”ಹಿಂಸೋಡಿಯ ಕಗ್ಗತ್ತಲಲ್ಲಿ ಹೆಗಡೆಯವರ ಮನೆಯೂ ಧ್ಯಾನದಲ್ಲಿ ಕುಳಿತಿತ್ತು. ಹಂಚಿನ ಮನೆಯ ಮುಚ್ಚಿದ ಕಿಟಕಿಗಳ ಎಡೆಯಿಂದ ಹೊಮ್ಮುವ ಬೆಳಕು ತೋಟ ಮರ ಗಿಡ ಗದ್ದೆಗಳ ನಡುವೆ ಮಿಣುಕುಹುಳದಂತೆ ಸುತ್ತಮುತ್ತಲಿಗೆ ಬೆಳಕು ನೀಡುತ್ತಿತ್ತು. ಮಳೆಗಾಲದ ರಾತ್ರಿಗಳ ಎದೆಬಡಿತದಂತಹ ಜೀರುಂಡೆಗಳ ಸದ್ದು, ಕಪ್ಪೆಗಳ ಗೊಟರ್ವಟರ್ ಸದ್ದುಗಳು ಇಡೀ ಊರನ್ನು ಆವರಿಸಿದ್ದವು; ಕತ್ತಲೆಗೂ ಧ್ವನಿ, ಭಾಷೆ ನೀಡಿದ್ದವು, ಸಂಭಾಷಣೆ ಕಲಿಸಿದ್ದವು; ಬಿಡದೆ ಸುರಿಯುವ ಮಳೆಸಂಗೀತಕ್ಕೆ ಶ್ರುತಿ ತಾಳ ಒದಗಿಸಿದ್ದವು”
ಯೋಗೀಂದ್ರ ಮರವಂತೆ ಬರೆದ ಮಳೆ ಲಹರಿ.

ಪ್ರತಿ ವರ್ಷ ಬಂದುಹೋಗುವ ದೊಡ್ಡ ಹಬ್ಬವೊಂದು ಈಗಷ್ಟೇ ಕಳೆದು ಹೋಗಿದೆ. ಅಂದರೆ ಈ ವರ್ಷದ ಮಳೆಗಾಲ ಮುಗಿದುಹೋಗಿದೆ. ಈಗ ಕಣ್ಣೆದುರು ಉಳಿದಿರುವುದು ಮಳೆಗಾಲದ ಮಣ್ಣಿನವಾಸನೆಯ , ಹಚ್ಚ ಹಸಿರಿನ ಭತ್ತದ ತೆನೆಗಳ, ದಟ್ಟಮೋಡದ ನೆರಳುಗಳ, ಕೆಂಪು ನೀರು ತುಂಬಿದ ಓಣಿಗಳ, ಜೀವ ತುಂಬಿ ಕುಣಿದ ತೋಡುಗಳ, ಮಳೆ ನೆಲಕ್ಕೆ ಅಪ್ಪಳಿಸುವ ಸದ್ದುಗಳ ಮಾಸಿ ಮಸುಕಾದ ಚಿತ್ರಗಳು ಮಾತ್ರ. ಹಬ್ಬ ಮುಗಿದರೂ ಹಬ್ಬದ ದಿನದ ತಿಂಡಿ ಕಲರವ ಬಣ್ಣ ಓಡಾಟ ವಾಸನೆ ಮೈಮನವನ್ನು ಹಲವು ದಿನ ಕಾಡುವಂತೆ ಇನ್ನೂ ಮಳೆಯ ಗುಂಗಿನಲ್ಲೇ ನಾನಿದ್ದೇನೆ. ಇಲ್ಲೇ ಎಲ್ಲೋ ಚಿಟಪಟ ಮಳೆ ಬಿದ್ದಂತಾಗಿ ತಿರುತಿರುಗಿ ನೋಡುತ್ತಿದ್ದೇನೆ, ನನ್ನ ಹಿಂದೆಯೇ ಮಳೆ ಹಿಂಬಾಲಿಸಿ ಹೆಜ್ಜೆ ಸದ್ದು ಮಾಡಿದಂತಾಗಿ ಇನ್ನೇನು ನನ್ನನ್ನು ತೋಯಿಸಿಬಿಟ್ಟಿತು ಎಂದು ಕಾದಿದ್ದೇನೆ.

