‘ಒಂದು ನಾಡಿನ ಸಂಕಥನಗಳನ್ನು ತಳಮಟ್ಟ ವಿಶ್ಲೇಷಿಸುತ್ತ ಆ ನಾಡಿನ ಮನಸ್ಸನ್ನು ತಿಳಿಯಬೇಕೆಂದೂ, ಹಾಗೂ ಆ ಮೂಲಕ ಆ ಭೂಭಾಗವನ್ನು ಆಕ್ರಮಿಸಿ ಆಳುವ ಸಾಮರ್ಥ್ಯ ಪಡೆಯಬೇಕೆಂದೂ ಬಯಸುವ ಜಾಗತಿಕ ಮಹತ್ತ್ವಾಕಾಂಕ್ಷೆಯ ಕಾಲದಲ್ಲಿ ನಾವಿದ್ದೇವೆ. ತತ್ಫಲವಾಗಿ ಈಗ ಬಾಳುವ ದಾರಿಗಳನ್ನೆಲ್ಲ ಆಳುವ ಮಾರ್ಗಗಳನ್ನಾಗಿ ಮಾರ್ಪಡಿಸುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ; ಈ ಸನ್ನಿವೇಶದೊಳಗೆ ಸಾಹಿತ್ಯ-ಕಲೆಗಳೂ ಅಂಥ ಆಳುವ ಸಾಧನಗಳಾಗಿ ರೂಪಾಂತರಗೊಳ್ಳುತ್ತಿರುವವೋ ಎಂಬ ಸಂಶಯ ಮೂಡುತ್ತದೆ’ ಎಂಬ ಮಾತುಗಳನ್ನು ಲೇಖಕ ಕೆ.ವಿ. ಅಕ್ಷರ ಅವರು ‘ಮೋಡದೊಡನೆ ಮಾತುಕತೆ’ ಎಂಬ ತಮ್ಮ ಹೊಸ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಆ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

 

ಮೋಡದೊಡನೆ ಮಾತು ಶುರು ಮಾಡುವ ಮೊದಲು, ಹಳೆಗಾಲದ ಕಾವ್ಯಗಳನ್ನು ಕುರಿತ ಒಂದು ಪ್ರಸ್ತಾಪವನ್ನು ಸಾಧಾರಣೀಕರಿಸಿ ನಿಮ್ಮೆದುರು ಮಂಡಿಸುತ್ತೇನೆ: ಕಾಳಿದಾಸನ ಕೃತಿಗಳೂ ಸೇರಿದಂತೆ, ಆ ಯುಗದ ಎಲ್ಲ ಸಂಸ್ಕೃತ ಕಾವ್ಯ-ನಾಟಕಗಳೂ ಇವತ್ತಿನ ಕಣ್ಣಿನಿಂದ ನೋಡಿದರೆ ‘ಕೃತಕ’ ಎಂದು ಕಾಣಬಹುದಾದ ಸಂರಚನೆಯೊಂದನ್ನು ಒಳಗೊಂಡಿರುತ್ತವೆ. ರಂಗಭೂಮಿಯು ನನ್ನ ಆಸಕ್ತಿಯ ವಲಯವಾದ್ದರಿಂದ, ತಟ್ಟಂತ ನಾಟಕ ಸಾಹಿತ್ಯದ ಉದಾಹರಣೆ ನನಗೆ ನೆನಪಾಗುತ್ತದೆ – ನಾಯಕನಾಯಕಿಯರಿಬ್ಬರೂ ಪರಸ್ಪರರ ಚಿತ್ರ ಬರೆಯುವುದು; ಏನೇನೋ ವಿದ್ಯಮಾನಗಳಿಂದ ಅದು ಕೈಕೈ ಬದಲಾಯಿಸಿಕೊಳ್ಳುತ್ತ ಇವರಿಂದ ಅವರಿಗೆ ತಲುಪುವುದು; ಅದರಿಂದಲೇ ಕೊನೆಗೆ ಅವರ ಸಮಾಗಮವೂ ಸಂಭವಿಸುವುದು – ಇದು ಹಲವು ಸಂಸ್ಕೃತ ನಾಟಕ-ಕಾವ್ಯಗಳ ಒಂದು ಕೃತಕ ಚೌಕಟ್ಟು. ಮಾತ್ರವಲ್ಲ, ಅಂಥ ಸಮಾಗಮ ಸಂಭವಿಸುವುದೂ ಸಹಿತ ಕಂಡು ಕಂಡು ಸವಕಳಿಯಾಗಿರುವ ಮಾರ್ಗದೊಳಗೇ ಸರಿ.

