮಲ್ಲನನ್ನು ಹಾಗೂ ಹೀಗೂ ಮಾಡಿ ಹದಕ್ಕೆ ತಂದು ಒಪ್ಪಿಸಿದರು; ಮುದ್ದುರಂಗ ‘ನೀನು ಉಚ್ಚೆ ಮಾಡೋಕೋ, ಬೀಡಿ ಸೇದೋಕೋ ಹೋಗುವಂತೆ ಹೋಗುವಾಗ ನಿನಗೆ ಎಲ್ಲ ವ್ಯವಸ್ಥೆನೂ ಮಾಡ್ತೀನಿ ಒಪ್ಕೊ ಮಾವ’ ಎಂದು ಚೆನ್ನಮಲ್ಲನ ಕಿವಿಯಲ್ಲಿ ಉಸುರಿದ ಮೇಲೆ ಚೆನ್ನಮಲ್ಲನು ಭಜನೆಗೆ ಒಪ್ಪಿದನು.

ಇತ್ತೀಚಿನ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅವರ ನಡುವಿನ ಕೊಸರಾಟವು ಅಂದು ಸರಿಯಾಗಿಯೇ ಸೆಟೆದು ನಿಂತಿದ್ದಿತು. ಎಂದಿನಂತೆ ಮಂಟೇದರನನ್ನೂ ಸಿದ್ದಪ್ಪಾಜಿಯನ್ನೂ ದೊಡ್ಡಮ್ಮತಾಯಿಯನ್ನೂ ರಾಚಪ್ಪಾಜಿಯನ್ನೂ ನೆನೆದು ಪದಗಳಿಗೆ ಮುಂದಾಗುತ್ತಿದ್ದ ಕುಮಾರಸ್ವಾಮಿಯು ಅಂದು ತಾನು ಹೊಸದಾಗಿ ಸೀಡಿ ಕ್ಯಾಸೆಟ್ಟಿನಲ್ಲಿ ಕೇಳಿ ಕಲಿತಿದ್ದ; ಅದಾಗಲೇ ಆ ಫಾಸಲೆಯಲ್ಲೆಲ್ಲ ಫೇಮಸ್ಸಾಗಿದ್ದ ಮಳವಳ್ಳಿ ಮಾದೇಸ್ವಾಮಿಯ ‘ತಾಳಿ ತಾಳಿ ಚಿನ್ನದ ತಾಳಿ… ಹೆಣ್ಣಿನ ಬಾಳಿಗೆ ಇದುವೆ ಬೇಲಿ’ ಎಂಬ ಹಾಡನ್ನು ಹಾಡಲು ಮುಂದಾದನು. ಅವನು ಹಾಗೆ ಶುರು ಮಾಡುತ್ತಲೇ ಕಂಜರ ಬಾರಿಸುತ್ತಿದ್ದ ಚೆನ್ನಮಲ್ಲನು ಕನಲಿ ಕೆಂಡವಾದನು.

“ಸ್ವಾಮಿ ನಿಂಗೆ ನಾನು ಎಷ್ಟು ಸಲ ಹೇಳಿದಿನಿ ಈ ಕಾಸೆಟ್ ಪದಗಳನ್ನೆಲ್ಲ ಹಾಡಬೇಡ ಅಂತ… ಸುರುವಿಗೇ ಧರೆಗುರುವನ್ನ ಮರ್ತು ಇದೆಂಥದು ನಿಂದು? ಅದ್ಯಾಕೆ ನಿಂಗೆ ಮೂಲಪದಗಳು ಮರೆತುಹೋದವಾ?” ಎಂದು ಜೋರಾಗಿಯೇ ಗದರಿಕೊಂಡನು ಚೆನ್ನಮಲ್ಲನು.

ಅವನು ಹಾಗೆ ತಗಾದೆ ತೆಗೆಯಲೆಂದೇ ಆ ಹಾಡು ಶುರು ಮಾಡಿದ್ದ ಕುಮಾರಸ್ವಾಮಿಯೂ ತಿರುಗಿ ಜೋರಾಗಿಯೇ ದಬಾಯಿಸಿದನು. “ನಿನ್ನ ಮೂಲಪದವ ಕೇಳೋಕೆ ಇಲ್ಲಿ ಯಾರಿದ್ದಾರು? ಜನಕ್ಕೆ ನಾ ಹೇಳೋ ಪದಗಳೇ ಹಿಡಿಸೋದು… ನೀನು ಬೇಕಾದ್ರೆ ಮಧ್ಯೆ ಮಧ್ಯೆ ನಿನ್ನ ಹಳೆಯ ಕಾಲದವುಗಳನ್ನ ಹಾಡ್ಕೋ…ಅದು ನಿನ್ನ ತೀಟೆ…ನಾನು ಹೊಸಪದಗಳನ್ನ ಹಾಡ್ತೀನಿ…” ಎಂದು ಮೇಳದವರಿಗೆ ಸೂಚನೆ ಕೊಟ್ಟು ಮುಂದುವರಿದನು.

ಹಾಗೆ ಸಾವಿನ ಭಜನೆಯ ನಡುವೆ ಎಂದೂ ಸಿಟ್ಟಾಗದ ಚೆನ್ನಮಲ್ಲನು ಅಂದು ಬಹಳವೇ ಸಿಟ್ಟಿಗೆದ್ದನು. “ನೀನು ಮಾಡ್ತಿರೋದು ಗುರುದ್ರೋಹದ ಕೆಲಸ ಗೊತ್ತಾ? ಮೂರು ಕಾಸಿನ ಆಸೆಗಾಗಿ ನೀನು ನಿನ್ನ ಹಳೆ ವರಸೆನೇ ಬಿಟ್ಟು ಆ ಮಳವಳ್ಳಿ ಮಾದೇವನ ಥರ ಆಗೋಕೆ ಹೋಯ್ತಿದಯಿ? ಇದು ಒಳ್ಳೆದಲ್ಲ ತಿಳಕೋ” ಎಂದು ಕೂಗಾಡತೊಡಗಿದನು.

