ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ ಮಾಂಸವಿಲ್ಲ ಎಂದುಕೊಳ್ಳುತ್ತಾ ನಗುತ್ತಾ ಪಾಪ ಹಕ್ಕಿ ಸತ್ತು ಹೋಯಿತು ಎಂದು ಕುಹುಕದ ಮಾತಾಡುತ್ತಾ ಅದನ್ನು ಬ್ರೌನ್ ನದಿಗೆ ಎಸೆಯುತ್ತಾನೆ. ಆದರೆ ಲಂಡನ್ ಟೌನಿನ ಮಕ್ಕಳು ಮಾತ್ರ ರೋಧಿಸುತ್ತಾರೆ….
ಆಶಾ ಜಗದೀಶ್ ಅಂಕಣ

 

ಬಹುಶಃ ರಸ್ಕಿನ್ ಬಾಂಡ್ ರ Eyes are not here ಕಥೆಯನ್ನು ಓದದೇ ಇರುವವರೇ ಯಾರೂ ಇರಲಿಕ್ಕಿಲ್ಲ. ಅಷ್ಟು ಪ್ರಸಿದ್ಧ ಕಥೆ ಅದು. ಈ ಕಥೆಯನ್ನು ಓದುವಾಗ ಒಂದು ಕಥೆಯನ್ನು ಇಷ್ಟು ನವಿರಾಗಿ ಇಷ್ಟು ಸರಳವಾಗಿಯೂ ಕಾತರ ಉತ್ಕಟತೆಯನ್ನು ಕಾಪಿಟ್ಟುಕೊಂಡು ಬರೆಯಬಹುದೇ ಎನಿಸಿಬಿಡುತ್ತದೆ. ಇದು ಒಂದು ಟ್ರೇನ್ ಜರ್ನಿಯ ಕಥೆ. ನಮ್ಮ ಇಂಡಿಯನ್ ಟ್ರೇನ್ ಜರ್ನಿಯ ಕಥೆಗಳಿಗೆ ತನ್ನದೇ ಇತಿಹಾಸವಿದೆ. ಅದರಲ್ಲೂ ಸಿನಿಮಾಗಳ ಸಕ್ಸಸ್ ಸ್ಟೋರಿಗಳದ್ದು ಮತ್ತೊಂದೇ ಇತಿಹಾಸ. ಕೈಗಳನ್ನ ಅಗೂಲಕ್ಕೆ ಚಾಚಿ “ತುಝೆ ದೇಖಾ ತೋ ಎ ಜಾನಾ ಸನಮ್…” ಎನ್ನುವ ಶಾರುಖ್ ಖಾನ್ ನನ್ನು ಯಾರು ತಾನೆ ಮರೆಯಲು ಸಾಧ್ಯ.

ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ (ಶಾರ್ಟಾಗಿ DDLJ) ಎನ್ನುವ ಆ ಸಿನೆಮಾ ಪ್ರತಿಯೊಬ್ಬರಲ್ಲೂ ತಾವು ಒಮ್ಮೆ ರೈಲು ಹತ್ತಬೇಕು. ತಮಗೂ ಒಬ್ಬ ಅಂತಹ ಪ್ರೇಮಿ ಸಿಗಬೇಕು ಎನಿಸುವಷ್ಟರ ಮಟ್ಟಿಗೆ ಪರಿಣಾಮ ಬೀರಿದ್ದ ಒಂದು ಸುಂದರ ಚಂದದ ಮತ್ತು ದಾಖಲೆ ನಿರ್ಮಿಸಿದ್ದ ಚಿತ್ರವದು. ನನ್ನಲ್ಲಿ ಒಂದು DDLJ ಡ್ರೆಸ್ ಸಹ ಇತ್ತು. ಅದನ್ನು ಧರಿಸಿದಾಗೆಲ್ಲಾ ಆ ಕ್ಷಣಕ್ಕೆ ನಾನೇ ಕಾಜೋಲ್ ಆದ ಅನುಭವ… ಕಪ್ಪು ಟೀಶರ್ಟ್ ಮೇಲೆ ಗ್ರೇ ಕಲರ್ ಜೀನ್ಸ್ ನ ಸ್ಕರ್ಟ್ ಅದು… ನನ್ನ ಗೆಳತಿಯೊಬ್ಬಳಲ್ಲಿ ಕಾಜೋಲ್ “ಮೆಹೆಂದಿ ಲಗಾಕೆ ರಖನಾ..” ಹಾಡಿನಲ್ಲಿ ಧರಿಸಿದ್ದಂಥ ಡ್ರೆಸ್ ಒಂದು ಇತ್ತು. ಅದನ್ನು ಅವಳ ಅಣ್ಣ ದೆಹಲಿಯಿಂದ ತಂದುಕೊಟ್ಟಿದ್ದ. ಅದನ್ನವಳು ತೊಟ್ಟು ಬಂದಾಗೆಲ್ಲಾ ನಮಗೆ ಅದೆಂಥಾ ಹೊಟ್ಟೆ ಉರಿ ಅಂದ್ರೆ… ಹೇಳುವ ಹಾಗೂ ಇಲ್ಲ, ಸುಮ್ಮನಿರುವಂತೆಯೂ ಇಲ್ಲ… ಈ ಎಲ್ಲ ನೆನಪುಗಳೊಟ್ಟಿಗೆ ಆ ಚಿತ್ರದ ಒಂದೊಂದು ಹಾಡೂ ಈಗಲೂ ನಾಲಿಗೆ ಮೇಲೆ ನಲಿದಾಡುತ್ತಿರುತ್ತವೆ.

ಎಲ್ಲೇ ಸೂರ್ಯಕಾಂತಿಯ ಹೊಲ ಅಥವಾ ಕುರೆಸಾನ್ನಿಯ ಹೊಲ ಅಥವಾ ಸಾಸಿವೆ ಹೊಲ ಕಾಣಿಸಲಿ ಈ DDLJ ನೆನಪಾಗಿಬಿಡುತ್ತದೆ…. ಮತ್ತೆ ಶಾರುಖ್ ನ ಅದೇ ಸ್ಟೈಲ್ ನಲ್ಲಿ ಕೈ ಚಾಚಿ ನಿಂತು… ಈಗಾದರೆ ಚಂದದ ಸೆಲ್ಫಿ ವಿಡಿಯೋ ಟಿಕ್ ಟಾಕ್… ಏನಾದರೂ ಸರಿ ಮಾಡಬಹುದು… ಭಾವುಕತೆಗೆ ಹೊರಳಿಸುವ ಆ ಹಾಡುಗಳ ಸಾಲುಗಳಿಗೆ ಮನ ಸೋತ ಹೃದಯಗಳ ಲೆಕ್ಕ ಬಹುಶಃ ಯಾರೂ ಇಟ್ಟಿರಲಿಕ್ಕಿಲ್ಲ…

ಆಂಖೆ ಮೆರೀ
ಸಪನೇ ತೆರೀ
ಕ್ಯಾ ಮೆರೀ
ಯಾದೇ ತೆರೀ

(ರಸ್ಕಿನ್ ಬಾಂಡ್)

ಹೀಗೆಲ್ಲಾ ಸೋಲಿಸಿದ್ದ ಚಿತ್ರದ ಹಿನ್ನೆಯಲ್ಲಿ ನಾನು Eyes are not here ಎನ್ನುವ ಈ ಕಥೆಯನ್ನು ಓದಿಕೊಳ್ಳುವಾಗ ಎಲ್ಲೂ ಹೋಲಿಕೆಯಾಗದ ಆದರೆ ತನ್ನದೇ ವೈಶಿಷ್ಟ್ಯತೆಯಿಂದ ಮನಸ್ಸಿನಲ್ಲುಳಿದುಬಿಟ್ಟ ಕಥೆ ಇದು.