ಯಾವುದೋ ಸಾಧಾರಣ ಕೃತಿಗಳಲ್ಲಲ್ಲ, ‘ವಿಕ್ರಮೋರ್ವಶೀಯ’, ‘ಮಾಲತೀಮಾಧವ’, ‘ರತ್ನಾವಳಿ’ – ಹೀಗೆ ಮೇರುಕೃತಿಗಳೆಂದು ಭಾವಿಸಲಾಗುವ ಹಲವು ಕಥನಗಳಲ್ಲಿ ಕಾಣಸಿಗುವ ಒಂದು ಕಾವ್ಯರೂಢಿಯಿದು. ಎಷ್ಟರಮಟ್ಟಿಗೆಂದರೆ, ಬರೀ ಕಥಾತಾತ್ಪರ್ಯ ಓದಿದರೆ, ಈ ‘ಮೇರುಕೃತಿ’ಗಳು – ಬೇರೇನೂ ಕೆಲಸವಿಲ್ಲದವನೊಬ್ಬ ಏನೂ ಸಂಭವಿಸದ ಕಥೆಯೊಂದನ್ನು ಚೆಂದವಾಗಿ ಹೇಳುವುದು ಹೇಗೆ – ಎಂಬ ಕಸರತ್ತು ನಡೆಸಿರುವಂತೆ ಕಂಡು ನಮ್ಮನ್ನು ಮೋಸಗೊಳಿಸುತ್ತವೆ; ಈ ಕಾವ್ಯಗಳನ್ನು ಹೇಗೆ ಆಸ್ವಾದಿಸಬೇಕೆಂಬ ಗುಟ್ಟು ಗೊತ್ತಾಗುವವರೆಗೂ ಅದು ಒಂದು ಅಸಂಭವನೀಯ ಕಟ್ಟೋಣವೆಂದೇ ತೋರುತ್ತಿರುತ್ತದೆ.

(ಅಕ್ಷರ ಕೆ.ವಿ.)

ಕಾಳಿದಾಸನ ಕಾವ್ಯ ‘ಮೇಘದೂತ’ ಕೂಡ ಇಂಥ ಒಂದು ಅಸಂಭವನೀಯ ಚೌಕಟ್ಟನ್ನು ಹೂಡಿಕೊಂಡೇ ಆರಂಭವಾಗುತ್ತದೆ – ಎಂಬುದಕ್ಕಾಗಿ ಈ ಪ್ರಸ್ತಾಪ ಮಾಡಿದೆ. ಇಲ್ಲೂ ಅಷ್ಟೇ – ಯಾವನೋ ಒಬ್ಬ ಯಕ್ಷ, ತನ್ನ ಯಜಮಾನನಾದ ಕುಬೇರನ ಬಳಿ ಮಾಡಿದ ತಪ್ಪಿಗಾಗಿ ಅಲಕಾವತಿಯಿಂದ ಗಡಿಪಾರುಗೊಂಡು ಪ್ರಿಯತಮೆಯಿಂದ ದೂರನಾಗಬೇಕಾಗಿದೆ; ಹಾಗೆ ದೂರನಾದ ಆತ ಮರ್ತ್ಯಲೋಕಕ್ಕೆ ಬಂದು ನೆಲೆಸಿದ್ದಾನೆ. ಆ ದೇಶಾಂತರವಾಸದ ಮೊದಲ ಎಂಟು ತಿಂಗಳು ಕಳೆಯುತ್ತಿದ್ದಂತೆ, ಆತನ ಮನ ವಿರಹವನ್ನು ತಾಳಲಾಗದೆ ಬಳಲುತ್ತದೆ. ಈ ಬಗೆಯ ಕಾವ್ಯವೊಂದು ಆರಂಭವಾಗಲು ಇಷ್ಟು ಸಾಕು –

ಕಶ್ಚಿತ್ ಕಾಂತಾ ವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತುಃ
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಚ್ಛಾಯಾತರುಷು ವಸತಿಂ ರಾಮಗಿರ್ಯಾಶ್ರಮೇಷು
ಯಕ್ಷನೊಬ್ಬನು ತನ್ನ ನಿಯತಿಯ
ಮೀರಿ ನಡೆಯಲು ಶಾಪ ತಗುಲಿತು
ಮಹಿಮೆಯಳಿಯಿತು ವರುಷ ಕಾಲಕೆ ನಲ್ಲೆಯಗಲಿದನು
ವಿರಹಭಾರದಿ ಜನಕ ತನಯೆಯು
ಮಿಂದ ನೀರಿನ ನೆಲದಿ ನೆಲೆಸಿದ
ರಾಮಬೆಟ್ಟದ ಅಂಟು ನೆರಳಿನ ಮರಗಳಾಶ್ರಮದಿ |೧|