ಆ ಇಬ್ಬರ ವಾಗ್ವಾದವು ತಾರಕಕ್ಕೇರಲು ಮುಂಜಾನೆಯಿಂದ ಹೆಣದ ಮುಂದೆ ಶೋಕಾಡಿ ಸುಸ್ತಾಗಿ ಅರೆನಿದ್ದೆ, ಅರೆ ಎಚ್ಚರದಲ್ಲಿದ್ದ ಮನೆಯಮಂದಿ, ಅಕ್ಕಪಕ್ಕದ ಜನರಲ್ಲಿ ಕೆಲವರು “ಯಾವುದೋ ಒಂದು ಹಾಡಿ ಬೆಳಗು ಮಾಡ್ರಪ್ಪಾ…” ಅಂದರೆ, ಹೆಚ್ಚಿನವರು “ಕುಮಾರಸ್ವಾಮಿ ಹಾಡೇ ಚೆಂದಾಗದಪ್ಪಾ… ಅದನ್ನೇ ಹಾಡ್ಲಿ ಬುಡಿ…” ಎಂದರು. ಎಲ್ಲೋ ಒಂದಿಬ್ಬರು “ಚೆನ್ನಮಲ್ಲನದು ಹಿಂದಿನಿಂದಲೂ ನಡೆದು ಬಂದಿರುವ ಧಾಟಿ; ಅದನ್ನ ಬುಟ್ಟು ಹಾಡೋಕ್ಕಾಯ್ತದ?” ಎಂದು ಆಕಳಿಸಿ ಸುಮ್ಮನಾದರು.

ಅಂತಹ ಜನರ ಯಾವ ಮಾತುಗಳನ್ನೂ ಕಿವಿಗೆ ನುಗ್ಗಿಸದ ಕುಮಾರಸ್ವಾಮಿಯೂ ಚೆನ್ನಮಲ್ಲನೂ ಜಟಾಪಟಿಗಿಳಿದರು. ‘ನೀನು ಇನ್ನು ಮುಂದೆ ಈ ಹೊಸಪದಗಳನ್ನೆಲ್ಲ ಹಾಡುವುದಾದರೆ ನನ್ನ ಮೇಳಕ್ಕೇ ಬರಬೇಡ’ ಎಂದು ಚೆನ್ನಮಲ್ಲನೂ ‘ನಿನ್ನದೇನು ಮಹಾ ಮೇಳ? ನಾನೇ ಒಂದು ಮೇಳ ಕಟ್ತೀನಿ… ಅದೇನು ಕಿತ್ಕೊಂಡಯಿ ಕಿತ್ಕೊಹೋಗು… ಜನ ಚೇಂಜ್ ಕೇಳ್ತಾವರೆ ಕನ… ನಿನ್ನ ಹಳೆ ಗೊಡ್ಡು ಪದನ್ನೆಲ್ಲ ಗಂಟು ಕಟ್ಟಿ ನಿನ್ನ ತಂಬೂರಿ ಜೊತೆಲಿಡು’ ಎಂದು ಕುಮಾರಸ್ವಾಮಿಯೂ ಘೋಷಿಸಲಾಗಿ ಅಂದಿಗೆ ಆ ರಾತ್ರಿಯ ಭಜನೆಯು ಕಳೆಕಟ್ಟದೆ ಮುಕ್ತಾಯವಾಗಿದ್ದಿತು.

* * *

ಚೆನ್ನಮಲ್ಲನಿಗೆ ಸದ್ಯಕ್ಕೆ ಯೋಚನೆಗಿಟ್ಟುಕೊಂಡಿದ್ದುದೇ ಅದು. ಕುಮಾರಸ್ವಾಮಿ ತಾನು ಹೇಳಿದಂತೆ ಮೇಳ ಕಟ್ಟುವವನೇ. ಅವನಿಗೇನು ಕಮ್ಮಿಯಿದೆ? ಫ್ಯಾಕ್ಟರಿಯಲ್ಲೊಂದು ಕೆಲಸವಿದೆ. ಅವನಣ್ಣನೂ ಸರಕಾರಿ ಕೆಲಸದಲ್ಲಿರುವವನೇ. ತನ್ನ ತಮ್ಮ ದೊಡ್ಡ ಹಾಡುಗಾರನಾಗಿ ಮೆರೆದಾಡುವುದಾದರೆ ಎಂಥ ತ್ಯಾಗಕ್ಕಾದರೂ ತಾನು ಸಿದ್ಧನಿರುವುದಾಗಿ ತನ್ನ ಮುಂದೆಯೇ ಆಡಿದವನಲ್ಲವೆ ಅವನು? ಹಾಗಿರುವಾಗ ಅವನು ಕುಮಾರಸ್ವಾಮಿ ‘ನಾನೊಂದು ಹಾಡುಗಾರಿಕೆ ಮೇಳ ಕಟ್ಟುವೆನು ಅಣ್ಣಾ? ನನಗೆಲ್ಲ ಪರಿಕರಗಳೂ ಬೇಕು’ ಎಂದರೆ ‘ಆಗದು’ ಎನ್ನುವನೇ ಅವನ ಅಣ್ಣ ಎಂಬುದು ಚೆನ್ನಮಲ್ಲನ ಲೆಕ್ಕಾಚಾರವಾಗಿದ್ದಿತು.

ಹೆಣ ಮುಂದಿಟ್ಟುಕೊಂಡು ಇದೇನಪ್ಪಾ ಇವರ ಕದನ ಎಂದು ಚಿಂತಾಕ್ರಾಂತರಾದ ನಾಗೇಂದ್ರನ ದೊಡ್ಡಪ್ಪ-ಚಿಕಪ್ಪಂದಿರು ಎದ್ದು ಬಂದು ‘ಯಾವುದೋ ಒಂದು ಕಥೆನೋ ಪದವೋ ಹಾಡಿ ರಾತ್ರಿ ತುಂಬಿಸಿ ಅವನ ಆತ್ಮನ ಸ್ವರ್ಗಕ್ಕೆ ಸೇರ್ಸಿ… ಇದೇನ ಚೆನ್ನಮಲ್ಲ ನೀನು ಹಟ ಹಿಡಿದಿರೋದು…. ಒಂದು ಕಾಸು ಹೆಚ್ಚುಕಮ್ಮಿ ಮಾಡ್ಕೊಂಡು ಭಜನ ಮುಗಿಸಿಕೊಡು’ ಎಂದು ರಾಜಿ ಮಾಡಿ ಸುಮ್ಮನಾಗಿಸಲು ನೋಡಿದರು.

