ಮಿದುಳಿನಲ್ಲಿನ ಜೀವಕೋಶಗಳನ್ನು ಮೈಕ್ರೋಸ್ಕೋಪ್ ಮೂಲಕ ಕಾಣಲು ಕೊಂಚ ಮಟ್ಟಿನ ಪೂರ್ವ ಸಿದ್ಧತೆಗಳು ಅವಶ್ಯಕ. ಇದನ್ನು ಪ್ರಪ್ರಥಮ ಬಾರಿಗೆ ತೋರಿಸಿ ಕೊಟ್ಟವನು, ಇಟಲಿಯ ವೈದ್ಯ ಮತ್ತು ಜೀವಶಾಸ್ತ್ರಜ್ಞ ಕೆಮಿಲ್ಲೋ ಗೋಲ್ಗಿ. ಮಿದುಳನ್ನು ತೆಳು-ಪದರವಾಗಿ ಕತ್ತರಿಸಿ, ಅದನ್ನು ಮೈಕ್ರೋಸ್ಕೋಪ್‌ ನಲ್ಲಿ ಇಡುವ ಮುನ್ನ, ಆ ಪದರಕ್ಕೆ ಬೆಳ್ಳಿಯ ರಾಸಾಯನಿಕ ಮಿಶ್ರಣವನ್ನು ಸೇರಿಸಿದರೆ, ಜೀವಕೋಶಗಳು ಬಿಡಿ-ಬಿಡಿಯಾಗಿ ಕಾಣುವುದನ್ನು ಗೋಲ್ಗಿ ೧೮೭೩ರಲ್ಲಿ ಪ್ರಕಟಿಸಿದ. ತನ್ನ ಈ ಶೋಧನೆಯ ಮೂಲಕ ಗೋಲ್ಗಿ ಒಂದು ನಿರ್ಧಾರಕ್ಕೆ ಬಂದ, ಮಿದುಳೆಂದರೆ, ಜೀವಕೋಶಗಳು ಒಂದಕ್ಕೊಂದು ಅಂಟಿಕೊಂಡು ನಿರ್ಮಿತವಾಗಿರುವ ಒಂದು ಸಂಕೀರ್ಣ ನೆಟ್‌ವರ್ಕ್.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಮ್ಮ ನಡವಳಿಕೆಗಳನ್ನು – ಹಲವು ಬಾರಿ ನಮಗೇ ತಿಳಿಯದಂತೆ – ನಿರ್ಧರಿಸುವ ಮಿದುಳಿಗೆ ಗಾಯವಾಗಿಯೋ ಅಥವಾ ಮತ್ತೊಂದು ಕಾರಣದಿಂದಲೋ ಅದು ಸರಿಯಾಗಿ ಕೆಲಸ ಮಾಡದಿದ್ದರೆ, ಅದರಿಂದಾಗುವ ವೈಚಿತ್ರ್ಯಗಳು ಒಂದೆರಡಲ್ಲ. ಖ್ಯಾತ ನ್ಯೂರಾಲಜಿಸ್ಟ್ ಆಲಿವರ್ ಸ್ಯಾಕ್ಸ್ ತನ್ನ ಪುಸ್ತಕಗಳಲ್ಲಿ(*) ಇಂತಹ ಹಲವಾರು ಪ್ರಕರಣಗಳನ್ನು ವಿವರಿಸುತ್ತಾನೆ. “ಡಾ.ಪಿ” ಎಂಬ ರೋಗಿಯ ಪ್ರಕರಣವೂ ಇಂತಹುದರಲ್ಲಿ ಒಂದು.

ಡಾ.ಪಿ ಒಬ್ಬ ಸಂಗೀತಜ್ಞ. ಪ್ರತಿಷ್ಠಿತ ಸಂಗೀತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದವನು. ಅವನಿಗೊಂದು ತೊಂದರೆ ಇತ್ತು. ಅವನಿಗೆ ತನ್ನ ಶಿಷ್ಯರನ್ನು ಗುರುತಿಸುವುದು ಕಷ್ಟವಾಗುತ್ತಿತ್ತು. ಅವರ ಧ್ವನಿಯಿಂದ ಅವರನ್ನು ಗುರುತಿಸಬಲ್ಲವನಾಗಿದ್ದರೂ, ಅವರ ಮುಖಗಳಿಂದ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ; ಅವನಿಗೆ ಅವರ ಮುಖಗಳೇ ಕಾಣುತ್ತಿರಲಿಲ್ಲ. ಅಷ್ಟೇ ಅಲ್ಲ, ಮುಖವಿಲ್ಲದ ವಸ್ತುಗಳಲ್ಲಿ ಮುಖಗಳು ಕಾಣುತ್ತಿತ್ತು. ಅವನು ರಸ್ತೆಗಳಲ್ಲಿ ನಡೆಯುತ್ತಿದ್ದಾಗ, ಅಲ್ಲಿದ್ದ ಪಾರ್ಕಿಂಗ್ ಮೀಟರ್, ಫೈರ್ ಹೈಡ್ರಂಟ್‌ ಗಳು ಸಣ್ಣ ಮಕ್ಕಳಂತೆ ಕಾಣುತ್ತಿದ್ದವು. ಅವನು ಅವರಿಗೆ “ಹಾಯ್” ಹೇಳಿ ನಸು ನಕ್ಕು ಮುಂದುವರೆಯುತ್ತಿದ್ದ. ಇದನ್ನು ಬಿಟ್ಟರೆ, ಅವನಿಗೆ ಬೇರಾವ ತೊಂದರೆಯೂ ಇರಲಿಲ್ಲ.