ಗಮನಿಸಿ – ‘ಯಕ್ಷನೊಬ್ಬನು’ ಎಂದಿದ್ದಾನೆ ಕವಿ. ಮತ್ತು ಹಾಗೆ ಹೇಳುವ ಮೂಲಕ – ಇವತ್ತಿನ ಕಾಲದ ಕಣ್ಣಿಂದ ನೋಡುವುದಾದರೆ – ಈ ಕಾವ್ಯ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡಿದೆ. ಆ ಯಕ್ಷನ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಗಳನ್ನು ಹೇಳುವುದಿರಲಿ, ಹೆಸರನ್ನೂ ಅದು ಹೇಳುವುದಿಲ್ಲ. ಮುಂದೆ, ಈತ ಸಾದಾ ಮನುಷ್ಯನಲ್ಲ, ಕುಬೇರನ ಸಹಾಯಕ, ಅಲಕಾವತಿಯ ನಿವಾಸಿ ಎಂಬುದೇನೋ ಗೊತ್ತಾಗುತ್ತದೆ. ಆದರೆ, ಆ ಯಕ್ಷನ ಯಾವ ತಪ್ಪಿಗಾಗಿ ಈ ಶಿಕ್ಷೆಯಾಯಿತು ಎಂಬುದನ್ನು ಕವಿ ಹೇಳುವುದಿಲ್ಲ. ಹಾಗಾಗಿ, ಯಾವತ್ಕಾಲಕ್ಕೂ ಈ ಕಾವ್ಯವನ್ನು ಸಾಮಾಜಿಕ ಮತ್ತು ಮನೋವಿಶ್ಲೇಷಣಾತ್ಮಕ ಮಸೂರಗಳಿಂದ ನೋಡುವ ಅಥವಾ ಆ ಕಾಲದ ಸಾಂಸ್ಕೃತಿಕ ಉತ್ಪನ್ನವಾಗಿ ಅಭ್ಯಾಸ ಮಾಡುವ ಸಾಧ್ಯತೆಗಳನ್ನು ಸ್ವತಃ ಕವಿಯೇ ನಿರಾಕರಿಸಿದ್ದಾನೆ; ತನ್ನ ಈ ಕಾವ್ಯಕೃತಿಯು ಹೊಸ ಕಾಲಕ್ಕೆ ಸಲ್ಲಬಹುದಾಗಿದ್ದ ಒಂದು ಸುಲಭದ ದಾರಿಯನ್ನು ಮುಚ್ಚಿಬಿಟ್ಟಿದ್ದಾನೆ.

ಅಥವಾ, ಕವಿ ಬೇಕಂತ ಹೀಗೆ ಮಾಡಿದನೆ? – ಮುಂದೊಂದು ಕಾಲದಲ್ಲಿ ಜನರು ಈ ಲೋಕದ ಉಪ-ಉತ್ಪನ್ನವಾಗಿ ಮಾತ್ರ ಕಾವ್ಯ-ಸಾಹಿತ್ಯ-ಕಲೆಗಳನ್ನು ಓದುವ ರೂಢಿ ಹಚ್ಚಿಕೊಳ್ಳುತ್ತಾರೆ; ಮೊದಮೊದಲಿಗೆ ತುಂಬ ಅರ್ಥಪೂರ್ಣವಾಗಿ ತೋರುವ ಆ ರೂಢಿಯು ಕಾಲಾನಂತರ ದುರ್ಬಲಗೊಂಡು ಸವಕಳಿಯಾಗುತ್ತದೆ; ಆಗ ಅವರು ಹಳೆಗಾಲದ ಕಾವ್ಯರೂಢಿಗಳಿಗೆ ಮರಳಬೇಕೆನ್ನಿಸಿದರೆ, ಇಂಥ ಕೆಲವಾದರೂ ಉದಾಹರಣೆಗಳು ಜಗತ್ತಿನಲ್ಲಿ ಉಳಿದಿರಲಿ – ಎಂಬುದು ಇಂಥ ತೀರ್ಮಾನಕ್ಕೆ ಕಾರಣವಾಗಿರಬಹುದೆ?

