ಸರ್ ಸಯ್ಯದ್ ಅಹ್ಮದ್‌ರ ಬ್ರಿಟಿಷ್ ಒಲವಿನ ಹೊರತಾಗಿ ಭಾರತೀಯ ಮುಸ್ಲಿಂರನ್ನು ಆಧುನೀಕರಣದ ಕಡೆಗೆ ಒಯ್ಯುವ ಅವರ ನಿರಂತರ ಯತ್ನದ ಕಾರಣಕ್ಕೆ “ಆಧುನೀಕರಣದ ಪ್ರವರ್ತಕ” ಎಂದೂ ಅವರನ್ನು ಕರೆದಿದ್ದಾರೆ. ಶ್ರದ್ಧಾವಂತ ಮುಸ್ಲಿಂ ಆಗಿದ್ದರೂ ಧಾರ್ಮಿಕ ಸಾಂಪ್ರದಾಯಿಕತೆ ಸಿದ್ಧಾಂತಗಳ ವಿಮರ್ಶಕರು ವಿರೋಧಿಯೂ ಆಗಿದ್ದರು. ಯೂರೋಪಿನ ವಿಜ್ಞಾನವನ್ನು ಆಧರಿಸಿದ ತಮ್ಮದೇ ಧರ್ಮಶಾಸ್ತ್ರವನ್ನು ರೂಪಿಸಿದ್ದರು. 1870ರಲ್ಲಿ ಆರಂಭಿಸಿದ್ದ “ಮಹಮದೀಯ ಸಮಾಜ ಸುಧಾರಕ” ಎನ್ನುವ ನಿಯತಕಾಲಿಕ ಅವರ ತಿಳಿವು ನೋಟಗಳನ್ನು ತಿಳಿಸುತ್ತದೆ.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಸರ್ ಸಯ್ಯದ್ ಅಹ್ಮದ್ ಖಾನ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಹತ್ತೊಂಬತ್ತನೆಯ ಶತಮಾನದಲ್ಲಿ ಅಲಹಾಬಾದಿನ ಪ್ರಮುಖ ಉರ್ದು ಕವಿಯೊಬ್ಬರು “ಶೇಖ್ ಬೇಕಿದ್ದರೆ ಮೆಕ್ಕಾಗಿ ಹೋಗಲಿ, ನಾನು ಲಂಡನ್‌ಗೆ ಹೋಗುವೆ; ಅವನಿಗೆ ಭಗವಂತನ ಮನೆ ನೋಡಬೇಕಾಗಿದೆ, ನನಗೆ ಭಗವಂತನ ವೈಭವನ್ನು” ಎಂದು ಬರೆದಿದ್ದರಂತೆ. ಈ ಕಾಲದಲ್ಲಿ “ವಿಸ್ಮಯ ನಗರಿ” ಎನ್ನುವ ಬಿರುದಿನ ತಾಣಗಳು ಹಲವು ಇರಬಹುದಾದರೂ ಹದಿನೆಂಟು ಹತ್ತೊಂಭತ್ತನೆಯ ಶತಮಾನದ ಮಾಯಾಪುರಿ – ಲಂಡನ್. ಮುಖ್ಯವಾಗಿ ಏಷ್ಯಾದ ದೇಶಗಳಿಂದ ಲಂಡನ್‌ಗೆ ಭೇಟಿಕೊಟ್ಟು ಬಂದವರ ಅಭಿಪ್ರಾಯವಂತೂ ಹಾಗೆಯೇ ಇರುತ್ತಿತ್ತು. ಇವತ್ತಿನ ಲಂಡನ್‌ಅನ್ನು ಸುತ್ತುವವರಿಗೂ ಕೆಲವೊಮ್ಮೆ ಎರಡು ಮೂರು ಶತಮಾನಗಳ ಹಿಂದಿನ ಲಂಡನ್ನೇ ಇಂದೂ ಬದುಕುತ್ತಿರುವಂತೆ ಕಾಣುವುದಿದೆ.

