ಆತ ಆಗಾಗ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಸುಮ್ಮನೆ ಊಟಮಾಡಬೇಕಲ್ಲ ಎಂಬ ಸ್ವಾಭಿಮಾನದ ಧೋರಣೆ ಆತನದ್ದಿರಬೇಕು. ಮನೆಯಲ್ಲಿ ಮಲಗು ಎಂದು ಎಷ್ಟು ಹೇಳಿದರೂ ಆತ ಕಿರಾಣಿ ಅಂಗಡಿಯ ಬಾಗಿಲ ಮುಂದೆಯೇ ಮಲಗುತ್ತಿದ್ದ. ಯಾಕೆಂದು ನಮಗೂ ತಿಳಿಯಲಿಲ್ಲ. ಅಡಿಗೆ ಆದಮೇಲೆ ನಾನೆ ತೆಗೆದುಕೊಂಡು ಹೋಗಿ ಕೊಡುತಿದ್ದೆ. ಊಟ ಮಾಡುತ್ತಿದ್ದ. ಮಾತಿಗಿಂತ ಮೌನವೆ ಹೆಚ್ಚು. ಆತನ ಮುಖವು ಈಗಲೂ ನನಗೆ ಅಸ್ಪಷ್ಟ. ತಾತ ಎಂದರೆ ಹೂ ಎನ್ನುತ್ತಿದ್ದ ಅನ್ನುವುದನ್ನು ಬಿಟ್ಟರೆ ಬೇರೆ ಏನು ಮಾತನಾಡುತ್ತಿರಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

ನನಗೆ ಚಿಕ್ಕಂದಿನಿಂದಲೂ ಸಂಬಂಧಗಳೆಂದರೆ ಬೆರಗು ಮೂಡಿಸುವಂತಹ ವಿಷಯವೆ ಆಗಿತ್ತು. ಜಾತಿಯ ಕಲ್ಪನೆಯೆ ಇಲ್ಲದೆ ನಿಷ್ಕಲ್ಮಶ ಮನಸ್ಸಿನ ಬಾಲ್ಯದಲ್ಲಿ ಎಲ್ಲರೂ ಸಂಬಂಧಿಗಳೆ ಯಾರಿಗೂ ಯಾವ ನಿರ್ಬಂಧದ ಸೋಗು ಇರುವುದಿಲ್ಲ. ಅದಕ್ಕೆ ಬಾಲ್ಯವೆಂದರೆ ಸ್ವಚ್ಛಂದ ಸಮೃದ್ಧ ಬದುಕು ಎಂಬುದೆ ನನ್ನ ಭಾವನೆ. ಹೆಚ್ಚು ಹೆಚ್ಚು ಓದಿದಂತೆಲ್ಲಾ ವಿಶಾಲ ಮನೋಭಾವದ ಮನಸ್ಸುಳ್ಳವರಾಗಬೇಕಾದ ನಾವು ಸಂಕುಚಿತರಾಗಿ ಮಾನವೀಯ ಮೌಲ್ಯವನ್ನು ಕಳೆದುಕೊಂಡು ಬದುಕಬೇಕಾದ ಸ್ಥಿತಿಗೆ ಬಂದುಬಿಡುತ್ತೇವಲ್ಲ ಅದೆ ವಿಪರ್ಯಾಸ. ಕೆಲವು ಸಂಬಂಧಗಳು ಅಳಿದು ಹೋಗುವ ಮುನ್ನ ಬದುಕಿನ ಋಣದ ಅಸಲನ್ನು ನಮಗರಿವಿಲ್ಲದೆಯೆ ತೀರಿಸಿಯೋ ಇಲ್ಲ ನೆನಪಿನ ಹಂಗನ್ನು ಉಳಿಸಿಯೊ ಹೋಗಿಬಿಡುತ್ತಾರೆ. ಹೌದಲ್ಲವೆ ಎಂದು ನೆನಪಿಸಿಕೊಳ್ಳುವ ಹೊತ್ತಿಗೆ ಬದುಕು ಖಾಲಿ ಖಾಲಿಯಾಗಿರುತ್ತದೆ. ಅವರು ಉಳಿಸಿ ಹೋದ ಸಂಬಂಧದ ಘಮ ಮಾತ್ರ ನಮ್ಮಲ್ಲಿ ಉಳಿದಿರುತ್ತದೆ.

ನನ್ನಮ್ಮನ ಸಂಬಂಧದಲ್ಲಿ ಅವರಪ್ಪನಿಗೆ ಇದ್ದದ್ದು ಒಬ್ಬನೆ ತಮ್ಮ. ಹೆಸರು ಕೃಷ್ಣಪ್ಪ ಅಂತಾ. ಅಮ್ಮ ಯಾವಾಗಲೂ ಹೇಳುತ್ತಿದ್ದಳು. ಇವರಿಬ್ಬರಿಗೆ ಒಬ್ಬಳು ತಂಗಿಯೂ ಇದ್ದಳು. ಆದರೆ ಯಾವುದೊ ಖಾಯಿಲೆಗೆ ತುತ್ತಾಗಿ ಮಧ್ಯವಯಸ್ಸಿನಲ್ಲಿಯೆ ತೀರಿಕೊಂಡಳು. ಎಲ್ಲವೂ ವಿಧಿ… ಎಂದು ಆಗಾಗ ಅಮ್ಮ ಶಪಿಸುತ್ತಾಳೆ. ಉಳಿದಂತೆ ನನ್ನಮ್ಮನ ಚಿಕ್ಕಪ್ಪ ಇದ್ದ ಎಂದು ಆಗಾಗ ಹೇಳುತ್ತಿದ್ದಳು. ನಾವು ಎಂದೂ ಅವರ ಮುಖವನ್ನು ನೋಡಿರಲಿಲ್ಲ. ನಾವೆಲ್ಲ ಚಿಕ್ಕವರು. ನಮ್ಮ ತಾತನು ಬಹಳ ಹಿಂದೆಯೆ ತೀರಿಕೊಂಡಿದ್ದ. ನಾವು ನಮ್ಮ ತಾತನ ಮುಖವನ್ನೆ ನೋಡಿಲ್ಲ. ನಾನು ನನ್ನ ತಮ್ಮ ತಾತ ಸತ್ತಮೇಲೆ ಹುಟ್ಟಿದವರು. ಹಾಗಾಗಿ ಅವರನ್ನು ನೋಡುವ ಅವಕಾಶವಿನ್ನೆಲ್ಲಿ ನಮಗೆ. ದುರಾದೃಷ್ಟಕ್ಕೆ ಮನೆಯಲ್ಲಿ ಒಂದು ಪಟವು ಇಲ್ಲದ್ದು ನೆನಪಿಸಿಕೊಂಡಾಗ ಭಾವನೆಗಳೆಲ್ಲವು ನೀರಾಗಿ ಹರಿಯುವುದುಂಟು. ಅಯ್ಯೋ ಅವರ ಪಟವಿದ್ದರೆ ಹೇಗಿದ್ದರೆಂದು ತಿಳಿಯುತ್ತಿತ್ತಲ್ಲ ಎಂದುಕೊಂಡು ಸುಮ್ಮನಿರುತ್ತಿದ್ದೆವು.

ನಮ್ಮಮ್ಮನ ಸಂಬಂಧದಲ್ಲಿ ಕೆಲವರಷ್ಟೆ ಗೊತ್ತಿತ್ತು. ಹಬ್ಬಹರಿದಿನಗಳಲ್ಲಿ ಹೋಗಿ ಬಂದು ಮಾಡುವ ಸಂಬಂಧಗಳಷ್ಟೆ ಉಳಿಯುತ್ತವೆ. ಉಳಿದವು ಹೇಳ ಹೆಸರಿಲ್ಲದಂತೆ ಮನ ಮನೆಯಿಂದ ದೂರವಾಗಿಬಿಡುತ್ತವೆ. ಎಷ್ಟು ವಿಚಿತ್ರವಲ್ಲವೆ ಈ ಮನುಷ್ಯ ಜಗತ್ತು ಎನಿಸುವುದುಂಟು. ಸಂಬಂಧವಲ್ಲದ ಸಂಬಂಧಗಳು ಹತ್ತಿರವಾದಾಗ ಚಕಿತರಾಗುವುದುಂಟು. ಎರಡೂ ಮನುಷ್ಯನ ಭಾವಕೋಶಕ್ಕೆ ಸಂಬಂಧಿಸಿದವುಗಳಾಗಿದ್ದರೂ ಸಹ ಅವನ್ನು ಉಳಿಸಿಕೊಳ್ಳುವ ಅಥವಾ ಬಿಡುವ ಕೆಲಸ ನಮ್ಮಿಂದಲೇ ಆಗಬೇಕಲ್ಲವೆ.