ಇದಕ್ಕೆ ಉತ್ತರ ಹೇಳಲಿಕ್ಕೆ ಕವಿ ನಮ್ಮೊಂದಿಗೆ ಇಲ್ಲವಾದರೂ, ಪ್ರಸ್ತುತ ಬೌದ್ಧಿಕ ಸನ್ನಿವೇಶವಂತೂ ನನ್ನನ್ನು ಹೀಗೆ ಯೋಚಿಸಲು ಒತ್ತಾಯಿಸುತ್ತಿದೆ. ಒಂದು ನಾಡಿನ ಸಂಕಥನಗಳನ್ನು ತಳಮಟ್ಟ ವಿಶ್ಲೇಷಿಸುತ್ತ ಆ ನಾಡಿನ ಮನಸ್ಸನ್ನು ತಿಳಿಯಬೇಕೆಂದೂ, ಹಾಗೂ ಆ ಮೂಲಕ ಆ ಭೂಭಾಗವನ್ನು ಆಕ್ರಮಿಸಿ ಆಳುವ ಸಾಮರ್ಥ್ಯ ಪಡೆಯಬೇಕೆಂದೂ ಬಯಸುವ ಜಾಗತಿಕ ಮಹತ್ತ್ವಾಕಾಂಕ್ಷೆಯ ಕಾಲದಲ್ಲಿ ನಾವಿದ್ದೇವೆ. ತತ್ಫಲವಾಗಿ ಈಗ ಬಾಳುವ ದಾರಿಗಳನ್ನೆಲ್ಲ ಆಳುವ ಮಾರ್ಗಗಳನ್ನಾಗಿ ಮಾರ್ಪಡಿಸುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ; ಈ ಸನ್ನಿವೇಶದೊಳಗೆ ಸಾಹಿತ್ಯ-ಕಲೆಗಳೂ ಅಂಥ ಆಳುವ ಸಾಧನಗಳಾಗಿ ರೂಪಾಂತರಗೊಳ್ಳುತ್ತಿರುವವೋ ಎಂಬ ಸಂಶಯ ಮೂಡುತ್ತದೆ. ಇಂಥ ಒಂದು ದೀರ್ಘಕಾಲೀನ ಭವಿಷ್ಯವನ್ನು ಊಹಿಸಿದ ಕವಿ, ಸಹಸ್ರಮಾನಗಳ ಅನಂತರವೂ ತನ್ನ ಕಾವ್ಯವು ಇಂಥ ಉಪಕರಣವಾಗುವ ಸಾಧ್ಯತೆಯನ್ನೇ ಇಲ್ಲವಾಗಿಸಲು ಮಾಡಿರುವ ಉಪಾಯವೆ ಇದು?

ಉತ್ತರ ಏನೂ ಇರಲಿ. ಎಲ್ಲಿ ಸಮಾಜಶಾಸ್ತ್ರ ಮತ್ತು ಮನಃಶಾಸ್ತ್ರಗಳು ಪ್ರವೇಶಿಸುವುದಿಲ್ಲವೋ ಅಲ್ಲಿ ಪುರಾಣ ಹುಟ್ಟುವುದಕ್ಕೆ ಅನುಕೂಲ ಎಂಬುದಂತೂ ನಿಜ. ಈ ಕಾವ್ಯದಲ್ಲೂ ಹಾಗೇ ಆಗಿರುವಂತೆ ತೋರುತ್ತದೆ. ಇಲ್ಲದೆ ಹೋಗಿದ್ದರೆ, ಈ ಮೊದಲ ಪದ್ಯದ ನಾಲ್ಕೇ ಸಾಲುಗಳ ಒಳಗಡೆ, ಈ ಸ್ಥಳಕ್ಕೆ ರಾಮಗಿರಿ ಎಂಬ ಹೆಸರಿದೆಯೆಂದೂ, ಅದು ಜನಕತನಯೆಯು ಸ್ನಾನ ಮಾಡಿದ ಪುಣ್ಯಭೂಮಿಯೆಂಬ ನೆನಪನ್ನು ಇಟ್ಟುಕೊಂಡಿರುವ ಸ್ಥಾನವೆಂಬುದನ್ನೂ ಉಲ್ಲೇಖಿಸುವ ಅಗತ್ಯವಿರುತ್ತಿರಲಿಲ್ಲ. ತಾನು ಹೇಳುವ ಕಥೆಗೆ ಏನೂ ಸಂಬಂಧವಿಲ್ಲದ ಈ ಕಿರು ಉಲ್ಲೇಖವೇ, ಈ ಕಾವ್ಯವು ಯಾವ ಸಾಹಿತ್ಯ-ಪರಂಪರೆಯನ್ನು ಅನುಸರಿಸಲು ಬಯಸುತ್ತದೆಂಬುದಕ್ಕೆ ಸೂಚನೆ ನೀಡುತ್ತಿದೆ. ಮಾತ್ರವಲ್ಲ, ಮುಂದೆ ಈ ಕಾವ್ಯದುದ್ದಕ್ಕೂ ರಾಮಾಯಣವೆಂಬ ಈ ಪುರಾತನ ಪುರಾಣವು ಯಕ್ಷ-ಯಕ್ಷಿಯರ ಕಥೆಯ ಹರಿವಿಗೆ ಅಗತ್ಯವಿಲ್ಲದೆಯೂ ಈ ಕಾವ್ಯದ ಹಿನ್ನೆಲೆಯಲ್ಲಿ ಚಿಟಿಕೆ ತಾಳ ಹಾಕುತ್ತಲೇ ಇರುತ್ತದೆ.