ಲಂಡನ್‌ಗೂ ಆ ಪುರಾತನ ಇರುವಿಕೆ ಭ್ರಮೆಗಳೇ ಇಷ್ಟ ಇರಬೇಕು. ಹಳೆಯ ಕಟ್ಟಡ ರಸ್ತೆ ವ್ಯವಸ್ಥೆಗಳನ್ನು ಧೂಳು ಹೊಡೆದು ಜೋಪಾನ ಮಾಡುವ, ಹಳೆ ದಿನಾಂಕ, ಬೋರ್ಡು ಹಿಂದಿನಂತೆಯೇ ಕಾಪಿಡುವ ಬ್ರಿಟಿಷರು ಯಾವತ್ತೂ ಇತಿಹಾಸ ಸ್ಮರಣೆ ಮತ್ತು ಹೆಮ್ಮೆಯಲ್ಲೇ ವರ್ತಮಾನವನ್ನು ಕಳೆಯುವವರು. 18ನೆಯ ಶತಮಾನದಲ್ಲಿಯೇ ಭಾರತದಿಂದ ಇಂಗ್ಲೆಂಡ್‌ಗೆ ತಿರುಗಾಡಲು ಹೋಗಿ ಅಲ್ಲಿನ ವೈಭವವನ್ನು ಕಂಡು ದಿಗ್ಮೂಢರಾಗಿದ್ದವರಿದ್ದರು. ಅವರಲ್ಲಿ ಕೆಲವರು ಪ್ರವಾಸ ಕಥನವನ್ನೂ ಬರೆದಿದ್ದರು. ಅವೆಲ್ಲ ಸಾಮಾನ್ಯವಾಗಿ ಲಂಡನ್ ನೆಲದ, ರಾಜಧಾನಿಯ ಹೊಗಳಿಕೆಗಳಾಗಿದ್ದವು. ಆ ಕಾಲದ ಲಂಡನ್‌ನ ಅನುಭವ ಕಥನಗಳಲ್ಲಿ ಮುಖ್ಯವಾದುದು ಉರ್ದುವಿನಲ್ಲಿ ಬರೆದ “ಮುಸಾಫಿರ್-ಇ-ಲಂಡನ್. ಈ ಕಥನವನ್ನು ಬರೆದ “ಮುಸಾಫಿರ್” ಅಲೆಮಾರಿ, ಪ್ರವಾಸಿ, ಲಂಡನನ್ನು ಅಲ್ಲಿನ ಪರಿಸ್ಥಿತಿ ಹಾಗು ಜನರನ್ನು ಶೈಕ್ಷಣಿಕ ವಿದ್ಯಾರ್ಥಿಯಂತೆ ಚಿತ್ರಿಸಿದ್ದ. ಆ ಭಾರತೀಯ ಮುಸಾಫಿರನ ಹೆಸರು ಸಯ್ಯದ್ ಅಹ್ಮದ್ ಖಾನ್. ತನ್ನ ಯಾತ್ರೆಯ ಉದ್ದಕ್ಕೂ ಸಯ್ಯದ್ ಅಹ್ಮದ್, ಅಲಿಘರ್‌ನ ಪತ್ರಿಕೆಗೆ ಅನುಭವ ಲೇಖನಗಳನ್ನು ಬರೆದು ಕಳುಹಿಸುತ್ತಿದ್ದರು. ಆ ಎಲ್ಲ ಹಾಳೆಗಳ ಸಂಗ್ರಹ ಬಹಳ ಕಾಲ ಯಾವ ಓದುಗರಿಗೂ ಲಭ್ಯ ಆಗದಿದ್ದರೂ ಒಂದು ಶತಮಾನದ ನಂತರ, 1961ರಲ್ಲಿ “ಮುಸಾಫಿರ್- ಇ – ಲಂಡನ್ (A Musafir to London )” ಎನ್ನುವ ಹೆಸರಿನಲ್ಲಿ ಪುಸ್ತಕವಾಗಿ ದರ್ಶನ ನೀಡಿತು.

ಲಂಡನ್‌ಗೆ ಹೊರಡುವ ಮೊದಲು “ಭಾರತದ ಉನ್ನತಿಯನ್ನು ಯೋಗಕ್ಷೇಮವನ್ನು ಪ್ರೋತ್ಸಾಹಿಸಿವುದರಷ್ಟು, ಭಾರತವನ್ನು ಆಳುತ್ತಿರುವ ಬ್ರಿಟಿಷ್ ಸರಕಾರವನ್ನು ಬಲಗೊಳಿಸಿರುವುದರಷ್ಟು, ಯುರೋಪ್ ಮತ್ತು ಭಾರತ ಪ್ರದೇಶಗಳ ನಡುವೆ ಪರಸ್ಪರ ಸಂಬಂಧಗಳನ್ನು ಬೆಸೆದಷ್ಟು ತುರ್ತಿನ ಮತ್ತು ಮುಖ್ಯವಾದ ಕೆಲಸ ಇನ್ನೊಂದಿಲ್ಲ ಎಂದು ನನಗೆ ಖಾತ್ರಿ ಆಗಿದೆ. ಆ ಗುರಿಯನ್ನು ಸಾಧಿಸಲು ನನ್ನ ನಿಟ್ಟಿನಲ್ಲಿ ಭಾರತೀಯರು ಯುರೋಪಿಗೆ ಪ್ರವಾಸ ಕೈಗೊಳ್ಳಬೇಕು. ಅಲ್ಲಿನ ನಾಗರಿಕತೆ ಅಭಿವೃದ್ಧಿ ಸಾಧನೆಗಳನ್ನು ಪ್ರತ್ಯಕ್ಷ ಗಮನಿಸಬೇಕು. ಪ್ರವಾಸಿಗರು, ಭಾರತದ ಹಿತದೃಷ್ಟಿಯಲ್ಲಿ ಅಲ್ಲಿನ ಉಪಯುಕ್ತ ವಿಷಯಗಳನ್ನು ಕಲಿಯಬೇಕು….. ಹಾಗಾಗಿ ನಾನು ಇಂಗ್ಲೆಂಡ್‌ಗೆ ಖುದ್ದಾಗಿ ಹೋಗಲು ಬಯಸುವೆ. ಈ ಯಾತ್ರೆ ವೈಯಕ್ತಿಕವಾಗಿ ಮಾತ್ರವಲ್ಲದೆ ದೇಶವಾಸಿಗಳಿಗೂ ಪ್ರಯೋಜನಕಾರಿ ಆಗುವುದರಲ್ಲಿ ಸಂದೇಹ ಇಲ್ಲ” ಎಂದು ಸಯ್ಯದ್ ಅಹ್ಮದ್ ಬರೆದಿದ್ದರು.