ಹೀಗಿರುವಾಗಲೆ ಬೇಸಿಗೆಯ ದಿನಗಳು.. ನಮ್ಮಪ್ಪನು ಒಂದು ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದ. ಇಡಿ ಊರಿಗೆ ಇದ್ದದ್ದು ಇದೊಂದೆ ಅಂಗಡಿ. ವ್ಯಾಪಾರ ಸ್ವಲ್ಪ ಚೆನ್ನಾಗಿಯೇ ನಡೆಯುತ್ತಿತ್ತು. ಬೆಳಗಿನ ಸಮಯದಲ್ಲಿ ಚಹಾಕ್ಕೆ ಬಹಳ ಬೇಡಿಕೆ ಇತ್ತು. ಹಾಗಾಗಿ ನಮ್ಮಪ್ಪ ಮುಂಜಾನೆ ಐದಕ್ಕೆಲ್ಲ ಎದ್ದು ಬಿಸಿ ಬಿಸಿ ಚಹಾ ತಯಾರಿಸಿ ಗಿರಾಕಿಗಳಿಗೆ ಕಾಯುವುದು ಅವನ ದಿನಚರಿಯಾಗಿತ್ತು. ಎಂದಿನಂತೆ ಆ ದಿನವೂ ಅಂಗಡಿಯ ಬಾಗಿಲನ್ನು ತೆಗೆಯಲು ಹೋದಾಗ ಅಂಗಡಿಯ ಬಾಗಿಲಲ್ಲಿಯೆ ಯಾರೊ ಮಲಗಿರುವುದು ಕಂಡಿದೆ. ಅಪ್ಪ ಮೊದಲು ಗಾಬರಿಯಾದವನು ನಿಧಾನಕ್ಕೆ ಹತ್ತಿರ ಹೋಗಿ ನೋಡಿದ್ದಾನೆ. ಹಾಗೆ ನೋಡಿದಾಗ ಅವರು ಜೀವಂತವಿರುವುದು ಕಂಡು ನಿಟ್ಟುಸಿರು ಬಿಟ್ಟಿದ್ದಾನೆ. ನಂತರ ಲೈಟಾಕಿ ನೋಡಿದಾಗಲೆ ತಿಳಿದದ್ದು ನಮ್ಮಮ್ಮನ ಚಿಕ್ಕಪ್ಪನೆಂದು. ಅಗ ಎಲ್ಲರಿಗೂ ಆಶ್ಚರ್ಯ. ನಮಗಂತೂ ಪರಮಾಶ್ಚರ್ಯ. ಅರೆ ನಾವೆಂದೂ ಇವರನ್ನು ನೋಡೆ ಇಲ್ಲವಲ್ಲ. ಇವರು ಹೇಗೆ ಬಂದರು ಯಾಕೆ ಬಂದರು ಎಂಬೆಲ್ಲ ಪ್ರಶ್ನೆಗಳು ನಮಗೆ ಮೂಡುತ್ತಿದ್ದರೆ ನಮ್ಮಮ್ಮನೆ ಪ್ರಶ್ನಾರ್ಥಕವಾಗಿ ಚಿಕ್ಕಪ್ಪನನ್ನು ನೋಡುತ್ತಿದ್ದಳು. ಅದಕ್ಕೆ ಕಾರಣವೂ ಇತ್ತು.

ಈ ಮೊದಲು ತಿಳಿಸಿದಂತೆ ಕೃಷ್ಣಪ್ಪ ಅಂತ ಅವರ ಹೆಸರು. ಆದರೆ ಜನರು ಕಿಟ್ಟಪ್ಪ ಎಂದೆ ಕರೆಯುತ್ತಿದ್ದರೆಂದು ಅಮ್ಮ ಹೇಳುತ್ತಿದ್ದ ನೆನಪು. ಆತ ಊರೂರು ಅಲೆಯುವವ. ಮದುವೆಯೂ ಆಗಿರಲಿಲ್ಲ. ಹಾಗಾಗಿ ಆತನನ್ನು ಮನೆಯವರೆಲ್ಲ ಮರೆತೆ ಬಿಟ್ಟಂತೆ ಬದುಕುತ್ತಿದ್ದರು. ಆತನು ಯಾವಾಗಲೊ ಒಮ್ಮೆ ಬರುತ್ತಿದ್ದ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ವಾಪಸ್ ಹೋಗುತ್ತಿದ್ದ. ನನಗೆ ಬುದ್ದಿ ತಿಳಿದಾಗಿನಿಂದಲೂ ಎಂದೂ ಆತನನ್ನು ನೋಡಿರಲಿಲ್ಲ ಅಥವಾ ಆತ ನಮ್ಮ ಮನೆಗೆ ಬಂದೆ ಇರಲಿಲ್ಲ. ಸುಮಾರು ಹತ್ತು ಹದಿನೈದು ವರ್ಷಗಳೆ ಆಗಿತ್ತು ಅಮ್ಮ ಅವರನ್ನು ಕಂಡು. ಹಾಗಾಗಿ ಆತನ ಮುಖವನ್ನೆ ಅಮ್ಮ ಮರೆತಿದ್ದಳು. ಆದ್ದರಿಂದ ಬಿಟ್ಟಕಣ್ಣು ಬಿಟ್ಟಂತೆ ಆಶ್ಚರ್ಯವಾಗಿ ಅವನನ್ನು ನೋಡುತ್ತಿದ್ದಳು. ಆತನ ದೇಹವನ್ನು ಹರಿದ ಬಟ್ಟೆಗಳು ಮುಚ್ಚಿದ್ದವು. ಅಲ್ಲಲ್ಲಿ ಹರಿದ ಬಟ್ಟೆಗಳನ್ನು ನೋಡಿ ಎಲ್ಲರ ಮನಸ್ಸು ಚುರುಕ್ ಎಂದಂತಾಯಿತು. ಆ ಕ್ಷಣಕ್ಕೆ ಅಪ್ಪನ ಬಟ್ಟೆಗಳನ್ನೆ ಆತನಿಗೆ ಕೊಡಲಾಯಿತು. ಆತನನ್ನು ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ಬಟ್ಟೆ ಹಾಕಲಾಯಿತು. ಊಟ ಮಾಡಿ ಎಷ್ಟು ದಿನವಾಯಿತೊ ಎಂದು ಊಟ ಬಡಿಸಿದರೆ ಒಂದು ಮಾತನಾಡದೆ ಹೊಟ್ಟೆ ತುಂಬಾ ಉಂಡನು. ಯಾರೊಂದಿಗು ಮಾತಿಲ್ಲ. ಅಡುಗೆ ಮಾಡುವುದಕ್ಕೆ ಕಟ್ಟಿಗೆ ಕಡಿದು ಕೊಡಲೆ ಎಂದು ಕೇಳುತಿದ್ದ. ಬೇಡ ಎಂದೇ ಮನೆಯಲ್ಲಿ ಹೇಳುತ್ತಿದ್ದರು. ಮನೆಯಲ್ಲಿಯೂ ಆತನು ಇರುವಷ್ಟು ದಿನ ಇರಲಿ ಆತನನ್ನು ಪ್ರಶ್ನೆ ಮಾಡುವುದು ಬೇಡ ಎಂದುಕೊಂಡು ಸುಮ್ಮನಾದರು.

