ಅವರು ಅಂದಿನಿಂದಲೂ ನಮ್ಮವರೇ ಆಗಿ ಹೋಗಿದ್ದಾರೆ. ಹಳೆಮರಸಿನ ಹೊಲಗೇರಿ ಪಕ್ಕದಲ್ಲೊಂದು ಅಂಕು ಡೊಂಕಾಗಿರೊ ಹಣ್ಣುಹಣ್ಣು ಮುದುಕನಂಥ ಕಣಗಲು ಮರ, ಅಷ್ಟೆತ್ತರದ ಗುಡ್ಡೆ ಮೇಲೆ ಇರೊ ಒಂದು ಲಿಂಗ, ಅದಕ್ಕೆಇರೊ ಒಂದು ಕಾಡು ಕಲ್ಲಿನ ಮಂಟಪ, ವಲಸೆ ಹೋದ ಲಿಂಗಾಯಿತರ ಕುರುಹಿನ ಹಾಗೆ ಮಳೆಗಾಳಿಗೆ ನಲುಗದೆ ಉಳಿದುಹೋಗಿದೆ. “ಮರಸು ಊರಿನ ಜನರು ಆ ಕಡೆಗೆ ಊರು ಬದಲಾಯಿಸುವಾಗ ಈ ಲಿಂಗಾನ ಕೀಳಕ್ಕೆ ಅಂತ ಹೋದರೂವೆ ಅದು ಬೇರು ಬಿಟ್ಟಿತ್ತಂತೆ. ಅದಕ್ಕೆ ಅದನ್ನ ಇಲ್ಲೇ ಬಿಟ್ಟು ಹೋದರಂತೆ.” ಅಂಥ, ಅದನ್ನು ನೋಡಿದಾಗ ನಮ್ಮೂರೋರು ಹೇಳ್ತಿರ್ತಾರೆ.
ಹೆಚ್ ಆರ್ ಸುಜಾತಾ ತಿರುಗಾಟ ಕಥನ

 

ಒಂದರಿಂದ ಇನ್ನೊಂದನ್ನು ಬೇರ್ಪಡಿಸಿ ಪ್ರತಿಯೊಂದನ್ನೂ ಗುರುತಿಸುವ ಸಲುವಾಗಿ ಹೆಸರಿಡುವ ರೂಢಿ ಬಂತು. ಪ್ರತಿಯೊಂದು ಹೆಸರು ನೆನಪಿನ ಕೋಶವೊಂದನ್ನು ತೆರೆದು ತನ್ನ ವಿಶೇಷತೆಯನ್ನು ತೋರುತ್ತ ಹೋಗುತ್ತದೆ. ಹಿಂಗೆ, ನಮ್ಮೂರಿನ ಹೆಸರು ಮರಸು ಹೊಸಹಳ್ಳಿ. ಮರಸು ಅನ್ನೋ ಊರಿನ ಪಕ್ಕದಲ್ಲಿ ಹಳೆ ಕಾಲದಲ್ಲಿ ಹೊಸದಾಗಿ ವಲಸೆ ಬಂದ ಹಳೆ ತಲೆಮಾರಿನವರು ಕಟ್ಟಿದ ಊರು ಎಂಬುದೆ ನಮ್ಮೂರು ಹೊಸಹಳ್ಳಿ. ಅದಕ್ಕೆ ಅಂಟಿಕೊಂಡಿರುವ ಮರಸು ಅನ್ನೋ ಹೆಸರು ಹೆಂಗೆ ಬಂತು? ಮರಸು ಅನ್ನೋದು ಆದಿ ಕಾಲದಿಂದಲೂ ಇರೊ ಅಂಥ ಊರು ಎಂದು ಶಾಸನ ತಜ್ಞರು ಹೇಳುತ್ತಾರೆ. ಅಲ್ಲಿರುವ ಶಾಸನಗಳ ಪ್ರಕಾರ ಅದು ಹತ್ತನೆ ಶತಮಾನದಲ್ಲೆ ಇದ್ದಂತ ಒಂದು ಊರು.

ಆ ನಂತರ ಲಿಂಗಾಯಿತರ ಪ್ರಾಬಲ್ಯದಿಂದ ಅಲ್ಲಿದ್ದ ಅರಸರು ಸ್ಥಳಾಂತರವಾದರು. ಅವರಿದ್ದ ಕುರುಹಿಗಾಗಿ ಊರ ಸುತ್ತ ಒಂದು ಕೋಟೆಯಿದೆ. ಈಗಲೂ ಚಿಕ್ಕಮಗಳೂರಿನ ಕರಸಿನಕೆರೆಯಿಂದ, ಬೇರೆ ಬೇರೆ ಊರುಗಳಿಂದ ಅರಸು ಜನಾಂಗದವರು ಮನೆ ದೇವರ ಪೂಜೆಗೆ ಅಂತ ಇಲ್ಲಿಗೆ ಬಂದು ಹೋಗ್ತಾರೆ. ಇದರ ಸಾಕ್ಷ್ಯಾಧಾರವಾಗಿ “ಮರಸು ಅನ್ನೋ ಅರಸನ ಕೋಟೆ” ಅಂತ ಇಲ್ಲಿನ ಕಥೆಗಾರರು ಇಲ್ಲಿಯ ಕಥೆಗಳನ್ನು ಶುರು ಮಾಡುತ್ತಾರೆ.

ಹಂಗೆ ಲಿಂಗಾಯಿತರು ಬಂದು ಈ ಊರಲ್ಲಿ ಪ್ರಾಬಲ್ಯ ಸಾಧಿಸಿದ್ದರು ಅನ್ನೋದರ ಗುರುತಾಗಿ ಮಠದ ತೋಪಿನಲ್ಲಿ ಇರೋ ಕಾಡು ಬಸವಣ್ಣ. ಊರ್ನಲ್ಲಿರೊ ಊರು ಬಸವಣ್ಣ ನಮ್ಮೂರಲ್ಲಿ ಉಳಿದು ಹೋಗಿವೆ. ಮರಸು ಅನ್ನೋ ಊರು ಕೂಡ ರಸ್ತೆ ಪಕ್ಕಕ್ಕೆ ವಲಸೆ ಹೋಗಿ, ಹಳೆಮರಸಿನ ಹೊಲಗೇರಿಯೊಂದು ನಮ್ಮೂರು ಹೊಸಹಳ್ಳಿಯ ಪಕ್ಕಕ್ಕೆ ಉಳಿದು ಹೋಗಿದೆ.

ಅವರು ಅಂದಿನಿಂದಲೂ ನಮ್ಮವರೇ ಆಗಿ ಹೋಗಿದ್ದಾರೆ. ಹಳೆಮರಸಿನ ಹೊಲಗೇರಿ ಪಕ್ಕದಲ್ಲೊಂದು ಅಂಕು ಡೊಂಕಾಗಿರೊ ಹಣ್ಣುಹಣ್ಣು ಮುದುಕನಂಥ ಕಣಗಲು ಮರ, ಅಷ್ಟೆತ್ತರದ ಗುಡ್ಡೆ ಮೇಲೆ ಇರೊ ಒಂದು ಲಿಂಗ, ಅದಕ್ಕೆಇರೊ ಒಂದು ಕಾಡು ಕಲ್ಲಿನ ಮಂಟಪ, ವಲಸೆ ಹೋದ ಲಿಂಗಾಯಿತರ ಕುರುಹಿನ ಹಾಗೆ ಮಳೆಗಾಳಿಗೆ ನಲುಗದೆ ಉಳಿದುಹೋಗಿದೆ. “ಮರಸು ಊರಿನ ಜನರು ಆ ಕಡೆಗೆ ಊರು ಬದಲಾಯಿಸುವಾಗ ಈ ಲಿಂಗಾನ ಕೀಳಕ್ಕೆ ಅಂತ ಹೋದರೂವೆ ಅದು ಬೇರು ಬಿಟ್ಟಿತ್ತಂತೆ. ಅದಕ್ಕೆ ಅದನ್ನ ಇಲ್ಲೇ ಬಿಟ್ಟು ಹೋದರಂತೆ.” ಅಂಥ, ಅದನ್ನು ನೋಡಿದಾಗ ನಮ್ಮೂರೋರು ಹೇಳ್ತಿರ್ತಾರೆ.

