ಈ ಕಥೆ ಮುಗಿದು ಅವರು ಚಿಕ್ಕಪ್ಪನ ಮನೆಗೆ ಹೊರಟಿದ್ದರು. ನಾನು ಅದೇ ಗುಂಗಿನಲ್ಲಿ ಏನೇನೆಲ್ಲಾ ಪ್ರಶ್ನಿಸುತ್ತಾ ಉಮ್ಮನ ದಂಬಾಲು ಬಿದ್ದೆ. ಅದು ಕಳೆದು ಸುಮಾರು ದಿನವಾಗಿರಬಹುದು. ಒಂದು ದಿನ ನಾನು ಒಬ್ಬನೇ ಮನೆಯ ಹತ್ತಿರದ ತೊರೆಯ ಬಳಿ ಮೊದಲ ಮಳೆಯ ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದೆ. ಗುಂಡಿಯ ಮೀನುಗಳನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಂತೆ ಹಿಂದಿನಿಂದ ತರಗೆಲೆ ಮೆಲ್ಲಗೆ ಅಲುಗಿದಂತಾಯಿತು. ಬೆಚ್ಚಿ ಬಿದ್ದು ಹಿಂತಿರುಗಿದೆ. ತಲೆಯಲ್ಲಿ ‘ಯು’ ಆಕಾರವಿದ್ದ ಹಾವೊಂದು ತೊರೆಯ ನೀರಿನಲ್ಲಿ ತೇಲಿ ಬಂದು ದಡ ಹತ್ತುತ್ತಿತ್ತು. ನಾನು ಸದ್ರಿ ಹಾವು-ಮೀನೆಂದು ತಿಳಿದು ಗಾಬರಿ ಬಿದ್ದೆ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ನಮ್ಮ ಮಡಿಕೇರಿಯ ಅಜ್ಜಿ ಬರುವುದು ವರ್ಷಕ್ಕೆ ಎರಡೋ ಮೂರೋ ಸಲ. ಒಂದೋ ಮಕ್ಕಳಿಗೆ ಶಾಲೆಯಲ್ಲಿ ರಜಾ ಇರ್ಬೇಕು, ಇಲ್ಲಾಂದ್ರೆ ನಮ್ಮ ಸಂಬಂಧಿಕರ ಮನೆಯಲ್ಲೇನಾದ್ರೂ ಕಾರ್ಯಕ್ರಮ ಇರಬೇಕು. ಇವೆರಡು ಕಾರಣ ಬಿಟ್ಟರೆ ಅವರು ಘಟ್ಟ ಇಳಿಯುವುದೇ ಅಪರೂಪ. ಭಾಷೆಯಲ್ಲಿ ಅಪ್ಪಟ ಮಲಯಾಳಿ. ಆ ದಿನಗಳಲ್ಲಿ ಇವರ ಮಾತನ್ನು ಕೇಳಲಿಕ್ಕಾಗಿಯೇ ನಾವೆಲ್ಲಾ ಸುತ್ತುವರಿದು ಅವರ ಉಚ್ಛಾರಣೆಗೆ ಮನಸೋತು ಅಚ್ಚರಿಯಿಂದ ಆಲಿಸುತ್ತಿದ್ದೆವು. ಅಷ್ಟಕ್ಕೂ ನಮಗೆ ಮಲಯಾಳಂ ಅಂದರೆ ವಿಶೇಷ ಗೌರವ. ಭಾಷೆಯ ಸೊಗಡೇ ಹಾಗೆ.

ಅಜ್ಜಿ ಅಂದರೆ ನನ್ನ ಚಿಕ್ಕಪ್ಪನ ಅಮ್ಮ, ಅವರ ಮಕ್ಕಳು ಉಮ್ಮ ಅಂತ ಕರೆದು ನಮಗೂ “ಮಡಿಕೇರಿಯ ಉಮ್ಮ” ಆಗಿ ಬದಲಾಗಿದ್ದರು. ಯಾವತ್ತಾದರೊಮ್ಮೆ ಊರಿಗೆ ಬಂದರೆ, ಅವರ ಬತ್ತಳಿಕೆಯಲ್ಲಿ ರಾಶಿ ಕಥೆಗಳು, ವಿಶೇಷ ಅನುಭವಗಳ ತಿಜೋರಿ. ನಾವು ಕಿವಿಗೆಳೆರಡನ್ನು ಒತ್ತೆ ಇಟ್ಟು ಅರೆಬರೆ ಅರ್ಥವಾಗುವ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಅವರಿಗೆ ಕನ್ನಡವಾಗಲಿ, ನಮ್ಮ ಮನೆಮಾತು ಬ್ಯಾರಿ, ತುಳುವಾಗಲಿ ಏನೇನೂ ಬರದು. ಆದರೂ ನಮ್ಮ ಮಾತುಗಳನ್ನು ಹೇಗೋ ಡಿಕೋಡಿಂಗ್ ಮಾಡಿಕೊಂಡು ಅರ್ಥೈಸಿಕೊಳ್ಳುತ್ತಿದ್ದುದೇ ಸೋಜಿಗ. ನಮಗಾದರೆ ಅವರಿಗಿಂತಲೂ ಮಲಯಾಳಂ ಕಡಿಮೆ ಅರ್ಥವಾಗುವುದು. ಉಮ್ಮನ ವಕಾಲತ್ತಿನಲ್ಲಿ ನಮ್ಮ ಮಾತು- ಪ್ರತಿ ಮಾತುಗಳು ನಡೆಯುತ್ತಿದ್ದವು. ಅಷ್ಟಕ್ಕೂ ದೂರದ ಮಡಿಕೇರಿಯ ಮಗನಿಗೆ ಬ್ಯಾರಿ ಹುಡುಗಿಯನ್ನು ತರಿಸಿಕೊಳ್ಳುವುದು ಸುಲಭವೇನು? ಅವೆಲ್ಲಾ ಮಣ್ಣಿನ ಋಣ. ವಿಧಿ ಬರೆದ ಬಳಿಕ, ಮಡಿಕೇರಿಗೂ- ಜೋಗಿಬೆಟ್ಟುವಿಗೂ ಏನು ಸಂಬಂಧ ಎಂದು ಕೇಳಲೇಬಾರದು.

ಮಲಯಾಳಂ ಆ ಕಾಲಘಟ್ಟದಲ್ಲಿ ಮುಸ್ಲಿಮರಿಗೆ ದೇವ ಭಾಷೆಯಂತೆ! ಅದನ್ನು ಕಲಿತವರು ಮಹಾ ಜ್ಞಾನಿಗಳೆಂಬ ಮೂಢ ನಂಬಿಕೆಯೂ ನಮ್ಮಲ್ಲಿ ಅಂಟಿಹೋಗಿತ್ತು. ಅವರು ಅರಳು ಹುರಿದಂತೆ ‘ಞ’ ಕಾರ ‘ಙ’ ಕಾರ ಸರಾಗವಾಗಿ ಮಾತನಾಡುವಾಗ ನಾವು ಪರವಶರಾಗಿಬಿಡುತ್ತಿದ್ದೆವು. ಮಡಿಕೇರಿಯ ಮೂಲ ನಿವಾಸಿಗಳು ಯಾರೂ ಅಪ್ಪಟ ಮಲಯಾಳಿಗಳಲ್ಲ. ಮತ್ತು ಅವರಿಗೆ ಕನ್ನಡ, ಕೊಡವ ಭಾಷೆಗಳೂ ಲೀಲಾಜಾಲ. ಆದರೆ ಈ ಮಡಿಕೇರಿ ಉಮ್ಮನ ಪೂರ್ವಜರು ಕೇರಳದ ತಲಶೇರಿಯಿಂದ ವಲಸೆ ಬಂದವರು. ಆ ಕಾರಣಕ್ಕಾಗಿಯೇ ಅವರು ಬ್ಯಾರಿ ಮಿಶ್ರಿತ ಮಳಯಾಳಂ ಮಾತನಾಡದೆ ಅಪ್ಪಟ ಮಲಯಾಳಂನ್ನು ಮಾತ್ರ ಮಾತನಾಡುತ್ತಿದ್ದುದು.

ಒಮ್ಮೆ ಯಾವುದೋ ಊರಿನ ವಿಶೇಷ ಹೇಳುತ್ತಾ ಒಂದು ವಿಚಿತ್ರ ಕಥೆ ಪ್ರಾರಂಭಿಸಿದ್ದರು. ಅವರು ಬಾಲ್ಯದಲ್ಲಿದ್ದಾಗಿನ ಕಥೆಯದು. ಆಗ ಅವರಿದ್ದ ಹಳ್ಳಿ ನದಿ ತಟದಲ್ಲಿತ್ತು. ಆ ಊರಲ್ಲಿ ಇದ್ದಕ್ಕಿದ್ದಂತೆ ಎಲ್ಲರ ಮನೆಯಿಂದ ಕೋಳಿಗಳು ರಾತ್ರಿ ಬೆಳಗಾಗುವುದರೊಳಗಾಗಿ ನಾಪತ್ತೆಯಾಗತೊಡಗಿದ್ದವು. ಒಂದೆರಡು ಬಾರಿ ನರಿಯೋ, ನಾಯಿಯೋ ಹಿಡಿದಿರಬೇಕೆಂಬ ಸಂಶಯದಲ್ಲಿ ದಿನ ದೂಡುತ್ತಿದ್ದವರಿಗೆ ದಿನವೂ ಕಾಣೆಯಾಗುವ ಕೋಳಿಗಳ ಬಗ್ಗೆ ಚಿಂತೆ ಹತ್ತಿತ್ತು. ಅಪರಾತ್ರಿಯಲ್ಲಿ ಕೋಳಿ ತಿನ್ನಲು ಬರುವ ಜೀವಿಯ ಚೀತ್ಕಾರ ಕೂಡಾ ಕೇಳಿಸಿಕೊಂಡವರಿದ್ದರು. ಹಾವೋ, ಉಡವೋ ಆಗಿರಬೇಕೆಂದು ಸಂಶಯ ವ್ಯಕ್ತಪಡಿಸಿದರೂ ಯಾರೂ ಕಣ್ಣಾರೆ ಕಂಡಿರಲಿಲ್ಲ. ಹರಕೆ, ಹೋಮ, ಯಜ್ಞ- ಯಾಗ ಎಲ್ಲವೂ ತೀರಿತು. ಕೋಳಿ ಕಳ್ಳತನ ಮುಂದುವರಿದು ಆಡುಗಳು ಕಾಣೆಯಾಗುವಷ್ಟು ಪರಿಸ್ಥಿತಿ ಕೈ ಮೀರಿತು. ಕೊನೆಗೆ ಯಾರೋ ಊರಿನ ಸಂತರೊಬ್ಬರ ಬಳಿ ಬಂದು ಅಹವಾಲನ್ನು ತೋಡಿಕೊಂಡರು.

