ಗಜಲ್

ಮಲ್ಲಿಗೆಯ ಹೂವು ನಾನು ಮುರುಟಬೇಡ ಗೆಳೆಯ
ತಿಳಿಗೊಳ ಜಲದಂತೆ ನನ್ನೆದೆ ಕಲಕಬೇಡ ಗೆಳೆಯ

ಸ್ವಚ್ಛಂದ ಆಗಸದ ತಣ್ಣನೆಯ ಮನ ನೀಲ ಹರಹು
ಇರುಳ ಚೆಲುವಿಗೆ ಕಪ್ಪುತಾರೆ ಇರಿಸಬೇಡ ಗೆಳೆಯ

ಅದೆಷ್ಟು ಸೊಬಗಿನ ಮೋಹಕ ಕನಸುಗಳು ತೇಲುತಿವೆ
ಕೆಂಪಾದ ಕೊಳ್ಳಿಗೆ ಇನ್ನಿಲ್ಲದಂತೆ ಸುಡಬೇಡ ಗೆಳೆಯ

ಎಷ್ಟೋ ಸಂವತ್ಸರ ಕಳೆದು ಸೋನೆಗರೆದಿದೆ ಶ್ರಾವಣ
ಉತ್ಸಾಹದ ಚಿಗುರನು ಮೂಸಿ ಎಸೆಯಬೇಡ ಗೆಳೆಯ

ಹೃದಯವೀಣೆ ಕಾದಿದೆ ಮಾಧುರ್ಯ ಹೊಮ್ಮಿಸಲು ಗಿರಿ
ಮೃದುವಾದ ಬೆರಳಲಿ ಅಪಸ್ವರ ನುಡಿಸಬೇಡ ಗೆಳೆಯ