ರಮೇಶಿಯ ಹೊಲಿಗೆ ನೈಪುಣ್ಯದ ಬಗೆಗೆ ಎರಡು ಮಾತಿಲ್ಲ. ಕಾಲಿಂಚೂ ಆಚೀಚೆ ಆಗದ ಅಳತೆಯ ಸ್ಪಷ್ಟತೆ,  ಚೂಡಿದಾರ ಹಾಗೂ ರವಿಕೆಗಳಿಗೆ, ತಾನೇ ಹುಡುಕಿಕೊಂಡು ಇಡುತ್ತಿದ್ದ ಹೊಸಾ ಹೊಸಾ ಕತ್ತಿನ ಡಿಸೈನುಗಳು, ತನ್ನ ಮೂಗಭಾಷೆಯಲ್ಲೇ ನಮಗೆಲ್ಲಾ ವಿವರಿಸಿ ಹೇಳಿ ಹೊಲೆಯುತ್ತಿದ್ದ ಹೊಸ ಶೈಲಿಗಳ ಬಟ್ಟೆಗಳು, ಬೇಡಬೇಡವೆಂದರೂ ಅವನೇ ಉಪಚಾರದ ಸಂಜ್ಞೆಗಳನ್ನು ಮಾಡಿ ತೊಡುವಂತೆ ಮಾಡುತ್ತಿದ್ದ ಡೀಪ್ ನೆಕ್ ಹಾಗೂ ಸಣ್ಣ ತೋಳಿನ ಬಟ್ಟೆಗಳು… ಇವೆಲ್ಲಾ ಹೆಂಗಸರನ್ನು ಉನ್ಮಾದಗೊಳಿಸುತ್ತಿದ್ದವು.
ಮಧುರಾಣಿ ಬರೆಯುವ ‘ಮಠದಕೇರಿ ಕಥಾನಕ’

ಆಜಾನುಬಾಹುವಾಗಿ ಹಣೆ ಮೇಲೆ ಜೊಂಪೆ ಜೊಂಪೆ ಗುಂಗುರು ಕೂದಲು ಇಳಿ ಬೀಳುವ ಆಕರ್ಷಕ ನಗುವಿನ ದರ್ಜಿ ರಮೇಶಿಯ ಹೊಲಿಗೆ ಅಂಗಡಿ, ಮಠದ ಕೇರಿಗೆ ಅಂಟಿಕೊಂಡಂತಿದ್ದ ಪಕ್ಕದ ಬೀದಿಗೆ ಮುಖ ಮಾಡಿತ್ತು. ಗೋಡೆಯ ಬಿರುಕಿನಂತಹ ಒಂದು ಸಣ್ಣ ಮಳಿಗೆಯಲ್ಲಿ ಅವನ ವ್ಯವಹಾರ ಯಾನೆ ಹೊಲಿಗೆ ಚಟುವಟಿಕೆ ನಡೆಯುತ್ತಿತ್ತು. ಹುಟ್ಟು ಕುಲದ ಮೂಲದಿಂದ ದರ್ಜಿಗರವನಲ್ಲದೇ ಹೋದರೂ ಅದ್ಯಾವುದೋ ತೆಲುಗರ ಮನೆತನಕ್ಕೆ ಸೇರಿದ ರಮೇಶಿಯ ಮೂಲವನ್ನು ಸ್ಫಟಿಕದಷ್ಟು ಶುದ್ಧವಾಗಿ ಬಲ್ಲವರ್ಯಾರೂ ಇರಲಿಲ್ಲ. ಕುರುಡರು ಆನೆಯನ್ನು ತಡವಿ ಅರ್ಥೈಸಿಕೊಂಡಂತೆ ರಮೇಶಿಯ ಬಗೆಗೂ ಅವರವರಿಗೆ ತೋಚಿದಂತೆ ಕೇರಿಯ ಹಿರಿಯರೆಲ್ಲಾ ಕತೆ ಕಟ್ಟಿಕೊಂಡಿದ್ದರು. ಆ ರೋಚಕ ಕತೆಗಳಲ್ಲೂ ಅವರ ಪಾಂಡಿತ್ಯವೇ ಗೆಲ್ಲಬೇಕೆಂಬಂತೆ ನೂರೆಂಟು ಉಪಕತೆಗಳನ್ನೂ ಸೇರಿಸಿ ಹೆಣೆದು ದೊಡ್ಡ ಇತಿಹಾಸವನ್ನೇ ರಮೇಶಿಯ ಬೆನ್ನಿಗೆ ಬೆಸೆದಿದ್ದರು. ಹೀಗೆಲ್ಲಾ ‘ರಮೇಶೋಪಾಖ್ಯಾನ’ವನ್ನು ಬರೆಯಲು ನಮ್ಮ ಕೇರಿಯ ಹಿರಿಯರಿಗೆ ಅನುಕೂಲವಾದ್ದು ಸ್ವತಃ ರಮೇಶಿಯಿಂದಲೇ..!

