ಮಹಾಕೂಟೇಶ್ವರ ದೇವಾಲಯವು ಕಾಶಿತೀರ್ಥ ಹಾಗೂ ಶಿವಪುಷ್ಕರಣಿಗಳೆಂಬ ಕೊಳಗಳ ಬದಿಯಲ್ಲಿದೆ. ಇಲ್ಲಿನ ಪುಷ್ಕರಣಿಯ ಮಂಟಪದಲ್ಲಿ ಪಂಚಮುಖ ಶಿವಲಿಂಗವಿರುವುದೊಂದು ವಿಶೇಷ. ಮಹಾಕೂಟೇಶ್ವರ ದೇವಾಲಯವು ದ್ರಾವಿಡಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳ ಪೈಕಿ ಕರ್ನಾಟಕದಲ್ಲೇ ಮೊದಲಿನದೆಂಬ ಕೀರ್ತಿಗೆ ಪಾತ್ರವಾಗಿದೆ. ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ದೇಗುಲದ ಮುಂಭಾಗದಲ್ಲಿ ನಂದಿಯ ಮಂಟಪವೂ ಇದೆ. ಬಲಗಾಲನ್ನು ಮುಂದೆಮಾಡಿ ಕುಳಿತ ನಂದಿಯ ವಿಗ್ರಹ ಆಕರ್ಷಕವಾಗಿದೆ. ನವರಂಗದಲ್ಲಿ ಈ ದೇವಾಲಯವನ್ನು ನಿರ್ಮಿಸಿದ ಮಂಗಳೇಶನು ನೀಡಿದ ದಾನಗಳ ವಿವರವನ್ನೊಳಗೊಂಡ ಶಾಸನವೂ ಇದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿಮೂರನೆಯ ಕಂತು

 

ಬಾದಾಮಿಯಿಂದ ಬನಶಂಕರಿ ಮಾರ್ಗವಾಗಿ ಪಟ್ಟದಕಲ್ಲಿಗೆ ಹೋಗುವ ದಾರಿಯಲ್ಲಿ ಹನ್ನೆರಡು ಕಿ.ಮೀ. ಕ್ರಮಿಸಿದರೆ ಮಹಾಕೂಟವನ್ನು ತಲುಪಬಹುದು. ಬಾದಾಮಿಗೆ ಬರುವವರು ಬನಶಂಕರಿಯನ್ನು ದರ್ಶಿಸಿ ನಾಲ್ಕು ಕಿ.ಮೀ. ದೂರದ ಶಿವಯೋಗಿ ಮಂದಿರದತ್ತ ಮುಂದುವರೆಯಿರಿ. ಅದರ ಬಲಬದಿಯ ದಾರಿಯೇ ನಿಮ್ಮನ್ನು ಮಹಾಕೂಟದತ್ತ ಒಯ್ಯುತ್ತದೆ.

ಈ ಪ್ರದೇಶದ ಚರಿತ್ರೆ ಬಹುಪುರಾತನವಾದುದು. ಹಳೆಯ ಹಾಗೂ ನವಶಿಲಾಯುಗದ ಅನೇಕ ಕುರುಹುಗಳನ್ನು ಈ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆಯೆಂದಮೇಲೆ ಹೇಳುವುದೇನು? ಮಹಾಕೂಟದಲ್ಲಿರುವ ದೇಗುಲಗಳೂ ಸಾಕಷ್ಟು ಪ್ರಾಚೀನವಾದವುಗಳೇ. ಬಾದಾಮಿ ಚಾಲುಕ್ಯರ ಪುರೋಭಿವೃದ್ಧಿಗೆ ಕಾರಣನಾದ ಮಂಗಳೇಶನು ತನ್ನ ವಿಜಯದ ಕುರುಹಾಗಿ ಕ್ರಿ.ಶ. ಆರನೆಯ ಶತಮಾನದ ಅಂತ್ಯದ ವೇಳೆಗೆ ಮಹಾಕೂಟೇಶ್ವರನ ದೇಗುಲವನ್ನು ನಿರ್ಮಿಸಿದನಂತೆ.