ಕೂಲಂಕುಶವಾಗಿ ಪರಿಸ್ಥಿತಿಯನ್ನು ಅರ್ಥಮಾಡಿದ ಆ ಸಂತ, ಕೋಳಿ ಗೂಡಿನ ಬಾಗಿಲಲ್ಲಿ ದಪ್ಪ ಬೂದಿ ಹಾಕಿ ಬಿಡಬೇಕೆಂದು ಸಲಹೆಯನ್ನು ಕೊಟ್ಟರಂತೆ. ಊರವರು ಹಾಗೆಯೇ ಅನುಸರಿಸಿ, ರಾತ್ರಿ ನಿದ್ದೆಗೆಟ್ಟು ಕಾದು ಕುಳಿತರು. ಅದೊಂದು ಹುಣ್ಣಿಮೆ ರಾತ್ರಿ. ನದಿ ಹರಿಯುವ ಸದ್ದು ಬಿಟ್ಟರೆ ಸಂಪೂರ್ಣ ನಿಶ್ಯಬ್ಧ. ಆಗೀಗ ಜೀರುಂಡೆಗಳ ತಾಳ ಮದ್ದಲೆ. ಮಧ್ಯ ರಾತ್ರಿ ಕಾಡಿನ ನಿಶ್ಯಬ್ಧವನ್ನು ಬೇಧಿಸುತ್ತಾ ಹೆದರಿಕೆ ಹುಟ್ಟಿಸುವ ಸದ್ದೊಂದು ಕೇಳಿ ಬರತೊಡಗಿತು. ಪಟ ಪಟನೆ ನೆಲದಲ್ಲಿ ಬಿದ್ದು ಹೊರಳಾಡುವ ಸದ್ದು ಕೋಳಿ ಗೂಡಿನ ಬಳಿ ಕೇಳಲಾರಂಭಿಸಿತು. ಎಲ್ಲರ ಕಿವಿ ಕಣ್ಣುಗಳು ನೆಟ್ಟಗಾದವು. ಅದರ ಚೀತ್ಕಾರ ಎಷ್ಟು ಭಯಂಕರವಾಗಿತ್ತೆಂದರೆ ಯಾರೊಬ್ಬರಿಗೂ ಕೋಳಿ ಗೂಡಿನ ಬಳಿ ಹೋಗಿ ಅದನ್ನು ನೋಡುವಂತಹ ಧೈರ್ಯ ಬರಲಿಲ್ಲ. ಬೆಳಕು ಹರಿಯಲೆಂದು ಕಾದು ಕುಳಿತರು. ಕೋಳಿ ಹಿಡಿಯಲು ಬಂದ ಪ್ರಾಣಿಯ ಕೊಸರಾಟ ಜೋರಾಗಿತ್ತು. ಬೆಳಗಾಯಿತು. ಅವರು ಬಂದು ಕೋಳಿ ಗೂಡಿನಲ್ಲಿ ನೋಡಬೇಕಾದರೆ ದೊಡ್ಡ ಹೆಬ್ಬಾವಿನ ಗಾತ್ರದ ಜೀವಿಯೊಂದು ಬೂದಿಯಲ್ಲಿ ಹೊರಳಾಡಿ ಸುಸ್ತಾಗಿ ಮಲಗಿತ್ತು. ಅದು ಹಾವುಮೀನು! ಅಬ್ಬಾ.. ಹಾವು ಮೀನೇ, ಈ ಕಥೆ ಕೇಳುತ್ತಾ ಮನೆಯವರೆಲ್ಲಾ ಆಶ್ಚರ್ಯ ಪಟ್ಟಿದ್ದೆವು. “ಹೂಂ, ಹೌದು” ಎಂದು ಮಡಿಕೇರಿ ಉಮ್ಮ ತಲೆಯಾಡಿಸಿದ್ದರು. ಅಂತೂ ಕೊನೆಗೆ ಊರವರು ದಿನವೂ ನದಿಯಿಂದ ಹತ್ತಿ ಬಂದು ಕೋಳಿ ಮುಕ್ಕುತ್ತಿದ್ದ ಮಹಾ ಮಾರಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಆ ದೊಡ್ಡ ಮೀನನ್ನು ಅಜಕ್ಕಳ ಮಾಡಿ ಊರವರಿಗೆಲ್ಲಾ ಹಂಚುವಷ್ಟಾದರೂ ಮತ್ತೂ ಮಾಂಸ ಉಳಿಯಿತಂತೆ.

ಆಗಲೇ ನನಗೆ ಹಾವು ಮೀನಿನ ಪೌರುಷದ ಬಗ್ಗೆ ಅರಿವಾದದ್ದು. ಹಾಗಾದರೆ “ಅಷ್ಟು ದೊಡ್ಡ ಮೀನುಗಳು ನದಿಯಲ್ಲಿ ಇರುತ್ತವೆಯೇ?” ಎಂಬ ಸಹಜ ಪ್ರಶ್ನೆ ದುಮುದುಮಿಸುತ್ತಿತ್ತು. ಕೇಳಲು ಮನಸ್ಸಾದರೂ ಹರುಕು ಮುರುಕು ಮಲಯಾಳಂನ್ನು ಸಂಭಾಳಿಸುವುದು ಸಾಧ್ಯವಿಲ್ಲವಲ್ಲವೆಂದು ಮೌನವಾಗಿದ್ದೆ. ಆ ಹೊತ್ತಿಗೆ ಮಡಿಕೇರಿ ಉಮ್ಮ ಇನ್ನೊಂದು ಮಾತನ್ನು ಹೇಳಿಬಿಟ್ಟರು. ಹಾವು ಮೀನುಗಳು ತುಂಬಾ ಉದ್ದ ಬೆಳೆದ ಬಳಿಕ ಕಾಡಿಗೆ ಹತ್ತಿ ಕನ್ನಡಿ ಹಾವುಗಳಾಗುತ್ತವೆ ಎಂದು. ಅದು ಸುಳ್ಳಾದರೂ ಅವರು ಹೇಳುವ ಗಂಭೀರತೆಗೆ ಎಂಥವನೂ ನಂಬಿಯೇ ಬಿಡಬೇಕು. ಮಡಿಕೇರಿಯ ಉಮ್ಮ ಹೇಳಿದ ಕಥೆ ನಡೆದದ್ದು ೧೮ನೇ ಶತಮಾನದ ಕೊನೆಯಲ್ಲಿ. ಹೇಗಿದ್ದರೂ ನಾವು ಊಹಿಸದೇ ಇರುವಂತಹ ಜೀವಿಗಳಿದ್ದವೆಂಬುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ್ಗೆ ತೇಜಸ್ವಿಯವರ ಏರೋ ಪ್ಲೈನ್ ಚಿಟ್ಟೆ ಓದುವಾಗ ಚೀಂಕ್ರ ಮೇಸ್ತ್ರಿ, ಹಾವು- ಮೀನು, ಅರಿಸ್ಟಾಟಲನ ಪ್ರಸ್ತಾಪ ಬರುವಾಗ ಮಡಿಕೇರಿಯ ಉಮ್ಮ ಘನ ಗಂಭೀರವಾಗಿ ಕಥೆ ಹೇಳುತ್ತಾ ತಾಂಬೂಲ ಉಗುಳುವ ಮುಖವೊಮ್ಮೆ ತೇಲಿ ಬಂತು.

ಈ ಕಥೆ ಮುಗಿದು ಅವರು ಚಿಕ್ಕಪ್ಪನ ಮನೆಗೆ ಹೊರಟಿದ್ದರು. ನಾನು ಅದೇ ಗುಂಗಿನಲ್ಲಿ ಏನೇನೆಲ್ಲಾ ಪ್ರಶ್ನಿಸುತ್ತಾ ಉಮ್ಮನ ದಂಬಾಲು ಬಿದ್ದೆ. ಅದು ಕಳೆದು ಸುಮಾರು ದಿನವಾಗಿರಬಹುದು. ಒಂದು ದಿನ ನಾನು ಒಬ್ಬನೇ ಮನೆಯ ಹತ್ತಿರದ ತೊರೆಯ ಬಳಿ ಮೊದಲ ಮಳೆಯ ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದೆ. ಗುಂಡಿಯ ಮೀನುಗಳನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಂತೆ ಹಿಂದಿನಿಂದ ತರಗೆಲೆ ಮೆಲ್ಲಗೆ ಅಲುಗಿದಂತಾಯಿತು. ಬೆಚ್ಚಿ ಬಿದ್ದು ಹಿಂತಿರುಗಿದೆ. ತಲೆಯಲ್ಲಿ ‘ಯು’ ಆಕಾರವಿದ್ದ ಹಾವೊಂದು ತೊರೆಯ ನೀರಿನಲ್ಲಿ ತೇಲಿ ಬಂದು ದಡ ಹತ್ತುತ್ತಿತ್ತು. ನಾನು ಸದ್ರಿ ಹಾವು-ಮೀನೆಂದು ತಿಳಿದು ಗಾಬರಿ ಬಿದ್ದೆ. ಈ ಸಣ್ಣ ಮೀನಿನ ಮನೆ ಹಾಳಾಗಲಿ ಎಂದು ಅರ್ಧದಲ್ಲೇ ಬಿಟ್ಟು ಹೆದರುತ್ತಲೇ ಓಡಿ ಬಂದೆ. ನಡುಗುತ್ತಾ ಬಂದು ಉಮ್ಮನಲ್ಲಿ ಹಾವು ಮೀನಿನ ವಿಷಯ ಪ್ರಸ್ತಾಪಿಸಿದೆ. ಉಮ್ಮ ಜೋರಾಗಿ ನಗುತ್ತಾ “ಯಾವುದೋ ನಾಗರ ಹಾವು ಇರಬೇಕು ಕಣೋ” ಎಂದು ತಮ್ಮ ಕೆಲಸದಲ್ಲೇ ಮಗ್ನರಾದರು. ಮತ್ತೊಮ್ಮೆ ಯಾವುದೋ ದಿನ ನಮ್ಮ ಮನೆಗೆ ನಾಗರಹಾವು ಬಂದಿದ್ದಾಗ ಅದು ಹಿಂದೆ ನೋಡಿದ ತಥಾಕಥಿತ ಹಾವೆಂಬ ಸ್ಪಷ್ಟ ತೀರ್ಮಾನಕ್ಕೆ ಬಂದೆ.

ಅವರು ಬಂದು ಕೋಳಿ ಗೂಡಿನಲ್ಲಿ ನೋಡಬೇಕಾದರೆ ದೊಡ್ಡ ಹೆಬ್ಬಾವಿನ ಗಾತ್ರದ ಜೀವಿಯೊಂದು ಬೂದಿಯಲ್ಲಿ ಹೊರಳಾಡಿ ಸುಸ್ತಾಗಿ ಮಲಗಿತ್ತು. ಅದು ಹಾವುಮೀನು! ಅಬ್ಬಾ.. ಹಾವು ಮೀನೇ, ಈ ಕಥೆ ಕೇಳುತ್ತಾ ಮನೆಯವರೆಲ್ಲಾ ಆಶ್ಚರ್ಯ ಪಟ್ಟಿದ್ದೆವು. “ಹೂಂ, ಹೌದು” ಎಂದು ಮಡಿಕೇರಿ ಉಮ್ಮ ತಲೆಯಾಡಿಸಿದ್ದರು. ಅಂತೂ ಕೊನೆಗೆ ಊರವರು ದಿನವೂ ನದಿಯಿಂದ ಹತ್ತಿ ಬಂದು ಕೋಳಿ ಮುಕ್ಕುತ್ತಿದ್ದ ಮಹಾ ಮಾರಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಆ ರಾತ್ರಿ ಪೂರ್ತಿ ಹಾವು- ಮೀನಿನ ವಿಚಾರಕ್ಕೆ ಉಮ್ಮನನ್ನು ಪೀಡಿಸಿದ್ದೆ. ಜೊತೆಗೆ ಸೇರಿಕೊಂಡ ಅಕ್ಕಂದಿರೂ ನನ್ನ ಕುತೂಹಲಕ್ಕೆ ಮಸಾಲೆ ಹಚ್ಚಿದ್ದರು. ಕೊನೆಗೂ ಒಂದು ಹಾವು ಮೀನಿನ ಕಥೆ ಹುಟ್ಟಿತು. ಅದೊಂದು ದಿನ ಉಮ್ಮನ ತಮ್ಮ ಅಂದರೆ ನನ್ನ ಸೋದರ ಮಾವ ಮತ್ತು ಪಟಾಳಂ, ನದಿಯ ದಡದಲ್ಲಿ ಕುಳಿತು ಗಾಳ ಹಾಕುತ್ತಿದ್ದರಂತೆ. ಒಮ್ಮೆಲೆ ಗಾಳಕ್ಕೆ ಪ್ರಬಲವಾದ ಏನೋ ಸಿಕ್ಕಿದಂತಾಗಿ ಎಳೆಯತೊಡಗಿತಂತೆ. ಯಾವುದೋ ಬಂಡೆಗೋ, ಬೇರಿಗೋ ಸಿಕ್ಕಿರಬಹುದೆಂದು ಭಾವಿಸಿ ಉದಾಸೀನರಾಗಿಯೇ ಗಾಳ ಸುತ್ತ ತೊಡಗಿದರಂತೆ. ಆದರೆ ನೀರಿನೊಳಗಿಂದ ವಿಪರೀತ ಜಗ್ಗಾಟವಿದ್ದರಿಂದ ಅವರಿಗೂ ದಿಗಿಲಾಗಿರಬೇಕು. ಆಗ ಅವರೂ ಸಣ್ಣವರು. ಜೊತೆಗಿದ್ದ ಉಳಿದಿಬ್ಬರು ಗೆಳೆಯರ ಸಹಾಯದಿಂದ ಹೇಗೂ ಗಾಳದ ಹಗ್ಗ ಎಳೆಯತೊಡಗಿದರು. ಹೇಗೋ ಎಳೆದೆಳೆದು ನೀರಿನಿಂದ ಮೇಲೆ ಬರುತ್ತಿದ್ದಂತೆ ಆ ಆಕೃತಿಯನ್ನು ಕಂಡು ಬೆಚ್ಚಿ ಬಿದ್ದರಂತೆ. ಗಾಳವನ್ನು ಬಂಡೆಯ ಬದಿಗೆಸೆದು ಹತ್ತಿರದಲ್ಲೇ ಇದ್ದ ಯಾರೋ ಒಬ್ಬರು ಹಿರಿಯರಿಗೆ ಓಡಿ ಹೋಗಿ ತಿಳಿಸಿದರಂತೆ. ಬಂದು ನೋಡಿದವರೇ “ಅಯ್ಯೋ ಇದು ದೊಡ್ಡ ಕನ್ನಡಿ ಹಾವು, ನೀವು ಇಲ್ಲಿಂದ ಓಡಿ ಹೋಗಿ, ಅವುಗಳಿಗೆ ದ್ವೇಷ ಹುಟ್ಟಿದರೆ ನಿಮ್ಮನ್ನು ಬಿಡುವುದಿಲ್ಲ” ಎಂದು ಹೆದರಿಸಿ ಹುಡುಗರನ್ನು ದೂರ ಓಡಿಸಿದರು. ಅವರೆಲ್ಲಾ ಹೋದ ಬಳಿಕ ಗಾಳ ಬಿಡಿಸಿದ ಹಾವು ಮೀನನ್ನು ಮನೆಗೆ ಕೊಂಡು ಹೋದರಂತೆ. ಇದೆಲ್ಲವನ್ನೂ ದೂರದಲ್ಲೇ ಪೊದೆಗಳ ಮಧ್ಯೆ ಅಡಗಿ ಕುಳಿತು ನೋಡುತ್ತಿದ್ದ ಮಾವ ಮತ್ತು ಗೆಳೆಯರು ಕಿಂಕರ್ತವ್ಯಮೂಢರಾಗಿ ಕುಳಿತರಂತೆ.

ಅಷ್ಟರಲ್ಲೇ ಅಬ್ಬನ ಬೇಟೆಯ ಅನುಭವಗಳು ಪುಂಖಾನುಪುಂಖವಾಗಿ ಉದುರಲಾರಂಭಿಸಿತು. ಅಬ್ಬ ಸಣ್ಣದರಲ್ಲೇ ರಸ್ತೆ ಕಾಮಗಾರಿಯಲ್ಲಿ ಕೆಲಸ ಮಾಡಿದವರು. ದಟ್ಟ ಕಾಡುಗಳಲ್ಲಿ ತಿಂಗಳುಗಟ್ಟಲೆ ಕಳೆದವರು. ಸುಬ್ರಹ್ಮಣ್ಯ, ಸುಳ್ಯದ ಆಗಿನ ಕಾಡಿನಲ್ಲಿ ಬಿಡಾರ ಹೂಡಿ ಕುಳಿತು ಕಾಡಿನ ಹಸಿ ಹಸಿ ರೋಚಕ ಅನುಭವ ಹೊಂದಿದವರು. ಕೆದಂಬಾಡಿ ಜತ್ತಪ್ಪ ರೈ ಅವರ ಪುಸ್ತಕ ಓದಿದಂತೆ ತಮ್ಮ ಅನುಭವವನ್ನೂ ಬಿಚ್ಚಿಡುವವರು. ಆ ದಿನಗಳಲ್ಲಿ ಅವರು ಮೀನು ಶಿಖಾರಿಗೆ ತ್ರಿಶೂಲಾಕೃತಿಯ ಈಟಿ ಬಳಸಿ ಮೀನುಗಳನ್ನು ಹಿಡಿಯುತ್ತಿದ್ದರಂತೆ. ಹುಣ್ಣಿಮೆ ದಿನಗಳಲ್ಲಿ ಟಾರ್ಚು ಕಟ್ಟಿಕೊಂಡು ಮೊಂಡು ತಲವಾರಿನಲ್ಲಿ ಬೀಸಿ ಹೊಡೆದು ಮೀನು ಹಿಡಿಯುತ್ತಿದ್ದರಂತೆ. ಗಾಳಕ್ಕೆ ವಿರಳವಾಗಿ ಸಿಗುವ ಹಾವು ಮೀನುಗಳು ಎಳೆಯುವಾಗ ಗಾಳದ ಹಗ್ಗವನ್ನು ತುಂಡರಿಸುವಲ್ಲಿ ನಿಷ್ಣಾತಿಗಳಂತೆ. ಗಾಳಕ್ಕೆ ಸಿಕ್ಕ ಅವುಗಳನ್ನು ಎಳೆಯಬೇಕಾದರೆ ನೀರಿನಲ್ಲೇ ಕೊಸರಾಡುತ್ತಾ ಕಾಡು ಕೋಣದಷ್ಟು ಗದ್ದಲವೆಬ್ಬಿಸುತ್ತಿತ್ತಂತೆ. ಆ ರಾತ್ರಿ ತುಂಬು ಅನುಭವಗಳಿಂದ ಪುನೀತವಾಯಿತೆಂದು ನಾನೂ ನಿದ್ದೆ ಹೋದೆ.


ಮರುದಿನ ಭಾನುವಾರವಿರಬೇಕು. ಬೆಳಗ್ಗೆ ಎದ್ದಂತೆ ನನಗೂ ಹಾವು ಮೀನು ನೋಡಬೇಕೆಂಬ ಆಸೆ ಉತ್ಕಟವಾಯಿತು. ಅದರ ಬಲಶಾಲಿತನ, ಎಲ್ಲವೂ ನೆನೆದು ಮತ್ತೆ ಮತ್ತೆ ರೋಮಾಂಚನಗೊಳ್ಳುತ್ತಲೇ ಇದ್ದೆ. ಇವತ್ತು ಖಂಡಿತಾ ಕೆರೆಗೆ ಹೋಗಿ ಗಾಳ ಹಾಕುವುದೆಂದು ತೀರ್ಮಾನಿಸುತ್ತಲಿರಬೇಕಾದರೆ, ಉಮ್ಮ “ಅಬ್ಬನ ಅಂಗಡಿಗೆ ಹೋಗಲಿಕ್ಕಿದೆ, ಬೇಗ ಸ್ನಾನ ಮಾಡು” ಎಂದರು. “ಥೋ ಇಲ್ಲದ ರಜೆಗೂ ಕೆಲಸಾನಾ?” ಅಂಥ ರೇಗಿದೆ. ಅಬ್ಬ ಅಂಗಡಿಗೆ ಕರೆದರೆ ಎದುರಾಡುವ ಧೈರ್ಯ ಮನೆಯಲ್ಲಿ ಯಾರಿಗೂ ಇರಲಿಲ್ಲ. ಒಲ್ಲದ ಮನಸ್ಸಿನಿಂದ ಅಬ್ಬನ ಜೊತೆ ಅಂಗಡಿಗೆ ಹೊರಟು ಬಂದೆ.

ಅಬ್ಬನ ಜವಳಿಯಂಗಡಿಯ ಎದುರಿಗೆ ಕಬ್ಬಿನ ಜ್ಯೂಸ್ ವ್ಯಾಪರಿಯ ಮಿಶಿನ್ ನೋಡುತ್ತಾ ನನ್ನನ್ನೇ ಕಲ್ಪಿಸಿಕೊಳ್ಳುತ್ತಿದ್ದೆ. ನನ್ನ ಕುತೂಹಲವನ್ನೆಲ್ಲಾ ಮನೆಯವರು ಸೇರಿ ಹೀಗೆಯೇ ಹಿಂಡಿ ಹಿಪ್ಪೆ ಮಾಡುತ್ತಿದ್ದಾರೇನೋ ಅಂಥ ಅನಿಸದಿರಲಿಲ್ಲ. ಅಷ್ಟರಲ್ಲೇ ಅಬ್ಬ ಏನೋ ಕೆಲಸವಿದೆಯೆಂದು ಮಂಗಳೂರಿಗೆ ಹೊರಟು ನಿಂತರು. “ಅಂಗಡಿಯನ್ನು ಸರಿಯಾಗಿ ನೋಡಿಕೊ” ಎಂದು ಕೆಲಸದವನಿಗೆ ಹೇಳಿಕೊಟ್ಟು ಹೋದರು. ಅಷ್ಟರಲ್ಲೇ ಕೆಲಸದವನು “ನೀನು ಇಲ್ಲೇ ನಿಂತಿರು, ಹೋಗಿ ಬರುತ್ತೇನೆ” ಎಂದು ಹೇಳಿ ಎಲ್ಲಿಗೋ ಹೊರಟು ಹೋದ. ಆ ಮಧ್ಯೆ ಒಂದಿಬ್ಬರು ಗಿರಾಕಿಗಳು ಬಂದು “ಈ ಡ್ರೆಸ್ ಗೆ ಎಷ್ಟು, ಅದಕ್ಕೆಷ್ಟು” ಎಂದು ತುಳುವಿನಲ್ಲಿ ಚೌಕಾಸಿ ಆರಂಭಿಸತೊಡಗಿದರು. ನನ್ನ ಹರುಕು ಮುರುಕು ತುಳು, ಅಪ್ರಬುದ್ಧತೆಯನ್ನು ಗಮನಿಸಿ “ಇದು ಕೆಲಸಕ್ಕಾಗಲಿಕ್ಕಿಲ್ಲವೆಂದು” ಹೊರಟೇ ಹೋದರು.

ಇನ್ನೊಂದಿಬ್ಬರು ಗಿರಾಕಿಗಳು ಬರುವಷ್ಟರಲ್ಲೇ ಕೆಲಸದವನು ಒಂದು ದೊಡ್ಡ ಬಕೆಟ್ ಹಿಡಿದುಕೊಂಡು ಬಂದ. ಅದನ್ನು ಅಲ್ಲೇ ಜವಳಿ ರಾಶಿ ಹಾಕಿದ್ದ ಟೇಬಲ್ ನಡಿಯಲ್ಲಿರಿಸಿ ವ್ಯಾಪಾರದಲ್ಲಿ ತೊಡಗಿಸಿಕೊಂಡ. ನಾನು ಮೆಲ್ಲ ಬಕೆಟ್ಟಿನೊಳಗೆ ಇಣುಕಿದ. ಸ್ವರ್ಗಕ್ಕೆ ಮೂರೇ ಗೇಣು! ಹಾವು ಮೀನೊಂದು ಬಕೆಟ್ಟಿನೊಳಗಿನ ವೃತ್ತಾಕಾರದಲ್ಲಿ ಬಕೆಟಿನ ವಿಸ್ತೀರ್ಣ ಸಾಕಾಗದೆ ನೀರಿನಲ್ಲಿ ಈಜುತ್ತಿತ್ತು. ಸಾರು ಮಾಡಲೋ, ಸಾಕಲೋ ಅಲ್ಲೇ ಮೀನು ಮಾರುತ್ತಿದ್ದ ಮೊಗವೀರರಿಂದ ಅವನು ಸಣ್ಣ ಹಾವು ಮೀನು ಖರೀದಿಸಿ ತಂದಿದ್ದ. ಮೆಲ್ಲಗೆ ಬಕೆಟಿನೊಳಗೆ ಕೈ ಹಾಕಿ ಅದರ ಮೈಯಲ್ಲಾ ಒಮ್ಮೆ ಮುಟ್ಟಿ ನೋಡಿದೆ. ಕೈಯೆಲ್ಲಾ ನುಣ್ಣಗೆ ಜಾರುತ್ತಿತ್ತು. ಎರಡು ಮೂರು ಬಾರಿ ಹಾಗೆಯೇ ಮುಟ್ಟಿದೆ. ಅದರ ಮೈಯ ನುಣುಪಿನಲ್ಲಿ ಅದು ಕೈಯಿಂದ ಜಾರಿ ತಪ್ಪಿಸಿಕೊಳ್ಳುತ್ತಿತ್ತು. ಹೀಗೆ ಕೆಲಸದವನ ಕಣ್ತಪ್ಪಿಸಿ ನಾಲ್ಕೈದು ಬಾರಿ ಮಾಡಿದೆ. ಕೊನೆಗೆ ಇನ್ನಷ್ಟು ಧೈರ್ಯ ತಂದುಕೊಂಡು ಎತ್ತಿಹಿಡಿಯಲು ನೋಡಿದೆ. ಅಷ್ಟರಲ್ಲೇ ಕೈ ಜಾರಿ ಮೀನು ನೆಲಕ್ಕೆ ಬಿತ್ತು. ಅದು ಧೂಳಿನಲ್ಲಿ ಹೊರಳಾಡುತ್ತಿರಬೇಕಾದರೆ ಬಕೆಟ್ ಕೂಡಾ ಮಗುಚಿ ಬಿದ್ದು ನೀರು ಚೆಲ್ಲಿ ಹೋಯಿತು.

ಬಕೆಟ್ ಬಿದ್ದ ಗದ್ದಲಕ್ಕೆ ಕೆಲಸದವನು ಓಡಿ ಬಂದ. “ಕಣ್ಣು ಕಾಣಲ್ವ ನಿನಗೆ, ಮೀನನ್ನು ಯಾಕೆ ಕೆಳಗೆ ಹಾಕಿದೆ. ಬುದ್ದಿ ಇರ್ಬೇಕು, ನಿಮ್ಗೆಲ್ಲಾ ಹೇಳಿ ಏನು ಪ್ರಯೋಜನ” ಎನ್ನುತ್ತಾ ಅಪ್ಪನಿಗೂ ಪರೋಕ್ಷವಾಗಿ ಬೈದು ಕೋಪ ತೀರಿಸಿಕೊಂಡ. ನಾನು ಮಾತ್ರ ನಗುತ್ತಲೇ ಆ ಬೈಗುಳ ಸ್ವೀಕರಿಸಿಕೊಂಡೆ. ಮೆಲುವಾದ ಹಿನ್ನಲೆ ಹಾಡಿನಲ್ಲಿ ಹಿಗ್ಗಾ ಮುಗ್ಗ ಬೈಯ್ಯುವ ಹಿರೋಯಿನೊಬ್ಬಳನ್ನು ಹಿರೋ ರೋಮ್ಯಾಂಟಿಕ್ ಮೂಡಲ್ಲಿ ಹಾಡಿನಂತೆ ಕೇಳಿಸಿಕೊಳ್ಳುವಂತೆ ಹಾವು ಮೀನು ಮುಟ್ಟಿದ ಖುಷಿಯಲ್ಲೇ ನಗುತ್ತಾ ಬೈಸಿಕೊಂಡೆ. ಅವನು ಪೆಚ್ಚಾಗಿ ಧೂಳಿನಲ್ಲಿ ಹೊರಳಾಡುತ್ತಿದ್ದ ಹಾವು ಮೀನನ್ನು ಮತ್ತೆ ಬಕೆಟ್ ಗೆ ಹಾಕಿಕೊಂಡ.