ಶಹರದ ದಾರಿಗಳಲ್ಲಿ ಓಡಾಡುತ್ತ ಓರ್ಹಾನ್ ಇಸ್ತಾನ್‌ಬುಲ್ ಶಹರವನ್ನು ಓದುವ ಮತ್ತು ಅದರ ಕುರಿತು ಬರೆಯುವುದನ್ನು, ಅದರ ಕುರಿತು ಬರೆಯಲಾಗಿರುವ ಲೇಖನಗಳು ಮತ್ತು ಅದರ ಚಿತ್ರಗಳ ಮುಖೇನವೇ ಕಲಿತುಕೊಳ್ಳುತ್ತಾರೆ. ಇಸ್ತಾನ್‌ಬುಲ್ ಶಹರದ ಹಳೆಯ ಫೋಟೋಗಳು ಯುರೋಪಿನ ಮತ್ತು ಟರ್ಕಿಯ ಕಲಾವಿದರುಗಳು ಪ್ರಸ್ತುತಪಡಿಸಿರುವ ಶಹರದ ಸಂಸ್ಕೃತಿ, ಜೀವನಶೈಲಿ, ಇತಿಹಾಸ, ಕಲೆಗಳ ಕುರಿತಾದ ಟಿಪ್ಪಣಿಗಳನ್ನು ಒದಗಿಸುತ್ತವೆ.ಈ ಕೃತಿಯನ್ನು ಓದುತ್ತ ಹೋದ ಹಾಗೆ ಇಸ್ತಾನ್‌ಬುಲ್ ಎಂಥಹ ಅನನ್ಯ ಶಹರವೆನ್ನುವುದು ಓದುಗರಿಗೆ ವೇದ್ಯವಾಗುತ್ತದೆ.
ಕಮಲಾಕರ ಕಡವೆ  ಅಂಕಣ

 

ಬರವಣಿಗೆಯ ಯಾವುದೇ ಪರಿಚಿತ ಪ್ರಕಾರಗಳ ವ್ಯಾಖ್ಯೆಗಳ ಮಿತಿಯಲ್ಲಿ ಓದಿಗೆ ನಿಲುಕದ ಒಂದು ಅಪರೂಪದ ಕೃತಿಯ ಕುರಿತು ಈ ವಾರ ಚರ್ಚಿಸೋಣ. ಕತೆ, ಸ್ಮೃತಿ, ಫೋಟೋ, ಇತಿಹಾಸ, ಮಾಹಿತಿಗಳೆಲ್ಲದರ ಕೌತುಕಮಯಿ ಮಿಶ್ರಣವಾಗಿರುವ ಈ ಕೃತಿ ಟರ್ಕಿ ದೇಶದ ಕಾದಂಬರಿಕಾರ ಓರ್ಹಾನ್ ಪಾಮುಕ್ ಅವರ “ಇಸ್ತಾನ್‌ಬುಲ್: ಮೆಮರೀಸ್ ಆಫ್ ಅ ಸಿಟಿ”.