ಇಂಥ ಪೌರಾಣಿಕತೆಯ ಜಾಡು ಹಿಡಿದೇ ಹಲವರು ಮೇಘದೂತದ ಬಗ್ಗೆ ವ್ಯಾಖ್ಯಾನ ವಿಮರ್ಶೆ ಬರೆದಿದ್ದಾರೆ; ಉದಾಹರಣೆಗೆ, ಕೆಲವರು ಈ ಯಕ್ಷನಿಗೆ ಯಾಕೆ ಶಿಕ್ಷೆಯಾಗಿರಬಹುದು ಎಂಬುದಕ್ಕೆ ಹಲವು ಕಾರಣಗಳನ್ನು ಕಲ್ಪಿಸಿ ಅಂಥ ಊಹೆಗೆ ಕೃತಿಯೊಳಗಿಂದಲೇ ಆಧಾರಗಳನ್ನು ಎತ್ತಿದ್ದಾರೆ. ಈ ಯಕ್ಷ ಪ್ರತಿದಿನವೂ ಕುಬೇರನಿಗೆ ಪೂಜೆಯ ಹೂವುಗಳನ್ನು ಒಯ್ದು ಕೊಡುತ್ತಿದ್ದಾತನೆಂದೂ, ಆದರೆ ಪ್ರಿಯತಮೆಯ ಸೆಳೆತದಿಂದ ಈ ಕೆಲಸದಲ್ಲಿ ಅಸಡ್ಡೆ ಮಾಡಿ ಶಿಕ್ಷೆಗೊಳಗಾದನೆಂಬುದು ಈ ವ್ಯಾಖ್ಯಾನಗಳ ತಾತ್ಪರ್ಯ. ಸ್ವಾರಸ್ಯದ ಸಂಗತಿಯೆಂದರೆ, ಈ ಕಾರಣಗಳ ಸತ್ಯಾಸತ್ಯತೆಯೇನೇ ಇರಲಿ, ಪ್ರಸ್ತುತ ಕಾವ್ಯದೊಳಗಿರುವ ಈ ಯಕ್ಷನಿಗಂತೂ ಸದ್ಯಕ್ಕೆ ಅಂಥ ಗತಕಾಲದ ನೆನಪುಗಳಿಂದ ಏನೂ ಪ್ರಯೋಜನ ಕಾಣುವುದಿಲ್ಲ. ಅದಕ್ಕಾಗಿಯೇ ಇರಬಹುದು, ಕಾವ್ಯವೂ ಅದಕ್ಕೆ ಕಾರಣ ಕೊಟ್ಟಿಲ್ಲ.

ಭೂತಕಾಲದ ಇಂಥ ಹಳಹಳಿಕೆಯ ಬದಲು, ಆ ಯಕ್ಷ ವರ್ತಮಾನದ ಮುಖಾಂತರ ಭವಿಷ್ಯಕ್ಕೆ ಹಾರಬಯಸುತ್ತಾನೆ – ಆಗಿಹೋದ ಅಗಲಿಕೆಯ ಅನುಭವವನ್ನು ಗೆಲ್ಲಲು ಆಗಲಿಕ್ಕಿರುವ ಸಮಾಗಮವನ್ನು ಕಲ್ಪಿಸಿಕೊಳ್ಳುವ ಪ್ರಯೋಗಕ್ಕೆ ಈತ ಕೈ ಹಾಕುವವನಿದ್ದಾನೆ. ಇಂಥ ಸಾಹಸಕ್ಕೆ ಕೈಹಾಕಿದವರಿಗೆ ಅಸಾಧ್ಯವಾದದ್ದೇನೂ ಇಲ್ಲ. ಕಾರಣ, ಕಥೆಯೇ ಅವರಿಗೆ ದಾರಿ ತೋರಿಸುತ್ತದೆ – ಎಲ್ಲೋ ಯಾರೋ ಒಬ್ಬ ಏನೋ ತಪ್ಪು ಮಾಡಿದ್ದ, ಮತ್ತೆಲ್ಲಿಗೋ ಬಂದು ನೆಲೆಸಿದ್ದ, ದುಮ್ಮಾನದಲ್ಲಿ ಬಳಲಿದ್ದ, ಒಂದು ದಿನ ಮೋಡಗಳ ಗುಂಪನ್ನು ಕಂಡ, ಅದು ಮದವೇರಿದ ಆನೆಗಳು ಮಣ್ಣಾಟವಾಡುವ ದೃಶ್ಯದಂತೆ ಕಂಡಿತು. ಭಾವಗಳು ಒತ್ತರಿಸಿ ಬರಲಿಕ್ಕೆ ಮತ್ತೇನು ಬೇಕು? –