‘ಅದು ಹೇಗಪ್ಪಾ ಒಬ್ಬ ವ್ಯಕ್ತಿ ತನ್ನ ತೇಜೋವಧೆಯನ್ನು ತಾನೇ ಮಾಡಿಕೊಳ್ಳಬಲ್ಲ..!’ ಎಂದೇನಾದರೂ ನೀವು ಪ್ರಶ್ನಿಸಿದರೆ ನನ್ನಲ್ಲಿ ಉತ್ತರವಿದೆ. ಹೌದು! ಸ್ವತಃ ರಮೇಶಿಯೇ ಇದಕ್ಕೆಲ್ಲಾ ಕಾರಣ. ಆತ ಹುಟ್ಟು ಕಿವುಡ ಹಾಗೂ ಮೂಗ. ಅವನ ಅಂಗಡಿಯ ಹೆಸರೇ ‘ಮೂಗ ರಮೇಶಿ ಶಾಪು’. ಏನೇ ಹೇಳಿದರೂ ತಲೆಯಾಡಿಸಿ ಹೌದುಹೌದೆನ್ನುತ್ತಾ ಕಿವಿಯಿಂದ ಕಿವಿಗೆ ನಗುತ್ತಿದ್ದ ಅವನಿಗೆ ಗೊತ್ತಿದ್ದದ್ದೆಲ್ಲಾ ಒಂದೇ.. ‘ಹೊಲಿಗೆ’. ಯಾರೇ ಬಂದು ಮುಂದೆ ನಿಂತರೂ ಕೊಂಚ ಕಾಲ ಅವರನ್ನು ತದೇಕಚಿತ್ತದಿಂದ ಗಮನಿಸಿ ಅವರಿಗೆ ಅಗದೀ ಪರ್ಫೆಕ್ಟಾದ ಬಟ್ಟೆ ತಯಾರಿಸುವಲ್ಲಿ ಇವ ನಿಪುಣ!

ಕೇರಿಯ ಹೆಂಗಸರಿಗೆ ರಮೇಶಿಯ ಅಂಗಡಿ ಒಂದು ಬಿಡುಗಡೆಯ ತಾಣ. ಯಾಕೆಂದರೆ ಹೆಂಗಸರ ಬಗೆಗೆ ಅವನಿಗೆ ವಿಶೇಷ ಗೌರವ! ಅಂಗಡಿಗೆ ಹೆಂಗಸರು ಬಂದು ರಮೇಶಾ.. ಅಂದರೆ ಸಾಕು, ಸಾಕಿದ ನಾಯಿಮರಿಯಂತೆ ಮುಂದೆ ಬಂದು, ತಲೆಯೆತ್ತದೇ ನಿಂತು ಹೇಳಿದ್ದು ಕೇಳಿ ಹೇಳಿದಂತೆ ಬಟ್ಟೆ ತಯಾರಿಸಿ ಕೊಡುವ ಬಂಗಾರದ ಮನುಷ್ಯ. ಅವನಿಗೆ ಮಾತು ಬಾರದ್ದು ಇವರಿಗೆ ಇನ್ನೊಂದು ರೀತಿಯ ಸುಖ. ಇವರ ಮಾತು ಮುಗಿಯುವವರೆಗೂ ತುಟಿ ಪಿಟಕ್ಕೆನ್ನದೇ ಕೈಕಟ್ಟಿ ನಿಂತು ಕೇಳುವನಲ್ಲಾ..! ಅವರು ಮನೆಯಲ್ಲಿ ಸಿಗದ ಯಾವುದೋ ಸುಖವನ್ನೂ ದಬ್ಬಾಳಿಕೆಯ ಅವಕಾಶವನ್ನೂ ಇಲ್ಲಿ ಸರಾಗವಾಗಿ ಅನುಭವಿಸುತ್ತಿದ್ದರು. ಒಂದು ಗಂಟೆಯ ಹೊತ್ತು ಅವನ ಅಂಗಡಿ ಮುಂದೆ ಹೆಂಗಸೊಂದು ನಿಂತಿದೆಯೆಂದರೂ ಯಾರೂ ಅತ್ತ ಮೂಸಿಯೂ ನೋಡುತ್ತಿರಲಿಲ್ಲ. ಎಲ್ಲರಿಗೂ ರಮೇಶಿಯ ವ್ಯಕ್ತಿತ್ವದ ಮೇಲೆ ಅಷ್ಟು ನಂಬಿಕೆ! ಹಾಗಾಗಿ ಹೆಂಗಸರಿಗೆ ಅದೊಂದು ಕಾಮನ್ ಗಾಸಿಪ್ ಕಾರ್ನರ್!