ವಸ್ತು ಮತ್ತು ಮಾಟಗಳೆರಡರಲ್ಲಿಯೂ ಈ ಕೃತಿ ಯಾವುದೇ ಪೂರ್ವ ನಿರ್ಧಾರಿತ ಗಡಿಗಳೊಳಗಿನ ವ್ಯಾಖ್ಯೆಗೆ ದಕ್ಕುವುದಿಲ್ಲ. ವಸ್ತುವಿನ ಲೆಕ್ಕದಲ್ಲಿ, “ಇಸ್ತಾನ್‌ಬುಲ್” ಕೃತಿಯು ಪಾಮುಕ್ ಅವರ ಮೊದಲ ಇಪ್ಪತ್ತೆರಡು ವರುಷಗಳ ಜೀವನಗಾಥೆಯನ್ನು ಹಲವು ಬಗೆಯಲ್ಲಿ ಕಟ್ಟಿಕೊಡುತ್ತದೆ: ಬಾಲ್ಯದ ಸ್ಮೃತಿಯಿಂದ ಹೆಕ್ಕಿತೆಗೆದ ಆತ್ಮಚರಿತ್ರೆಯ ವಿವರಗಳು, ಕುಟುಂಬದ ಆಲ್ಬಂನಿಂದ ಆಯ್ದ ಫೋಟೋಗಳು, ಪತ್ರಿಕೆಗಳಿಂದ ಎತ್ತಿಕೊಂಡ ಬರಹಗಳ ತುಣುಕುಗಳು, ಇಸ್ತಾನ್‌ಬುಲ್ ಕುರಿತಾದ ಹಲವಾರು ಕಲಾವಿದರ ಬರಹಗಳು ಮತ್ತು ವರ್ಣಚಿತ್ರಗಳು. ಪಾಮುಕ್ ಬಳಸುವ ಅಸಂಖ್ಯಾತ ಉಲ್ಲೇಖಗಳು ತೋರುವಂತೆ, ಇಸ್ತಾನ್‌ಬುಲ್ ಶಹರದ ತಮ್ಮ ಅನುಭವವಗಳನ್ನು ಒಮ್ಮುಖಿ ನೇರ ನಿರೂಪಣೆಯ ಬದಲು ವಿವಿಧ ಮೂಲಗಳಿಂದ ಪುಟಿಪುಟಿದು ಬರುವ, ವಿವಿಧ ದಿಕ್ಕಿನಲ್ಲಿ ಹರಡಿಹಬ್ಬಿಕೊಳ್ಳುವ ನಿರೂಪಣೆಗಳನ್ನಾಗಿಸುತ್ತಾರೆ. ಈ ವೈವಿಧ್ಯತೆಗಳು ನಮಗೆ ಪರಿಚಯಿಸುವ ಇಸ್ತಾನ್‌ಬುಲ್ ಶಹರ ಮಾತ್ರವಲ್ಲ, ನಿರೂಪಕನೂ ಸಹ ವಿಭಿನ್ನ ಅನುಭವಗಳ ಪಾತಳಿಯಲ್ಲಿ ಕಾಣಬರುತ್ತಾನೆ. ಪಾಮುಕ್ ಅವರ ಮುಖಾಂತರ ಶಹರ ಹೇಗೆ ಅಭಿವ್ಯಕ್ತಿ ಪಡೆಯುತ್ತದೆಯೋ, ಹಾಗೆಯೇ, ಶಹರದ ಮೂಲಕ ಪಾಮುಕ್ ಕೂಡ ಅಭಿವ್ಯಕ್ತಿ ಪಡೆಯುತ್ತಾರೆ.

ಇಸ್ತಾನ್‌ಬುಲ್ ಓರ್ಹಾನ್ ಪಾಮುಕ್ ಹುಟ್ಟಿಬೆಳೆದ ಶಹರವಾಗಿದ್ದರೂ ಕೂಡ, ಲೇಖಕರು ಅದನ್ನು ಅನುಭವಿಸಿರುವ ಬಗೆಯೇ ಬಗೆಬಗೆಯ ಕ್ಷಣಿಕ ದರ್ಶನಗಳಲ್ಲಿ ಕಂಡ, ಮತ್ತೆ ಮತ್ತೆ ರೂಪಾಂತರಗೊಂಡ ಶಹರವಾಗಿ ಎನ್ನುವುದನ್ನು ಕೃತಿಯ ರಾಚನಿಕ ಸ್ವರೂಪವೇ ಸೂಚಿಸುತ್ತದೆ. ಸ್ವಪ್ನಹರಿವಿನ ಈ ಬರವಣಿಗೆ ಭಾಗಶಃ ಪ್ರಯಾಣಕಥನದಂತೆ, ಭಾಗಶಃ ಇತಿಹಾಸದಂತೆ, ಆತ್ಮಚರಿತ್ರೆಯಂತೆ, ಸಾಂಸ್ಕೃತಿಕ ಟಿಪ್ಪಣಿಯಂತೆ ಪ್ರಸ್ತುತವಾಗಿದೆ.

ಗ್ರಂಥದುದ್ದಕ್ಕೂ ಎರಡು ಓರ್ಹಾನರ ಕಲ್ಪನೆ ಪುನರಾವರ್ತಿಸುತ್ತದೆ. ಈ ಎರಡು ವ್ಯಕ್ತಿಚಿತ್ರಣಗಳಿಗೆ ಸಂವಾದಿಯಾಗಿ ಇಸ್ತಾನ್‌ಬುಲ್ ಶಹರವೂ ಕೂಡ ಇಬ್ಬಗೆಯಲ್ಲಿ ಚಿತ್ರಿತವಾಗಿದೆ. ಒಂದು ವ್ಯಾಕುಲತೆಯಿಂದ ತುಂಬಿದ ಪುರಾತನ ಇಸ್ತಾನ್‌ಬುಲ್ ಶಹರದ ಪ್ರದೇಶಗಳು; ಇನ್ನೊಂದು, ಆಧುನಿಕ, ಪಾಶ್ಚಾತ್ಯೀಕರಣಕ್ಕೊಳಗಾದ, ಸಮೃದ್ಧ ವಸತಿ-ವ್ಯವಹಾರ ಪ್ರದೇಶಗಳ ಶಹರ.