ನಮ್ಮ ತಾತನು ಬಹಳ ಹಿಂದೆಯೆ ತೀರಿಕೊಂಡಿದ್ದ. ನಾವು ನಮ್ಮ ತಾತನ ಮುಖವನ್ನೆ ನೋಡಿಲ್ಲ. ನಾನು ನನ್ನ ತಮ್ಮ ತಾತ ಸತ್ತಮೇಲೆ ಹುಟ್ಟಿದವರು. ಹಾಗಾಗಿ ಅವರನ್ನು ನೋಡುವ ಅವಕಾಶವಿನ್ನೆಲ್ಲಿ ನಮಗೆ. ದುರಾದೃಷ್ಟಕ್ಕೆ ಮನೆಯಲ್ಲಿ ಒಂದು ಪಟವು ಇಲ್ಲದ್ದು ನೆನಪಿಸಿಕೊಂಡಾಗ ಭಾವನೆಗಳೆಲ್ಲವು ನೀರಾಗಿ ಹರಿಯುವುದುಂಟು. ಅಯ್ಯೋ ಅವರ ಪಟವಿದ್ದರೆ ಹೇಗಿದ್ದರೆಂದು ತಿಳಿಯುತ್ತಿತ್ತಲ್ಲ ಎಂದುಕೊಂಡು ಸುಮ್ಮನಿರುತ್ತಿದ್ದೆವು.

ಆತ ಆಗಾಗ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಸುಮ್ಮನೆ ಊಟಮಾಡಬೇಕಲ್ಲ ಎಂಬ ಸ್ವಾಭಿಮಾನದ ಧೋರಣೆ ಆತನದ್ದಿರಬೇಕು. ಮನೆಯಲ್ಲಿ ಮಲಗು ಎಂದು ಎಷ್ಟು ಹೇಳಿದರೂ ಆತ ಕಿರಾಣಿ ಅಂಗಡಿಯ ಬಾಗಿಲ ಮುಂದೆಯೇ ಮಲಗುತ್ತಿದ್ದ. ಯಾಕೆಂದು ನಮಗೂ ತಿಳಿಯಲಿಲ್ಲ. ಅಡಿಗೆ ಆದಮೇಲೆ ನಾನೆ ತೆಗೆದುಕೊಂಡು ಹೋಗಿ ಕೊಡುತಿದ್ದೆ. ಊಟ ಮಾಡುತ್ತಿದ್ದ. ಮಾತಿಗಿಂತ ಮೌನವೆ ಹೆಚ್ಚು. ಆತನ ಮುಖವು ಈಗಲೂ ನನಗೆ ಅಸ್ಪಷ್ಟ. ತಾತ ಎಂದರೆ ಹೂ ಎನ್ನುತ್ತಿದ್ದ ಅನ್ನುವುದನ್ನು ಬಿಟ್ಟರೆ ಬೇರೆ ಏನು ಮಾತನಾಡುತ್ತಿರಲಿಲ್ಲ. ಹೀಗೆಯೆ ಎಂಟತ್ತು ದಿವಸ ಕಳೆದ ಒಂದು ದಿನ ಆತನಿಗೆ ಜ್ವರ ಬಂತು. ಅಪ್ಪನೆ ಒಂದಿನ ವೈದ್ಯರಿಗೆ ತೋರಿಸಿ ಇಂಜೆಕ್ಷನ್ ಮಾಡಿಸಿದ. ಒಂದೆರಡು ದಿನ ಕಳೆದ ಮೇಲೆ ದಿಗ್ಗನೆದ್ದು ಓಡಾಡಲು ಶುರು ಮಾಡಿದ. ನಾನು ಚೆನ್ನಾಗಿದ್ದೇನೆ ಊರಿಗೆ ಹೋಗುತ್ತೇನೆ ಎಂದು ಹೊರಟ. ನಾವು ಇನ್ನೊಂದೆರಡು ದಿನ ಇರಬಹುದಿತ್ತು ಎಂದರೂ ಕೇಳದೆ ಹೊರಟುಹೋದ. ನಮಗರಿವಿಲ್ಲದೆಯೆ ಬಂದವನು ಹಾಗೆಯೆ ಹೋದನಲ್ಲಾ ಎಂದು ಎಲ್ಲರೂ ಸುಮ್ಮನಾದೆವು.

