ಇಡೀ ಊರು ಮಂಜ ಹೆಗಡೆರಿಗೆ ಗೌರವ ಕೊಡುತ್ತಿದ್ದರೂ ಕಲಾವತಕ್ಕ ಮಾತ್ರ ಅವರಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ತನಗೆ ಬೇಕಾದಹಾಗೆ ಇರತೊಡಗಿದಳು. ಹಾಗೆ ಮೂರನೇ ಮಗನೂ ಸತ್ತಾಗ ಮಂಜಹೆಗಡೇರು, ಕಲಾವತೀ.. ಎಂದು ಕರೆದರು. ಈ ಸಾವುಗಳೆಲ್ಲ ನಿಲ್ಲೋದ್ಯಾವಾಗ ಕಲಾವತೀ… ಎಂದು ವಿಚಿತ್ರವಾಗಿ ಕೇಳಿದರು. ಅವರನ್ನು ಅಷ್ಟೇ ವಿಚಿತ್ರವಾಗಿ ನೋಡಿದ ಕಲಾವತಿ ಹಾಲಿ… ಹೆಗಡೇರಿಗೊಂದಷ್ಟು ಹೊಗೆಸೊಪ್ಪು ತೊಳಕಬಂದು ಕೊಡು ಎಂದು ಹೇಳಿ ಎದ್ದಳು. ಹಾಲಿ ಮಾತ್ರ ನಿರ್ಲಿಪ್ತವಾಗಿ ಕೊಟ್ಟಿಗೆ ಕೆಲಸಕ್ಕೆ ಹೋದಳು ಏನೂ ಆಗಿಯೇ ಇಲ್ಲವೆಂಬಂತೆ. 
ಪತ್ರಕರ್ತೆ ಭಾರತಿ ಹೆಗಡೆ ಬರೆವ ಸಿದ್ದಾಪುರ ಸೀಮೆಯ ಕತೆಗಳ ಹದಿಮೂರನೆಯ ಕಂತು

 

‘ಹಾಳಾದ ಮಳೆ ಊರನ್ನೇ ತೊಳೆದುಬಿಡ್ತು ಕಾಣಿಸ್ತು …’ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ಶಪಿಸುತ್ತ ಕಲಾವತಕ್ಕ ಹಿತ್ತಲಕಡೆ ಇದ್ದ ಸೊಂಗೆಮನೆಯಲ್ಲಿ ಕಟ್ಟಿಗೆ ರಾಶಿಯಲ್ಲಿರುವ ಕಟ್ಟಿಗೆಯನ್ನು ಎತ್ತಿಡುತ್ತಿದ್ದಳು. ಮಳೆಗಾಲಕ್ಕೆಂದೇ ಒಟ್ಟುಮಾಡಿಟ್ಟಿದ್ದ ಕಟ್ಟಿಗೆ ರಾಶಿಯಮೇಲೆ ನೀರು ಸೋರಿ ಕಟ್ಟಿಗೆ ಒದ್ದೆಯಾಗುತ್ತಿತ್ತು. ಅಡುಗೆಗೆ, ಬಚ್ಚಲ ಒಲೆಗೆ ಯಾವುದಕ್ಕೂ ಒದ್ದೆ ಕಟ್ಟಿಗೆ ಆಗಿಬರದೇ ಮನೆತುಂಬ ಹೊಗೆಯಾಗಿ, ಅತ್ತ ನೀರೂ ಕಾಯದೆ, ಇತ್ತ ಹೊಗೆಯಿಂದ ಕಣ್ಣು, ಮೂಗು ಉರಿಸಿಕೊಳ್ಳುತ್ತಿದ್ದ ಮನೆಯವರೆಲ್ಲರ ಸಿಟ್ಟಿಗೆ ಗುರಿಯಾಗಿದ್ದ ಕಲಾವತಕ್ಕ ಒಂದೇ ಸಮನೆ ಮಳೆಗೆ ಶಾಪಹಾಕುತ್ತಿದ್ದಳು.

ಸೀರೆ ನೆರಿಗೆಯನ್ನು ಮೊಳಕಾಲೆತ್ತರಕ್ಕೆ ಏರಿಸಿ ಸೊಂಟಕ್ಕೆ ಸಿಕ್ಕಿಸಿಕೊಂಡು, ಅಲ್ಲಲ್ಲಿ ಹುಳ, ಹುಪ್ಪಟೆಗಳನ್ನೆಲ್ಲ ತೆಗೆದು, ಹಿಸುಕು, ಚೊರಟೆಯನ್ನೆಲ್ಲ ಬದಿಗೆ ಸರಿಸಿಕೊಂಡು, ಕಟ್ಟಿಗೆಯನ್ನು ಸೇರಿಸಿಡುತ್ತಿದ್ದ ಕಲಾವತಕ್ಕನಿಗೆ ಇದ್ದಕ್ಕಿದ್ದ ಹಾಗೆ ಮಳೆಗಿಂತಲೂ ಜೋರಾಗಿ ಅಳು ಬರತೊಡಗಿತು. ಹೀಗೆಯೇ ಪುಟ್ಟ ಹೆಜ್ಜೆ ಇಟ್ಟು, ಅಮ್ಮನ ಸೆರಗನ್ನೇ ಹಿಡಿದುಕೊಂಡು ತನ್ನೊಡನೆ ತೋಟದಲ್ಲಿ ಹಾಳೆಬಾಗ, ಹೊಂಬಾಳೆಯನ್ನು ಎತ್ತಲು ಸಹಾಯ ಮಾಡುತ್ತ, ಒಂದೊಂದೇ ಕಟ್ಟಿಗೆ ತುಂಡನ್ನು ಎತ್ತಿ ಕೊಟ್ಟಾಗಲೆಲ್ಲ ತಗೊಂಡು ಹೋಗಿ ಕಟ್ಟಿಗೆ ಮನೆಯಲ್ಲಿ ಜೋಡಿಸಿಡುವ ಕಾಯಕದಲ್ಲಿ ತನ್ನ ಕೈಗೆ ಕೈ ಕೊಟ್ಟು ಸಹಾಯ ಮಾಡುತ್ತಿದ್ದ ಮಗ ಮಂಜುನಾಥ ಒಂದು ದಿನ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದವನನ್ನು ನೆನೆದು ಒಂದೇಸಮನೆ ಅಳುಬರತೊಡಗಿತು. ಅಳುತ್ತಲೇ ಕಟ್ಟಿಗೆಯನ್ನು ಎತ್ತಿಎತ್ತಿಹಾಕುತ್ತಿದ್ದ ಕಲಾವತಕ್ಕನನ್ನು ನೋಡಿ ಮತ್ತೊಬ್ಬ ಮಗ ಶ್ರೀಪಾದನಿಗೆ ಅರ್ಥವಾಯಿತು ಈಗ ಅಮ್ಮನನ್ನು ಕಾಡುತ್ತಿದ್ದದ್ದು ಆ ಮಗ ಎಂದು. ಈಗ ಅವಳನ್ನು ಮಾತನಾಡಿಸಿದರೆ ತನ್ನ ಗ್ರಹಚಾರ ನೆಟ್ಟಗಿರುವುದಿಲ್ಲವೆಂದು ಅರಿತು ಅಲ್ಲಿಂದ ಕಾಲ್ಕಿತ್ತ. ಅಳುಬಂದಾಗ ಅವಳು ಅವಳಾಗಿರುವುದಿಲ್ಲ. ಅವತ್ತಿಡೀ ದಿನ ಊಟ, ತಿಂಡಿ ಏನೂ ಮಾಡುವುದಿಲ್ಲ. ಆಗ ಮನೆಯವರಿಗೆಲ್ಲ ಅವಳನ್ನು ಸುಮ್ಮನಾಗಿಸುವುದೇ ಪ್ರಯಾಸದ ಕೆಲಸವಾಗುತ್ತಿತ್ತು.