ಕೆಲವು ವರ್ಷಗಳ ನಂತರ ಅವನಿಗೆ ಡಯಾಬಿಟೀಸ್ ಇರುವುದು ತಿಳಿಯಿತು. ಡಯಾಬಿಟೀಸ್‌ ನಿಂದ ದೃಷ್ಟಿ ದೋಷದ ಸಾಧ್ಯತೆ ಇರುವುದರಿಂದ ಅವನು ನೇತ್ರ ತಜ್ಞರ ಬಳಿಗೆ ಹೋದ. ಅವನನ್ನು ಪರಿಶೀಲಿಸಿದ ನೇತ್ರ ತಜ್ಞ, ಅವನ ನೇತ್ರಗಳಲ್ಲಿ ಯಾವುದೇ ತೊಂದರೆ ಇಲ್ಲವೆಂದು ತಿಳಿಸಿ, ಅವನನ್ನು ನ್ಯೂರಾಲಜಿಸ್ಟ್ ಆಗಿದ್ದ ಡಾ.ಆಲಿವರ್ ಸ್ಯಾಕ್ಸ್ ಬಳಿಗೆ ಕಳುಹಿಸಿದ.

(ಡಾ.ಆಲಿವರ್ ಸ್ಯಾಕ್ಸ್)

ಡಾ.ಸ್ಯಾಕ್ಸ್ ಬಳಿ ಸಲಹೆ ಕೇಳಲು, ಡಾ.ಪಿ ಮತ್ತು ಆತನ ಪತ್ನಿ ಬಂದರು. ತೊಂದರೆ ಏನೆಂದು, ಡಾ.ಸ್ಯಾಕ್ಸ್, ಡಾ.ಪಿ-ಅನ್ನು ಕೇಳಿದಾಗ, ಅವನು ತನಗೇನೂ ತೊಂದರೆ ಇಲ್ಲವೆಂದೂ, ಇತರರು ತನಗೆ ತೊಂದರೆ ಇರುವುದೆಂದು ಹೇಳುತ್ತಾರೆಂದೂ ಹೇಳಿದ. ಮತ್ತಷ್ಟು ವಿಚಾರಿಸಿದಾಗ, ಒಂದು ವಿಷಯ ಸ್ಪಷ್ಟವಾಯಿತು. ಡಾ.ಪಿ ಒಬ್ಬ ಬುದ್ಧಿವಂತ, ಹಾಸ್ಯಪರ ವ್ಯಕ್ತಿಯಾಗಿದ್ದ. ಅವನಿಗೆ ಯಾವುದೇ ಮನೋವಿಕಲ್ಪಗಳೂ ಇರಲಿಲ್ಲ. ಒಂದನ್ನು ಬಿಟ್ಟರೆ. ಅವನಿಗೆ, ಬಣ್ಣಗಳು, ಗೆರೆಗಳು, ನೆರಳು-ಬೆಳಕುಗಳು, ವಸ್ತುಗಳ ಉದ್ದ-ಅಗಲ-ಆಳಗಳು, ಅವುಗಳ ಆಕಾರಗಳು (ಗೋಳ, ತ್ರಿಕೋನ, ಇತ್ಯಾದಿ) ಪ್ರತಿಯೊಂದೂ ಕಾಣುತ್ತಿದ್ದವು. ಆದರೆ ಅವನ್ನೆಲ್ಲಾ ಒಟ್ಟುಗೂಡಿಸಿ “ಇದು ಒಂದು ಮನುಷ್ಯ ಮುಖ” ಎಂದು ಗುರುತಿಸುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಇನ್ನಾವುದೋ ವಸ್ತುಗಳ ಆಕಾರಗಳು ಅವನಿಗೆ ಮುಖಗಳಂತೆ ಕಾಣುತ್ತಿದ್ದವು.

ಡಾ.ಸ್ಯಾಕ್ಸ್‌ ನೊಂದಿಗೆ ಮಾತುಕತೆ ನಡೆಸಿದ ನಂತರ, ಡಾ.ಪಿ, ಪಕ್ಕದಲ್ಲಿದ್ದ ತನ್ನ ಹ್ಯಾಟ್ ಅನ್ನು ಹಿಡಿದೆತ್ತಲು ಕೈ ಹಾಕಿದ. ಆದರೆ, ಅದು ಅವನ ಹ್ಯಾಟ್ ಆಗಿರಲಿಲ್ಲ; ಅವನ ಹೆಂಡತಿಯ ಮುಖವಾಗಿತ್ತು. ಅವನ ಮಿದುಳಿನಲ್ಲಿ ಅವನ ಹೆಂಡತಿಯ ಮುಖ ಹ್ಯಾಟ್ ಆಗಿ ಪರಿವರ್ತಿತವಾಗಿತ್ತು.

ಆಧುನಿಕ ನ್ಯೂರೋಸೈನ್ಸ್ ಹೇಳುವಂತೆ, “ಇದೊಂದು ಮುಖ” ಎಂದು ಗುರುತಿಸುವುದು ಹುಟ್ಟಿನಿಂದಲೇ ಮಿದುಳಿನಲ್ಲಿರುವ ಒಂದು ಸಾಮರ್ಥ್ಯ. ಮುಖ ಗುರುತಿಸಲು ಮಿದುಳಿನಲ್ಲಿ ಒಂದು ಕೇಂದ್ರವೇ ಇದೆ. ಅದೊಂದು ಮುಖವೆಂದು ಗುರುತಿಸಿದ ನಂತರ, ಅದು ಇಂತಹ ಮುಖ ಅಥವಾ ಇಂತಹವರ ಮುಖ ಎಂದು ಗುರುತಿಸುವುದು ನಂತರದಲ್ಲಿ ನಾವು ನೆನಪು-ಕಲಿಕೆಗಳ ಸಹಾಯದಿಂದ ಪಡೆಯುವ ಸಾಮರ್ಥ್ಯ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಈ ಕೇಂದ್ರಗಳು, ನಮ್ಮ ಕಿವಿಗಳ ಹಿಂದಿನ ಮಿದುಳಿನ ಭಾಗಗಳಲ್ಲಿವೆ.

******

ಫಿನಿಯಾಸ್ ಗೇಜ್ ಒಬ್ಬ ಅಮೆರಿಕನ್ ತರುಣ. ಸುಮಾರು ಇಪ್ಪತ್ತೈದರ ವಯಸ್ಸು. ವಯಸ್ಸಿಗೆ ತಕ್ಕಂತೆ ಕಟ್ಟುಮಸ್ತಾದ ಶರೀರ. ಜೊತೆಗೆ ಸ್ನೇಹಪರ ಮತ್ತು ಇತರರ ಕುರಿತು ಕರುಣೆ-ದಯೆ ತೋರುವ ಮನೋಭಾವ. ರಸ್ತೆ ನಿರ್ಮಾಣ ಇತ್ಯಾದಿ ಸಣ್ಣ ಕಂಟ್ರಾಕ್ಟ್‌ ಗಳನ್ನು ಪಡೆದು ಅದನ್ನು ತಾನೇ ಮುಂದು ನಿಂತು ನಿರ್ವಹಿಸುವ ವೃತ್ತಿಯಲ್ಲಿ ತೊಡಗಿದ್ದವನು ಅವನು.

(ಫಿನಿಯಾಸ್ ಗೇಜ್)

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ, ರೈಲ್ವೇ ಸಂಪರ್ಕವನ್ನು ಹೆಚ್ಚಿಸುವ ಕಾರ್ಯ ಅಮೆರಿಕದ ಈಶಾನ್ಯ ಭಾಗಗಳಲ್ಲಿ ಭರದಿಂದ ನಡೆಯುತ್ತಿತ್ತು. ಹಲೆವೆಡೆಗಳಲ್ಲಿ ಬೆಟ್ಟಗಳನ್ನು ಕಡೆದು ಈ ಹಳಿಗಳನ್ನು ಹಾಕಬೇಕಿತ್ತು. ವೆರ್ಮಾಂಟ್ ರಾಜ್ಯದ ಕ್ಯಾವೆಂಡಿಷ್ ಎಂಬ ಸಣ್ಣ ಹಳ್ಳಿಯಲ್ಲಿ ಈ ಹಳಿಗಳನ್ನು ಹಾಕುವ ಕಾರ್ಯದ ಮೇಸ್ತ್ರಿಯಾಗಿ ಗೇಜ್ ಕೆಲಸ ಮಾಡುತ್ತಿದ್ದ. ಮೇಸ್ತ್ರಿ ಕೆಲಸದ ಉಸ್ತುವಾರಿಯ ಜೊತೆಗೇ, ಬೆಟ್ಟದ ಬಂಡೆಗಲ್ಲುಗಳಲ್ಲಿ ಸಣ್ಣ ರಂಧ್ರಗಳನ್ನು ಕೊರೆದು ಅದರಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿಸಿಡುವ ಕಾರ್ಯವನ್ನು ಅವನು ತಾನೇ ಸ್ವತಃ ಮಾಡುತ್ತಿದ್ದ.

೧೮೪೮ರ ಸೆಪ್ಟೆಂಬರ್ ೧೩ರಂದು ಸಂಜೆ ಸುಮಾರು ೪:೩೦ರ ಆಸುಪಾಸಿನಲ್ಲಿ, ಇಂತಹ ರಂಧ್ರವೊಂದನ್ನು ಸ್ಫೋಟಕದ ಪುಡಿಗಳಿಂದ ತುಂಬಿಸಿ, ತನ್ನ ಕೆಲಸಗಾರನೊಬ್ಬನಿಗೆ ಏನೋ ಹೇಳಲು ಗೇಜ್ ತಿರುಗಿದ. ಅದೇ ಸಮಯಕ್ಕೆ ಆ ಪುಡಿ ಸ್ಫೋಟವಾಗಿ, ರಂಧ್ರವನ್ನು ನಿರ್ಮಿಸಲು ಉಪಯೋಗಿಸಲು ಬಳಸಿದ್ದ ಮೂರೂವರೆ ಅಡಿ ಉದ್ದದ ಹಾರೆ, ಅವನ ಎಡ ದವಡೆಯನ್ನು ಹೊಕ್ಕು, ಎಡಗಣ್ಣಿನ ಹಿಂಭಾಗದಿಂದ ಹಾದು, ತಲೆ ಬುರುಡೆಯಲ್ಲಿ ರಂಧ್ರ ಮಾಡಿ ಸುಮಾರು ಎಂಬತ್ತು ಅಡಿ ದೂರದಲ್ಲಿ ಬಿತ್ತು. ಸ್ಫೋಟದ ರಭಸಕ್ಕೆ ಗೇಜ್ ನೆಲ ಕಚ್ಚಿದ.