ಶಹರದ ದಾರಿಗಳಲ್ಲಿ ಓಡಾಡುತ್ತ ಓರ್ಹಾನ್ ಇಸ್ತಾನ್‌ಬುಲ್ ಶಹರವನ್ನು ಓದುವ ಮತ್ತು ಅದರ ಕುರಿತು ಬರೆಯುವುದನ್ನು, ಅದರ ಕುರಿತು ಬರೆಯಲಾಗಿರುವ ಲೇಖನಗಳು ಮತ್ತು ಅದರ ಚಿತ್ರಗಳ ಮುಖೇನವೇ ಕಲಿತುಕೊಳ್ಳುತ್ತಾರೆ. ಇಸ್ತಾನ್‌ಬುಲ್ ಶಹರದ ಹಳೆಯ ಫೋಟೋಗಳು ಯುರೋಪಿನ ಮತ್ತು ಟರ್ಕಿಯ ಕಲಾವಿದರುಗಳು ಪ್ರಸ್ತುತಪಡಿಸಿರುವ ಶಹರದ ಸಂಸ್ಕೃತಿ, ಜೀವನಶೈಲಿ, ಇತಿಹಾಸ, ಕಲೆಗಳ ಕುರಿತಾದ ಟಿಪ್ಪಣಿಗಳನ್ನು ಒದಗಿಸುತ್ತವೆ. ಈ ಕೃತಿಯನ್ನು ಓದುತ್ತ ಹೋದ ಹಾಗೆ ಇಸ್ತಾನ್‌ಬುಲ್ ಎಂಥಹ ಅನನ್ಯ ಶಹರವೆನ್ನುವುದು ಓದುಗರಿಗೆ ವೇದ್ಯವಾಗುತ್ತದೆ: ಅನತಿಕಾಲದಲ್ಲಿ ನಡೆದ ಶಹರದ ವಿಕಾಸ, ಅದರಲ್ಲಿ ಮೇಳೈಸಿದ ಪೂರ್ವ-ಪಶ್ಚಿಮಗಳ ಸಂಸ್ಕೃತಿ, ಆಗಾಗ ಅಗ್ನಿಪಾಲಾದ ಅದರ ಅನನ್ಯ ಕಟ್ಟಿಗೆಯ ವಾಸ್ತುಶಿಲ್ಪ, ಕಡಲಯಾನದ ಅಪಾರ ಇತಿಹಾಸವುಳ್ಳ ಬಾಸ್ಫರಸ್ ಸಮುದ್ರಮಾರ್ಗ, ಒಟ್ಟೋಮನ್ ಸಾಮ್ರಾಜ್ಯದ ಅಂತ್ಯ ಹುಟ್ಟುಹಾಕಿದ ವ್ಯಾಕುಲತೆ ಮತ್ತು ಆರ್ಥಿಕ ಕುಸಿತ ಮತ್ತು ಒಂದೆಡೆ ಏಶಿಯಾ, ಇನ್ನೊಂದೆಡೆ ಯುರೋಪುಗಳಿರುವ ಕಾರಣ ಇಸ್ತಾನ್‌ಬುಲ್ ಶಹರ ಸದಾ ತೋರುವ ಸಂದಿಗ್ಧತೆ….

ಪಾಮುಕ್ ಬಳಸುವ ಅಸಂಖ್ಯಾತ ಉಲ್ಲೇಖಗಳು ತೋರುವಂತೆ, ಇಸ್ತಾನ್‌ಬುಲ್ ಶಹರದ ತಮ್ಮ ಅನುಭವವಗಳನ್ನು ಒಮ್ಮುಖಿ ನೇರ ನಿರೂಪಣೆಯ ಬದಲು ವಿವಿಧ ಮೂಲಗಳಿಂದ ಪುಟಿಪುಟಿದು ಬರುವ, ವಿವಿಧ ದಿಕ್ಕಿನಲ್ಲಿ ಹರಡಿಹಬ್ಬಿಕೊಳ್ಳುವ ನಿರೂಪಣೆಗಳನ್ನಾಗಿಸುತ್ತಾರೆ.