1869ರ ಏಪ್ರಿಲ್ 1 ರಂದು ಭಾರತೀಯ ಅಲೆಮಾರಿ, ಬನಾರಸ್ ಇಂದ, ಜೊತೆಗೆ ಇನ್ನೂ ನಾಲ್ವರೊಡನೆ ಹೊರಟಿದ್ದರು. ತನ್ನಿಬ್ಬರು ಮಕ್ಕಳು, ನಂಬಿಗಸ್ಥ ಸೇವಕ ಮತ್ತೆ ಒಬ್ಬ ಸಂಬಂಧಿ. ಸಯ್ಯದ್ ಹಾಗು ಸಂಬಂಧಿಗೆ ಅವರ ಈ ಪ್ರಥಮ ವಿದೇಶ ಪ್ರವಾಸಕ್ಕೆ ವಿದ್ಯಾರ್ಥಿ ವೇತನ ದೊರಕಿತ್ತು, ಅವರು ಶಾಲಾವಿದ್ಯಾರ್ಥಿಗಳು ಅಲ್ಲದಿದ್ದರೂ ಹೊರಟದ್ದು ಭೌಗೋಳಿಕ ಸಾಂಸ್ಕೃತಿಕ ಕಲಿಕೆಗಾದ್ದರಿಂದ ಆ ಪ್ರಯೀಜನ ದೊರಕಿತ್ತು. ಎತ್ತಿನ ಗಾಡಿಯಿಂದ ಹಿಡಿದು ರೈಲುಮಾರ್ಗದ ತನಕ ವಿವಿಧ ಮಾರ್ಗ ಮಾಧ್ಯಮಗಳ ಬಳಕೆಯಲ್ಲಿ ಬನಾರಸ್‌ನಿಂದ ಮುಂಬೈಯನ್ನು 6 ದಿನಗಳಲ್ಲಿ ಅವರು ತಲುಪಿದ್ದರು. ಮುಂಬೈಯಿಂದ “ಎಸ್ ಎಸ್ ಬರೋಡ” ಎಂಬ ಹಡಗನ್ನು ಏಪ್ರಿಲ್ 10ರಂದು ಹತ್ತಿದರು. ಭಾರತ ಮತ್ತು ಬ್ರಿಟನ್ ನಡುವಿನ ಜಲಮಾರ್ಗದ ನಿರ್ಣಾಯಕ ಹಾದಿಗಲ್ಲಾದ ಸೂಯೆಜ್ ಕಾಲುವೆಯನ್ನು ತಲುಪಿದ್ದು ಏಪ್ರಿಲ್ ತಿಂಗಳ 23ನೆಯ ತಾರೀಕಿನಂದು. ಮರುದಿನ ಇನ್ನೊಂದು ಹಡಗನ್ನು ಏರಿ ಲಂಡನ್ ದಿಕ್ಕಿಗೆ ಹೊರಟರು, ಮೇ 4ರಂದು, ಪ್ರಯಾಣ ಶುರು ಆದ ಒಂದು ತಿಂಗಳ ನಂತರ ಗುರಿ ಮುಟ್ಟಿದರು.