Eyes are not here ಕಥೆಯಲ್ಲಿನ ಹೀರೋಗೆ ಕಣ್ಣು ಕಾಣಿಸುವುದಿಲ್ಲ. ಅವನಿಗೆ ಮೊದಲು ಕಣ್ಣಿರುತ್ತದೆ. ಮಧ್ಯದಲ್ಲಿ ಯಾವುದೋ ಕಾರಣದಿಂದ ಕಣ್ಣು ಕಳೆದುಕೊಂಡಿರುತ್ತಾನೆ. ಆದರೆ ಅವನಿಗೆ ಬೇರೆಯವರು ಅವನನ್ನು ಕಣ್ಣಿಲ್ಲದವನೆಂದು ಕರುಣೆ ತೋರಿಸುವುದು ಇಷ್ಟವಾಗುತ್ತಿರುವುದಿಲ್ಲ. ಹಾಗಾಗಿ ಅವನು ಬೇರೆಯವರೆದುರು ಕಣ್ಣಿರುವಂತೆ ನಟಿಸುತ್ತಿರುತ್ತಾನೆ. ಒಮ್ಮೆ ಅವನು ಟ್ರೇನಿನಲ್ಲಿ ಪ್ರಯಾಣಿಸುವಾಗ ಅವನ ಕಂಪಾರ್ಟ್ಮೆಂಟಿಗೆ ಹುಡುಗಿಯೊಬ್ಬಳು ಹತ್ತುತ್ತಾಳೆ ಮತ್ತು ಇವನ ಪಕ್ಕವೇ ಕೂರುತ್ತಾಳೆ. ಅವಳ ಕೂದಲಿನ ಹಾರಾಟ, ಪರ್ಫ್ಯೂಮಿನ ವಾಸನೆಯಿಂದ ಅವಳನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತಾನೆ ಇವನು. ಅವಳಿಗೆ ತಾನು ಕುರುಡನೆಂದು ಗೊತ್ತಾಗುವುದು ಬೇಡ ಎಂದುಕೊಳ್ಳುತ್ತಾನೆ.

ಅವಳು ಪಕ್ಕ ಕುಳಿತಿರುವಷ್ಟು ಹೊತ್ತೂ ಇವನು ತನ್ನನ್ನು ತಾನು ನಾರ್ಮಲ್ ವ್ಯಕ್ತಿಯ ರೀತಿಯಲ್ಲಿ ತೋರಿಸಿಕೊಳ್ಳಲು ಮಾಡುವ ಸಾಹಸಗಳೆಲ್ಲ ನಗು ತರಿಸುತ್ತವೆ. ಕೊನೆಗೆ ಆಕೆ ತನ್ನ ಸ್ಟಾಪ್ ಬಂದ ಕೂಡಲೇ ಇಳಿದು ಹೋಗುತ್ತಾಳೆ. ಆಗ ಪಕ್ಕದಲ್ಲಿದ್ದವರ್ಯಾರೋ ಅರೆ ಆ ಹುಡುಗಿ ಅದೆಷ್ಟು ಮುದ್ದಾಗಿದ್ದಾಳೆ ಆದರೆ ಕಣ್ಣೇ ಇಲ್ಲ ಎನ್ನುತ್ತಾರೆ. ಅದನ್ನು ಕೇಳಿದ ಇವನು ಗರಬಡಿದವನಂತಾಗಿಬಿಡುತ್ತಾನೆ. ಓದುಗರಿಗೆ ಮಾತ್ರ ಅಯ್ಯೋ ಛೇ! ಅನಿಸಿಬಿಡುತ್ತದೆ. ಈ ಕಥೆಯನ್ನು ನಾನು ಕೇಳಿದಾಗ ಹೇಗಿನಿಸಿತ್ತೋ ಕೇಳಿಸಿಕೊಂಡವರ ಮುಖದ ಭಾವವೂ ಅದೇ ಆಗಿರುವುದನ್ನೂ ಕಂಡಿದ್ದೇನೆ.