ತಸ್ಮಿನ್ನದ್ರೌ ಕತಿಚಿದಬಲಾವಿಪ್ರಯುಕ್ತಃ ಸ ಕಾಮೀ
ನೀತ್ವಾ ಮಾಸಾನ್ ಕನಕವಲಯಭ್ರಂಶರಿಕ್ತಪ್ರಕೋಷ್ಠಃ
ಆಷಾಢಸ್ಯ ಪ್ರಥಮದಿವಸೇ ಮೇಘಮಾಶ್ಲಿಷ್ಟಸಾನುಂ
ವಪ್ರಕ್ರೀಡಾಪರಿಣತಗಜಪ್ರೇಕ್ಷಣೀಯಂ ದದರ್ಶ
ಅಬಲೆಯಿಂದಲಿ ದೂರನಾದವ
ಹಲವು ತಿಂಗಳನಲ್ಲಿ ಕಳೆದನು
ಕಾಯ ಕಂದಿತು ಸರಿದು ಬಂದಿತು ಕೈಯ ಬಳೆ ಜಾರಿ
ಮೊದಲ ದಿನವಾಷಾಢ ಮಾಸದಿ
ಮೋಡಗಳ ಗಡಣವನೆ ಕಂಡನು
ಗುಡ್ಡಕಿರಿಯುತ ಮಣ್ಣು ಕೆದರುವ ಆನೆಗಳ ತೆರದಿ |೨|

ಒಂದು ನಾಡಿನ ಸಂಕಥನಗಳನ್ನು ತಳಮಟ್ಟ ವಿಶ್ಲೇಷಿಸುತ್ತ ಆ ನಾಡಿನ ಮನಸ್ಸನ್ನು ತಿಳಿಯಬೇಕೆಂದೂ, ಹಾಗೂ ಆ ಮೂಲಕ ಆ ಭೂಭಾಗವನ್ನು ಆಕ್ರಮಿಸಿ ಆಳುವ ಸಾಮರ್ಥ್ಯ ಪಡೆಯಬೇಕೆಂದೂ ಬಯಸುವ ಜಾಗತಿಕ ಮಹತ್ತ್ವಾಕಾಂಕ್ಷೆಯ ಕಾಲದಲ್ಲಿ ನಾವಿದ್ದೇವೆ.