ಒಂದೆರಡು ದಿನ ಮನೆಯಲ್ಲಿ ಆತನ ಬಗ್ಗೆಯೆ ಮಾತು. ಒಂದೆರಡು ತಿಂಗಳು ಕಳೆದಿದ್ದವು; ಆತನ ಊರಿಂದ ಕಿಟ್ಟಪ್ಪ ಸತ್ತು ಹೋದನು ಎಂಬ ಸುದ್ದಿ ಬಂತು. ಆತ ಮೊದಲೆ ಊರೂರು ಅಲೆಯುತ್ತಿದ್ದವನು. ನಮ್ಮ ಮನೆಯಿಂದ ಹೊರಟವನು ಹಿರಿಯೂರು ಕಡೆ ಹೊರಟಿದ್ದಾನೆ. ಅಲ್ಲಿ ಮೊದಲು ಮಾಡುತ್ತಿದ್ದ ತೋಟ ಕಾಯುವ ಕೆಲಸಕ್ಕೆ ಹೋದವನು ಮತ್ತೆ ಆತನಿಗೆ ಜ್ವರ ಕಾಣಿಸಿಕೊಂಡು ವಾಪಸ್ ಊರಿಗೆ ಬಂದ ರಾತ್ರಿಯೆ ಆತ ತೀರಿಕೊಂಡಿದ್ದ. ಅಪ್ಪ ಅಂತ್ಯ ಸಂಸ್ಕಾರಕ್ಕೆ ಹೋಗಿಬಂದಿದ್ದಾಯಿತು. ಹತ್ತು ಹದಿನೈದು ವರ್ಷ ಕಾಣಿಸಿಕೊಳ್ಳದವನು ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಹತ್ತಾರು ದಿನಗಳ ಕಾಲ ಮನೆಯಲ್ಲಿ ಇದ್ದು ಮಗಳ ಋಣವನ್ನು ತೀರಿಸಿಕೊಂಡನೊ ಅಥವಾ ನೆನಪಿನ ಋಣವನ್ನು ಉಳಿಸಿ ಹೋದನೊ ಇವತ್ತಿಗೂ ಗೊತ್ತಿಲ್ಲ. ಋಣಾನುಬಂಧದ ಬಾಂಧವ್ಯ ಇಂಥದೊಂದು ಬೆರಗನ್ನು ಇಡೀ ಮನೆಯಲ್ಲಿ ಉಳಿಸಿಹೋಗಿದ್ದಂತು ನಿಜ.

*****

ಇನ್ನೊಂದು ಘಟನೆ ಹೇಳಬೇಕು. ನನ್ನಜ್ಜನಿಗೆ ಇಬ್ಬರು ಹೆಂಡತಿಯರು. ಮೊದಲನೆ ಹೆಂಡತಿಯದು ಆಂಧ್ರದ ಒಂದು ಹಳ್ಳಿ. ಆದರೆ ನೋಡಲು ಸ್ಪುರದ್ರೂಪಿ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ನಮ್ಮಜ್ಜ ಇಳಿ ವಯಸ್ಸಿನಲ್ಲಿ ಸಂಬಂಧದಲ್ಲಿ ಮದುವೆಯಾಗಿದ್ದ ನನ್ನ ಎರಡನೆ ಅಜ್ಜಿಗೆ ಇಬ್ಬರು ಮಕ್ಕಳಾದ ಮೇಲೆ ನಮ್ಮಜ್ಜ ತೀರಿಕೊಂಡಿದ್ದ. ನಮ್ಮಪ್ಪನಿಗೆ ಮದುವೆಯಾದ ಮೇಲೆ ಇಬ್ಬರೂ ಭಾಗವಾಗಿ ಇಬ್ಬರು ಅಜ್ಜಿಯಂದಿರು ಇಬ್ಬರ ಮನೆಯಲ್ಲಿಯೂ ಇರಬಹುದೆಂದು ತೀರ್ಮಾನವಾಗಿದ್ದರೂ ಮೊದಲನೆ ಅಜ್ಜಿ ನಮ್ಮ ಜೊತೆ ಇರುತ್ತೇನೆಂದು ನಮ್ಮ ಜೊತೆಗೆ ಇದ್ದಳು. ಬಹಳ ಪ್ರೀತಿಯಿಂದಲೇ ಅವಳು ನಮ್ಮನ್ನು ಸಾಕಿದ್ದಳು. ಆಗ ನಮ್ಮ ಮನೆಯಲ್ಲಿ ಬಡತನದ್ದೆ ಮೇಲುಗೈ. ಊಟಕ್ಕಿದ್ದರೆ ಬಟ್ಟೆಗಿಲ್ಲ ಎಂಬಂತಹ ಸ್ಥಿತಿ ಇದ್ದರೂ ಬದುಕು ನಡೆಯಲೇಬೇಕಾಗಿತ್ತು. ನಡೆಯುತ್ತಿತ್ತು.

