ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಏನದು ಬೆಳುಕು ಎಂಬ ಕುತೂಹಲದ ಬಗ್ಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಬರಹ ಇಂದಿನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ  

ಜುಲೈ ತಿಂಗಳ ಮಧ್ಯ ಭಾಗ, ಧೋ ಎಂದು ಒಂದೇ ಸಮ ಸುರಿಯುವ ಮಳೆ. ಬರ್ರೋ ಎಂದು ಬೀಸುವ ಗಾಳಿ. ಯಾಕಾದರೂ ಈ ಗಾಳಿ ಮಳೆ ಹೀಗೆ ಎಂದೆನಿಸುತ್ತೆ. ಕಣ್ಣಿಗೆ ನಿದ್ರೆ ಹತ್ತೊಲ್ಲ. ನಾಳೆ ಬೆಳಿಗ್ಗೆ ಏನೇನು ಕಷ್ಟಕಾರ್ಪಣ್ಯಗಳು ಕಾದಿವೆಯೋ ಎಂಬ ಕಾತುರತೆ. ಮನೆ ಹಿಂದೆ ಇರುವ ಕೆರೆ ತುಂಬಿ ಕಟ್ಟೆ ಏನಾದರು ಒಡೆದುಹೋದರೆ ದೇವರೇ ಗತಿ. ತೋಟಕ್ಕೆ ನೀರು ನುಗ್ಗಿ ಮುಂದಿನ ಫಸಲೂ ಕೈಕೊಡುತ್ತಲ್ಲ.. ಹೀಗೆ ಏನೇನೋ ಭಯ ಮಿಶ್ರಿತ ಗಾಬರಿ. ನಮ್ಮ ರೈಟ್ರು ಶಿವನ್ನಾದರೂ ಕರೆಯೋಣೆಂದರೆ ಗಾಳಿಮಳೆಗೆ ಎಷ್ಟು ಕೂಗು ಹಾಕಿದರೂ ಕೇಳಿಸೋಲ್ಲ. ಕೈ ಮೈಯೆಲ್ಲ ಮೆತ್ತಿಕೊಂಡ ಮಸಿಯಂತೆ ಕಗ್ಗತ್ತಲು ಬೇರೆ.

ಈಗ ಕೈ ಕಟ್ಟಿ ಕೂರುವ ಸಮಯವಲ್ಲೆಂದು ಮನಗಂಡು ಗಟ್ಟಿ ಗುಂಡಿಗೆಯ ತೇಜಸ್ವಿ ಎದ್ದು ಟಾರ್ಚು ತಗೊಂಡು ಹೊರಟೇ ಬಿಟ್ಟರು ಮಳೆಯಲ್ಲಿ. ಕೆರೆ ಸುತ್ತಾ ಬರ್ತಾರಂತೆ, ಕೆರೆ ತುಂಬಿದೆ. ಇನ್ನು ಹೀಗೇ ಮಳೆ ಸುರಿದು ಕೆರೆ ದಂಡೆ ಮೇಲೆ ನೀರು ಹೋದರೆ, ಕೆರೆ ತುಂಬುವುದಕ್ಕೂ ಮುಂಚೆ ನೀರು ಹರಿದು ಹೋಗಲಿಕ್ಕೆ ತೂಬಿನ ಕಡೆ ಬಂದು ಕಸಕಡ್ಡಿ ಹುಲ್ಲು ಬೆಳೆದಿರುವುದನ್ನು ಬಿಡಿಸಿ ಸರಿಪಡಿಸುವ ಹೊತ್ತಿಗೆ ಶಿವನೂ ಹಾರೆ ತಂದು ಕೈಹಾಕಿದ. ನೀರು ಸರಾಗ ಹರಿಯಲಿಕ್ಕಾಯಿತು.

(ತೇಜಸ್ವಿ ಕ್ಯಾಮರಾದಲ್ಲಿ ಕಾರ್ಗಾಲದ ಮೂಡಿಗೆರೆ)

ಇನ್ನೊಂದು ಬೆಳಗಿನ ಜಾವ ನಿದ್ದೆ ಒತ್ತರಿಸಿ ಬರುತ್ತಿದೆ. ಬೆಚ್ಚಿ ಬಿದ್ದು ಎದ್ದೆ. ಏನೋ ಸದ್ದು, ಏನೋ ಬೀಳುತ್ತಲೇ ಇರುವ ಸದ್ದು. ಏನೋ ಅಪಾಯ ಇದೆ ಎಂಬ ಹೆದರಿಕೆ. ಎದ್ದು ಹೋಗಿ ನೊಡೋಣೆಂದು ಬಾಗಿಲು ತೆಗೆದು ಮುಖ ಹೊರಗೆ ಹಾಕುತ್ತಿದ್ದಂತೆ ರೊಯ್ಯೋ ಅಂತ ಬೀಸಿದ ಗಾಳಿ ಮುಖವನ್ನೇ ದಬ್ಬಿತು. ರಪ್ಪಂತ ಬಡಿಯಿತು ಬಾಗಿಲು. ಎತ್ತರದಿಂದ ನೀರು ಬೀಳುವ ಸದ್ದು ಮನೆ ಪಕ್ಕದಲ್ಲೇ. ಮಳೆ ಚೂರು ಕಡಿಮೆಯಾಗಲೆಂದು ಕಾದೆ. ಮೆಲ್ಲನೆ ಬಾಗಿಲು ತೆಗೆದೆ. ವೆರಾಂಡ ಪೂರ್ತಿ ಗಾಳಿಗೆ ಬಂದು ಬಿದ್ದ ಎಲೆ ಕಸ ಮರದ ಗೆಲ್ಲುಗಳಿಂದ ತುಂಬಿತ್ತು. ಬೀಳುವ ನೀರಿನ ಸದ್ದು ತೀರ ಹತ್ತಿರದಲ್ಲೇ ಸ್ಪಷ್ಟವಾಗಿ.