ಆಮೇಲೆ, ವಿಜಯನಗರದ ಪತನಾನಂತರ ಆನೆಗುಂದಿಯಿಂದ ವಲಸೆ ಬಂದ ಜನರ ಪಲ್ಲಟದ ಸಾಕ್ಷಿಯಾಗಿ ಹೊಸಹಳ್ಳಿ ಹಾಗೂ ಮರಸಿನ ನಡುವಿನ ದಿಬ್ಬದಲ್ಲಿ ವೈಷ್ಣವ ದೇವ ರಂಗನಾಥ ಸ್ವಾಮಿಯ ಒಂದು ಗುಡಿಯಿದೆ. ನಮ್ಮ ಮನೆಯ ಪೂಜೆಗಳಿಗೆ ಮರಸಿನಿಂದ ವಷ್ಠಮರ ಐನೋರು ಈಗಲೂ ಬರ್ತಾರೆ. ಬಸವಣ್ಣನ ಪೂಜೆಗೆ ಶಿವಾಚಾರದವರೂ ಬರ್ತಾರೆ. ಯಾಕೆ ಅಂದ್ರೆ ನಮ್ಮ ಹೊಸಹಳ್ಳಿಯಲ್ಲಿ ಇರೋರೆಲ್ಲಾ ದಾಸ ಗೌಡರೆ. ಶಂಖು ಜಾಗಟೆಯವರು. ಹಿಂದೆಲ್ಲಾ ಇಲ್ಲಿ ಜಾತ್ರೆಗಳು ನಡೀವಾಗ ಮೈಸೂರು ದೊರೆಗಳಿಂದ ದೇವರಿಗೆ ಹಾರ ಬರ್ತಿತ್ತು ಅಂತ ಹೇಳೋರು.

ಇಷ್ಟೆಲ್ಲ ಆದ್ ಮೇಲೆ ಬ್ರಿಟೀಶರ ಪ್ರಭಾವದಿಂದ ತಪ್ಪಿಸಿಕೊಳ್ಳೋಕೆ ಆಗುತ್ತಾ? ಇಲ್ಲಿ ಕೋವಿ ಮಾಡೋ ಆಚಾರ್ರು ಇದಾರೆ. ಹಿಂದೆ ಸುತ್ತಮುತ್ತಲಿನ ಮಲೆಸೀಮೆಗೆ ಕೋವಿ ಮಾಡಿ ಕೊಡ್ತಿದ್ದವ್ರು ಇವರೆ. ಮಲೆನಾಡಿಗೆಲ್ಲಾ ಮರಸಿನ ಕೋವಿ ಆಚಾರ್ರು ಹೆಸರುವಾಸಿ ಆಗಿದ್ರು. ತಮಗೆ ಬೇಕಾದಂತ ಕೋವಿ ಆರ್ಡರ್ ಕೊಟ್ಟು ಮಾಡ್ಸಿಕೊಂಡು ಹೋಗ್ತಿದ್ವಿ ಅಂತ ಆಗಿನವರು ಮರಸು ಅನ್ನೋ ಊರನ್ನ ಈಗಲೂ ನೆನಿತಾರೆ. ಇದಕ್ಕೆ ಸಾಕ್ಷಿಯಾಗಿ ಆಲೂರಿನಲ್ಲಿ ಈಗಲೂ ಎರಡು ಕೋವಿ ಅಂಗಡಿಗಳು ವ್ಯಾಪಾರ ಮಾಡುತ್ತಿವೆ. ನಮ್ಮೂರಿನಲ್ಲಿ ಕೋವಿ ಗದ್ದೆ, ಕೋವಿ ಹೊಲ ಎಂಬ ಹೆಸರಿನ ಜಮೀನುಗಳ ಗುರುತು ಉಳಿದು ಹೋಗಿದೆ.

