ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಆ ರಸ್ತೆಯೇ ಊರಿನ ಪ್ರಮುಖ ರಸ್ತೆ. ಅದು ಊರು ಸೀಳಿಕೊಂಡು ನೇರವಾಗಿ ಹೊರ ವಲಯದ ಸರಕಾರಿ ಶಾಲೆಯ ಮುಂದೆ ಹಾದು ಹೋಗುತಿತ್ತು. ಊರಿನ ಜನ ಅಲ್ಲಿಂದಲೇ ಹೊಲ ಗದ್ದೆ ಊರು ಕೇರಿ ಕೆಲಸ ಕಾರ್ಯಗಳಿಗೆ ಹೋಗುತಿದ್ದರು.

ಶಾಲಾ ಮಕ್ಕಳು ಕೂಡ ಅದೇ ರಸ್ತೆಯಿಂದ ಶಾಲೆಗೆ ಹೋಗಿ ಬರುತ್ತಿದ್ದರು. ಅಂದು ರಾಜೂ ಮತ್ತು ಮಲ್ಲಿಕಾ ಶಾಲೆ ಮುಗಿಸಿ ಮನೆ ಕಡೆ ಬರುವಾಗ ಯಾರೇ ಜೀವನದಲ್ಲಿ ಮುಂದೆ ಬರಬೇಕಾದರೆ ತಂದೆ ತಾಯಿ ಗುರು ಹಿರಿಯರ ಮಾತು ಚಾಚೂ ತಪ್ಪದೆ ಪಾಲಿಸಬೇಕು, ಆಗಲೇ ಏನಾದರೂ ಸಾಧನೆ ಮಾಡಲು ಸಾಧ್ಯ ಅಂತ ಶಾಲೆಯಲ್ಲಿ ಮಾನಪ್ಪ ಮಾಸ್ತರ ಹೇಳಿದ ಮಾತು ಪದೇ ಪದೇ ನೆನಪಿಗೆ ಬರುತಿತ್ತು. ಸರ್ ಮಾತು ಸರಿಯಾಗಿದೆ ಅಂತ ರಾಜೂ ಸಮರ್ಥಿಸಿದಾಗ, ಹೌದು ದೊಡ್ಡವರ ಮಾತು ಪಾಲಿಸಲೇಬೇಕು ಅಂದಾಗಲೇ ಜೀವನ ಸುಖಮಯವಾಗುವದು ಅಂತ ಮಲ್ಲಿಕಾ ಕೂಡ ದನಿಗೂಡಿಸಿದಳು. ದೊಡ್ಡವರ ಮಾತು ಕೇಳದೇ ಎಷ್ಟೋ ಜನ ದಡ್ಡರಾಗಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ಪ್ರಯೋಜನ ಎಂದಳು. ರಾಜೂ ಅವಳ ಮಾತಿಗೆ ಸಮ್ಮತಿ ಸೂಚಿಸಿದ. ಹಾಗೇ ಇಬ್ಬರೂ ಮುಂದೆ ಸಾಗಿದರು.

ಅಗಸಿ ಕಟ್ಟೆಯ ಮೇಲೆ ಎಂದಿನಂತೆ ದೇಶಾವರಿ ಮಾತಾಡುತ್ತಾ ಜನ ಗುಂಪು ಗೂಡಿ ಕುಳಿತಿದ್ದರು. ವಿಜಯ ಕುಮಾರನ ಮಕ್ಕಳಿಗೆ ಎಷ್ಟು ವರ್ಣನೆ ಮಾಡಿದರು ಕಡಿಮೆ. ಅಪ್ಪ ಮಿಲ್ಟ್ರಿದಾಗ ಇದ್ದರೂ ಮಕ್ಕಳು ವಯಸ್ಸಿಗೆ ಮೀರಿ ಬುದ್ಧಿವಂತರಾಗಿದ್ದಾರೆ. ಒಂದಿನಾನೂ ಸ್ಕೂಲು ತಪ್ಪಿಸೋದಿಲ್ಲ. ಯಾರ ಮಾತೂ ಮೀರೋದಿಲ್ಲ. ಇದ್ದರೆ ಇಂತಹ ಮಕ್ಕಳು ಇರಬೇಕು ಅಂತ ಅನೇಕರು ತಾರೀಫ ಮಾಡಿದರು. ಅಪ್ಪ ಊರಲ್ಲಿ ಇರದಿದ್ದರೆ ಏನಾಯಿತು. ಅಜ್ಜಿ ಅಮ್ಮ ಇದ್ದಾರಲ್ಲ ಅವರೇ ಇವರಿಗೆ ಮಾರ್ಗದರ್ಶನ ಮಾಡಿ ಶಿಸ್ತು ಬೆಳೆಸುತ್ತಿದ್ದಾರೆ, ಅಂತ ಇನ್ನೂ ಕೆಲವರು ಹೇಳಿದರು.

