ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.
ಶಿವಕುಮಾರ ಮೋ. ಕರನಂದಿ ಗಜ಼ಲ್‌ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ

ಬಿಳಿ ಬಟ್ಟೆ ಹೊಲಿಯುವ ಸಿಂಪಿಗ ನಾನು
ಭಾವನೆ ಬಿರುಕಿಗೆ ಸೂಜಿ ಹೊಲಿಯಲಾಯಿತೆ

ಘಾಸಿ ಮಾಡದೆ ಧ್ಯಾನಕೆ ಕರೆಯುವ ಮಿತ್ರ
ಜ್ಞಾನ ಸಖಿಯಂತೆ ಮಾಡುವುದು ಹೊತ್ತಿಗೆ – ಶಿವಕುಮಾರ ಕರನಂದಿ

ಗಜ಼ಲ್ ಅರಬ್ಬೀ ಶಬ್ದ. ಇದು ಆ ಭಾಷೆಯಲ್ಲಿ ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ; ಈ ಶಬ್ಧ ಇರಾನ್ ದೇಶದಲ್ಲಿ ಪಸರಿಸಿ ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆದು ಬೆಳಗಿತು. ಪಾರ್ಸಿ ಭಾಷೆಯಿಂದ ಉರ್ದು ಸಾಹಿತ್ಯಕ್ಕೆ ಬಂದು ತನ್ನ ಹರವನ್ನು ಹೆಚ್ಚಿಸಿಕೊಂಡು ಉರ್ದು ಸಾಹಿತ್ಯದ ರಾಣಿಯಾಗಿ ಸಹೃದಯನ ಎದೆಯ ಸಿಂಹಾಸವನ್ನು ಏರಿತು. ಉರ್ದುವಿನಲ್ಲಿ 25ಕ್ಕೂ ಅಧಿಕ ಕಾವ್ಯ ಪ್ರಕಾರಗಳುಂಟು; ಪರ್ದ, ಕತಾ, ರುಬಾಯಿ, ಖಸೀದಾ, ಮಸನವಿ, ಗಜ಼ಲ್, ಮರ್ಸಿಯಾ, ಶಹರ್, ಅಶೋಬ, ನಾತೆ, ಸೆಹರ, ರೀಖ್ತಿ, ಸಾಕಿನಾಮ ಈ ಎಲ್ಲ ಪ್ರಕಾರಗಳಿದ್ದರು ಗಜ಼ಲ್ ಉರ್ದು ಸಾಹಿತ್ಯದ ಉಸಿರಾಗಿ ಕಂಡಿತು.

(ಶಿವಕುಮಾರ ಮೋ. ಕರನಂದಿ)

ಗಜ಼ಲ್ ಎಂದರೆ ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ ಮೋಹ ಅನುರಾಗ ವ್ಯಕ್ತಪಡಿಸುವುದು. “ಹೃದಯದ ವೃತ್ತಾಂತ ಮತ್ತು ಪ್ರೇಮ ಮೋಹಗಳ ವಿದ್ಯಮಾನದ ಹೇಳಿಕೆ”. ಒಂದು ಕೋಣೆಗೆ ನಾಲ್ಕು ಗೋಡೆಗಳಿರುವಂತೆ ಮತ್ಲಾ, ಕಾಫಿಯಾ, ರದೀಪ, ಮಕ್ತಾಗಳೆಂಬ 4 ಅಂಗಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇವೆಲ್ಲವುಗಳ ನಡುವೆ ಪ್ರತಿಮೆ. ಉಪಮೆ, ರೂಪಕಗಳ ಮೂಲಕ ಬೆಳಗುತ್ತದೆ.

ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು. ಗಜ಼ಲ್ ಕೇವಲ ಪ್ರೀತಿ, ಪ್ರಣಯ, ಮೈಖಾನಾ, ವಸಂತ, ಬುಲ್ಬುಲ್, ಆಷಿಕ್, ಮಾಷೂಕ, ಇಷ್ಕ್‌ಗಳಿಗೆ ಸೀಮಿತವಾಗಿ ಇಂದು ಉಳಿದಿಲ್ಲ. ಜೀವನಕ್ಕೆ ಸಂಬಂಧಪಟ್ಟ ಸಮಾಜಕ್ಕೆ ಸಂಬಂಧಪಟ್ಟ ವಿಷಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಉಲಿಯುತ್ತಾ ಅದು ಸಮಗ್ರ ಜೀವನದ ಕಾವ್ಯವಾಗಿ ಕಂಗೊಳ್ಳಿಸುತ್ತಿದೆ.

