ಇಲ್ತುಮಿಷನು ಮರಣದ ಮೊದಲು ತನ್ನ ಮಕ್ಕಳಲ್ಲಿ ಒಬ್ಬಳಾದ ರಜಿಯಾಳು ಪಟ್ಟವನ್ನೇರಲು ತಕ್ಕವಳೆಂದು ಸೂಚಿಸಿದ್ದನು. ಅದರೆ ಅಧಿಕಾರಿಗಳು ಆತನ ಹಿರಿ ಮಗನಾದ ರುಕ್ನುದ್ದೀನ್ ಫಿರೋಜನನ್ನು ಪಟ್ಟದಲ್ಲಿ ಕುಳ್ಳಿರಿಸಿದರು.ಫಿರೋಜನು ವಿಲಾಸಿಯೂ, ಬುದ್ಧಿಹೀನನೂ ಅಗಿದ್ದುದರಿಂದ ಅವನ ತಾಯಿಯು ಹಿತಾಕಾಂಕ್ಷಿಯಾಗಿ ಕೆಲಸ ಮಾಡುತ್ತಿದ್ದಳು. ಅವಳು ಹಿಂದೆ ತನ್ನ ದ್ವೇಷಕ್ಕೆ ಪಾತ್ರರಾದವರನ್ನು ಶಿಕ್ಷಿಸತೊಡಗಿದಳು. ಇದು ಅಧಿಕಾರಿಗಳನ್ನು ಸಿಟ್ಟಿಗೆಬ್ಬಿಸಿ ಅವರು ರಜಿಯಾಳನ್ನು ಪಟ್ಟಕ್ಕೇರಿಸುವಂತಾಯಿತು. ದೂರದ ಪ್ರಾಂತ್ಯಗಳ ಗವರ್ನರುಗಳು ಸ್ವತಂತ್ರರಾದರು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯಲ್ಲಿ ಸಿಂಧಿನ ಮೇಲೆ ಮುಸಲ್ಮಾನ ರಾಜರಿಂದ ಆದ ಆಕ್ರಮಣದ ಕುರಿತ ಬರಹ ಇಲ್ಲಿದೆ
ಇಸ್ಲಾಂ ಧರ್ಮದ ಉದಯ ಮತ್ತು ಪ್ರಸಾರ
ಭಾರತವು ಹರ್ಷವರ್ಧನನ ಆಳ್ವಿಕೆಯಿಂದ ಮೆರೆಯುತ್ತಿದ್ದ ಕಾಲದಲ್ಲಿ ಅರೇಬಿಯಾದಲ್ಲಿ ಮಹಮದ್ ಪೈಗಂಬರರು ಇಸ್ಲಾಂ ಎಂಬ ಹೊಸ ಧರ್ಮವನ್ನು ಸ್ಥಾಪಿಸಿ ಅಲ್ಲಿನ ರಾಜಕೀಯ ನೇತಾರ ಮತ್ತು ಧರ್ಮಾಧಿಕಾರಿಯಾದರು. ಕ್ರಿ.ಶ. 632ರಲ್ಲಿ ಅವರು ದೈವಾಧೀನರಾದಾಗ ಇಸ್ಲಾಂ ಧರ್ಮದ ಅಧಿಕಾರವು ಖಲೀಫರಿಗೆ ದೊರಕಿತು. ಹೊಸತಾಗಿ ಉಂಟಾದ ಈ ಮತವು ಖಲೀಫರ ಪ್ರೋತ್ಸಾಹದಿಂದಲೂ ಈ ಮತಾವಲಂಬಿಗಳಲ್ಲಿ ತಮ್ಮ ಮತಪ್ರಸಾರದಲ್ಲಿದ್ದ ಉತ್ಸಾಹದಿಂದಲೂ ಪಶ್ಚಿಮ ಮತ್ತು ಪೂರ್ವ ದೇಶಗಳಿಗೆ ಬಹು ಬೇಗನೆ ಹಬ್ಬಿತು. ಈಜಿಪ್ಟ್, ಸಿರಿಯಾ, ಪರ್ಶಿಯಾ ಮುಂತಾದ ದೇಶಗಳನ್ನು ಗೆದ್ದು ಖಲೀಫರ ರಾಜ್ಯಕ್ಕೆ ಸೇರಿಸಲಾಯಿತು. ಖೈಬರ್, ಬೋಲಾನ್ ಕಣಿವೆಗಳ ಮೂಲಕ ಹಿಂದೂ ದೇಶಕ್ಕೆ ದಂಡೆತ್ತಿ ಬರಲು ಪ್ರಯತ್ನಿಸಿದ ಈ ಧರ್ಮಪ್ರಚಾರಕರನ್ನು ಪಂಜಾಬಿನ ದೊರೆಯಾದ ಶಾಹಿ ವಂಶದ ಅರಸನು ತಡೆಗಟ್ಟಿದನಲ್ಲದೆ ಅವರನ್ನು ಅಪಾರ ನಷ್ಟಕ್ಕೆ ಗುರಿಮಾಡಿದನು.
ಶಾಹಿ ಅರಸರು ಖೈಬರ್ ಮತ್ತು ಬೋಲಾನ್ ಕಣಿವೆಗಳನ್ನು ಕ್ರಿ.ಶ. 700ರಿಂದ 870ರ ತನಕ ಸುರಕ್ಷಿತವಾಗಿ ಇರಿಸಿದರು. ಆದರೆ ಭಾರತಕ್ಕೆ ಇಸ್ಲಾಂ ಧರ್ಮದ ಸಂಪರ್ಕವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಅಟ್ಳಾಂಟಿಕ್ ಸಾಗರದಿಂದ ಹಿಂದೂಕುಶ್ ಪರ್ವತದ ವರೆಗಿನ ವಿಶಾಲವಾದ ಸಾಮ್ರಾಜ್ಯದ ಒಡೆಯನಾಗಿದ್ದ ಖಲೀಫನು ಭಾರತವನ್ನು ಗೆಲ್ಲಲು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇದ್ದನು.
