ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ. ಇದು ಎಷ್ಟು ದಿನ ಮುಂದುವರೆಯಬೇಕು?
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಒಂಭತ್ತನೆಯ ಪ್ರಬಂಧ ನಿಮ್ಮ ಓದಿಗೆ
ನನ್ನ ತಮ್ಮನ ಮಗ ಅಕ್ಷಯ್ ಸಿಂಹ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿದ್ದಾಗ ಸಲಹೆ-ಸೂಚನೆಗಳನ್ನು ಪಡೆಯಲು ಆಗಾಗ್ಗೆ ನಮ್ಮ ಮನೆಗೆ ಬರುತ್ತಿದ್ದ. ಅಂತಹ ಭೇಟಿಯ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ನಾನು ಅವನಿಂದ ಅನೇಕ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮುಖ್ಯವಾಗಿ ಅವನು ಸಹಾಯ ಮಾಡುತ್ತಿದ್ದುದು ಕಂಪ್ಯೂಟರ್ ನೆರವಿನಿಂದ ಮಾಡಿಸಿಕೊಳ್ಳಬಹುದಾದ ಕೆಲಸಗಳಿಗೆ. ಅದರಲ್ಲಿ ಇಂತಿಷ್ಟು ಕೆಲಸ ಇದೆ ಎಂದು ಪಟ್ಟಿ ಮಾಡಿಕೊಂಡು ನಾನು ಅವನು ಮನೆಗೆ ಬರುವ ಮುಂಚೆಯೇ ತಯಾರಾಗಿರುತ್ತಿದ್ದೆ. ಆ ಕೆಲಸಗಳೆಲ್ಲ ನನಗೆ ಅಗಾಧವಾಗಿ ಕಾಣುತ್ತಿದ್ದವು. ಇದನ್ನೆಲ್ಲ ಮಾಡಲು ನಾಲ್ಕಾರು ಘಂಟೆಗಳಾದರೂ ಬೇಕಾಗುತ್ತದೆ, ಪರೀಕ್ಷೆಗೆಂದು ಓದುತ್ತಿರುವ ಹುಡುಗನಿಗೆ ಹೇಗೆ ತೊಂದರೆ ಕೊಡುವುದು ಎಂದು ನನಗೆ ಆತಂಕವಾಗುತ್ತಿತ್ತು. ವಾಸ್ತವದಲ್ಲಿ ಹಾಗಾಗುತ್ತಿರಲಿಲ್ಲ. ಒಂದು ಹದಿನೈದು ಇಪ್ಪತ್ತು ನಿಮಿಷದಲ್ಲಿ ಆತ ನನ್ನ ಎಲ್ಲ ಕೆಲಸಗಳನ್ನು ಪಟಪಟನೆ ಮಾಡಿಬಿಡುತ್ತಿದ್ದ. ನನಗೆ ಸಂತೋಷ, ಆಶ್ಚರ್ಯ. ಇದೆಲ್ಲ ಎಲ್ಲಿ ಕಲಿತೆ, ಎಷ್ಟು ಪ್ರತಿಭಾವಂತ ನೀನು ಎಂದು ಹೊಗಳಿದರೆ ಅವನು ಸುಮ್ಮನೆ ನಕ್ಕುಬಿಡುತ್ತಿದ್ದ. ಆ ನಗುವಿನಲ್ಲಿ ನನ್ನ ಅರೆ ತಿಳುವಳಿಕೆಯ ಬಗ್ಗೆ ಸ್ವಲ್ಪ ಕುಹಕವೂ ಇತ್ತೆಂದು ಈಗ ನನಗನಿಸುತ್ತದೆ. ಇರಲಿ! ಪದೇ ಪದೇ ಹೊಗಳುತ್ತಿದ್ದಾಗ ಅವನಿಗೆ ಬೇಸರವಾಗಿ ಒಂದು ದಿನ ಹೀಗೆ ಹೇಳಿದ –
“ನೋಡಿ ದೊಡ್ಡಪ್ಪ, ನಿಮಗೆ ನಾನು ಮಾಡಿಕೊಡುತ್ತಿರುವ ಕೆಲಸದಲ್ಲಿ ಅಗಾಧವಾದದ್ದು ಯಾವುದೂ ಇಲ್ಲ. ಯಾವ ವಿಶೇಷವೂ ಇಲ್ಲ. ವಿಶಿಷ್ಟವಾದ ಕೌಶಲ್ಯವೂ ಬೇಕಾಗಿಲ್ಲ. ಕೌಶಲ್ಯಕ್ಕಿಂತ ಹೆಚ್ಚಾಗಿ Muscle memory ಆಧಾರದ ಮೇಲೆ ನಮ್ಮ ನರಮಂಡಲ, ಸ್ನಾಯುಗಳು, ಮಿದುಳು ಎಲ್ಲವೂ ಕೆಲಸ ಮಾಡುತ್ತವೆ ಅಷ್ಟೇ. ಇದರಲ್ಲಿ ವಿಶೇಷವಾದಂಥದ್ದು ಏನೂ ಇಲ್ಲ. ಸುಮ್ಮನೆ ನನ್ನನ್ನು ಹೊಗಳಬೇಡಿ.”
ಹಾಗಾದರೆ ನನಗೆ ಏಕೆ ಇದನ್ನೆಲ್ಲ ಮಾಡಲು ಸಾಧ್ಯವಿಲ್ಲ? ಮಾಡುವುದನ್ನು ಕಲಿತರೂ ಮರೆತು ಹೋಗುತ್ತದೆ. ಕೆಲಸ ಮಾಡುವಾಗ ಗೊಂದಲ, ಗಲಿಬಿಲಿ ಇರುತ್ತದಲ್ಲ, ಏಕೆ? ಎಂದು ಪ್ರಶ್ನಿಸಿದೆ.
ಇಲ್ಲ ಅದು ಹಾಗಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಅವನದ್ದೇ ಆದ Muscle memoryಯ ಸ್ವರೂಪ ಇದ್ದೇ ಇರುತ್ತದೆ. ಅವನ ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಜೀವನಶೈಲಿ, ಯಂತ್ರೋಪಕರಣಗಳನ್ನು ನಿತ್ಯಜೀವನದಲ್ಲಿ ಬಳಸುವ ಕಲೆ, ಇದೆಲ್ಲ ಸೇರಿಕೊಂಡು ಆತನ ಸ್ನಾಯು ನೆನಪುಗಳ ಸ್ವರೂಪ ಮತ್ತು ಪ್ರಮಾಣ ರೂಪುಗೊಳ್ಳುತ್ತದೆ. ನಿಮಗೆ ನಿಮ್ಮ ಆಫೀಸ್ ಕೆಲಸದ ಬಗ್ಗೆ, ಬರವಣಿಗೆ ಬಗ್ಗೆ ಸ್ನಾಯು ನೆನಪು ಚೆನ್ನಾಗಿರಬಹುದು. ಆ ನೆನಪುಗಳ ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ, ಕೆಲಸ ಮಾಡಲು ಪ್ರಯತ್ನಿಸಿದಾಗ ನಿಮಗೆ ನೆಮ್ಮದಿ, ಸಂತೋಷ, ಕ್ರಿಯಾಶೀಲತೆ, ಬಿಡುಗಡೆ ಎಲ್ಲವೂ ಸಿಗಬಹುದು.
ಅಂದರೆ ನೀನು ಹೇಳುತ್ತಿರುವುದು ನನ್ನ ಬರವಣಿಗೆ, ಸೃಷ್ಟಿಕ್ರಿಯೆ ಯಾಂತ್ರಿಕವೆಂದೇ? ಸ್ನಾಯುಗಳ ಮೂಲಕ ಕೆಲಸ ಮಾಡುವ ಯಾಂತ್ರಿಕ ಪ್ರವೃತ್ತಿ ಮಾತ್ರವೆಂದೇ? ನಾನು ಸ್ವಲ್ಪ ರೇಗಿಕೊಂಡೇ ಕೇಳಿದೆ.