“ಗಜ಼ಲ್‌ನ ಮಹತ್ವದ ವಿಷಯ ಇಷ್ಕ್.. ಅಂದರೆ ಮೋಹ, ಅನುರಾಗ, ಪ್ರೇಮದ (ಮೊಹಬ್ಬತ್) ಬದಲಾಗಿ ಇಷ್ಕ್‌ ಶಬ್ದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಗಜಲಿನ ವಿಶಿಷ್ಟ ಗುಣದ ಪ್ರತೀಕ ಈ ಶಬ್ದ. ಪ್ರೇಮ ಒಂದು ಸೀಮೆವುಳ್ಳದ್ದು. ಒಬ್ಬ ಖಾಸಾ ವ್ಯಕ್ತಿ ಇನ್ನೊಬ್ಬ ಖಾಸಾ ವ್ಯಕ್ತಿಯನ್ನು ಪ್ರೀತಿಸಿದಂತೆ. ಆದರೆ ಇಷ್ಕ್ ಬಹು ವಿಶಾಲವಾದದ್ದು ಇದರಲ್ಲಿ ಪ್ರೇಯಸಿ (ಮಾಸೂಕ್) ಒಬ್ಬ ವ್ಯಕ್ತಿಯಾಗದೆ ಸಾರ್ವತ್ರಿಕತೆಯಾಗಿ ಮೈದಳೆಯುತ್ತಾಳೆ. ಪ್ರೇಯಸಿಯನ್ನು ಗಜ಼ಲ್ ಒಂದು ರಕ್ತಮಾಂಸದ ವ್ಯಕ್ತಿಯಾಗಿ ವರ್ಣಿಸುವುದಿಲ್ಲ. ಪ್ರೇಯಸಿ ಶಬ್ದವನ್ನು ಒಂದು “ಕುರುಹ”ನ್ನಾಗಿ ಗಜ಼ಲ್ ಉಪಯೋಗಿಸುತ್ತದೆ.