ಇದರ ಕಾರಣ ಕಣ್ಣ ಮುಂದೆ ಬಂತು. ಪ್ರಕೃತಿಯದೇ ಒಂದು ನಿಯಮವಿರುತ್ತೆ. ಮನುಷ್ಯ ಅದಕ್ಕೆ ಹೊಂದಿಕೊಂಡು ಸರಿ ತೂಗಿಸಿಕೊಂಡು ಕೆಲಸ ಮಾಡಿದರೆ ಎಲ್ಲವೂ ಸುಸೂತ್ರ. ಇಲ್ಲದಿದ್ದಲ್ಲಿ ಅನಾಹುತ ಇದ್ದಿದ್ದೇ. ನಮ್ಮ ಬೇಲಿಗಂಟಿಕೊಂಡೇ ತೋಟಗಾರಿಕೆ ಕಾಲೇಜು ಇದೆ. ನಮ್ಮ ಬೇಲಿಯ ಪಕ್ಕ ಚರಂಡಿ ಹೊಡೆದಿರುತ್ತೇವೆ, ಮಳೆ ನೀರು ಹರಿದು ಹೋಗಲು. ಈ ಕಾಲೇಜಿನವರು ಆ ಗುಡ್ಡದ ಭಾಗದಲ್ಲಿ ಬುಲ್ಡೋಜರ್ ಹೊಡೆಸಿದ್ದರು. ನೆಲ ಸಮತಟ್ಟು ಮಾಡಿ ಗಿಡ ನೆಡಲು. ನಮ್ಮ ಚರಂಡಿ ಮುಚ್ಚಿ ಹೋಗಿ ಮಳೆನೀರು ಎರ್ರಾಬಿರ್ರಿ ನುಗ್ಗಿ  ಆ ಇಳಿಜಾರಿನಲ್ಲಿ ಒಂದು ಜಲಪಾತವೇ ಸೃಷ್ಟಿಯಾಯಿತು. ಗುಡ್ಡದ ಇಳಿಜಾರಿನಲ್ಲಿ ಕಾಫಿ ತೋಟ, ಗುಡ್ಡದ ಕಣಿವೆ ಸಾಲುಗಳಲ್ಲಿ ಏಲಕ್ಕಿ ತೋಟ ಮಾಡಿರುತ್ತೇವೆ. ಜಲಪಾತದಿಂದಾಗಿ ಮಣ್ಣು ಕುಸಿದು, ಕಾಫಿ ಗಿಡಗಳು ಮಣ್ಣಾದವು. ಏಲಕ್ಕಿ ಗಿಡ ನೆಟ್ಟಿದ್ದ ಕುರುಹೂ ಇಲ್ಲವಾಗಿತ್ತು. ನಮ್ಮ ಕೆಲಸಗಾರರನ್ನೇ ಕರೆದುಕೊಂಡು ಹೋಗಿ ಆ ಚರಂಡಿಯನ್ನು ಸರಿಪಡಿಸಿಕೊಳ್ಳಬೇಕಾಯಿತು.

ಇನ್ನೊಂದು ಮಳೆಗಾಲ. ಮಳೆ ಕಡಿಮೆಯಾಗುತ್ತಲೇ ಇಲ್ಲ.  ಎಷ್ಟೆಲ್ಲಾ ಅನಾಹುತವಾಗುತ್ತಿದೆ, ಏನು ಕತೆ? ತೋಟದ ಒಳಗೆ ಅಲ್ಲಲ್ಲಿ ದಾರಿ ಮಾಡಿರುತ್ತಾರೆ. ಕೆಲಸ ಮಾಡಲು ಅನುಕೂಲವಾಗುವ ದೃಷ್ಟಿಯಿಂದಲೂ ಮತ್ತು ಮಳೆ ನೀರು ಹರಿದು ಹೋಗಲು ಚರಂಡಿ ಮಾಡಬೇಕಾಗುತ್ತೆ. ಜೋರಾದ ಆಷಾಡ ಗಾಳಿಗೆ ಸಿಲ್ವರ್ ಮರಗಳು ಅಲ್ಲಾಡಿ ಮಣ್ಣು ಜಾಲಾಡಿ ಜರಡಿಯಂತಾಗಿರುತ್ತೇನೋ, ಬುಡದಲ್ಲಿ ಅಲ್ಲಲ್ಲಿ. ಜೋರು ಮಳೆಗೆ ನೀರು ನುಗ್ಗಿದ ಹೊಡೆತಕ್ಕೆ ಅಲ್ಲೊಂದು ಸಣ್ಣಕ್ಕೆ ಆದರೆ ಆಳವಾಗಿ ಕೊರಕಲು ಬಿದ್ದಿದೆ. ಅಲ್ಲಿ ಭೂಮಿಯ ತಳದ ಒಡಲಲ್ಲಿ ನೀರು ಹರಿಯುತ್ತಿದೆ. ಇದನ್ನು ಸರಿಪಡಿಸಲು ದೊಡ್ಡ ಮೊತ್ತದ ಖರ್ಚು, ಸರಿಪಡಿಸದಿದ್ದರೆ ಇನ್ನೂ ಅನಾಹುತ. ಮಳೆ ಬಿಡುವು ಕೊಡುವುದನ್ನೇ ಕಾದು ಆ ಕೊರಕಲು ತುಂಬಿಸಿದ್ದಾಯ್ತು. ಮೂರು ಟ್ರಾಕ್ಟರ್ ಲೋಡು ಗ್ರಾವೆಲ್ಲು ಮಣ್ಣೂ ಸಾಲದಾಯಿತು.