ಲಂಡನ್‌ಗೆ ಹೊರಡುವ ಮೊದಲು ಸಯ್ಯದ್ ಅಹ್ಮದ್, ಓದುಗ ಮಿತ್ರರೊಡನೆ ಅಲಿಘರ್‌ನ ಪತ್ರಿಕಾ ಪ್ರಕಟಣೆಗೆ ನಿಯಮಿತವಾಗಿ ಪ್ರವಾಸದ ಅನುಭವ ಕಥನಗಳನ್ನು ಕಳುಹಿಸುವುದಾಗಿ ಹೇಳಿದ್ದರು. ಹಾಗೆ ಮಾಡಿದರು ಕೂಡ. ಅವರ ಕೊನೆಯ ಪೋಸ್ಟ್ 1870ರಲ್ಲಿ ಲಂಡನ್‌ನಿಂದ ಹೊರಟಿತ್ತು. ಅದು ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್ ನಗರ ಅಲ್ಲಿನ ಕ್ಲಿಫ್ಟನ್ ತೂಗು ಸೇತುವೆಯ ಕುರಿತಾಗಿ ಆಗಿತ್ತು. ಇಂಗ್ಲೆಂಡ್ ವಾಸದ ಉದ್ದಕ್ಕೂ ಬರೇ ಪ್ರವಾಸಿ ಆಗಿರದೇ ಆಂಗ್ಲ ಸಮಾಜದ ಜೊತೆಗೆ ಸಂಬಂಧ ಇಟ್ಟುಕೊಂಡ, ಸಂಶೋಧನೆ ನಡೆಸಿದ ದಾಖಲೆಗಳ ಕುರಿತು ಮುಸಾಫಿರ್ ಲೇಖನಗಳನ್ನು ಬರೆದರು. ಆದರೆ ಅವರ ಬರಹಗಳು ಭಾರತವನ್ನು ಟಪ್ಪಾಲಿನಲ್ಲಿ ತಲುಪಿ ಓದಿಸಿಕೊಂಡ ಮೇಲೆ ಉತ್ತರ ಭಾರತೀಯ ಸಿರಿವಂತ ಮುಸ್ಲಿಂರ ಟೀಕೆಗೆ ಒಳಗಾಗಿದ್ದವು. ಟೀಕಾಕಾರರು “ಮುಸ್ಲಿಂ ಮೌಲ್ಯಗಳಿಂದ ಕುಸಿದ ವ್ಯಕ್ತಿ, ವಸಾಹತುಶಾಹಿ ಶಕ್ತಿಯ ಹೊಗಳುಭಟ” ಎಂದು ಲೇಖಕರನ್ನು ದೂರುತ್ತಿದ್ದರು. ತಮ್ಮ ಬರಹಗಳು ಭಾರತದಲ್ಲಿ ವಿವಾದ ಹುಟ್ಟಿಸುವುದನ್ನು ಇಷ್ಟಪಡದ ಸಯ್ಯದ್ ಅಹ್ಮದ್ ಕೊನೆಗೆ ಬರೆದು ಕಳುಹಿಸುವುದನ್ನು ನಿಲ್ಲಿಸಿದರು.

ಕನಸಿನ ಕಲಿಕೆಯ ಲಂಡನ್ ಯಾನ ಮತ್ತು ತಿರುಗಾಟವನ್ನು ಆರಂಭಿಸುವ ಮೊದಲಿನ ಅವರ ಭಾರತೀಯ ದಿನಗಳು ಪ್ರಕ್ಷುಬ್ಧವಾಗಿದ್ದವು. ಅವರಿಗೆ ಮಾತ್ರವಲ್ಲ ಭಾರತಕ್ಕೆ ಕೂಡ. 1857 ಇಸವಿಯನ್ನು ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಲು ನಡೆದ ಸಿಪಾಯಿ ದಂಗೆಯ ಕಾರಣಕ್ಕೆ ನೆನಪಿಡಲಾಗುತ್ತದೆ. ಕ್ರಾಂತಿಕಾರಿಗಳು ದೇಶಭಕ್ತ ಯೋಧರು ಪ್ರತಿಭಟನೆಯ ತಯಾರಿಯಲ್ಲಿ ಇರುವಾಗ, ಈಸ್ಟ್ ಇಂಡಿಯಾ ಕಂಪನಿಯ ಕೆಲವು ಭಾರತೀಯ ನೌಕರರು ಬ್ರಿಟಿಷರಿಗೆ ರಾಜನಿಷ್ಠನಾಗಿ ಉಳಿದಿದ್ದರು. ದಂಗೆಯ ಗುಟ್ಟುಗಳನ್ನು ಮೇಲಧಿಕಾರಿಗಳಿಗೆ ಮುಟ್ಟಿಸುತ್ತಿದ್ದರು. ಅಂತಹ ಬ್ರಿಟಿಷ್ ನಿಷ್ಠ ನೌಕರರಲ್ಲಿ ಸಯ್ಯದ್ ಅಹಮದ್ ಕೂಡ ಒಬ್ಬರಾಗಿದ್ದರು. ಸಿಪಾಯಿ ದಂಗೆ ನಡೆದಾಗ ಸಾವಿರಾರು ಬ್ರಿಟಿಷರನ್ನು ಸೂಕ್ತ ಸಮಯಕ್ಕೆ ಬಿಜನೋರ್ ನಗರದಿಂದ ಸ್ಥಳಾಂತರಿಸಿ ಪ್ರಾಣ ಕಾಪಾಡಿದ ಕೀರ್ತಿ ಅಪಕೀರ್ತಿ ಎರಡೂ ಅವರಿಗಿತ್ತು. ಬ್ರಿಟಿಷ್ ಚಕ್ರಾಧಿಪತ್ಯದ ಬಗೆಗಿನ ಪ್ರಾಮಾಣಿಕತೆ ಮತ್ತೆ ದೀರ್ಘ ಸೇವೆಗಳಿಗೆ 1888 ರಲ್ಲಿ “ನೈಟ್ ಹುಡ್” ಗೌರವ ಪಡೆದು “ಸರ್ ಸಯ್ಯದ್ ಅಹ್ಮದ್ ಖಾನ್” ಎನಿಸಿಕೊಂಡರು.