ಇಷ್ಕ್ ಎರಡು ತೆರನಾಗಿದೆ ಒಂದು ‘ಇಷ್ಕ್ ಮಜಾಜಿ’ (ಲೌಕಿಕ ಪ್ರೇಮ) ಇನ್ನೊಂದು “ಇಷ್ಕ್ ಹಕೀಕಿ” (ಆಧ್ಯಾತ್ಮಿಕ ಪ್ರೇಮ) ಈ ಎರಡು ಬಗೆಯ ಪ್ರೇಮ ಉರ್ದು ಗಜ಼ಲ್ ಕಾವ್ಯದಲ್ಲಿ ಅತ್ಯಂತ ಮಾರ್ಮಿಕವಾಗಿ ಅರ್ಥಪೂರ್ಣವಾಗಿ ವರ್ಣಿತವಾಗಿದೆ. ಸೂಫಿ ಕವಿಗಳು “ಇಷ್ಕ್ ಹಕೀಕಿ”ಯನ್ನು ಗಜ಼ಲಿನಲ್ಲಿ ವ್ಯಾಪಕವಾಗಿ ಬಳಸಿದ್ದಾರೆ. ಆತ್ಯಂತಿಕ ಪ್ರೇಮವನ್ನೆ ಅವರು ಎಲ್ಲ ಕಡೆ ಪ್ರಾಪಂಚಿಕ ಪ್ರೇಮದ ಜೊತೆಗೆ ಹೇಳುತ್ತಾ ಓದುಗರನ್ನು ಶಾಶ್ವತ ಪ್ರೇಮದತ್ತ ಕರೆದೊಯ್ಯುವ ಅವರ ಕಾವ್ಯದ ಕಸುಬತನ ಮೆಚ್ಚುವಂತಹದ್ದು. ನಮ್ಮಲ್ಲಿ ಸತಿಪತಿ ಭಾವದಲ್ಲಿ, ಮಧುರ ಭಕ್ತಿಯಲ್ಲಿ ದೇವರೇ ಗಂಡ, ಭಕ್ತನೇ ಹೆಂಡತಿ ಆದರೆ ಸೂಫಿ ತತ್ವದಲ್ಲಿ ದೇವರೇ ಪ್ರೇಯಸಿ ಮತ್ತು ಭಕ್ತನೇ ಪ್ರಿಯ, ಪ್ರೇಯಸಿಯನ್ನು ವರ್ಣಿಸುವಾಗ ಅದರ ಹಿಂದಿರುವ ದೈವಿಕ ಕಲ್ಪನೆಯನ್ನು ಕವಿ ಮರೆಯುವುದಿಲ್ಲ. ನಮ್ಮ ನಿತ್ಯ ಜೀವನದ ಪ್ರೇಮವನ್ನೇ ಹೇಳುತ್ತಾ ನಿತ್ಯಜೀವನದ ವಿಚಾರ ಕ್ರಿಯೆಗಳನ್ನೇ ವರ್ಣಿಸುತ್ತ ಕವಿ ನಮ್ಮನ್ನು ದೈವತ್ವದ ಕಡೆಗೆ ಸೆಳೆದೊಯ್ಯುತ್ತಾನೆ. ಪ್ರಿಯೆಯನ್ನು ಗಜ಼ಲ್‌ನಲ್ಲಿ ಪುಲ್ಲಿಂಗದಂತೆ ಬಳಸುತ್ತಾರೆ. ಆಷಿಕ್ ಎಂದರೆ ಪ್ರಿಯಕರ; ಮಾಷೂಕ್ ಎಂದರೂ ಪ್ರಿಯಕರನೆಂದೇ ಅರ್ಥ.

ಬಾಗಲಕೋಟ ಜಿಲ್ಲೆಯ ಈಗಿನ ಗುಳೇದಗುಡ್ಡ ತಾಲೂಕಿನ ರಂಗಮಂದಿರದಲ್ಲಿ ನೂರಾರು ನಾಟಕಗಳನ್ನು ಕಂಡು ಬೆಳೆದ ಪ್ರತಿಭೆ, ಮೌನ ಮಾತಾದಾಗ ಕವನ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟು, ಇಂದು ‘ನೆರಳಿಗಂಟಿದ ನೆನಪು’ ಎಂಬ ಚೊಚ್ಚಲ ಗಜ಼ಲ್ ಸಂಕಲನದ ಮೂಲಕ ಗಜ಼ಲ್ ಲೋಕಕ್ಕೆ ಅಡಿ ಇಟ್ಟು ಹೊರಟಿರುವುದು ಒಂದು ಸಂತೋಷದ ವಿಚಾರವೆ ಆಗಿದೆ. ನೆರಳಿಗಂಟಿದ ನೆನಪು ಗುಳೇದಗುಡ್ಡದ ಕರನಂದಿ ಪ್ರಕಾಶನ ಹೊರತಂದಿದ್ದು ಖ್ಯಾತ ಚಿತ್ರಕಲಾವಿಧರಾದ ಟಿ ಎಫ್ ಹಾದಿಮನಿ ಅವರ ಮುಖಮುಟವು ಗಜ಼ಲ್ ಸಂಕಲನಕ್ಕೆ ಹೊಸಕಳೆಯನ್ನು ಉಂಟು ಮಾಡಿದೆ, ಅಲ್ಲದೆ ನಾಡಿದ ಮನಸುಗಳನ್ನು ಕಟ್ಟಿದ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಅವರ ಮುನ್ನುಡಿ, ಹಿರಿಯ ಕಾದಂಬರಿಕಾರರಾದ ಡಾ. ಬಾಳಾಸಾಹೇಬ ಲೋಕಾಪುರ ಅವರ ಬೆನ್ನುಡಿ, ಬಳ್ಳಾರಿಯ ಸಾಹಿತಿಗಳು ನಾಡಿನ ಚಿಂತಕರಾದ ಅಬ್ದುಲ್ ಹೈ ತೋರಣಗಲ್ಲು, ಹಿರಿಯ ಸಾಹಿತಿಗಳಾದ ವೈ ಎಮ್ ಯಾಕೊಳ್ಳಿ, ಹಿರಿಯ ಗಜ಼ಲ್ ಕಾರರಾದ ಯು ಸಿರಾಜ್‌ ಅಹ್ಮದ್‌, ನಾಡಿನ ಶ್ರೇಷ್ಠ ಗಜ಼ಲ್ ಕಾರರಾದ ಪ್ರಭಾವತಿ ದೇಸಾಯಿ ಹಾಗೂ ಲಕ್ಷ್ಮಣ ಬಾದಾಮಿ ಅವರ ಬೆನ್ನು ತಟ್ಟುವ ಹಾರೈಕೆಗಳ ನುಡಿಗಳು ಇಡೀ ಗಜ಼ಲ್ ಸಂಕಲನ ಮಿಸ್ರಾಗಳನ್ನು ಓದುಗನು ಧುತ್ತನೆ ಓದುವಂತೆ ಮಾಡುತ್ತಿವೆ.