ಆ ಕುಮಾರಸ್ವಾಮಿ ಮಂಟೇಸ್ವಾಮಿಯ ಗುಡ್ಡನಾದ ಮೇಲೆ ಪದಗಳ ಗುಂಗು ಹಿಡಿಸಿಕೊಂಡು ಚೆನ್ನಮಲ್ಲನ ಹಿಂದೆ ಬಂದವನು. ಎಲ್ಲರಿಗಿಂತಲೂ ಚುರುಕಾಗಿ ಹಾಡುವುದನ್ನು ಕಲಿತುಕೊಂಡು ಇವತ್ತು ಅಲ್ಲಿನ ಸುತ್ತಮುತ್ತಲ ಪೈಕಿಗೆಲ್ಲ ಒಳ್ಳೆಯ ತಂಬೂರಿ ಪದದ ಹಾಡುಗಾರನೆಂತಲೇ ಅನ್ನಿಸಿಕೊಂಡಿರುವವನು. ಚೆನ್ನಮಲ್ಲನನ್ನೂ ಮೀರಿಸುವ ಹಾಡುಗಾರಿಕೆ ಅವನದು. ಈಚೆಗಂತೂ ಅವನು ಆ ಮಳವಳ್ಳಿ ಮಾದೇಸ್ವಾಮಿ ಹಾಡುವ ಹಾಡುಗಳ ಅನುಕರಣೆಯಲ್ಲಿ ತೊಡಗಿ, ಅವನು ರೆಕಾರ್ಡ್ ಮಾಡಿ ಮಾರ್ಕೆಟ್ಗೆ ಬಿಟ್ಟಿರುವ ಸಿ.ಡಿಗಳನ್ನು ಕೇಳುತ್ತಾ, ಆನಂದಿಸುತ್ತಾ ‘ಆಹಾ ಆ ಮಳವಳ್ಳಿ ಮಾದೇಸ್ವಾಮಿಯೇನಾದರೂ ಸತ್ತುಕೆಟ್ಟು ಹೋದರೆ ಅವನ ಜಾಗವನ್ನು ಭರ್ತಿ ಮಾಡುವವನೆಂದರೆ ಈ ಕುಮಾರಸ್ವಾಮಿಯೇ ಸೈ’ ಎಂದು ಜನಗಳಿಂದ ಹಾಡಿ ಹೊಗಳಿಸಿಕೊಳ್ಳುತ್ತಿರುವವನು ಈ ಕುಮಾರಸ್ವಾಮಿ ಆಗಿರಲಾಗಿ; ಆ ಕುಮಾರಸ್ವಾಮಿಯೂ ಸೈತ ‘ನಾನೂ ಅ ಮಳವಳ್ಳಿ ಮಾದೇವಸ್ವಾಮಿಯ ಹಾಗೆಯೇ ಹಾಡಿ, ರೆಕಾರ್ಡ್ ಮಾಡಿ ಈ ಕನ್ನಡ ನಾಡಿಗೆ ಕೀರ್ತಿ ತರಬೇಕು, ಅವನ ಹಾಗೆಯೇ ಸರ್ಕಾರದಿಂದ ಬೆಂಗಳೂರಿನಲ್ಲೊಂದು ಸೈಟು ಗಿಟ್ಟಿಸಿಕೊಳ್ಳಬೇಕು’ ಮುಂತಾಗಿ ಅಂದುಕೊಂಡು; ಆ ಮಳವಳ್ಳಿ ಮಾದೇಸ್ವಾಮಿ ಒಮ್ಮೆ ನಂಜನಗೂಡಲ ದೊಡ್ಡ ಜಾತ್ರೆಯಲ್ಲಿ ನಂಜುಂಡೇಶ್ವರನ ಕಥೆ ಮಾಡಲು ಬಂದು ಆಡಿದ ಮಾತುಗಳನ್ನು ಹೊಟ್ಟೆಯೊಳಗಿಂದ ತಂದು ಮುಂದಿಟ್ಟುಕೊಂಡು ನೆನೆದನು:

‘ಎಲ್ಲಾ ಮಾಸ್ವಾಮಿಗಳಿಗೂ ಈ ಮಾದೇಸ್ವಾಮಿಯ ನಮಸ್ಕಾರ…. ನನ್ನ ಆದಿಜಾಂಬವ ಕುಲದ ಮೇಲೆ ಆಣೆ ಮಾಡಿ ಹೇಳುತ್ತೇನೆ. ಇದು ನನ್ನ ಪೂರ್ವ ಜನ್ಮದ ಸುಕೃತವು. ನನ್ನ ಹಾಡುಗಾರಿಕೆಯನ್ನು ಕೇಳಿ, ನಲಿದು ಆನಂದಿಸಿದ ಎಲ್ಲಾ ಬಂಧುಗಳಿಗೂ ನನ್ನ ವಂದನೆಗಳು. ನಾನು ಹಾಡಿದ ನೂರಾರು ಕ್ಯಾಸೆಟ್ಟುಗಳನ್ನು ಕೇಳಿ ಘನ ಸರ್ಕಾರವು ನನಗೆ ಬೆಂಗಳೂರಿನಲ್ಲಿ ಸೈಟೊಂದನ್ನು ಕೊಟ್ಟಿದೆ; ಅದರ ಬೆಲೆ ಸರಿಸುಮಾರು ನಾಕೈದು ಲಕ್ಷವಾಗಿರುವುದು…. ಅಷ್ಟೇ ಅಲ್ಲದೆ ಘನ ಸರ್ಕಾರವು ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಕೊಟ್ಟು ಸನ್ಮಾನಿಸಿದೆ. ಇದಲ್ಲದೆ ಊರೂರು ಕೇರಿಕೇರಿ ಮೇಲೆ ನನಗೆ ಬಂದಿರುವ ಬಹುಮಾನಗಳೆಷ್ಟೋ, ಶಾಲು, ಫಲ ತಾಂಬೂಲಗಳೆಷ್ಟೋ ನಾನರಿಯೆ…. ಇದ ಕೇಳಿದರೆ ನೀವು ರೋಮಾಂಚನಗೊಳ್ಳುವಿರಿ… ಇರಲಿ, ಈಗ ನಾನು ನನ್ನ ಒಂದೆರಡು ಜನಪ್ರಿಯ ಗೀತೆಗಳನ್ನು ಹಾಡಿ ಆಮೇಲೆ ನಂಜುಂಡೇಶ್ವರನ ಕಥೆಗೆ ಬರುವೆನು… ಈಗ ನಾನು ಹಾಡುವ ಗೀತೆಗಳನ್ನು ಮುಂದೆ ಬರಲಿರುವ ಒಂದೆರಡು ಸಿನಿಮಾಗಳಿಗೂ ಸೇರಿಸಿಕೊಳ್ಳುವುದಾಗಿ ಒಂದೀರ್ವರು ಸಂಗೀತ ನಿರ್ದೇಶಕರು ನನ್ನನ್ನು ಕೇಳಿರುವರು…’

