1.

ಅವಳು ನಾನಿರುವಲ್ಲಿ ಬಂದು ಕವಿತೆ ವಿಜ್ಞಾಪಿಸುತ್ತಾಳೆ
ಪಕ್ಕನೆ ನನಗೆ ಬಾಸೋ ನೆನಪಾಗುತ್ತಾನೆ
ಅವನಿಗೂ ಹೀಗೆ ಆಗಿತ್ತು
ತಕ್ಷಣವೇ ಪಾತರಗಿತ್ತಿಯ ಮೇಲೆ ಕವಿತೆ ಬರೆದು ನಿನ್ನಂತೆಯೇ ಇದು ಎಂದು ಬಿಟ್ಟನಂತೆ

ನಾನೂ ಗುಲ್ಮೊಹರದ ಮೇಲೆ ಒಲುಮೆ ಎಂದು ಬರೆದೆ
ಕೆನ್ನೆ ಕೆಂಪೇರಿ
ಕಣ್ಣು ಭೂವಿಯ ಒಡಲ ಸೇರಿದವು

ಕಣ್ಣು ಮಣ್ಣ ಸಂಗದೊಳು ಸೇರಿ
ಸ್ಪರ್ಶ ಸುಖಕ್ಕೆ ಅಹಲ್ಯೆ ಕಾಯ್ದಂತೆ ಕಾದು
ಪಾದಧೂಳು ತಾಗಿದಾಕ್ಷಣ ಬೀಜ ಮೊಳಕೆಯೊಡದದ್ದಕ್ಕೆ
ಹಸಿರು ಭುವಿಯೇ ಸಾಕ್ಷಿ…

ಪ್ರೀತಿ, ಒಲವು, ಒಲುಮೆ
ಎಲ್ಲವೂ ನೀರಿನಲ್ಲಿಯ ಅತೃಪ್ತಿಯೇ ಸರಿ
ಎಂದೂ ನಿಗುವುದಿಲ್ಲ
ನಿನ್ನಂತೆ….

2.
ಒಂದು ತಿರುವಿನಲ್ಲಿ ಕೈ ಕೈ ಮಿಲಾಯಿಸಿದ ದಿನವೇ ಮಸೀದಿಯಿಂದ ಹೊರಟ ಆಜಾನ ತುಂಬೆಲ್ಲಾ ನಮ್ಮದೇ ಪ್ರೀತಿಯ ಸೊಲ್ಲು…

ಪ್ರೀತಿಗೆ ಹೆದರಿ ಎಲ್ಲರೂ ಬಾಗಿಲು ಜಡಿದರೆ ಸಾಕಿಯ ನೆಪದಲ್ಲಿ ಮಧುಶಾಲೆಗೆ ಹೊರಟವನಂತೆ ಅಲ್ಲಾಹು ನಮ್ಮಡೆಗೆ ಬರುತ್ತಿದ್ದ…

ಒಲವ ಒಪ್ಪಿಕೊಳ್ಳದ ಜಗವು ದೂರಾದಾಗಲೇ ಹಜ್ ಯಾತ್ರೆಯ ಪಥಿಕರಾಗಿ ಪ್ರೀತಿಗೆ ಪ್ರೀತಿ ಬೆರೆಸಿ ಝಕಾತ ನೀಡಿದವರು ನಾವು…

ಪ್ರೀತಿಗೆ ವಿಷ ಬೆರೆಸಿ ತಿನ್ನಲು ನೀಡಿದವರೆದರು
ರಮಜಾನಿನ ಪವಿತ್ರ ಉಪವಾಸ ನಮ್ಮದು…

ನಮ್ಮಡೆಗೆ ಬರುತ್ತಿರುವ ಅಲ್ಲಾಹುಗೆ ಬಾಗಿದಾಕ್ಷಣವೇ
ಎಲ್ಲ ಕಾಲದ ನಮಾಜು ಮುಗಿಸಿದವರು ನಾವು…

ಕೊನೆಯದಾಗಿ
ಅವನಲ್ಲಿ ಬೇಡಿಕೊಂಡ ದುವಾ ಇನ್ನೂ ನೆನಪಿದೆ…
“ಹೇ ಪರವರ್ದಿಗಾರ ಬುರ್ಕಾ ತೊಡದ ನನ್ನವಳಿಗೆ
ಜನ್ನತ್ತಿನ ತಂಪು ಗಾಳಿ ಬೀಸಲಿ,
ಅವಳ ಪ್ರೀತಿಯ ಮುಂದೆ ಎಲ್ಲ ಮೂರ್ಖರು ಸಜ್ದಾ ಮಾಡಲಿ….”

ಆಮೇನ….

 

ಮೆಹಬೂಬ ಮುಲ್ತಾನಿ ಬೆಳಗಾವಿಯವರು
ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು
ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು