ಮಾರ್ಚ್ – ಮರೆಯುವಂತದ್ದಲ್ಲ!

ಮಾರ್ಚ್! ಈ ತಿಂಗಳು ನೆನಪಿದೆ
ನನಗೆ; ಮರೆಯುವಂತದ್ದಲ್ಲ!

ಮುಖ ತೋರಿಸಲೊಲ್ಲದೆ
ಬಟ್ಟೆ ಕಟ್ಟಿದ್ದು!
ಕೈ ಹಿಡಿಯಲೊಲ್ಲದೆ
ಸರಿದು ನಿಂತಿದ್ದು!
ಆಲಿಂಗನ, ಆಸರೆ, ಅವಕಾಶಗಳೆಲ್ಲಾ
ದೂರ ಸಾಗಿದ್ದು!

ರಸ್ತೆ ಬೀದಿಗಳೆಲ್ಲಾ ಬೆತ್ತಲೆಯಾಗಿ
ಜನರ ಜೀವನ ಕತ್ತಲಾಗಿ
ಕಳೆದೆರಡು ವರ್ಷಗಳ ಹಿಂದೆ
ಜಗತ್ತೇ ಮೌನವಾಗಿದ್ದು !

ಕರೋನಾ, ಲಾಕ್ ಡೌನ್, ಕರ್ಫ್ಯೂ,
ಮಾಸ್ಕ್, ಸ್ಯಾನಿಟೇಸರ್, ವೆಂಟಿಲೇಟರ್
ಹೀಗೆ ಅಪರಿಚಿತ ಪದಗಳ
ಪರಿಚಯವಾದದ್ದು!
ಕೊತ್ತಂಬರಿ ಸೊಪ್ಪು, ಲಾಠಿ ಏಟು
ಅಪಹಾಸ್ಯಕ್ಕೆ ಗುರಿಯಾದದ್ದು!

ಆಸ್ಪತ್ರೆಯಲ್ಲಿ ಜನಸ್ತೋಮ!
ಬೆಡ್, ಆಕ್ಸಿಜನಿನ ಕೊರತೆ,
ಅತ್ತು ಕರೆದು ಅದೆಷ್ಟೋ ಮಂದಿ
ಮಣ್ಣು ಸೇರಿದ್ದು!
ತನ್ನವರನ್ನೇ ಮುಟ್ಟಲು ಜನ
ಹಿಂದೇಟು ಹಾಕಿದ್ದು!

ಸಂಬಂಧಗಳು ಸತ್ತದ್ದು,
ಅಶಾಶ್ವತ ಬದುಕೆಂದು
ಫಿಲಾಸಫಿ ನುಡಿದದ್ದು!
ನಗರದಲ್ಲಿ ನರವೇದನೆ
ಮುಗಿಲು ಮುಟ್ಟಿದ್ದು!
ಕುರ್ಚಿ ನಡಗಿದ್ದು!

ಸಿಟಿಗಳ ತೊರೆದು ಹಳ್ಳಿಗೆ ಅಲೆದದ್ದು;
ತಟ್ಟೆ ಲೋಟಗಳ ಹಿಡಿದು ಬೀದಿಗಿಳಿದದ್ದು,
ಲಸಿಕೆ, ಮದ್ದು, ಅಭಾವ, ಪ್ರಭಾವ
ಅಂತೂ ಕೊನೆಗೂ,
ಅಪರಿಚಿತ ಖಾಯಿಲೆಯಿಂದ
ಗೆದ್ದು ಬೀಗಿದ್ದು!

ಯಾವುದನ್ನೂ ಮರೆಯಲು ಸಾಧ್ಯವಿಲ್ಲ!
ಅದೊಂದು ಕಾಲಘಟ್ಟ ಪಾಠ ಕಲಿಸಿತ್ತು.
ಮನುಷ್ಯನಿಗೆ ಮನುಷ್ಯತ್ವದ
ನೀತಿ ಹೇಳಿತ್ತು!

ಅರಿತನೇ ಮನುಜ? ಮತ್ತದೇ
ಹೋರಾಟ, ಕಿತ್ತಾಟ, ಪರದಾಟವಿಂದು
ಈ ನಶ್ವರ ಬದುಕಿಗೆ;
ತನ್ನದಲ್ಲದ ಸಮಯಕೆ‌.