ಈ ತೆರನಾಗಿ ಹೇಳುತ್ತಿರುವ ಮಾದೇಸ್ವಾಮಿಯ ಮಾತುಗಳನ್ನು ಅಲ್ಲೇ ಕಥೆ ಕೇಳಲೆಂದು ಟೇಪ್ ರಿಕಾರ್ಡರ್, ನೋಟ್ಬುಕ್ಕುಗಳನ್ನೆಲ್ಲ ಸಿದ್ದಪಡಿಸಿಟ್ಟುಕೊಂಡಿದ್ದ ಜನಪದ ಪ್ರೊಫೆಸರೊಬ್ಬರು ತಡೆದರು. ಮಾದೇವಸ್ವಾಮಿಯ ಮಾತುಗಳಿಗೆ ಅವರ ವಾದ ಹೀಗಿತ್ತು:

‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ… ನೀವು ನಿಮ್ಮ ಮೂಲ ಕಥೆಯನ್ನೇ ಹಾಡಿರಿ… ನಮಗೆ ಬೇಕಿರುವುದು ನಿಮ್ಮ ಸಿನಿಮಾ ಹಾಡುಗಳಲ್ಲ…’ ಮುಂತಾಗಿ ಅವರು ವಾದಿಸುತ್ತ ಮಾದೇಸ್ವಾಮಿಯ ಮೈಕಿನ ಬಳಿಗೆ ಬರಲು, ಹಾಡು ಕೇಳಲು ತುದಿಗಿವಿಯಲ್ಲಿ ಕುಂತಿದ್ದ ಜನರು ರೊಚ್ಚಿಗೆದ್ದರು.

‘ಮಾದೇಸ್ವಾಮಿಗಿಂತಲೂ ನೀನು ದೊಡ್ಡವನೋ? ಹಾಡುವುದು ಅವನಿಗೆ ಗೊತ್ತು; ಕೇಳುವುದು ನಮಗೆ ಗೊತ್ತು… ಮಧ್ಯೆ ನಿನ್ನದೆಂತಹುದು ರಾಗ?’ ಎಂದೆಲ್ಲ ತಗಾದೆಗಿಳಿಯಲು ಮಾದೇಸ್ವಾಮಿ ಆ ಪ್ರೊಫೆಸರರ ಮುಖವನ್ನು ನೋಡಲಾಗಿ, ಅವರು ವಿಶ್ವವಿದ್ಯಾಲಯದಲ್ಲೊಮ್ಮೆ ತಮ್ಮನ್ನು ಕರೆಸಿ ಹಾಡಿಸಿ, ಆ ಕಥೆಯನ್ನು ಪುಸ್ತಕ ಮಾಡಿಸಿ, ಅದನ್ನು ಲೋಕಕ್ಕೆಲ್ಲ ಹಂಚಿ, ಪ್ರಶಸ್ತಿ ಬರಲೂ ಕಾರಣರಾಗಿದ್ದವರು ಎಂಬುದೆಲ್ಲ ನೆನಪಾಗಿ ಅರೆಕ್ಷಣ ಅಲುಗಾಡಿದ ಮಾದೇಸ್ವಾಮಿಯು ‘ಸ್ವಾಮಿ ಪ್ರೊಫೆಸರರೇ ನಿಮ್ಮ ಮಾತು ನಿಜ… ಆದರೆ ನಾನು ನನ್ನ ಮೂಲದ ಪದಗಳನ್ನು ಹಾಡಿದರೆ ಕೇಳುವ ಕಾಲವಿದಲ್ಲ… ನಾನು ಎಂದೋ ಊಟದೊಂದಿಗೆ ಉಪ್ಪಿನಕಾಯಿಯಂತಿರಲಿ ಎಂದು ನಾಲಿಗೆಯ ರುಚಿಗೆಂದು ಹಾಡಿದ ಜನಪ್ರಿಯ ಹಾಡುಗಳೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ… ನನಗೆ ಅನ್ನ, ಬಟ್ಟೆ, ವಸತಿ, ಕೀರ್ತಿಗಳನ್ನೆಲ್ಲ ಕೊಟ್ಟಿವೆ. ನೀವೊಮ್ಮೆ ನನ್ನನ್ನು ಸನ್ಮಾನಿಸಿ ‘ನಮ್ಮ ಸಾಂಸ್ಕೃತಿಕ ಪರಂಪರೆ’, ‘ಮೂಲ ಸಂಸ್ಕೃತಿ, ತಳ ಸಂಸ್ಕೃತಿ, ಒಳಸಂಸ್ಕೃತಿ’ ಎಂದೆಲ್ಲ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ… ಆದರೆ ನೀವು ಹೇಳುತ್ತಿರುವ ಆ ಹಾಡುಗಳನ್ನು ಹಾಡಲೆಂದೇ ನನ್ನ ಒಳನಾಲಿಗೆ ಒತ್ತರಿಸಿ ಬರುತ್ತಿದ್ದರೂ ನಾನು ಹೋದಲ್ಲೆಲ್ಲ ಈ ಜನ ನಾನು ಹಾಡಿದ ಜನಪ್ರಿಯ ರಾಗಗಳ ಹಾಡುಗಳೇ ಬೇಕೆಂದು ಚಂಡಿ ಹಿಡಿಯುತ್ತಾರೆ. ಅಂಥ ಹಾಡುಗಳನ್ನು ಹಾಡುವುದಾದರೆ ಮಾತ್ರ ನನ್ನನ್ನು ಕಥೆ ಮಾಡಲು ಕಾಸು ಕೊಟ್ಟು ಕರೆಯುತ್ತಾರೆ…. ಇಲ್ಲದಿದ್ದರೆ ಇಂದು ನಾನೆಲ್ಲಿ ಈ ಮಹಾಜಾತ್ರೆಯ ಮಹಾಮೇಳದಲ್ಲಿ ಇರುತ್ತಿದ್ದೆ?’ ಮುಂತಾಗಿ ಹೇಳಬೇಕೆಂದುಕೊಂಡರೂ ಜನರೆಲ್ಲ ಆ ಪ್ರೊಫೆಸರರನ್ನು ನೂಕಿ ಹೊರ ಹಾಕುತ್ತಿರುವುದನ್ನು ಕಂಡು ನಿರುಮ್ಮಳವಾಗಿ ‘ಹೋಗಲಾರೆ ಹಲಗೂರಿಗೆ ನಾನು’ ಎನ್ನುವ; ಇದೀಗ ತಾನೇ ಸಖತ್ ಫೇಮಸ್ಸಾಗಿರುವ ತನ್ನ ಸಿನಿಮಾ ಧಾಟಿಯ ಹಾಡನ್ನು ಹಾಡಿ ಜನರನ್ನು ರಂಜಿಸಲು ಗಂಟಲು ಸರಿ ಮಾಡಿಕೊಳ್ಳತೊಡಗಿದನು.