ಕಾಲಕಾಲಕ್ಕೆ ದುರಸ್ತಿಗೊಂಡಿರಬಹುದಾದ ಮಹಾಕೂಟದ ದೇವಾಲಯ ಸಮುಚ್ಚಯ ತನ್ನ ಪ್ರಾಚೀನತೆಯ ಕಾರಣದಿಂದಲೇ ಮಹತ್ವಪಡೆಯುತ್ತದೆ. ಸುತ್ತಲಿನ ಬೆಟ್ಟ, ಕೊಳಗಳು ಇಲ್ಲಿನ ಪಾವಿತ್ರ್ಯಕ್ಕೆ ಇಂಬುಕೊಡುವಂತಿವೆ. ಸಮೀಪದಲ್ಲೇ ಇರುವ ಕೆಲವು ಗುಡಿ, ಕೊಳಗಳು ಮಹಾಕೂಟೇಶ್ವರ ದೇಗುಲಕ್ಕಿಂತ ಹಳೆಯದೆಂಬ ಕಾರಣಕ್ಕೋ ಏನೋ ಹಳೇ ಮಹಾಕೂಟ-ಹೊಸ ಮಹಾಕೂಟವೆಂಬ ಅಂಕಿತವೂ ಸೇರಿದೆ. ಮಹಾಕೂಟೇಶ್ವರನ ದೇಗುಲಸಂಕೀರ್ಣದಲ್ಲಿ ಅನೇಕ ಚಿಕ್ಕ ದೊಡ್ಡ ಶಿವಲಿಂಗಗಳೂ, ಗುಡಿಗಳೂ ಅವಕ್ಕೆ ಅಭಿಮುಖವಾಗಿ ನಂದಿಯ ವಿಗ್ರಹಗಳೂ ಕಂಡುಬರುತ್ತವೆ. ಗುಡಿಗಳ ಶಿಖರಗಳ ವಿನ್ಯಾಸ ಬಲು ಸೊಗಸು. ಒಂದರಂತೆ ಇನ್ನೊಂದಿಲ್ಲ. ಶಿಖರಗಳಲ್ಲಿ ಕೆಲವು ಉತ್ತರದೇಶದ ನಾಗರಶೈಲಿಯನ್ನೂ ಇನ್ನು ಹಲವು ದಾಕ್ಷಿಣಾತ್ಯ ದ್ರಾವಿಡ ಶೈಲಿಯನ್ನೂ ಅನುಸರಿಸಿವೆ. ಚಾಲುಕ್ಯರು ಮುಂದಿನ ದಿನಗಳಲ್ಲಿ ಪಟ್ಟದಕಲ್ಲು ಮುಂತಾದೆಡೆಗಳಲ್ಲಿ ನಿರ್ಮಿಸಿದ ಹಲವು ದೇಗುಲಸಮುಚ್ಚಯಗಳಿಗೆ ಮಹಾಕೂಟದ ಈ ಚಿಕ್ಕಗುಡಿಗಳ ನಿರ್ಮಾಣ ಅಭ್ಯಾಸದ ಮಾದರಿಗಳೂ ಆಗಿದ್ದಿರಬೇಕು.