ಆದರೆ, ಕೆಲ ನಿಮಿಷದಲ್ಲಿ ಅವನು ಚೇತರಿಸಿಕೊಂಡ. ಹತ್ತಿರದಲ್ಲಿದ್ದ ಎತ್ತಿನ ಗಾಡಿಗೆ ಸ್ವತಃ ನಡೆದುಕೊಂಡು ಹೋದ. ಆ ಗಾಡಿಯಲ್ಲಿ ಕುಳಿತು, ಸುಮಾರು ಮುಕ್ಕಾಲು ಮೈಲು ದೂರದಲ್ಲಿದ್ದ ತಾನು ನೆಲೆಸಿದ್ದ ಲಾಡ್ಜ್‌ ಗೆ ಹೋಗಿ, ವೈದ್ಯನಿಗಾಗಿ ಕಾಯತೊಡಗಿದ. ಅರ್ಧ ಗಂಟೆಯ ನಂತರ, ವೈದ್ಯ ಬಂದಾಗ, ಅವನೊಡನೆ ತಮಾಷೆ ಮಾಡುತ್ತಾ ಗೇಜ್ ಹೇಳಿದ: “ಇವತ್ತು ನಿಮಗೆ ನಾನು ಒಳ್ಳೇ ಬ್ಯುಸಿನೆಸ್ ಕೊಡ್ತಾ ಇದ್ದೀನಿ”.

ಚಿಕಿತ್ಸೆನೀಡಲು ವೈದ್ಯ ಅವನ ತಲೆ ಬುರುಡೆಯನ್ನು ಗಮನಿಸಿದರೆ, ಅದರಲ್ಲಿನ ರಂಧ್ರದ ಮೂಲಕ ನೆಲ ಕಾಣಿಸಿತು. ಅವನ ಮಿದುಳಿನ ಮುಂಭಾಗದ ಚೂರೊಂದು ಕಬ್ಬಿಣದ ಹಾರೆಯ ಬಡಿತಕ್ಕೆ ಸಿಕ್ಕಿ ಹೊರ ಬಿದ್ದಿತ್ತು.

ಮುಂದಿನ ಸುಮಾರು ಎರಡು ತಿಂಗಳುಗಳ ಕಾಲ ಅವನು ಆಸ್ಪತ್ರೆಯಲ್ಲಿರಬೇಕಾಯಿತು. ಆ ವರ್ಷದ ನವೆಂಬರ್ ಕೊನೆಯ ವೇಳೆಗೆ ಅವನು ತನ್ನ ಮನೆಗೆ ವಾಪಸಾದ. ಕೆಲ ವರ್ಷಗಳ ನಂತರ ಅಮೆರಿಕ ಬಿಟ್ಟು ಚಿಲಿ ದೇಶಕ್ಕೆ ಹೋದ. ಅಲ್ಲಿಂದ ವಾಪಸು ಬಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ. ಅಪಘಾತವಾದ ಹನ್ನೆರಡು ವರ್ಷಗಳ ನಂತರ ತನ್ನ ಮೂವತ್ತಾರನೆಯ ವಯಸ್ಸಿನಲ್ಲಿ ಮರಣವನ್ನಪ್ಪಿದ.

ಆದರೆ, ಅಪಘಾತಕ್ಕೆ ಮುನ್ನ ಅವನನ್ನು ಚೆನ್ನಾಗಿ ಅರಿತಿದ್ದ ಅವನ ಆಪ್ತರು ಹೇಳುವಂತೆ, ಅಪಘಾತದ ನಂತರ, ಅವನು ಅವನಾಗಿರಲಿಲ್ಲ. ಅವನ ನಡವಳಿಕೆಯಲ್ಲಿ ಮಹತ್ತರ ಬದಲಾವಣೆಯಾಗಿತ್ತು. ಸ್ನೇಹಪರ-ಕರುಣಾಮಯಿ ಆಗಿದ್ದವನು ಅಪಘಾತದ ನಂತರ ಸಿಡುಕುತನದ ಮುಂಗೋಪಿಯಾಗಿ ಬದಲಾಗಿದ್ದ.

ಮಿದುಳಿಗೂ ನಮ್ಮ ನಡವಳಿಕೆಗೂ ಸಂಬಂಧವನ್ನು ಪ್ರಪ್ರಥಮ ಬಾರಿಗೆ ತೋರಿದ ಫಿನಿಯಾಸ್ ಗೇಜ್‌ ನ ಕತೆ ಇಂದು ನ್ಯೂರೋಸೈನ್ಸ್‌ ನ ಪಠ್ಯದ ಒಂದು ಭಾಗ. ಅವನ ಮಿದುಳಿಗೆ ಆದ ಗಾಯದಿಂದ, ಅವನ ನಡವಳಿಕೆಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ಆಯಿತೆಂಬುದು ಕೊಂಚ ಮಟ್ಟಿಗೆ ಚರ್ಚಿತ ವಿಷಯವಾದರೂ, ಅವನ ತಲೆ ಬುರುಡೆ ಮತ್ತು ಅದನ್ನು ಛೇದಿಸಿದ ಹಾರೆ ಇಂದು ಮ್ಯೂಸಿಯಂನಲ್ಲಿ ಪ್ರದರ್ಶಿತವಾಗುವ ವಸ್ತುಗಳು.

******

ನಮ್ಮ ನೆನಪುಗಳನ್ನು, ನಮ್ಮ ನಡವಳಿಕೆಗಳನ್ನು, ಕೊನೆಗೆ ನಾವು ಆಲೋಚಿಸದೆಯೇ ಬಳಸುವ ಸಾಮರ್ಥ್ಯಗಳನ್ನೂ ನಿರ್ಧರಿಸುವ ನಮ್ಮ ಮಿದುಳು ಎಂತಹ ವಸ್ತು? ಅದು ಕೆಲಸ ಮಾಡುವುದಾದರೂ ಹೇಗೆ?