ಇವರಿಗೆ ಅಜ್ಜೀನೇ ಮೊದಲ ಗುರು. ದಿನಾಲೂ ತನ್ನ ಮುಂದೆ ಕೂಡಿಸಿಕೊಂಡು ನೀತಿ ಕತೆ ಹೇಳಿ ಶಿಸ್ತು ಬೆಳೆಸುತ್ತಿದ್ದಾಳೆ ಅಂತ ಈಶ್ವರ ವಾಸ್ತವ ಹೇಳಿದ. ಸಂಗವ್ವಜ್ಜಿಗೆ ಎಷ್ಟು ಹೊಗಳಿದರೂ ಕಡಿಮೆ ಅಂತ ಎಲ್ಲರೂ ಮಾತಾಡಿದರು.

ಅದೇ ಹೊತ್ತಿಗೆ ಅಜ್ಜಿ ಊರ ತುಂಬಾ ತಿರುಗಾಡಿ ಜನರ ಯೋಗಕ್ಷೇಮ ವಿಚಾರಿಸುತ್ತಾ ಮೇಲಿನ ಕೇರಿಯಿಂದ ಬರುತಿದ್ದಳು. ಲ್ಲಿ ನೋಡು ಅಜ್ಜಿ ಬರ್ತಿದ್ದಾಳೆ, ಊರು ಎಷ್ಟೇ ಬದಲಾದರೂ ನಮ್ಮ ಅಜ್ಜಿ ಇದ್ದ ಹಾಗೇ ಇದ್ದಾಳೆ ಮೊಗಲಾಯಿ ಅಜ್ಜಿ ಅಂತ ರಾಜೂ ಹೆಮ್ಮೆಯಿಂದ ಹೇಳಿದ. ಈ ವಯಸ್ಸಿನಲ್ಲಿ ಅವಳೇನು ಬದಲಾಗಬೇಕು? ನಮ್ಮಂಗ ಬಟ್ಟೆ ಬರೆ ಹಾಕಿಕೊಂಡು ತಿರುಗಾಡಲು ಆಗ್ತಾದೇನು?! ಅಂತ ಮಲ್ಲಿಕಾ ಹಾಸ್ಯ ಮಾಡಿದಳು.

ಯುಗಾದಿ ಹಬ್ಬ ಬಂದರೆ ಅವಳಿಗೆ ಬರೋಬ್ಬರಿ ನೂರು ವರ್ಷ ತುಂಬತಾದೆ ಅಂತ ಮಲ್ಲಿಕಾ ಲೆಕ್ಕ ಹಾಕಿದಾಗ ನಮ್ಮ ಅಜ್ಜಿ ವಯಸ್ಸಿನವರು ಊರಾಗ ಸಧ್ಯ ಯಾರೂ ಇಲ್ಲ ಅವಳೇ ಗ್ರೇಟ್ ಅಂತ ರಾಜೂ ವರ್ಣನೆ ಮಾಡಿದ. ಅಜ್ಜಿಯ ಆಯುಷ್ಯದ ಗುಟ್ಟೇನು? ಅಂತ ಮಲ್ಲಿಕಾ ಪ್ರಶ್ನಿಸಿದಳು. ಅಜ್ಜಿ ಮೊದಲಿನಿಂದಲೂ ಪೌಷ್ಟಿಕ ಆಹಾರ ಸೇವಿಸಿ ಸದಾ ಶಿಸ್ತುಬದ್ದ ಜೀವನ ನಡೆಸಿದವಳು. ಯಾವ ರೋಗ ರುಜಿನ ಹತ್ತಿರ ಸುಳಿಯೋದಿಲ್ಲ ಅಂತ ಹೇಳಿದ. ಇಷ್ಟು ವಯಸ್ಸಾದರು ಯಾರ ಸಹಾಯವಿಲ್ಲದೆ ಮನೆಕೆಲಸದ ಜೊತೆಗೆ ಇತರರ ಕೆಲಸವೂ ಮಾಡ್ತಾಳೆ. ಅದಕ್ಕಾಗಿಯೇ ಎಲ್ಲರೂ ತಾರೀಫ ಮಾಡ್ತಾರೆ. ಅವಳ ಆಯಸ್ಸು ನಮ್ಮ ಮಕ್ಕಳಿಗೂ ಸಿಗಲಿ ಅಂತ ಬಯಸ್ತಾರೆ ಅಂತ ರಾಜೂ ಹೇಳಿದ.