ಸ್ವಾರಸ್ಯ ನೋಡಿ – ಯಕ್ಷನ ಹೆಸರು ಹೇಳಲಿಕ್ಕೂ ಕಂಜೂಸು ಮಾಡಿರುವ ಕವಿಯು ಈ ಕಥೆ ಪ್ರಾರಂಭವಾಗುವ ಕಾಲವನ್ನು ಮಾತ್ರ ನಿಖರವಾಗಿ ಆಷಾಢದ ಮೊದಲನೆಯ ದಿವಸ ಎಂದು ತಿಳಿಸಿದ್ದಾನೆ. ಪ್ರಾಯಶಃ ಅದಕ್ಕೆ ಕಾರಣವನ್ನು ಊಹಿಸಿಕೊಳ್ಳಬಹುದು – ಭಾರತೀಯ ಸಂಗೀತದಲ್ಲಿ ಇಂಥಿಂಥ ಭಾವಕ್ಕೂ ದಿನದ ಇಂತಿಂಥ ಕಾಲಕ್ಕೂ ಇಂಥಿಂಥ ರಾಗಗಳನ್ನು ಬಳಸಬೇಕೆಂದು ಹೇಳಲಾಗುತ್ತದೆಯಲ್ಲ, ಹಾಗೆಯೇ ನಮ್ಮ ನಾಡಿನ ಹಳೆಗಾಲದ ಕಾವ್ಯವೂ ಭಾವ ಮತ್ತು ಕಾಲಗಳನ್ನು ನಿಕಟವಾಗಿ ಕೂಡಿಸಿಕೊಳ್ಳುತ್ತದೆ. ಇದು ವಿರಹಿಯೊಬ್ಬನ ಭಾವಲೋಕದೊಳಗಿಂದ ಇಡಿಯ ಲೋಕವನ್ನು ಗ್ರಹಿಸುವ ಕಥನವೆಂಬುದು ಕವಿಗೆ ಗೊತ್ತಿರುವುದರಿಂದ, ಅಂಥ ಭಾವವನ್ನು ಉದ್ದೀಪಿಸುವ ಮಳೆಗಾಲವೇ ಅದಕ್ಕೆ ಅತ್ಯುತ್ತಮ.
ಮತ್ತೆ, ಆಷಾಢದ ಮೊದಲ ಏಕಾದಶಿಯಂದು ವಿಷ್ಣು ಮಲಗುತ್ತಾನೆ, ಮುಂದಿನ ನಾಲ್ಕು ತಿಂಗಳು ದುಷ್ಟಶಕ್ತಿಗಳ ವಿಜೃಂಭಣೆಯ ಕಾಲವಾದ್ದರಿಂದ, ಸದಾ ಊರಿಂದೂರಿಗೆ ಓಡಾಡುತ್ತಲೇ ಇರಬೇಕಾದ ಪರಿವ್ರಾಜಕರೂ ಆಗ ಸಂಚರಿಸುವುದಿಲ್ಲ, ಊರು ಬಿಟ್ಟ ಪಯಣಿಗರು ಸ್ವಸ್ಥಾನಕ್ಕೆ ಮರಳುತ್ತಾರೆ. ಹಾಗೆ ಮಾಡಲಿಕ್ಕಾಗದ ವಿರಹಿಗಳ ವ್ಯಥೆ ಹತೋಟಿ ಮೀರುತ್ತದೆ. ಇಲ್ಲಿ ಆಗಿದ್ದೂ ಅದೇ –

ತಸ್ಯ ಸ್ಥಿತ್ವಾ ಕಥಮಪಿ ಪುರಃ ಕೌತುಕಾಧಾನಹೇತೋಃ
ಅಂತರ್ಬಾಷ್ಪಶ್ಚಿರಮನುಚರೋ ರಾಜರಾಜಸ್ಯ ದಧ್ಯೌ
ಮೇಘಾಲೋಕೇ ಭವತಿ ಸುಖಿನೋsಪ್ಯನ್ಯಥಾವೃತ್ತಿ ಚೇತಃ
ಕಂಠಾಶ್ಲೇಷಪ್ರಣಯಿನಿ ಜನೇ ಕಿಂ ಪುನರ್ದೂರಸಂಸ್ಥೇ
ಕಂಡು ಮೇಘವ ಬಯಕೆ ಕೆರಳಿತು
ಒಳಗಿನೊಳಗೇ ಮನವು ಕುದಿಯಿತು
ಒಡೆಯರೊಡೆಯನ ಶಾಪಪೀಡಿತ ಯಕ್ಷನೊಳು ಆಗ
ಮೋಡಗಳ ಓಡಾಟ ಕಂಡರೆ
ಸ್ವಸ್ಥ ಮನವೇ ಉರಿದು ಏಳ್ವುದು
ಪ್ರೇಮಮೂಢರ ಕತೆಯ ಮತ್ತಿನ್ನರುಹಬೇಕೇನು? |೩|
ಪ್ರತ್ಯಾಸನ್ನೇ ನಭಸಿ ದಯಿತಾಜೀವಿತಾಲಂಬನಾರ್ಥೀ
ಜೀಮೂತೇನ ಸ್ವಕುಶಲಮಯೀಂ ಹಾರಯಿಷ್ಯನ್ ಪ್ರವೃತ್ತಿಂ
ಸ ಪ್ರತ್ಯಗ್ರೈಃ ಕುಟಜಕುಸುಮೈಃ ಕಲ್ಪಿತಾರ್ಘಾಯ ತಸ್ಮೈ
ಪ್ರೀತಃ ಪ್ರೀತಿಪ್ರಮುಖವಚನಂ ಸ್ವಾಗತಂ ವ್ಯಾಜಹಾರ
ಬರುವುದಿನ್ನಿದು ಮಳೆಯಗಾಲವು
ಕಾಯಬೇಕಿದೆ ನಲ್ಲೆಯೊಲವನು
ಎಂದು ಯೋಚಿಸಿ ಯಕ್ಷಪ್ರೇಮಿಯು ತನ್ನ ಮನದೊಳಗೆ
ಬೇಡಿದನು ಆ ನೀರಗಂಟಿಯ
ಕೊಡಸ ಹೂ ನೈವೇದ್ಯದೊಂದಿಗೆ
ಒಲವು ಮಾತಿನೊಳೊಳಗು ಮಾಡುವ ಹಂಚಿಕೆಯ ಜತೆಗೆ |೪|