ಇಲ್ಲಿ ಒಟ್ಟು 51 ಗಜ಼ಲ್‌ಗಳಿವೆ. ಕವಿಯ ಮಾತಿನಲ್ಲೆ ಹೇಳುವುದಾದರೆ ನನ್ನೊಳಗೆ ನಾ ಕೇಳಿಸಿಕೊಂಡ ಆಪ್ತಧ್ವನಿ ನೆನಪ ಗವಿಯೊಳಗೆ ದಾಟಿಬಂದ ಶಾಂತ ತಂಗಾಳಿ ಎನ್ನುತ್ತಲೆ ಹಸಿಪ್ರೇಮ ಹುಸಿಪ್ರೇಮದ ನಡುವೆ ತೂರಿಬರುವ ವಿರಹ, ಅಪ್ಪನ ಅವ್ವನ ನಡುವೆ ಬದುಕನ್ನು ಹರವಿಕೊಂಡು ತುಡಿಯುವ ತುಡಿತ, ಸಂಬಂಧಗಳನ್ನು ಬೆಸೆಯುವಲ್ಲಿ ತೋರಿಸುವ ಅಂತಕರಣ, ದುಡಿಯುವ ವರ್ಗದವರ ಬೆವರ ಹನಿಗಳ ಕಾಳಜಿ ಇವೆಲ್ಲ ಎದೆಯ ತುಡಿತ ಮಿಡಿತಗಳ ಸಮಸ್ಟಿರೂಪವೇ ನೆರಳಿಗಂಟಿದ ನೆನಪು ಗಜ಼ಲ್ ಸಂಕಲನ.

ಈ ಗಜ಼ಲ್ ಸಂಕಲನ ಮೊದಲ ಸಂಕಲನ ಎಂದು ಅನ್ನಿಸುವುದೇ ಇಲ್ಲ. ಕಾರಣ ಕವಿಗೆ ಪ್ರತಿಮೆಗಳನ್ನು ದುಡಿಸಿಕೊಂಡ ಪರಿಗೆ, ಸಮಸಾಲುಗಳನ್ನು ಕಟ್ಟುವ ಭರದಲ್ಲಿ ಭಾವಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಿರುವುದು ಕವಿಯ ಓದು ಅನುಭವ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ. ಮೊದಲ ಗಜ಼ಲ್‌ನಲ್ಲೆ ವಿಷವಿಕ್ಕುವರಿಗೆ, ಕುಹಕದ ನಗೆ ಚೆಲ್ಲುವವರಿಗೆ, ಟೀಕೆಗಳನ್ನು ಮಾಡುವವರಿಗೆ ಶಿವನಾಗಿ ಸುಮ್ಮನಿದ್ದು ಬಿಡುವೆ ಎನ್ನುವ ಮಾತು ಆತ್ಮಧ್ಯಾನದ ಸಂಕೇತವಾಗಿ ಸಿಗುತ್ತದೆ. ಇಂತಹ ಒಳನೋಟದಿಂದಲೇ ಕವಿ ಈ ಕೆಳಗಿನ ಜೋಗಿಯ ಮಾತನ್ನು ಹೇಳಿಬಿಡುವುದು;