ರಸ್ಕಿನ್ ಬಾಂಡ್ ಅವರ ಕಥೆಗಳ ವೈಶಿಷ್ಟ್ಯವೇ ಅದು. ಅವು ಮೇಲ್ನೋಟಕ್ಕೆ ಬಹಳ ಸರಳ. ಆದರೆ ಸೂಕ್ಷ್ಮ ಒಳನೋಟಗಳುಳ್ಳ ಗಾಢ ವಿಷಾದವನ್ನುಳಿಸುವ ಕಥೆಗಳು. ನಮ್ಮ ಕುವೆಂಪುರವರ ಬರಹಗಳಲ್ಲಿ ಕಂಡುಬರುವಂತಹ ಪ್ರಕೃತಿ ವರ್ಣನೆಯನ್ನು ರಸ್ಕಿನ್ ಬಾಂಡರ ಕಥೆಗಳಲ್ಲಿಯೂ ಕಾಣಬಹುದು. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಇತರರಿಗೂ ಉಣಬಡಿದುತ್ತಾ ಕೊನೆಗೆ ಅದನ್ನು ದೈವೀಕತೆಗೆ, ತಾತ್ವಿಕತೆಗೆ ತಂದು ನಿಲ್ಲಿಸುವುದು ವರ್ಡ್ಸ್ ವರ್ತ್ ರ ಶೈಲಿ. ರಸ್ಕಿನ್ ಬಾಂಡರದ್ದು ಬರೀ ವರ್ಣನೆಯಷ್ಟೇ ಅಲ್ಲ ಒಂದು ಬೆರಗು, ಕುತೂಹಲ, ಸೆಳೆತ, ಹುಡುಕಾಟ, ಒಂದು ಕೊನೆಗೊಳ್ಳದ ನಿರಂತರತೆ… ಹೀಗೆ ಹಲವು ಕೋನಗಳಲ್ಲಿ ದಕ್ಕಬಹುದಾದ ಪ್ರಕೃತಿ. ಹಾಗಾಗಿ ಅದು ಎಲ್ಲ ವಯೋಮಾನದವರನ್ನೂ ಸೆಳೆಯುತ್ತದೆ.

(Guy de Maupassant)

ಭಾವುಕತೆಗೆ ಹೊರಳಿಸುವ ಆ ಹಾಡುಗಳ ಸಾಲುಗಳಿಗೆ ಮನ ಸೋತ ಹೃದಯಗಳ ಲೆಕ್ಕ ಬಹುಶಃ ಯಾರೂ ಇಟ್ಟಿರಲಿಕ್ಕಿಲ್ಲ…

“Eyes are not here” ಥರವೇ ನನಗೆ ಇಷ್ಟವಾದ ಮತ್ತು ಕಾಡಿದ ಮತ್ತೊಂದು ಕಥೆಯನ್ನಿಲ್ಲಿ ನೆನಪಿಸಿಕೊಳ್ಳುವೆ. ಅದು “The diamond necklaces “. ಈ ಕಥೆಯನ್ನು Guy de Maupassant ಎನ್ನುವ ಫ್ರಾನ್ಸಿನ ಕಥೆಗಾರ ಬರೆದಿದ್ದಾರೆ. ಈ ಕಥೆಯ ದುರಂತ ನಾಯಕಿ ಮಟಿಲ್ಡಾ. ಮಟಿಲ್ಡಾ ಅತ್ಯಂತ ಸುಂದರವಾದ ಹೆಣ್ಣು. ಆದರೆ ಅವಳಿಗೆ ಒಬ್ಬ ಸಾಧಾರಣ ಕ್ಲರ್ಕ್ ನನ್ನು ಮದುವೆಯಾಗಬೇಕಾಗಿ ಬರುತ್ತದೆ. ಅವಳಿಗೆ ತನ್ನ ಸಾಧಾರಣ ಬದುಕು ಇಷ್ಟವಿಲ್ಲ. ತೃಪ್ತಿ ಇಲ್ಲ. ಅದು ತನ್ನ ಯೋಗ್ಯತೆಗೆ ಬಹಳ ಕಡಿಮೆ ಎಂದೇ ಭಾವಿಸುತ್ತಾಳೆ. ಒಮ್ಮೆ ಗಂಡನ ಬಾಸ್ ಈ ದಂಪತಿಗಳನ್ನು ತಮ್ಮ ಮನೆಯ ಪಾರ್ಟಿಗೆ ಆಹ್ವಾನಿಸುತ್ತಾರೆ. ಅಲ್ಲಿಗೆ ಹೋಗಲಿಕ್ಕಾಗಿ, ಅಲ್ಲಿ ಚಂದ ಕಾಣಲಿಕ್ಕಾಗಿ ಅವಳು ತನ್ನ ಗೆಳತಿಯಿಂದ ನೆಕ್ಲೇಸ್ ಒಂದನ್ನು ಎರವಲು ಪಡೆಯುತ್ತಾಳೆ. ಆದರೆ ಅಚಾನಕ್ ಅದು ಆ ಪಾರ್ಟಿಯಲ್ಲಿ ಕಳೆದುಹೋಗಿಬಿಡುತ್ತದೆ. ಆದರೆ ಗೆಳತಿಯ ಚಿನ್ನದ ನೆಕ್ಲೇಸನ್ನು ಮರಳಿ ಕೊಡಲೇಬೇಕು… ಕೊನೆಗೆ ಸಾಲಸೋಲ ಮಾಡಿ ಅದೇ ಡಿಸೈನಿನ ನೆಕ್ಲೇಸ್ ಒಂದನ್ನು ಮಾಡಿಸಿ ಕೊಡುತ್ತಾರೆ. ಕೊನೆಗೆ ಆ ಸಾಲ ತೀರಿಸಲಿಕ್ಕಾಗಿ ಆಳಿನಂತೆ ದುಡಿದು ದುಡಿದು ಹೈರಾಣಾಗಿಬಿಡುತ್ತಾಳೆ.