ಗಂಡಸರ ಬಟ್ಟೆಗಳನ್ನು ಅವನು ಬಹುವಾಗಿ ಹೊಲೆಯುತ್ತಲೇ ಇರಲಿಲ್ಲ. ಆಗೊಂದು ಈಗೊಂದು ಅಂಗಿ ಬಿಟ್ಟರೆ ಅವನ ಅಂಗಡಿಯ ಮುಂದೆ ಗಂಡಸರು ಎಂದೂ ದೊಡ್ಡ ಗುಂಪಾಗಿ ಕಾಣಿಸಿಕೊಂಡದ್ದಿಲ್ಲ. ಕೇವಲ ಮಧ್ಯಾಹ್ನದ ಹೊತ್ತು ಬೀಡಿ ಸೇದಲು ಬರುತ್ತಿದ್ದ ಎದುರು ಅಂಗಡಿಯ ಕಾರ್ಪೆಂಟರ್ ಹನುಮಜ್ಜ ಹಾಗೂ ಇದ್ದಿಲು ಮಂಡಿ ತಿಪ್ಪೇಗೌಡರನ್ನು ಬಿಟ್ಟು ಬೇರೆ ಗಂಡಸರು ಸುಳಿದಿದ್ದೂ ನಾವು ಕಾಣೆವು. ಈ ಇಬ್ಬರೂ ಇವನಲ್ಲಿ ಅದೇನು ಕಂಡರೋ, ಅದೇನು ಕೇಳಿಸಿಕೊಂಡರೋ, ಅಂತೂ ದಿನಕ್ಕೊಮ್ಮೆ ಇವನ ಅಂಗಡಿ ಮುಂಗಟ್ಟಿಗೆ ಬಂದೇ ತೀರುವರು. ಇಷ್ಟಾಗಿ ಅವರೊಟ್ಟಿಗೆ ರಮೇಶಿ ಕೂತು ಬೀಡಿ ಸೇದಿದ ಇತಿಹಾಸವೇ ಇಲ್ಲ. ಆದರೂ ಕೇರಿಯ ಗಂಡಸರಿಗೆ ರಮೇಶಿಯೆಂಬ ಪಾತ್ರವು ತೀರಾ ಒಳ್ಳೆಯದಾಗುವುದು ಬೇಡವಾದಾಗ ಅವನಿಗೆ ಬೀಡಿಯ ಭಯಂಕರ ಚಟವುಂಟೆಂಬ ಸುಳ್ಳುಸುದ್ದಿಯೊಂದನ್ನು ಗಾಳಿಗೆ ತೂರಿಬಿಡುವರು.

ರಮೇಶಿಯು ಎಲ್ಲದರಲ್ಲೂ ಸೈ, ಆದರೆ ಉಳಿದ ದರ್ಜಿಗಳಂತೆ ಇವನದ್ದೂ ಒಂದು ಸಮಸ್ಯೆ. ಹೇಳಿದ ಸಮಯಕ್ಕೆ ಎಂದೂ ಬಟ್ಟೆ ಕೊಟ್ಟವನಲ್ಲ. ಆದರೆ ಬೈದರೂ ಅವನಿಗೆ ಕೇಳುವುದೇ ಇಲ್ಲವಲ್ಲಾ.. ಹಾಗಾಗಿ ಯಾರೂ ಅಂತಹ ಹುಚ್ಚು ಕೆಲಸ ಮಾಡುತ್ತಿರಲಿಲ್ಲ. ಅದರಲ್ಲೂ ಕೆಲವು ಉಡಾಳ ಹೆಂಗಸರು ಮನೆಯವರ ಮೇಲಿನ ಸಿಟ್ಟನ್ನು ಇವನ ಮೇಲೆ ತೆಗೆಯುತ್ತಿದ್ದುದುಂಟು, ಆದರೂ ಯಾವ ಪ್ರಯೋಜನಕ್ಕೆ? ಅವನು ಬೈದರೂ ಹೊಗಳಿದರೂ ಯಾವಾಗಲೂ ಪರಮಾನಂದದ ನಗುವೊಂದನ್ನು ನಗುತ್ತಲೇ ಇರುತ್ತಿದ್ದನು. ಹಾಗಾಗಿ ಬೈದವರೇ ಬೊಗಳಿ ಬೊಗಳಿ ಸುಸ್ತಾಗಿ ಕಡೆಗೆ ಅವರೂ ನಕ್ಕು ತಲೆ ಚಚ್ಚಿಕೊಂಡು ಮನೆ ಸೇರುವರು. ಮಿಕ್ಕಂತೆ ರಮೇಶಿಯ ಹೊಲಿಗೆ ನೈಪುಣ್ಯದ ಬಗೆಗೆ ಎರಡು ಮಾತಿಲ್ಲ. ಕಾಲಿಂಚೂ ಆಚೀಚೆ ಆಗದ ಅಳತೆಯ ಸ್ಪಷ್ಟತೆ, ತಾನೇ ಹುಡುಕಿಕೊಂಡು ಚೂಡಿದಾರ ಹಾಗೂ ರವಿಕೆಗಳಿಗೆ ಇಡುತ್ತಿದ್ದ ಹೊಸಾ ಹೊಸಾ ಕತ್ತಿನ ಡಿಸೈನುಗಳು, ತನ್ನ ಮೂಗಭಾಷೆಯಲ್ಲೇ ನಮಗೆಲ್ಲಾ ವಿವರಿಸಿ ಹೇಳಿ ಹೊಲೆಯುತ್ತಿದ್ದ ಹೊಸ ಶೈಲಿಗಳ ಬಟ್ಟೆಗಳು, ಬೇಡಬೇಡವೆಂದರೂ ಅವನೇ ಉಪಚಾರದ ಸಂಜ್ಞೆಗಳನ್ನು ಮಾಡಿ ತೊಡುವಂತೆ ಮಾಡುತ್ತಿದ್ದ ಡೀಪ್ ನೆಕ್ ಹಾಗೂ ಸಣ್ಣ ತೋಳಿನ ಬಟ್ಟೆಗಳು… ಇವೆಲ್ಲಾ ಹೆಂಗಸರನ್ನು ಉನ್ಮಾದಗೊಳಿಸುತ್ತಿದ್ದವು. ಮತ್ತೆ ಮತ್ತೆ ರಮೇಶಿಗೇ ಬಟ್ಟೆ ಹೊಲೆಯಲು ಕೊಟ್ಟು ‘ಈ ಬಾರಿ ಹೊಸದೇನು ಇರಬಹುದು?’ ಎಂದು ಮಕ್ಕಳು ಅಪ್ಪ ಪೇಟೆಯಿಂದ ತರುವ ಸಿಹಿಗಾಗಿ ಕಾಯುವ ಹಾಗೆ ಮುಗ್ಧವಾಗಿ ಕಾಯುವಂತೆ ಮಾಡಿಬಿಡುತ್ತಿದ್ದವು. ಇದೆಲ್ಲಾ ಹೇಳುವಾಗ ಅಂಥಾ ಪರಮಸಭ್ಯ ರಮೇಶಿಯೊಳಗೊಬ್ಬ ಎಂಥಾ ಕಿಲಾಡಿ ವ್ಯವಹಾರಸ್ಥನಿದ್ದನೆಂದು ನಿಮಗೆ ಬೇರೆ ಹೇಳಬೇಕಿಲ್ಲ ಅಲ್ಲವೇ..