ಇಸ್ತಾನ್‌ಬುಲ್ ಶಹರದ ಕುರಿತಾದ ಪಾಮುಕ್ ಅವರ ನೆನಪುಗಳನ್ನು ರೂಪಿಸುವಲ್ಲಿ ಮುಖ್ಯವಾಗಿ ನಾಲ್ಕು ಲೇಖಕರ/ಕವಿಗಳ ಪಾತ್ರವಿದೆ. ಅವರಲ್ಲಿ ಇಬ್ಬರು ಟರ್ಕಿಯವರು – ಯಾಹ್ಯಾ ಕೇಮಲ್ ಬೇಯಾಟ್ಲಿ ಮತ್ತು ಅಹಮತ್ ಹಮ್ದಿ ತನಪಿನಾರ್ – ಮತ್ತಿಬ್ಬರು ಯುರೋಪಿನವರಾದ ಜೆರಾರ್ಡ್ ಡಿ ನರ್ವಲ್ ಮತ್ತು ಥಿಯೋಫೈಲ್ ಗಾಟಿಯರ್.

ಪಾಮುಕ್ ಅವರ ಪ್ರಸ್ತುತಿಯ ವಿಶೇಷವೆಂದರೆ ಅವರ ಸ್ಮೃತಿಸೌಧವಾಗಿ ಹೊಮ್ಮುವ ನೊಸ್ಟಾಲ್ಜಿಯಾ ಪ್ರೇರಿತ ಚಿತ್ರದಲ್ಲಿ ರಮ್ಯವೂ ಇದೆ, ವಿಲಕ್ಷಣತೆಯೂ; ಕ್ಷುದ್ರವೂ, ಭಯಂಕರವೂ… ಕುಸಿದ ಸಾಮ್ರಾಜ್ಯದ ಅವಶೇಷಗಳಿಂದ ಹೊರಹೊಮ್ಮುವ ಕೊರಗು, ಖಿನ್ನತೆ, ವ್ಯಾಕುಲತೆಯೂ ಇದೆ. ಪಾಮುಕ್ ಹೇಳುತ್ತಾರೆ: “ಕೊರಗು ಶಹರದಿಂದ ನನ್ನೊಳಗೆ ಮತ್ತು ನನ್ನೊಳಗಿಂದ ಅದರೊಳಗೆ ಇಳಿಯತೊಡಗಿದಂತೆ ನನಗನಿಸುತ್ತದೆ ನಾನೇನು ಮಾಡಿಯೇನು! ಈ ಶಹರದ ಹಾಗೆ ನಾನೂ ಕೂಡ ಸಜೀವಮೃತರ ಸಾಲಿಗೆ ಸೇರಿಹೋಗಿದ್ದೇನೆ.”

ಈ ಪುಸ್ತಕದ ಪ್ರಧಾನ ಅಧ್ಯಾಯವು ಇಸ್ತಾನಬುಲ್ ಶಹರವನ್ನು ಆವರಿಸಿರುವ ವ್ಯಾಕುಲತೆ ಅಥವಾ ಕೊರಗಿನ ಕುರಿತಾದದ್ದು – ಹುಜ಼ುನ್ ಎಂದು ಟರ್ಕಿಯಲ್ಲಿ ಕರೆಯಲಾಗುವ ಇದು ಒಂದು ಬಗೆಯ ಸಾಮೂಹಿಕ ಮಾನಸಿಕ ಅವಸ್ಥೆ – ಗತ ಸಾಮ್ರಾಜ್ಯದ ನೆನಪಲ್ಲಿ ಸೊರಗುತ್ತಿರುವ ಶಹರದ ನಾಗರಿಕರ ಸಮಾನ ಕೊರಗು. ಹುಜ಼ುನ್ ಎನ್ನುವುದು ಇಡೀ ಸಮುದಾಯವೇ ಹಂಚಿಕೊಳ್ಳುವ ಗರ್ವಭರಿತ ಕೊರಗು, ಇದು ದುಖಃವಲ್ಲ, ಶೋಕವಲ್ಲ, ಇದೊಂದು ವ್ಯಾಕುಲತೆ… ಒಂದು ಸ್ತರದಲ್ಲಿ ಪಾಮುಕ್ ಈ ಹುಜ಼ುನ್ ಎನ್ನುವುದನ್ನು ಒಂದು ಸದ್ಗುಣವೆಂಬಂತೆ ಚಿತ್ರಿಸುತ್ತಾರೆ.