ಹಾಗೆ ನೋಡಿದರೆ ಕಲಾವತಕ್ಕನಿಗೆ ಅಳುವುದು ಮತ್ತು ಕಳೆದುಕೊಳ್ಳುವುದು ಎರಡೂ ಹೊಸ ವಿಷಯವೇನಾಗಿರಲಿಲ್ಲ. ಇರುವ ಏಳು ಮಕ್ಕಳಲ್ಲಿ ಇಬ್ಬರು ಗಂಡುಮಕ್ಕಳು ನೇಣು ಹಾಕಿಕೊಂಡು ತೀರಿಹೋಗಿದ್ದರು. ಸ್ವತಃ ಅವಳ ಗಂಡ ಕೂಡ ನೇಣುಹಾಕಿಕೊಂಡು ತೀರಿಹೋದವನೇ. ಒಬ್ಬೊಬ್ಬರಾಗೇ ನೇಣುಹಾಕಿಕೊಂಡು ಸಾಯುತ್ತಿದ್ದರೆ ಅವರ ಮನೆಯ ಕುರಿತೇ ಅನುಮಾನ ಬರುವಷ್ಟು ಅವರ ಮನೆಯಲ್ಲಿ ಜನ ಸಾಯುತ್ತಿದ್ದರು. ಹೀಗೆ ಸತ್ತು ಹೋದವರು ಕೆಲವರಾದರೆ, ಇದ್ದ ಮತ್ತೊಬ್ಬ ಮಗ ಮಂಜುನಾಥ ಚುರುಕಾಗಿ ಓಡಾಡಿಕೊಂಡಿದ್ದವ ಒಂದು ದಿನ ಮನೆಯಿಂದ ಕಾಣೆಯಾಗಿಬಿಟ್ಟ. ಅವನು ಇದ್ದಾನೋ…ಇಲ್ಲವೋ..ಒಂದೂ ತಿಳಿಯದೇ ಕಲಾವತಕ್ಕ ತತ್ತರಿಸುತ್ತಿದ್ದಳು. ಇಂದು ಬಂದಾನು… ನಾಳೆ ಬಂದಾನು.. ಎಂದು ಕಾಯುತ್ತಲೇ ಜೀವಮಾನದ ಬಹುತೇಕ ದಿನಗಳನ್ನು ಕಳೆದುಬಿಟ್ಟಿದ್ದಳು. ತೀರಿಹೋದ ಅವಳ ಇಬ್ಬರು ಮಕ್ಕಳೂ, ಅವಳ ಗಂಡನ ಕುರಿತು ಯಾವತ್ತೂ ಪರಿತಪಿಸಿದವಳಲ್ಲ. ಕಾಣೆಯಾದ ಮಗನ ಕುರಿತು ಮಾತ್ರ ಜೀವಮಾನವಿಡೀ ನೆನೆನೆನೆದು ದುಃಖಿಸುತ್ತಿದ್ದಳು.

ಕ್ಯಾಸನೂರು ಸೀಮೆಯ ಕುಗ್ರಾಮದವಳಾದ ಕಲಾವತಕ್ಕ ಬೇರೆ ಊರನ್ನು ಕನಸುಮನಸಿನಲ್ಲಿಯೂ ಕಂಡವಳಲ್ಲ. ಅಪ್ಪನ ಮನೆ ಕುಗ್ರಾಮವಾದರೆ ಗಂಡನ ಮನೆ ಮತ್ತೊಂದು ಕುಗ್ರಾಮವಾಗಿತ್ತು. ಸಿದ್ದಾಪುರ ಸಮೀಪದ ಸಾತಗೋಡಿಗೆ ದೊಡ್ಡದಾದ ಹೊಳೆಯನ್ನು ದಾಟಿ ಮೂರು ಮೈಲಿ ನಡೆದುಹೋಗಬೇಕಿತ್ತು. ಸಾಲುಗೇರಿಯಿರುವ ಆ ಊರಲ್ಲಿ ಇವರ ಮನೆಗೆ ವಿಶೇಷವಾಗಿ ಕೇಣಿಮನೆ ಎಂದು ಕರೆಯುತ್ತಿದ್ದರು. ಕೇಣಿಮನೆಯ ಮಂಜ ಹೆಗಡೇರು ಎಂದರೆ ಸುತ್ತೆಲ್ಲ ಹಳ್ಳಿಗೆ ಹೆಸರುಮಾತಿನದ್ದಾಗಿತ್ತು. ಇಡೀ ಊರಿಗೇ ನ್ಯಾಯ ಪಂಚಾಯ್ತಿ ಹೇಳುವಷ್ಟು ಜಬರದಸ್ತಿನವರಾಗಿದ್ದ ಅವರು, ಎತ್ತರದ ನಿಲುವಿನ ಕಟ್ಟುಮಸ್ತಾದ ಆಳು. ನೋಡಲು ಕೆಂಪಗೆ ಇದ್ದ ಅವರು ಬಿಳಿ ಪಂಚೆಯುಟ್ಟು, ಮೇಲೊಂದು ಕಸೆ ಅಂಗಿಯನ್ನು ತೊಟ್ಟು, ತಲೆಗೆಮುಂಡಾಸು ಸುತ್ತಿಕೊಂಡು ಹೊರಟರೆಂದರೆ ಊರಿನ ಜನ ಎಲ್ಲ ಬದಿ ಸರಿದು ನಿಲ್ಲುತ್ತಿದ್ದರು. ಹೀಗೆ ಅವರಿವರ ಮನೆಯ ಪಂಚಾಯ್ತಿ ಮಾಡಿಸಿ ಯಾರ್ಯಾರ ಮನೆಯ ತ್ವಾಟವನ್ನು ಹೊಡದ್ರೇನ… ಅದಿಲ್ದಿದ್ರೆ ಇವನ ಅಜ್ಜನ ಕಾಲದಲ್ಲಿ ಎಷ್ಟೆಲ್ಲ ಬಡಸ್ತಿಕೆ ಇದ್ದ ಇವರ ಮನೆ ಈಗ ಇಷ್ಟು ಜೋರಾಗಿ ಇಪ್ಪಲಾಗ್ತಿತ್ತ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಒಟ್ಟಿನಲ್ಲಿ ಅವರ ಮನೆಗೆ ಅಂಥ ಒಳ್ಳೆ ಹೆಸರೇನಿರಲಿಲ್ಲ. ಆದರೆ ಶ್ರೀಮಂತಿಕೆ ಹೇರಳವಾಗಿತ್ತು. ಅಂಥ ಮಂಜ ಹೆಗಡೇರ ಏಕೈಕ ಮಗ ನಾರಣಣ್ಣನಿಗೆ ಬಡವರ ಮನೆಯ ಪರದೇಶೀ ಹೆಣ್ಣುಮಗಳು ಕಲಾವತಕ್ಕನನ್ನು ಮದುವೆ ಮಾಡಿಸಿದ್ದು ಯಾವುದೋ ಲೆಕ್ಕಾಚಾರದಿಂದಲೇ. “ಹೋಗಿಹೋಗಿ ಈ ಕೂಸನ್ನು ಆ ಮಳ್ಳಂಗೆ ಮದುವೆ ಮಾಡತ್ವಲಿ… ಈ ಮಂಜಹೆಗಡೇರಿಗೆ ತಲೆಲಿ ಎಂತ ಇದ್ದು, ಆ ಕೂಸಿನ ಬಾಳೂ ಹಾಳು ಮಾಡತ್ವಲಿ..” ಎಂದು ಊರವರು ಅವರವರಿಗೇ ಹೇಳಿಕೊಂಡರೇ ವಿನಾ ಮಂಜಹೆಗಡೇರ ಎದುರಿಗೆ ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಹೀಗೆ ಮಳ್ಳ ನಾರಣಣ್ಣನನ್ನು ಮದುವೆಯಾಗಿ ಸಾತಗೋಡಿಗೆ ಬಂದ ಕಲಾವತಕ್ಕ ಆ ಮನೆಯ ಏಕೈಕ ಹೆಣ್ಣುಜೀವಿಯಾಗಿದ್ದಳು.

‘ಹೆಣ್ಣು ದಿಕ್ಕಿಲ್ಲದ ಈ ಮನೆಗೆ ಬೈಂದೆ ಕೂಸೆ. ಈ ಮನೆಯನ್ನು ನೋಡಕ್ಯಂಡು ಹೋಪ ಜವಾಬ್ದಾರಿ ನಿಂದು’ ಎಂದು ಮದುವೆಯಾದ ಮಾರನೇ ದಿನವೇ ಮಂಜಹೆಗಡೇರು ಕಲಾವತಿಯನ್ನು ಕರೆದು ಹೇಳಿದ್ದರು.