1857ರ ದಂಗೆ ವೈಯಕ್ತಿಕವಾಗಿ ಸಯ್ಯದ್ ಅಹಮದ್‌ರಿಗೆ ದೊಡ್ಡ ದುರಂತವಾಗಿತ್ತು. ಹಲವು ಹತ್ತಿರದ ಬಂಧುಗಳು ಮಿತ್ರರು ಹಿಂಸೆಯಲ್ಲಿ ಸತ್ತು ಹೋದರು. ದಂಗೆ ಸಂಶಯ ಹತಾಶೆ ಆಕ್ರೋಶಗಳು ಸೇರಿ ಹಲವು ಸಾವಿರ ಜನರು ಜೀವ ಕಳೆದುಕೊಂಡ ಸಂದರ್ಭ ಅದು. ಅದರಲ್ಲೂ ಸಯ್ಯದ್ ಅಹ್ಮದರು ಹುಟ್ಟಿ ಬೆಳೆದ ದೆಹಲಿ, ಅಪಾರ ಸಾಂಸ್ಕೃತಿಕ ಮತ್ತು ಮಾನವೀಯ ಹಾನಿಯನ್ನು ಕಂಡಿತ್ತು. ತಾನು ನೌಕರಿ ಮಾಡುವ ಬ್ರಿಟಿಷರ ಕಡೆಗಿದ್ದ ನಿಷ್ಠೆಯ ಹೊರತಾಗಿ ಸಯ್ಯದ್ ಅಹ್ಮದ್ “ಭಾರತೀಯ ದಂಗೆಯ ಕಾರಣಗಳು” (1858) ಪುಸ್ತಕವನ್ನು ಬರೆದರು. ಕಡು ವಿಮರ್ಶಕ ದೃಷ್ಟಿಯ ಬರವಣಿಗೆಯಲ್ಲಿ ಬ್ರಿಟಿಷರ ಹಲವು ನಡೆಗಳನ್ನು ಟೀಕಿಸಿದ್ದರು. ಭಾರತವನ್ನು ತೀವ್ರವಾಗಿ ಆಕ್ರಮಿಸಿ ಅಧಿಕಾರ ವಿಸ್ತರಣೆಯಲ್ಲಿ ಮುಳುಗಿರುವ ಆಂಗ್ಲರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತೀಯ ಸಂಸ್ಕೃತಿಯ ಬಗೆಗೆ ಬ್ರಿಟಿಷರಿಗಿದ್ದ ಅಸಡ್ಡೆ ಅಜ್ಞಾನಗಳನ್ನು ಉಲ್ಲೇಖಿಸಿದ್ದರು. ಭಾರತೀಯರು ಮತ್ತು ಬ್ರಿಟಿಷರ ಮಧ್ಯ ಸ್ನೇಹ ನಂಬುಗೆಯ ಸೇತುವೆ ಕಟ್ಟಲು, ಸರಕಾರದಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

ಅವರ ಬರಹಗಳು ಭಾರತವನ್ನು ಟಪ್ಪಾಲಿನಲ್ಲಿ ತಲುಪಿ ಓದಿಸಿಕೊಂಡ ಮೇಲೆ ಉತ್ತರ ಭಾರತೀಯ ಸಿರಿವಂತ ಮುಸ್ಲಿಂರ ಟೀಕೆಗೆ ಒಳಗಾಗಿದ್ದವು. ಟೀಕಾಕಾರರು “ಮುಸ್ಲಿಂ ಮೌಲ್ಯಗಳಿಂದ ಕುಸಿದ ವ್ಯಕ್ತಿ, ವಸಾಹತುಶಾಹಿ ಶಕ್ತಿಯ ಹೊಗಳುಭಟ” ಎಂದು ಲೇಖಕರನ್ನು ದೂರುತ್ತಿದ್ದರು. ತಮ್ಮ ಬರಹಗಳು ಭಾರತದಲ್ಲಿ ವಿವಾದ ಹುಟ್ಟಿಸುವುದನ್ನು ಇಷ್ಟಪಡದ ಸಯ್ಯದ್ ಅಹ್ಮದ್ ಕೊನೆಗೆ ಬರೆದು ಕಳುಹಿಸುವುದನ್ನು ನಿಲ್ಲಿಸಿದರು.