ಈ ಜಗತ್ತಲ್ಲಿರುವ ಮಳೆಹುಚ್ಚಿನ ಜೀವಜಂತುಗಳಲ್ಲಿ, ಮಳೆ ಬಂತೆಂದು ಖುಷಿಯಲ್ಲಿ ರೆಕ್ಕೆ ಬಡಿಯುವ ಕ್ರಿಮಿ ಕೀಟಗಳಲ್ಲಿ, ಹಾಡುವ ಹಕ್ಕಿಪಿಕ್ಕಿಗಳಲ್ಲಿ, ಗುಂಯ್ ಗುಟ್ಟುವ ಜೀರುಂಡೆಗಳಲ್ಲಿ, ತರಗುಟ್ಟುವ ಪತಂಗಗಳಲ್ಲಿ ನಾನೂ ಒಬ್ಬ. ಆ ಈ “ನಮಗೆಲ್ಲ” ಮಳೆಯೆಂದರೆ ಕನಸು ಹರಟೆ ಸಾಹಿತ್ಯಸಲ್ಲಾಪ ಮೌನ ನಗೆ ರೋದನ ಎಲ್ಲವೂ ಹೌದು. ಈ ವರ್ಷ ಸುರಿದ ಮಳೆಕಾವ್ಯದಲ್ಲಿ ಸೌಂದರ್ಯ ರಮಣೀಯತೆಗಳ ಜೊತೆಗೆ ಕೊಡಗು ಕೇರಳಗಳ ಭಯ-ವಿಷಾದಗಳೂ ಸೇರಿಕೊಂಡಿವೆ. ಮಳೆಯೊಂದಕ್ಕೆ ಮರುಳಾಗಬೇಕೋ ಬೆದರಬೇಕೋ ಎನ್ನುವ ಸಂಶಯ ಹುಟ್ಟಿಸಿದ ವರ್ಷಋತು ಇದೀಗ ಸಮಾಪ್ತಗೊಂಡಿದೆ. ಇಂತಹ ಮಳೆಗಾಲದ ಕೊನೆಕೊನೆಯ ದಿನಗಳಲ್ಲಿ ನಾನೂ ಮಳೆಬೀಳುವ ಹೆಸರಿರುವ ಊರುಗಳಲ್ಲಿ ಸುತ್ತಿ ಬಂದೆ. ಮಳೆಗಾಲದಲ್ಲಿ ಮಳೆನೋಡುವುದರಷ್ಟು ಆಪ್ಯಾಯಮಾನ ಕೆಲಸವೇ ಇಲ್ಲವೆಂದು ತೀವ್ರವಾಗಿ ನಂಬುವ ಪಂಥದ ನನಗೆ ಮಳೆ ಎಷ್ಟು ನೋಡಿದರೂ ಇನ್ನೂ ನೋಡಬೇಕೆನಿಸುತ್ತದೆ. ಎಷ್ಟು ಮಿಲಿಮೀಟರ್ ಎಷ್ಟು ಇಂಚು ಮಳೆ ಸುರಿಯುವ ಊರೇ ಇದ್ದರೂ ಅಲ್ಲಿನ ಅನುಭವ ಮಳೆಯನ್ನು ಮಲೆನಾಡಿನಲ್ಲಿ ನೋಡಿದಂತಲ್ಲವಲ್ಲವೇನೋ! ಹೀಗಂತ ಒಂದು ಸಂಶಯ ನನ್ನನ್ನು ಕಾಡಿದ್ದಕ್ಕೆ ಈ ವರ್ಷದ ಮಳೆಗಾಲದ ಒಂದು ದಿನ ಒಂದು ರಾತ್ರಿಯನ್ನು ಮಲೆನಾಡಿನಲ್ಲಿಯೇ ಕಳೆದು ಬಂದೆ.

ಆಗಷ್ಟ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಮರವಂತೆಯನ್ನು ನೋಡಿ ಬರುವ ಎಂದು ಹೋದವನು, ಮಳೆ ಎನ್ನುವುದು ಒಂದು ನೋಡುವ ಕೇಳುವ ವಿಷಯ ಎಂದು ನಂಬುವ ಗೆಳೆಯನ ಜೊತೆ ಕೊಲ್ಲೂರು ಘಾಟಿ ಹತ್ತಿ ಮಲೆನಾಡ ಕಡೆ ಹೋಗಿದ್ದೆ. ಸರಿಯಾದ ಮಳೆಗಾಲವನ್ನು ನೋಡದೆ ವರ್ಷಾನುಗಟ್ಟಲೆ ಆದ್ದರಿಂದ ಎಂದೋ ಎಲ್ಲೋ ಕಂಡ ಅನುಭವವೊಂದು ಇಲ್ಲೇ ಕಣ್ಣೆದುರೇ ಕುಣಿದಂತಾಗಿ ಹುಚ್ಚನಂತೆ ಫೋಟೋ ತೆಗೆದಿದ್ದೆ. ಮಳೆಗಾಲದಲ್ಲಿ “ಜೋರು ಮಳೆ “, “ಬಿಗಿ ಮಳೆ” “ಭಯಂಕರ ಮಳೆ” ಎಂದೆಲ್ಲ ಕರೆಸಿಕೊಳ್ಳುವ ಊರಲ್ಲೇ ಹುಟ್ಟಿ ಬೆಳೆದ ನಾನು ನದಿ, ಸಮುದ್ರ, ಮಳೆ ಎಲ್ಲದರಿಂದಲೂ ದೂರದ ಊರಿನ ಪ್ರವಾಸಿಗರು ನಮ್ಮೂರು ಮರವಂತೆಗೆ ಬಂದರೆ ಹೇಗೆ ಕ್ಷಣ ಕ್ಷಣಕ್ಕೆ ಕ್ಯಾಮೆರಾ ತೆಗೆದು ಚಿತ್ರ ಸೆರೆಹಿಡಿಯುತ್ತಾರೋ ನಾನೂ ಕೂಡ ಇಲ್ಲಿ ಬಂದಿಳಿದ ಅಲೆಮಾರಿಯಂತೆ ಮಳೆಯ ಶಬ್ದ ಚಿತ್ರಗಳನ್ನು ದಾಖಲಿಸಲು ಆರಂಭಿಸಿದೆ. ಮತ್ತೆ ಈ ಕಾಲದ ಹೊಚ್ಚ ಹೊಸ ಮಳೆ, ಎಲ್ಲೋ ಇರುವ ಆದರೆ ಒಂದೆರಡು ವಾರಗಳ ಮಟ್ಟಿಗೆ ಇಲ್ಲಿ ಹೀಗೆ ಪ್ರತ್ಯಕ್ಷನಾದ ನನ್ನ ಕುತೂಹಲ ಕಾತರಗಳಿಗೆ ಲಕ್ಷ್ಯ ಕೊಡದೆ ತನ್ನಷ್ಟಕ್ಕೆ ಸುರಿಯುತ್ತಿತ್ತು.