ಮಹಮ್ಮದ್ ಬಿನ್ ಕಾಸಿಮ್: ಕ್ರಿ.ಶ. 712ರಲ್ಲಿ ಖಲೀಫನಿಗೆ ಸಿಂಹಳದ ಅರಸನ ಕಾಣಿಕೆಗಳನ್ನು ಮತ್ತು ಮುಸ್ಲಿಂ ಸ್ತ್ರೀಯರನ್ನು ಹೇರಿಕೊಂಡು ಹೋಗುತ್ತಿದ್ದ ಹಡಗುಗಳು ದೇವಲ್ ಸಮೀಪ ಸಮುದ್ರಗಳ್ಳರಿಂದ ಕೊಳ್ಳೆಹೊಡೆಯಲ್ಪಟ್ಟು ಖಲೀಫನು ಅದಕ್ಕಾಗಿ ಪರಿಹಾರದ್ರವ್ಯವನ್ನು ಸಿಂಧದ ಅರಸನಿಂದ ಕೇಳಲು ಆತನು ಅದನ್ನು ತೆರಲು ನಿರಾಕರಿಸಿದನು. ಈ ಘಟನೆಯನ್ನು ಕಾರಣವಾಗಿಟ್ಟುಕೊಂಡು ಖಲೀಫನು ಒಂದು ಸೈನ್ಯವನ್ನು ದೇವಲ್‌ಗೆ ಕಳಿಸಿದನು. ಸಿಂಧಿನ ರಾಜನ ಎದೆಗಾರಿಕೆಯ ಹೋರಾಟದಿಂದ ಈ ಸೈನ್ಯವು ಸೋತು ಓಡಿಹೋಯಿತು. ಆದರೆ ಮಹಮ್ಮದ್ ಬಿನ್ ಕಾಸಿಮನ ನಾಯಕತ್ವದಲ್ಲಿ ಎರಡನೇ ಸೈನ್ಯವು ಬಂದು ದೇವಲನ್ನು ವಶಪಡಿಸಿಕೊಂಡಿತು. ಕಾಸಿಮನು ವಿಜಯ ಯಾತ್ರೆಯನ್ನು ಮುಂದುವರಿಸಿ, ಬ್ರಾಹ್ಮಣ ಬಾದನ್ನು, ಅನಂತರ ಮುಲ್ತಾನನ್ನು ಗೆದ್ದು ಇಡೀ ಸಿಂಧನ್ನು ಅಕ್ರಮಿಸಿದನು. ಸಿಂಧಿಗೆ ಮುಸ್ಲಿಂ ಗವರ್ನರನ ನೇಮಕವಾಯಿತು. ಮುಸ್ಲಿಂ ಗವರ್ನರನು ಖಲೀಫನ ಆಡಳಿತವನ್ನು ಸಿಂಧಿನಲ್ಲಿ ಭದ್ರಗೊಳಿಸುವ ಮತ್ತು ಸಾಮ್ರಾಜ್ಯವನ್ನು ವಿಸ್ತರಿಸುವ ಸಾಹಸಕ್ಕೆ ಕೈಯಿಕ್ಕಿದನು. ವಲ್ಲಭ ವಿಶ್ವವಿದ್ಯಾಲಯವು ಹಾಳುಗೆಡವಲ್ಪಟ್ಟಿತು.
ಅರೇಬಿಯದಿಂದ ಬಹು ದೂರದಲ್ಲಿದ್ದ ಈಶಾನ್ಯ ರಾಜ್ಯದ ರಕ್ಷಣೆಗೆ ಖಲೀಫನು ನಿರ್ಲಕ್ಷ್ಯವನ್ನು ತಾಳಿದುದರಿಂದಲೂ, ಗುರ್ಜರ ಪ್ರತೀಹಾರರು ಬಲಿಷ್ಠರಾದುದರಿಂದಲೂ ಅರಬರ ಆಳ್ವಿಕೆಯು ಸಿಂಧನ್ನು ಮೀರಿ ವಿಸ್ತರಿಸಲಿಲ್ಲ. ಕೆಲವೇ ಸಮಯದಲ್ಲಿ ಸಿಂಧಿನ ಗವರ್ನರನು ಸ್ವಕೀಯ ಸ್ವತಂತ್ರನಾಗಿ ರಾಜ್ಯವನ್ನಾಳತೊಡಗಿದನು. ಹತ್ತನೇ ಶತಮಾನದಲ್ಲಿ ಸಿಂಧವು ಇಬ್ಭಾಗವಾಗಿ ಮುಲ್ತಾನ ಮತ್ತು ದಕ್ಷಿಣ ಸಿಂಧವೆಂದು ಎರಡು ದೇಶಗಳು ಉದಯವಾದುವು. 1005ರಲ್ಲಿ ಘಜನಿಯ ಮಹಮೂದನು ಇವುಗಳನ್ನು ಗೆದ್ದುಕೊಂಡನು. ಮಹಮೂದನ ಮರಣದ ತರುವಾಯ ಮುಲ್ತಾನವು ತುರುಕರ ಹಿಡಿತದಲ್ಲೇ ಉಳಿದರೂ, ದಕ್ಷಿಣ ಸಿಂಧವು ರಜಪೂತ ವಂಶದ ಅರಸನಾದ ಸುಮ್ರಾಸನ ನಾಯಕತ್ವದಲ್ಲಿ ಸ್ವತಂತ್ರವಾಯಿತು.
ಮುಸ್ಲಿಂ ಆಡಳಿತೆಯ ಪರಿಣಾಮ
ಗೆಲ್ಲಲ್ಪಟ್ಟ ಭೂಮಿಯನ್ನು ಹಿಂದೂ ಪ್ರಜೆಗಳೇ ಕೃಷಿ ಮಾಡುತ್ತಿದ್ದರು. ಭೂಕಂದಾಯದ ಹೊರತು ಇವರು ಜಿಝಿಯವನ್ನು ತೆರಬೇಕಾಗಿತ್ತು. ನ್ಯಾಯ ತೀರ್ಮಾನವು ‘ಕಾಜಿ’ಗಳಿಂದ ಕುರಾನಿನ ಆದೇಶದಂತೆ ಮಾಡಲ್ಪಡುತ್ತಿತ್ತು. ಆದರೆ ಇವರು ಮುಂದಿನ ತುರಕ ಅರಸರಷ್ಟು ಧರ್ಮಾಂಧರಾಗಿರಲಿಲ್ಲ. ಕೆಲವು ದೇವಸ್ಥಾನಗಳಲ್ಲಿ ಪೂಜೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಮತ್ತು ಹಾಳುಗೆಡಹಲ್ಪಟ್ಟ ದೇವಾಲಯಗಳ ದುರಸ್ತಿಗೆ ಅನುಮತಿಯನ್ನೀಯುತ್ತಿದ್ದರು.
ಇಲ್ಲಿ ನೆಲೆನಿಂತ ಅರಬರು ಹಿಂದೂ ಸ್ತ್ರೀಯರನ್ನು ವಿವಾಹವಾಗಿ ಇಲ್ಲಿನ ಪದ್ಧತಿ, ವೇಷಭೂಷಣಗಳನ್ನು ಅಂಗೀಕರಿಸಿ ಹಿಂದೂ ದೇಶದಲ್ಲಿ ಮುಸಲ್ಮಾನ ಸಮಾಜವನ್ನು ನಿರ್ಮಿಸಿದರು. ಅದರೆ ಮುಸಲ್ಮಾನರ ಈ ವಿಜಯವು ಹಿಂದೂ ಸಂಸ್ಕೃತಿಯ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಬದಲಾಗಿ ಹಿಂದೂ ಸಂಸ್ಕೃತಿ ಮತ್ತು ತತ್ವಜ್ಞಾನಗಳು ಸೂಫಿ ಪಂಥದ ಮೇಲೆ ಪ್ರಭಾವ ಬೀರಿದುವು. ಚರಕ ಸಂಹಿತೆ ಮತ್ತು ಪಂಚತಂತ್ರದ ಕತೆಗಳು ಅರೆಬಿಕ್ ಭಾಷೆಗೆ ತರ್ಜುಮೆಗೊಂಡುವು. ಹಾಗೂ ಹಿಂದೂ ದೇಶದ ವ್ಯಾಪಾರವು ಅಭಿವೃದ್ಧಿ ಪಡೆಯಿತು.