1866ರಲ್ಲಿ ಬ್ರಿಟಿಷ್ ಭಾರತೀಯ ಸಂಘಟನೆಯೊಂದನ್ನು ಆರಂಭಿಸಿದರು. ಭಾರತದ ಬ್ರಿಟಿಷ್ ಸರಕಾರವನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಸಂಘಟನೆಯ ಉದ್ದೇಶವಾಗಿತ್ತು. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧವಾಗಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿ ಬ್ರಿಟಿಷ್ ಅಧಿಕಾರವನ್ನು ಒಪ್ಪುತ್ತಾ, ಬ್ರಿಟಿಷರು ಸ್ವಲ್ಪ ಬದಲಾಗಬೇಕು ಜನಾನುರಾಗಿ ಆಡಳಿತ ನೀಡಬೇಕು ಎಂದು ಅಭಿಪ್ರಾಯ ಪಡುವ ಗುಂಪು ಒಂದಾದರೆ, ಭಾರತಕ್ಕೆ ಸಂಪೂರ್ಣ ಸ್ವರಾಜ್ಯವನ್ನು ಪಡೆಯಬೇಕು ಎನ್ನುವುದು ಇನ್ನೊಂದು ಸಮುದಾಯ. ಸಯ್ಯದ್ ಅಹ್ಮದ್ ಹಾಗು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಇಂತಹದ್ದಾಗಿತ್ತು.

ಸಯ್ಯದ್ ಅಹ್ಮದ್‌ರ ನಿಷ್ಠೆ ಹಾಗು ಬ್ರಿಟನ್ನು ನೋಡಿ ಬರಬೇಕೆಂಬ ತುಡಿತ, 1869ರಲ್ಲಿ ಇಂಗ್ಲೆಂಡ್ ಪ್ರಯಾಣ ಮಾಡುವುದಕ್ಕೆ ಅವಕಾಶ ಒದಗಿಸಿಕೊಟ್ಟಿತು. ಅದೇ ವರ್ಷದ ಆಗಸ್ಟ್ 6ರಂದು “ಸ್ಟಾರ್ ಆಫ್ ಇಂಡಿಯಾ” ಗೌರವವನ್ನೂ ಪಡೆದಿದ್ದರು.

ಮಕ್ಕಳು ನೌಕರ ಬಂಧುವಿನೊಡನೆ ಇಂಗ್ಲೆಂಡ್‌ಗೆ ಬಂದಿದ್ದ ಸಯ್ಯದ್ ಅಹ್ಮದ್ ವಾಸಿಸಿದ್ದು ಲಂಡನ್‌ನ 21 ನಂಬ್ರದ ಮೆಕ್ಲೆನ್ಬಿರ್ಗ್ ಚೌಕದ ಮನೆಯಲ್ಲಿ. 17 ತಿಂಗಳು ವಾಸದಲ್ಲಿ ಬಾಡಿಗೆದಾರನಾಗಿ ಬದುಕುವ ಹೊಸ ಅನುಭವ ಹೊಸ ಊರು ದೇಶದಲ್ಲಿ ಆಗಿತ್ತು. ಇಂಗ್ಲೆಂಡ್ ಮನೆ ಮತ್ತು ಮನೆಯ ಯಜಮಾನರ ಸ್ನೇಹಪೂರ್ಣ ವರ್ತನೆ ಅವರಿಗೆ ಇಷ್ಟವಾಗಿತ್ತು. ಅವರ ಸಣ್ಣ ಮುಸಾಫಿರ್ ಕುಟುಂಬ ವಾಸಿಸುತ್ತಿದ್ದ ಮನೆ 6 ಕೋಣೆಯದು. ಸೇವೆಗೆ ಇಬ್ಬರು ನೌಕರರು ಇದ್ದರು. ಎರಡು ವರ್ಷಕ್ಕಿಂತ ಕಡಿಮೆಯ ಲಂಡನ್ ಮತ್ತು ಇಂಗ್ಲೆಂಡ್ ಸುತ್ತಾಟದಲ್ಲಿ ವಿಭಿನ್ನ ಅನುಭವಗಳು ಸೇರಿದ್ದವು. ಲಂಡನ್ ಬಳಿಯ ಸರ್ರಿ ಪ್ರಾಂತ್ಯದಲ್ಲಿ ಅಲ್ಲಿ ನಡೆಯುವ ಕುದುರೆ ರೇಸ್‌ಅನ್ನು ನೋಡಿದರು. ಲಂಡನ್‌ನ ಚಾರಿತ್ರಿಕ ಸೇತುವೆಗಳಲ್ಲಿ ಒಂದಾದ “ಹಾಲ್ಬರ್ನ್ ವಯಾಡಕ್ಟ್”ನ ಆರಂಭವನ್ನು ಕಂಡರು. 1863ರಲ್ಲಿ ಶುರುವಾಗಿ 1869ರಲ್ಲಿ ಪೂರ್ತಿಯಾದ ಆ ಸೇತುವೆ ಅಂದಿನ ಕಾಲಕ್ಕೆ 2.5 ಮಿಲಿಯನ್ ಪೌಂಡ್‌ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು.

