ಡಾರ್ವಿನ್ ತನ್ನ ವಿಕಾಸವಾದ ಮುಂದೊಡ್ಡಿದ ಹತ್ತೊಂಬತ್ತನೇ ಶತಮಾನದಿಂದ ಅದಕ್ಕೆ ಹೊಸ ಆಧಾರಗಳು ನಿರಂತರವಾಗಿ ಸಿಗುತ್ತಲೇ ಇವೆ. ಜೀವಜಾತಿಗಳ ಲಕ್ಷಣಗಳು ಹಾಗು ಅವು ಬದಲಾಗುವ ಪರಿಗೆ ಹಲವು ಪಳೆಯುಳಿಕೆಗಳು ಆಧಾರವಾಗಿವೆ. ಈಗ ಜೀವ ರಾಶಿಯ ಕೆಲವು ಟಿಸಿಲುಗಳು ದೃಢವಾಗಿ ಸ್ಥಾಪಿತವಾಗಿವೆ. ಇನ್ನು ಕೆಲವು ಟಿಸಿಲುಗಳು ನಿರಂತರವಾಗಿ ಪರಿಶೋಧಗೊಂಡು ರಿಫೈನ್ ಆಗುತ್ತಲೇ ಇದೆ. ವೈರಾಣುಗಳ ಸಂಕ್ಷಿಪ್ತ ಆಯುಷ್ಯ ವಿಕಸನದ ಹೆಜ್ಜೆಗುರುತಿನ ಹೊಸ ಹೊಳಹುಗಳನ್ನು ನಮಗೆ ನೀಡಿದೆ.

ಚಿಂಪಾಜಿಗಳಿಗೆ ಮನುಷ್ಯ ಅತಿ ಹತ್ತಿರದ ಸಂಬಂಧಿ ಎಂಬುದು ಈಗ ಗೊತ್ತಾಗಿದೆ. ಡಿಯನ್ನೆ ಆಧಾರದ ಮೇಲೆ ನಮ್ಮ ನಮ್ಮ ವಂಶವಾಹಿಗೂ ಅವುಗಳಕ್ಕೂ ನೂರಕ್ಕೆ ೯೫ ರಿಂದ ೯೮ ಪಾಲು ಸಾಮ್ಯವಿದೆ ಎಂದು ಸಂಶೋಧನೆಗಳು ತೋರಿಸಿದೆ. ಇದು ಮನುಷ್ಯನನ್ನು ಪ್ರಾಣಿಲೋಕದೊಳಕ್ಕೆ ಬೆಸದಿದ್ದರೂ ಕೂಡ – ವಿಕಸನದ ಹಾದಿಯ ನಿರಂತರ ಹೆಜ್ಜೆಯಲ್ಲಿ ಮಿಸ್ಸಿಂಗ್ ಲಿಂಕೊಂದಿದೆ ಎಂದು ವಿಜ್ಞಾನಿಗಳು ಮರೆತಿಲ್ಲ. ಅದರ ಹುಡುಕಾಟದಲ್ಲಿ ಈ ಮಿಸ್ಸಿಂಗ್ ಲಿಂಕಿನ ಪರಿಪೂರ್ಣ ಕೊಂಡಿ ದೊರಕಿರಲಿಲ್ಲ – ಇತ್ತೀಚಿನವರೆಗೆ.

ಜರ್ಮನಿಯಲ್ಲಿರುವ ಮೆಸ್ಸಿಲ್ ಪಿಟ್ ಎಂಬ ಒಂದು ಜ್ವಾಲಾಮುಖಿಯ ಹೊಂಡದಲ್ಲಿ ಈ ಹಿಂದೆ ಒಂದೆರಡು ವಿಶಿಷ್ಟ ಪಳೆಯುಳಿಕೆಗಳು ದೊರಕಿದ್ದವು. ಮಿಲಿಯಾಂತರ ವರ್ಷಗಳ ಹಿಂದೆ ಅದೊಂದು ನೀರಿನ ಕೊಳವಾಗಿತ್ತು. ನೀರಡಿಯ ಜ್ವಾಲಾಮುಖಿ ಆಗಾಗ ವಿಷಾನಿಲವನ್ನು ಸೂಸುತ್ತಲೇ ಇತ್ತು. ಅಲ್ಲಿ ಸತ್ತ ಪ್ರಾಣಿಗಳ ಪಳೆಯುಳಿಕೆಗಳು ಕೊಳದ ತಳ ಸೇರಿ ಸುರಕ್ಷಿತವಾಗಿ ಉಳಿದಂತಹವು. ಅಲ್ಲಿ ಸಿಕ್ಕ ಪಳೆಯುಳಿಕೆಗಳು ಆಫ್ರಿಕಾದಲ್ಲಿ ಸಿಕ್ಕ ಪಳೆಯುಳಿಕೆಗಳೊಂದಿಗೆ ಸಾಮ್ಯತೆ ಹಾಗೂ ಪಲ್ಲಟಗಳನ್ನು ಹುಡುಕುವಲ್ಲಿ ಸಹಾಯ ಮಾಡಿವೆ.