ತನ್ನ ಗಂಡ ಎಲ್ಲರಂತಿಲ್ಲ ಎಂಬುದು ಮದುವೆಯಾಗಿ ಅಲ್ಲಿಗೆ ಬಂದಮೇಲೇ ಅವಳಿಗೆ ತಿಳಿದದ್ದು. ಮದುವೆಯರೊಳಗೇ ಹುಚ್ಚ ಗಂಡನಿಗೆ ತನ್ನನ್ನು ಕೊಡುತ್ತಿದ್ದಾರೆಂದು ತಿಳಿದಿದ್ದರೂ ಅವಳೇನೂ ಬೇಡವೆನ್ನುತ್ತಿರಲಿಲ್ಲ. ಬೇಡ ಎಂದು ಹೇಳುವ ಸ್ಥಾನದಲ್ಲಿ ಅವಳೇಕೆ, ಬಹುತೇಕ ಹೆಣ್ಣುಗಳು ಆಗ ಇರಲೂ ಇಲ್ಲ ಎನ್ನುವುದು ಬೇರೆ ಮಾತು. ಹಾಗೆ ಅವರ ಮನೆಗೆ ಬಂದಮೇಲೆ ಎರಡಂತಸ್ತಿನ ಮನೆಯನ್ನು ಗುಡಿಸಿ, ಸಾರಿಸಿ, ಮನೆಗೆಲಸವನ್ನು ಮಾಡಿಕೊಂಡು, ಊರಲ್ಲಿ ಯಾರ ಮನೆಯಲ್ಲಿ ಶ್ರಾದ್ಧ, ಸಂತರ್ಪಣೆ ಹೀಗೆ ಏನೇ ಆಗಲಿ ಅವರ ಮನೆಗೆ ಹೋಗಿ ಅದೂ ಇದೂ ಕೆಲಸಮಾಡಿಕೊಟ್ಟು, ಅವರೊಂದಿಗೆ ಒಂದಿಷ್ಟು ಹರಟೆ ಹೊಡೆದು ಬರುವವಳು. ಅದರಲ್ಲೂ ಅವರ ಮನೆಗೆಲಸದ ಹಾಲಿ ಸದಾ ಇವಳೊಂದಿಗೇ ಇರುತ್ತಿದ್ದಳು. ಸ್ವಲ್ಪ ನೋವಾದರೂ ‘ಅಲ್ಲ, ಹಾಲಿ, ಹೆಗಡೇರೆಂತಕ್ಕೆ ಹೀಂಗ ಮಾಡತ್ರೇ’ ಎಂದು ಕೇಳುವುದೂ, ಕಲಾವತಕ್ಕ ‘ಸಹಿಸ್ಕಳ್ರೀ.. ನಿಂಗೆ ಹೆಗಡೇರು ತಲೆಮೇಲೆ ಮೆಣಸು ಅರಿಕಾಗಿತ್ತಿಲ್ಲೆ… ಅವರ ಹೆಂಡತಿ ಸತ್ತು ಹೋತು, ಈಗ ಸೊಸೆಯೂ ನೇಣು ಹಾಕ್ಯಂಡು ಹೋತು. ನಿನ್ನ ತಕಬೈಂದ್ರು. ಒಟ್ನಲ್ಲಿ ಈ ಮನೆಗೆ ಹೆಣ್ಣು ಆಗಿಬರಾಕಲ್ಲ ಬಿಡು’ ಎಂದು ಸಮಾಧಾನಿಸುತ್ತ ಕವಳ ಹಾಕಿದ ಕೆಂಪನೆಯ ತನ್ನ ಉಬ್ಬು ಹಲ್ಲುಗಳನ್ನು ಮುಚ್ಚಲು ಪ್ರಯತ್ನಿಸುತ್ತ ತಾನೂ ಅವಳೊಂದಿಗೆ ಅಳುತ್ತಿದ್ದಳು. ಆಗಲೇ ಗೊತ್ತಾಗಿದ್ದು ಕಲಾವತಕ್ಕನಿಗೆ, ನಾರಣಣ್ಣನಿಗೆ ತಾನು ಎರಡನೇ ಹೆಂಡತಿ ಎಂಬುದು. ಅವನ ಮೊದಲ ಹೆಂಡತಿ ನೇಣು ಹಾಕಿಕೊಂಡೇ ಸತ್ತು ಹೋಗಿದ್ದಳು. ಅವಳ್ಯಾಕೆ ಸತ್ತಳು ಎಂಬುದು ಯಾರಿಗೂ ತಿಳಿಯಲಿಲ್ಲ. ಆದರೆ ಅಷ್ಟರ ನಂತರವೇ ನಾರಣಣ್ಣನಿಗೆ ಹುಚ್ಚು ಹಿಡಿದಿದ್ದು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

ಸಣ್ಣ ಪ್ರಾಯದ ಹೆಂಡತಿ ಸತ್ತಿದ್ದರಿಂದ ಅವನಿಗೆ ಹುಚ್ಚು ಹಿಡಿದಿರಬಹುದೆಂದೂ, ಮದುವೆ ಮಾಡಿದರೆ ಹುಚ್ಚು ಸರಿಯಾದೀತೆಂದೂ ಯೋಚಿಸಿ ಮಂಜಯ್ಯ ಹೆಗಡೇರು ಬಡವರ ಮನೆಯ ಹೆಣ್ಣು ಕಲಾವತಿಯನ್ನು ತಂದು ಮದುವೆಮಾಡಿಬಿಟ್ಟಿದ್ದರು. ಆದರೆ ಮದುವೆಯಾದ ಮೇಲೂ ಅವನ ಹುಚ್ಚು ಹೆಚ್ಚಾಗಿದ್ದಲ್ಲದೆ ಮನೆಯವರಿಗೆಲ್ಲ ಹುಚ್ಚು ಹಿಡಿಯುವಷ್ಟು ರಗಳೆಯಾಗುತ್ತಿತ್ತು. ಅದೆಷ್ಟೆಂದರೆ ಮತ್ತೊಬ್ಬರ ಪ್ರಾಣ ತೆಗೆಯುವಷ್ಟು.

ಕಲಾವತಕ್ಕ ಮೊದಲಿನಿಂದಲೂ ಅಳುತ್ತಿದ್ದವಳೇನಾಗಿರಲಿಲ್ಲ. ಗಂಡನ ಈ ಹುಚ್ಚಾಟಗಳಿಂದಲೇ ಹೀಗೆ ಆಗಿದ್ದಳೆನಿಸುತ್ತದೆ. ಅವಳು ಅಳಲು ಶುರುಮಾಡಿದ್ದು ಅವಳ ಎರಡನೇ ಮಗ ಹುಟ್ಟಿದ ಸಂದರ್ಭದಲ್ಲಿ. ಅದು ಮತ್ತೂ ಜೋರಾಗಿದ್ದು ಮೊದಲ ಮಗ ನಾಪತ್ತೆಯಾದ ಸಂದರ್ಭದಲ್ಲಿ.

ಎರಡನೇ ಮಗ ಹುಟ್ಟಿ, ಅವನಿಗೆ ಎರಡೋ ಮೂರೋ ತಿಂಗಳಾಗಿರಬಹುದು. ಅವನನ್ನು ತೊಟ್ಟಿಲಲ್ಲಿ ಮಲಗಿಸಿದಾಗಲೆಲ್ಲ ಶಿಶುವನ್ನು ವಿಚಿತ್ರವಾಗಿ ನೋಡುತ್ತ ನಿಲ್ಲುತ್ತಿದ್ದ ನಾರಣಣ್ಣ. ಒಂದಿನ ಮನೆಯ ಊಟದ ಓರಿಯಲ್ಲಿ ಗೋಣಿಪಾಟಿನ ಮೇಲೆ ಮಗುವನ್ನು ಮಲಗಿಸಿ ಹಿತ್ತಲ ಅಂಗಳದಲ್ಲಿ ಮುರಗಲ ಸಿಪ್ಪೆಯನ್ನು ಒಣಗಿಸುವುದರಲ್ಲಿ ತಲ್ಲೀನಳಾಗಿದ್ದ ಕಲಾವತಕ್ಕನಿಗೆ ಮಗು ಒಂದು ಸಲ ಜೋರಾಗಿ ಕಿರುಚಿದ ಸದ್ದು ಕೇಳಿಸಿತು. ಏನೆಂದು ಬಂದು ನೋಡುವಷ್ಟರಲ್ಲಿ ಅನಾಹುತ ನಡೆದುಹೋಗಿತ್ತು. ನಾರಣಣ್ಣ ಮಗುವಿನ ಎರಡೂ ಕಾಲುಗಳನ್ನು ಹಿಡಿದು ಅಲ್ಲಿಯೇ ಇದ್ದ ಒಳಕಲ್ಲಿಗೆ ಬಟ್ಟೆ ಒಗೆದ ಹಾಗಿ ಮಗುವಿನ ತಲೆಯನ್ನು ಜಜ್ಜಿ ಹಾಕಿದ್ದ. ಆ ಭೀಕರ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿ ಹಾಗೆಯೇ ಎಚ್ಚರ ತಪ್ಪಿ ಬಿದ್ದಳು ಕಲಾವತಕ್ಕ. ಅಷ್ಟರ ನಂತರ ಅವಳು ಸರಿಯಾಗುವುದಕ್ಕೆ ಸಾಕಷ್ಟು ತಿಂಗಳುಗಳೇ ಬೇಕಾದವು. ನಂತರ ಅವನನ್ನು ನೋಡಿದರೆ ಸಾಕು ಹೆದರಿ ಮೊದಲ ಮಗುವನ್ನೂ ಕರೆದುಕೊಂಡು ಅಡುಗೆಮನೆಗೆ ಓಡಿಹೋಗುತ್ತಿದ್ದಳು. ಹಗಲು ಹೊತ್ತೆಲ್ಲ ಹೇಗೋ ಕಳೆದುಬಿಡುತ್ತಿದ್ದಳು. ಆದರೆ ಅವಳಿಗೆ ಪ್ರತಿ ರಾತ್ರಿಯೂ ಭೀಕರವೆನಿಸುತ್ತಿತ್ತು. ತಾನ್ಯಾಕೆ ಸತ್ತು ಹೋಗಬಾರದು ಎಂದು ಯೋಚಿಸುತ್ತಿದ್ದಳು ಕೂಡ. ಆದರೆ ಮಗನ ಮುಖ ಎದುರಿಗೆ ಬರುತ್ತಿತ್ತು. ಜೊತೆಗೆ ಸಣ್ಣವಯಸ್ಸಿನ ಕಲಾವತಕ್ಕನಿಗೆ ಅಷ್ಟು ಧೈರ್ಯವೂ ಇರಲಿಲ್ಲ.