* * *

ಅಂತೆಲ್ಲ ಬಗೆಯಲ್ಲಿ ಜನಮನ ಗೆದ್ದಿರುವ ಮಾದೇಸ್ವಾಮಿಯ ಕಂಠದ ಹಾಗೆಯೇ ಇರುವ ತನ್ನ ಗಂಟಲಿಂದ ಹೊರಡುವ ಹಾಡುಗಳಿಗೆಲ್ಲ ಈ ಚೆನ್ನಮಲ್ಲನೇಕೆ ತಡೆಯೊಡ್ಡುತ್ತಿದ್ದಾನೆಂಬುದೇ ತನಗೆ ಒಗಟಾಗಿರುವುದಲ್ಲ ಎಂದು ಕುಮಾರಸ್ವಾಮಿಯು ಚಿಂತಿಸತೊಡಗಿದ್ದನು. ಆದರೆ ತಾನು ಚೆನ್ನಮಲ್ಲನ ಮುಂದೆ ಅಂದು ಘೋಷಿಸಿದ ಹಾಗೆ ಹೊಸ ಮೇಳ ಕಟ್ಟುವ ತನ್ನ ನಿರ್ಧಾರ ತರವೆ ಎಂದೂ ಯೋಚಿಸಿದನು. ಇದಕ್ಕೆ ಕಾರಣವೆಂತೆಂದರೆ: ಒಂದು ಕಾಲದಲ್ಲಿ ಹುಟ್ಟಿಸಿದ ಮಗನಿಗಿಂತಲೂ ಹೆಚ್ಚಾಗಿ ತನಗೆ ಅನ್ನ, ಬಟ್ಟೆ ಕೊಟ್ಟು, ಹೊದೆಯಲು ಕಂಬಳಿ ಕೊಟ್ಟು, ಇರುಳೆಲ್ಲ ಹಾಡಿ ಕಲಿಸಿದ ಚೆನ್ನಮಲ್ಲ ಈಗಲೂ ತನಗೆ ಗುರು ಸಮಾನ, ತಂದೆಸಮಾನ ಆಗಿರುವುದು.

‘ಆದರೆ ಅವನ ಹಳೆಯ ಕಾಲದ ಪದಗಳನ್ನೇ ಹಾಡಿಕೊಂಡಿದ್ದರೆ ನನಗೆ ಈ ಕಳೆ ಒದಗುತ್ತಿತ್ತೆ; ನಾನು ಕೊಮ್ಮತ್ತೂರಿನಲ್ಲಿ ಹಾಡಿದ ‘ತಾಯಿನೇ ಇಲ್ಲದಂಥ ತವರ್ಯಾಕೆ ತಂಗಿ’ ಹಾಡನ್ನು ಕೇಳಿಯೆ ಅಲ್ಲವೇ ಮಲ್ಲಿಯು ನನ್ನ ಕೈಹಿಡಿಯಲು ಮುಂದಾದದ್ದು; ನನ್ನ ಹೆಂಡತಿಯ ಊರಿನ ಜನ ಈಗಲೂ ನಾನು ಮಳವಳ್ಳಿ ಮಾದೇಸ್ವಾಮಿಯ ಹಾಗೆ ಹಾಡುತ್ತಿದ್ದೇನೆಂದು ಹೊಗಳಿ, ಹೊತ್ತು ಮೆರೆಯುವುದು ನನ್ನ ಹೊಸ ಹಾಡುಗಳಿಗಲ್ಲವೆ? ಇದ್ಯಾಕೆ ಚೆನ್ನಮಲ್ಲನಿಗೆ ಅರ್ಥವಾಗುತ್ತಿಲ್ಲ’ ಎಂದೆಲ್ಲ ಚಿಂತಿಸಿ ಕುಮಾರಸ್ವಾಮಿಯೂ ಒಂದು ಬಗೆಯಲ್ಲಿ ಮಂಕಾಗಿದ್ದನು.