ಘಜನಿಯ ಮಹಮೂದನು: ಅಫಘಾನಿಸ್ತಾನದ ಆಗ್ನೇಯಕ್ಕಿರುವ ಘಜನಿ ಇವನ ರಾಜಧಾನಿ. ಇಸ್ಲಾಂ ಮತವನ್ನು ಹಿಂದೂ ದೇಶದಲ್ಲಿ ಪ್ರಚಾರ ಮಾಡಲು ಪ್ರತಿ ವರ್ಷವೂ ಧಾಳಿ ನಡೆಸುವೆನೆಂದು ಪಣ ತೊಟ್ಟನು. ಕ್ರಿ.ಶ. 1000ದಿಂದ ಮೊದಲ್ಗೊಂಡು ಹದಿನೇಳು ಬಾರಿ ಹಿಂದೂ ದೇಶದ ಮೇಲೆ ಯುದ್ಧವನ್ನು ಸಾರಿದನು. ಪಂಜಾಬು, ಸಿಂಧ, ಸೌರಾಷ್ಟ್ರಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. 1025: ಸೋಮನಾಥ ದೇವಾಲಯದ ಸೂರೆ. ಹತ್ತು ಸಾವಿರ ಗ್ರಾಮಗಳ ಉಂಬಳಿಯನ್ನು ಪಡೆದ ಸೋಮನಾಥ ದೇವಾಲಯವು ಸಮಸ್ತ ಭಾರತದಲ್ಲೇ ಹೆಸರುವಾಸಿಯಾದುದು. ಮಹಮೂದನು ಇದನ್ನು ಸೂರೆಗೈದು ದ್ರವ್ಯವನ್ನು ದೋಚಿಕೊಂಡು ಹೋದನು. ಅಲ್ಲದೆ ಇಲ್ಲಿನ ಎಂಭತ್ತು ಅಡಿ ಎತ್ತರದ ಶಿವಲಿಂಗವನ್ನು ಪುಡಿ ಮಾಡಿದನು. ಇವನ ಸಾಮ್ರಾಜ್ಯವು ಕ್ಯಾಸ್ಪಿಯನ್ ಸಮುದ್ರದಿಂದ ಅಲಹಾಬಾದಿನವರೆಗೆ ವಿಸ್ತರಿಸಿತ್ತು.
ಘೋರಿಯ ಮಹಮ್ಮದನು: ವಿಸ್ತಾರವಾದ ಘಜನಿ ಮಹಮೂದನ ಸಾಮ್ರಾಜ್ಯವನ್ನು ಅವನ ಮಕ್ಕಳಿಗೆ ರಕ್ಷಿಸಿಕೊಳ್ಳಲು ಸಾದ್ಯವಾಗಲಿಲ್ಲ. ಘೋರಿಯ ಮಹಮ್ಮದನು ಅವನ (ಘಜನಿಯ) ರಾಜ್ಯವನ್ನು ವಶಪಡಿಸಿ ಅಳತೊಡಗಿದನು. ಕ್ರಿ.ಶ. 1175ರಲ್ಲಿ ಅವನು ಹಿಂದುಸ್ತಾನಕ್ಕೆ ದಂಡೆತ್ತಿ ಬಂದು ಮುಲ್ತಾನನ್ನು ಗೆದ್ದು ದ್ರವ್ಯವನ್ನು ದೋಚಿಕೊಂಡು ಹಿಂತಿರುಗಿದನು. ಮುಂದಿನ ಧಾಳಿಯಲ್ಲಿ ಅವನು ಪೇಶಾವರವನ್ನು ಗೆದ್ದನು. 1192ರಲ್ಲಿ ಘೋರಿಯು ಹಿಂದೂ ದೇಶಕ್ಕೆ ಬರುವಾಗ ರಜಪೂತ ಅರಸನಾದ ಜಯಚಂದ್ರನು ಪೃಥ್ವೀರಾಜನ ಮೆಲೆ ತನಗಿದ್ದ ದ್ವೇಷವನ್ನು ತೀರಿಸುವುದಕ್ಕಾಗಿ ಘೋರಿಯ ಸಹಾಯವನ್ನು ಪಡೆದನು. ಯುದ್ಧದಲ್ಲಿ ಪೃಥ್ವೀರಾಜನು ಸೋತು ಘೋರಿಯು ಅವನ ರಾಜ್ಯವನ್ನು ವಶಪಡಿಸಿಕೊಂಡನು. 1193ರಲ್ಲಿ ಅವನು ಜಯಚಂದ್ರನನ್ನು ಪರಾಭವಗೊಳಿಸಿ, ತನ್ನ ವಿಶ್ವಾಸಕ್ಕೆ ಪಾತ್ರನಾದ ಕುತುಬುದ್ದೀನ್ ಐಬಕ್ ಎಂಬ ಗುಲಾಮನನ್ನು ಭಾರತದಲ್ಲಿನ ರಾಜ್ಯ ರಕ್ಷಣೆಗಾಗಿ ಮತ್ತು ವಿಸ್ತರಣೆಗಾಗಿ ನಿಯಮಿಸಿ, ರಾಜಧಾನಿಗೆ ಮರಳಿದನು.
ಘೋರಿಯ ವಿಜಯದ ಕಾರಣಗಳು: 1. ಪಶ್ಚಿಮ ಭಾರತದಲ್ಲಿದ್ದ ರಾಜ್ಯಗಳು ಚಿಕ್ಕ ಚಿಕ್ಕವಾಗಿದ್ದು ಹೆಚ್ಚು ಬಲಿಷ್ಠವಾಗಿರಲಿಲ್ಲ. 2. ಇವರ ಸೈನ್ಯವು ಮುಸಲ್ಮಾನರ ಸೈನ್ಯದಲ್ಲಿದ್ದಷ್ಟು ಹೊಸ ರೀತಿಯ ಶಸ್ತ್ರಗಳಿಂದ ಸುಸಜ್ಜಿತವಾಗಿರಲಿಲ್ಲ. 3. ದೇಶೀಯ ರಾಜ್ಯಗಳಲ್ಲಿ ಪದೇ ಪದೇ ಯುದ್ಧಗಳಾಗುತ್ತಿದ್ದು ಸೇನೆಗಳು ದುರ್ಬಲವಾಗಿದ್ದವು. 4. ದೇಶೀಯ ಅರಸರೊಳಗೆ ಸಹಕಾರ ಇಲ್ಲದಿದ್ದುದು.
ಕುತುಬುದ್ದೀನ್ ಐಬಕ್ ದೆಹಲಿಗಿಂತಲೂ ಆಚೆಗೆ (ಪೂರ್ವಕ್ಕೆ) ರಾಜ್ಯದ ಗಡಿಯನ್ನು ವಿಸ್ತರಿಸಿದನು. (ಆಳ್ವಿಕೆ 1206-1210.) 1206ರಲ್ಲಿ ಪಟ್ಟಕ್ಕೆ ಹಕ್ಕುದಾರರಿಲ್ಲದೆ ಘೋರಿಯು ಮೃತನಾದ ಕಾರಣ, ಕುತುಬುದ್ದೀನನು ಡೆಲ್ಲಿಯ ಗದ್ದುಗೆಯನ್ನೇರಿದನು. ಕುತುಬುದ್ದೀನನು ಪಟ್ಟವೇರಿದ ಮೇಲೆ ಡೆಲ್ಲಿ ಸಿಂಹಾಸನವು ಮುಸಲ್ಮಾನ ಅರಸರ ವಶದಲ್ಲಿ 1857ರ ತನಕ (ಸಿಪಾಯಿ ದಂಗೆ) ಉಳಿಯಿತು.