ಇಷ್ಟೊಂದು ಇತಿಹಾಸ ಇರೊ ಮರಸು ಎಂಬೊ ಊರಿನ ಅರಸರ ಮಗನೊಬ್ಬ ಈಗ ಬಿಸಿನೆಸ್ ನಲ್ಲಿ ದುಡ್ಡು ಮಾಡ್ಕೊಂಡಿರೋನು. ಹಳೆ ರಕ್ತದ ವಾಸನೆಯ ನೆನಪಿನೊಂದಿಗೆ ತನ್ನ ಊರನ್ನು ಹುಡುಕಿ ಇಲ್ಲಿಗೆ ಬಂದು ನಮ್ಮ ರಂಗಸಾಮಿ ಗುಡಿ ಪಕ್ಕಕ್ಕಿದ್ದ ಜಮೀನು ತಗೊಂಡಿದ್ದೆ, ಒಂದು ರಜಪೂತ ಶೈಲಿಯ ಮಾರ್ಬಲ್ಲಿನ ಕುಸುರಿ ಕೆತ್ತನೆಯ ದೊಡ್ಡದಾದ ಒಂದು ದೇವಸ್ಥಾನವೊಂದನ್ನು ಕಟ್ಟಿಸಿದ್ದಾನೆ.

ಹಳೆ ಉರುಸ್ಲಮ್ಮ ಅನ್ನೋ ಅವರು ನಡೆದುಕೊಳ್ತಿದ್ದ ಮೊರೆ ಬಿದ್ದ ದೇವತೆಯ ಕಲ್ಲು ಮತ್ತು ಮರವೆರಡೂ ಈಗ ಸೀರೆ ಉಟ್ಟು ನಿಂತಿವೆ. ಹಾಗೆ, ಅವರು ಕಟ್ಟಿಸಿದ ಹೈಟೆಕ್ ದೇವಸ್ಠಾನ ವಿಜಯದುರ್ಗ ಕ್ಷೇತ್ರವಾಗಿ, ಬೆಂಗಳೂರಿಂದ ಬರುವ ಜನಕ್ಕೆ ಬೆಳ್ಳೂರು ಕ್ರಾಸ್ ನಿಂದ ದಾರಿ ತೋರುವ ಆರೋ ಮಾರ್ಕ್ ಗಳು ಕಾಣುತ್ತವೆ.

ಹಾಗೆ ಎಲ್ಲ ದಾರಿಗಳಿಗೂ ಈ ಮಾರ್ಕ್ ಗಳು ತೋರು ಬೆರಳನ್ನು ತೋರುತ್ತ ನಿಂತಿವೆ. ಇಂಟರ್ನೆಟ್ ಪೂಜೆ ಸಹಿತ ಇದೆ. ಹಾಗೆಯೆ ನಿಶ್ಯಬ್ಧವಾಗಿದ್ದ ನಮ್ಮೂರಿನ ಹಾದಿಗೆ ಪ್ರೇಮಿಗಳ ವಾಹನಗಳ ಸದ್ದು ಹೆಚ್ಚಾಗಿ ಆ ಭಾರಿ ಗೇಟಿನ ಮುಂದೆ ನಮ್ಮೂರಿನ ಯುವಕರು ಅವರನ್ನು ಕಾಯುತ್ತಾ ಸೆಕ್ಯುರಿಟಿಗಳಾಗಿ ನಿಂತ ಹಾಗೆ ನಿಂತಿದ್ದಾರೆ. ದನ ಕಾಯೋ ಹುಡುಗರ ದೊಣ್ಣೆಗಳು ಈಗ ಫಳಫಳ ಹೊಳಪು ಹಾಕಿಸಿಕೊಂಡು ಇವರ ಕೈಲ್ಲಿದ್ದು ದೇವಸ್ಥಾನಕ್ಕೆ ಬರುವ ಜನರನ್ನು ಕಾಯುತ್ತಿವೆ.

ವಿಜಯನಗರದ ಪತನಾನಂತರ ಆನೆಗುಂದಿಯಿಂದ ವಲಸೆ ಬಂದ ಜನರ ಪಲ್ಲಟದ ಸಾಕ್ಷಿಯಾಗಿ ಹೊಸಹಳ್ಳಿ ಹಾಗೂ ಮರಸಿನ ನಡುವಿನ ದಿಬ್ಬದಲ್ಲಿ ವೈಷ್ಣವ ದೇವ ರಂಗನಾಥ ಸ್ವಾಮಿಯ ಒಂದು ಗುಡಿಯಿದೆ. ನಮ್ಮ ಮನೆಯ ಪೂಜೆಗಳಿಗೆ ಮರಸಿನಿಂದ ವಷ್ಠಮರ ಐನೋರು ಈಗಲೂ ಬರ್ತಾರೆ. ಬಸವಣ್ಣನ ಪೂಜೆಗೆ ಶಿವಾಚಾರದವರೂ ಬರ್ತಾರೆ.

ಗುಡ್ಸು ಒರ್ಸು ಎಲ್ಲ ಮೇನೇಜರ್ ಗಳು ನಮ್ಮೂರಿನವರೆ. ನಮ್ಮೂರಿನ ಜಮೀನುಗಳಿಗೆ ಭಾರಿ ಬೆಲೆ ಬಂದು ಹತ್ತಾರು ಕೇಸುಗಳನ್ನು ಮಾಡಿಕೊಂಡು ಕೋರ್ಟ್ ಕಡತದಲ್ಲಿ ಕಾಯುತ್ತಿವೆ. ಕೇವಲ ಎರಡು ಮೈಲಿ ದೂರದ ಊರಿಂದ ಯುವಕರು ಸಂಸಾರವನ್ನು ಆಲೂರಿನ ಕಡೆಪೇಟೆಯ ಬಾಡಿಗೆ ಮನೆ ಕಡೆಗೆ ಸಾಗಿಸುತ್ತಿದ್ದಾರೆ. ಮಕ್ಕಳ ಓದು ಮುಕ್ಕಾಗಬಾರದು ಎಂದು, ಹಿರಿಯರು ಒತ್ತಾಸೆ ಕೊಟ್ಟು ಹಣ್ಣಾದ ಕಾಲದಲ್ಲೂ ದುಡಿದು ಮಕ್ಕಳಿಗೆ ಮೊಮ್ಮಕ್ಕಳಿಗೆ ಕರೆದ ಹಾಲು ಮೊಸರನ್ನು ಇಲ್ಲಿಂದ ಕಳುಹುತ್ತಾರೆ.

ಹಿಂಗೆ ಒಂದು ಊರಿಗೆ ಎಷ್ಟೊಂದು ಬದಲಾವಣೆಯ ನಿರಿಗೆಗಳು. ಕನ್ನಡ ಪಂಡಿತರ ಪ್ರಕಾರ ಮರೆಯರ ಅಸೈ ಮರಸು. ಮರೆಯರು ಅಂದರೆ ಆದಿ ಕಾಲದಿಂದಲೂ ಮರದ ತೊಗಟೆಯಿಂದ ಬಟ್ಟೆ ನೇಯ್ಗೆಯ ಕಾಯಕ ಮಾಡುತ್ತಿದ್ದವರು. ಅಸೈ ಅಂದ್ರೆ ಸ್ಥಳ. ಇದಕ್ಕೆ ಸಾಕ್ಷಿಯಾಗಿ ಪಕ್ಕದೂರಾದ ತೊಗರನಹಳ್ಳಿಯಲ್ಲಿ ನೇಕಾರ ಜನಾಂಗದವರಿದ್ದಾರೆ.

