ದ ಒನ್ಲಿ ರೋಡ್ ಟೆಕನ್

ಅದೇ ರಸ್ತೆ ಅದೇ ಗಿಡ
ಅದೇ ಹೊಲ ಅದೇ ದಾರಿ
ಗಿಡದ ತಂಪು ನೆರಳಲಿ
ಸಾಗಿದ ದಿನಗಳು
ಬಿಸಿಲ ಮರೆಯುವಂತೆ ಮಾಡಿ
ಕ್ರಮಿಸಿದ ಅರಿವಿಲ್ಲದೆ

ಹೂವುಗಳು ಗೆಳೆಯರಾಗಿ
ಸೂರ್ಯ ಭವಿಷ್ಯವಾಗಿ
ಚಂದ್ರಮ ಪ್ರೋತ್ಸಾಹವಾಗಿ
ನಕ್ಷತ್ರಗಳು ಕನಸುಗಳಾಗಿ
ಖಾಲಿ ಕಿಸೆಯಲ್ಲಿ ಇಟ್ಟುಕೊಂಡಿದ್ದೆ

ಓತಿಕಾಟದ ಬಣ್ಣ ಬದಲಾಯಿಸಿದ ದಿನಗಳು
ಅದೇ ದಾರಿ ಬೇಸರ
ರಸಹೀನವಾಗಿ, ಸಾಗಲು ಹಿಂಸೆ
‘ದ ರೋಡ್ ನಾಟ್ ಟೇಕನ್’ ನಲ್ಲಿ
ರಾಬರ್ಟ್ ಫ್ರೋಸ್ಟ’ ಆಯ್ಕೆ ಮಾಡದ ದಾರಿಯ
ಪಶ್ಚಾತ್ತಪವಿರಬಾರದೆನ್ನುತ್ತಾನೆ’
ಇರಬೇಕು ಆಯ್ದ ದಾರಿ
ನಿಷ್ಠುರವಾಗಿ ಪರಿಪೂರ್ಣವೇ

ದಾರಿ ಎರಡಿದ್ದಾಗ ಈ ಪ್ರಶ್ನೆ
ಒಂದೇ ಇದ್ದರೆ….
ಸಿಕ್ಕಿದ್ದನ್ನೇ ನಡೆದು
ಸಾಗಬೇಕು, ಹೊಟ್ಟೆ ಹೊಡೆಯಬೇಕು
ಹೊಗಳುತ್ತ, ಪ್ರಾಪ್ತಿಯಾದದನ್ನೇ

ಹೂವುಗಳು ಬಾಡಿ ಉದುರಿವೆ
ಸೂರ್ಯ ಸುಡುತ್ತಿದ್ದಾನೆ
ಚಂದ್ರಮ ದ್ವೇಷಿಸುತ್ತಿದ್ದಾನೆ
ನಕ್ಷತ್ರಗಳು ಚೂರಾಗಿ ನೆಲಕ್ಕಪ್ಪಳಿಸಿವೆ
ಖಾಲಿ ಕಿಸಿ ಹರಿದಿದೆ

ಸಾಗಿದ ನೋವ ಬಂಡೆಗಳ ಕಥೆಯ
ಕಿವಿಗಳು ಕೇಳುವುದಿಲ್ಲ
ಕಣ್ಣುಗಳು ನೋಡುವುದಿಲ್ಲ
ಹೃದಯದ ಅಪ್ಪುಗೆಯಂತೂ ಇಲ್ಲವೇ ಇಲ್ಲ
ಕೊನೆಗೆ ಸಂತೈಸುವ
ಎರಡು ಕೈಗಳೂ ತಲೆ ಮೇಲಿಲ್ಲ