ಮಲೆನಾಡಿನ ಮುಂಗಾರೇ ಹೀಗೆ. ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಮಳೆ ಇಷ್ಟಾದರೂ ತೋಟದ ಕೆಲಸ ನಡೆದೇ ನಡೆಯುತ್ತೆ. ಇಂತಹ ಮಳೆಯಲ್ಲೂ ಕೆಲಸಾನ? ಹೇಗಾದರೂ ಕೆಲಸ ಮಾಡುವರೆಂದು ಮೂಗು ಮುರಿಯುವಿರಾ? ಹ್ಹು. ಮಾಡದೆಯಿದ್ದರೆ ತೋಟ ಹಾಳು ಬೀಳುವ ಲೆಕ್ಕಾಚಾರ. ಮಳೆಗಾಲದಲ್ಲಿ ತೋಟದ ಕಾರ್ಮಿಕರ ಉಡುಪು ವಿಶಿಷ್ಟ. ಕಂಬಳಿಯನ್ನು ತಲೆಯ ಮೇಲಿಂದ ಇಳಿಬಿಟ್ಟು ಅದರ ಮತ್ತೊಂದು ತುದಿಯಿಂದ ಮೈ ಮುಚ್ಚುವಂತೆ ಕೊಪ್ಪೆಯ ಹಾಗೆ ಹೊದ್ದಿರುತ್ತಿದ್ದರು. ಹೆಂಗಸರು ಸೀರೆಯನ್ನು ಮಂಡಿ ಮೇಲಕ್ಕೆತ್ತಿ ಕಟ್ಟಿರುತ್ತಿದ್ದರು. ಮಳೆಗೆ ಒದ್ದೆಯಾಗದಂತೆ. ಹಾಗೆಯೇ ಕಳೆದ ವರ್ಷದ ಕಂಬಳಿ ಸೊಂಟಕ್ಕೆ ಮಿಡಿಯಂತೆ ಸುತ್ತಿರುತ್ತಿದ್ದರು. ಗಂಡಸರ ಉಡುಪು ಚಡ್ಡಿ ಅಥವ ಪಂಚೆ. ಅದೇ ರೀತಿ ಕಂಬಳಿ ಕೊಪ್ಪೆ. ಈ ಕಂಬಳಿಯನ್ನು ತೋಟದ ಸಾಹುಕಾರ್ರೇ ಮಳೆ ಶುರುವಾಗುತ್ತಿದ್ದಂತೆಯೇ ಕೊಡಬೇಕಾಗಿತ್ತು. ಇದಕ್ಕಾಗೇ ಬಂಡ್ಲುಗಟ್ಟಲೆ ಒರಟು ಕಂಬಳಿ ಮೂಡಿಗೆರೆ ಸೊಸೈಟಿಗೆ ಬಂದು ಬೀಳುತ್ತಿತ್ತು. ಈಗ ಪ್ಲಾಸ್ಟಿಕ್ಕು ಆವರಿಸಿದೆ.

ಗುಡ್ಡದ ಇಳಿಜಾರಿನಲ್ಲಿ ಕಾಫಿ ತೋಟ, ಗುಡ್ಡದ ಕಣಿವೆ ಸಾಲುಗಳಲ್ಲಿ ಏಲಕ್ಕಿ ತೋಟ ಮಾಡಿರುತ್ತೇವೆ. ಜಲಪಾತದಿಂದಾಗಿ ಮಣ್ಣು ಕುಸಿದು, ಕಾಫಿ ಗಿಡಗಳು ಮಣ್ಣಾದವು. ಏಲಕ್ಕಿ ಗಿಡ ನೆಟ್ಟಿದ್ದ ಕುರುಹೂ ಇಲ್ಲವಾಗಿತ್ತು. ನಮ್ಮ ಕೆಲಸಗಾರರನ್ನೇ ಕರೆದುಕೊಂಡು ಹೋಗಿ ಆ ಚರಂಡಿಯನ್ನು ಸರಿಪಡಿಸಿಕೊಳ್ಳಬೇಕಾಯಿತು.