ಕೆಲವೇ ಸಮಯದಲ್ಲಿ ಸಿಂಧಿನ ಗವರ್ನರನು ಸ್ವಕೀಯ ಸ್ವತಂತ್ರನಾಗಿ ರಾಜ್ಯವನ್ನಾಳತೊಡಗಿದನು. ಹತ್ತನೇ ಶತಮಾನದಲ್ಲಿ ಸಿಂಧವು ಇಬ್ಭಾಗವಾಗಿ ಮುಲ್ತಾನ ಮತ್ತು ದಕ್ಷಿಣ ಸಿಂಧವೆಂದು ಎರಡು ದೇಶಗಳು ಉದಯವಾದುವು. 1005ರಲ್ಲಿ ಘಜನಿಯ ಮಹಮೂದನು ಇವುಗಳನ್ನು ಗೆದ್ದುಕೊಂಡನು. ಮಹಮೂದನ ಮರಣದ ತರುವಾಯ ಮುಲ್ತಾನವು ತುರುಕರ ಹಿಡಿತದಲ್ಲೇ ಉಳಿದರೂ, ದಕ್ಷಿಣ ಸಿಂಧವು ರಜಪೂತ ವಂಶದ ಅರಸನಾದ ಸುಮ್ರಾಸನ ನಾಯಕತ್ವದಲ್ಲಿ ಸ್ವತಂತ್ರವಾಯಿತು.
ಗುಲಾಮ ಅರಸರು
ಕುತುಬುದ್ದೀನ್ ಐಬಕ್ (1206-1210): ಕುತುಬುದ್ದೀನನು ತನ್ನ ನಾಲ್ಕು ವರ್ಷಗಳ ಆಡಳಿತ ಕಾಲದಲ್ಲಿ ಪಂಜಾಬಿನಿಂದ ಬಂಗಾಳದ ತನಕ ರಾಜ್ಯವನ್ನು ವಿಸ್ತರಿಸಿದನು. ಹಿಂದೂದ್ವೇಷಿಯಾಗಿ ವರ್ತಿಸಿದರೂ, ಸ್ವಧರ್ಮಾಭಿಮಾನಿಯಾದ ಈತನು ಕುರಾನಿನ ಹೇಳಿಕೆಯಂತೆ ನ್ಯಾಯ ರೀತಿಯಿಂದ ರಾಜ್ಯಾಡಳಿತ ನಡೆಸಿ ಪ್ರಜೆಗಳ ಸುಖಕ್ಕಾಗಿ ಶ್ರ್ರಮಿಸಿದನು. ರಾಜ್ಯವು ಕಳ್ಳಕಾಕರಿಂದ ವಿರಹಿತವಾಗಿ ಸುರಕ್ಷಿತವಾಗಿತ್ತು. ಮಹಮ್ಮದ್ ಘೋರಿಯು ಮರಣ ಹೊಂದಿದ ಬಳಿಕ ಘಜನಿಯು ಪರ್ಶಿಯಾದ ತಾಜುದ್ದೀನನ ವಶವಾಯಿತು. ಇವನು ಕುತುಬುದ್ದೀನನನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಳುವ ಅಭಿಲಾಷೆಯಿಂದ ಹಿಂದೂ ದೇಶಕ್ಕೆ ದಂಡೆತ್ತಿ ಬಂದಾಗ ಕುತುಬುದ್ದೀನನು ಅವನನ್ನು ತಡೆಗಟ್ಟಿ ತನ್ನ ಸ್ಥಾನವನ್ನು ಭದ್ರಗೊಳಿಸಿದನು.
ಕುತುಬುದ್ದೀನನು ಹಾಳುಗೆಡವಿದ ದೇವಸ್ಥಾನಗಳ ಸಾಮಗ್ರಿಗಳಿಂದ ದಿಲ್ಲಿ ಮತ್ತು ಅಜ್ಮೀರಗಳಲ್ಲಿ ಎರಡು ಮಸೀದಿಗಳನ್ನು ಕಟ್ಟಿಸಿದನು.
ಇಲ್ತುಮಿಷ್ (1211-1236): ಕುತುಬುದ್ದೀನನ ಮರಣದ ಬಳಿಕ ಪಟ್ಟಕ್ಕಾಗಿ ನಡೆದ ಕಲಹದಿಂದಾಗಿ ರಾಜಕೀಯ ಬಿಕ್ಕಟ್ಟು ಉಂಟಾಯಿತು. ಐಬಕ್‌ನ ಸಾಕುಪುತ್ರನಾದ ಆರಮ್ ಶಾನನ್ನು ಲಾಹೋರಿನ ಸುತ್ತು ಮುತ್ತಲಿನ ಅಧಿಕಾರಿಗಳು ಸಹಾಯವನ್ನಿತ್ತು ಅಲ್ಲಿ ಪಟ್ಟವನ್ನೇರಿಸಿದರು. ಆದರೆ ಡೆಲ್ಲಿಯ ಅಧಿಕಾರಿಗಳು ಐಬಕನ ಗುಲಾಮನೂ ಮಗಳ ಗಂಡನೂ ಆದ ಇಲ್ತುಮಿಷನನ್ನು ಪಟ್ಟದಲ್ಲಿ ಕುಳ್ಳಿರಿಸಿದರು. ಸಾಹಸಿಯಾದ ಇಲ್ತುಮಿಷನು ಬೇಗನೆ ಗೊಂದಲವನ್ನು ನಿವಾರಿಸಿ ತನ್ನ ಅಧಿಕಾರವನ್ನು ಭದ್ರಗೊಳಿಸಿದನು.
ಘಜನಿಯ ತಾಜುದ್ದೀನನು ಪಟ್ಟದಿಂದ ಹೊರತಳ್ಳಲ್ಪಟ್ಟು, ಹಿಂದೂ ದೇಶಕ್ಕೆ ಬಂದು ಲಾಹೋರನ್ನು ವಶಪಡಿಸಿಕೊಂಡನು. ಇಲ್ತುಮಿಷನು ಅವನನ್ನು ಸೋಲಿಸಿದನಲ್ಲದೆ, ಬಂಗಾಳ, ಮಾಳವ, ಗ್ವಾಲಿಯರುಗಳನ್ನು ಗೆದ್ದುಕೊಂಡನು.
ಇಲ್ತುಮಿಷ ಕೂಡಾ ಹಿಂದೂದ್ವೇಷಿಯಾಗಿ ರಾಜ್ಯಭಾರವನ್ನು ನಡೆಸಿದನು. ಅಮೀರ್ ಖುಸ್ರುವೇ ಮುಂತಾದ ಮುಸ್ಲಿಂ ಕವಿಗಳು, ಪಕೀರರು ಅವನ ಆಸ್ಥಾನದಲ್ಲಿ ಮಂಡಿತರಾಗಿದ್ದರು. ದಿಲ್ಲಿಯ ಸಮೀಪ ಸುಮಾರು 242 ಅಡಿ ಎತ್ತರದ ಮಿನಾರನ್ನು ಕುತುಬುದ್ದೀನನ ಸ್ಮಾರಕವಾಗಿ ಇಲ್ತುಮಿಷನು ಕಟ್ಟಿಸಿದನು.