ಮಹಾಕೂಟೇಶ್ವರ ದೇವಾಲಯವು ಕಾಶಿತೀರ್ಥ ಹಾಗೂ ಶಿವಪುಷ್ಕರಣಿಗಳೆಂಬ ಕೊಳಗಳ ಬದಿಯಲ್ಲಿದೆ. ಇಲ್ಲಿನ ಪುಷ್ಕರಣಿಯ ಮಂಟಪದಲ್ಲಿ ಪಂಚಮುಖ ಶಿವಲಿಂಗವಿರುವುದೊಂದು ವಿಶೇಷ. ಮಹಾಕೂಟೇಶ್ವರ ದೇವಾಲಯವು ದ್ರಾವಿಡಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳ ಪೈಕಿ ಕರ್ನಾಟಕದಲ್ಲೇ ಮೊದಲಿನದೆಂಬ ಕೀರ್ತಿಗೆ ಪಾತ್ರವಾಗಿದೆ. ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ದೇಗುಲದ ಮುಂಭಾಗದಲ್ಲಿ ನಂದಿಯ ಮಂಟಪವೂ ಇದೆ. ಬಲಗಾಲನ್ನು ಮುಂದೆಮಾಡಿ ಕುಳಿತ ನಂದಿಯ ವಿಗ್ರಹ ಆಕರ್ಷಕವಾಗಿದೆ. ನವರಂಗದಲ್ಲಿ ಈ ದೇವಾಲಯವನ್ನು ನಿರ್ಮಿಸಿದ ಮಂಗಳೇಶನು ನೀಡಿದ ದಾನಗಳ ವಿವರವನ್ನೊಳಗೊಂಡ ಶಾಸನವೂ ಇದೆ.

ಈ ಸಂಕೀರ್ಣದಲ್ಲಿ ಅನೇಕ ಗುಡಿಗಳಿದ್ದು ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇಗುಲಗಳು ಉಳಿದವಕ್ಕಿಂತ ದೊಡ್ಡವು. ಇಲ್ಲಿನ ಗುಡಿಗಳ ಹೊರಗೋಡೆಯ ಕೆಳಭಾಗದ ಅಧಿಷ್ಠಾನದಲ್ಲಿ ನಾಲ್ಕೈದು ಹಂತದ ಪಟ್ಟಿಗಳನ್ನುಳ್ಳ ಕಂಟಕಪೀಠದ ರಚನೆಯಿದೆ. ನಡುಗೋಡೆಯ ಕೆಳಹಂತದ ಒಂದುಪಟ್ಟಿಕೆಯ ಮೇಲೆ ನೃತ್ಯಾದಿ ಚಟುವಟಿಕೆಗಳನ್ನು ತೋರುವ ದೇವಗಂಧರ್ವರ ಚಿತ್ರಣವಿದೆ. ಇದರ ಮೇಲಕ್ಕೆ ತಾವರೆಯ ದಳಗಳ ವಿನ್ಯಾಸವುಳ್ಳ ಪಟ್ಟಿಕೆಯೂ, ಕೆಳಭಾಗದಲ್ಲಿ ಹೂಬಳ್ಳಿಗಳ ವಿನ್ಯಾಸದ ಪಟ್ಟಿಯೂ ಇವೆ. ಅಲ್ಲಲ್ಲಿ ಮಿಥುನಶಿಲ್ಪಗಳೂ ಕಂಡುಬರುತ್ತವೆ. ಶಿವಪಾರ್ವತಿಯರ ಪ್ರೇಮಸಲ್ಲಾಪವನ್ನು ಚಿತ್ರಿಸಿರುವ ಪಟ್ಟಿಕೆಗಳೂ ಮನೋಹರವಾಗಿವೆ.