ಕೊರಗುವುದು ಬಿಟ್ಟು ಬಿಡಿ ಬದುಕು ದೊಡ್ಡದಿದೆ
ಕೀಳರಿಮೆಯನ್ನು ಬಿಟ್ಟುಬಿಡಿ ಬದುಕು ದೊಡ್ಡದಿದೆ

ಇಲ್ಲಿ ಕವಿಗೆ ಬದುಕು ದೊಡ್ಡದಿದೆ ಅದರ ನಡುವೆ ಶೋಷಣೆಗೆ ಒಳಗಾದವರ ಬಗ್ಗೆ ಮರಗುವ ಕೊರಗುವ ಹೃದಯ ಇದೆ. ಇದನ್ನು ಅವನು ಅನುಭವಿಸಿದ್ದಾನೆ ಇದಕ್ಕೆ ಸಾಕ್ಷಿ….

ಕಿತ್ತು ಹೋದ ಚಪ್ಪಲಿ ಉಂಗುಟಗಳೆ ಹೇಳುತ್ತಿವೆ ನನ್ನ ಕಥೆಯಾ
ಕೆಂಡ ಸುಡುವ ಬಿಸಲಿನ ಪಾದಗಳೆ ಹೇಳುತ್ತಿವೆ ನನ್ನ ಕಥೆಯಾ

ಕವಿಗೆ ತನ್ನ ವೃತ್ತಿಯಲ್ಲಿ ಕಂಡುಂಡ ನೋವುಗಳನ್ನು ತನ್ನೊಳಗೆ ಹಾಡಿಕೊಳ್ಳುತ್ತಾನೆ. ಜಗವೆಲ್ಲ ನಗುತಿರಲಿ ಜಗದ ಅಳುವು ನನಗಿರಲಿ ಎಂದು ಹೇಳುವುದು ಉಂಟು…

ಹಗಲಿರುಳು ಜೀವಗಳಿಗೆ ಜೀವದುಸಿರು ನೀಡುತಿಹರು ಜೀವ ತೊರೆದು
ಬೆನ್ನಿಗೆ ಬಿದ್ದವರ ಬಿಟ್ಟು ರೋಗಿಗೆ ಹೊಸಕಲ್ಪ ನೀಡಬೇಕಿದೆ ನಾನೇನು ಮಾಡಲಿ

ಎಂಬ ಮಾತು ಕರೋನಾ ಸಮಯದಲ್ಲಿ ಜಗತ್ತನ್ನೆ ತಲ್ಲಣಗೊಳಿಸಿದ ಮನುಷ್ಯನ ಬದುಕನ್ನೆ ಎಚ್ಚರಿಸಿದ ಪರಿಸ್ಥಿತಿಯ ಜೊತೆಗೆ ಹೋರಾಡುತ್ತಲೆ ಈ ಮನಮಿಡಿಯುವ ಮಾತನ್ನಾಡುತ್ತಾನೆ. ಕವಿಗೆ ಬದುಕು ಒಂದೊಂದು ಬಾರಿ ಶೂನ್ಯವಾಗಿ ಕಾಣುವುದು ಉಂಟು. ಅದಕ್ಕಾಗಿಯೆ ‘ಯಾವ ಊರಿಗೆ ಪಯಣ ಮಾಡಬೇಕಿದೆ’ ಎಂದು ಹೇಳುತ್ತಾನೆ. ಇಷ್ಟು ಚಿಂತನೆ ಮಾಡುತ್ತಲೆ ಜೀವನಕೆ ನೆಮ್ಮದಿಯ ತರುವುದು ಹೊತ್ತಿಗೆ ಸ್ಮರಣೆ ಮಾಡುತ್ತಾನೆ. ಅಂದರೆ ಕವಿಯ ಅನುಭವದ ಜೊತೆಗೆ ಓದುವ ಗೀಳು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಕವಿಗೆ ಆಧುನಿಕ ಧಾವಂತದ ಬಗ್ಗೆ ಆತಂಕವಿದೆ. ಆದರೆ ಬೆಳಗಲಿ ಭಾರತ ಎನ್ನುವಲ್ಲಿ ಈ ನೆಲದ ಬಗ್ಗೆ ಅಭಿಮಾನವೂ ಇದೆ, ಇರಲೇಬೇಕು. ಬೆವರ ಸಂಸ್ಕೃತಿಗೆ ಬೆಲೆ ಸಿಗಬೇಕೆಂಬ ಮಾತಿನಲ್ಲಿ ಕವಿಗೆ ದುಡಿಯುವ ವರ್ಗದ ಜೀವನದ ಬಗ್ಗೆ ಕಾಳಜಿ ಮರುಕ ಇದೆ. ಇದಕ್ಕಾಗಿ ಕವಿ ಹೇಳುವುದು ಇಷ್ಟೇ…