ನಾನು ಆಗ ಪುಟ್ಟ ಹುಡುಗಿ. ಆದರೂ ಎಲ್ಲದನ್ನೂ ಈಗಲೇ ಕಲಿತುಬಿಡಬೇಕೆಂಬ ಹುಮ್ಮಸಿನ ವಯಸು. ಈಜು, ವಾಲಿಬಾಲು, ಟೆನ್ನೀಸು, ಎಂಬ್ರಾಯಿಡರಿ, ಹೊಲಿಗೆ, ಬ್ಯೂಟಿ ಪಾರ್ಲರು, ಮೊದಲು ಟೈಪಿಂಗ್ ಕ್ಲಾಸ್, ಇಕೇಬಾನ ಹಾಗೂ ಓರಿಗಾಮಿ, ಮುಂದಕ್ಕೆ ಕೊಬ್ಬರಿ ಕೆತ್ತನೆ, ಸಂಗೀತ ಹಾಗೂ ಭರತನಾಟ್ಯ, ಆಮೇಲೆ ಕಂಪ್ಯೂಟರು ಕಲಿಕೆ, ಹೀಗೆ ನಾನು ಇಣುಕಿ ನೋಡದ ಕ್ಷೇತ್ರಗಳಿಲ್ಲ. ಈ ಆಸೆಗಳ ದಾರದ ತುದಿಯಲ್ಲಿ ಉಳಿದದ್ದು ಒಂದೇ, ಕುದುರೆ ಸವಾರಿ. ಹಾಗೆ ಹೊಲಿಗೆ ಕಲಿಯಲು ಗುರುವನ್ನು ಹುಡುಕುತ್ತೇನೆಂದಾಗ ಮನೆಯಲ್ಲಿ ನನಗೆ ತಾಕೀತಾದ ಒಂದೇ ಜಾಗ ಈ ರಮೇಶಿಯ ಶಾಪು. ಹೊಲಿಗೆಯ ಹುಚ್ಚು ಹಿಡಿಸಿಕೊಂಡು ಅವನ ಹೊಸಾ ಹೊಸಾ ಕುತ್ತಿಗೆ ಡಿಸೈನುಗಳಿಗೆ ಮಾರು ಹೋಗಿ ದಿನವೂ ಇಂತಿಷ್ಟು ಹೊತ್ತು ಟೈಲರಿಂಗ್ ಕಲಿಯಲು ಹೋಗುತ್ತಿದ್ದೆ. ಆಗಲೇ ನನಗೆ ಹುಟ್ಟುಮೂಗನ ಬಣ್ಣಬಣ್ಣದ ವಿಶಿಷ್ಟ ಪ್ರಪಂಚವೊಂದರ ಪರಿಚಯವಾಗಿದ್ದು. ಅಷ್ಟು ಹೆಣ್ಣುಮಕ್ಕಳ ದೊಡ್ಡ ಗಡಂಗೇ ದಿನವೂ ಅಂಗಡಿಯ ಮುಂದೆ ಎಡತಾಕುವಾಗಲೂ ರಮೇಶಿಯು ಯಾರೊಬ್ಬರೊಡನೆಯೂ ಎಂದೂ ತಪ್ಪಾಗಿ ನಡೆದುಕೊಳ್ಳದೇ ಅಕ್ಕಾ.. ಅಮ್ಮಾ.. ಅಂತಲೇ ಆಪ್ಯಾಯಮಾನವಾಗಿ ಮಾತಾಡಿಸಿ ನಗುನಗುತ್ತಾ ಬೀಳ್ಕೊಡುವನು.

ಅವನ ಅಂಗಡಿಯ ಹೆಸರೇ ‘ಮೂಗ ರಮೇಶಿ ಶಾಪು’. ಏನೇ ಹೇಳಿದರೂ ತಲೆಯಾಡಿಸಿ ಹೌದುಹೌದೆನ್ನುತ್ತಾ ಕಿವಿಯಿಂದ ಕಿವಿಗೆ ನಗುತ್ತಿದ್ದ ಅವನಿಗೆ ಗೊತ್ತಿದ್ದದ್ದೆಲ್ಲಾ ಒಂದೇ.. ‘ಹೊಲಿಗೆ’.