ಅದೇನೋ ಸರಿ. ಅಪ್ಪ ಊರಿಂದ ಯಾವಾಗ ಬರ್ತಾರೆ ಅಂತ ಮಲ್ಲಿಕಾ ಪ್ರಶ್ನಿಸಿದಳು. ಇನ್ನೂ ಒಂದು ತಿಂಗಳು ಆಗಬಹುದು ನಿನ್ನೆ ಅಮ್ಮನಿಗೆ ಫೋನ್ ಮಾಡಿ ಹೇಳಿದ್ದು ನಾನೇ ಕೇಳಿಸಿಕೊಂಡೆ ಅಂತ ಹೇಳಿದ. ಅಪ್ಪ ಬರೋದು ಇನ್ನೂ ಒಂದು ತಿಂಗಳಾ? ಅಂತ ಮಲ್ಲಿಕಾ ಮುಖ ಸಪ್ಪಗೆ ಮಾಡಿದಳು. ಹೌದು ಅಪ್ಪನ ಕೆಲಸಾ ಮಿಲಿಟರಿ ಕೆಲಸಾ? ಅದು ದೇಶಸೇವೆ; ಅದನ್ನು ಬಿಟ್ಟು ಬರಲು ಆಗ್ತಾದೇನು? ಅಪ್ಪ ಮಾಡುವ ಕೆಲಸಾ ಎಲ್ಲದಕ್ಕಿಂತ ದೊಡ್ಡದು ಅಂತ ರಾಜೂ ಹೆಮ್ಮೆಯಿಂದ ಹೇಳಿದ. ಈ ಸಾರಿ ಅಪ್ಪ ಊರಿಂದ ಬರುವಾಗ ನಮ್ಮಿಬ್ಬರಿಗೂ ಹೊಸ ಬಟ್ಟೆ ತಂದೆ ತರ್ತಾರೆ ಅಂತ ಮಲ್ಲಿಕಾ ಭರವಸೆ ವ್ಯಕ್ತಪಡಿಸಿದಳು.

ನಮ್ಮ ಜೊತೆ ಅಜ್ಜಿಗೂ ಸೀರೆ ತಂದರೆ ಛೊಲೊ ಆಗ್ತಾದೆ ಅವಳೂ ಖುಷಿ ಪಡ್ತಾಳೆ ಎಂದನು. ಅಪ್ಪ ಅವಳಿಗೂ ತಂದೇ ತರ್ತಾನೆ ಅವಳ ಮೇಲೆ ನಮ್ಮಷ್ಟೇ ಪ್ರೀತಿ ಕಾಳಜಿ ಕೂಡ ಇದೆ ಅಂತ ಮಲ್ಲಿಕಾ ಭರವಸೆ ವ್ಯಕ್ತಪಡಿಸಿದಳು. ಪರಸ್ಪರ ಚರ್ಚಿಸಿ ಇಬ್ಬರೂ ಮನೆ ಸೇರಿಕೊಂಡರು.

ಸುಮಾರು ಒಂದು ವಾರ ಕಳೆದು ಹೋಯಿತು. ಅಂದು ಶಾಲೆ ಮುಗಿಸಿ ಮನೆಗೆ ಬಂದಾಗ ಅಜ್ಜಿಯ ಮುಖ ಸಪ್ಪಗಾದದ್ದು ಗಮನಕ್ಕೆ ಬಂದಿತು. ಯಾಕೆ ಮೈಗೆ ಹುಷಾರಿಲ್ಲೇನು ಅಂತ ಮಲ್ಲಿಕಾ ಗಾಬರಿಯಾಗಿ ಪ್ರಶ್ನಿಸಿದಳು. ಅಜ್ಜಿಯ ಬಾಯಿಂದ ಮಾತು ಹೊರಡಲಿಲ್ಲ. ಮುಖ ಕೂಡ ಸಪ್ಪಗಾಗಿತ್ತು. ಜ್ವರ ಆವರಿಸಿ ಮೈ ಕೈ ಒಂದೇ ಸವನೆ ಸುಡುತಿತ್ತು.