ಆದರೆ ಒಂದು ಊರಿನ ಇತಿಹಾಸವೇನೇ ಇರಲಿ. ಅದರ ಸುತ್ತಲೂ ತಾನೇ ತಾನಾಗಿ ಮೆರಗನ್ನು ಕಟ್ಟಿಕೊಂಡ ಕನಸಿನ ಲೋಕದ ಕಥೆಯೊಂದಿರುತ್ತೆ. ಅದು ಹೇಳುವವರ ಆಸಕ್ತಿ ಹಾಗೂ ಕೇಳುವವರ ತಾಳ್ಮೆಯನ್ನ ಅವಲಂಬಿಸಿರುತ್ತೆ. ಆ ಕಥೆ, ಆದಷ್ಟೂ ಆ ಹೆಸರು ಹಾಗೂ ವಿಷಯದ ನಡುವೆ ಒಂದು ಸಂಪರ್ಕಕ್ಕಾಗಿ ಸೃಜನಶೀಲವಾಗಿ ದುಡಿತಾನೆ ಇರುತ್ತೆ. ಗರಿಬಿಚ್ಚಿ ಹಾರಾಡ್ತ ಗೂಡು ಮಾಡಿ ಮರಿಮಾಡ್ತಾ ತಲೆಯಿಂದ ತಲೆಗೆ ದಾಟುತ್ತಾ ಹೋಗುತ್ತೆ.

ಅಂಥ ಒಂದು ಕಥೆನ ನಮ್ಮಜ್ಜಿ ಕಂಬಳಿ ಒಳಗೆ ಮಲಗುಸ್ಕಂದು ತಲೆ ವಳಗೆ ನಚ್ಚಗೆ ಹಿತವಾಗಿ ಬೆರಳಾಡಿಸ್ತಾ ಹೇಳೋದು. ನೀವೂ ಕೇಳಿ. ನನಗಂತೂ ಮರಸು ಅಂದ್ರೆ ಈ ಕಥೆನೆ ನೆನಪಾಗೋದು.

“ಒಂದಿನ ಈ ನಾಡಿನ ದೊರೆ ಅನ್ನನು ಬ್ಯಾಟೆಗೆ ಅಂತ ಕಾಡಿಗೆ ಬಂದ. ಆಗ ನಮ್ಮೂರು ದೊಡ್ಡ ಕಾಡಾಗಿತ್ತು. ಕಾಡಲ್ಲಿ ತಲೆ ಎತ್ತಿ ನೋಡುದ್ರೆ ಹೂವು ಅನ್ನವು ಕಾಣ್ಸಲ್ವು. ಅಂಥ ಮರಗಳು. ಒಬ್ರು ತೋಳಲ್ಲಿ ತೆಬ್ನಾರ್ದಂಥ ಮರಗಳು ಅಷ್ಟೆತ್ರ ಇದ್ವು. ಆದ್ರೆ, ಕಾಡು ಅನ್ನ ಕಾಡೆ ಅದರ ತುಂಬಲು ಬಿಡೊ ಹೂವಿನ ಘಮ್ನಕ್ಕೆ ಘಮ ಘಮ ಅಂತ ಘಮಗುಡೋದು. ಇಂಥ ಕಾಡ್ನಲ್ಲಿ ಬ್ಯಾಟೆ ಆಡ್ತಾ ಆಡ್ತಾ ದೊರೆ ಒಂದು ಮಿಕದ ಬೆನ್ನ ಹಿಂದ್ಗುಟ್ಟೆ ಬಿದ್ದು ಬಂದ್ಬುಟ್ಟ. ಮಿಕ ಕಣ್ಮರೆ ಆಗೋಯ್ತು. ಇವನು ಸುಸ್ತು ಹೊಡ್ದಿದ್ನಾ?