ಇಂತಿಪ್ಪ ರಮೇಶಿಗೆ ಹತ್ತತ್ತಿರ ಮೂವತ್ತೈದು ಇದ್ದಿರಬಹುದು, ಒಂಟಿಯಾಗಿದ್ದ. ಆಗೀಗ ಅವನ ಮದುವೆ ಹಾಗೂ ಮುಂದಿನ ಸಾವು-ಬಾಳಿನ ಬಗೆಗೆ ಆಗೊಮ್ಮೆ ಈಗೊಮ್ಮೆ ಸ್ನೇಹಿತರೊಡನೆ ಮಾತು ಬಂದು ಹೋದರೂ ಹೆಣ್ಣು ಜಾಲಾಡಿ ತಂದು ಮದುವೆ ಮಾಡಿಸಿಯೇ ತೀರುವೆನೆಂಬ ಯಾವ ಆಸಾಮಿಯೂ ಇದ್ದಂತಿರಲಿಲ್ಲ. ಹೀಗೆ ನೆನೆಗುದಿಗೆ ಬಿದ್ದಿದ್ದ ರಮೇಶಿಯ ಉಜ್ವಲ ಭವಿಷ್ಯವು ಇದ್ದಕ್ಕಿದ್ದಂತೆ ಹೊಸಾ ತಿರುವು ಪಡೆದುಕೊಂಡಿತು. ಒಂದಿರುಳು ಕಳೆದು ಬೆಳಗು ಬಂಗಾರ ಬಣ್ಣ ಮೂಡುವುದರೊಳಗೆ ರಮೇಶಿಗೆ ಮದುವೆಯಾಗಿತ್ತು. ಹೊಳೆವ ತೊಳೆದ ಕೆಂಡದಂತಹ, ಮುಖದ ತುಂಬಾ ಮೊಡವೆಯ, ಸುಶೀಲಾ ಎಂಬ ನಾಮಧೇಯದ ಒಂದು ಪೀಚು ಹುಡುಗಿಯು ಅದಾಗಲೇ ಅವನ ಅಂಗಡಿ ಕಮ್ ಮನೆಯ ಮುಂದೆ ಕೂತು ನೆನ್ನೆ ರಾತ್ರಿಯ ಮುಸುರೆ ಪಾತ್ರೆಯನ್ನು ನಲ್ಲಿ ನೀರಿನಲ್ಲಿ ತೊಳೆಯುತ್ತಿತ್ತು. ಬಂದು ಹೋಗುವವರನ್ನೆಲ್ಲಾ ನಗುಮೊಗದಲ್ಲಿ ಮಾತಾಡಿಸುತ್ತಾ ಲವಲವಿಕೆಯಲ್ಲಿ ಓಡಾಡುತ್ತಾ ಬಂದವರಿಗೆಲ್ಲಾ ‘ಟೀ ಕುಡೀರಿ..’ ಅನ್ನುವ ಸುಶೀಲಾ ಬಹುಬೇಗ ಎಲ್ಲರಿಗೂ ಪ್ರೀತಿಪಾತ್ರಳಾದಳು. ಅದಕ್ಕೆ ಇನ್ನೊಂದು ಕಾರಣವೂ ಜೊತೆಯಾಯಿತು. ದಾರಿಹೋಕರೆಲ್ಲಾ ಕೇಳುವ ‘ಅದು ಹೇಗೆ ನೀನು ರಮೇಶಿಯ ಒಪ್ಪಿ ಮದುವೆಯಾದೆ?’ ಎಂಬ ಪ್ರಶ್ನೆಗೆ ಅವಳು ನೀಡುತ್ತಿದ್ದ ಉತ್ತರ!

‘ನನಗೆ ಮೊದಲಿಂದಲೂ ಅಂಗವಿಕಲರನ್ನು ಮದುವೆಯಾಗಿ ಅವರಿಗೆ ಬಾಳು ಕೊಡಬೇಕೆಂಬ ಆಸೆ ಇತ್ತು. ರಮೇಶನನ್ನು ನೋಡಿದಾಗ ಇವನು ನನಗಾಗಿಯೇ ಹುಟ್ಟಿದವನು ಅಂತನ್ನಿಸಿತು. ಹಾಗಾಗಿ ಮರು ಯೋಚನೆಯೇ ಮಾಡದೇ ಇವನನ್ನೇ ಮದುವೆಯಾದೆ.’

ಇವಳ ಈ ಉತ್ತರ ಕ್ಷಣಮಾತ್ರದಲ್ಲಿ ಎಲ್ಲರನ್ನೂ ಕಣ್ಣಂಚು ಒದ್ದೆಯಾಗುವಂತೆ ಮಾಡಿಬಿಡುತ್ತಿತ್ತು. ಸಾಲದಕ್ಕೆ ಇನ್ನೊಂದು ಸಾಲು ಬೇರೆ…

‘ಅವನು ನನಗೆ ಗಂಡ ಅಷ್ಟೇ ಅಲ್ಲ. ನನ್ನ ಮಗು ಕೂಡಾ..!!’