ಇದರಲ್ಲಿ ಬೇಸರ ಪಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಒಂದು ರೀತಿಯ ಗ್ರಹಿಕೆಗೆ, ಅಭಿವ್ಯಕ್ತಿಗೆ, ನುಡಿಗಟ್ಟಿನ ಬಳಕೆಗೆ ನಿಮ್ಮ ಮನಸ್ಸು, ಹೃದಯ, ಲೇಖನಿ ಎಲ್ಲವೂ ಒಗ್ಗಿಹೋಗಿರುತ್ತವೆ. ಮಾತ್ರವಲ್ಲ, ಅದೇ ಜಾಡಿನಲ್ಲಿ ಮನಸ್ಸು ಕೆಲಸ ಮಾಡಲು ಬಯಸುತ್ತದೆ. ಹಾಗಾಗಿ…. ಎಂದು ಅನುಮಾನದಿಂದ, ಹಿಂಜರಿಕೆಯಿಂದ ನನ್ನ ಮುಖ ನೋಡಿದ. ಮಾತನಾಡಲು ತಡವರಿಸುತ್ತಿರುವಂತೆ ಕಂಡಿತು. ಪರವಾಗಿಲ್ಲ, ಹೇಳಬೇಕೆನಿಸಿದ್ದನ್ನು ಹೇಳು. ನಾನೇನು ತಪ್ಪು ತಿಳಿಯುವುದಿಲ್ಲ ಎಂದು ಮಾತನಾಡಲು ನಾನು ಪ್ರೋತ್ಸಾಹಿಸಿದೆ.
ಈಗ ಇನ್ನಷ್ಟು ಸ್ಪಷ್ಟವಾಗಿ, ಧೈರ್ಯವಾಗಿ ಮಾತನಾಡಲು ಶುರು ಮಾಡಿದ –
ನೋಡಿ, ಈ ಕಾರಣಕ್ಕೇ ಬಹುಪಾಲು ಸೃಜನಶಕ್ತಿ, ಚಿಂತನೆ, ಸಂಶೋಧನೆ ಎಲ್ಲವೂ ಒಂದು ಹಂತದ ನಂತರ ಯಾಂತ್ರಿಕವಾಗಿರುವುದು. ಬಹುಪಾಲು ಲೇಖಕರು, ಚಿಂತಕರು ಹೇಳಿದ್ದನ್ನೇ ಹೇಳುವುದು, ಕಂಡದ್ದನ್ನೇ ಕಾಣುವುದು, ಅದೇ ಪ್ರತಿಮೆ, ಅದೇ ನುಡಿಗಟ್ಟು ಈ ವರ್ತುಲದಲ್ಲೇ ಇರುತ್ತಾರೆ. ಆದರೆ ಇದೆಲ್ಲ ಹೀಗಾಗುತ್ತಿದೆ ಎಂದು ತಿಳಿಯಲಾಗದ ಭ್ರಮಾತ್ಮಕ ಸ್ಥಿತಿಯಲ್ಲಿ ಕೂಡ ಸ್ನಾಯು ನೆನಪುಗಳು ನಮ್ಮನ್ನು ನಿಯಂತ್ರಿಸುತ್ತವೆ. ಜೊತೆಗೆ ಇದರಿಂದಾಗಿ ಮನಸ್ಸಿಗೆ ಮೂಡುವ ಸುಖ, ನೆಮ್ಮದಿ. ಹೊಸದೊಂದು ಬೇಕು ಎಂದು ಕೂಡ ಅನಿಸುವುದಿಲ್ಲ.
ಹಾಗಾದರೆ ಈ ವಿಷಚಕ್ರದಿಂದ ನಮಗೆ ಬಿಡುಗಡೆಯೇ ಇಲ್ಲವೇ – ನೇರವಾಗಿ ಆದರೆ ಹತಾಶೆಯಿಂದ ಕೇಳಿದೆ.
ಖಂಡಿತ ಇದೆ. Muscle memoryಯನ್ನು ಬಯಸುವ ಮನಸ್ಸೇ ಒಂದು ಹಂತದ ನಂತರ ದಣಿವನ್ನು ಅನುಭವಿಸುತ್ತದೆ. ದಣಿದು ದಣಿದು ಹೊಸ ಪ್ರಯೋಗಗಳಿಗೆ ಹೊರಡುತ್ತದೆ. ಇದ್ಯಾವ ತಂಟೆಯೂ ಬೇಡವೆಂದು ತಾನೇ ಈ Muscle memory ಮಾಡುವ ಎಲ್ಲ ಕೆಲಸಗಳನ್ನು ಯಂತ್ರಗಳಿಗೆ, ಗಣಕ ಪ್ರಪಂಚಕ್ಕೆ ಒಪ್ಪಿಸಿ, ಮನುಷ್ಯನ ಮನಸ್ಸು ಮತ್ತು ಹೃದಯ ಇನ್ನೂ ಗಾಢವಾಗಿ, ಇನ್ನೂ ಸೃಜನಶೀಲವಾಗಿ ಕೆಲಸ ಮಾಡುವ ಹಾಗಾಗಲಿ ಎಂಬ ಸದಾಶಯದಲ್ಲಿ ತಾನೆ ಹೊಸ ತಂತ್ರಜ್ಞಾನ ಪ್ರಯತ್ನಿಸುತ್ತಿರುವುದು.
ಅಕ್ಷಯ್ ಹೇಳಿದ್ದೆಲ್ಲ ಸರಿ ಎನಿಸಿತು. ಆದರೆ ತೃಪ್ತಿಯಾಗಲಿಲ್ಲ. ನೀವು ಇರುವ ಹಾಗೇ ಇರಿ. ನಿಮ್ಮ ಸ್ನೇಹಿತರು ಕೂಡ ಹಾಗೇ ಇರಲಿ. ಹಾಗೇ ಇರುತ್ತೀರಿ. ಆದಷ್ಟು ಯಂತ್ರಗಳನ್ನು ಉಪಯೋಗಿಸಬೇಡಿ. ಉಪಯೋಗಿಸುವುದಿಲ್ಲ ಎಂಬ ಬುದ್ಧಿಮಾತನ್ನು ವ್ಯಂಗ್ಯವಾಗಿ, ಪರೋಕ್ಷವಾಗಿ ಹೇಳಿರಬಹುದೇ ಎಂದು ಗೊಂದಲವಾಯಿತು.
ಬಹುಪಾಲು ಸೃಜನಶಕ್ತಿ, ಚಿಂತನೆ, ಸಂಶೋಧನೆ ಎಲ್ಲವೂ ಒಂದು ಹಂತದ ನಂತರ ಯಾಂತ್ರಿಕವಾಗಿರುವುದು. ಬಹುಪಾಲು ಲೇಖಕರು, ಚಿಂತಕರು ಹೇಳಿದ್ದನ್ನೇ ಹೇಳುವುದು, ಕಂಡದ್ದನ್ನೇ ಕಾಣುವುದು, ಅದೇ ಪ್ರತಿಮೆ, ಅದೇ ನುಡಿಗಟ್ಟು ಈ ವರ್ತುಲದಲ್ಲೇ ಇರುತ್ತಾರೆ. ಆದರೆ ಇದೆಲ್ಲ ಹೀಗಾಗುತ್ತಿದೆ ಎಂದು ತಿಳಿಯಲಾಗದ ಭ್ರಮಾತ್ಮಕ ಸ್ಥಿತಿಯಲ್ಲಿ ಕೂಡ ಸ್ನಾಯು ನೆನಪುಗಳು ನಮ್ಮನ್ನು ನಿಯಂತ್ರಿಸುತ್ತವೆ.
ಈ ಗೊಂದಲದಲ್ಲಿರುವಾಗಲೇ ಇನ್ನೊಬ್ಬ ಬಂಧುವಿನ ಮಗ ಚಂದ್ರಶೇಖರ್ ಅಮೆರಿಕದಿಂದ ಬಂದ. ನಮ್ಮ ಬಂಧುಮಿತ್ರರು, ಸಹೋದ್ಯೋಗಿಗಳ ಮಕ್ಕಳುಗಳ ಪೈಕಿ ಹೆಚ್ಚಿನವರೆಲ್ಲ ಎಂಜಿನಿಯರ್‌ಗಳೇ. ಅದರಲ್ಲೂ ಕಂಪ್ಯೂಟರ್ ಎಂಜಿನಿಯರ್‌ಗಳೇ. ಚಂದ್ರಶೇಖರ್‌ನ ವಿಶೇಷವೆಂದರೆ, ಇನ್ನಿತರ ಕ್ಷೇತ್ರಗಳ ಬಗ್ಗೆ ಅವನಿಗಿದ್ದ ಆಸಕ್ತಿ, ಒಲವು. ಕ್ರೀಡೆ, ಸಂಗೀತ, ಚಾರಣ, ಪ್ರವಾಸ ಹೀಗೆ ಹತ್ತು ಹಲವು ಆಸಕ್ತಿಗಳು. ಎಂಎಸ್ ಮಾಡುವಾಗ ಒಂದು ಸೆಮಿಸ್ಟರ್‌ನಲ್ಲಿ ಅರ್ಥಶಾಸ್ತ್ರವನ್ನು, ಇನ್ನೊಂದು ಸೆಮಿಸ್ಟರ್‌ನಲ್ಲಿ ದಸ್ತೊವಸ್ಕಿಯನ್ನು ಎರಡು ಪೇಪರ್‌ಗಳಿಗಾಗಿ ಓದಿದ್ದ. ಎಲ್ಲದಕ್ಕಿಂತ ಮುಖ್ಯವಾಗಿ ಕಂಪ್ಯೂಟರ್ ಜ್ಞಾನವನ್ನು ಕೂಡ ಆತ ಒಟ್ಟು ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಚೌಕಟ್ಟಿನಲ್ಲಿ ಗ್ರಹಿಸುತ್ತಿದ್ದ. ಕಂಪ್ಯೂಟರ್ ಎಂಜಿನಿಯರಿಂಗ್ ಅವನಿಗೆ ಡಾಲರ್ ಪ್ರಸಾದ ಕೊಡುವ ವೃತ್ತಿ ಮಾತ್ರವಾಗಿರದೆ, ಅವನು ಮನಸಾರೆ ಇಷ್ಟಪಡುವ ಕ್ಷೇತ್ರವೂ ಆಗಿತ್ತು. ವೃತ್ತಿ-ಪ್ರವೃತ್ತಿ ಎರಡೂ ಅಪರೂಪವಾಗಿ ಬೆರೆತಾಗ ಸಿಗುವ ಜೀವನ ಸಂತೋಷದಿಂದಾಗಿ ಯಾವಾಗಲೂ ಉಲ್ಲಾಸದಿಂದಿರುತ್ತಿದ್ದ. ಚಂದ್ರಶೇಖರ್ ಕೂಡ ಅಕ್ಷಯ್ ಹೇಳಿದ್ದನ್ನೇ ದೃಢಪಡಿಸಿದ ಮತ್ತು ಇನ್ನಷ್ಟು ಸಂಗತಿಯ ಆಳಕ್ಕೆ ಕರೆದೊಯ್ದ.
*****
Muscle memoryಯ ವಿನ್ಯಾಸವನ್ನು ಎಲ್ಲ ಕ್ಷೇತ್ರಗಳಿಗೂ, ಉಪಕರಣಗಳಿಗೂ ಅನ್ವಯಿಸುತ್ತಾ ಮನುಷ್ಯನ ಕೈ ಮತ್ತು ಮಿದುಳು ಮಾಡುವಂತಹ ಎಲ್ಲ ಕೆಲಸವನ್ನು ಗಣಕಯಂತ್ರ ಕಬಳಿಸುತ್ತದೆ. ಮಾತ್ರವಲ್ಲ, ಆಕರ್ಷಕ ಕೂಡ ಮಾಡಿದೆ. ಬಹುಪಾಲು ಎಂಜಿನಿಯರ್‌ಗಳು, ತಂತ್ರಜ್ಞರು ಹೆಚ್ಚಿನ ಸಂಬಳ-ಸಾರಿಗೆ ಪಡೆಯುತ್ತಿದ್ದರೂ ಮನಸ್ಸನ್ನು ಕ್ರಿಯಾಶೀಲವಾಗಿಟ್ಟುಕೊಂಡಿಲ್ಲ. ಅಂತಹ ಕ್ರಿಯಾಶೀಲತೆಯ ಕಡೆಗೆ ಮನಸ್ಸು ಕೂಡ ಹರಿಯದ ಹಾಗೆ ಹೆಚ್ಚಿನ ಸಂಬಳ-ಸಾರಿಗೆ ನೋಡಿಕೊಳ್ಳುತ್ತದೆ. ಈಗ ಜಗತ್ತಿನ ತುಂಬಾ ಹರಡಿರುವ ಲಕ್ಷಾಂತರ ಕಂಪ್ಯೂಟರ್ ಎಂಜಿನಿಯರ್‌ಗಳು, ತಂತ್ರಜ್ಞರಲ್ಲಿ ಶೇಕಡ ನಾಲ್ಕೈದರಷ್ಟು ಜನ ಮಾತ್ರ ಮೂಲಭೂತ ಸಂಶೋಧನೆ, ಆವಿಷ್ಕಾರದಲ್ಲಿ ತೊಡಗಿಕೊಂಡಿದ್ದಾರೆ. ಉಳಿದವರು Muscle memory ಆಧಾರಿತ ತಾಂತ್ರಿಕ ಸೇವೆಗಳು, ಯಾಂತ್ರೀಕೃತ ಮಾಮೂಲಿ ಕೆಲಸಗಳಲ್ಲಿ ದಿನ ದೂಡುತ್ತಿದ್ದಾರೆ. ಅಮೆರಿಕದಂಥ ಅಮೆರಿಕದಲ್ಲೂ ಅಲ್ಲಿಯ ಪಶ್ಚಿಮ ತೀರದಲ್ಲಿ, ಫೆಸಿಫಿಕ್ ಸಾಗರಕ್ಕೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ಮಾತ್ರ ವೈಜ್ಞಾನಿಕ ಸಂಶೋಧನೆ, ಮೂಲಭೂತ ಚಿಂತನೆ, ಆವಿಷ್ಕಾರಗಳು ನಡೆಯುತ್ತಿರುವುದು. ಉಳಿದಂತೆ ಎಲ್ಲ Muscle memoryಯ ವಕ್ತಾರರು. ಚೀನಾಗೆ ಈ ಪ್ರವೃತ್ತಿಯಿಂದ ತಪ್ಪಿಸಿಕೊಳ್ಳಲು ಆಸೆ, ಸಾಮರ್ಥ್ಯವೂ ಇರುವ ಹಾಗೆ ಕಾಣುತ್ತದೆ. ಆದರೆ ಒಟ್ಟು ಚೀನಾದ ವ್ಯವಸ್ಥೆಯೇ ನೆನಪು, ಸೌಂದರ್ಯ, ಕನಸು, ಸ್ವಾಯತ್ತತೆ, ಕ್ರಿಯಾಶೀಲತೆಯನ್ನು ನಾಶಮಾಡುವ ರೀತಿಯಲ್ಲಿದೆ.
ತನ್ನ ಜೀವನಶೈಲಿ, ಸೌಂದರ್ಯವನ್ನು ಸಮರ್ಥಿಸಿಕೊಳ್ಳುತ್ತಾ ಚಂದ್ರಶೇಖರ್ ಇಂತಹ ಮಾತುಗಳನ್ನು ಆಡುತ್ತಿರಬಹುದೆ ಎಂಬ ಅನುಮಾನ ಬಂತು. ನಾನು ಹೇಳುವುದನ್ನು ಹಾಗೇ ಸುಮ್ಮನೆ ನಂಬ ಬೇಡಿ ಎಂದು ವಿನಯಪೂರ್ವಕವಾಗಿ ಹೇಳುತ್ತಾ ಓದಲು, ಯೋಚಿಸಲು ಅನುವಾಗುವಂತೆ ಕೆಲವು ಪುಸ್ತಕಗಳನ್ನು ಕೊಟ್ಟ. ಅದನ್ನೆಲ್ಲ ಗಮನಿಸಿದಾಗ ತಿಳಿದ ವಿಚಾರಗಳು ಹೀಗಿದ್ದವು –
ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ. ಇದು ಎಷ್ಟು ದಿನ ಮುಂದುವರೆಯಬೇಕು?
ಸಂವೇದನಾಶೀಲನಾದವನೊಬ್ಬನಿಗೆ ಗಣಿತದ ಪ್ರಮೇಯಗಳನ್ನು, ಹೊಸ ಸಂಗೀತ ಕೃತಿಯನ್ನು, ಪ್ರಾರ್ಥನಾ ಸ್ತೋತ್ರವನ್ನು, ನಳನಳಿಸುವ ಚಿತ್ರಗಳನ್ನು ಒಟ್ಟಿಗೆ ರಚಿಸುವ ಪ್ರವೃತ್ತಿ, ಸಾಧ್ಯತೆ ಇರಬೇಕು. ಶತಮಾನಗಳ ಆಚೆ ಇರುವ ಪದಾರ್ಥಜ್ಞಾನವನ್ನು ಈವತ್ತೇ ಕಾಣುವ ಶಕ್ತಿಯಿರಬೇಕು.