 

ಆಧುನಿಕ ನ್ಯೂರೋಸೈನ್ಸ್ ಹೇಳುವಂತೆ, “ಇದೊಂದು ಮುಖ” ಎಂದು ಗುರುತಿಸುವುದು ಹುಟ್ಟಿನಿಂದಲೇ ಮಿದುಳಿನಲ್ಲಿರುವ ಒಂದು ಸಾಮರ್ಥ್ಯ. ಮುಖ ಗುರುತಿಸಲು ಮಿದುಳಿನಲ್ಲಿ ಒಂದು ಕೇಂದ್ರವೇ ಇದೆ.

ಹದಿನೇಳನೆಯ ಶತಮಾನದ ಇಂಗ್ಲೆಂಡಿನ ರಾಬರ್ಟ್ ಹೂಕ್ ಒಬ್ಬ ಮಹಾವಿಜ್ಞಾನಿ. ಅವನ ಆಸಕ್ತಿಗಳು ಗಣಿತ, ಖಗೋಳ ಶಾಸ್ತ್ರಗಳಿಂದ ಹಿಡಿದು, ಭೂಗರ್ಭ ಶಾಸ್ತ್ರ, ಜೀವಶಾಸ್ತ್ರಗಳವರೆಗೂ ಇತ್ತು. ಚಾರ್ಲ್ಸ್ ಡಾರ್ವಿನ್ ಹುಟ್ಟುವ ಶತಮಾನಗಳ ಮುಂಚೆಯೇ ವಿಕಾಸವಾದದ (Biological Evolution) ಕುರಿತು ಚಿಂತಿಸಿದವನು ಅವನು. ಗುರುತ್ವಾಕರ್ಷಣೆಯ ಕೆಲವೊಂದು ವಿಚಾರಗಳಲ್ಲಿ, ನ್ಯೂಟನ್‌ ಗೂ ಮುನ್ನವೇ ತನ್ನ ಥಿಯರಿಯನ್ನು ಪ್ರಸ್ತುತ ಪಡಿಸಿದವನು ಈ ಹೂಕ್. (ಸಮಕಾಲೀನರಾಗಿದ್ದ ಅವರಿಬ್ಬರಲ್ಲಿ ಇಂತಹ ವಿಷಯಗಳಿಂದಾಗಿ ಭಾರೀ ವೈಷಮ್ಯವೂ ಇತ್ತು) ತನ್ನದೇ ಆದ, ಟೆಲೆಸ್ಕೋಪ್ ನಿರ್ಮಿಸಿ, ಮಂಗಳ ಮತ್ತು ಗುರು ಗ್ರಹಗಳ ಗತಿಯನ್ನು ವಿಷದವಾಗಿ ವಿವರಿಸಿದವನು ಅವನು. ಎಲ್ಲಕ್ಕಿಂತ ಮುಖ್ಯವಾಗಿ, ಮೈಕ್ರೋಸ್ಕೋಪ್ ಒಂದನ್ನು ನಿರ್ಮಿಸಿ, ಸೂಕ್ಷ್ಮ ಜೀವಿಗಳ ಇರುವಿಕೆಯನ್ನು ಪ್ರಪ್ರಥಮ ಬಾರಿಗೆ ವಿಜ್ಞಾನ ಪ್ರಪಂಚಕ್ಕೆ ತೋರಿಸಿಕೊಟ್ಟವನು ಈ ರಾಬರ್ಟ್ ಹೂಕ್.

(ರಾಬರ್ಟ್ ಹೂಕ್‌)

ರಾಬರ್ಟ್ ಹೂಕ್‌ ನ ನಂತರದ ಶತಮಾನಗಳಲ್ಲಿ, ಮೈಕ್ರೋಸ್ಕೋಪ್‌ ಗಳ ಗುಣಮಟ್ಟದಲ್ಲಿ ಏರಿಕೆಯಾಗಿ, ಜೀವಶಾಸ್ತ್ರದಲ್ಲಿ ಮಹತ್ವದ ಬೆಳವಣಿಗೆಗಳಾದವು. ಅದರಲ್ಲಿ ಅತಿ ಮುಖ್ಯವಾದ ಒಂದು ಬೆಳವಣಿಗೆ ಎಂದರೆ, ಹತ್ತೊಂಬತ್ತನೆಯ ಶತಮಾನದಲ್ಲಿ, ಷ್ಲಯ್ಡೆನ್ ಮತ್ತು ಶ್ವಾನ್ (Schleiden and Schwann) ಎಂಬ ಜರ್ಮನ್ ವಿಜ್ಞಾನಿಗಳು ಮುಂದಿಟ್ಟ, ಪ್ರತಿಯೊಂದು ಜೀವಿಯೂ ಜೀವಕೋಶಗಳಿಂದಲೇ ನಿರ್ಮಿತವಾಗಿವೆ ಎಂಬ “ಜೀವಕೋಶಗಳ ಸಿದ್ಧಾಂತ”. ಈ ಸಿದ್ಧಾಂತದಂತೆ, ನಮ್ಮ ದೇಹದ ಪ್ರತಿಯೊಂದು ಭಾಗವೂ ಜೀವಕೋಶಗಳಿಂದಲೇ ಮಾಡಲ್ಪಟ್ಟಿವೆ. ಮಿದುಳೂ ಸೇರಿದಂತೇ!