“ನಾನು ಪ್ರಾಯಕ್ಕೆ ಬರುವಷ್ಟರಲ್ಲಿ ನನ್ನ ಬಾಲ್ಯದಲ್ಲಿ ನಾನು ಕಂಡಿದ್ದ ಕಾಸ್ಮೋಪಾಲಿಟನ್ ಇಸ್ತಾನ್‌ಬುಲ್ ಶಹರ ಆಗಲೇ ಮರೆಯಾಗಿ ಹೋಗಿತ್ತು. 1852ರಲ್ಲಿ ಈ ಶಹರದ ಕುರಿತಾಗಿ ಬರೆಯುತ್ತ ಗಾಟಿಯರ್ ಹೇಳುತ್ತಾನೆ, ಇಸ್ತಾನ್‌ಬುಲ್ ಶಹರದ ಮಾರ್ಗಗಳಲ್ಲಿ ಟರ್ಕಿಶ್, ಗ್ರೀಕ್, ಆರ್ಮೇನಿಯನ್, ಇಟಾಲಿಯನ್, ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆಗಳು ಅನಾಯಾಸ ಕಿವಿಗೆ ಬೀಳುತ್ತಿದ್ದವೆಂದು. ಇಸ್ತಾನ್‌ಬುಲ್ ಶಹರದ ಅನೇಕ ನಾಗರಿಕರು ಹೊಂದಿದ್ದ ಬಹುಭಾಷಾ ಪ್ರಾವೀಣ್ಯತೆ ಅವನಲ್ಲಿ ಕೊಂಚ ನಾಚಿಕೆಯನ್ನೂ ಮೂಡಿಸಿತ್ತು, ತನ್ನ ಅನ್ಯಭಾಷೆಯ ಕುರಿತಾದ ಅಜ್ಞಾನಕ್ಕಾಗಿ. ಟರ್ಕಿಯಲ್ಲಿ ಸಾರ್ವಭೌಮ ಪ್ರಭುತ್ವದ ಸ್ಥಾಪನೆಯಾಗುವುದರ ಮೂಲಕ ಮೊದಲಾದ ತೀವ್ರ ಟರ್ಕೀಕರಣದ ಪ್ರಕ್ರಿಯೆಯ ತರುವಾಯ, ಅಲ್ಪಸಂಖ್ಯಾತರ ಮೇಲಿನ ನಿರ್ಬಂಧನೆಗಳು ಬಂದ ನಂತರ, ಇಲ್ಲಿನ ಬಹು ಭಾಷೆಗಳು ಮರೆಯಾದವು. ಈ ಸಾಂಸ್ಕೃತಿಕ ಶುದ್ಧೀಕರಣವನ್ನು ನನ್ನ ಬಾಲ್ಯದಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ; ಶಹರದ ಸುತ್ತಲೂ ಟರ್ಕಿಶ್ ಭಾಷೆಯನ್ನು ಮಾತ್ರ ಆಡಲು ತಾಕೀತು ಮಾಡುವ ಫಲಕಗಳಿದ್ದವು – ಅನ್ಯಭಾಷೆಯಲ್ಲಿ ವ್ಯವಹರಿಸುವವರನ್ನು ಕಂಡಾಗ ಜನ ಎಚ್ಚರಿಸುತ್ತಿದ್ದರು.”

ಕಥನದ ಉದ್ದಕ್ಕೂ ಕಾಣಬರುವ ಅನೇಕ ಓರ್ಹಾನಗಳ ಜೊತೆಜೊತೆಯೇ, “ಮೆಮರೀಸ್ ಆಫ್ ದ ಸಿಟಿ” ಕೃತಿಯು ಓರ್ಹಾನ್ ಪಾಮುಕ್ ಓರ್ವ ವಿಶ್ವಮಾನ್ಯ ಲೇಖಕನಾಗಿ ಬೆಳೆದುಬಂದ ಬಗೆಯನ್ನು ಕಥಿಸುತ್ತದೆ. ಮರೆಯಾಗಿ ಹೋಗಿರುವ ಗೆಳತಿಯ ಖಯಾಲಿಯಿಂದ ಇನ್ನೂ ಹೊರಬಂದಿರದ ಲೇಖಕ ಬರೆದ ಆಕೆಯ ಜೀವನ ಚರಿತ್ರೆಯಂತಿದೆ ಪಾಮುಕ್ ಅವರ ಇಸ್ತಾನ್‌ಬುಲ್ ಕುರಿತಾದ ಕೃತಿ. ಇದು ಪಾಮುಕ್ ತಮ್ಮ ಯೌವನದ ಶಹರಕ್ಕೆ ಸಲ್ಲಿಸಿರುವ ಶೋಕಗೀತೆ.

#tellkamalakar@gmail.com