ರಜಿಯಾ (1236-40): ಇಲ್ತುಮಿಷನು ಮರಣದ ಮೊದಲು ತನ್ನ ಮಕ್ಕಳಲ್ಲಿ ಒಬ್ಬಳಾದ ರಜಿಯಾಳು ಪಟ್ಟವನ್ನೇರಲು ತಕ್ಕವಳೆಂದು ಸೂಚಿಸಿದ್ದನು. ಅದರೆ ಅಧಿಕಾರಿಗಳು ಆತನ ಹಿರಿ ಮಗನಾದ ರುಕ್ನುದ್ದೀನ್ ಫಿರೋಜನನ್ನು ಪಟ್ಟದಲ್ಲಿ ಕುಳ್ಳಿರಿಸಿದರು.ಫಿರೋಜನು ವಿಲಾಸಿಯೂ, ಬುದ್ಧಿಹೀನನೂ ಅಗಿದ್ದುದರಿಂದ ಅವನ ತಾಯಿಯು ಹಿತಾಕಾಂಕ್ಷಿಯಾಗಿ ಕೆಲಸ ಮಾಡುತ್ತಿದ್ದಳು. ಅವಳು ಹಿಂದೆ ತನ್ನ ದ್ವೇಷಕ್ಕೆ ಪಾತ್ರರಾದವರನ್ನು ಶಿಕ್ಷಿಸತೊಡಗಿದಳು. ಇದು ಅಧಿಕಾರಿಗಳನ್ನು ಸಿಟ್ಟಿಗೆಬ್ಬಿಸಿ ಅವರು ರಜಿಯಾಳನ್ನು ಪಟ್ಟಕ್ಕೇರಿಸುವಂತಾಯಿತು. ದೂರದ ಪ್ರಾಂತ್ಯಗಳ ಗವರ್ನರುಗಳು ಸ್ವತಂತ್ರರಾದರು. ಅಲ್ತುಮಿಷನು ರಜಿಯಾಳಿಗೆ ರಾಜ್ಯಾಡಳಿತೆಯಲ್ಲಿ ಯೋಗ್ಯ ತರಬೇತಿಯನ್ನು ಕೊಡಿಸಿದ್ದನು. ಅವಳು ಮುಸಲ್ಮಾನ ಸ್ತ್ರೀಯರಿಗೆ ಹೇಳಿದ ಘೋಷಾವನ್ನು ಕಿತ್ತು ಬಿಸಾಕಿ ಪುರುಷರ ಪೋಷಾಕನ್ನು ಸದಾ ಧರಿಸುತ್ತಾ, ಸುಲ್ತಾನಾ ಎಂಬ ಬಿರುದನ್ನು ತನ್ನದಾಗಿಸಿಕೊಂಡು ರಾಜ್ಯವನ್ನು ಆಳತೊಡಗಿದಳು. ಅವಳು ವಿವೇಕಿಯೂ, ಪಂಡಿತರಿಗೆ ಆಶ್ರಯದಾತೆಯೂ, ನ್ಯಾಯಾಸಕ್ತೆಯೂ, ಪ್ರಜೆಗಳ ಹಿತಾಕಾಂಕ್ಷಿಯೂ ಆಗಿದ್ದು ರಾಜಯೋಗ್ಯ ಗುಣಗಳಿಂದ ಕೂಡಿದ್ದಳು.
ಆದರೆ ರಜಿಯಾಳಿಗೆ ಕಹಿ ಅನುಭವ ದೊರಕಲು ದೀರ್ಘ ಕಾಲ ಬೇಕಾಗಿರಲಿಲ್ಲ. ಅವಳು ಪದ್ಧತಿಯ ಸ್ತ್ರೀಧರ್ಮವನ್ನು ಮೀರಿ ನಡೆದುದು ಕೆಲವು ಗವರ್ನರುಗಳನ್ನು ಕೆರಳಿಸಿತು. ಅಲ್ಲದೆ ಜಲಾಲುದ್ದೀನ್ ಯಾಕುತ್ ಎಂಬ ಆಫ್ರಿಕನು ಅವಳ ಪ್ರೀತಿಗೆ ಪಾತ್ರನಾದುದು ರಾಜ್ಯದ ಆಡಳಿತದಲ್ಲಿ ಅವನ ಪ್ರಭಾವವು ಹೆಚ್ಚಾಗಲು ಕಾರಣವಾಯಿತು. ಅಲ್ತೂನಿಯಾ ಎಂಬ ಗವರ್ನರನು ಇದರಿಂದ ಸಿಟ್ಟುಗೊಂಡು ದಂಗೆಯೆದ್ದನು. ಯಾಕುತನು ಕೊಲ್ಲಲ್ಪಟ್ಟನು. ರಜಿಯಾಳನ್ನು ಸೆರೆಮನೆಯಲ್ಲಿಡಲಾಯಿತು. ಇಲ್ತುಮಿಷನ ಮಗನಾದ ಬಹ್ರಾಮನು ಸುಲ್ತಾನನಾದನು. ರಜಿಯಾಳು ಅಲ್ತೂನಿಯಾನನ್ನು ಮದುವೆಯಾಗಿ ಪಟ್ಟವನ್ನು ಮರಳಿ ಪಡೆಯುವ ಪ್ರಯತ್ನ ಮಾಡಿದಳು. ಆದರೆ ಅದು ಫಲಿಸಲಿಲ್ಲ. ಮಾತ್ರವಲ್ಲ, ಅವಳು ಮತ್ತು ಅಲ್ತೂನಿಯಾ ಇಬ್ಬರೂ ಕೊಲ್ಲಲ್ಪಟ್ಟರು.
ನಾಸಿರುದ್ದೀನ್ (1246-66): ಕೆಲವು ಗವರ್ನರುಗಳು ದಂಗೆಯೆದ್ದು ಬಹ್ರಾಮನನ್ನು ಹತ್ಯೆ ಮಾಡಿದ ಬಳಿಕ ನಾಸಿರುದ್ದೀನನು ಪಟ್ಟಕ್ಕೆ ಬಂದನು. ಅವನು ಬಹಳ ಸಾಧು ಸ್ವಭಾವದವನೂ ಧರ್ಮಾಭಿಮಾನಿಯೂ ಆಗಿದ್ದುದರಿಂದ ರಾಜ್ಯಾಡಳಿತೆಗೆ ತೀರಾ ಅಯೋಗ್ಯನಾಗಿದ್ದನು. ಕುರಾನಿನ ಉಪದೇಶದಂತೆ ಸಾದಾ ಜೀವನವನ್ನು ನಡೆಸುತ್ತಿದ್ದನು. ತನ್ನ ಅಥವಾ ತನ್ನ ಮನೆಯ ಖರ್ಚಿಗಾಗಿ ರಾಜ್ಯದ ಬೊಕ್ಕಸದಿಂದ ಚಿಕ್ಕಾಸನ್ನೂ ಪಡೆದುಕೊಳ್ಳುತ್ತಿರಲಿಲ್ಲ. ಕುರಾನನ್ನು ನಕಲು ತೆಗೆದು ವಿಕ್ರಯಿಸಿ ದೊರೆತ ಹಣದಿಂದ ತನ್ನ ಮತ್ತು ತನ್ನ ಕುಟುಂಬದ ಖರ್ಚುವೆಚ್ಚವನ್ನು ನಿರ್ವಹಿಸುತ್ತಿದ್ದನು.
ಇಲ್ತುಮಿಷನ ಗುಲಾಮನಾಗಿದ್ದ ಬಾಲ್ಬನನು ಶೌರ್ಯ ಸಾಹಸಗಳಿಂದ ರಜಿಯಾಳ ಕಾಲದಲ್ಲಿ ಸುಲ್ತಾನನ ಸಲಹಾ ಮಂಡಳಿಯಲ್ಲಿ ಸೇರಿಕೊಂಡು ಜಹಗೀರನ್ನು ಪಡೆದನು. ತನ್ನ ಜಹಗೀರಿನ ಆಡಳಿತೆಯಲ್ಲಿ ಅವನು ಜನರ ಮೆಚ್ಚುಗೆಗೆ ಪಾತ್ರನಾದನು. ನಾಸಿರುದ್ದೀನನ ಆಸ್ಥಾನದಲ್ಲಿ ಅವನು ಪ್ರಭಾವಶಾಲಿಯಾಗಿ ರಾಜ್ಯದ ಆಡಳಿತೆಯನ್ನು ವಹಿಸಿದನು. ನಾಸಿರುದ್ದೀನನು ರಾಜ್ಯಾಡಳಿತೆಯಲ್ಲಿ ಉದಾಸೀನ ಭಾವವನ್ನು ತಾಳಿದ್ದುದರಿಂದ ರಾಜ್ಯದ ಸಂಪೂರ್ಣ ಅಧಿಕಾರವು ಬಾಲ್ಬನನ ಕೈಗೆ ಬಂತು.