ಕಲಾವತಕ್ಕನಿಗೆ ಅಳುವುದು ಮತ್ತು ಕಳೆದುಕೊಳ್ಳುವುದು ಎರಡೂ ಹೊಸ ವಿಷಯವೇನಾಗಿರಲಿಲ್ಲ. ಇರುವ ಏಳು ಮಕ್ಕಳಲ್ಲಿ ಇಬ್ಬರು ಗಂಡುಮಕ್ಕಳು ನೇಣು ಹಾಕಿಕೊಂಡು ತೀರಿಹೋಗಿದ್ದರು. ಸ್ವತಃ ಅವಳ ಗಂಡ ಕೂಡ ನೇಣುಹಾಕಿಕೊಂಡು ತೀರಿಹೋದವನೇ. ಒಬ್ಬೊಬ್ಬರಾಗೇ ನೇಣುಹಾಕಿಕೊಂಡು ಸಾಯುತ್ತಿದ್ದರೆ ಅವರ ಮನೆಯ ಕುರಿತೇ ಅನುಮಾನ ಬರುವಷ್ಟು ಅವರ ಮನೆಯಲ್ಲಿ ಜನ ಸಾಯುತ್ತಿದ್ದರು.

ನಾರಣಣ್ಣನ ತಲೆ ಹೇಗಿದ್ದರೇನು, ವರುಷ ವರುಷವೂ ಕಲಾವತಕ್ಕ ಬಸುರಿಯಾಗುವುದಂತೂ ತಪ್ಪಲಿಲ್ಲ. ಹೀಗೇ ಎರಡು ಗಂಡುಮಕ್ಕಳು ಹುಟ್ಟಿ ಇನ್ನೊಂದಕ್ಕೆ ತಯಾರಿ ನಡೆಸುತ್ತಿರುವಾಗ ಮೊದಲ ಮಗ ಮಂಜುನಾಥನಿಗಾಗ ಏಳೆಂಟು ವರ್ಷವಿರಬಹುದು. ಒಂದು ದಿನ ಹೀಗೇ ಆಕಾಶಕ್ಕೆ ತೂತು ಬಿದ್ದಿದೆಯೇನೋ ಅನಿಸುವಷ್ಟು ಮಳೆ ಬೀಳುತ್ತಿತ್ತು. ಅದೇ ಹೊತ್ತಿಗೆ ಆ ಊರಿಗೆ ಭಿಕ್ಷೆ ಬೇಡಲೆಂದು ಒಂದು ಮಗುವಿನೊಂದಿಗೆ ಬಂದ ಹಾವಾಡಿಗ ದಂಪತಿ ಈ ಮಳೆಯಿಂದ ರಕ್ಷಿಸಿಕೊಳ್ಳಲು ಅವರ ಮನೆಯಲ್ಲೇ ಕಟ್ಟಿಗೆ ಮನೆಯ ಸಮೀಪದಲ್ಲಿ ಜಾಗ ಕೇಳಿಕೊಂಡು ಉಳಿದರು. ಹಾಗೆ ಉಳಿದವರಿಗೆ ಕಲಾವತಕ್ಕ ಊಟ ಉಣಿಸು ಕೊಟ್ಟು ಉಪಚರಿಸಿದಳು. ಅಲ್ಲಿಗೆ ಬಂದ ಮಂಜುನಾಥ ಅವರ ಮಗನೊಂದಿಗೆ ಮಾತನಾಡುತ್ತಿದ್ದರೂ ಅವನಿಗೆ ಆ ದಂಪತಿಯ ಬಗಲಲ್ಲಿದ್ದ ಜೋಳಿಗೆಯಮೇಲೆ ಕಣ್ಣಿತ್ತು. ಹಾಗೆ ಮಾತನಾಡುತ್ತಲಿರುವಾಗಲೇ ಮಳೆ ಜೋರಾಗುತ್ತಿತ್ತು. ಮತ್ತೊಬ್ಬ ಮಗ ಕಲಾವತಕ್ಕನ ಸೀರೆ ಸೆರಗು ಹಿಡಿದುಕೊಂಡು ಈ ಮಳೆಗೆ ಹೆದರಿ ಕೂತಿದ್ದ. ಗುಡುಗು ಸಿಡಿಲು. ಮಕ್ಕಳಿಬ್ಬರನ್ನೂ ಕರೆದುಕೊಂಡು ಕಲಾವತಕ್ಕ ಮನೆಯೊಳಗೆ ಬಂದು ಬಾಗಿಲು ಮುಚ್ಚಿ ಮಲಗಲೆಂದು ಬಂದಳು. ಮೂಲೆಯಲ್ಲಿದ್ದ ಗುಡ್ನದ ದೀಪವನ್ನು ಆರಿಸಿ, ಮಕ್ಕಳಿಬ್ಬರನ್ನೂ ಪಕ್ಕಕ್ಕೆ ಹಾಕಿಕೊಂಡು ಹಾಗೆ ಮಲಗಿದವಳಿಗೆ ಗುಡುಗು ಸಿಡಿಲಿನ ಶಬ್ದವೂ ಕೇಳಿಸದಷ್ಟು ನಿದ್ದೆ ಆವರಿಸಿತು.

ಬೆಳಗ್ಗೆ ಬೇಗ ಎದ್ದು ಬಚ್ಚಲಿಗೆ ಬೆಂಕಿ ಹಾಕಬೇಕು ಎಂದು ಎದ್ದವಳಿಗೆ ಪಕ್ಕದಲ್ಲಿ ಮಲಗಿದ್ದ ಮಗ ಕಾಣಿಸಲಿಲ್ಲ. ಉಚ್ಚೆಹೊಯ್ಯಲು ಬಚ್ಚಲಿಗೆ ಹೋಗಿರಬೇಕೆಂದು ಅಂದುಕೊಂಡು ಎದ್ದು ಬಚ್ಚಲಿಗೆ ಬೆಂಕಿ ಹಾಕಲು ಹೋದಳು. ಒಲೆಯಲ್ಲಿದ್ದ ಬೂದಿ ತೆಗೆದು ಚೆಲ್ಲಲು ಕಟ್ಟಿಗೆ ಮನೆಯತ್ತ ಹೋದರೆ ರಾತ್ರಿ ತಂಗಿದ್ದ ಹಾವಾಡಿಗ ದಂಪತಿಯ ಸುಳಿವಿಲ್ಲ. ಯಾಕೋ ಅನುಮಾನ ಬಂದು ಮಗನಿಗಾಗಿ ಮನೆಯೆಲ್ಲ ಹುಡುಕಿದಳು. ಮಜ್ಞಾತ.. ಮಜ್ಞಾತ.. ಎಂದು ಕೂಗುತ್ತ ಇಡೀ ಮನೆಯನ್ನು ಸುತ್ತಿದಳು. ಅಳುತ್ತಲೇ, ಕೂಗುತ್ತಲೇ ಮತ್ತೆ ಮತ್ತೆ ಮನೆಯನ್ನು ಸುತ್ತಿದಳು. ಎಲ್ಲಿ ಮಗ? ಅಳುತ್ತ ಕುಸಿದಳು. ಅಷ್ಟೊತ್ತಿಗೆ ಬಂದ ಹಾಲಿ, ಎಂತದ್ರ ಅಕ್ಕಾ ಎಂದು ಕೇಳಿದರೆ, ಮಂಜಹೆಗಡೇರು, ನಾರಣಣ್ಣ, ಮತ್ತೊಬ್ಬ ಮಗ ಶ್ರೀಪಾದ ಎಲ್ಲರೂ ಅಳುತ್ತಿದ್ದ ಕಲಾವತಕ್ಕನನ್ನು ನೋಡುತ್ತ ಮಂಕಾಗಿ ಕುಳಿತಿದ್ದರು. ಹಾಲಿಯೂ ಕುಸಿದು ಕುಳಿತ ಕಲಾವತಕ್ಕನ ಪಕ್ಕ ಹೋಗಿ ಕೂತಳು.

ಆದರೆ ಅಷ್ಟರ ನಂತರ ಹೀಗೆ ಜೋರು ಮಳೆ, ಗುಡುಗು ಸಿಡಿಲು ಎಂದಾಗಲೆಲ್ಲ ಕಲಾವತಕ್ಕನ ಅಳು ಜೋರಾಗುತ್ತದೆ. ಯಾರಾದರೂ ಹಾವಾಡಿಗರು ಭಿಕ್ಷೆ ಬೇಡಲು ಅವಳ ಊರಿಗೆ ಬಂದರೆ ಸಾಕು, ಅವರಿಗೆಲ್ಲ ಹೊಡೆಯುವಷ್ಟು ಅವಳು ಕೆರಳುತ್ತಾಳೆ. ಆಗ ಹುಚ್ಚು ಅವಳಿಗೋ.. ನಾರಣಣ್ಣನಿಗೋ ಎಂದು ತಿಳಿಯಲಾರದಷ್ಟು ಜೋರಾಗುತ್ತದೆ.