ಹಣತೆ ಹಚ್ಚುತ್ತೇನೆ ಬಯಲಲಿ ನರಳುವ ಕತ್ತಲೆ ತೊಲಗಿಸಲು
ದೀಪ ಬೆಳಗಿಸುತ್ತೇನೆ ಮನೆಗಳಲಿ ತೂಗುವ ಭೂತ ಓಡಿಸಲು

ಇದು ಒಂದು ರೀತಿಯ ಮೊಗ್ಗಲಾದರೆ, ಉಳಿದ ಮೊಗ್ಗಲು ಪ್ರೀತಿ ಪ್ರೇಮ ವಿರಹ ಹಸಿಕನಸುಗಳ ಕಡೆಗೆ ಹೊರಳಿಬಿಡುತ್ತದೆ. ಇದು ಓದುಗನಿಗೆ ಆಪ್ತವಾಗುತ್ತಾ ಸಾಗುತ್ತದೆ. ಕವಿ ಪ್ರೇಮ ವಿರಹದ ದಾರಕ್ಕೆ ಕನಸುಗಳೆಂಬ ಮೊಗ್ಗುಗಳನ್ನು ಜೋಡಿಸುತ್ತಾ ಸಾಗುತ್ತಾನೆ. ಕೊನೆಯದಾಗಿ ಧುತ್ತನೆ ಓದಿ ಮುಗಿಸಿದಾಗ ಸಿಗುವ ಭಾವ ಒಂದೆ ನೆರಳಿಗಂಟಿದ ನೆನಪು ಇಷ್ಕ್ ಮಜಾಜಿ’ (ಲೌಕಿಕ ಪ್ರೇಮ) ಇನ್ನೊಂದು “ಇಷ್ಕ್ ಹಕೀಕಿ” (ಆಧ್ಯಾತ್ಮಿಕ ಪ್ರೇಮ) ಈ ಎರಡು ಬಗೆಯ ಪ್ರೇಮವು ಇಲ್ಲಿ ಇದೆ. ಅದನ್ನು ತಿಳಿಯಬೇಕಾದರೆ ಈ ಕೆಳಗಿನ ಶೇರ್‌ಗಳನ್ನು ಗಮನಿಸಬೇಕು.