ಇಂತಹ ಕಂಬಳಿ ನೇಯುವ ಉದ್ದಿಮೆಯೇ ಈಗ ಇಲ್ಲ. ನೇಯುತ್ತಿದ್ದವರು ಈಗ ಸಿಕ್ಕಿದ ಕೆಲಸಕ್ಕೆ ಹೋಗುವಂತಾಗಿದೆ. ತೋಟದ ಮಾಲೀಕನನ್ನು ಸಾಹುಕಾರ್ರೆ ಎಂದೇ ಆಳುಗಳು ಕರೆಯುತ್ತಿದ್ದರು. ಈ ಮಾಲೀಕ ಎಷ್ಟೇ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದ್ದರೂ ಸಂಬಳ ಕೊಡಲು ಕಷ್ಟದಲ್ಲಿದ್ದರೂ ಸಾಹುಕಾರನೇ ಆಗಿರುತ್ತಿದ್ದ ಇವರ ಬಾಯಲ್ಲಿ. ಹಳೆಯ ತಲೆಮಾರಿಗಾಯಿತು ಈ ಪದ ಬಳಕೆ. ಈಗ ಎಲ್ಲರೂ ಸಾರ್ ಎಂದೇ ಕರೆಯುತ್ತಾರೆ. ಅಕ್ಷರಾಭ್ಯಾಸದ ತಿಳುವಳಿಕೆಯ ಪರಿಣಾಮ. ಕಂಬಳಿಗೆ ಬದಲಿಗೆ ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಕೊಡುತ್ತಾರೆ. ಅದನ್ನೇ ಕೊಪ್ಪೆಯ ಹಾಗೇ ಹಾಕಿಕೊಂಡು ತೋಟದಲ್ಲಿ ಕೆಲಸ ಮಾಡುತ್ತಾರೆ. ಒಂದು ಕತ್ತಿ, ಉದ್ದ ತಗಡು ಪ್ರತಿ ಆಳಿಗೂ ಕೊಡುತ್ತಾರೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ತೋಟದಲ್ಲಿ ಬೆಳೆದ ಹಳು ತೆಗೆಯುವ ಕೆಲಸವಿರುತ್ತೆ. ಗಾಳಿ ಜೋರಿದ್ದಾಗ ಮರದ ಕೊಂಬೆ, ಗೆಲ್ಲುಗಳೂ ತುಂಡಾಗಿ ಬೀಳುವುದುಂಟು. ಆಗ ಅಪಾಯವೂ ಉಂಟು. ಅಂತಹ ದಿನಗಳಲ್ಲಿ ಒಂದೆರಡು ದಿನ ಮನೆಯಲ್ಲೇ ಕೂರುತ್ತಾರೆ. ಉಳಿದಂತೆ ಕೆಲಸಕ್ಕೆ ಬರಬೇಡಿರೆಂದರೂ ಬರುತ್ತಾರೆ. ಕೂತರೆ ಅವರ ಅನ್ನಕ್ಕೆ ಅವರೇ ಕಲ್ಲು ಹಾಕಿಕೊಂಡಂತೆ.

ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಗಾಳಿಯ ಅಬ್ಬರವಿದ್ದಾಗ ಇನ್ನೇನು ಜೊಂಪು ಹತ್ತಿದೆ. ಇನ್ನೂ ಜೋರಾಯಿತು ಮಳೆ ಗಾಳಿ, ನಮ್ಮ ಎರಡು ನಾಯಿಗಳು ಯಾರನ್ನೋ (ಗಾಳಿಯನ್ನೇ) ಅಟ್ಟಿಸಿಕೊಂಡು ಹೋಗುವಂತೆ ಬೊಗಳಿ ಓಡಿದ ಸದ್ದು. ಬರೀ ಮಳೆ ಗಾಳಿ. ಬೆಳಿಗ್ಗೆ ನೋಡಿದರೆ ಬಾಗಿಲಲ್ಲಿ ಇಟ್ಟಿದ್ದ ಎರಡು ಛತ್ರಿ ಇಲ್ಲ. ಒಂದೆರಡು ಸ್ಪ್ರಿಂಕ್ಲರ್ ಪೈಪೂ ಇಲ್ಲ. ಮಾರನೆ ದಿನ ಗೊತ್ತಾಯ್ತು ಆ ಕಡೆ ಪಕ್ಕದಲ್ಲೇ ತೋಟದಲ್ಲೇ ಕಳ್ಳರು ಜಾಂಡಾ ಹೂಡಿದ್ದಾರೆ. ನಾಲ್ಕು ಕಡೆ ಗೋಲು ಮಾಡಿಕೊಂಡು, ಬಾಳೆ ಮರ ತುಂಡಾಗಿ ಏಲಕ್ಕಿ ಗಿಡಗಳಿಗೆ ಕತ್ತಿ ಪ್ರಯೋಗ ಮಾಡಿದ ಒಂದು ಅಡಗು ತಾಣವಿದೆ. ಗಾಳಿ ಮಳೆಯಿಂದ ರಕ್ಷಣೆ ರಾತ್ರಿಗೆ.

ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಅಯ್ಯೋ ಮಿಣುಕು ಹುಳವೇ!!

ಜಿಗಣೆ, ಅಣಬೆ, ಕಳಿಲೆ ಮತ್ತು ಅರಮರಳು ಉಪ್ಪಿನಕಾಯಿ

ಮೂಡಿಗೆರೆಯಲ್ಲಿ ಮಳೆಗಾಲವೆಂದರೆ ಕೇವಲ ಸುರಿಯುವ ಮಳೆಯಲ್ಲ. ಅದು ಒಂಟಿಕಾಲಿನ ಜಿಗಣೆಗಳ ಕಾಲ. ಮಟ್ಟಣಬೆ, ಮರದಣಬೆಗಳ ಕಾಲ. ಎಳೆಬಿದಿರು ಪಲ್ಯೆ, ಅರಮರಳು ಉಪ್ಪಿನಕಾಯಿಯ ಕಾಲ. ರಾಜೇಶ್ವರಿ ತೇಜಸ್ವಿ ಮಳೆಗಾಲದ ವೈಭವವನ್ನು ಇಲ್ಲಿ ಮುಂದುವರೆಸಿದ್ದಾರೆ. ತೇಜಸ್ವಿಯವರು ತೆಗೆದ ಅಪರೂಪದ ಛಾಯಾಚಿತ್ರಗಳೂ ಜೊತೆಗಿವೆ.