ಡಾರ್ವಿನನ ಇನ್ನೂರನೇ ಹುಟ್ಟುಹಬ್ಬದ ಈ ವರ್ಷದಲ್ಲಿ, ಒಂದು ಹೊಸ ಪಳೆಯುಳಿಕೆಯ ಬಗ್ಗೆ ಶೋಧನೆ ಹಾಗು ಪರಿಚಯವನ್ನು ವಿಜ್ಞಾನಿಗಳು ಬೆಳಕಿಗೊಡ್ಡಿದ್ದಾರೆ. ಮೆಸ್ಸಿಲ್ ಪಿಟ್‌ನಲ್ಲಿ ಸಿಕ್ಕ ಒಂದು ಪಳೆಯುಳಿಕೆ ಮಾನವ ಟಿಸಿಲಿಂದ ಬೇರ್ಪಟ್ಟ ‘ಲೆಮುರ್‍‍’ನಂತೆ ಮೊದಲಿಗೆ ಕಾಣುತ್ತದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ – ಆ ಪಳೆಯುಳಿಕೆಗೆ ಲೆಮೂರಿನಂತೆ ‘ಬಾಚಣಿಗೆ ಹಲ್ಲು’ ಇಲ್ಲದಿರುವುದು ಗೊತ್ತಾಗಿದೆ. ಅದರ ಕೈಕಾಲಿನ ಬೆರಳು ಪ್ರಾಣಿಗಳ ಪಂಜಗಳಂತೆ ಇರದೆ ಮನುಷ್ಯ ಜಾತಿಗೆ ಹತ್ತಿರವಾಗಿದೆಯಂತೆ. ಟೇಲಸ್ ಎಂಬ ಹಿಮ್ಮಡಿ ಮೂಳೆಯೂ ಮನುಷ್ಯನಿಗೆ ಇರುವಂತೆಯೇ ಇದೆ ಎಂದು ಕಂಡಿದ್ದಾರೆ. ಹೀಗೆ ಸುಮಾರು ೩೦ ವಿಶಿಷ್ಟ ಲಕ್ಷಣಗಳಲ್ಲಿ ಅವು ‘ಲೆಮುರ್‍’ಗಿಂತ ಮನುಷ್ಯನಿಗೇ ಹತ್ತಿರವಾಗಿ ಕಂಡಿದೆ. ಹಾಗಾಗಿ ಇದೇ ಮನುಷ್ಯನನ್ನು ಪ್ರಾಣಿಲೋಕಕ್ಕೆ ಬೆಸೆಯುವ ಪ್ರಾಣಿಜಾತಿ ಇರಬೇಕೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಡಾರ್ವಿನ್ ನೆನಪಿಗಾಗಿ ಆ ಜಾತಿಯನ್ನು ‘ಡಾರ್ವಿನಿಯಸ್ ಮೆಸ್ಸಿಲ್ಲೆ’ ಎಂದು ಕರೆದಿದ್ದಾರೆ.