ಮಳೆಗಾಲದಲ್ಲಿ ಮಳೆನೋಡುವುದರಷ್ಟು ಆಪ್ಯಾಯಮಾನ ಕೆಲಸವೇ ಇಲ್ಲವೆಂದು ತೀವ್ರವಾಗಿ ನಂಬುವ ಪಂಥದ ನನಗೆ ಮಳೆ ಎಷ್ಟು ನೋಡಿದರೂ ಇನ್ನೂ ನೋಡಬೇಕೆನಿಸುತ್ತದೆ. ಎಷ್ಟು ಮಿಲಿಮೀಟರ್ ಎಷ್ಟು ಇಂಚು ಮಳೆ ಸುರಿಯುವ ಊರೇ ಇದ್ದರೂ ಅಲ್ಲಿನ ಅನುಭವ ಮಳೆಯನ್ನು ಮಲೆನಾಡಿನಲ್ಲಿ ನೋಡಿದಂತಲ್ಲವಲ್ಲವೇನೋ!

ಪ್ರಯಾಣದ ದಾರಿಯುದ್ದಕ್ಕೂ, ಕೊಲ್ಲೂರು ಘಾಟಿಯ ಪ್ರತಿ ತಿರುವಿನಲ್ಲೂ, ರಸ್ತೆಯ ಎರಡು ಕಡೆಗಳ ದಟ್ಟ ಮರಗಳ ನಡುವಿನ ಚಡಿಯಲ್ಲೂ ಕೊಡಚಾದ್ರಿಯ, ಪಶ್ಚಿಮ ಘಟ್ಟದ ಕಿರುನೋಟ ಸಿಗುತ್ತಿತ್ತು. ಕೊಲ್ಲೂರು ಘಾಟಿ ಹತ್ತಿ ಯಾವ ಕಡೆ ಹೋಗುವುದಿದ್ದರೂ ನಾಗೋಡಿ ಕ್ರಾಸ್ ಅಲ್ಲಿ ಚಹಾ ಕುಡಿಯದೆ ಹೋಗಬಾರದು ಎನ್ನುವ ಶಾಸ್ತ್ರ ಇದೆ ಎಂದು ಗೆಳೆಯ ಹೇಳಿದ್ದಕ್ಕೆ ಕಾರು ನಿಲ್ಲಿಸಿ ಖಡಕ್ ಚಹಾದ ಎದುರು ಮೆದುವಾದೆ. ನಾಗೋಡಿ ಕ್ರಾಸ್ ನ ಅಂಗಡಿಗಳಲ್ಲಿ ಲಿಂಬೆ ಶರಬತ್ತು, ಚಹಾ ಜೊತೆಗೆ ಕಡಲೆ ಬೀಜ, ಖಾರಸೇವ್ ತಿನ್ನಲಿಕ್ಕೆ ಕಾರುಗಳ ಜೊತೆಗೆ ಮನುಷ್ಯರೂ ನಿಲ್ಲುತ್ತಿದ್ದರು. ಘಟ್ಟ ಹತ್ತಿ ಬಂದವರು ಇನ್ನೇನು ಘಟ್ಟ ಇಳಿಯ ತೊಡಗುವವರು ಎಲ್ಲರನ್ನೂ ನಾಗೋಡಿ ಕ್ರಾಸ್ ನ ಅಂಗಡಿಗಳು ಅಷ್ಟೇ ಉಲ್ಲಾಸದಲ್ಲಿ ಮಾತಾಡಿಸುತ್ತಿದ್ದವು. ನಾವು ಹೊರಟದ್ದು ಗೆಳೆಯನ ಚಿಕ್ಕಪ್ಪನ ಮನೆಗೆ; ಮಲೆನಾಡ ಮಡಿಲಿನ ಹಿಂಸೋಡಿ ಎನ್ನುವ ಊರಿಗೆ ಜಾಗಕ್ಕೆ ಹಳ್ಳಿಗೆ. ಕರಾರುವಕ್ಕಾಗಿ ಹೇಳುದಿದ್ರೆ ಹಿಂಸೋಡಿಯ ಹೆಗಡೆಯವರ ಮನೆಗೆ.