ನಮ್ಮಲ್ಲಿನ ಮಳೆಗಾಲದ ದೊಡ್ಡ ಇರುಸುಮುರುಸು ಜಿಗಣೆ ಕಾಟ. ನೀವು ಎಲ್ಲಾದರೂ ಓದಿರಬಹುದು ನೆಪೋಲಿಯನ್ ತನ್ನ ಬೆನ್ನಿಗೆ ಜಿಗಣೆ ಬಿಟ್ಟಕೊಳ್ಳುತ್ತಿದ್ದ ರಕ್ತ ಕಡಿಮೆ ಮಾಡಿಕೊಳ್ಳಲು. ಅಥವಾ ಇಲ್ಲೆಲ್ಲೋ ಅಸ್ಸಾಂನಲ್ಲಿ ಒಂದು ನಿರ್ದಿಷ್ಟ ಖಾಯಿಲಿಗೆ ಜಿಗಣೆ ಬಳಸುತ್ತಾರೆಂದು. ಇದು ಇಷ್ಟಿಷ್ಟೇ ಸೊಗಸು ನಿಮ್ಮ ಕಿವಿಗೆ ಬಿದ್ದಷ್ಟು. ಮೂಡಿಗೆರೆಯ ಜಿಗಣೆ ಕಾಟವೆ ಬೇರೆ.

ಇಲ್ಲಿ ಥಂಡಿ ಹೆಚ್ಚಾಗಿರುವೆಡೆ ಜಿಗಣೆ ಇರುತ್ತೆ ಮಳೆಗಾಲದಲ್ಲಿ. ಹಳ್ಳದ ಬದಿ ನೆರಳಿನಲ್ಲಿ ವರ್ಷಪೂರ್ತಿ ಇರಬಹುದು. ಮಳೆ ಹಿಡಿತಿದ್ದಂತೆ ಭೂಮಿಯಲ್ಲಿ ಎಲ್ಲಿ ಅಡಗಿ ಕುಳಿತಿರುತ್ತವೋ ಹೊರಗೆ ಬರುತ್ತವೆ. ನಮ್ಮ ಕಣ್ಣಿಗೆ ಕಾಣಸಿಗಬೇಕಾದರೆ ಅದನ್ನು ಹುಡುಕಿ ನೋಡಬೇಕು. ಅವು ಮಾತ್ರ ರಕ್ತದ ವಾಸನೆ ಹಿಡಿದೇ ಬಂದು ಕಚ್ಚುತ್ತವೆ. ಕಚ್ಚಿದಾಗ ಏನೊಂದು ಚೂರು ಗೊತ್ತೇ ಆಗುವುದಿಲ್ಲ. ರಕ್ತ ಹೀರಿ ಗೋಲಿಯಂತಾದ ಮೇಲೆ ಅದೇ ಉದುರುತ್ತೆ. ಕಚ್ಚಿದ ಜಾಗದಿಂದ ರಕ್ತ ಬರಲಿಕ್ಕಾಗುತ್ತೆ. ಮೂರುದಿನ ಅಲ್ಲಿ ತುರಿಕೆ .ಇದು ಎಲ್ಲೆಲ್ಲೋ ಮೈಮೇಲೆ ಹರಿದು ಕಚ್ಚುತ್ತವೆ. ಕಚ್ಚಿ ಹಿಡಿದಾಗ ಸುಲಭಕ್ಕೆ ಕೀಳಲು ಬರುವುದಿಲ್ಲ. ಮಾರನೆ ದಿನ ತೋಟಕ್ಕೆ ಹೋದರೆ ಹಿಂದೆ ಕಚ್ಚಿದ್ದ ಜಾಗದಲ್ಲೇ ಎರಡು ಬೇಕಾದರೂ ಕಚ್ಚಿ ರಕ್ತ ಹೀರುತ್ತೆ. ಒಂದಿಂಚು ಉದ್ದ, ತೆಳು ಕಪ್ಪು, ಬಾಯಿ ಬಾಲ ಒಟ್ಟಿಗೆ ಮಾಡಿಕೊಂಡು ಹೆಟ್ಟೆ ಮೇಲೆತ್ತಿ ಚಲಿಸುತ್ತವೆ. ವಾಸನೆ ಹಿಡಿದಾಗ ಒಂಟಿ ಕಾಲು. ತೋಟದ ಕೆಲಸಕ್ಕೆ ಹೊರಡುವಾಗ ಆಳುಗಳು ಕಾಲಿಗೆ ಸುಣ್ಣ ಹಚ್ಚಿಕೊಳ್ತಾರೆ.