ಜೀವರಸದಿಂದ ಮಿಡಿಯುತ್ತಿರುವ ಎಲ್ಲ ಮನುಷ್ಯರಿಗೂ ಒಂದೇ ಜನ್ಮದಲ್ಲಿ, ಒಂದೇ ಬದುಕಿನಲ್ಲಿ ಪ್ರಾಣಿಯಾಗುವ, ಕ್ರಿಮಿಕೀಟವಾಗುವ, ಗಂಡಸು ಹೆಂಗಸಾಗುವ, ಹೆಂಗಸು ಗಂಡಸಾಗುವ ಸಾಧ್ಯತೆ ದಕ್ಕಬೇಕು.
ಇಂತಹ ವಿಚಾರಗಳನ್ನೆಲ್ಲ ಮನಸ್ಸು ಒಪ್ಪಿತು, ಒಪ್ಪಿದರೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಇದನ್ನು ಒಪ್ಪಬೇಡ, ಇದಕ್ಕೆ ಶರಣಾಗಬೇಡ ಎಂಬ ಎಚ್ಚರಿಕೆಯ ಕೂಗನ್ನು ಕೂಡ ನೀಡುತ್ತಲೇ ಇದೆ. ಎಲ್ಲೋ ಯಾರೋ ನನ್ನ ವ್ಯಕ್ತಿತ್ವವನ್ನೆಲ್ಲ, ನನ್ನ ವಕ್ತಿತ್ವವನ್ನು ಮಾತ್ರವಲ್ಲ, ಎಲ್ಲ ಮನುಷ್ಯರ ವ್ಯಕ್ತಿತ್ವವನ್ನೂ ನಾಶ ಮಾಡಲು ಪ್ರತಿಕ್ಷಣವೂ ಸನ್ನಾಹ ಮಾಡುತ್ತಿರುವಂತೆ ಭಯವಾಗುತ್ತಿದೆ. ಈ ಭಯದ ಜೊತೆ ಜೊತೆಯಲ್ಲೇ ನನ್ನ ಮನೆಯ, ಮನಸ್ಸಿನ ಬಹುಪಾಲು ಭಾಗಗಳನ್ನು Muscle memory ಆಕ್ರಮಿಸಿಕೊಳ್ಳುತ್ತಿರುವುದನ್ನು ಕಂಡು ಆತಂಕ. ಈ ಆತಂಕ, ಭಯದಲ್ಲಿ ಈ ಪ್ರಬಂಧವನ್ನು ಬರೆದೆ. ಆದರೂ ಭಯ, ಆತಂಕ ಕಡಿಮೆಯಾಗಿಲ್ಲ. ಪ್ರಬಂಧವನ್ನು ಓದುಗರ ಮುಂದಿಟ್ಟು, ಮನಸ್ಸಿನ ಉಲ್ಲಾಸ, ಜೀವಂತಿಕೆಗೆ ಸದಾ ಹಂಬಲಿಸುತ್ತೇನೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ನಮ್ಮ ಸೃಜನಶೀಲ ಚಟುವಟಿಕೆಗಳೆಲ್ಲ muscle memory ಮೇಲೆ ಅವಲಂಬಿಸಿದೆಯೆ? ಕವಿ ಅದೆ ಅದೆ ಹಿಂದೆ ಕವಿಗಳು ಉಪಯೋಗಿಸಿದ ಮಾದರಿಯಲ್ಲಿ ರೂಪಕಗಳನ್ನು, ಉಪಮೆಗಳನ್ನು ತನ್ನ ಕಾವ್ಯದಲ್ಲಿ ಬಳಸಿದಾಗ ಇಂತಹ ಒಂದು ಭಾವನೆ ಸತ್ಯವೆ ಎಂಬ ಯೋಚನೆಯೂ ಬಂತು. ಇಲ್ಲಿ ಯಾವುದೂ ಹೊಸತಿಲ್ಲ.ಹಿಂದೆ ಇದ್ದದ್ದೆ ಇಂದಿದೆ. ಇದು ಯಾಂತ್ರಿಕ ಮೆಮರಿ ಮಸಲ್ ನ ಪ್ರಭಾವವೆ? ಪ್ರಬಂಧ ತುಂಬ ಅರ್ಥಪೂರ್ಣ.
ಅಪರೂಪದ ಲೇಖನ
Agree, classification of knowledge into branches creates borders in brains that’s barrier to learning.
Yes, I did come across some articles where there is a deliberate effort by multinationals on shrinking the brain size of the mankind and also the brain power!
Very thought provoking article indeed!
Can you list those books provided by Mr. Chandrashekar please?