ಸುಮಾರು ನಲವತ್ತು ಮಿಲಿಯನ್ ವರ್ಷ ಹಳೆಯದೆನ್ನಲಾದ ಈ ಹೆಣ್ಣು ಪ್ರಾಣಿ/ಮನುಷ್ಯನ ಪಳೆಯುಳಿಕೆ ಅತ್ಯಂತ ಜೋಪಾನವಾಗಿ ಕೆಡದಂತೆ ಉಳಕೊಂಡಿರುವುದು ವಿಜ್ಞಾನಿಗಳಿಗೆ ವರದಾನವಾಗಿದೆ. ಆ ಪಳೆಯುಳಿಕೆಯನ್ನು ಎಕ್ಸ್-ರೇ, ಸ್ಕ್ಯಾನುಗಳಿಗೆ ಒಳಪಡಿಸಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಕಾಣುವಂತಾಗಿದೆ. ಚರ್ಮ, ಅದರ ಮೇಲಿನ ಮೈಗೂದಲು ಕೂಡ ಕಾಣಲು ಸಿಕ್ಕಿದೆ. ಅದರ ಬಲಗೈ ಮಣಿಗಂಟು ಮುರಿದಿದೆ. ಅದರ ಹೊಟ್ಟೆಯಲ್ಲಿ ಸಾಯುವ ಮುಂಚೆ ತಿಂದ ಕೆಲವು ಹಣ್ಣು ಹಂಪಲು ಎಲೆಗಳು ಕೂಡ ಕಾಣ ಸಿಕ್ಕಿದೆ. ಪೂರ್ಣ ಬೆಳವಣಿಗೆಯ ಎಂಬತ್ತಂಶದಷ್ಟು ಬೆಳೆದಿರಬೇಕು ಎಂದು ಅಂದಾಜಿಸಿದ್ದಾರೆ. ಅಂದರೆ ಮನುಷ್ಯನ ಲೆಕ್ಕದಲ್ಲಿ ಸುಮಾರು ಆರು ವರ್ಷದ ಮಗುವಿಗೆ ಸಮಾನ ಎನ್ನುತ್ತಾರೆ. ಬಹುಶಃ ತಿಂದು ಬಾಯಾರಿ ಆ ಜ್ವಾಲಾಮುಖಿಯ ಕೊಳಕ್ಕೆ ನೀರುಕುಡಿಯಲು ಇಳಿದಾಗ ನೀರಿಗೆ ಬಿದ್ದಿರಬಹುದೆಂದು ವಿಜ್ಞಾನಿಗಳ ಅಂದಾಜು. ಬಲಗೈ ಭದ್ರವಿಲ್ಲದ ಕಾರಣ ಮೇಲೆ ಬರಲಾಗದೆ, ನೀರಿನ ವಿಷಾನಿಲ ಆವರಿಸಿ ಸತ್ತಿರಬಹುದೆಂದು ಕಲ್ಪಿಸಿಕೊಂಡಿದ್ದಾರೆ. ಓಸ್ಲೋ ವಿಶ್ವವಿದ್ಯಾಲಯದ ಡಾ. ಯ್ಹೋರ್ನ್ ಹರುಮ್‌ನ ಆರು ವರ್ಷದ ಮಗಳ ಹೆಸರನ್ನಿಟ್ಟು ‘ಈಡ’ ಎಂದು ಆ ಪಳೆಯುಳಿಕೆಯ ಹುಡುಗಿಯನ್ನು ಕರೆದಿದ್ದಾರೆ. ಈಡ ನಿಜವಾಗಿಯೂ ಮಿಸ್ಸಿಂಗ್ ಲಿಂಕಾಗಿರಬಹುದೇ ಎಂದು ಈಗ ಚರ್ಚೆ ಹಾಗು ಸಂಶೋಧನೆ ನಡೆದಿದೆ.