(ಫೋಟೋ: ತೇಜಸ್ವಿ)

ನಮ್ಮಲ್ಲಿನ ರಸ್ತೆ ಬದಿ ಮರ ಗಮನಿಸಿ, ಪೋಸ್ಟ್ ಆಫೀಸ್ ದಾರೀಲಿ ಹೋಗಿ, ಕಾಡಿನಲ್ಲಿ ತಿರುಗಾಡಿ ಎಲ್ಲ ಕಡೆ ಅಪರೂಪದ ಅನೇಕ ಬಗೆಯ ಆರ್ಕಿಡ್‌ಗಳು ಕಾಣಸಿಗುತ್ತವೆ. ನಮ್ಮ ಮನೆ ಮುಂದಿನ ಮತ್ತಿಮರ, ಗೋವಿಲ್ದು ಮರದ ಬುಡದಲ್ಲಿ ನಿಂತು ನೋಡಿದರೆ ಸಾಕು ಹತ್ತಾರು ಬಗೆಯ ಆರ್ಕಿಡ್‌ಗಳು ಕಾಣಬಹುದು. ಸರ್ವೇ ಸಾಮಾನ್ಯವಾದ್ದು ಸೀತಾಳೆ ಆರ್ಕಿಡ್.(ಆರ್ಕಿಡ್ ಅನ್ನುವುದಕ್ಕೇ ಸೀತಾಳೆ ಎಂದೂ ಹೇಳುವರು) ಇವು ಸಣ್ಣಸಣ್ಣ ಹೂವಿನ ದೊಡ್ಡ ಗೊಂಚಲು. ಸುವಾಸನೆ ಇರುತ್ತೆ. ಹೂ ಹತ್ತತ್ರ ಇರುವ ಗೊಂಚಲು ಒಂದು ಬಗೆ, ಬಿಡಿ ಬಿಡಿ ಹೂ ಇರುವ ಗೊಂಚಲು ಇನ್ನೊಂದು ಬಗೆಯದು. ಬಿಳಿವಯೊಲೆಟ್ ಮತ್ತು ಪಿಂಕ್ ಮಿಶ್ರಿತ ಬಣ್ಣ ಇರುತ್ತೆ. ನೋಡಲು ಬಲು ಚೆಂದ. ಒಂದು ಕಾಲದಲ್ಲಿ ಮದುವೆ ಹೆಣ್ಣಿಗೆ ಅಲಂಕರಿಸಲು ಈ ಹೂವು ಇರಲೇ ಬೇಕಿತ್ತಂತೆ. ಇನ್ನೊಂದು ಕತೆಯೂ ಇದೆ. ಹೆಣ್ಣು ಮಗಳು ತೌರೂರಿಂದ ಅತ್ತೆಮನೆಗೆ ಹೋಗುವಾಗ ಗಾಡಿಯಲ್ಲಿ ಹೋಗುತ್ತ ಕಟ್ಟಿದ ಹೂ ಬಿಡಿ ಬಿಡಿ ಗೊಂಚಲಂತೆ. ಅಲ್ಲಿಂದ ತೌರುಮನೆಗೆ ಬರುವಾಗ ಕಟ್ಟಿದ್ದು ವತ್ತಾಗಿರುವ ಗೊಂಚಲಂತೆ. ಎಷ್ಟು ದೂರ ಬಂದರೂ ದಾರಿ ಸಾಗದಂತಾಗುತ್ತಲ್ಲ ಅದಕ್ಕಿರಬಹುದೇನೋ ಈ ಕಲ್ಪನೆ!

ನರ್‌ವಿಲಯ, ಫಾಕ್ಸ್‌ಟೇಲ್ (ಸೀತಾಳೆ), ಸುಸಾನ ಆರ್ಕಿಡ್, ಡೌವ್ ಆರ್ಕಿಡ್, ಬೊಂಬಿನ ಆರ್ಕಿಡ್ ಇನ್ನೂ ಹತ್ತು ಹಲವಾರು. ಡೌವ್ ಆರ್ಕಿಡ್ ಹೂವು ಒಂದು ಬಿಳಿ ಪಾರಿವಾಳ ರೆಕ್ಕೆ ಬಿಚ್ಚಿ ಕೂತಂತೇ ಇರುತ್ತೆ. ಒಮ್ಮೆ ಒಬ್ಬರು ಪೋಲೆಂಡ್ ಮಹಿಳೆ ಕಲಾ ವಿಮರ್ಶಕಿ ಬೆಂಗಳೂರಿನಲ್ಲಿ ನೆಲೆಸಿರುವವರು ನಮ್ಮಲ್ಲಿಗೆ ಆರ್ಕಿಡ್ ನೋಡಲು ಬರಲೇ ಎಂದು ಫೋನಾಯಿಸಿದರು. ಮಾರನೆ ದಿನವೇ ಅವರ ಪರಿಚಿತ ಕನ್ನಡಿಗರೊಬ್ಬರನ್ನು(ಇವರು ತಮ್ಮ ಮನೆಯಲ್ಲಿ ವೈಲ್ಡ್ ಆರ್ಕಿಡ್ ಬೆಳೆಸಿರುವವರು) ಕರೆದುಕೊಂಡು ಬಂದೇ ಬಿಟ್ಟರು. ಸಣ್ಣಕ್ಕೆ ಮಳೆ ಬರುತ್ತಲೇ ಇದೆ. ಮನೆ ಸುತ್ತಮುತ್ತ ನೋಡಿ ಸಂತೋಷಗೊಂಡರು. ಆರ್ಕಿಡ್ ನೋಡಲು ತೋಟಕ್ಕೆ ತೆರಳಿದರು. ಜಿಗಣೆ ಬಗ್ಗೆ ಎಚ್ಚರಿಕೆ ಹೇಳಿ ಕಳಿಸಿದೆ. ತೋಟ ಎಲ್ಲ ತಿರುಗಿ ಸುಮಾರು ಬಗೆಯವು ನೋಡಿದೆನೆಂದು ಸಂತೋಷದಿಂದ ಮನೆಗೆ ಹಿಂದಿರುಗಿದರು. ಆ ಕಾಲದಲ್ಲಿ ಹೂವಿರಲಿಲ್ಲ. ಸಣ್ಣಕ್ಕೆ ಮಳೆ ಬರುತ್ತಲೇ ಇತ್ತು. ಅವರು ಛತ್ರಿಯನ್ನೂ ಒಯ್ದಿರಲಿಲ್ಲ. ಅವರ ಕುತ್ತಿಗೆ ಮೇಲೊಂದು ಜಿಗಣೆ ಕಚ್ಚಿ ಹಿಡಿದಿದ್ದನ್ನು ನಾನೇ ಕಿತ್ತು ತೆಗೆದೆ. ಅದನ್ನು ನೋಡಿ ನನಗೆ ನಗು ಬಂತು. ಅವರ ಬಿಳಿ ಚರ್ಮದ ಬಣ್ಣಕ್ಕೂ ಜಿಗಣೆ ಕಚ್ಚಿ ಮೈಯೆಲ್ಲ ರಕ್ತವರ್ಣ ಆಗಿತ್ತು. ಇದು ಯಾವ ಮಹಾಲೆಕ್ಕವೆಂದುಕೊಂಡು ಏನೇನೂ ಬೇಜಾರುಗೊಳ್ಳದೆ ಇಟ್ ಇಸ್ ಓಕೆ.. ಅನ್ನುತ್ತಿದ್ದರು. ಜೊತೆಯವರಿಗೆ ಮಾತ್ರ ಏನೋ ಒಂದು ತರದ ಅನ್‌ಈಸಿನೆಸ್‌ನಿಂದ ಬರುವ ಸಣ್ಣ ಇರಿಟೇಶನ್. ಒಳ್ಳೆ ಊಟ ಹೊಡೆದು ವಂದನೆ ಹೇಳಿ ವಾಪಾಸಾದರು.