ಅಡಕೆ ಕೊಯ್ಲಿನ ಸಂದರ್ಭದಲ್ಲಿ ಯಾರದ್ದಾದರೂ ಮನೆಯ ಅಂಗಳದಲ್ಲಿ ಊರ ಮಹಿಳೆಯರೆಲ್ಲಸೇರಿ ಅಡಕೆ ಸುಲಿಯುತ್ತಿರುವಾಗ, ಮ್ಯಾಲಿನ ಮನೆ ಮೀನಾಕ್ಷಕ್ಕ ಕತೆಗಳನ್ನು ರಸವತ್ತಾಗಿ ಹೇಳುತ್ತಿದ್ದಳು. ಅವಳಿಲ್ಲವೆಂದರೆ ಅಡಕೆ ಸುಲಿಯುವಿಕೆಗೊಂದು ಕಳೆಯೇ ಬರುತ್ತಿರಲಿಲ್ಲ. ಅವಳು ರಾಮಾಯಣದ ಲವಕುಶರ ಹಾಡುಗಳನ್ನು ಹೇಳುತ್ತ, ಸೀತೆಯನ್ನು ಕಾಡಿಗೆ ಅಟ್ಟಿದ್ದು, ಅವಳು ಕಾಡಲ್ಲಿ ಅಲೆಯುತ್ತ ಅಲೆಯುತ್ತ ವಾಲ್ಮೀಕಿ ಆಶ್ರಮ ಸೇರಿದ್ದು, ಅಲ್ಲಿ ಲವಕುಶರಿಗೆ ಜನ್ಮವಿತ್ತದ್ದು, ಈ ಎಲ್ಲ ಕತೆಗಳನ್ನು ಭಾವುಕವಾಗಿ ವಿವರಿಸಿ ವಿವರಿಸಿ ಹೇಳತೊಡಗಿದಾಗ ಎಲ್ಲರೂ ಹೂಂಗುಟ್ಟುತ್ತಾ ಅಡಕೆ ಸುಲಿಯುತ್ತಿದ್ದರೆ ಕಲಾವತಕ್ಕ ಮಾತ್ರ ಅಡಕೆ ಸುಲಿಯುವುದನ್ನೂ ನಿಲ್ಲಿಸಿ ಒಂದೇ ಸಮನೆ ಅಳುತ್ತಿದ್ದಳು. ಅವಳು ಅಳುವುದನ್ನು ನೋಡಿ ಮೀನಾಕ್ಷಕ್ಕ, ‘ಇನ್ನು ಕತೆ ಹೇಳತ್ನಿಲ್ಯೆ, ಸ್ವಕಾಗಿ ನಿನ್ನ ಅಳಸಕ್ಕಾಗ್ತು’ ಎಂದು ಹೇಳಿದರೆ, ‘ಇಲ್ಯೆ, ನೀ ಕತೆ ನಿಲ್ಸಡ, ಹೇಳು…’ ಎಂದು ಹುರಿದುಂಬಿಸುತ್ತಿದ್ದದ್ದೂ ಅವಳೇ. ಹೀಗೆ ಕಣ್ಣೀರ ಧಾರೆ ಹರಿಸುತ್ತಲೇ ಕತೆ ಕೇಳುತ್ತಿದ್ದ ಕಲಾವತಕ್ಕನಿಗೆ ಅಡಕೆ ಸುಲಿಯುವ ಹೆಂಗಸರೆಲ್ಲ ಸೇರಿ ಜಲದೇವತೆಯೆಂದು ಹೆಸರಿಟ್ಟುಬಿಟ್ಟಿದ್ದರು. ಕಲಾವತಕ್ಕ ಅಡಕೆ ಸುಲಿಯಲು ಬಂದಿಲ್ಲವೆಂದರೆ “ಜಲದೇವತೆ ಇಂದು ರಜ ಹಾಕಿದ್ದು..” ಎಂದು ತಮಾಶೆ ಮಾಡುತ್ತಿದ್ದರು.

ಒಂದು ಸಲ ಸಾತಗೋಡಿಗೆ ಒಬ್ಬ ಹಾವಾಡಿಗ ಬಂದಿದ್ದ. ಆಗ ಊರಿನ ಹುಡುಗರಿಗೆಲ್ಲ ಹಾವು ನೋಡುವುದೊಂದು ಕೌತುಕ. ಹಾಗಾಗಿ ಅವನು ಬಂದಾಗ ಅವನ ಸುತ್ತ ಅನೇಕ ಹುಡುಗ ಹುಡುಗಿಯರೆಲ್ಲ ಸುತ್ತುಗಟ್ಟಿ ನಿಂತಿದ್ದರು. ಊರಿನ ಒಬ್ಬರ ಮನೆಯ ಅಂಗಳದಲ್ಲಿ ಹಾವಾಡಿಗ ತನ್ನ ಬುಟ್ಟಿಯನ್ನಿಳಿಸಿ ಪುಂಗಿ ಊದುತ್ತ ಹಾವನ್ನು ಎಬ್ಬಿಸುತ್ತಿದ್ದ. ಸೊಣಕಲ ಕಡ್ಡಿಯಂತಿದ್ದ ಹಾವಾಡಿಗ ತಲೆಮೇಲೆ ಅವನಿಗಿಂತಲೂ ದೊಡ್ಡದಾದ ಪೇಟವನ್ನು ಕಟ್ಟಿಕೊಂಡಿದ್ದ. ಬಗಲಲ್ಲಿ ಎಂತೆಂತದೋ ತರಾವರಿಯ ಚೀಲಗಳಿದ್ದವು. ವಯಸ್ಸು ಇಷ್ಟೇ ಎಂದು ಹೇಳಲಾರದಷ್ಟು ವಯಸ್ಸಾಗಿ ಹೋಗಿ, ಅವನ ನೆರಿಗೆಯಾಕಾರದ ಪೇಟದಂತೆಯೇ ಅವನ ಮುಖದಲ್ಲಿ ಲೆಕ್ಕವಿಲ್ಲದಷ್ಟು ನೆರಿಗೆ ಬಿದ್ದಿದ್ದವು. ಆ ದೊಡ್ಡದಾದ ಪುಂಗಿಯನ್ನು ಎರಡೂ ಕೆನ್ನೆಗಳನ್ನು ಊದಿಸಿಕೊಂಡು ಅವನು ಊದುತ್ತಿದ್ದರೆ ಇವನಿಗೆ ಇಷ್ಟು ಶಕ್ತಿ ಎಲ್ಲಿಂದ ಬಂತು ಎಂದೆನಿಸುವಷ್ಟು ಅವನು ಸಣ್ಣಕಿದ್ದ. ಅಂಥವನು ಪುಂಗಿ ಊದುತ್ತ ಹಾವನ್ನು ಎಬ್ಬಿಸುತ್ತಿದ್ದ. ಬೆತ್ತದ ಬುಟ್ಟಿಯೊಳಗೆ ಸುತ್ತಿಕೊಂಡು ಮಲಗಿದ್ದ ಹಾವು ನಿಧಾನಕ್ಕೆ ತನ್ನ ತಲೆಯನ್ನು ಚಲಿಸುತ್ತಿತ್ತು. ಅದು ಯಾವಾಗ ಹೆಡೆಬಿಚ್ಚಿ ಬುಸುಗುಡುತ್ತದೆಂದು ಎಲ್ಲರೂ ಸುತ್ತುಗಟ್ಟಿ ನೋಡುತ್ತಿರುವಾಗಲೇ ಅದೆಲ್ಲಿದ್ದನೋ ನಾರಣಣ್ಣ, ಗುಂಪನ್ನು ಸರಿಸಿ ಎದುರಿಗೆ ಬಂದು, ನೆಟ್ಟಗಣ್ಣಿನಿಂದ ನಿಧಾನಕ್ಕೆ ಚಲಿಸುತ್ತಿದ್ದ ಹಾವನ್ನು ನೋಡುತ್ತಿದ್ದ. ಇದ್ದಕ್ಕಿದ್ದ ಹಾಗೇ ಆ ಹಾವನ್ನು ಕೈಯ್ಯಲ್ಲಿ ಹಿಡಿದು ತನ್ನ ಕೊರಳ ಸುತ್ತ ಸುತ್ತಿಕೊಂಡು ‘ನಿನ್ನಯ ಬಲುಹೇನೋ…’ ಎಂದು ಯಕ್ಷಗಾನದ ದಾಟಿಯಲ್ಲಿ ಹಾಡುತ್ತ ‘ಪುಂಗಿ ಊದನ್ನು ನಿಲ್ಸಾ ಮೊದ್ಲು..’ ಎಂದು ಜೋರು ಮಾಡಿ ಕುತ್ತಿಗೆ ಸುತ್ತಿಕೊಂಡಿದ್ದ ಹಾವನ್ನು ಗಟ್ಟಿಯಾಗಿ ಹಿಡಿದು ಗಿರಗಿರನೆ ತಿರುಗಿಸತೊಡಗಿದ. ಪಾಪ, ಪುಂಗಿಯವನಿಗೆ ಏನು ಮಾಡುವುದೆಂದು ತಿಳಿಯದೇ ಭಯದಿಂದ ನಿಂತು, ‘ಸ್ವಾಮಿ, ನನ್ನ ಊಟ ಅದು.. ದಯವಿಟ್ಟು ಬಿಟ್ಟುಬಿಡಿ…’ ಎಂದು ಅಂಗಲಾಚಿದ. ‘ಓ..ನಿಂಗೆ ಊಟ ಬೇಕಾ.. ಏಯ್. ಕಲಾವತೀ… ಇವನಿಗೆ ಊಟ ಕೊಡೇ..’ ಎಂದು ಕೂಗುತ್ತ, ನಿನ್ನಯ ಬಲುಹೇನೋ.. ಎಂದು ಮತ್ತೆ ಯಕ್ಷಗಾನ ದಾಟಿಯಲ್ಲಿ ಹಾಡುತ್ತ ಕುಣಿಯತೊಡಗಿದ.

ತಗೋ ದುಡ್ಡು ತಗೋ.. ಊಟ.. ಎಂದು ತನ್ನ ಅಂಗಿಯ ಜೇಬಲ್ಲಿರುವ ಒಂದಷ್ಟು ಚಿಲ್ಲರೆ ಹಣವನ್ನು ಚೆಲ್ಲಿದ. ಅಷ್ಟು ಸಾಲದೆಂಬಂತೆ ಅವನ ಜೋಳಿಗೆಯನ್ನು ಹಿಡಿದೆಳೆದು ಅದರಲ್ಲಿರುವ ಚಿಲ್ಲರೆ ಹಣವನ್ನೆಲ್ಲ ಅಂಗಳಕ್ಕೆ ಚೆಲ್ಲಿದ. ಅಂಗಳದ ಒಂದಷ್ಟು ಜಾಗಕ್ಕೆ ಹರಡಿಕೊಂಡು ಬಿದ್ದ ಚಿಲ್ಲರೆ ಹಣ ಕೆಲವಷ್ಟು ಉರುಳಿಕೊಂಡು ಸುತ್ತ ನಿಂತಿದ್ದ ಹುಡುಗರ ಕಾಲಬಳಿಯೂ ಹೋಯಿತು. ಇದಿಷ್ಟೂ ಪ್ರಹಸನವನ್ನು ಭಯದಿಂದ ಇಡೀ ಊರಿನ ಗುಂಪು ನೋಡುತ್ತ ನಿಂತಿದ್ದರೆ, ವಿಷಯ ತಿಳಿದ ಕಲಾವತಕ್ಕ ಮತ್ತು ಅವಳ ಮಕ್ಕಳು ಓಡಿಬಂದು ನಾರಣಣ್ಣನನ್ನು ಹಿಡಿದುಕೊಂಡರು. ಆದರೆ ಕೈಯ್ಯಲ್ಲಿರುವ ಹಾವನ್ನು ಹೇಗೆ ಹಿಡಿಯುವುದು? ಇವನಿಗೆ ತಲೆಕೆಟ್ಟಿತ್ತು ನಿಜ. ಆದರೆ ಅವ ಹಿಡಿದ ಹಾವಿಗೆ ತಲೆ ಕೆಟ್ಟಿರಲಿಲ್ಲವಲ್ಲ.

ಹಾವಿಗೆ ಹಲ್ಲು ಕಿತ್ತು ವಿಷ ತೆಗೆದಿದ್ದರು ನಿಜ. ಆದರೂ ಹಾವು ಹಾವೇ. ಅದನ್ನು ನೋಡಿದರೇ ಹೆದರಿಕೆಯುಂಟಾಗುತ್ತದೆ. ಹಾಗಾಗಿ ಕಲಾವತಕ್ಕನಿಗೆ ಹೆದರಿಕೆಯಾಗಿ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳಿಗೆ ಆ ಹಾವಾಡಿಗನನ್ನು ನೋಡಿ ಮತ್ತಷ್ಟು ಸಿಟ್ಟು ಬಂತು. ಅಷ್ಟೊತ್ತಿಗೆ ಹಾವು ನಾರಣಣ್ಣನ ಕುತ್ತಿಗೆಯಿಂದ ದೇಹದ ಕೆಳಭಾಗಕ್ಕೆ ನಿಧಾನಕ್ಕೆ ಇಳಿಯುತ್ತಿತ್ತು. ಅವನನ್ನೂ, ಅವನ ತಲೆಯನ್ನೂ ಇಬ್ಬರು ಮಕ್ಕಳೂ ಗಟ್ಟಿಯಾಗಿ ಹಿಡಿದುಕೊಂಡು ಹಾವಾಡಿಗನ ಬಳಿಯೇ ನಿನ್ನ ಹಾವನ್ನು ತೆಗೆದುಕೋ ಎಂದರು. ನಿಧಾನಕ್ಕೆ ಹಾವಾಡಿಗ ಹಾವಿನ ತಲೆಯನ್ನೇ ಮೊದಲು ಗಪ್ಪೆಂದು ಹಿಡಿದು ಎಳೆದು ಬೆತ್ತದ ಬುಟ್ಟಿಯೊಳಕ್ಕೆ ತುಂಬಿ ತಕ್ಷಣ ಮುಚ್ಚಳ ಮುಚ್ಚಿದ. ದುಡ್ಡೂ, ಅಕ್ಕಿ ಏನೂ ಇಲ್ಲದೆ ನೆಲಕ್ಕೆ ಬಿದ್ದ ಚಿಲ್ಲರೆ ಹಣವನ್ನೆಲ್ಲ ಒಟ್ಟುಗೂಡಿಸಿ ಜೋಳಿಗೆಗೆ ತುಂಬಿಕೊಂಡು, ಅಲ್ಲಿದ್ದವರಿಗೆಲ್ಲ ಒಂದಷ್ಟು ಬೈಕೊಂಡು ಹಾವಿರುವ ಬೆತ್ತದ ಪೆಟ್ಟಿಗೆಯನ್ನು ಜೋಳಿಗೆಯಲ್ಲಿಟ್ಟುಕೊಂಡು ಭುಜಕ್ಕೆ ನೇತಾಕಿಕೊಂಡು ಹೊರಟ. ಆದರೆ ಕಲಾವತಕ್ಕ ನಾರಣಣ್ಣನನ್ನು ಹಿಡಿದಿದ್ದರೂ ಅವಳ ನೋಟ ಮಾತ್ರ ಆ ಹಾವಾಡಿಗನ ಮೇಲಿತ್ತು. ಇನ್ನು ಈ ಊರಿಗೆ ಬರಬೇಡ ಎಂದು ಶಪಿಸಿದ್ದಳಲ್ಲದೆ, ‘ಇನ್ನು ಈ ಹಾವಾಡಿಗರನ್ನು ಊರಿಗೆ ಸೇರಸಡಿ. ಅವು ಮಕ್ಕಳ ಕಳ್ರು. ನಿಂಗಳ ಮಕ್ಕಳನ್ನೂ ಕದ್ದುಕೊಂಡು ಹೋಗ್ತ’ ಅವು ಎಂದು ಶಪಿಸುತ್ತ ನಾರಣಣ್ಣನನ್ನು ಕರೆದುಕೊಂಡು ಹೋದಳು.

ಅಷ್ಟೊತ್ತಿಗೆ ಕಲಾವತಕ್ಕನಿಗೆ ಆ ಮನೆಯ ರೀತಿರಿವಾಜುಗಳೆಲ್ಲ ಅರ್ಥವಾಗುತ್ತ ಬಂದಿದ್ದವು. ಎರಡಂತಸ್ತಿನ ಕಟ್ಟಿಗೆಯ ಮನೆ, ಭೀಮಾಕಾರದ ಕಂಬಗಳು, ಕತ್ತಲು ತುಂಬಿದ ನಡುಮನೆಯಲ್ಲಿರುವ ತನ್ನ ಕೋಣೆ, ಜಗುಲಿಯಲ್ಲೇ ಇದ್ದ ಮಂಜಹೆಗಡೇರ ದೊಡ್ಡ ಕೋಣೆ, ಎಲ್ಲಕಡೆ ಹುಚ್ಚುಚ್ಚಾಗಿ ಓಡಾಡುವ ನಾರಣಣ್ಣ, ಅಪ್ಪ ಮಂಜ ಹೆಗಡೇರು ಇದ್ದಲ್ಲಿ ಹೋಗುತ್ತಲೇ ಇರಲಿಲ್ಲ. ಎಷ್ಟೋ ಸಲ ಅವನ ಮೊದಲ ಹೆಂಡತಿಯ ಟ್ರಂಕಿನೊಳಗಿನಿಂದ ಫೋಟೋವೊಂದನ್ನು ತೆಗೆದು ನೋಡುತ್ತ ಅಳುತ್ತ ಕೂರುತ್ತಿದ್ದ. ಕಲಾವತಕ್ಕ ಅದೇನೆಂದು ಆ ಟ್ರಂಕನ್ನು ತೆಗೆಯ ಹೋದರೆ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಒಮ್ಮೆಯಂತೂ ನಾರಣಣ್ಣ ಹೀಗೇ ಊರೊಟ್ಟಿಗೆ ತಿರುಗಲು ಹೋದಾಗ, ಆ ಟ್ರಂಕಿನಲ್ಲೇನಿದೆ ಎಂದು ತೆರೆದೇ ಬಿಟ್ಟಳು. ಟ್ರಂಕಿನ ತುಂಬ ನಾರಣಣ್ಣನ ಮೊದಲ ಹೆಂಡತಿಯ ರೇಶಿಮೆ ಸೀರೆಗಳು, ಒಂದಷ್ಟು ಒಡವೆಗಳು, ಟೀಕೆಸರ, ಗೋಧಿಮಣಿ ಸರ, ಮುತ್ತಿನ ಸರ ಎಲ್ಲ ನೋಡುತ್ತ ಕೂತಳು. ಅಲ್ಲಿಯೇ ಇದ್ದ ಒಂದುಫೋಟೋವನ್ನು ಕೈಗೆತ್ತಿಕೊಂಡಳು. ನಾರಣಣ್ಣ ಮತ್ತು ಅವನ ಹೆಂಡತಿಯ ಪೋಟೋವದು. ನಾರಣಣ್ಣ ಕೋಟು, ಸೂಟು ಹಾಕಿಕೊಂಡು ಸ್ಫುರದ್ರೂಪಿಯಾಗಿದ್ದರೆ, ಅವನ ಹೆಂಡತಿ ಮತ್ತೂ ಚೆಂದವಿದ್ದಳು. ಯಾರಾದರೂ ಒಮ್ಮೆ ನಿಂತು ನೋಡುವಷ್ಟು ಸೌಂದರ್ಯವತಿ. ಅವಳನ್ನು ನೋಡುತ್ತ ಕಲಾವತಕ್ಕ ತನ್ನನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡಳು.

ಹೀಗೆ ಕಣ್ಣೀರ ಧಾರೆ ಹರಿಸುತ್ತಲೇ ಕತೆ ಕೇಳುತ್ತಿದ್ದ ಕಲಾವತಕ್ಕನಿಗೆ ಅಡಕೆ ಸುಲಿಯುವ ಹೆಂಗಸರೆಲ್ಲ ಸೇರಿ ಜಲದೇವತೆಯೆಂದು ಹೆಸರಿಟ್ಟುಬಿಟ್ಟಿದ್ದರು. ಕಲಾವತಕ್ಕ ಅಡಕೆ ಸುಲಿಯಲು ಬಂದಿಲ್ಲವೆಂದರೆ “ಜಲದೇವತೆ ಇಂದು ರಜ ಹಾಕಿದ್ದು..” ಎಂದು ತಮಾಶೆ ಮಾಡುತ್ತಿದ್ದರು.

ಮೊದಲೇ ಕಪ್ಪಗೆ ಇದ್ದ ಕಲಾವತಕ್ಕ ಈಗಂತೂ ಕಷ್ಟಕೋಟಲೆಗಳನ್ನು ಕಂಡು ಮತ್ತಷ್ಟು ಜೀರಾಗಿ, ನೋಡಲು ಸ್ವಲ್ಪವೂ ಚೆಂದಕಾಣಿಸುತ್ತಿರಲಿಲ್ಲ. ಕೆಂಪಗಿನ ಎತ್ತರದ ಆಳಿನ ನಾರಣಣ್ಣನಿಗೆ ತಾನು ಸರಿಯಾದ ಜೋಡಿಯಾಗಿರಲಿಲ್ಲ ಎಂದು ಮೊದಲಬಾರಿಗೆ ಅನಿಸಿದರೂ, ಮದುವೆಯಾಗುವಾಗ ಹುಚ್ಚ ಗಂಡನ ಮುಖವನ್ನೂ ಸರಿಯಾಗಿ ನೋಡಿರಲಿಲ್ಲ. ಅವ ಕೂಡ ಇವಳನ್ನೆಂದೂ ನೋಡಿದವನೇ ಆಗಿರಲಿಲ್ಲ. ಹೀಗೆಲ್ಲ ಯೋಚಿಸುತ್ತಿದ್ದವಳಿಗೆ ನಾರಣಣ್ಣ ಬಂದದ್ದೇ ತಿಳಿಯಲಿಲ್ಲ. ಹಿಂದಿನಿಂದ ಬಂದ ನಾರಣಣ್ಣ, ಎನ್ನ ಹೆಂಡತಿಯ ಟ್ರಂಕ್ ಮುಟತ್ಯನೇ.. ಎನ್ನ ಹೆಂಡತಿನ ಸಾಯಿಸ್ತ್ಯನೇ.. ಎಂದು ಒಂದೇ ಸಮವೆ ಕಲಾವತಕ್ಕನಿಗೆ ಸಿಕ್ಕಸಿಕ್ಕ ಕಡೆಯಲ್ಲೆಲ್ಲ ಜಪ್ಪತೊಡಗಿದ. ನೀನೇ ಸಾಯಿಸಿದ್ದು… ಎಂದು ಅವಳನ್ನು ಹೊಡೆದು ಹೊಡೆದು, ಅವಳು ಅಲ್ಲಿಂದ ಓಡಿಹೋದರೂ ಎದುರಿಗಿದ್ದ ಗೋಡೆಗೇ ಸಾಯಿಸ್ತ್ಯ ಎನ್ನ ಹೆಂಡತಿಯನ್ನು ಎಂದು ತುಂಬ ಹೊತ್ತಿನತನಕ ಹೊಡೆಯುತ್ತಲೇ ಇದ್ದ. ಕೊನೆಗೊಮ್ಮೆ ಸುಸ್ತಾಗಿ ಅಳುತ್ತ ಅಲ್ಲೇ ಕುಸಿದು ಬಿದ್ದ.

ಹೀಗೆ ನಾರಣಣ್ಣನ ಹುಚ್ಚಾಟವನ್ನು ಸಹಿಸಿಕೊಂಡೇ ತನ್ನ ಬದುಕಿರುವ ಮಕ್ಕಳನ್ನು ಬೆಳೆಸುತ್ತಿದ್ದಳು. ಹೀಗಿರುವಾಗಲೆ ಒಂದಿನ ನಾರಣಣ್ಣ ನೇಣುಹಾಕಿಕೊಂಡು ಸತ್ತ. ಮನೆಯ ಮಧ್ಯದ ಕತ್ತಲ ಕೋಣೆಯಲ್ಲಿ, ಅಲ್ಲಿ ಯಾರಿದ್ದಾರೆಂದೂ ತಿಳಿಯದ ಹಾಗಿರುವ ಆ ಕತ್ತಲ ಕೋಣೆಯಲ್ಲಿ ನೇಣುಹಾಕಿಕೊಂಡು ಸತ್ತಿದ್ದ. ಅಲ್ಲಿ ಅವ ನೇಣು ಹಾಕಿಕೊಳ್ಳುತ್ತಿದ್ದರೆ ಸ್ವತಃ ಕಲಾವತಕ್ಕನೇ ನೋಡಿದ್ದರೂ ತಿಳಿಯುತ್ತಿರಲಿಲ್ಲ ಅಷ್ಟು ಕತ್ತಲಿತ್ತು. ಅಂಥ ಕೋಣೆಯಲ್ಲಿ ನೇಣುಹಾಕಿಕೊಂಡು ಅವ ಸತ್ತದ್ದನ್ನು ಮೊದಲು ನೋಡಿದ್ದೇ ಕಲಾವತಕ್ಕ.

ಆದರೆ ವಿಶೇಷ ಎಂದರೆ ಅವ ಸತ್ತು ಅವನ ನೇಣಿನ ಹಗ್ಗವನ್ನು ಕತ್ತರಿಸಿ ಕೆಳಗಿಳಿಸಿ, ಅಂಗಳಕ್ಕೆ ತಂದು ಚಟ್ಟದ ಮೇಲೆ ಮಲಗಿಸಿ ನೀರು ಹಾಕಿ, ನಂತರ ಸುಡುವವರೆಗೂ ಕಲಾವತಕ್ಕ ಒಂದೇ ಒಂದು ಹನಿ ಕಣ್ಣೀರೂ ಹಾಕದಿದ್ದದ್ದು. ಮತ್ತೂ ವಿಚಿತ್ರವೆಂದರೆ ಅವ ಸತ್ತ ಕೆಲವೇ ವರ್ಷಗಳಲ್ಲಿ ಅವರ ಮನೆಯೊಳಗೆ ಎರಡು ಸಾವು ಸಂಭವಿಸಿದ್ದು. ಈ ಎರಡೂ ಸಾವೂ ಅದೇ ಕತ್ತಲ ಕೋಣೆಯಲ್ಲೇ ನೇಣುಹಾಕಿಕೊಂಡೇ ಸತ್ತದ್ದು. ಅವಳ ಮೂರನೇ ಮಗ ದಿವಾಕರ ಮೊದಲಿನಿಂದಲೂ ಸ್ವಲ್ಪ ಮಂಕಾಗಿಯೇ ಇರುತ್ತಿದ್ದ. ಅವ ನೇಣುಹಾಕಿಕೊಂಡು ಸತ್ತಾಗ ಅಪ್ಪನಂತೆಯೇ ಮಗ, ಹುಚ್ಚಲ್ಲೂ, ಸಾವಿನಲ್ಲೂ ಎಂದು ಎಲ್ಲರೂ ಹಗುರವಾಗಿ ಮಾತನಾಡಿಕೊಂಡರು. ಆದರೆ ಕಲಾವತಕ್ಕ ಇದ್ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಂತೆ ಅನಿಸಲಿಲ್ಲ.