* * *

‘ಮಾದೇಸ್ವಾಮಿಯ ಹಾಗೆ ಹಾಡಲು ತನಗೇಕೆ ಆಗುವುದಿಲ್ಲ; ನನ್ನಿಂದ ಪದ ಕಲಿತ ಕುಮಾರಸ್ವಾಮಿಯೇ ಹಾಗೆ ಹಾಡಲು ಶಕ್ತನಾಗಿರುವಾಗ ಅವನಿಗೆ ಹಾಡು ಕಲಿಸಿದ ತನಗೇಕೆ ಅದು ಒಲಿಯಲಾರದು? ತನಗೆ ಸಿದ್ದಪ್ಪಾಜಿಯ ಕಥೆ ಕಲಿಸಿದ ಅಪ್ಪಾಜಪ್ಪನೇ ಮಾದೇಸ್ವಾಮಿಗೂ ಕಲಿಸಿದ್ದು; ಅವನೇ ಈ ಹಾಡುಗಳನ್ನೆಲ್ಲ ಹಾಡಿ ದೊಡ್ಡವನಾಗಿದ್ದಾನೆಂದ ಮೇಲೆ ತನಗೇಕೆ ಅದು ಆಗಲಾರದು? ಮಾದೇಸ್ವಾಮಿಗೆ ಆ ಕಲೆ ಒಲಿದಿತ್ತು, ಅವನು ದೊಡ್ಡ ಮನುಷ್ಯನಾಗಿ ಬೆಂಗಳೂರವರೆಗೂ ಹೋದ; ನಾನು ಮಂಟೇದರನ ಒಕ್ಕಲಾಗಿ ಇಲ್ಲೇ, ಅವನು ನೆಲೆಸಿದ ಫಾಸಲೆಯಲ್ಲೇ ಇರಬೇಕೆಂದುಕೊಂಡು ಬಂದೆ. ಅದೇ ನನಗೆ ಹಿನ್ನಡೆಯಾಯಿತೆ? ಇನ್ನೂ ನಾನು ಹೀಗೆಯೇ ಹಾಡಿಕೊಂಡಿದ್ದರೆ ನನ್ನನ್ನು ಕಥೆಗೆ ಕರೆಯುವವರ್ಯಾರು? ನನ್ನ ಹಳೆಯ ಪದವ ಕೇಳುವವರಾರು?’ ಎಂದು ಅತ್ತ ಚೆನ್ನಮಲ್ಲನೂ ಯೋಚಿಸತೊಡಗಿದ್ದನಾದರೂ ತಾನು ಹೀಗೆ ಯೋಚಿಸತೊಡಗುತ್ತಿದ್ದಂತೆ ಅವನ ಗುರುವಾಗಿದ್ದ ಅಪ್ಪಾಜಪ್ಪನು ಮೈದಾಳಿ ಮುಂದೆ ನಿಂತು ಹೀಗೆ ನುಡಿದಂತಾಗಿತ್ತು:

‘ಅಲಲಲಾ ಚೆನ್ನ… ನೀನೂ ಲೋಕರೂಢಿಯ ರುಣಕ್ಕೊಳಗಾದೆಯಾ ಮಗನೆ? ಲೋಕದ ಆತ್ಮಗಳೆಲ್ಲ ಕೊಳೆತು, ತನ್ನರಿವು, ಇರುವ ಮರೆತು, ತಾ ನಿಂತ ನೆಲವ ತೊರೆದು ಹೊರಡುವ ಹೊತ್ತಾದರೂ ನಾನು ಬೇರು ಬಿಟ್ಟು ಅಲಗುವುದಿಲ್ಲವೆಂದು ನೀನು ಧರೆಗುರುವಿನ ಮೇಲಾಣೆ ಮಾಡಿ ಸಿಸುವೃತ್ತಿ ಸ್ವೀಕರಿಸಿದ್ದು ಮರೆತುಹೋದೆಯಾ ಕಂದ? ಈಗಲೂ ನಾನು ನಂಬಿರುವುದು ನಿನ್ನೊಬ್ಬನನ್ನೇ; ನೀನು ಕುಡಿದ ಭಂಗಿಸೊಪ್ಪಿನ ನೀಲಿಗ್ಯಾನ, ಸುರೆಯ ಅಮಲು ನಿನ್ನನ್ನು ಲೋಕಗ್ಯಾನಕ್ಕೊಳಗು ಮಾಡದೆಂದೇ ನಾನು ನಂಬಿರುವಾಗ ನೀನು ಈಗ ಈ ಲೋಕರೂಢಿಯ ಹಣೆಬರಹಕ್ಕೆ ಸಿಲುಕಿ ನನ್ನನ್ನು ನಿಂದೆಗೆ ದೂಡುವೆಯಾ ಮಗನೇ… ಅಯ್ಯೋ ಮಂಟೇದರನೇ… ಎಲ್ಲಿಗೆ ಬಂದರು ನಿನ್ನ ನೀಲಿಗ್ಯಾನದ ಮಕ್ಕಳು!’

ಅಂತೆ ತನ್ನ ಗುರುವಿನ ಇರುವು ಕಾಡಿದ ಕೂಡಲೇ ಬೆಚ್ಚುವ ಚೆನ್ನಮಲ್ಲನು; ತನ್ನ ಮಗಳು ಬಲಿತು ಬೆಳೆದು, ತನ್ನ ಮುಂದೆಯೇ ಚಿಗುರು ಮೊಲೆಗಳ ನಿಗುರಾಡಿಸಿಕೊಂಡು ಓಡಾಡುವುದನ್ನು ಕಂಡು ಕಂಗಾಲಾಗುವನು.