ಬಾಲ್ಬನನು ಇಲ್ತುಮಷನ ಮರಣದ ಅನಂತರ ಸ್ವತಂತ್ರಗೊಂಡ ರಾಜ್ಯಗಳನ್ನು ಮರಳಿ ಗೆದ್ದು ಗುಲಾಮ ವಂಶದ ಪ್ರತಿಷ್ಠತೆಯನ್ನು ಪುನರ್ ಸ್ಥಾಪಿಸಿದನು. ನಾಸಿರುದ್ದೀನನು ಬಾಲ್ಬನನ ಮಗಳನ್ನು ಮದುವೆಯಾದ ಬಳಿಕ ಬಾಲ್ಬನನ ಸ್ಥಾನವು ಇನ್ನಷ್ಟು ಮೇಲೇರಿತು. ಅವನ ಕೀರ್ತಿಗೆ ಅಸೂಯೆಪಟ್ಟು ಇತರ ಅಧಿಕಾರಿಗಳು ಅವನನ್ನು ಅಧಿಕಾರದಿಂದ ನಿವೃತ್ತಿಗೊಳಿಸುವಂತೆ ಸುಲ್ತಾನನ ಮೇಲೆ ಒತ್ತಾಯ ತಂದ ಕಾರಣ ಬಾಲ್ಬನನು ತನ್ನ ಹಿಂದಣ ಜಹಗೀರಿಗೆ ಕಳಿಸಲ್ಪಟ್ಟನು. ಇದರಿಂದಾಗಿ ದೇಶದಲ್ಲಿ ಪುನಃ ಅಶಾಂತಿ ಅವ್ಯವಸ್ಥೆ ತಲೆದೋರಿದ್ದರಿಂದ ಒಂದು ವರ್ಷದ ಬಳಿಕ ಬಾಲ್ಬನನು ಅಧಿಕಾರಕ್ಕೆ ಮರಳಿ ರಾಜ್ಯಾಡಳಿತೆಯನ್ನು ವಹಿಸುವಂತಾಯಿತು.
ಅಶಾಂತಿಯೆಬ್ಬಿಸಿದವರನ್ನು ಕ್ರೂರವಾಗಿ ಶಿಕ್ಷಿಸಿ ಅವನು ಶಾಂತಿ ಸ್ಥಾಪನೆಯನ್ನು ಮಾಡಿದನು. ಆಗಾಗ ದೇಶಕ್ಕೆ ನುಗ್ಗಿ ಹಾವಳಿಯನ್ನುಂಟುಮಾಡುತ್ತಿದ್ದ ಮೊಂಗೋಲಿಯನರನ್ನು ತಡೆಗಟ್ಟಿದುದು, ಮತ್ತು ದರೋಡೆಕೋರ ಪಂಗಡಗಳನ್ನು ಅಣಗಿಸಿದುದು ಬಾಲ್ಬನನ ಇನ್ನೆರಡು ಅತಿ ಮುಖ್ಯ ಸಾಧನೆಗಳಾಗಿದ್ದುವು.
ಬಾಲ್ಬನ್ (1266-1286): ನಾಸಿರುದ್ದೀನನು ಮೃತನಾಗುವಾಗ ಬಾಲ್ಬನನು ಸುಲಭವಾಗಿ ಪಟ್ಟವೇರಿದನು. ಕೂಡಲೇ ಆಡಳಿತೆಯಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ ಸರಕಾರವನ್ನು ಭದ್ರಗೊಳಿಸಿದನು. ಗುಲಾಮ ಅರಸರಿಗೆ ಸಲಹೆ ಸಹಾಯ ನೀಡುವುದಕ್ಕೆ ನಲುವತ್ತು ಜನರ ಒಂದು ಮಂಡಳಿಯಿತ್ತು. ಇದು ಬಾಲ್ಬನನ ಕಾಲದಲ್ಲಿ ಬಹಳ ಅಸಮರ್ಥವಾಗಿತ್ತಲ್ಲದೆ ಸುಲ್ತಾನನ ನೇರ ಅಧಿಕಾರ ಚಲಾವಣೆಗೆ ತೊಡಕನ್ನು ಉಂಟುಮಾಡುತ್ತಿತ್ತು. ಬಾಲ್ಬನನು ಆ ಮಂಡಳಿಯನ್ನು ರದ್ದುಗೊಳಿಸಿ ಅದರ ಸದಸ್ಯರಿಗೆ ನೀಡಿದ ಜಹಗೀರುಗಳನ್ನು ವಶಪಡಿಸಿಕೊಂಡನು. ಮೊಂಗೋಲರಿಂದ ಆಗಾಗ್ಗೆ ಆಗುತ್ತಿದ್ದ ಹಾವಳಿಯನ್ನು ತಡೆಗಟ್ಟುವುದಕ್ಕಾಗಿ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಸೈನ್ಯವನ್ನು ನಿಲ್ಲಿಸಿದನು.
ಬಾಲ್ಬನನು ರಾಜ್ಯಾಡಳಿತೆಯಲ್ಲಿ ಹೆಚ್ಚಿನ ಶ್ರದ್ಧೆಯನ್ನು ವಹಿಸುತ್ತಿದ್ದನು. ಪಕ್ಷಪಾತವಿಲ್ಲದೆ ನ್ಯಾಯ ವಿತರಣೆ ಮಾಡುತ್ತಿದ್ದನು. ದೇಶದಲ್ಲಿ ಹಲವು ಮಾರ್ಗಗಳನ್ನು ಕಟ್ಟಿಸಿದನು. ಮೊಂಗೋಲರು ಮತ್ತೆ ಹಿಂದೂದೇಶಕ್ಕೆ ನುಗ್ಗಿ ಮುಲ್ತಾನವನ್ನು ವಶಪಡಿಸಲು ಯತ್ನಿಸಿದಾಗ, ಬಾಲ್ಬನನ ಮಗನಾದ ಮುಹಮ್ಮದ್ ಖಾನನು ಅವರನ್ನು ಸೋಲಿಸಿದರೂ ಯುದ್ಧದಲ್ಲಿ ಮಡಿದನು (1285). ಇದರಿಂದಾಗಿ ಬಾಲ್ಬನನ ಅನಂತರ ಡೆಲ್ಲಿಯಲ್ಲಿ ಸಮರ್ಥರಾದ ಉತ್ತರಾಧಿಕಾರಿಗಳ ಅಭಾವ ಉಂಟಾಯಿತು.