ನನಗೆ ಬುದ್ದಿ ಬಂದಾಗ ಅಜ್ಜಿ ತೀರ ಸವೆದಿದ್ದಳು. ಹಾಗಾಗಿ ಎಲ್ಲಿಗೆ ಹೋಗಬೇಕಾದರೂ ಜೊತೆಯಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ವಯಸ್ಸಾದ ಕಾರಣವೊ ಏನೊ ಯಾವಾಗಲೂ ಮೊಣಕಾಲು ನೋವು ಎನ್ನುತ್ತಿದ್ದಳು. ಸಣ್ಣ ಪುಟ್ಟ ಕೆಲಸ ಮಾಡುತ್ತ ಅಮ್ಮನಿಗೆ ಸಹಾಯವಾಗಿದ್ದಳು. ನಮ್ಮ ಮೇಲೆ ಅನೂಹ್ಯವಾದ ಪ್ರೀತಿ ಆಕೆಗೆ ಹಬ್ಬ ಹರಿದಿನಗಳಲ್ಲಿ ನೆರೆಹೊರೆಯವರು ತಿನ್ನಲಿಕ್ಕೆ ಏನಾದರೂ ಕೊಟ್ಟರೆ ಅದನ್ನು ಹಾಗೆಯೆ ಬಚ್ಚಿಟ್ಟುಕೊಂಡು ನಮಗೆ ತಂದುಕೊಡುತ್ತಿದ್ದಳು. ಆಕೆಯ ಸಂಬಂಧಿಕರು ಎಂದು ಯಾರಾದರೂ ನಮ್ಮ ಮನೆಗೆ ಬಂದಿದ್ದು ನೆನಪಿಲ್ಲ. ಆಕೆಯು ಒಂದೆರಡು ಬಾರಿ ಮಾತ್ರ ಯಾರದ್ದೋ ಮನೆಗೆ ಹೋಗಿದ್ದು ಬಿಟ್ಟರೆ ಆಕೆಗೆ ನಮ್ಮ ಮನೆಯ ಮೇಲೆಯೆ ಹೆಚ್ಚು ಪ್ರೀತಿ. ನಾವು ಚಿಕ್ಕವರಿದ್ದಾಗ ನಮಗಂತು ಆಕೆಯ ತವರೂರಿನ ಬಗ್ಗೆ ಒಂದಿಷ್ಟೂ ಗೊತ್ತಿರಲಿಲ್ಲ. ದೊಡ್ಡವರಾದ ಮೇಲೆ ಆಕೆಯ ವಿವರಗಳು ಒಂದೊಂದಾಗಿ ನಮಗೂ ಅಮ್ಮನಿಂದ ತಿಳಿದವು. ಆಕೆ ಸಾಯುವ ಒಂದೆರಡು ತಿಂಗಳು ಮುಂಚೆ ಮಾತ್ರ ಹಠಮಾಡಿ ತೌರಿಗೆ ಹೋಗಿದ್ದಳಂತೆ. ಅಪರೂಪಕ್ಕೆ ಹೋಗುತ್ತಿದ್ದಾಳೆ ಹೋಗಲಿ ಬಿಡು ಎಂಬುದು ಮನೆಯವರ ಇರಾದೆಯಾಗಿತ್ತು. ಈ ಬಾರಿ ಆಸೆಪಟ್ಟು ಅಜ್ಜಿಯೆ ಹೋಗಿದ್ದಳು. ಒಂದು ತಿಂಗಳಾದರೂ ಇದ್ದು ಬರುತ್ತಾಳೆ ಎಂದುಕೊಂಡಿದ್ದರು