ಕ್ಷಣದಂತೆ ಒಲವಿನ ಮಾತು ತುಟಿಯಲ್ಲಿ ಸೆಳೆದವಳು
ಕಾಲುಗಳು ನೆಲಬಿಟ್ಟು ಕೀಳದಂತೆ ಕಾಡಿದವಳು

ಇದು ವೈಯಕ್ತಿಕ ನೆಲೆಯಾಚೆ ನಿಲ್ಲುವಂತಿದೆ. ಈಕೆ ಮನದನ್ನೆ ಅಲ್ಲಾ, ಕಾವ್ಯಕನ್ನಿಕೆ ಕಾಣಸಿಗುತ್ತಾಳೆ. ಇದು ಕಾವ್ಯಕ್ಕೆ ಇರಬೇಕಾದ ಗುಣ. ಭಾವದ ಸಾಲು ವೈಯಕ್ತಿಕ ನೆಲೆಯ ಪರದೆಯನ್ನು ಹರಿದುಕೊಂಡು ಸಾರ್ವತ್ರಿಕ ನೆಲೆಯಲ್ಲಿ ಹಾರಬೇಕು. ಇಲ್ಲಿ ಆಗಿರುವುದು ಇದೇ. ಕವಿಯ ಮಿಸ್ರಾಗಳು ಸಾರ್ವತ್ರಿಕರಣದ ಗುಣವನ್ನು ಪಡೆದಿವೆ. ಆ ಕಾರಣಕ್ಕೆ ಇವು ಮನಸ್ಸಿನಾಳದಲ್ಲಿ ಸದಾ ಅಚ್ಚಳಿಯದಂತೆ ಉಳಿಯುತ್ತಿವೆ. ಈ ದೃಷ್ಟಿಯಿಂದ ಗಜ಼ಲ್ ಸಂಕಲನ ಗೆಲುವಿನ ದಡ ಸೇರುವುದತ್ತ ದಾಪುಗಾಲಿಡುತ್ತಿದೆ ಎಂದು ಹೇಳಲೇಬೇಕು.

ಪ್ರೀತಿಯ ತುಂಬಿದ ಕೊಳದಂತೆ ಚೆಲುವೆ
ಮೊಗೆದಷ್ಟು ಹುಟ್ಟುವ ಒರತೆಯಂತೆ ಚೆಲುವೆ (ಗಜ಼ಲ್ 5)

***

ನಾನು ಕೊಡುವ ಪ್ರೀತಿ ನಿನಗೆ ಸಾಲದಾಯಿತೆ
ಹೃದಯಕ್ಕೆ ಒಲವ ಸುರಿಸಿದ್ದು ಬೇಡವಾಯಿತೆ (ಗಜ಼ಲ್ 11)

***

ನಿನಗಾಗಿಯೇ ಮುಸ್ಸಂಜೆಯ ತುಸು ಬೆಳಕಿನಲ್ಲಿ ಕಾದಿರುವೆ
ಮಂದವಾಗಿ ಉರಿಯುವ ಕಂದೀಲಿನ ಬೆಳಕಿನಲ್ಲಿ ಕುಳಿತಿರುವೆ(ಗಜ಼ಲ್ 16)

ಇಂತಹ ಬಹುತೇಕ ಶೇರ್‌ಗಳು ಆಪ್ತವಾಗಿ ಮಾತನಾಡುತ್ತವೆ, ಮಾತನಾಡಿಸಿಕೊಳ್ಳುತ್ತವೆ. ಇಲ್ಲಿ ಸಮಸಾಲುಗಳು ಓದುಗನನ್ನು ಹಿಡಿದಿಡುತ್ತಿವೆ. ಕೆನೆಪದರು ಕಂಡರೆ ಅದು ಲೌಖಿಕ ಪ್ರೇಮವಾಗಿ ಕಾಣುತ್ತದೆ. ಆಳದ ಬೇರಿಗೆ ಹೋದರೆ ಅದು ಲೌಖಿಕ ಪ್ರೇಮದ ಕಡೆ ಕರೆದೊಯ್ಯುತ್ತದೆ. ಇಂತಹ ಆಪ್ತ ಗಜ಼ಲ್ ಸಂಕಲನ ಹೊರತಂದ ಕವಿ ಮಿತ್ರ ಶಿವಕುಮಾರ ಕರನಂದಿ ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ. ಭಾವಯಾನ ಮುಂದುವರೆಯಲಿ ಎಂದು ಹಾರೈಸುವೆ.

(ಕೃತಿ: ನೆರಗಂಟಿದ ನೆನಪು (ಗಜ಼ಲ್‌ ಸಂಕಲನ), ಲೇಖಕರು: ಶಿವಕುಮಾರ ಮೋ. ಕರನಂದಿ, ಪ್ರಕಾಶಕರು: ಕರನಂದಿ ಪ್ರಕಾಶನ, ಬೆಲೆ: 99/-)