ಪ್ರಾಣಿಜಾತಿಗಳ ಸಾಮ್ಯ ಹಾಗು ಬೇರೆತನವನ್ನು ಸ್ಥಾಪಿಸಲು ಸುಮಾರು ಇನ್ನೂರು ಮುನ್ನೂರು ಗುಣಲಕ್ಷಣಗಳನ್ನು ಗುರುತಿಸಿ ಹೋಲಿಸುವುದು ಸಾಮಾನ್ಯವಂತೆ. ಈಡಗೆ ಸಂಬಂಧಿಸಿದಂತೆ ಬರೇ ಮೂವತ್ತು ಪರಿಚೆಯನ್ನು ಹೋಲಿಸಿದ್ದಾರೆ ಎಂಬ ದೊಡ್ಡ ಅಪಾದನೆಯನ್ನು ಇತರ ವಿಜ್ಞಾನಿಗಳು ಮಾಡಿದ್ದಾರೆ. ಆ ಮೂವತ್ತು ಲಕ್ಷಣಗಳು ತಮ್ಮ ನಿಲುವಿಗೆ ಅನುಕೂಲವಾಗುವಂತೆ ಆಯ್ದುಕೊಂಡಿರಬಹುದು ಎಂದಿದ್ದಾರೆ. ಈಡ ಲೆಮುರಿನಿಂದ ಬೇರ್ಪಟ್ಟು ಮನುಷ್ಯ ಜಾತಿಗೆ ಹತ್ತಿರದ ಜೀವ ಜಾತಿಯೆಂದು ನಿರ್ಧರಿಸಲು ಇನ್ನೂ ಸಂಶೋಧನೆಯ ಅಗತ್ಯವಿದೆ ಎಂದು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ. ಇದು ಲೆಮುರ್‍ ಎಂದೇ ಸ್ಥಾಪಿತವಾಗಬಹುದೆಂದೂ ಅನುಮಾನವೆತ್ತಿದ್ದಾರೆ. ಎರಡು ವರ್ಷದ ಸಂಶೋಧನೆಯಿಂದಲೇ ಇದನ್ನು ‘ಮಿಸ್ಸಿಂಗ್ ಲಿಂಕ್’ ಎಂದು ಪ್ರಚಾರ ಮಾಡುವುದು ತಪ್ಪೆನ್ನುತ್ತಾರೆ. ಪ್ರಾಣಿಲೋಕದ ಅದ್ಭುತ ಸಾಕ್ಷ್ಯ ಚಿತ್ರಗಳನ್ನು ತೆಗೆದಿರುವ ಡೆವಿಡ್ ಅಟೆನ್‌ಬರೋ ಈಡ ಬಗ್ಗೆ ಈಗಾಗಲೇ ಡಾಕ್ಯುಮೆಂಟರಿ ತೆಗೆದಿದ್ದಾನೆ. ಅಲ್ಲದೆ ಜನಪ್ರಿಯತೆಗೆ ಹಾಗು ವ್ಯಾಪಾರೀಕರಣಕ್ಕೆ ವಿಜ್ಞಾನ ತನ್ನನ್ನು ಮಾರಿಕೊಂಡಿತೇ ಎಂಬ ಗಂಭೀರ ಚರ್ಚೆಗೂ ಈ ಸಂಶೋಧನೆ ಎಡೆ ಮಾಡಿಕೊಟ್ಟಿದೆ.

ಜೀವ ವಿಕಾಸದ ಆಸಕ್ತರಷ್ಟೇ ಅಲ್ಲ, ವಿಜ್ಞಾನದ ಪರಿಚಲನೆಯನ್ನು ಹಾಗು ಕಾಣ್ಕೆಗಳನ್ನು ಹಗುರವಾಗಿ ನೋಡುವವರೂ ಈಡ ಬಗ್ಗೆ ಈ ಬರುವ ವರ್ಷಗಳಲ್ಲಿ ನಡೆಯುವ ಚರ್ಚೆಯನ್ನು ಗಮನಿಸಬೇಕು. ಈಡ ನಮ್ಮವಳಾಗುತ್ತಾಳೋ ಇಲ್ಲವೋ ಎಂಬ ನಿಲುವಿಗೆ ಬರಲು ಇನ್ನೂ ತುಂಬಾ ಕೆಲಸವಿರುವಂತೆ ಕಾಣುತ್ತದೆ. ನಮ್ಮವಳು ಹೌದಾದರೆ ಅದೊಂದು ಅತ್ಯಂತ ಮಹತ್ವಪೂರ್ಣ ಸಂಗತಿಯಾಗುತ್ತದೆ. ಅಲ್ಲದಿದ್ದರೂ ಮಿಸ್ಸಿಂಗ್ ಲಿಂಕಿನ ಹುಡುಕಾಟದ ದಿಕ್ಕಲ್ಲಿ ಮತ್ತೊಂದು ಮುಖ್ಯ ಹೆಜ್ಜೆಯಾಗುತ್ತದೆ. ವಿಜ್ಞಾನಕ್ಕೆ ಯಾವ ಹೆಜ್ಜೆಯೂ ಸೋಲಲ್ಲ, ಯಾವ ಪ್ರಯತ್ನವೂ ನಿರರ್ಥಕವಲ್ಲ.