ಮೂಡಿಗೆರೆಯ ಎರಡನೆ ಅತಿಥಿ ಅಣಬೆ. ಇದು ಭುವಿ ಒಳಗೆ ಅಡಗಿಕೊಂಡಿರುವ ವಿಸ್ಮಯ. ಯಾವುದೋ ಮೋಡದಲ್ಲಿ ಎಲ್ಲೋ ಗುಡುಗಿದ ಎರಡು ದಿನದಲ್ಲಿ ನಮ್ಮ ಗುಡ್ಡದ ಮೇಲಿನ ಹುತ್ತದ ಮೇಲೇ ಹೆಗ್ಗಾಲ್ ಅಣಬೆ ಮೂಡುತೆಂದ್ರೆ ಏನು. ಇದು ಏಕೆ ಅಂದೀರಿ. ಇಲ್ಲಿನ ಸ್ಥಳೀಯ ಹಿಂದಿನವರು ಈ ಗುಡುಗು, ಅಣಬೆ ಏಳುವ ಜಾಗ ಡೈರೀಲಿ ಗುರ್ತು ಮಾಡಿಕೊಂಡಿರ್ತಾರಂತೆ. ಗುಡುಗಿದಾಗ ಹೋಗಿ ಅಣಬೆ ಎತ್ತಿಕೊಂಡು ಬರ್ತಾರಂತೆ. ಅಲ್ಲಲ್ಲಿ ತೋಟದಲ್ಲಿ ದರಗಿನ ಮಧ್ಯೆ ಗುಪ್ಪೆಗುಪ್ಪೆಯಾಗಿ ಬೆಳ್ಳಂ ಬೆಳ್ಳಗೆ ಮೊಗ್ಗು ಅರಳುವ ದರಗಣಬೆಯಂತೂ ಕಣ್ಣಿಗೆ ಹಬ್ಬ. ಇದನ್ನು ಎತ್ತಿ ಕುಕ್ಕೆಗೆ ತುಂಬಿಕೊಳ್ಳುವುದು ಇನ್ನೂ ಚೆಂದ. ಅಡುಗೆ ಮಾಡಿ ಉಂಡರೆ ಅದರ ಆಪ್ಯಾಯ ರುಚಿ ಮತ್ತೊಂದಿಲ್ಲ. ಸ್ವಚ್ಛ ಮಾಡುವುದು ಬೇಸರದ ಕೆಲಸವಾದರೂ ರುಚಿ ನೆನೆಸಿಕೊಂಡು ಬೇಸರನ ಅತ್ತಲಾಗಿ ಹಾಕ್ತೀವಿ, ಮನೆ ಮಂದಿಗೆಲ್ಲ ಗಮ್ಮತ್ತು ರುಚಿ. ಹುಲ್ಲಳಬಿ, ಮಟ್ಟಣಬೆ, ಮರದಣಬೆ ಇನ್ನೂ ಬಗೆ ಬಗೆಯವು.