ತಕ್ಷಣ ಅಮ್ಮನ ಹತ್ತಿರ ಬಂದು ಅಜ್ಜಿಗೆ ಆರಾಮ ಇಲ್ಲ ಜ್ವರ ಬಂದಿವೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಡಾಕ್ಟರ್ ಗೋಲಿ, ಔಷಧಿ ಕೊಡ್ತಾರೆ ಎಂದಳು. ನಾನೂ ಬರ್ತೀನಿ ಅಜ್ಜಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ರಾಜೂ ಹೇಳಿದ. ಅವಳ ವಿಷಯ ನಿಮಗ್ಯಾಕೆ? ನಿಮ್ಮ ಕೆಲಸಾ ಕೇವಲ ಶಾಲೆಗೆ ಹೋಗಿ ಅಭ್ಯಾಸ ಮಾಡೋದು ಅಷ್ಟೇ ಅಂತ ಅಮ್ಮ ಸಿಡಿಮಿಡಿಗೊಂಡಳು. ನಮ್ಮ ಮಾತಿಗೆ ಅಮ್ಮ ಕಿವಿಗೊಡುತಿಲ್ಲ ಅಂತ ಬೇಸರ ಮೂಡಿ ಇಬ್ಬರೂ ರೂಮಿಗೆ ಬಂದು ಯೋಚಿಸಿದರು..

ಅಮ್ಮ ಹೀಗ್ಯಾಕೆ ಮಾತಾಡ್ತಿದ್ದಾಳೆ. ವಯಸ್ಸಾದ ಮೇಲೆ ಆರೋಗ್ಯ ಕೆಡುವದು ಸಹಜ. ಇಷ್ಟು ದಿನ ಅಜ್ಜಿಯ ಬಗ್ಗೆ ಎಷ್ಟೊಂದು ಕಾಳಜಿ ಮಾಡುತಿದ್ದಳು. ನೀನು ನಮ್ಮ ಅತ್ತೆಯಲ್ಲ ಅಮ್ಮ ಅಂತ ಪ್ರೀತಿಯಿಂದ ಹೇಳುತಿದ್ದಳು. ಸಿಹಿ ತಿಂಡಿ ಮಾಡಿ ಕೊಡುತಿದ್ದಳು. ಆದರೀಗ ಏಕಾಏಕಿ ಅಜ್ಜಿಗೆ ಆರಾಮ ತಪ್ಪಿದ ಕೂಡಲೇ ಹೀಗೆ ಬದಲಾದಳು. ಆರೋಗ್ಯ ಎಲ್ಲ ಕಾಲಕ್ಕೂ ಒಂದೇ ರೀತಿ ಇರೋದಿಲ್ಲ. ರೋಗ ರುಜಿನ ಸಹಜ. ನಾಳೆ ಅಮ್ಮನಿಗೂ ಕಾಯಿಲೆ ಬರಬಹುದು ಅಂತ ಪರಸ್ಪರ ಮಾತಾಡಿಕೊಂಡರು.

ಇಷ್ಟು ವಯಸ್ಸಾದರು ಯಾರ ಸಹಾಯವಿಲ್ಲದೆ ಮನೆಕೆಲಸದ ಜೊತೆಗೆ ಇತರರ ಕೆಲಸವೂ ಮಾಡ್ತಾಳೆ. ಅದಕ್ಕಾಗಿಯೇ ಎಲ್ಲರೂ ತಾರೀಫ ಮಾಡ್ತಾರೆ. ಅವಳ ಆಯಸ್ಸು ನಮ್ಮ ಮಕ್ಕಳಿಗೂ ಸಿಗಲಿ ಅಂತ ಬಯಸ್ತಾರೆ ಅಂತ ರಾಜೂ ಹೇಳಿದ.

ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು. ಇಬ್ಬರ ಕಣ್ಣಲ್ಲೂ ನೀರೂರಿತು. ತಾವೇ ಹೋಗಿ ಅಜ್ಜಿಗೆ ಉಪಚಾರ ಮಾಡಬೇಕೆಂದರೆ ಅಮ್ಮನ ಭಯ ಕಾಡುತಿತ್ತು.

ಅಜ್ಜಿಯ ಹತ್ತಿರ ಹೋಗಿ ಮಾತಾಡಿಸುವ ಧೈರ್ಯ ಮಾಡದೆ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದರು. ಅವಳ ನರಳಾಟ ಪುನಃ ಜಾಸ್ತಿಯಾಯಿತು. ಸಹಿಸಿಕೊಳ್ಳಲಾಗದೆ ಓದುವ ಪುಸ್ತಕ ರೂಮಿನಲ್ಲಿ ಬಿಟ್ಟು ಅಮ್ಮ ಬೈದರೂ ಬೈಯಲಿ ಅಜ್ಜಿಯ ಬಳಿ ಹೋಗಿ ಬರೋಣ ಅಂತ ಮೆಲ್ಲಗೆ ಹೆಜ್ಜೆ ಹಾಕಿದರು. ಏ ಅವಳ ಹತ್ರಾ ನಿಮ್ಮದೇನು ಕೆಲಸ? ಮೊದಲೇ ಅವಳಿಗೆ ರೋಗ ಬಂದಿದೆ. ಅವಳ ರೋಗ ನಿಮಗೂ ಬರ್ತದೆ ಅಂತ ಅಮ್ಮ ಮತ್ತೆ ಜೋರು ಧನಿಯಲ್ಲಿ ಗದರಿಸಿದಳು. ಆಗ ಬೇರೆ ದಾರಿ ಇಲ್ಲದೆ ಪುನಃ ರೂಮಿಗೆ ವಾಪಸ್ಸಾದರು.

ಅಜ್ಜಿಯ ರೋಗ ನಮಗ ಹ್ಯಾಂಗ ಬರ್ತಾದೆ? ಡಾಕ್ಟರು ನರ್ಸು ದಿನಾಲೂ ರೋಗ ಬಂದವರಿಗೆ ಚಿಕಿತ್ಸೆ ಕೊಟ್ಟು ಆರೈಕೆ ಮಾಡ್ತಾರೆ ಅವರಿಗ್ಯಾಕ ರೋಗ ಬರೋದಿಲ್ಲ ಅಂತ ಯೋಚಿಸಿದರು. ರೋಗ ಬರ್ತಿದ್ರೆ ಯಾರೂ ಇವತ್ತು ಡಾಕ್ಟರ್ ಆಗ್ತಿರಲಿಲ್ಲ. ಅಮ್ಮ ಹೇಳುವ ಮಾತು ಸುಳ್ಳು, ಅವಳು ಬೇಕಂತಲೇ ಹೀಗೆಲ್ಲಾ ಹೇಳ್ತಿದ್ದಾಳೆ, ಅಂತ ರಾಜೂ ಹೇಳಿದ. ಹಾಗಾದರೆ ಈ ವಿಷಯ ಅಪ್ಪನಿಗೆ ತಿಳಿಸಲೇಬೇಕು. ಇಲ್ಲದಿದ್ದರೆ ಅಜ್ಜಿಯ ಜೀವಕ್ಕೆ ಅಪಾಯವಾಗಬಹುದು ಅಂತ ಮಲ್ಲಿಕಾ ಸಲಹೆ ನೀಡಿದಳು.

ಅಪ್ಪನಿಗೆ ಹೇಗೆ ತಿಳಿಸೋದು ಅಂತ ರಾಜೂ ಯೋಚಿಸಿದ. ಒಂದು ಉಪಾಯ ಹೊಳೆಯಿತು. ಮಾಮಾನ ಅಂಗಡಿಯ ಟೆಲಿಫೋನದಿಂದ ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸೋಣ ಆದರೆ ಅಮ್ಮನಿಗೆ ಗೊತ್ತಾಗಬಾರದು ಅಂತ ಹೇಳಿದಳು. ಮಲ್ಲಿಕಾಳ ಮಾತು ಸಮಯೋಚಿತವೆನಿಸಿತು. ತಕ್ಷಣ ಇಬ್ಬರೂ ಕಪಾಟಿನಲ್ಲಿದ್ದ ಆ ಡೈರಿ ಹುಡುಕಿ ತೆಗೆದರು. ಅಪ್ಪನ ಮೊಬೈಲ್ ನಂಬರನ್ನು ಒಂದು ಬಿಳಿ ಕಾಗದದ ಮೇಲೆ ಮಲ್ಲಿಕಾ ಬರೆದು ಇದು ನಾಳೆ ಶಾಲೆಗೆ ಬರುವಾಗ ನೆನಪಿಟ್ಟು ತೆಗೆದುಕೊಂಡು ಬಾ ಅಂತ ರಾಜೂನ ಕೈಗಿಟ್ಟಳು. ರಾಜೂ ಅದನ್ನು ಮಡಚಿ ಜೇಬಿನಲ್ಲಿಟ್ಟುಕೊಂಡ..