ಮಿದುಳೂ ಜೀವಕೋಶಗಳಿಂದಲೇ ನಿರ್ಮಿತವಾಗಿರುವುದನ್ನು ಹತ್ತೊಂಬತ್ತನೆಯ ಶತಮಾನದ ಜೀವಶಾಸ್ತ್ರಜ್ಞರು ಒಪ್ಪಿಕೊಂಡಿದ್ದರೂ, ಮಿದುಳಿನ ಜೀವಕೋಶಗಳನ್ನು ಮೈಕ್ರೋಸ್ಕೋಪಿನಲ್ಲಿ ನೋಡುವುದು ಅವರಿಗೆ ಸಾಧ್ಯವಿರಲಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣವಿತ್ತು: ಒಂದು, ಮಿದುಳಿನಲ್ಲಿ ಈ ಜೀವಕೋಶಗಳು ಅತಿ ಒತ್ತಾಗಿ ಇವೆ. (ಸುಮಾರು ಒಂದೂಕಾಲು ಕೆ.ಜಿ.ಯಷ್ಟು ತೂಕದ ಮಾನವ ಮಿದುಳಿನಲ್ಲಿ, ಹತ್ತು ಸಾವಿರ ಕೋಟಿ ಜೀವಕೋಶಗಳು ಒಟ್ಟುಗೂಡಿವೆ!) ಎರಡು, ಮಿದುಳಿನ ಜೀವಕೋಶಗಳ ಆಕಾರ, ಉಳಿದ ಜೀವಕೋಶಗಳಂತಿಲ್ಲ; ಮರಗಳ ರೆಂಬೆ-ಬೇರುಗಳಂತೆ ಚಿತ್ರ ವಿಚಿತ್ರವಾಗಿದೆ.

ಮಿದುಳಿನಲ್ಲಿನ ಜೀವಕೋಶಗಳನ್ನು ಮೈಕ್ರೋಸ್ಕೋಪ್ ಮೂಲಕ ಕಾಣಲು ಕೊಂಚ ಮಟ್ಟಿನ ಪೂರ್ವ ಸಿದ್ಧತೆಗಳು ಅವಶ್ಯಕ. ಇದನ್ನು ಪ್ರಪ್ರಥಮ ಬಾರಿಗೆ ತೋರಿಸಿ ಕೊಟ್ಟವನು, ಇಟಲಿಯ ವೈದ್ಯ ಮತ್ತು ಜೀವಶಾಸ್ತ್ರಜ್ಞ ಕೆಮಿಲ್ಲೋ ಗೋಲ್ಗಿ. ಮಿದುಳನ್ನು ತೆಳು-ಪದರವಾಗಿ ಕತ್ತರಿಸಿ, ಅದನ್ನು ಮೈಕ್ರೋಸ್ಕೋಪ್‌ ನಲ್ಲಿ ಇಡುವ ಮುನ್ನ, ಆ ಪದರಕ್ಕೆ ಬೆಳ್ಳಿಯ ರಾಸಾಯನಿಕ ಮಿಶ್ರಣವನ್ನು ಸೇರಿಸಿದರೆ, ಜೀವಕೋಶಗಳು ಬಿಡಿ-ಬಿಡಿಯಾಗಿ ಕಾಣುವುದನ್ನು ಗೋಲ್ಗಿ ೧೮೭೩ರಲ್ಲಿ ಪ್ರಕಟಿಸಿದ. ತನ್ನ ಈ ಶೋಧನೆಯ ಮೂಲಕ ಗೋಲ್ಗಿ ಒಂದು ನಿರ್ಧಾರಕ್ಕೆ ಬಂದ, ಮಿದುಳೆಂದರೆ, ಜೀವಕೋಶಗಳು ಒಂದಕ್ಕೊಂದು ಅಂಟಿಕೊಂಡು ನಿರ್ಮಿತವಾಗಿರುವ ಒಂದು ಸಂಕೀರ್ಣ ನೆಟ್‌ವರ್ಕ್.

ಗೋಲ್ಗಿಯ ಶೋಧನೆಗಳನ್ನು ಮುಂದುವರೆಸಿದವನು, ಅವನ ಸಮಕಾಲೀನನಾದ ಸ್ಯಾಂಟಿಯಾಗೋ ರಮೋನ್ ಯಿ ಕಹಾಲ್. ೧೮೫೨ರಲ್ಲಿ, ಸ್ಪೇನಿನ ಸಣ್ಣ ಪಟ್ಟಣವೊಂದರಲ್ಲಿ ಜನ್ಮತಾಳಿದ ಕಹಾಲ್, ಬಾಲ್ಯದಲ್ಲಿ ಮಹಾತುಂಟ. ತನ್ನ ಪಕ್ಕದ ಮನೆಯವರ ಗೇಟ್ ಮುರಿದು ಜೈಲು ನೋಡಿದವನೂ ಸಹ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವನಿಗೆ, ಅವನ ಮನೆಯವರಿಂದ ಅದನ್ನು ಮುಂದುವರೆಸಲು ಬೇಕಿದ್ದ ಒತ್ತಾಸೆ ಸಿಗಲಿಲ್ಲ. ಕಹಾಲ್‌ ನ ಅಪ್ಪ, ಅವನನ್ನು ಚಪ್ಪಲಿ ಮಾಡುವವನ ಬಳಿ ಕೆಲಸಕ್ಕೆ ಸೇರಿಸಿದ. ನಂತರದಲ್ಲಿ, ಕ್ಷೌರಿಕನೊಬ್ಬನ ಸಹಾಯಕನಾಗಿ ದುಡಿದದ್ದೂ ಆಯಿತು. ತನ್ನ ಹದಿನಾರನೆಯ ವರ್ಷದಲ್ಲಿ, ಸ್ಮಶಾನವೊಂದರಲ್ಲಿ, ಸುತ್ತುತ್ತಾ ಅಸ್ತಿ-ಪಂಜರಗಳ ಚಿತ್ರಗಳನ್ನು ಬಿಡಿಸುವಾಗ, ವೈದ್ಯಕೀಯ ಶಿಕ್ಷಣದ ಕುರಿತು ಯೋಚನೆ ಬಂತು. ಅವನ ತಂದೆಯ ಇಚ್ಚೆಯಂತೆ ಕಹಾಲ್ ವೈದ್ಯಕೀಯ ಶಿಕ್ಷಣ ಪೂರ್ಣಮಾಡಿದ.