ಮಧ್ಯಭಿತ್ತಿಯಲ್ಲಿ ಅಲ್ಲಲ್ಲಿ ದೇವಕೋಷ್ಠಗಳಿದ್ದು ಶಿವ, ವಿಷ್ಣು ಮೊದಲಾದ ದೇವತೆಗಳ ಎತ್ತರದ ಶಿಲ್ಪಗಳನ್ನು ಕಾಣಬಹುದು. ದೇವಾಲಯಗಳ ಮುಂಭಾಗದ ಮಂಟಪದ ಕಂಬಗಳ ಇಕ್ಕೆಲಗಳಲ್ಲಿ ಎತ್ತರದ ದ್ವಾರಪಾಲಕರೂ ಕಂಡುಬರುತ್ತಾರೆ. ಚಿಕ್ಕ ಗುಡಿಗಳಲ್ಲೊಂದಾದ ಮಹಾಲಿಂಗ ದೇಗುಲದ ಗೋಡೆಯಲ್ಲಿರುವ ದೇವಕೋಷ್ಠಗಳಲ್ಲಿ ಕಂಡುಬರುವ ವರಾಹ, ನರಸಿಂಹ, ಕಾಳಿಂಗಮರ್ದನ ಕೃಷ್ಣ ಮೊದಲಾದ ದೇವಶಿಲ್ಪಗಳು ಸುಂದರ ಕಲಾಕೃತಿಗಳಾಗಿವೆ. ಮಹಾಕೂಟೇಶ್ವರ ಗುಡಿಯ ಹೊರಭಿತ್ತಿಯಲ್ಲಿರುವ ಶಿಲ್ಪಗಳೂ ಪಕ್ಕದ ಸಂಗಮೇಶ್ವರ ದೇಗುಲದ ಭಿತ್ತಿಯ ಮೇಲಿನ ಶಿಲ್ಪಗಳೂ ಆಕರ್ಷಕವಾಗಿವೆ. ಕುಬ್ಜನ ಮೇಲೆ ನಿಂತ ಶಿವ, ಅರ್ಧನಾರೀಶ್ವರ ಹಾಗೂ ಹರಿಹರ ಶಿಲ್ಪಗಳು ಇಲ್ಲಿ ಮುಖ್ಯವಾಗಿ ನೋಡಬೇಕಾದವು. ಅರ್ಧನಾರೀಶ್ವರನ ಶಿಲ್ಪವು ಚಾಲುಕ್ಯಶಿಲ್ಪಗಳಲ್ಲೇ ಅತ್ಯುತ್ತಮವಾದ ಕಲಾಕೃತಿಗಳಲ್ಲೊಂದೆಂದು ಪ್ರಶಂಸೆ ಪಡೆದಿದೆ. ಹಿರಣ್ಯಕಶಿಪುವನ್ನು ತೊಡೆಯ ಮೇಲಿರಿಸಿಕೊಂಡ ಉಗ್ರನರಸಿಂಹನ ರೂಪವೂ ವಿಶೇಷವಾಗಿದೆ. ಈ ಶಿಲ್ಪಗಳ ಶಿರೋಭೂಷಣಗಳೂ, ಉಡುಗೆತೊಡುಗೆಗಳೂ ಪುರಾತನ ಭಾರತೀಯ ಶಿಲ್ಪಕಲೆಯ ಮಾದರಿಗಳನ್ನು ಅನುಸರಿಸಿವೆ.

ಮಹಾಕೂಟದಲ್ಲಿ ಬಾದಾಮಿ ಚಾಲುಕ್ಯರಿಗಿಂತ ಪೂರ್ವಕಾಲದ ಕರ್ನಾಟಕದ ಪ್ರಾರಂಭಿಕ ಶಿಲ್ಪಕಲೆಯ ಕೆಲವು ಮಾದರಿಗಳನ್ನು ಗುರುತಿಸಲಾಗಿದೆ. ಸೊಂಟದ ಮೇಲೆ ಕೈಯಿರಿಸಿಕೊಂಡು ನಿಂತ ವಿಷ್ಣು ಹಾಗೂ ಎರಡು ಭುಜಗಳ ಕೇವಲ ನರಸಿಂಹನ ಶಿಲ್ಪಗಳು ಆಯಾ ಮಾದರಿಯ ಉತ್ತಮ ಶಿಲ್ಪಗಳೆಂದು ಗುರುತಿಸಲ್ಪಟ್ಟಿವೆ. ಈ ವಿಗ್ರಹಗಳು ಭಗ್ನವಾಗಿದ್ದರೂ ಕ್ರಿ.ಶ. 500 ರಷ್ಟು ಹಿಂದಿನ ಕಾಲಕ್ಕೆ ಸೇರಿರುವ ಕಾರಣದಿಂದಲೇ ಪ್ರಾಮುಖ್ಯ ಪಡೆಯುತ್ತವೆ. ಈ ಎಲ್ಲ ಶಿಲ್ಪಗಳು ಉಡುಗೆ-ತೊಡುಗೆಗಳ ದೃಷ್ಟಿಯಿಂದಲೂ ಗಮನಸೆಳೆಯುತ್ತವೆ.