ದಾರಿಯುದ್ದಕ್ಕೂ ಕಂಡದ್ದು ತುಂಬಿದ ಹಳ್ಳ-ಕೊಳಗಳು. ಆಗಷ್ಟೇ ಬಂದು ನಿಂತ ಮಳೆಗೋ ಮತ್ತೆ ಶುರುವಾಗಿ ಎಂದಿಗೂ ಬಿಡದೇನೋ ಅನಿಸುವ ಮಳೆಗೋ ಕದಡಿ ಕೆಂಪಾದ ನೀರಿನ ಕೆರೆಗಳು. ಸುತ್ತಲಿನ ಗುಡ್ಡ ಬೆಟ್ಟ ಹಸುರಿನ ಕೋಟೆಗಳೆಲ್ಲ ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತಾಡುತ್ತಿದ್ದವು. ಇಂತಹ ಒಂದು ಮಳೆಕಾಲದಲ್ಲಿ ಬಿಸಿಬಿಸಿ ಖಾರ ಖಾರ ತಿನ್ನಬೇಕು, ಆಗಷ್ಟೇ ಬೆಂದು ಹೊಗೆ ಸೂಸುವ ಅನ್ನಕ್ಕೆ ಗಂಧದ ಎಲೆಯ ಚಟ್ನಿ ಕಲಸಿ ತಿನ್ನುವ ಮಜಾ ತೋರಿಸುತ್ತೇನೆ ನೋಡು ಎಂದ ಗೆಳೆಯ. ಓಡುತ್ತಿರುವ ಕಾರಿನಿಂದಲೇ ತಲೆ ಹೊರಗೆ ಹಾಕಿಕೊಂಡು ಗಂಧದ ಗಿಡ ಕಾಣಿಸುತ್ತಿದೆಯೇ ಎಂದು ಗೆಳೆಯ ಹುಡುಕಲಾರಂಭಿಸಿದ. ಗಂಧದ ಗಿಡವೇ ನನ್ನೆದುರು ಬಂದು ಇದೋ ತಾನು ಇಂತಹ ಗಿಡ ಎಂದು ಪರಿಚಯ ಹೇಳಿಕೊಂಡರೂ ಹಿಂದೆ ಮುಂದೆ ನೋಡುವ ಅಜ್ಞಾನಿ ನಾನಾದ್ದರಿಂದ ಗಂಧದ ಗಿಡವನ್ನು ಹುಡುಕುವ ಜವಾಬ್ದಾರಿ ಸಂಪೂರ್ಣವಾಗಿ ನನ್ನ ಗೆಳೆಯನ ಮೇಲೆಯೇ ಇತ್ತು. ಒಂದು ಕಡೆ ಕಾರು ನಿಲ್ಲಿಸಿ ಸಣ್ಣ ಗುಡ್ಡ ಹತ್ತಿ ಅಲ್ಲಿ ಗಂಧದ ಎಳೆಯ ಎಲೆಗಳನ್ನು ಕೊಯ್ದ, ಇದನ್ನು ಹೆಗಡೆಯವರ ಹೆಂಡತಿಗೆ ಕೊಟ್ಟರೆ ಒಂದು ತಾಸಿನಲ್ಲಿ ರುಚಿಯಾದ ಚಟ್ನಿ ತಯಾರಾಗುತ್ತದೆಂದು ತನ್ನ ಅಪಾರ ಅನುಭವವನ್ನು ಹಂಚಿಕೊಂಡ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ತಯಾರಾಗುವ ತಿಂಡಿ ತಿನಿಸು ಗೊಜ್ಜು ಅಡುಗೆಗಳ ಪಟ್ಟಿಯನ್ನು ನನ್ನ ಕಣ್ಣೆದುರು ಬಿಡಿಸಿದ. ಗಂಧದ ಎಲೆಯ ಬೇಟೆ ಮುಗಿಸಿ ವೀರರಂತೆ ನಾವು ಪ್ರಯಾಣ ಮುಂದುವರಿಸಿದೆವು. ಸಂಪೆಕಟ್ಟೆ, ಬ್ಯಾಕೋಡು, ನಗರ, ಮರಕುಟಿಗ, ಚದರವಳ್ಳಿ ಹೀಗೆ ಮಲೆನಾಡಿನ ಊರುಗಳಲ್ಲಿರುವ ತನ್ನ ಸಂಬಂಧಿಕರ ಪರಿಚಯ ನೀಡುತ್ತಾ ಸಂಜೆಕತ್ತಲಲ್ಲಿ ಹಿಂಸೋಡಿ ತಲುಪಿದೆವು.