ಮರುದಿನ ಎಂದಿನಂತೆ ಶಾಲೆಗೆ ಹೋರಟರು. ನೀನೇನೂ ಚಿಂತೆ ಮಾಡಬೇಡ ಇವತ್ತು ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಸ್ತೀವಿ. ಆತ ಅರ್ಜಂಟ ಬಂದು ಬಿಡ್ತಾನೆ ಅಂತ ಹೋಗುವಾಗ ಮಲ್ಲಿಕಾ ಅಜ್ಜಿಯ ಹತ್ತಿರ ಬಂದು ಮೆಲ್ಲಗೆ ಹೇಳಿದಳು. ಮಾಮಾನ ಅಂಗಡಿಯ ಮುಂದೆ ಬಂದಾಗ ಮಲ್ಲಿಕಾ ಆ ಕಾಗದ ನೆನಪಿಸಿದಳು. ಆಗ ರಾಜೂ ತನ್ನ ಕಿಸೆಯಲ್ಲಿ ಕೈ ಹಾಕಿ ನೋಡಿದ, ಆದರೆ ಕಾಗದ ಕಾಣಲಿಲ್ಲ. ಗಾಬರಿಯಾಗಿ ನಿಂತಾಗ ಯಾಕೆ ಏನಾಯ್ತು ಅಂತ ಮಲ್ಲಿಕಾ ಪ್ರಶ್ನಿಸಿದಳು. ನಿನ್ನೆ ತೊಟ್ಟ ಅಂಗಿ ಕಿಸೆಯಲ್ಲಿ ಮೊಬೈಲ್ ನಂಬರ್ ಬರೆದ ಆ ಕಾಗದ ಬಿಟ್ಟು ಬಂದಿದ್ದೇನೆ ಅಂತ ಮುಖ ಸಪ್ಪಗೆ ಮಾಡಿ ಹೇಳಿದ. ಮಲ್ಲಿಕಾ ಸಿಡಿಮಿಡಿಗೊಂಡು ಮುಖ್ಯವಾದದ್ದೇ ಮರೆತು ಬಂದಿಯಲ್ಲ ಎಂತಹ ಮೂರ್ಖ ನೀನು ಅಂತ ಬೈದು ಬಿಟ್ಟಳು.

ಇನ್ನೂ ಸಮಯವಿದೆ ಈಗಲೇ ಹೋಗಿ ಅದನ್ನು ತೆಗೆದುಕೊಂಡು ಬರ್ತೀನಿ ಅಂತ ಅವಸರದಿಂದ ರಾಜೂ ಮನೆ ಕಡೆ ಓಡೋಡಿ ಬಂದ. ಆ ಅಂಗಿಗಾಗಿ ಎಲ್ಲ ಕಡೆ ಹುಡುಕಿದ. ಆದರೆ ಅದು ಎಲ್ಲಿಯೂ ಕಾಣಲಿಲ್ಲ. ಅಮ್ಮನಿಗೆ ಕೇಳಿದರೆ ಸಂಶಯ ಮೂಡುತ್ತದೆ ಅವಳಿಗೆ ಹೇಳೋದು ಬೇಡ ಅಂತ ಯೋಚಿಸಿ ಅತ್ತ ಇತ್ತ ಕಣ್ಣು ಹಾಯಿಸಿದ. ಆ ಅಂಗಿ ನೀರಿನಲ್ಲಿ ನೆನೆಯಿಸಿ ಅಮ್ಮ ಆಗಲೇ ತಂತಿಗೆ ಒಣಹಾಕಿದ್ದು ಕಂಡು ಬಂದಿತು. ಆಗ ಇವನಿಗೆ ಗಾಬರಿಯಾಯಿತು. ಅಂಗಿಕಿಸೆಯಲ್ಲಿ ಕೈ ಹಾಕಿ ಆ ಕಾಗದ ಹೊರತೆಗೆದ.