೧೮೮೭ರಲ್ಲಿ, ಕಹಾಲ್‌ ನಿಗೆ, ಮಿದುಳಿನ ಜೀವಕೋಶಗಳನ್ನು ಮೈಕ್ರೋಸ್ಕೋಪ್ ಮೂಲಕ ನೋಡುವ ಗೋಲ್ಗಿಯ ವಿಧಾನ ತಿಳಿದು ಬಂತು. ಮುಂದಿನ ಹಲವು ವರ್ಷಗಳ ಕಾಲ, ಕಹಾಲ್, ಮಿದುಳಿನ ಈ ಜೀವಕೋಶಗಳನ್ನು ಅತ್ಯಂತ ಕೂಲಂಕುಶವಾಗಿ ಪರಿಶೀಲಿಸಿದ. ತಾನು ಮೈಕ್ರೋಸ್ಕೋಪಿನಲ್ಲಿ ಕಂಡದ್ದನ್ನು, ಅತ್ಯಂತ ಶ್ರದ್ಧೆ-ಲಕ್ಷ್ಯಗಳಿಂದ ಸ್ಕೆಚ್ ಮಾಡಿದ. ಚಿತ್ರಕಲೆಯಲ್ಲಿ ಅವನಿಗಿದ್ದ ಆಸಕ್ತಿ ಖಂಡಿತಾ ಕೆಲಸ ಮಾಡಿರಬೇಕು! ಮಿದುಳಿನ ಜೀವಕೋಶಗಳ ಅವನ ಸ್ಕೆಚ್‌ ಗಳಲ್ಲಿ, ವೈಜ್ಞಾನಿಕತೆಯನ್ನು ಮೀರುವ ಕಲೆಗಾರಿಕೆಯನ್ನು ನಾವು ಕಾಣಬಹುದು. ನ್ಯೂರೋಸೈನ್ಸ್ ಲ್ಯಾಬರೇಟರಿಗಳಲ್ಲಿ, ಅವನ ಈ ಸ್ಕೆಚ್‌ ಗಳನ್ನು ಪೋಸ್ಟರುಗಳಂತೆ ಇಂದೂ ಸಹ ಉಪಯೋಗಿಸುತ್ತಾರೆ.

ಕಹಾಲ್ ಮಿದುಳಿನ ಈ ಜೀವಕೋಶಗಳ ಕೂಲಂಕುಷ ಚಿತ್ರಣವನ್ನು ಮಾಡಿದ್ದಷ್ಟೇ ಅಲ್ಲ, ಮಿದುಳಿನ ಬಗೆಗೆ ತನ್ನದೇ ಆದ ಸಿದ್ಧಾಂತವನ್ನು ಪ್ರಕಟಿಸಿದ. ಕಹಾಲ್‌ ನ ಈ ಸಿದ್ಧಾಂತ, ಆಧುನಿಕ ನ್ಯೂರೋಸೈನ್ಸ್‌ ನ ಬುನಾದಿ ಎನ್ನಬಹುದು. ಹೀಗಾಗಿ ಕಹಾಲ್‌ ನನ್ನು ಪ್ರಪ್ರಥಮ ನ್ಯೂರೋಸೈಂಟಿಸ್ಟ್ ಎಂದೂ ಗುರುತಿಸಲಾಗುತ್ತದೆ.

(ಕೆಮಿಲ್ಲೋ ಗೋಲ್ಗಿ)

ಕಹಾಲ್‌ ನ ಸಿದ್ಧಾಂತವನ್ನು ನ್ಯೂರಾನ್ ಡಾಕ್ಟ್ರಿನ್ ಎನ್ನುತ್ತಾರೆ. (ಮಿದುಳಿನ ಜೀವಕೋಶಗಳಿಗೆ “ನ್ಯೂರಾನ್” ಎಂಬ ಹೆಸರನ್ನಿತ್ತವನು, ಕಹಾಲ್ ಅಲ್ಲ; ವಾಲ್ಡೆಯರ್-ಹಾರ್ಟ್ಜ್ ಎಂಬ ಜರ್ಮನ್ ವಿಜ್ಞಾನಿ).

ಇಂದು ಕಹಾಲ್‌ ನ ನ್ಯೂರಾನ್ ಸಿದ್ಧಾಂತ, ಮತ್ತಷ್ಟು ಮುಂದುವರೆದಿದೆ. ಆದರೆ, ಈ ವಿಷಯದಲ್ಲಿ ಕಹಾಲ್‌ ನ ವಾದವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ಮಿದುಳು ನ್ಯೂರಾನ್‌ ಗಳೆಂಬ ಜೀವಕೋಶಗಳಿಂದ ನಿರ್ಮಿತವಾಗಿರುವಂತಹ ಒಂದು ಅಂಗ. ಈ ನ್ಯೂರಾನ್‌ ಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ; ಅವುಗಳ ಮಧ್ಯೆ ಅತಿ ಕಿರಿದಾದ ಜಾಗವಿರುತ್ತದೆ. ಇಂದ್ರಿಯಗಳು ಕಳುಹಿಸುವ ಸಂದೇಶಗಳು ಎಲೆಕ್ಟ್ರಿಕ್ ಸಿಗ್ನಲ್‌ ಗಳಂತೆ ನ್ಯೂರಾನ್‌ ಗಳಲ್ಲಿ ರವಾನೆಯಾಗುತ್ತವೆ. ಈ ಎಲೆಕ್ಟ್ರಿಕ್ ಸಿಗ್ನಲ್‌ ಗಳು ನ್ಯೂರಾನ್‌ ಗಳಲ್ಲಿ ಒಂದೇ ದಿಕ್ಕಿನಲ್ಲಿ ಪ್ರವಹಿಸುತ್ತವೆ.

ಇವೆಲ್ಲಕ್ಕಿಂತ ಮುಖ್ಯವಾಗಿ, ಈ ವಾದಗಳೊಂದಿಗೇ, ಇನ್ನೊಂದು ಅತ್ಯಂತ ಪ್ರಮುಖವಾದ ವಾದವೊಂದನ್ನು ಕಹಾಲ್ ಮುಂದಿಟ್ಟ: “ನ್ಯೂರಾನ್‌ ಗಳಿಗೆ ಬೆಳೆಯುವ ಸಾಮರ್ಥ್ಯವಿದ್ದು, ಅವು ಅಕ್ಕ-ಪಕ್ಕದ ನ್ಯೂರಾನ್‌ ಗಳೊಂದಿಗೆ ಹೊಸ-ಹೊಸ ಕನೆಕ್ಷನ್‌ ಗಳನ್ನು ಸೃಷ್ಟಿಸುತ್ತವೆ. ನಮ್ಮ ಕಲಿಕೆಯ ಸಾಮಾರ್ಥ್ಯವನ್ನು ಈ ಕನೆಕ್ಷನ್‌ ಗಳು ವಿವರಿಸಬಲ್ಲವು.”

“ನೆನಪುಗಳು ಎಂದರೆ ಏನು?” ಎನ್ನುವ ಪ್ರಶ್ನೆಗೆ, ಕಹಾಲ್‌ ನ ಮೇಲಿನ ಹೇಳಿಕೆಯಲ್ಲಿ ಉತ್ತರವಿದೆ. ಅದನ್ನು ಮುಂದೆ ಮತ್ತಷ್ಟು ವಿವರವಾಗಿ ಗಮನಿಸೋಣ.

ಕೆಮಿಲ್ಲೋ ಗೋಲ್ಗಿ, ಕಹಾಲ್‌ ನ ನ್ಯೂರಾನ್ ಸಿದ್ಧಾಂತವನ್ನು ಒಪ್ಪಿಕೊಳ್ಳಲಿಲ್ಲ. ಅವನ ಪ್ರಕಾರ, ನ್ಯೂರಾನ್‌ ಗಳ ಮಧ್ಯೆ ಜಾಗವಿರುವುದು ಸಾಧ್ಯವಿರಲಿಲ್ಲ; ನ್ಯೂರಾನ್‌ ಗಳು ಒಂದಕ್ಕೊಂದು ಸಂಧಿಸುವ ಜಾಗಗಳಲ್ಲಿ ತಡೆಗೋಡೆಗಳಿಲ್ಲವೆಂಬುದು ಅವನ ವಾದವಾಗಿತ್ತು.

ಆದರೆ, ಇಂದಿನ ನ್ಯೂರೋಸೈನ್ಸ್ ಪ್ರಕಾರ, ನ್ಯೂರಾನ್‌ ಗಳ ನಡುವಿನ “ಸಿನಾಪ್ಟಿಕ್ ಕ್ಲೆಫ್ಟ್” ಎಂಬ ಈ ಜಾಗಗಳು ಇರುವುದು ನಿಜವಷ್ಟೇ ಅಲ್ಲ, ಕೇವಲ ೨೦ ನ್ಯಾನೋ ಮೀಟರ್ ಗಳಿರುವ (ಎಂದರೆ, ಕೂದಲೆಳೆಯ ಐದುಸಾವಿರದಲ್ಲೊಂದು ಭಾಗ) ಈ ಅತಿ ಸೂಕ್ಷ್ಮಾತಿ-ಸೂಕ್ಷ್ಮ ಕಣಿವೆಗಳಲ್ಲಿ ಮಾನವೀಯತೆಯ ಮುಖಗಳಾದ ನಮ್ಮೆಲ್ಲಾ ಭಾವಗಳೂ, ಕೊನೆಗೆ “ಆತ್ಮ”ದ ಪ್ರಜ್ಞೆಯೂ ಅಡಗಿವೆ. ನಮ್ಮೆಲ್ಲಾ ನೆನಪುಗಳು ಅಲ್ಲಿಯೇ ಇವೆ. ಈ ಕಣಿವೆಗಳಿಲ್ಲದೆ ನಾವಿಲ್ಲ.


ಮಿದುಳಿನ ಜೀವಕೋಶಗಳ ಬಗೆಗಿನ ಸಂಶೋಧನೆಗಾಗಿ, ಕಮಿಲ್ಲೋ ಗೋಲ್ಗಿ ಮತ್ತು ರಮೋನ್ ಕಹಾಲ್ ಇಬ್ಬರಿಗೂ ಜಂಟಿಯಾಗಿ ೧೯೦೬ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲೂ ಅವನು, ಕಹಾಲ್‌ ನ ಸಿದ್ಧಾಂತದ ವಿರುದ್ಧವಾಗಿಯೇ ಮಾತನಾಡಿದ. ಇದು ಅವರಿಬ್ಬರ ನಡುವೆ ಜೀವನಾದ್ಯಂತ ಮುನಿಸಿಗೆ ಕಾರಣವಾಯಿತು.

(ಮುಂದುವರೆಯುವುದು)

****
(*) https://en.wikipedia.org/wiki/The_Man_Who_Mistook_His_Wife_for_a_Hat