ಮದುವೆಗೆ ನಿಂತಿರುವ ಮಗಳು ‘ಅಪ್ಪ ನನ್ನನ್ನು ನನ್ನ ಕನಸಿನ ಚೆನ್ನಿಗನಿಗೆ ಧಾರೆಯೆರೆದು ಕೊಡುತ್ತಿಲ್ಲವಲ್ಲ’ ಎಂದು ಚಿಂತಿಸುತ್ತಿರುವಂತಿದೆ. ಒಣಗಿ, ಮುದುರಿ, ಕೊಳೆತು ಉದುರಿ ಹೋಗುತ್ತಿರುವ ನನ್ನೀ ನೆರಕೆಯ ಗುಡಿಸಲು ‘ಈ ಚೆನ್ನಮಲ್ಲ ದುಡಿದು ಸಂಪಾದಿಸದೆ, ನನ್ನನ್ನು ಮೇಲಕ್ಕೆತ್ತಿ ನಿಲ್ಲಿಸದೆ ಸತಾಯಿಸುತ್ತಿದ್ದಾನೆ’ ಎಂದು ಯೋಚಿಸುತ್ತಿರುವಂತಿದೆ. ನಡುವಯಸ್ಸಿಗೇ ದುಡಿದುಡಿದು, ಸೊಪ್ಪು ಸೆದೆಗೆ ಗುದ್ದಾಡಿ ಮುದಿ ಗೊಡ್ಡಾದಂತೆ ಕಾಣುತ್ತಿರುವ ಹೆಂಡತಿ ‘ನಾನು ಕಟ್ಟಿಕೊಂಡ ನನ್ನ ಹಾಡುಗಾರ ಚೆನ್ನಮಲ್ಲ; ಹೊಸದೊಂದನ್ನೂ ಕಲಿಯದೆ ನನ್ನ ಬದುಕನ್ನು ಮೂರಾಬಟ್ಟೆ ಮಾಡಿ ನಿಲ್ಲಿಸಿದ್ದಾನೆ’ ಎಂದು ಸೆರಗಲ್ಲಿ ಕಣ್ಣೀರು ಬಸಿದು ಕೊರಗುತ್ತಿರುವಂತಿದೆ…

ಈ ಅಂತೆ ಕಂತೆಗಳೆಲ್ಲ ತನ್ನ ಕಣ್ಣಮುಂದಿನ ನಿಜಗಳಾಗಿ ಕಾಡುತ್ತಿರಲು; ಕಾಡಿ ಕುಣಿಯುತ್ತಿರಲು ನಿಜವಾಗಿಯೂ ರೊಚ್ಚಿಗೀಡಾದ ಚೆನ್ನಮಲ್ಲನು ತಾನೂ ಕುಮಾರಸ್ವಾಮಿಯಂತೆಯೇ, ಆ ಮಳವಳ್ಳಿ ಮಾದೇವಸ್ವಾಮಿಯಂತೆಯೇ ಹೊಸ ಹೊಸ ಪದಗಳನ್ನೆಲ್ಲ ಕಲಿತು ಜನಸಮೂಹವನ್ನು ರಂಜಿಸದೆ ತನಗೆ ಉಳಿಗಾಲವಿಲ್ಲವೆಂದೇ ನಿಶ್ಚಯಿಸಲು, ಅವನು ಆ ಹಾಡುಗಳನ್ನೆಲ್ಲ ಕಲಿಯುವ ದಾರಿಯನ್ನು ಹುಡುಕಲು ತೊಡಗಿದನು.

ಹಳೆಯ ಪದಗಳಾಗಿದ್ದರೆ ಅವನ ನಾಲಿಗೆ ತಡವರಿಸಬೇಕಿರಲಿಲ್ಲ, ಕೈಯ ಕಂಜರ ತೊದಲಬೇಕಿರಲಿಲ್ಲ; ಹಳೆಯ ತಂಬೂರಿ ಮುದುಡಬೇಕಿರಲಿಲ್ಲ… ಆದರಿವು ಹೊಸ ಪದಗಳು… ತಾನು ಇತ್ತೀಚೆಗೆ ಯಾವ ಮದುವೆಯಲ್ಲೇ ಆಗಲಿ, ಸಮಾರಂಭಗಳಲ್ಲೇ ಆಗಲಿ ಕೇಳಿದರೂ ಕ್ಯಾಸೆಟ್ಟುಗಳಲ್ಲಿ, ಮೈಕುಗಳಲ್ಲಿ ಮೊರೆಯುತ್ತಿದ್ದವುಗಳೆಂದರೆ ಅವೇ… ಅವೇ ಸಿನಿಮಾ ರಿವಾಜಿನ ಪದಗಳು… ಆಗೆಲ್ಲ ‘ಹೆ! ಇವೆಂಥ ಪದಗಳೋ ಮಗನೇ… ನೀನಿವತ್ತು ನಿನ್ನ ಕಿವಿಗಳನ್ನಷ್ಟೇ ನಂಬಿ ಕ್ಯಾಸೆಟ್ಟು ಮುಂದಿಟ್ಟುಕೊಂಡು ಕಲಿತ ಪದಗಳಿವು…ನನ್ನವು ಹಾಗಲ್ಲ…. ಹೊಟ್ಟೆಯೊಳಗಿಂದ, ಅನ್ನ ಸೇರುವ ಕರುಳೊಳಗಿಂದ ಹುಟ್ಟುವ ಪದಗಳು…. ನೀನು ಕುಡಿದ ಭಂಗಿಯ ಸೊಪ್ಪು, ಕುಡಿದ ಹೆಂಡದ ನಶೆ, ಲೋಕವ ಮರೆತು ಲೋಕದೊಳಗಾಗುವ ಚಟದಿಂದ ಹುಟ್ಟುವ ಪದಗಳೋ ತಮ್ಮಾ’ ಎಂದು ಚೆನ್ನಮಲ್ಲ ಮತ್ತಿನಲ್ಲಿ ನುಡಿದು ಅವುಗಳಿಗೆ ಕಿವಿಗೊಡದೆ ನಡೆದುಬಿಡುತ್ತಿದ್ದ.