ಅಲ್ಲೇ, ನಮ್ಮೂರ ಮಂಟಪದ ತೆಗ್ಗಲ್ಲಿರೊ ಕಲ್ಲಕಟ್ಟೆಲಿ ನೀರ ಹೊಟ್ಟೆ ತುಂಬ ಕುಡ್ದೊನೆ ಏನ್ ಮಾಡ್ದ? ಪರ್ವಾರದೋರು ಬಂದು ಸೇರ್ಕಲ್ಲಿ ಅಂದ್ಕಂಡಿದ್ದೆ ಮರದ ಕೆಳಗೆ ಮಲಗೋದ. ನಿದ್ದೆ ಅನ್ನೊದು ಎಳ್ಕಂದು ಹೋಯ್ತು. ಎದ್ ನೋಡ್ತಾನೆ. ಎತ್ತಾಗ ತಿರುಗಿದ್ರೂವೆ ಸಂಜೆ ಬೈಗಿನ ಬಿಸ್ಲು ಬಿದ್ದು ಆ ಜಾಗ ಅಂಬೂದು ದೇವೆಂದ್ರನ ಇಂದ್ರವನ ಅನ್ನದಕ್ಕಿಂತಲೂ ವೈನಾಗೈತೆ.

“ಅಬ್ಬಬ್ಬನೇ ದೇವನೆ, ಇಲ್ಲೆ ಇರನ ಸಾಯೋವರ್ಗೂವೆ ಅನ್ನ ಅಂಥ, ಮರೆಯಾಕಾಗದೆ ಇರೊ ಜಾಗ ತೊರ್ಸದಲ್ಲಾ ನಮ್ಮಪ್ಪ”, ಅಂತ, ಅಲ್ಲೆ ಇದ್ದ ಕಲ್ಲುದೇವ್ರಿಗೆ ಕೈ ಮುಗ್ದು ಕುಂತ್ಕಂದ. ಎದ್ದು ತನ್ನ ಪರಿವಾರ ಸೇರನ ಅಂದ್ರೆ ದಾರಿ ತಿಳಿವಲ್ದು . ಕುದ್ರೆ ಹತ್ತಿ ಜೀನ ಎಳುದ್ರೂವೆ ಅದು ತಲೆಕೆಳಗಾಕಂದು ಸುಮ್ಮಗ್ ನಿತ್ಕಂತೆ ಹೊರ್ತು ಒಂದ್ ಹೆಜ್ಜೆ ಮುಂದಕ್ಕೆ ಇಡಲ್ದು. ಅಷ್ಟೊತ್ತಿಗೆ ಎಲ್ಲರು ನಮ್ಮ ಊರಿನ ದನ ಕಾಯೊ ಹುಡ್ಗನ್ನ ಹಾದಿ ಕೇಳ್ಕೊಂದು ದಾರಿ ಹಿಡ್ಕಂದು ಬಂದ್ರು. ಅಯ್ಯೊ! ಸಧ್ಯ ರಾಜ ಸಿಕ್ಕುದ್ನಲ್ಲಾ, ನಾವು ತಲೆ ದಂಡ ಕೊಡೋದು ತಪ್ತು ಅಂತ ಕರಕಂಡು ಹೊರಟ್ರು.