ಈಗ ಮಕ್ಕಳೆಲ್ಲ ದೊಡ್ಡವರಾಗಿ ಶಾಲೆ, ಹೈಸ್ಕೂಲಿಗೆ ಹೋಗುತ್ತಿದ್ದರು. ಹೀಗೆ ಹೈಸ್ಕೂಲಿಗೆ ಹೋಗುತ್ತಿದ್ದ ಮತ್ತೊಬ್ಬ ಮಗ ಕಮಲಾಕರ ನೇಣುಹಾಕಿಕೊಂಡು ಸತ್ತಾಗ ಮಾತ್ರ ಎಲ್ಲರಿಗೂ ಆಶ್ಚರ್ಯ. ಅದ್ಹೇಗೆ ಅವರ ಮನೆಯಲ್ಲಿ ಇಷ್ಟೊಂದು ಸಾವುಗಳು ಸಂಭವಿಸುತ್ತಿವೆ. ಒಬ್ಬರಾಗುತ್ತಿದ್ದಂತೆ ಒಬ್ಬರು ಸರಣಿ ನೇಣು ಸಾವು. ಇನ್ನೊಂದು ವಿಶೇಷವೆಂದರೆ ಕಲಾವತಕ್ಕನ ಇಬ್ಬರು ಹೆಣ್ಣುಮಕ್ಕಳು ಸರಿಯಾಗಿಯೇ ಇದ್ದರು. ಸತ್ತವರೆಲ್ಲ ಹುಡುಗರೇ ಆಗಿದ್ದರು ಎಂಬುದು. ಆದರೆ ಅವರೆಲ್ಲ ಸಾಯುವಾಗಲೂ ಕಲಾವತಕ್ಕ ಅಳಲಿಲ್ಲ. ಅವಳ ಮೂರನೇ ಮಗ ನೇಣು ಹಾಕಿ ಸತ್ತಾಗ ಅಂಥ ಮೇರು ಘಟ ಮಂಜಹೆಗಡೇರು ಉಡುಗಿ ಹೋಗಿದ್ದರು. ಅಷ್ಟೊತ್ತಿಗೆ ಮಂಜಹೆಗಡೇರ ಮೊದಲಿನ ದರ್ಬಾರು ಇರಲಿಲ್ಲ. ಮನೆಯೊಳಗೇ ಮೂಲೆಗುಂಪಾಗಿ, ಕಲಾವತಿಗೂ ಅವರಿಗೂ ಮಾತುಕತೆಯೇ ಇರಲಿಲ್ಲ. ನಿರ್ಲಿಪ್ತವಾಗಿ ಮನೆಯ ಇತರರಿಗೆ ಅಡುಗೆ ಮಾಡಿ ಹಾಕುವಂತೆ ಅವರಿಗೂ ಹಾಕುತ್ತಿದ್ದಳಷ್ಟೆ.

ಮಂಜ ಹೆಗಡೇರು ಮೊಮ್ಮಕ್ಕಳ ಮೂಲಕವೇ ಎಲ್ಲ ಕೆಲಸ ಮಾಡಿಸಿಕೊಳ್ಳುತ್ತಿದ್ದರೇ ವಿನಾ ಎಂದಿಗೂ ಕಲಾವತಿಯ ಮುಖ ನೋಡುವ ಧೈರ್ಯವನ್ನೂ ಮಾಡಿದವರಲ್ಲ. ಸುತ್ತ ಇರುವ ಹತ್ತಾರು ಹಳ್ಳಿಗಳನ್ನು ನಡುಗಿಸಿ ಇಟ್ಟುಕೊಂಡ ಮಂಜಹೆಗಡೇರಿಗೆ, ನಾರಣಣ್ಣ ಸತ್ತು, ಕಲಾವತಿಯ ಇಬ್ಬರು ಮಕ್ಕಳು ಸತ್ತು, ಅವಳ ಮಗ ನಾಪತ್ತೆಯಾಗಿ, ಅವಳ ಅಳುವು ಹೆಚ್ಚಾದಂತೆಲ್ಲ ಅವಳ ಮುಖವನ್ನು ನೋಡುವ ಧೈರ್ಯವೇ ಬರುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇಡೀ ಊರು ಮಂಜ ಹೆಗಡೆರಿಗೆ ಗೌರವ ಕೊಡುತ್ತಿದ್ದರೂ ಕಲಾವತಕ್ಕ ಮಾತ್ರ ಅವರಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ತನಗೆ ಬೇಕಾದಹಾಗೆ ಇರತೊಡಗಿದಳು. ಹಾಗೆ ಮೂರನೇ ಮಗನೂ ಸತ್ತಾಗ ಮಂಜಹೆಗಡೇರು, ಕಲಾವತೀ.. ಎಂದು ಕರೆದರು. ಈ ಸಾವುಗಳೆಲ್ಲ ನಿಲ್ಲೋದ್ಯಾವಾಗ ಕಲಾವತೀ… ಎಂದು ವಿಚಿತ್ರವಾಗಿ ಕೇಳಿದರು. ಅವರನ್ನು ಅಷ್ಟೇ ವಿಚಿತ್ರವಾಗಿ ನೋಡಿದ ಕಲಾವತಿ ಹಾಲಿ… ಹೆಗಡೇರಿಗೊಂದಷ್ಟು ಹೊಗೆಸೊಪ್ಪು ತೊಳಕಬಂದು ಕೊಡು ಎಂದು ಹೇಳಿ ಎದ್ದಳು. ಹಾಲಿ ಮಾತ್ರ ನಿರ್ಲಿಪ್ತವಾಗಿ ಕೊಟ್ಟಿಗೆ ಕೆಲಸಕ್ಕೆ ಹೋದಳು ಏನೂ ಆಗಿಯೇ ಇಲ್ಲವೆಂಬಂತೆ.

ಹೀಗೇ ಇದ್ದ ಮಂಜಹೆಗಡೇರು ಅಲ್ಲಿಂದ ಮುಂದೆ ತುಂಬ ಜೀರಾಗಿ ಮಲಗಿದವರು ಮತ್ತೆ ಮೇಲೇಳಲಿಲ್ಲ. ಅವರ ಅಂತ್ಯಕರ್ಮವನ್ನೆಲ್ಲ ಇದೇ ಶ್ರೀಪಾದನೇ ಮಾಡಿಮುಗಿಸಿದ. ಆಗಲೂ ಕಲಾವತಕ್ಕ ಅಳಲಿಲ್ಲ. ಅಷ್ಟರ ನಂತರ ಅವರ ಮನೆಯಲ್ಲಿ ಯಾರೂ ಸಾಯಲಿಲ್ಲ. ಮಂಜಹೆಗಡೇರಿಗೇ ಕೊನೆಯಾಯಿತು ಸರಣಿ ಸಾವುಗಳು.

ಹೆಣ್ಣುಮಕ್ಕಳಿಬ್ಬರನ್ನೂ ಒಳ್ಳೆಯ ಕಡೆಗೆ ಮದುವೆಮಾಡಿ ಕೊಟ್ಟಿದ್ದಳು. ಅವರ ಮಕ್ಕಳ ಬಾಣಂತನ ಮಾಡಿಕೊಂಡು ಇದ್ದ ಒಬ್ಬ ಮಗನನ್ನು ನೋಡಿಕೊಂಡು ಆರಾಮವಾಗಿದ್ದರೂ, ಅವಳು ಈಗಲೂ ಅಳುವುದು ಜೋರು ಮಳೆ ಬಂದಾಗ, ಗುಡುಗು ಸಿಡಿಲು ಜೋರಾದಾಗ ಮಾತ್ರ, ಮಳೆಯಂತೆಯೇ ಅವಳ ಕಣ್ಣುಗಳಲ್ಲಿ ನೀರು ಸುರಿಯುತ್ತದೆ. ಆಗೆಲ್ಲ ಒಂದೂ ಕೆಲಸ ಮಾಡದೆ ಒಂದು ಮೂಲೆಯಲ್ಲಿ ಅಳುತ್ತ ಕುಳಿತು ಬಿಡುತ್ತಾಳೆ.