ಹೊಸದೇನಿಲ್ಲ ಇಲ್ಲಿ….

ಮಾಡಿನ ತುದಿಯಿಂದ
ತೊಟ್ಟಿಕ್ಕುವ ಒಂಟಿ ಹನಿ
ನಿನ್ನೆ ಬಿಡದೆ ಸುರಿದ ಮಳೆ!
ಎಲೆ ಉದುರಿದ ಒಣ ಕೊಂಬೆಗಳು
ಹಕ್ಕಿಗೆ ಗೂಡು ಕಟ್ಟುವ ತವಕ

ಸವೆದ ಚಪ್ಪಲಿ, ಷೂಗಳು
ಮುಚ್ಚಿದ ಕಪಾಟಿನ ಪುಸ್ತಕಗಳು
ಧೂಳು ಹಿಡಿದ ಪದಕಗಳು
ಗೆಜ್ಜೆ ಸದ್ದಿನ ಪುಟ್ಟ ಹೆಜ್ಜೆಗೆ
ದೂರ ಓಡುವ ಅವಸರ

ನೆರೆದ ಕೂದಲು, ಊರುಗೋಲು
ನಡುಗುವ ಕೈ, ನೆಲವೆಲ್ಲಾ ಅನ್ನ
ಕಣ್ಣ ಬೆಳಕು, ಬೆಳೆವ ನೆರಳು
ಹೊಸದೇನಿಲ್ಲ ಇಲ್ಲಿ
ಮರೆತಿರುವದನ್ನೊಂದು ಬಿಟ್ಟು!

(Inspired by the quote “There is nothing new except what has been forgotten” – Marie Antoinette)

2. ಲಂಡನ್ ಐ: ಕಪ್ಪು-ಬಿಳುಪು

ಚಕ್ರ ತಿರುಗುತಿತ್ತು.
ಹತ್ತಾರು ಬುಟ್ಟಿ ತುಂಬೆಲ್ಲಾ ಜನ
ತಲೆಗಿಷ್ಟು ಹಿಡಿ ಪೌಂಡು
ಮೇಲೇರಿದಷ್ಟು ದೂರದ ನೋಟ
ಎತ್ತರದ ವಾಸ ಒಂದಿಷ್ಟು ಕ್ಷಣ
ಅಮಲೇರುವ ಮುನ್ನ ಭೂ-ಸ್ಪರ್ಶ
ಕೆಳಗಿನವನೀಗ ಮೇಲೇರಿದ ರಾಜ
ನಿಲ್ಲದು ಚಕ್ರದ ತಿರುಗಾಟ!

ಕಾಲು ನಡೆಯುತಿತ್ತು.
ಹತ್ತಾರು ಹೊಟ್ಟೆ, ಮೈತುಂಬಾ ಬಣ್ಣ
ದೊಂಬರಾಟದ ದಂಡು
ಚಾಪ್ಲಿನ್, ಚುರ್ಚಿಲ್, ಏಂಜೆಲ್
ಕಂಬದಂತೆ ನಿಂತರೂ, ಮಂಗನಂತೆ
ಕುಣಿದರೂ ಪೌಂಡು ಹಿಂಡಿದ
ಬಿಡಿ ಚಿಲ್ಲರೆಗಷ್ಟೇ ಹೋರಾಟ
ನಿಲ್ಲದು ಜೀವದ ಪರದಾಟ!

ದಿನ ಇಳಿಯುತಿತ್ತು.
ನೆಲದ ಚೌಕಟ್ಟು, ಕಪ್ಪು ಬಣ್ಣ
ಚಿತ್ರಕಾರನ ಕರಡು
ಗಾಂಧಿ, ಲೂಥರ್ ಕಿಂಗ್, ಮಂಡೇಲಾ
ಬರೆದಿತ್ತು ಮೇಲೆ, “ಡೇರ್ ಟು ಡ್ರೀಮ್”
ಮುನಿದ ಬಾನು, ಹರಿದಿತ್ತು ಚಿತ್ರ
ಸುರಿದ ಮಂಜಿನ ಬಣ್ಣವೂ ಬಿಳಿ
ನಿಲ್ಲದು ವಿಧಿಯ ಸೆಣಸಾಟ!

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.