ನನಗಾದರೋ, ಯಾವಾಗಲೂ ಒಂದು ಸಂಶಯ. ಇವರ ಮದುವೆಯ ಬಗ್ಗೆ ಎಲ್ಲರಿಗೂ ಹೀಗೆ ಹೇಳಿಕೊಂಡು ತಿರುಗುವ ಸುಶೀಲಾ, ರಮೇಶಿಯ ಕಿವಿ ಬಾಯಿ ನೆಟ್ಟಗಿದ್ದರೆ ಅವನೆದುರೇ ಹೀಗೆ ಹೇಳುತ್ತಿದ್ದಳಾ.. ಅಂತ. ಈ ಸಂಶಯಕ್ಕೆ ಕಾರಣವೂ ಇತ್ತು. ಸುಶೀಲಾ ಕೇಳಿದವರಿಗೆ ಮಾತ್ರ ಹೀಗೆ ಹೇಳುತ್ತಿರಲಿಲ್ಲ. ಬರುವ ಎಲ್ಲಾ ಅತಿಥಿಗಳ ಮುಂದೆ ವಿನಾಕಾರಣ ವಿಷಯ ತೆಗೆದಾದರೂ ಇದನ್ನೇ ಹೇಳುವಳು. ಹೀಗೆ ಅವಳು ತುರಿಕೆ ಹತ್ತಿದವಳಂತೆ ಬಂದವರ ಮುಂದೆಲ್ಲಾ ರಮೇಶಿಗೆ ಏನೋ ಆಗಿದೆ ಎಂಬಂತೆ ಮಾತಾಡುತ್ತಿದ್ದುದು ಕೆಲವರಿಗೆ ಸರಿ ಬರಲಿಲ್ಲ. ತನ್ನ ಕಿವುಡು ಮೂಗುತನದ ನಡುವೆಯೂ ಸಾಮಾನ್ಯರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲದಂತೆ ಕಾಲ ಹಾಕಿದವನು ರಮೇಶಿ. ಆದರೆ ಈಗ ಅವನಿಗೆ ಏನೋ ಆಗಿದೆಯೆಂಬಂತೆ ಎಲ್ಲರೂ ಅವನೆಡೆಗೆ ಕಾರುಣ್ಯದಿಂದ ನೋಡುವಂತೆ ಮಾಡಿದ್ದು ಸುಶೀಲಾ. ಇಷ್ಟಾಗಿಯೂ ಸುಶೀಲ ಎಂದೂ ಪರಪುರುಷರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸಿದವಳಲ್ಲ. ಅನಗತ್ಯ ಹೊರಗೆ ತಿರುಗುವವಳಲ್ಲ. ಕಿವಿ ಬಾಯಿಗಳಿಲ್ಲದ ಗಂಡನಾದರೂ ತಾನು ಯಾರಿಗೇನೂ ಕಡಿಮೆಯಿಲ್ಲ ಎಂಬುವಂತೆ ಯಾವಾಗಲೂ ಗರುವಿನಲ್ಲಿ ಎದೆಯುಬ್ಬಿಸಿಯೇ ನಡೆದವಳು!

ಕಾಲ ಯಾರನ್ನೂ ಕಾಯುವುದಿಲ್ಲವಲ್ಲಾ… ಹಾಗೇ ದಿನಗಳು ಕಳೆದು, ಏನನ್ನೂ ಕೇಳಿಸಿಕೊಳ್ಳದೇ ಏನೂ ಹೇಳಲೂ ತಲೆ ಕೆಡಿಸಿಕೊಳ್ಳದೇ ರಮೇಶಿಯು ಮಾಮೂಲಿನಂತೆ ತಣ್ಣಗೆ ಒಂದು ಮಗುವಿನ ತಂದೆಯೂ ಆಗಿಬಿಟ್ಟಿದ್ದ. ಈಗಲಂತೂ ಸುಶೀಲಳ ಕೊರಳಿಗೆ ಎರಡೆಳೆ ಮಾಂಗಲ್ಯದ ಸರ ಬೇರೆ ಬಂದಿತು. ಮೊದಲಿನ ಬಡತನದ ಕುರುಹುಗಳು ಒಂದೊಂದೇ ಅಳಿಯುತ್ತಾ ಸುಶೀಲಳೂ ನಾಲ್ಕು ಹೆಣ್ಣುಗಳ ಸರಿಸಮಾನವಾಗಿ ಬೆಳೆದು ನಿಂತಳು. ರಾತ್ರಿಗೆ ನೈಟಿಯೂ.. ಬೆಳಗಿಗೆ ಬಣ್ಣದ ಬಟ್ಟೆಗಳೂ.. ಕಪ್ಪು ಮೊಗವು ಬೂದುಬಣ್ಣಕ್ಕೆ ತಿರುಗುವಂತೆ ಕ್ರೀಮುಗಳೂ… ಸುಶೀಲಾ ಸಂಪೂರ್ಣ ಸಿಟಿ ಹುಡುಗಿಯಾಗಿ ಬದಲಾಗಿದ್ದಳು. ಆದರೇನು! ಬದಲಾಗುವ ಕಾಲವು ಹಾಗೇ ಉಳಿಯುವುದಿಲ್ಲವಲ್ಲಾ… ಅದೊಂದು ಅಂತಹುದೇ ಬಂಗಾರ ಬೆಳಕಿನ ಮುಂಜಾನೆಯು ಎಲ್ಲರ ಪಾಲಿಗೆ ಎಂದಿನಂತೇ ಇದ್ದರೂ ಸುಶೀಲಾ ಹಾಗೂ ರಮೇಶಿಗೆ ಆಗಿರಲಿಲ್ಲ. ಮಾಡಿನ ತೊಲೆಯಿಂದ ನೇತಾಡುತ್ತಿದ್ದ ಸುಶೀಲೆಯ ಹೆಣವೂ, ರೋದಿಸಲೂ ಆಗದ ದೈನೇಸಿಯಾಗಿ ಕೂತು ಎವೆಯಿಕ್ಕದೇ ಅವಳ ಹೆಣ ನೋಡುತ್ತಿದ್ದ ರಮೇಶಿಯೂ, ಅವನ ತೊಡೆಯ ಮೇಲೆ ಹಸಿವಿನಿಂದ ಕಿರುಚುತ್ತಾ ಮಲಗಿದ್ದ ಮಗುವೂ… ಈಗಲೂ ಒಮ್ಮೊಮ್ಮೆ ನನ್ನ ಕನಸಿನಲ್ಲಿ ಬರುವರು. ಸಣ್ಣದೊಂದು ಸೂಚನೆಯೂ ಇಲ್ಲದೇ ಹೀಗೆ ಒಂದು ಮುಂಜಾನೆಗೆ ಏಕಾಏಕಿ ಎಲ್ಲವನ್ನೂ ಕಳೆದು ಫಕೀರನಾಗಿಹೋದ ರಮೇಶಿಯ ಮುಗ್ಧ ನಗುವು ಈಗಲೂ ಕಾಡುವುದುಂಟು. ಹಾಗೆಯೇ ಆ ಯೋಚನೆಯ ತುದಿಗೊಂದು ಪ್ರಶ್ನೆಯೂ…

ಯಾವುದೇ ಐಬಿಲ್ಲದ ಗಂಡಂದಿರನ್ನೇ ಐಬಾಗಿಸಿ ಬಜಾರಿಯರಂತೆ ದನಿಯೇರಿಸಿ ಸಂಸಾರ ಕಟ್ಟಿಕೊಳ್ಳುವ ಹೆಣ್ಣುಗಳು ನಮ್ಮ ನಡುವೆ ಇದ್ದಾರೆ. ಗಂಡನ ಜೋರು ಬಾಯಿಗೆ ಸೋತು ಮಾತೇ ಇಲ್ಲದೇ ಬರೀ ಸೇವೆಯಲ್ಲೇ ಬದುಕು ಸವೆಸುವ ಹೆಂಗಳೆಯರಿಗೂ ಕಡಿಮೆಯೇನಿಲ್ಲ. ಇಂತಹ ನೂರೆಂಟು ಉದಾಹರಣೆಗಳ ನಡುವೆಯೇ ಅಕಾರಣದ ಸಾವುಗಳ ಹೊರೆ ಹೊತ್ತ ಇಂತಹ ಮೂಕ ಕುಟುಂಬಗಳು ಮಾಡಿದ್ದ ತಪ್ಪಾದರೂ ಏನಿರಬಹುದು? ಎಂದೂ ದನಿಯೆತ್ತಿ ಬೈಯದ ಗಂಡನಿಗೆ ಅನುರೂಪವಾಗಿ ಬಾಳುತ್ತಿದ್ದ ಸುಶೀಲೆಗೆ ಯಾವ ದನಿ ತಾಗಿ ಪ್ರಾಣ ಕೊಟ್ಟಳು? ಇವಳು ಏನೆಂದರೂ ನಸುನಕ್ಕು ಮುನಿಸೇ ಮೋಡಗಟ್ಟಲಾಗದ ಬಾಳಿನಲ್ಲಿ ಅದೇನು ಮಾತು ಕಿವಿಗೆ ಬಿದ್ದು ಇವಳಿಗೆ ಬದುಕು ಭಾರವಾಯಿತು? ರಮೇಶಿಯ ಯಾವ ತಪ್ಪಿಗೆ ಬದುಕು ಅವನಿಗೆ ಈ ಶಿಕ್ಷೆ ನೀಡಿತು? ಮಠದ ಕೇರಿಯಾದರೋ, ಕೆಲವೇ ದಿನಗಳಲ್ಲಿ ರಮೇಶಿಗೆ ಹುಚ್ಚನ ಪಟ್ಟ ಕಟ್ಟಿ ಮನೆ ಮನೆಯ ಜಗುಲಿಯ ಮೇಲೆ ಕೂರಿಸಿ ಊಟ ಹಾಕುವ ವ್ಯವಸ್ಥೆ ಮಾಡಿತು. ಮಗು ದೂರದ ನೆಂಟರ ಊರು ಸೇರಿತು. ಹಾಗೂ ಒಂದು ನಸುನಗೆಯ ಕತೆಯು ಹೀಗೆ ದುರಂತದಲ್ಲಿ ಕೊನೆಯಾಯಿತು.