ಈಗ ಅವಳು ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದಾಳೆ. ಬದುಕಿನ ವಾಸ್ತವದ ಮುಂದೆ ಬೆನ್ನು ಬಾಗಿಸಿದ್ದಾಳೆ. ಬಹಳ ವರ್ಷಗಳ ನಂತರ ಒಮ್ಮೆ ಅವಳಿಗೆ ತನ್ನ ಆ ಗೆಳತಿ ಮಾರ್ಕೆಟ್ಟಿನಲ್ಲಿ ಸಿಗುತ್ತಾಳೆ. ಇಬ್ಬರ ನಡುವೆಯೂ ಉಭಯಕುಶಲೋಪರಿ ಮಾತುಕತೆ ನಡೆಯುತ್ತದೆ. ನಂತರ ಅವಳು ಇವಳನ್ನು ಯಾಕಿಷ್ಟು ಸೊರಗಿ ಹೋಗಿರುವಿ ಎಂದು ಕೇಳುತ್ತಾಳೆ. ಅದಕ್ಕಿವಳು ನಡೆದಿದ್ದ ಕಥೆಯನ್ನೆಲ್ಲ ಹೇಳಿ ಅದರ ಸಾಲ ತೀರಿಸಲಿಕ್ಕಾಗಿ ದುಡಿದು ದುಡಿದು ಈ ಸ್ಥಿತಿಗೆ ತಲುಪಿದೆ ಎನ್ನುತ್ತಾಳೆ. ಆಗ ಆ ಗೆಳತಿ ಅಯ್ಯೋ ಛೇ ನೀನು ಮೊದಲೇ ಹೇಳಬಾರದಿತ್ತಾ, ಅದು ಚಿನ್ನದ ನೆಕ್ಲೇಸ್ ಆಗಿರಲಿಲ್ಲ… ಎನ್ನುತ್ತಾಳೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಈ ಕಥೆಯೂ ಸಹ ಒಂದು ಮುಗ್ಧ ಹೆಣ್ಣಿನ ವಯೋಸಹಜ ಆಸೆಗಳು ಅವಳಿಗೆ ತಂದೊಡ್ಡುವ ದುರಂತದ ಕಾರಣಕ್ಕೆ ಕಾಡುತ್ತದೆ. ಅತಿ ಸಣ್ಣ ಎನಿಸುವಂತಹ ಕಥೆಗಳಿಂದ ಇಂತಹ ತೀವ್ರ ಪರಿಣಾಮವನ್ನು ಉಂಟುಮಾಡಬಲ್ಲ ರಚನೆಯ ಅಭ್ಯಾಸದ ದೃಷ್ಟಿಯಿಂದಲೂ ಇಂತಹ ಕಥೆಗಳ ಓದು ನನಗೆ ಬಹಳ ಇಷ್ಟ.