ಖಿಲ್ಜಿ ವಂಶ
ಜಲಾಲುದ್ದೀನ್ ಖಿಲ್ಜಿ (1290-96): ಗುಲಾಮ ವಂಶದ ಪತನದ ಬಳಿಕ (ಬಾಲ್ಬನನ ಮರಣಾನಂತರ) ಡೆಲ್ಲಿ ಸಾಮ್ರಾಜ್ಯವು ನುಚ್ಚುನೂರಾಗಿ ಗೊಂದಲಕ್ಕೊಳಗಾಗಿತ್ತು. 1290ರಲ್ಲಿ ಜಲಾಲುದ್ದೀನ್ ಎಂಬ ತುರುಕನು ಅದನ್ನು ವಶಪಡಿಸಿಕೊಂಡನು. ಇವನು ಎಪ್ಪತ್ತು ವರ್ಷಗಳ ಮುದುಕನಾಗಿದ್ದನಲ್ಲದೆ, ಅನೇಕ ಅಧಿಕಾರಿಗಳ ಪ್ರೀತಿಗೆ ಪಾತ್ರನಾಗಿರಲಿಲ್ಲ. ಆದರೆ ಉಪಾಯದಿಂದ ಅವರೊಡನೆ ಸಂಧಿ ಮಾಡಿಕೊಂಡು ರಾಜ್ಯವಾಳತೊಡಗಿದನು. ಜಲಾಲುದ್ದೀನನು ದೀನ ಸ್ವಭಾವದವನಾಗಿದ್ದುದರಿಂದ ಅವನನ್ನು ವಿಪತ್ಪರಂಪರೆಗಳು ಆಗಾಗ ಕಾಡುತ್ತಿದ್ದುವು. ಬಾಲ್ಬನನ ಸೋದರಳಿಯನೊಬ್ಬನು ‘ಕಾರ’ ಎಂಬಲ್ಲಿ ದಂಗೆಯೆದ್ದು ತಾನೇ ಸುಲ್ತಾನನೆಂದು ಸಾರಿದನು. ಜಲಾಲುದ್ದೀನನು ಅಲ್ಲಿಗೆ ಧಾವಿಸಿ, ಅವನನ್ನು ಸೋಲಿಸಿ, ಅಲ್ಲಿ ತನ್ನದೇ ಸೋದರಳಿಯನನ್ನು ಗವರ್ನರನನ್ನಾಗಿ ಮಾಡಿದನು. ದಂಗೆಯೆದ್ದವರನ್ನು ಅವನು ಕಠಿಣವಾಗಿ ಶಿಕ್ಷಿಸದೆ ಹಾಗೇ ಬಿಟ್ಟುಬಿಟ್ಟನು. ಒಬ್ಬ ಮುಸ್ಲಿಮನ ಜೀವ ಸಿಂಹಾಸನಕ್ಕಿಂತ ದೊಡ್ಡದು ಎಂದು ಅವನು ತಿಳಿದುಕೊಂಡುದು ಇದಕ್ಕೆ ಕಾರಣ. ಸುಲ್ತಾನನು ದರೋಡೆಕೋರರ ಗುಂಪನ್ನು ಕೂಡ ಅಣಗಿಸಲು ಉದಾಸೀನ ಭಾವ ತೋರಿಸಿದುದರಿಂದ ದೇಶದಲ್ಲಿ ಭದ್ರತೆಯ ಅಭಾವವು ತಲೆದೋರಿತು.
ಇವನ ಕಾಲದಲ್ಲಿ ಮೊಂಗೋಲರ ಇನ್ನೊಂದು ಧಾಳಿಯು ನಡೆಯಿತು. ಇದನ್ನು ತಡೆಗಟ್ಟುವುದರಲ್ಲಿ ಅವನು ಸಮರ್ಥನಾದನು.
ಅಲ್ಲಾವುದ್ದೀನ್ ಖಿಲ್ಜಿ (1296-1316): ಅಲ್ಲಾವುದ್ದೀನನು ಗವರ್ನರನಾದಾಗಿನಿಂದಲೂ ಡೆಲ್ಲಿಯ ಗದ್ದುಗೆಯನ್ನು ಕಿತ್ತುಕೊಳ್ಳುವ ಹವಣಿಕೆಯಲ್ಲಿದ್ದನು. ತನ್ನ ಬಳಿಯಲ್ಲಿದ್ದ ಸೈನ್ಯವು ಸಂಪೂರ್ಣವಾಗಿ ತನಗೆ ವಿಧೇಯವಾಗಿರುವಂತೆ ನೋಡಿಕೊಂಡನು. ಜಲಾಲುದ್ದೀನನ ಒಪ್ಪಿಗೆ ವಿನಾ ದೇವಗಿರಿಗೆ ದಂಡಯಾತ್ರೆಯನ್ನು ಬೆಳೆಸಿದನು. ಯಾದವ ಅರಸನಾದ ರಾಮಚಂದ್ರ ಮತ್ತು ಅವನ ಮಗ ಶಂಕರನು ಕೋಟೆಯನ್ನು ರಕ್ಷಿಸಲು ಎಷ್ಟು ಪ್ರಯತ್ನಿಸಿದರೂ ನಿಷ್ಫಲವಾಯಿತು. ಅಲ್ಲಾವುದ್ದೀನನು ದೇವಗಿರಿಯಿಂದ ಅಪಾರ ದ್ರವ್ಯವನ್ನು ದೋಚಿಕೊಂಡು ಹಿಂತೆರಳಿದನು. ಈ ವಿಜಯದ ವಾರ್ತೆಯನ್ನು ಕೇಳಿ ಜಲಾಲುದ್ದೀನನು ಸಂತಸಗೊಂಡು ಅಲ್ಲಾವುದ್ದೀನನ್ನು ದೆಹಲಿಗೆ ಆಮಂತ್ರಿಸಿದನು. ಜಲಾಲುದ್ದೀನನು ಪ್ರೀತಿಯಿಂದ ಅಲ್ಲಾವುದ್ದೀನನನ್ನು ಆಲಂಗಿಸಲು, ಸುಲ್ತಾನನು ವಂಚನೆಯಿಂದ ಹತನಾದನು. ಇದರಿಂದ ಕುಪಿತರಾದ ಅಧಿಕಾರಿಗಳಿಗೆ ದೇವಗಿರಿಯ ಕೊಳ್ಳೆಯಿಂದ ದೊರೆತ ಸಂಪತ್ತನ್ನು ಹಂಚಿ ಅವರನ್ನು ತೃಪ್ತಿಪಡಿಸಿ ಅಲ್ಲಾವುದ್ದೀನನು ದೆಹಲಿಯ ಸುಲ್ತಾನ ಪದವಿಯನ್ನು ಸುಲಭವಾಗಿ ಸಂಪಾದಿಸಿದನು.