ಹಿಂಸೋಡಿಯ ಕಗ್ಗತ್ತಲಲ್ಲಿ ಹೆಗಡೆಯವರ ಮನೆಯೂ ಧ್ಯಾನದಲ್ಲಿ ಕುಳಿತಿತ್ತು. ಹಂಚಿನ ಮನೆಯ ಮುಚ್ಚಿದ ಕಿಟಕಿಗಳ ಎಡೆಯಿಂದ ಹೊಮ್ಮುವ ಬೆಳಕು ತೋಟ ಮರ ಗಿಡ ಗದ್ದೆಗಳ ನಡುವೆ ಮಿಣುಕುಹುಳದಂತೆ ಸುತ್ತಮುತ್ತಲಿಗೆ ಬೆಳಕು ನೀಡುತ್ತಿತ್ತು. ಮಳೆಗಾಲದ ರಾತ್ರಿಗಳ ಎದೆಬಡಿತದಂತಹ ಜೀರುಂಡೆಗಳ ಸದ್ದು, ಕಪ್ಪೆಗಳ ಗೊಟರ್ವಟರ್ ಸದ್ದುಗಳು ಇಡೀ ಊರನ್ನು ಆವರಿಸಿದ್ದವು; ಕತ್ತಲೆಗೂ ಧ್ವನಿ, ಭಾಷೆ ನೀಡಿದ್ದವು, ಸಂಭಾಷಣೆ ಕಲಿಸಿದ್ದವು; ಬಿಡದೆ ಸುರಿಯುವ ಮಳೆಸಂಗೀತಕ್ಕೆ ಶ್ರುತಿ ತಾಳ ಒದಗಿಸಿದ್ದವು. ವರ್ಷದ ಹೆಚ್ಚಿನ ದಿನಗಳಲ್ಲಿ ಚಳಿ ಇರುವ ಹಿಂಸೋಡಿಯ ಮನೆಯಲ್ಲಿ ಪ್ರತಿದಿನದ ೨೪ ಗಂಟೆಗಳೂ ಬಿಸಿನೀರು ಕಾಯಿಸುವುದು, ಚಳಿ ಹೆಚ್ಚಾದರೆ ಒಲೆ ಮುಂದೆ ಕುಕ್ಕರ ಕಾಲಿನಲ್ಲಿ ಕುಳಿತು ಚಳಿ ಓಡಿಸುವುದು ಪರಮ ಉಪಾಯ ಎಂದೂ ತಿಳಿದೆವು. ಬಿಸಿನೀರಲ್ಲಿ ಕೈಕಾಲು ಬೆಚ್ಚಗೆ ಮಾಡಿಕೊಂಡು ಊಟಕ್ಕೆ ಕುಳಿತೆವು. ಕಾಡುಕೆಸದ ಪತ್ರೊಡೆ, ಗಂಧದ ಎಲೆಯ ಚಟ್ನಿ, ಅಪ್ಪೆ ಮಿಡಿ ಉಪ್ಪಿನಕಾಯಿ ಯಾವ ದೇಶದ ಊರಿನ ಊಟಕ್ಕೂ ಲೇವಡಿ ಮಾಡುವಂತಿತ್ತು. ಊಟದ ನಂತರ ಹಳ್ಳಿಯ ಹತ್ತೋ ಹನ್ನೆರಡೋ ಮನೆಗಳ ಗಂಡಸರು ಒಂದು ಮನೆಯಲ್ಲಿ ಕೂಡಿ ಇಸ್ಪೀಟು ವಾಲೆ ಕಲಿಸುವುದು ಆ ಊರಿನ ಸಂಪ್ರದಾಯಗಳಲ್ಲೊಂದು.

ಪ್ರಯಾಣದ ದಾರಿಯುದ್ದಕ್ಕೂ, ಕೊಲ್ಲೂರು ಘಾಟಿಯ ಪ್ರತಿ ತಿರುವಿನಲ್ಲೂ, ರಸ್ತೆಯ ಎರಡು ಕಡೆಗಳ ದಟ್ಟ ಮರಗಳ ನಡುವಿನ ಚಡಿಯಲ್ಲೂ ಕೊಡಚಾದ್ರಿಯ, ಪಶ್ಚಿಮ ಘಟ್ಟದ ಕಿರುನೋಟ ಸಿಗುತ್ತಿತ್ತು. ಕೊಲ್ಲೂರು ಘಾಟಿ ಹತ್ತಿ ಯಾವ ಕಡೆ ಹೋಗುವುದಿದ್ದರೂ ನಾಗೋಡಿ ಕ್ರಾಸ್ ಅಲ್ಲಿ ಚಹಾ ಕುಡಿಯದೆ ಹೋಗಬಾರದು ಎನ್ನುವ ಶಾಸ್ತ್ರ ಇದೆ ಎಂದು ಗೆಳೆಯ ಹೇಳಿದ್ದಕ್ಕೆ ಕಾರು ನಿಲ್ಲಿಸಿ ಖಡಕ್ ಚಹಾದ ಎದುರು ಮೆದುವಾದೆ.

ಅಂದು ಕೂಡ ಕೇರಿಯ ನಾಲ್ಕೈದು ಮನೆಯ ಗಂಡಸರು ಒಟ್ಟಾಗಿದ್ದರು. ನನ್ನನ್ನೂ ಗೆಳೆಯನನ್ನೂ ಕೂಡಿಸಿ ವಾಲೆ ಹಾಕಿದರು. ಕಳೆದ ತಿಂಗಳ ಭಯಂಕರ ಮಳೆಯಂದು ಇಡೀ ರಾತ್ರಿ ಇಸ್ಪೀಟು ಆಡಿದ್ದು, ಗೆದ್ದದ್ದು, ಸೋತದ್ದು, ಜಗಳಾಡಿದ್ದು, ಪಾಯಿಂಟ್ ಬರೆದದ್ದು ಎಲ್ಲ ಡೈರಿ ತೆಗೆದು ತೋರಿಸಿದರು. ತಣ್ಣಗೆ ಕೊರೆಯುವ ನೆಲದ ಮೇಲಿನ ಕಂಬಳಿಹಾಸಿನ ಮೇಲೆ ಕಲಸಿ ಎಸೆದ ಇಸ್ಪೀಟು ವಾಲೆಗಳ ರಾಜ ರಾಣಿ ಗುಲಾಮರು ಎಕ್ಕ ಗಳು ಅಂದು ಕೂಡ ಜೀವ ಪಡೆಡಿದ್ದವು, ಕಥೆ ಹೇಳುತ್ತಿದ್ದವು. ಬಹುಶಃ ಅದೊಂದು ದಿನ ಅತಿಥಿಗಳನ್ನು ಸೇರಿಸಿಕೊಂಡ ಮುಜಗರಕ್ಕೊ ಏನೋ ಯಾವಾಗಲೂ ಪಾವಣೆ ಇಟ್ಟು ಆಡುವವರು ಅಂದು ಏನೂ ಪಣಕ್ಕೆ ಇಡದೆ ಆಡಿದರು. ಆಟದುದ್ದಕ್ಕೂ ಹೆಗಡೆಯವರು ಅವರ ಕೇರಿಯ ಸ್ನೇಹಿತರು ಈ ವರ್ಷದ ಮಳೆಯ ಆರ್ಭಟ ತುಂಬಿ ಹರಿದ ನದಿ ಹಳ್ಳಗಳ ಕಥೆ, ಎಷ್ಟು ವರ್ಷಗಳ ನಂತರ ಸುರಿದ “ಜೋರು ಮಳೆ”, ಅಡಿಕೆ ಮರಕ್ಕೆ ಬೀಳುವ ಕೊಳೆ ಹುಳಗಳ ಬಗ್ಗೆ ಹೇಳಿದರು. ಕಾಡುಹಂದಿಗಳು ತೋಟಕ್ಕೆ ಲಗ್ಗೆ ಇಡುವುದು, ಕಾಡುಕೋಣ ದಾರಿಯಲ್ಲಿ ಸಿಗುವುದು, ಮಂಗಗಳು ಗುಂಪಿನಲ್ಲಿ ತಂಟೆ ಮಾಡುವುದು, ಮತ್ತೆ ಹಿಂಸೋಡಿಯ ಆಸುಪಾಸಿಗೆ ಯಾವ ಪ್ರಾಣಿಯಿಂದ ಆಪತ್ತು ಬಂದರೂ ಪಕ್ಕದ ಕೇರಿಯ ಉಮೇಶ ಕೋವಿ ಹೆಗಲಿಗೇರಿಸಿ ಎಷ್ಟು ರಾತ್ರಿಯೇ ಆಗಲಿ ಒಂಟಿಯಾಗಿಯೇ ಹೋಗಿ ಬೇಟೆ ಆಡಿ ಬರುವುದನ್ನು ರೋಚಕವಾಗಿ ವರ್ಣಿಸಿದರು. ಕಾಡೊಳಗಿನ ಎಂತಹ ಹೆಜ್ಜೇನಿನ ಗೂಡಿಗೂ ಕೈಯಿಕ್ಕಿ ಬಾಟಲಿ ತುಂಬಾ ಜೇನು ತರುವ ಸಾಹಸವನ್ನು ವಿವರಿಸಿದರು. ತಮ್ಮೂರ ಹತ್ತಿರದ ಶರಾವತಿಯ ಹಿನ್ನೀರು ಕಳೆದ ಹತ್ತೋ ಹನ್ನೆರಡೋ ವರ್ಷಗಳಲ್ಲಿ ಬರದಷ್ಟು ಮುಂದೆ ಬಂದಿದ್ದನ್ನು ಬೆಳಿಗ್ಗೆ ನೋಡಲೇಬೇಕು ಎಂದೂ ತಿಳಿಸಿದರು. ಕಥೆ ಬೆಳೆಯುತ್ತಿತ್ತು, ರಾತ್ರಿ ಕಳೆಯುತ್ತಿತ್ತು. ನಡುರಾತ್ರಿಯ ಆಸುಪಾಸಿಗೆ ಇಸ್ಪೀಟು ಪಟ್ಟುಗಳನ್ನು ಬದಿಗೆ ಇಟ್ಟು, ಪಟ್ಟಿನೊಳಗಿನ ರಾಜ ರಾಣಿಯರನ್ನು ಮಲಗಿಸಿ ನಾವೂ ಮಲಗಿದೆವು.

ಮಾತುಗಳ ರಾತ್ರಿ ಕಳೆದು ಮೌನದ ಬೆಳಗು ಆಯಿತು. ಬೆಳಿಗ್ಗೆ ಏಳುವಾಗ ಇಡೀ ರಾತ್ರಿ ಸದ್ದು ಮಾಡಿ ಸುದ್ದಿ ಹೇಳಿ ಹೇಳಿ ಸುಸ್ತಾದ ಕಪ್ಪೆ ಜೀರುಂಡೆಗಳು ನಿಶ್ಯಬ್ದವಾಗಿದ್ದವು. ಮನೆಯ ದನಕರುಗಳು ಕೊಟ್ಟಿಗೆಯ ಬಾಗಿಲು ತೆಗೆದೊಡನೆ ಒಂದರ ಹಿಂದೆ ಒಂದು ಮೇಯಲು ಹೊರಟವು. ಅದೇ ಕೇರಿಯ ಇನ್ನೊಂದು ತುದಿಯ ಮನೆಯಲ್ಲಿರುವ ಹೆಗಡೆಯವರ ತೊಂಭತ್ತರ ಹರೆಯದ ಅಪ್ಪ ನಡೆದು ಹೋಗುವ ದನಗಳ ಗುರುತು ಹಿಡಿದು ಹೆಸರು ಕರೆದು ಮಾತಾಡಿಸಿದರು. ಈ ವರ್ಷದ ಮಳೆಯಿಂದ ತನಗೆ ಸರಿಯಾಗಿ ನಡೆದಾಡುವುದೂ ಕಷ್ಟ ಆಗಿದೆ ಈ ದನಗಳಾದರೂ ದಿನವೂ ಅಷ್ಟು ದೂರ ನಡೆದು ಗುಡ್ಡ ಹತ್ತಿ ಹೇಗೆ ಮೇಯ್ದು ಬರುತ್ತವೋ ಎಂದರು. ಅಜ್ಜನ ಬಳಿ ಹುದುಗಿರುವ ಮಲೆನಾಡಿನ ಕಾಡಿನಷ್ಟು ವಿಶಾಲ ಅನುಭವದಲ್ಲಿ ಉದುರಿ ಬಿದ್ದ ಒಂದೋ ಎರಡೋ ಒಣಎಲೆಗಳಂತಹ ಕಿರುಕತೆಗಳನ್ನು ನಾವು ಹೆಕ್ಕಿಕೊಂಡೆವು. ಹಿಂದಿನ ರಾತ್ರಿ ಹೆಗಡೆಯವರು ಅಪ್ಪಣೆ ಮಾಡಿಸಿದ ಶರಾವತಿಯ ಹಿನ್ನೀರಿನ ನೆನಪಾಗಿ ಹೊಳೆಬಾಗ್ಲು ಕಡೆ ಹೊರಟೆವು. ಹೊಳೆ ಇರುವ ಊರಲ್ಲೆಲ್ಲ ಹೊಳೆಬಾಗ್ಲು ಎನ್ನುವ ಜಾಗ ಊರು ಇರುತ್ತದೇನೋ. ಈ ಹೊಳೆಬಾಗ್ಲು ಸಿಗಂಧೂರಿನ ಸಮೀಪದಲ್ಲಿ ಶರಾವತಿಯನ್ನು ದಾಟುವ ಬಾರ್ಜ್ ಗಳ ನಿಲ್ದಾಣವೂ ಹೌದು. ಅಗಾಧ ನೀರಿನ ರಾಶಿಯಾದ ಶರಾವತಿಗೆ ಇಷ್ಟು ಸಣ್ಣ ಬಾಗಿಲೇ ಅಥವಾ ಇಷ್ಟುದ್ದ ಅಷ್ಟಗಲ ಮತ್ತೆಷ್ಟೋ ಆಳದ ನದಿಗೆ ಪ್ರತಿ ಊರಲ್ಲೂ ಬಾಗಿಲೇ? ಮಲೆನಾಡಿನ ಕೆಲವು ಊರುಗಳಿಗೆ ರಸ್ತೆಯಲ್ಲಿ ಹೋಗುವುದಕ್ಕಿಂತ ಶರಾವತಿಯನ್ನು ದಾಟಿ ಹೋಗುವುದೇ ಸುಲಭ. ಹಾಗೆ ಹೋಗುವವರು ಕಾರು ಬೈಕು ಸಹಿತವಾಗಿ ಬಾರ್ಜ್ ಹತ್ತಿ ಸಾಗರದ ಕಡೆಗೆ ಇಲ್ಲಿಂದ ಹೋಗಬಹುದು ಅಥವಾ ಸಾಗರದ ಕಡೆಯವರು ತುಮರಿ, ನಗರ, ಕೊಲ್ಲೂರು ಕಡೆಗೆ ಬರಬಹುದು. ಮಳೆ ಹೆಚ್ಚಾದ ಕಾರಣಕ್ಕೆ ಹಿಂದಿನಷ್ಟು ಜನರು ಅಂದು ಪ್ರಯಾಣಿಸುತ್ತಿಲ್ಲ ಎಂದು ಹೊಳೆಬಾಗ್ಲಿನಲ್ಲಿ ಚುರುಮುರಿ ಅಂಗಡಿ ಹಾಕಿಕೊಂಡಿರುವಾಕೆ ತಿಳಿಸಿದರು.