ಈ ಕಥೆಗಳೊಟ್ಟಿಗೆ ಒಂದು ಕವಿತೆಯ ಬಗ್ಗೆ ಹೇಳಬೇಕು ಅನಿಸುತ್ತಿದೆ. ಇದೂ ಸಹ ಒಂದು ಸರಳ ಸುಂದರ ಕವಿತೆ. ಬಳಸಿದ ಮಿತ ಪದಗಳಷ್ಟೂ ಹಿತವಾದ ಪರಿಣಾಮ ಉಂಟು ಮಾಡುವಂತಿರುವ ಕವಿತೆ ಇದು. ಆದರೆ ವಿಪರ್ಯಾಸದ ಕವಿತೆ.

In London Town ಎನ್ನುವ ಈ ಕವಿತೆಯನ್ನು ಬರೆದವರು Mary e coleridge.

(Mary e coleridge)

ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ ಮಾಂಸವಿಲ್ಲ ಎಂದುಕೊಳ್ಳುತ್ತಾ ನಗುತ್ತಾ ಪಾಪ ಹಕ್ಕಿ ಸತ್ತು ಹೋಯಿತು ಎಂದು ಕುಹುಕದ ಮಾತಾಡುತ್ತಾ ಅದನ್ನು ಬ್ರೌನ್ ನದಿಗೆ ಎಸೆಯುತ್ತಾನೆ. ಆದರೆ ಲಂಡನ್ ಟೌನಿನ ಮಕ್ಕಳು ಮಾತ್ರ ರೋಧಿಸುತ್ತಾರೆ….

They flung it into the river brown
“A pity the creature died”
With a smile and with a frown
Thus they did in London town
But all the children cried.

ಈ ಕವಿತೆಯಲ್ಲಿ ಮಕ್ಕಳ ಮನೋಪ್ರಪಂಚಕ್ಕೂ ಹಿರಿಯರೆನಿಸಿಕೊಂಡ ನಮ್ಮ ಮನೋಪ್ರಪಂಚಕ್ಕೂ ಅದೆಷ್ಟು ವ್ಯತ್ಯಾಸ ಎಂದು ಆಶ್ಚರ್ಯವಾಗುತ್ತದೆ. ಮೈಮರೆತು ಹರ್ಷಿಸುತ್ತಿದ್ದ ಮಕ್ಕಳ ಸಂತೋಷವನ್ನು ಕ್ಷಣಾರ್ಧದಲ್ಲಿ ಹಾಳು ಮಾಡುವ ದುಷ್ಟತನವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅದು ತಿನ್ನುವಷ್ಟು ದೊಡ್ಡದಲ್ಲ ಎನ್ನುವ ಅರಿವಿದ್ದೂ ಆ ಪುಟ್ಟ ಸುಂದರ ಕೋಮಲ ಜೀವಿಯನ್ನು ಹೊಸಕಿಹಾಕಿಬಿಡುವ ಪೈಶಾಚಿಕ ವರ್ತನೆ ಮನುಷ್ಯನಿಗೆ ಮಾತ್ರ ಸಾಧ್ಯವೇನೋ… ಒಟ್ಟಲ್ಲಿ ಪಕ್ಷಿ ಮತ್ತು ಮಕ್ಕಳಿಬ್ಬರ ಬಗ್ಗೆಯೂ ಅಸಾಧ್ಯ ಮರುಕ ಹುಟ್ಟಿಬಿಡುತ್ತದೆ.

ಹೀಗೆ ಒಂದು ಚಿಂತನೆಗೆ ಹಚ್ಚುವ ಕಥೆ, ಕವಿತೆ ಅಥವಾ ಯಾವುದೇ ಬರಹವಿರಲಿ ಬಹಳಷ್ಟು ಕಾಲ ನೆನಪಿನ ಭಾಗವಾಗಿ ಮಾಸದೇ ಉಳಿದು ಹೋಗುವ ಪರಿಗೆ ಬೆರಗಾಗುತ್ತಲೇ ಮತ್ತೆ ಮತ್ತೆ ನೆನೆಯುವುದೂ ಸುಖವೇ ಎನಿಸುತ್ತದೆ ನನಗೆ…