ಅಧಿಕಾರವನ್ನು ಭದ್ರಗೊಳಿಸಿದುದು
ಅಲ್ಲಾವುದ್ದೀನನು ಉತ್ತರ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಭದ್ರಗೊಳಿಸಲು ಕಾರ್ಯಪ್ರವೃತ್ತನಾದನು. 1. ಜಲಾಲುದ್ದೀನನ ಮಿದು ಧೋರಣೆಯಿಂದಾಗಿ ಗವರ್ನರುಗಳು ಉನ್ಮತ್ತರಾಗಿ ದೇಶದಲ್ಲಿ ಅಶಾಂತಿಯನ್ನೆಬ್ಬಿಸುವ ಸ್ಥಿತಿಯಲ್ಲಿದ್ದರು. ಆದ್ದರಿಂದ ಅಲ್ಲಾವುದ್ದೀನನು ಅವರನ್ನು ಪದಚ್ಯುತಿಗೊಳಿಸಿ ಅವರ ಜಹಗೀರುಗಳನ್ನು ವಶಪಡಿಸಿಕೊಂಡನು. ಪ್ರತೀಕಾರವೆಸಗಲು ಬಯಸಿದವರನ್ನು ಕಠಿಣವಾಗಿ ಶಿಕ್ಷಿಸಿದನು. 2. ಮೊಂಗೋಲರ ಹಾವಳಿ ವಿಪರೀತವಾಗಿತ್ತು. ಪಂಜಾಬಿನ ಜನರು ಇದರಿಂದ ತುಂಬಾ ನಷ್ಟಕ್ಕೆ ಈಡಾದರು. ಮೊಂಗೋಲರನ್ನು ತಡೆಗಟ್ಟಲು ಅಲ್ಲಾವುದ್ದೀನನು ಗಡಿಗಳಲ್ಲಿ ಅಲ್ಲಲ್ಲಿ ಕೋಟೆಗಳನ್ನು ನಿರ್ಮಿಸಿದನು, ಮತ್ತು ಸೈನ್ಯವನ್ನು ಬಲಪಡಿಸಿದನು. ಈ ವ್ಯವಸ್ಥೆಯಿಂದ ಅವನು ತನ್ನ ಕಾಲದಲ್ಲಾದ ನಾಲ್ಕು ಮೊಂಗೋಲಿಯನ್ ಧಾಳಿಗಳನ್ನು ಸಮರ್ಥವಾಗಿ ತಡೆಗಟ್ಟಿ ಅವರು ಮುಂದೆಂದೂ ಈ ದೇಶದ ಕಡೆಗೆ ತಲೆ ಹಾಕದಂತೆ ಮಾಡಿದನು. 3. ಉತ್ತರ ಮತ್ತು ದಕ್ಷಿಣ ಹಿಂದುಸ್ತಾನದ ಹಿಂದೂ ರಾಜರಿಂದ ತನಗೆ ಧಕ್ಕೆ ಬರಬಹುದೆಂದು ತಿಳಿದು ಅವರ ವಿನಾಶಕ್ಕೆ ಪಣ ತೊಟ್ಟನು.
ಸಾಮ್ರಾಜ್ಯ ವಿಸ್ತಾರ
ಅಲ್ಲಾವುದ್ದೀನನು ಉತ್ತರ ಹಿಂದುಸ್ತಾನದ ಹಿಂದೂ ರಾಜರನ್ನು ಗೆದ್ದು ಸಾಮ್ರಾಜ್ಯ ವಿಸ್ತಾರಕ್ಕೆ ಕೈಹಚ್ಚಿದನು. ಗುಜರಾತನ್ನು ಗೆದ್ದುಕೊಂಡನು. ಅಲ್ಲಿನ ರಾಣಿ ಕಮಲಾದೇವಿಯು ಬಲಾತ್ಕಾರದಿಂದ ಕೊಂಡೊಯ್ಯಲ್ಪಟ್ಟಳು. ಅಲ್ಲಿನ ರಾಜನು ದೇವಗಿರಿಗೆ ಓಡಿಹೋದನು. ಸೋಮನಾಥ ದೇವಾಲಯವನ್ನು ಸೂರೆ ಮಾಡಿ ಅಲ್ಲಿನ ವ್ಯಾಪಾರಿಗಳನ್ನು ಹಿಂಸಿಸಿ ಅವರ ಸೊತ್ತು ಮತ್ತು ದ್ರವ್ಯಗಳನ್ನು ಸುಲಿದನು. ಈ ಸಂದರ್ಭದಲ್ಲಿ ಅಲ್ಲಾವುದ್ದೀನನು ಕಾಫರನೆಂಬ ಒಬ್ಬ ಹಿಂದೂ ಜೀತದ ಹುಡುಗನನ್ನು ಒಯ್ದು ತನ್ನ ಸೇವೆಗೆ ಇರಿಸಿಕೊಂಡನು. ಇವನು ಸುಲ್ತಾನನಿಗೆ ಪ್ರೀತಿಪಾತ್ರನಾಗಿ ಉಚ್ಚಾದಿಕಾರವನ್ನು ಹೊಂದಿ ದಕ್ಷಿಣ ಹಿಂದುಸ್ತಾನದ ವಿಜಯ ಯಾತ್ರೆಯಲ್ಲಿ ದಂಡನಾಯಕನಾಗಿ ಅಲ್ಲಾವುದ್ದೀನನ ಬಲವನ್ನು ಹೆಚ್ಚಿಸಿದನು. ಚಿತ್ತೂರಿನ ಅರಸ ಭೀಮಸಿಂಹನನ್ನು ಕೊಂದು ಅವನ ರಾಜ್ಯವನ್ನು ಪಡೆದನು.
ದಕ್ಷಿಣದ ದಂಡಯಾತ್ರೆ
ಅಲ್ಲಾವುದ್ದೀನನು ಉತ್ತರ ಹಿಂದುಸ್ತ್ತಾನದಲ್ಲಿ ಬಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿ, ದಕ್ಷಿಣ ಹಿಂದುಸ್ತ್ತಾನದ ವಿಜಯ ಯಾತ್ರೆಗಾಗಿ ಮಾಲಿಕ್ ಕಾಫರನ ನಾಯಕತ್ವದಲ್ಲಿ ಸೇನೆಯನ್ನು ಕಳುಹಿಸಿದನು. ಅಲ್ಲಾವುದ್ದೀನನಿಗೆ ದಕ್ಷಿಣ ಹಿಂದುಸ್ತಾನದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶವಿರಲಿಲ್ಲ. ಆದರೆ ದಕ್ಷಿಣದ ಬಲಿಷ್ಠರಾದ ಅರಸರನ್ನು ಸೋಲಿಸಿ ಅವರಿಂದ ಅಪಾರವಾದ ಸಂಪತ್ತನ್ನು ಕಿತ್ತುಕೊಂಡು, ಅವರ ಬಲವನ್ನು ಮುರಿದು ತನ್ನ ಸಾಮ್ರಾಜ್ಯಕ್ಕೊದಗಬಹುದಾದ ಹಾನಿಯನ್ನು ತಪ್ಪಿಸುವ ಅಭಿಲಾಷೆ ಅವನಿಗಿತ್ತು. ಕಾಫರನು ದೇವಗಿರಿಗೆ ಮುತ್ತಿಗೆ ಹಾಕಿ ರಾಮಚಂದ್ರನನ್ನು ಸೋಲಿಸಿ ತುಂಬಾ ದ್ರವ್ಯವನ್ನು ಪಡೆದನು. ಅಲ್ಲಿಂದ ಮುಂದರಿದು ಕಾಕತೀಯ ಎರಡನೇ ಪ್ರತಾಪರುದ್ರನನ್ನು ಪರಾಜಯಗೊಳಿಸಿ ಅವನ ಸಂಪತ್ತನ್ನು ಕಿತ್ತುಕೊಂಡನು. ಮುಂದರಿಯುತ್ತಾ ಹೊಯ್ಸಳ ಅರಸನಾದ ಮೂರನೆ ವೀರಬಲ್ಲಾಳನನ್ನು ಗೆದ್ದು ಪಾಂಡ್ಯರನ್ನು ಸದೆಬಡಿದು ರಾಮೇಶ್ವರದ ತನಕ ಹೋದನು. ರಾಮೇಶ್ವರದಲ್ಲಿ ಒಂದು ಮಸೀದಿಯನ್ನು ನಿರ್ಮಿಸಿದನು. ರಾಜಧಾನಿಗೆ ಕಾಫರನು ಹೇರಳ ದ್ರವ್ಯದೊಂದಿಗೆ ಮರಳಿದನು.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.