ಮನೆಯವರೆಲ್ಲ. ಆದರೆ ಅಚ್ಚರಿಯೆಂಬಂತೆ ಮೂರೆ ದಿನಕ್ಕೆ ವಾಪಾಸ್ಸಾಗಿದ್ದಳು. ಇನ್ನಷ್ಟು ದಿನ ಇದ್ದು ಬರಬಹುದಾಗಿತ್ತು ಎಂದರೆ ಸಾಕು ಎಷ್ಟು ದಿನ ಇದ್ದರು ನಮ್ಮ ಮನೆಯಲ್ಲಿದ್ದಂತಾಗುತ್ತದೆಯೆ ಎಂದು ಮರುಪ್ರಶ್ನೆ ಹಾಕಿದ್ದಳು. ಅಜ್ಜಿಗೆ ನಮ್ಮ ಮನೆಯ ಮೇಲಿರುವ ಪ್ರೀತಿಗೆ ಮನೆಯವರೆಲ್ಲ ಒಳಗೊಳಗೆ ಸಂತಸಪಡುತ್ತಿದ್ದರು.

ಇದಾಗಿ ಒಂದು ತಿಂಗಳು ಕಳೆದಿರಬೇಕು ಅಜ್ಜಿಗೆ ಜ್ವರ ಬಂದು ಹಾಸಿಗೆ ಹಿಡಿದಳು. ಮತ್ತೆ ಚೇತರಿಸಿಕೊಂಡಳು. ಬೇರೆ ಮನೆಯಿಂದ ಹಬ್ಬದ ಹೋಳಿಗೆಯನ್ನು ಪಡೆದು ತಂದದ್ದಕ್ಕೆ ಅಪ್ಪನೊಂದಿಗೆ ಜಗಳವಾಡಿ ಆಕಸ್ಮಿಕವಾಗಿ ಹಟ್ಟಿಯಂಗಳದಲ್ಲಿ ಬಿದ್ದು ಕಾಲಿಗೆ ಒಂದಿಷ್ಟು ಪೆಟ್ಟಾಯಿತು. ಅದರ ನೋವಿಗೆ ಜ್ವರ ಬಂದು ಮಲಗಿದವಳು ಮತ್ತೆ ಮೇಲೇಳಲಿಲ್ಲ. ತವರಿಗೆ ಹೋಗದೆ ಇದ್ದವಳು ಆಸೆ ಪಟ್ಟು ಹೋಗಿ ಬಂದ ಒಂದು ತಿಂಗಳಲ್ಲೆ ತೀರಿಕೊಂಡಳಲ್ಲ. ಅವಳಿಗೆ ಸಾವಿನ ಮುನ್ಸೂಚನೆ ಏನಾದರೂ ಸಿಕ್ಕಿತ್ತಾ ಗೊತ್ತಿಲ್ಲ. ಉಳಿದ ತವರಿನ ಋಣ ತೊರೆಯಲು ಹೋಗಿದ್ದಳಾ. ಇಲ್ಲ ತವರಿನ ನೆನಪಿನ ಋಣವನ್ನು ತನ್ನೊಳಗೆ ಜತನವಾಗಿಸಿಕೊಂಡು ವಿದಾಯ ಹೇಳಿ ಹೊರಟಳಾ ಹೇಳಲು ಅಜ್ಜಿಯು ಇಲ್ಲ ತವರಿನ ಯಾವ ಸಂಬಂಧಗಳು ಉಳಿದಿಲ್ಲ. ಇವೆರಡು ಘಟನೆಗಳು ನನ್ನ ಮನಸ್ಸನ್ನು ಸದಾ ಕಾಡುತ್ತಿರುತ್ತವೆ. ಸಾಕ್ರಟೀಸನ ಋಣದ ಹುಂಜದಂತೆ…!?

(ಮುಂದುವರಿಯುವುದು)