ಇದೊಂದು ವಿಚಿತ್ರ ನೋಡಿ. ಮಳೆಗಾಲದಲ್ಲಿ ಅಣಬೆ ಎದ್ದಾಗ ಕುಕ್ಕೆ ತಗೊಂಡು, ಮಕ್ಕಳನ್ನು ಕಟ್ಟಿಕೊಂಡು, ತೋಟಕ್ಕೆ ಹೋಗಿ ಆಹ ಅಲ್ಲೊಂದು ಗುಂಪು! ಆಹ್ ಇಲ್ಲೊಂದೂ ಗುಪ್ಪೆ!ಯೆಂದು ಕುತೂಹಲ ಕೆರಳಿಸಿ, ಉತ್ಸಾಹ ತಣಿಸಿ ನಲಿಸುವ ಆಸಕ್ತಿಯುತ ತಿರುಗಾಟದಿಂದ ಇಂದು ವಿಮುಖರಾಗಿದ್ದೇವೆ. ವಿಧ್ಯಾಭ್ಯಾಸಕ್ಕೆಂದು ಎಲ್ಲೊ ಹೋಗಿರ್ತಾರೇನೋ ಮಕ್ಕಳು. ಆದರೆ ವಿದೇಶಿ ಮ್ಯಾಗ್‌ಜಿನ್‌ನಲ್ಲಿ ಮಕ್ಕಳು ಮರಿ ಕಟ್ಟಿಕೊಂಡು ಖುಷಿಯಿಂದ ಅಣಬೆ ಎತ್ತಲಿಕ್ಕೆ ಹೋಗುವ ಚಿತ್ರ ಮೊನ್ನೆಯಷ್ಟೇ ನೋಡಿದೆ. ಇಷ್ಟೇ ಅಲ್ಲ. ಆಂಗ್ಲ ಸಾಹಿತ್ಯದಲ್ಲೂ ಬರುತ್ತೆ. ಅಣಬೆ ಎತ್ತಲಿಕ್ಕೆ ಹೋದಾಗ-ಏನೇನೋ ಘಟನೆ ನಡೆಯುತ್ತೆ. ಇದು ನಮ್ಮಲ್ಲಿ ಇಲ್ಲ. ಬಹುಶಃ ಬೇರೆಯದೇ ಕಾರಣವಿರಬಹುದು. ಈಶ್ವರನ ಪೂಜೆಗೇ ಒಂದು ಹೂವಂತೆ, ದೇವರಿಗೆ ಮೂಲಂಗಿ ನೇವೇದ್ಯಕ್ಕಿಡುವಂತಿಲ್ಲ ಗೌರಿ ಅಮೇಧ್ಯವಂತೆ. ಅಣಬೆ ಅನೇಕರಿಗೆ ನಿಷಿದ್ಧ ಆಹಾರವಂತೆ. ಇದನ್ನು ಇಲ್ಲಿಗೆ ಬಿಡೋಣ. ತೋಟಗಾರಿಕೆ ಇಲಖೆಯವರು ಅಣಬೆ ಬೆಳೆಯುವುದನ್ನು ವೃದ್ಧಿಪಡಿಸುತ್ತಿದ್ದಾರೆ. ಬೆಳೆದರೆ ಹಣದ ಥೈಲಿ ನಿಮ್ಮ ಕೈಲಿ ಅಂತಾರೆ. ರೈತನಿಗೊಂದಿಷ್ಟು ಆಕರ್ಷಣೆ.

ಮಲೆನಾಡಿನ ಸ್ಪೆಷಲ್ ಕಳಿಲೆ(ಟೆಂಡರ್ ಬ್ಯಾಂಬೂ ಶೂಟ್) ಪಲ್ಯ, ಸಾರು. ಇದೂ ಮಳೆಗಾಲದಲ್ಲಿ ಮಾತ್ರ ಸಿಗುವಂತಹದ್ದು. ಮಳೆ ಹೆಚ್ಚುತ್ತಿದ್ದಂತೆ ಎಳೆ ಬಿದಿರು ತಲೆ ಎತ್ತುತ್ತವೆ. ಇದರ ಅಡುಗೆ ವಿಶಿಷ್ಟವಾದ ರುಚಿ. ಮಾತ್ರ ಇದನ್ನು ಹಸನು ಮಾಡುವುದು ಸ್ವಲ್ಪ ಹೆಚ್ಚಿನ ಕೆಲಸ ಹಿಡಿಸುತ್ತೆ. ಹಿಂದೆ, ಅಂದರೆ ಕುವೆಂಪು ಸಣ್ಣ ಬಾಲಕನಾಗಿದ್ದಾಗ ಅಷ್ಟು ಹಿಂದೆ ಈ ಕಳಿಲೆಯನ್ನು ಉಪ್ಪಿನಲ್ಲಿ ನೆನೆಸಿ ಜಾಡಿಯಲ್ಲಿ ಹಾಕಿ ಇಡುತ್ತಿದ್ದರಂತೆ. ಮಕ್ಕಳು ಯಾವಾಗಲಾದರೂ ಒಂದೊಂದು ಚೂರು ತಗೊಂಡು ಚೀಪುತ್ತಿದ್ದರಂತೆ. ಕಳಿಲೆ, ನಿಂಬೆಹಣ್ಣು ಮತ್ತು ಇಲ್ಲಿನ ಕಾಡಿನಲ್ಲಿ ಸಿಗುವ ಅರಮರಳುಕಾಯಿ ಗೊಂಚಲು ಸೇರಿಸಿ ಉಪ್ಪಿನಕಾಯಿ ಮಾಡಿದರೆ ಯಾವ ದೇಶದ ಮೂಲೆಯಲ್ಲಿದ್ದರೂ ನೆನೆಸಿಕೊಂಡರೇ ತಿನ್ನಬೇಕೆಂಬ ಆಸೆ ತರಿಸುತ್ತೆ. ಈಗೆಲ್ಲ ಭೂಮಿ ಕಂಡಲ್ಲಿ ಕಾಫಿಗಿಡ ನೆಡುವ ಭಾವನೆಯಿಂದಾಗಿ ಅರಮರಳು ಕಾಯಿ ಗಿಡಗಳಿಗೆ ಕತ್ತಿ ಪ್ರಯೋಗವೇ ಗತಿ.