ಅದು ಒಗೆತದ ಏಟಿಗೆ ಮುದ್ದಿಯಾಗಿತ್ತು. ಸಧ್ಯ ಶಾಲೆಗೆ ಹೋಗಲು ತಡವಾದರೆ ಶಿಕ್ಷಕರು ಸೇರಿಸಿಕೊಳ್ಳುವುದಿಲ್ಲ. ಶಾಲೆಯಿಂದ ವಾಪಸ್ ಬರುವಾಗ ಫೋನ್ ಮಾಡಿದರಾಯಿತು ಅಂತ ಆ ಮುದ್ದೆಯಾದ ಕಾಗದ ಹಾಗೇ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಬಂದ.

ಕಾಗದದ ಸ್ಥಿತಿ ನೋಡಿ ಮಲ್ಲಿಕಾಳಿಗೆ ಬೇಸರ ತರಿಸಿತು. ಎಲ್ಲವೂ ನಿನ್ನಿಂದಲೇ ಆಯಿತು ಇದರಲ್ಲಿ ಒಂದೇ ಒಂದು ಅಕ್ಷರ ಕೂಡ ಸರಿಯಾಗಿ ಕಾಣಸ್ತಿಲ್ಲ. ಅಪ್ಪನಿಗೆ ಫೋನ್ ಹೇಗೆ ಮಾಡೋದು ಅಂತ ಪ್ರಶ್ನಿಸಿದಳು. ನಾಳೆ ಮತ್ತೊಂದು ಕಾಗದದ ಮೇಲೆ ನಂಬರ್ ಬರೆದುಕೊಂಡು ಬರ್ತೀನಿ. ಆಗ ಫೋನ್ ಮಾಡಿದರಾಯಿತು ಅಂತ ಸಮಜಾಯಿಷಿ ನೀಡಿದ. ರಾಜೂನ ಮಾತು ಮಲ್ಲಿಕಾಳಿಗೆ ಸಮಾಧಾನ ತರಲಿಲ್ಲ. ಆತನ ಮೇಲಿನ ಕೋಪ ಹಾಗೇ ಮುಂದುವರೆಯಿತು.


ಸಾಯಂಕಾಲ ಶಾಲೆ ಬಿಟ್ಟ ನಂತರ ಭಾರವಾದ ಬ್ಯಾಗ್ ಹಾಕಿಕೊಂಡು ಇಬ್ಬರೂ ಮನೆ ಕಡೆ ಹೊರಟರು. ಮನೆಯ ಮುಂದೆ ಬಹಳಷ್ಟು ಜನಾ ಸೇರಿ ಗುಸುಗುಸು ಚರ್ಚೆ ಮಾಡುತ್ತಿದ್ದರು. ಆ ದೃಶ್ಯ ಇವರಿಗೆ ಗಾಬರಿ ತರಿಸಿತು. ಯಾಕೆ ಏನಾಗಿದೆ ಅಂತ ಪ್ರಶ್ನಿಸಿದರು. ನಿಮ್ಮ ಅಜ್ಜಿ ತೀರಿಕೊಂಡಿದ್ದಾಳೆ ಅಂತ ಅಂಗಡಿ ಮಾಮಾ ಹೇಳಿದ. ಆತನ ಮಾತು ಕೇಳಿ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ಅಜ್ಜಿ ನಮಗೆಲ್ಲ ಬಿಟ್ಟು ಹೋದಳಾ? ಅಂತ ಮಲ್ಲಿಕಾ ಜೋರಾಗಿ ಅಳಲು ಆರಂಭಿಸಿದಳು. ರಾಜೂ ತನ್ನ ಕಿಸೆಯಿಂದ ಆ ಮುದ್ದೆಯಾದ ಕಾಗದ ಹೊರ ತೆಗೆದು ಸಿಟ್ಟಿನಿಂದ ದೂರ ಎಸೆದು ಒಂದೇ ಸವನೆ ರೋಧಿಸತೊಡಗಿದ.