ಲಂಡನ್‌ನ ಎರಡು ಪ್ರದೇಶಗಳನ್ನು ಸೇರಿಸುವ, ವಾಹನ ದಟ್ಟಣೆಯನ್ನು ತಗ್ಗಿಸುವ ಸೇತುವೆ ಸಾರ್ವಜನಿಕ ಉಪಯೋಗಿ ಕಾಮಗಾರಿಯಾಗಿ ಹೆಸರು ಪಡೆದಿತ್ತು. ಲಂಡನ್ ವಾಸದ ಸಮಯದಲ್ಲಿ ಪ್ರವಾದಿ ಮಹಮ್ಮದರ ಬಗ್ಗೆ ದ್ವೇಷದ ವರ್ತನೆ ಗಮನಕ್ಕೆ ಬಂದಾಗ ವಿರೋಧಿಸಿ ಪತ್ರಿಕೆಯಲ್ಲಿ ಬರೆದಿದ್ದರು. ಆಂಗ್ಲ ವಿಶ್ವವಿದ್ಯಾಲಯ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದರು. ಬ್ರಿಟಿಷ್ ಸಮಾಜದಲ್ಲಿ ವಯಸ್ಕ ಶಿಕ್ಷಣದ ಬಗೆಗಿನ ಹಸಿವು ಅವರನ್ನು ಪ್ರಭಾವಿಸಿತು, ಮುಖ್ಯವಾಗಿ ಮಹಿಳೆಯರ ಶಿಕ್ಷಣದಲ್ಲಿ… ಇಂಗ್ಲೆಂಡ್ ವಾಸ್ತವ್ಯದ ಬಹುತೇಕ ಅನುಭವಗಳು ಹತ್ತೊಂಭತ್ತನೆಯ ಶತಮಾನದ ಸುಧಾರಿತ ಸಾಗಾಟ ಮತ್ತು ಅಂಚೆ ವ್ಯವಸ್ಥೆಯಲ್ಲಿ ಭಾರತವನ್ನು ತಲುಪಿದವು. ಅಲಿಘರ್ ಪತ್ರಿಕೆಯಲ್ಲಿ ಪ್ರಕಟ ಆದವು. ಪ್ರಶಂಸೆಯನ್ನು ಟೀಕೆಯನ್ನು ಪಡೆದವು. 1870ರಲ್ಲಿ ಸಯ್ಯದ್ ಅಹ್ಮದ್ ಭಾರತಕ್ಕೆ ಮರಳಿದರು.

ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಿಂದ ಪ್ರೇರಿತರಾಗಿ, 1877ರಲ್ಲಿ ಮಹಮದೀಯ ಆಂಗ್ಲೋ-ಓರಿಯೆಂಟಲ್ ಕಾಲೇಜನ್ನು ಅಲಿಘರ್ ಅಲ್ಲಿ ಸ್ಥಾಪಿಸಿದರು (ಇನ್ನೊಂದು ದಾಖಲೆ 1875ರಲ್ಲಿ ಎನ್ನುತ್ತದೆ). “ಅಲಿಘರ್ ಮುಸ್ಲಿಂ ಯುನಿವರ್ಸಿಟಿ” ಎನ್ನುವ ಹೆಸರಿನಲ್ಲಿ ಪ್ರಸಿದ್ಧವಾದ ಸಂಸ್ಥೆ, ಆಧುನಿಕ ಶಿಕ್ಷಣವನ್ನು ನೀಡುವ ಗುರಿ ಹೊಂದಿತ್ತು. ಇಂಗ್ಲಿಷ್ ಹಾಗು ಆಧುನಿಕ ಶಿಕ್ಷಣಗಳಿಂದ ಕೂಡಿದ ಆಕ್ಸ್ಫರ್ಡ್ ಹಾಗು ಕೇಂಬ್ರಿಜ್ ವಿದ್ಯಾಲಯಗಳ ಮಾದರಿಯ ಕಲಿಕೆ ಭಾರತದ ಮುಸ್ಲಿಮರಿಗೆ ದೊರೆಯಬೇಕು ಎಂದು ಆಶಿಸಿದರು. ಪಾಶ್ಚಾತ್ಯ ಕಾಲೇಜುಗಳ ವಿದ್ಯಾರ್ಥಿ ವಸತಿ ವ್ಯವಸ್ಥೆಯನ್ನು ನಿರ್ಮಿಸಿದರು. ಆಂಗ್ಲ ಸಾಹಿತ್ಯ, ಪೂರ್ವ ದೇಶಗಳ ಭಾಷೆಗಳು, ಯೂರೋಪಿನ ವಿಜ್ಞಾನ ವಿಷಯಗಳು ವಿದ್ಯಾಭ್ಯಾಸದ ಆಯ್ಕೆಗಳಲ್ಲಿ ಸೇರಿದ್ದವು. ಸಯ್ಯದ್ ಅಹ್ಮದ್‌ರಿಗೆ ಉರ್ದು ಭಾಷೆಯನ್ನು ಪ್ರಚಾರ ಮಾಡುವ ಉದ್ದೇಶ ಇತ್ತು. ಭಾರತೀಯ ಮುಸ್ಲಿಮರಿಗೆ ಉರ್ದುವೇ ಸಾಮಾನ್ಯ ಸಂವಹನ ಭಾಷೆಯಾಗಬೇಕು ಎಂದು ಬಯಸಿದ್ದರು. ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಹೇಳಿಕೊಡುವ ಯತ್ನ ಮಾಡಿದರೂ ಕೊನೆಗೆ ಇಂಗ್ಲಿಷ್ ಅನ್ನೇ ಕಲಿಕೆಯ ಭಾಷೆಯಾಗಿ ಒಪ್ಪಿಕೊಂಡರು. ಈ ಇಡೀ ಶೈಕ್ಷಣಿಕ ಪ್ರಯತ್ನ ಹಾಗು ಸಾಹಸ “ಅಲಿಘರ್ ಚಳವಳಿ” ಎಂದೂ ಹೆಸರಾಗಿದೆ.

ಸರ್ ಸಯ್ಯದ್ ಅಹ್ಮದ್‌ರ ಬ್ರಿಟಿಷ್ ಒಲವಿನ ಹೊರತಾಗಿ ಭಾರತೀಯ ಮುಸ್ಲಿಂರನ್ನು ಆಧುನೀಕರಣದ ಕಡೆಗೆ ಒಯ್ಯುವ ಅವರ ನಿರಂತರ ಯತ್ನದ ಕಾರಣಕ್ಕೆ “ಆಧುನೀಕರಣದ ಪ್ರವರ್ತಕ” ಎಂದೂ ಅವರನ್ನು ಕರೆದಿದ್ದಾರೆ. ಶ್ರದ್ಧಾವಂತ ಮುಸ್ಲಿಂ ಆಗಿದ್ದರೂ ಧಾರ್ಮಿಕ ಸಾಂಪ್ರದಾಯಿಕತೆ ಸಿದ್ಧಾಂತಗಳ ವಿಮರ್ಶಕರು ವಿರೋಧಿಯೂ ಆಗಿದ್ದರು. ಯೂರೋಪಿನ ವಿಜ್ಞಾನವನ್ನು ಆಧರಿಸಿದ ತಮ್ಮದೇ ಧರ್ಮಶಾಸ್ತ್ರವನ್ನು ರೂಪಿಸಿದ್ದರು. 1870ರಲ್ಲಿ ಆರಂಭಿಸಿದ್ದ “ಮಹಮದೀಯ ಸಮಾಜ ಸುಧಾರಕ” ಎನ್ನುವ ನಿಯತಕಾಲಿಕ ಅವರ ತಿಳಿವು ನೋಟಗಳನ್ನು ತಿಳಿಸುತ್ತದೆ.

ಲಂಡನ್‌ನನ್ನು ಸುತ್ತಿ ತಿಳಿದು ಸಂಶೋಧಿಸಿ ಪ್ರಭಾವಿತರಾಗಿ ಭಾರತಕ್ಕೆ ಮರಳಿದ, ಯಾತ್ರೆಯ ಅನುಭಗಳನ್ನು ವಿಶಿಷ್ಟವಾಗಿ ದಾಖಲಿಸಿದ ಅಪೂರ್ವ ಮುಸಾಫಿರ್‌ ಅವರನ್ನು ಲಂಡನ್ ಈಗಲೂ ನೆನಪಿಸುತ್ತದೆ. “21 ನಂಬ್ರದ ಮೆಕ್ಲೆನ್ಬಿರ್ಗ್ ಚೌಕ”ದ ಮನೆಯ ಗೋಡೆಯ ಮೇಲಿನ ನೀಲಿ ಫಲಕ “ಸರ್ ಸಯ್ಯದ್ ಅಹ್ಮದ್ ಖಾನ್ ಎನ್ನುವ ಮುಸ್ಲಿಂ ಸುಧಾರಕ ಹಾಗು ವಿದ್ವಾಂಸ ಇಲ್ಲಿದ್ದರು” ಎಂದು ಸ್ಮರಿಸುತ್ತದೆ.