ರಾಜಂಗೆ ಇಂಥ ಜಾಗ ಬಿಟ್ಟು ಹೊರಡ್ಬೆಕಲ್ಲಾ ಈಗ ಅಂತ ಬೇಜಾರು ಆಗ್ತಿರೋದು. ಆಗ್ಲೇ ಮಿಣುಕು ಹುಳೆಲ್ಲಾ ಸಾಲಗಟ್ಕಂದು ಮಬ್ಬೆಳಕಲ್ಲಿ ಮಿಣುಗುಡ್ತಿದ್ದು. ರಾಜಾ ಹೊರುಡುವಾಗ “ಇಂಥ ಜಾಗಾನೆ ನನ್ನ ಜೀವಮಾನದಲ್ಲಿ ನೋಡ್ನಿಲ್ಲಾ ಬುಡಪ್ಪ .ನನ್ನೇ ಮರಸುಬಿಡ್ತಲ್ಲಾ. ಇದು ಮರಸು.ಇದು ಎಂಥಾ ಮರಸು?” ಅಂದನಂತೆ. ಆ ಹೆಸರು ಅಂಗೇಉಳ್ಕಂತು. ಆದ್ರೆ ಪರವಾರದೋರು ಹೆದ್ರುಕೊಂಡು…

” ಬಿರಬಿರನೆ ಹೋಗನ ಸಾಮಿ ಕತ್ಲಾಯ್ತು. ಮರೆವಿನ ಬಳ್ಳಿನ ನಾವೂ ಮುಟ್ಟುಬುಟ್ರೆ, ಅಷ್ಟೆ. ಆಮೇಲೆ ಅರಮನೆಯೋರು ನಮ್ಮನ್ನು ಬಿಟ್ಟಾರಾ?” ಅಂತ ಅವಸರದಲ್ಲಿ ಹೊರಟ್ರಂತೆ. ಹಿಲಾಲಿನ ಬೆಳಕ ಹಿಡ್ಕಂದು ದಾರಿ ತೋರುಸ್ಕಂಡು ಹೊರಟ್ರಂತೆ. ಹಿಂಗೆ ರಾಜಾ ಮನಸಿಲ್ಲದ ಮನಸಲ್ಲಿ ಅವರ ಹಿಂದಗುಟೆ ಹೋದನಂತೆ. ದಾರಿ ತೋರಕ್ಕೆ ಅಂತ ಬಂದಿದ್ನಲ್ಲ! ದನ ಕಾಯ ಹುಡ್ಗ ಅದೆ ನಮ್ಮೂರ್ನನು ಅವ್ನು ಈ ಜಾಗವ ಮರಸು ಅನ್ನೊ ಹೆಸರು ಬಾಯಲ್ಲೇ ಇಟ್ಕಂಡು ಅದರ ಕಥೆ ಎಲ್ಲನು ತಂದು ಊರೋರಿಗೆ ಹೇಳ್ದ . ಎಲ್ರು ಬಾಯಲ್ಲೂ ಹಿಂಗೆ “ಮರಸು, ಮರಸು” ಆಗೋಯ್ತು.

ಅಮೆಲೆ ಇದೆ ಒಂದು ಊರಾಯ್ತು. ಇದರ ಪಕ್ಕದಲ್ಲಿ ನಮ್ಮ ಹಿರಿಯೋರು ಬಂದು ಹೊಸಹಳ್ಳಿ ಅನ್ನದ ಕಟ್ಟುದ್ರು. ಇದು ಮರಸಿನ ಹೊಸಳ್ಳಿ ಆಯ್ತು. ಪಾಲು ಪಾರಿಕತ್ತಲ್ಲಿ ಕಾಗಜ ಪತ್ರ ಬರ್ಯೋರು ಇಂಗೆ ಬರ್ಯೋದು ಈಗ್ಲೂವೆ “.

ನಾನು ಕಥೆ ಕೇಳ್ತಾ ನಿದ್ದೆ ಹೋಗುವಾಗ ನಿದ್ದೆಕಣ್ಣಲ್ಲಿ ಇದರ ರಮ್ಯತೆ ಇನ್ನೂ ಹೆಚ್ಚಾಗೇ ಕಾಣೋದು. ಅವರವರ ಊರು ಅಂದ್ರೆ ಸುಮ್ಣೆನಾ? ಪಂಪ ಹೇಳಿಲ್ವಾ? “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಅಂತ…