ಕೆಲವು ವರ್ಷಗಳ ಹಿಂದೆ  ಹಿಂದೆಂದೂ ಕಂಡಿರದಂತಹ ಮಣ್ಣಿನ ಬಿರುಗಾಳಿ ಸಿಡ್ನಿಗೆ ರಾಚಿತ್ತು. ಸಾವಿರಾರು ಮೈಲಿ ದೂರದಿಂದ ಟನ್‌ಗಟ್ಟಲೆ ಮಣ್ಣು ಕಡಲಿಗೆ ಗಾಳಿಯ ಮೇಲೆ ಸವಾರಿ ಹೊರಟಿತ್ತು. ದಾರಿಯಲ್ಲಿ ಸಿಕ್ಕ ಊರಿನ ಮೇಲೆಲ್ಲಾ ಹದವಾಗಿ ಮಳೆಗರೆದು ಗಾಳಿಗೆ ಹಾರುತ್ತಿದ್ದ ಕೂದಲಿನ ಮೇಲೆ ಕೂತಿತ್ತು. ಬೆರಳಿಟ್ಟ ತುಟಿಯ ಮೇಲೆ ಕೂತಿತ್ತು. ತುಟಿಗಿಟ್ಟ ಬೆರಳ ಮೇಲೂ ಹದವಾಗಿ ತೆಳುಪರದೆಯಂತೆ ಕೂತು ನಗುತ್ತಿತ್ತು. ವಸಂತದ ಚಳಿ-ಬೆಚ್ಚಗಿನ ಇರುಳಿಗೆ ಮೈಯೊಡ್ಡಿದಾಗ ಯಾರಿಗೂ ಇದರ ಪರಿವೆಯೇ ಇರಲಿಲ್ಲ.

ಮುಂಜಾನೆ ಬೆಂಕಿ
ಹೊತ್ತಿಕೊಂಡಂತೆ ಬೆಳಕು ಕಿಟಿಕಿಯಾಚೆ-
ಕ್ಷಣಗಳಂತೆ ನುಣ್ಣಗೆ ನವೆದ
ಕೆಮ್ಮಣ್ಣ ಬಿರುಗಾಳಿ !

ಭೂಮಿಯಲ್ಲಿ ಮಲಗಿ ಮಂಗಳ ಗ್ರಹದ ಮೇಲೆ ಎದ್ದಂತೆ ಹಲವರಿಗೆ ಅನಿಸಿತು. ಲೋಕ ಕಡೆಯ ದಿನ ಮೂಡಿದೆ ಎಂದು ಹಲವರು ಬೆಚ್ಚಿಬಿದ್ದರು. ತಮ್ಮ ಬಿಳಿಯ ಬೆಕ್ಕು ಪೂರ್ತಿ ಕೆಂಪಗಾಗಿತ್ತು, ಬಿಳಿಯ ಕಾರು ಚೆಂದದ ಕೆಂಪಾಗಿತ್ತು ಎಂದೆಲ್ಲಾ ಜೋಕುಗಳನ್ನು ಚೆಲ್ಲಾಡಿದರು. ಜೀವಮಾನಕ್ಕೊಮ್ಮೆ ಎಂಬಂತೆ ಈ ಊರಿಗೆ ರಾಚುವ ಇಂತಹ ಬಿರುಗಾಳಿ ದೂರದ ಮರಳುಗಾಡಲ್ಲಿ ದಿನಾಲೂ ಏಳುತ್ತದಂತೆ. ಸಿಡ್ನಿಗೆ ಆ ಮರಳುಗಾಡೇ ಬಂದು ಬಾಗಿಲು ತಟ್ಟಿದಂತಿತ್ತು. ದಿನವೂ ಹೊಸದಾಗಿ ನಳನಳಿಸಲು ಪರಿತಪಿಸುವ ಊರಿಗೆ ಪಾಠಕಲಿಸಲು ಹೊರಟಂತಿತ್ತು. ಇದೆಲ್ಲಾ ಇಷ್ಟು ಸುಲಭದಲ್ಲಿ ಜೋಕಿಗೆ ನಲುಗಿ ಹೋಗಲು ಆಗುವಂತಹುದೇ ಎಂದು ಅನಿಸುತ್ತಿತ್ತು.

ಏಕೆ ಒಳಗಿಳಿಯುವುದಿಲ್ಲ
ಬಾಲ್ಯದ ಮಳೆಯ ಪುಲಕದ ಹಾಗೆ
ಯೌವ್ವನದ ಸೂರ್ಯಾಸ್ತದ ರಂಗಿನ ಹಾಗೆ !!

ನಾವು ಮಣ್ಣಿನ ಪಾಲಾಗುವ ಸಂಗತಿ ಮೆದುಳಿಗೆ ಗೊತ್ತು. ಈ ಪಯಣದ ಕೊನೆಯ ನಿಲ್ದಾಣಕ್ಕಿನ್ನೂ ಹೊತ್ತಿದೆ- ಮಣ್ಣು ತುಂಬಾ ದೂರವಿದೆ ಎಂಬ ಭ್ರಮೆಯನ್ನು ಒಡೆಯಲೋ ಎಂಬಂತೆ ಬಂದು ಬಾಗಿಲು ತಟ್ಟುವ ಈ ಮಣ್ಣು ಧೃತಿಗೆಡಿಸಿತು. ನೋಡಿ ಕನ್ನಡದಲ್ಲಿ deathಗೆ ಪದವಿರುವ ಹಾಗೆ mortalityಗೆ ಪದವಿಲ್ಲ. ಈಗೀಗ ಯಾಕೆ ಬೇಕು ಅನಿಸುತ್ತದೆ. ಇಲ್ಲದಿರುವ ಕಲ್ಪನೆಗೆ ಹೆಸರು ಹುಟ್ಟು ಹಾಕುವ ಒತ್ತಡವೇಕೆ ಅನಿಸುತ್ತದೆ. ಸಂಸ್ಕೃತದಿಂದ ಎಳೆದು ಒಳತರುವ ಬದಲು ಇದನ್ನು ಯೋಚಿಸಿ – ಕನ್ನಡದಲ್ಲಿ kangarooಗೂ ಹೆಸರಿಲ್ಲ, giraffeಗೂ ಹೆಸರಿಲ್ಲ – ಹಾಗೆ ನೋಡಿದರೆ lionಗೂ ಇಲ್ಲ. ಹಾಗೆಯೇ mortalityಗೂ ಇಲ್ಲ.

ಚರ್ಮದ ಮೇಲೆ
ಗಾರೆ ಕಲ್ಲು ಹಲಗೆಯ ಮೇಲೆ
ತೆಳುವಾಗಿ ಕೂರುವುದಷ್ಟೇ ಈ ವಯಸ್ಸಿನಲ್ಲಿ ?

ಪಿಡಹಾಂ ಎಂಬ ಅಮೆಜಾನಿನ ಬುಡಕಟ್ಟು ಒಂದಿದೆ. ಅವರಿಗೆ ದೇವರಿಲ್ಲ, ದಿಂಡರಿಲ್ಲ, ಪುರಾಣವಿಲ್ಲ, ಎಣಿಕೆಯಿಲ್ಲ, ಎಡಬಲವಿಲ್ಲ, ದಿಕ್ಕು ದೆಸೆಯಿಲ್ಲ. ತಾವು ಕಂಡರಿಯದ್ದನ್ನು ತಮ್ಮ ನುಡಿಗೆ ಹಾಗು ತಲೆಗೆ ಬಿಟ್ಟುಕೊಳ್ಳುವುದಿಲ್ಲ. ಬಂದ ಕ್ರೈಸ್ತ ಪಾದ್ರಿಗಳಿಗೆ ತಮ್ಮ ಹೊಳೆಯ ನೀರು ಕುಡಿಸಿ ಅವರನ್ನೇ ಬದಲಾಯಿಸಿ ಕಳಿಸಿದ್ದಾರೆ. ಬರೇ ಮೂರು ಸ್ವರ ಎಂಟು ವ್ಯಂಜನದ ನುಡಿಯಿಟ್ಟುಕೊಂಡಿದ್ದಾರೆ. ಮಕ್ಕಳ ಜತೆ ಪದಗಳನ್ನೇ ಬಳಸದೆ ಸ್ವರದ ಏರಿಳಿತದಲ್ಲೇ ದಿನಗಟ್ಟಲೆ ಮಾತಾಡುತ್ತಾರೆ. ಯಾವುದೇ ಸಂಪ್ರದಾಯವನ್ನೂ ಹಟದಿಂದ ಹುಟ್ಟು ಹಾಕಿಕೊಳ್ಳದೆ, ಅದಕ್ಕೆ ಕಟ್ಟುಬೀಳದೇ ಮಕ್ಕಳನ್ನು ಬೆಳೆಯಗೊಡುತ್ತಾರೆ. ಕಣ್ಣಿಗೆ ಕಂಡದ್ದು, ಕಂಡವರು ಹೇಳಿದ್ದು, ಅಥವಾ ಸಂಗತಿಗೆ ಆಧಾರವಿದ್ದರೆ ಮಾತ್ರ ಅದರ ಬಗ್ಗೆ ಮಾತಾಡುತ್ತಾರೆ. ಅವರ ಕತೆ ಕೇಳಿ ನಾನೂ ಅಚ್ಚಕನ್ನಡದ ಬುಡಕಟ್ಟಿನವನಾಗಬೇಕು ಅನಿಸಿತು.

“ಹರೆಯದ ಕೊನೆಯಲ್ಲಿ ಸವಿ
ಗನಸಿನ ನಿದ್ದೆಗೆ ಜಾರಿ
ನಲವತ್ತು ದಾಟಿದ ಉರಿಹಗಲಿಗೆ
ಎಚ್ಚೆತ್ತುಕೊಂಡೆ
ನಲ್ಲ”

ಹೃದಯಾಘಾತವೋ ಅಥವಾ ಜೀವವನ್ನು ಮೆಲ್ಲಗೆ ಹೀರಬಹುದಾದ ಖಾಯಿಲೆಯೊಂದು ಬಾಗಿಲು ತಟ್ಟುವ ತನಕ ಯಾಕೆ ಕಾಯಬೇಕು? ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ, ನನ್ನೆತ್ತರಕ್ಕೆ ನಿಂತ ಮಗ ನಮಗೆ ಗೊತ್ತಿರದ ಹಾಡುಗಾರನ ಸಂಗತಿಗಳನ್ನು ಪರಿಚಯಿಸುತ್ತಾನೆ – ನಮಗೆ ಗೊತ್ತಾಗದಂತೆ ನಮ್ಮ ನಡುವೆ ಒಂದು ಹೊಸ ಲೋಕವನ್ನು ಇವನು ಹುಟ್ಟು ಹಾಕುತ್ತಿದ್ದಾನೆಯೇ? ಆ ಲೋಕಕ್ಕೆ ನಮಗೆ ನಿಯಮಿತ ಪ್ರವೇಶವಲ್ಲವೆ? ಒಂದು ದಿನ ದೊಡ್ಡ ಬಾಗಿಲೊಂದು ನಮ್ಮ ಮುಖಕ್ಕೆ ಬಡಿಯಬಹುದಲ್ಲವೆ? ಅವನ ನುಡಿಯಲ್ಲಿ ಕನ್ನಡದ ಕ್ರಿಯಾಪದಗಳು ಇರುವವರೆಗೆ ನಮಗೆ ಸಮಾಧಾನ. ಕ್ರಿಯಾಪದ ಮಾತ್ರ ನೇರವಾಗಿ ನುಡಿ ಬೇಲಿಯನ್ನು ಹಾರಲಾಗದು ನೋಡಿ. ಬೇರೆ ನುಡಿಯ ಕ್ರಿಯಾಪದಕ್ಕೆ ಕನ್ನಡದ “ಆಗು” “ಮಾಡು”ಗಳ ಊರುಗೋಲು ಬೇಕೇಬೇಕು. ಇಲ್ಲದಿದ್ದರೂ ನಮ್ಮದಲ್ಲದ ಕ್ರಿಯಾಪದವನ್ನು “ಇಸು” ಎಂಬ ಹೊಸಿಲಾಚೆಯಿಡುವವರು ನಾವು, ಕನ್ನಡದವರು – ಅಮೆಜಾನಿನ ಬುಡಕಟ್ಟಿನವರ ಹಾಗೆ ಬೇರೆ ನುಡಿಯ ಕ್ರಿಯಾಪದಗಳಿಗೆ ಬೆನ್ನು ಮಾಡದಿದ್ದರೂ ದೂರ ಇಡುವವರು!

ಎಂದಿಗೂ ಈ ನಾಡು ಅಪರಿಚಿತವಾಗಿಯೇ ಉಳಿಯುತ್ತದೆಯೇ ಎಂದು ದಿಗಿಲಾಗುತ್ತದೆ. ಪರಿಚಿತವಿದ್ದ ಊರು ವರ್ಷ ಉರುಳಿದಂತೆ ದೂರದಲ್ಲಿ ಅಪರಿಚಿತವಾಗುತ್ತಾ ಹೋಗುತ್ತದೆ. ಬಂದಿಳಿದ ಊರು ವರ್ಷ ಉರುಳಿದರೂ ಹೀಗೆ ಅಪರಿಚಿತವಾಗಿಯೇ ಉಳಿಯುತ್ತದೆಯಲ್ಲಾ! ಆಸ್ಟ್ರೇಲಿಯಕ್ಕೆ ಬೆನ್ನು ಹಾಕಿ ಹೊರಟವರ ಬಗ್ಗೆ ಇಲ್ಲಿಯವರಿಗೆ ತುಂಬಾ ಅಸಹನೆಯಿದೆ. ಭಾರತ ಬಿಟ್ಟು ಬಂದವರ ಬಗ್ಗೆ ಇರುವಂತೆಯೇ. ಕಡೆಗೆ ಎಲ್ಲಿಯೂ ಸಲ್ಲದವನಾಗುತ್ತೇನೆ ಎಂಬ ದಿಗಿಲು, ಯಾರೂ ಎಲ್ಲಿಯೂ ಸಲ್ಲುವುದಿಲ್ಲ ಎಂಬ ಅನುಮಾನದ ನಡುವೆಯೂ ಕಾಡುತ್ತದೆ.

ಗಾಳಿಗೆ ತೂರಿ ಹೋಗಿ
ಕೂತಲ್ಲೇ ಕರಗಿ ಮಣ್ಣು
ಈ ನಿಗೂಢ
ಬೆಳಕು ಬಣ್ಣಕಳಕೊಂಡು
ಮತ್ತೆ “ಶುದ್ಧ”ವಾಗಿ
ಬಾಗಿಲ ಮೇಲೀಗ
ಗಾಳಿ-ಮಣ್ಣು-ಬೆಳಕಿನ ಬಡಿತವಿಲ್ಲ
ಯಾಕೋ ನಿಶಬ್ದ…