ಆದರೆ ಈಗ ಹಾಗಿರಲಿಲ್ಲ. ಆ ಎಲ್ಲ ಹೊಸ ಪದಗಳನ್ನು ಕಲಿಯಲೇಬೇಕೆಂಬ ವಿಚಿತ್ರವಾದ ಹಟವೊಂದು ಅವನ ಕರುಳನ್ನೆಲ್ಲ ಸುತ್ತಿಕೊಂಡು; ಒಳಗೆ ಹಿಂಡಿ ನುಲಿಯುತ್ತಿತ್ತು. ಆಗ…

ಮೊದಲಿಗೆ ಅವನಿಗೆ ನೆನಪಾದುದು ಕುಮಾರಸ್ವಾಮಿಯ ಹಟ್ಟಿಯು. ಹಿಂದೊಮ್ಮೆ ತಾನು ತಂದ ರಿಕಾರ್ಡಿನ ಮೆಷೀನು, ಕ್ಯಾಸೆಟ್ಟುಗಳು ಎಲ್ಲವನ್ನೂ ಮನೆಗೆ ಚೆನ್ನಮಲ್ಲನನ್ನು ಕರೆದು ತೋರಿಸಿದ್ದ ಕುಮಾರಸ್ವಾಮಿ. ಅವೆಲ್ಲ ನೆನಪಾಗುತ್ತಲೇ ಅಲ್ಲಿರುವ ಮಳವಳ್ಳಿ ಮಾದೇಸ್ವಾಮಿಯ ಪದಗಳು, ಕುಮಾರಸ್ವಾಮಿಯ ಹಾಡುಗಳು, ಇನ್ನೂ ಯಾರ್ಯಾರೋ ಹೆಂಗಸರು ಹಾಡಿರುವ ಹಾಡುಗಳು ಎಲ್ಲವೂ ನೆನಪಾಗಲಾಗಿ ಇಂದು ರಾತ್ರಿಯೇ ಅವನ ಹಟ್ಟಿಗೆ ನುಗ್ಗಿ ಅವುಗಳನ್ನೆಲ್ಲ ಹೊತ್ತೊಯ್ದು ಹಾಡು ಕೇಳಿ ಅವನ್ನೆಲ್ಲ ಕಲಿಯಲೇಬೇಕೆಂದು ನಿಶ್ಚಯಿಸಿದ ಚೆನ್ನಮಲ್ಲನ ಹೊಟ್ಟೆಯೊಳಗಿದ್ದುದು ‘ನನಗೂ ನಿನ್ನ ಹೊಸ ಹಾಡು ಕಲಿಸು’ ಅಂತ ಕೇಳಿದರೆ ನನ್ನನ್ನು ಗೇಲಿಗೊಳಗು ಮಾಡದೆ ಬಿಟ್ಟಾನೆಯೆ ಆ ಕುಮಾರಸ್ವಾಮಿ’ ಎನ್ನುವ ವಾದವು.

* * *

ಕುಮಾರಸ್ವಾಮಿಯ ಮನೆಗೆ ನುಗ್ಗಿದ ಕಳ್ಳನನ್ನು ಊರು ಕೇರಿಯ ಜನರೆಲ್ಲ ಅಟ್ಟಾಡಿಸಿಕೊಂಡು ಹೊಡೆದದ್ದರಿಂದ ಆ ಕಳ್ಳ ಸತ್ತು ಹೋದನೆಂತಲೂ, ಹೊಡೆಯುವುದಕ್ಕೂ ಮುಂಚೆ ಅವನು ಚೆನ್ನಮಲ್ಲನೆಂಬುದು ಗೊತ್ತಾಯಿತಾದರೂ ಕುಮಾರಸ್ವಾಮಿಯೇ ಅವನು ಮುಂದೆ ತನ್ನನ್ನು ದೊಡ್ಡ ಹಾಡುಗಾರನಾಗಲು ಬಿಡುವುದಿಲ್ಲವೆಂದು ತಿಳಿದು ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದನೆಂತಲೂ ಊರೊಳಗೆಲ್ಲ ಸುದ್ದಿಯಾಯಿತು.

ಆದರೆ ಚೆನ್ನಮಲ್ಲ ಸತ್ತ ಬಗೆಯು ಚೆನ್ನಮಲ್ಲ ಮತ್ತು ಅವನ ಗುರು ಅಪ್ಪಾಜಪ್ಪನಿಗೆ ಮಾತ್ರ ಗೊತ್ತಿತ್ತು ಮತ್ತು ಅದು ಹೀಗಿದ್ದಿತ್ತು:

ಚೆನ್ನಮಲ್ಲ ಆ ಕ್ಯಾಸೆಟ್ಟು, ರಿಕಾರ್ಡರುಗಳನ್ನೆಲ್ಲ ಕದಿಯಲೆಂದು ಕುಮಾರಸ್ವಾಮಿಯ ಹಟ್ಟಿಯ ಹಿತ್ತಲಬಾಗಿಲಿಂದ ನುಗ್ಗಲು ಅನುವಾದನಷ್ಟೆ; ಅಲ್ಲೇ ಕಾವಲಿಗೆ ಕುಳಿತಂತೆ ಕುಳಿತಿದ್ದ ತನ್ನ ಗುರು ಅಪ್ಪಾಜಪ್ಪನನ್ನು ಅಲ್ಲಿ ಕಂಡು ಬೆಚ್ಚಿಬಿದ್ದನು. ಎಂದೋ ಸತ್ತುಹೋದ ತನ್ನ ಗುರು ಅಪ್ಪಾಜಪ್ಪನು ಇಂದು, ಹೀಗೆ ಈ ಪರಿಯಲ್ಲಿ ತನ್ನ ಮುಂದೆ ಕುಂತು ಕಿಚ್ಚುನಗೆದೋರುತ್ತಿರುವುದಕ್ಕೆ ನನ್ನ ಅರಿವುಗೇಡಿತನವೇ ಕಾರಣವಿರಬಹುದೆ ಎಂದು ನೊಂದು, ಬೆಂದು ಬಸವಳಿದ ಚೆನ್ನಮಲ್ಲನು; ಯಾವುದೋ ಕಾಣಬಾರದ ಪವಾಡವನ್ನು ಕಂಡವನಂತೆ ಬೆಚ್ಚಿ ಹಿಂದಕ್ಕೆ ನೆಗೆದು ಬೀಳಲು, ಅವನ ಹಿಂತಲೆಗೆ ಸಿಕ್ಕಿದ ದೊಡ್ಡದಾದ ಚೂಪು ಕಲ್ಲೊಂದು ಅವನ ತಲೆಯನ್ನು ಸೀಳಿತ್ತು.