ಈ ಮಳೆಗಾಲದಲ್ಲಿ ಹಿನ್ನೀರು ಅರ್ಧಕಿಲೋಮೀಟರ್ ಗಿಂತ ಹೆಚ್ಚು ಒಳಗೆ ಬಂದಿದೆ, ದಿನವೂ ತನ್ನ ಅಂಗಡಿಯನ್ನು ಹಿಂದೆ ಹಿಂದೆ ಸರಿಸಿ ಸಾಕಾಗಿದೆ, ಅಂಗಡಿಯ ಮೇಲಿನ ಟಾರ್ಪಲ್ ಮುಚ್ಚಿಗೆಯೂ ಈ ಗಾಳಿಗೆ ಹಾರಿಹೋಗುತ್ತಿದೆ ಎಂದಳು. ಚುರುಮುರಿ ಮಾಡಲು ತಂದ ಮಂಡಕ್ಕಿ, ಸೌತೆಕಾಯಿ, ಮೆಣಸು, ಲಿಂಬೆಗಳು ಇವಳ ಎಲ್ಲ ಮಾತುಗಳಿಗೂ ಹೂಂ ಹಾಕುತಿದ್ದವು. ಅಲ್ಲೇ ಹತ್ತಿರದಲ್ಲಿ ಹರಿಗೋಲಿನಲ್ಲಿ ಮೀನು ಹಿಡಿಯಲು ತಯಾರಿ ಮಾತಾಡುತ್ತಿದ್ದ ತಮಿಳು ಮಾತಾಡುವ ಮೂವರು ಈ ವರ್ಷ ಮಳೆ ಹೆಚ್ಚಾಗಿ ಹಿನ್ನೀರು ತುಂಬಿಬಂದು ಬಲೆಗೆ ಸಿಕ್ಕ ಮೀನುಗಳು ಸಂಖ್ಯೆ ಹೆಚ್ಚಾದ್ದರ ಬಗ್ಗೆ ಮಾತಾಡುತ್ತಿದ್ದರು. ಆಗಷ್ಟೇ ಮುಗಿಸಿ ತಂದ ಮೀನಿನ ಬೇಟೆಯನ್ನು ನೆಲದ ಮೇಲೆ ಹರಡಿದರು. ಚುರುಮುರಿ ಅಂಗಡಿಯ ಮೇಜಿನ ಮೇಲೆ ಶಿಸ್ತಿನಲ್ಲಿ ಸಾಲಾಗಿ ಕುಳಿತಿದ್ದ ಮಂಡಕ್ಕಿ, ಸೌತೇಕಾಯಿಗಳು ಲಿಂಬೆ ಹಣ್ಣುಗಳು, ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೀನುಗಳೂ ಈ ವರ್ಷದ ಮಳೆಗಾಲದ ಬಗ್ಗೆ ಕಣ್ಸನ್ನೆಯಲ್ಲೇ ಮಾತಾಡುತ್ತಿದ್ದವು. ಕೆಲವರಿಗೆ ಮಳೆ ಹೆಚ್ಚಿದ್ದರ ಚಿಂತೆ, ಮತ್ತೆ ಕೆಲವರಿಗೆ ಮಳೆ ಬಿಟ್ಟರೆ ಸಂಕಷ್ಟವಂತೆ. ಹೊಳೆಬಾಗಿಲ ಒಳಗೂ ಹೊರಗೂ ಮುಂದುವರಿದಿವೆ ಮಳೆಗಾಲದ ಮಾತುಗಳು.


ಸಂಭಾಷಣೆಗಳೂ ಮುಂದುವರಿದಿವೆ ನಿಶ್ಯಬ್ದತೆಗಳೂ ಸೇರಿಕೊಂಡಿವೆ. ಮಲೆನಾಡಿನ ಮಳೆಗಾಲವನ್ನು ನೋಡಿ ನಾವೀಗ ಮರಳಿದ್ದೇವೆ. ಮಳೆ ಎಂದರೆ ಬರಿಯ ನೀರಲ್ಲ, ಸುಮ್ಮನೆ ಸುರಿಯುವುದಲ್ಲ, ತಣ್ಣಗೆ ಹರಿಯುವುದಲ್ಲ. ಎಷ್ಟೆಲ್ಲಾ ಕತೆಗಳು ಏನೆಲ್ಲಾ ಸದ್ದುಗಳು ಎಂತೆಂತಹ ಮಾತುಗಳು ಎಷ್ಟೆಲ್ಲಾ ಮೌನಗಳು. ಪ್ರತಿ ವರ್ಷ ಬಂದುಹೋಗುವ ದೊಡ್ಡ ಹಬ್ಬವೊಂದು ಈಗಷ್ಟೇ ಕಳೆದು ಹೋಗಿದೆ.

(ಫೋಟೋಗಳು: ಲೇಖಕರು)