ಮಳೆಗಾಲವೆಂಬುದು ಇತ್ಯಾತ್ಮಕವಾಗಿ ಮತ್ತು ನೇತ್ಯಾತ್ಮಕವಾಗಿ – ಎರಡೂ ರೀತಿಗಳಿಂದ ಈ ಕಾವ್ಯದ ಸನ್ನಿವೇಶಕ್ಕೆ ವಿಭಾವವನ್ನು ಒದಗಿಸಿರುವಂತೆ ತೋರುತ್ತದೆ. ಮೊದಲನೆಯದಾಗಿ, ಯಕ್ಷನ ಪ್ರಿಯತಮೆಯು ಸಂಸ್ಕೃತ ಕಾವ್ಯಗಳ ನಾಯಕಿಯರಂತೆ ಕೃಶಾಂಗಿ ಮತ್ತು ಅಬಲೆ (ಆದರೆ, ನೆನಪಿಡಿ: ಅವರು ಯಾರೂ ದುರ್ಬಲೆಯರಲ್ಲ, ದುಷ್ಯಂತನ ಮುಖದ ಮೇಲೆ ಅನಾರ್ಯ ಎಂದು ಜರೆದ ಶಕುಂತಲೆಯನ್ನು ನೆನಪಿಸಿಕೊಳ್ಳಿ). ಹಾಗಿರುವುದರಿಂದ, ವಿರಹವೇದನೆಯು ಉತ್ತುಂಗಕ್ಕೇರುವ ಮಳೆಗಾಲವನ್ನು ಆಕೆ ಕಳೆಯುವುದು ಕಷ್ಟ. ಆದ್ದರಿಂದಲೇ, ಮಳೆಗಾಲವೆಂಬುದು ಕಾವ್ಯ-ಸಂಗೀತ ಮೊದಲಾದ ಕಲೆಗಳಿಗೆ ಪ್ರೇರಕವೂ ಹೌದು. ಶ್ರಾವಣ-ಸಾವನ್ ಮೊದಲಾದ ಪದಗಳು ಬರುವ ಜನಪ್ರಿಯ ಹಾಡುಗಳಷ್ಟನ್ನೇ ನೆನಪಿಸಿಕೊಂಡರೂ ಈ ವೈಪುಲ್ಯ ನಮಗೆ ಗೋಚರವಾಗುತ್ತದೆ. ಮೇಘದೂತದ ಆರಂಭವಾಗುವುದು ಇಂಥದೇ ಮಳೆಗಾಲದಲ್ಲಿ ಮಾತ್ರವಲ್ಲ, ಈ ಕಾವ್ಯದ ಪ್ರಧಾನ ಪಾತ್ರವಾದ ಮೋಡರಾಯನೂ ಅದೇ ಮಳೆಗಾಲದ ಮೂಕಪ್ರತಿನಿಧಿ.

*****

ಅಂಥ ಮೂಕನೊಡನೆಂಥ ಮಾತು? ಹುಚ್ಚಲ್ಲವೆ ಇದು? ನಲ್ಲೆಯ ಅಗಲಿಕೆಯನ್ನು ಕುರಿತು ಕಾವ್ಯ ಬರೆಯಬೇಕೆಂದು ತೀರ್ಮಾನಿಸಿಕೊಂಡ ಭಾವುಕ ಕವಿಯೊಬ್ಬ, ಅದಕ್ಕೆ ಅವಕಾಶವಿಲ್ಲದ ಸನ್ನಿವೇಶವಿದ್ದರೂ ಒತ್ತಿ ಹುಟ್ಟಿಸಿಕೊಂಡ ಒಂದು ಕೃತಕ ತಂತ್ರ ಇದಲ್ಲವೇನು? ಅಥವಾ, ಪಾರಿಭಾಷಿಕವಾಗಿ ಹೇಳುವುದಾದರೆ, ವಿಪ್ರಲಂಭ ಶೃಂಗಾರವನ್ನು ಸೃಷ್ಟಿ ಮಾಡಬೇಕೆಂದು ತೀರ್ಮಾನಿಸಿಕೊಂಡ ಕವಿಯೊಬ್ಬ ಕೃತಕವಾಗಿ ಹುಡುಕಿ ತೆಗೆಯುತ್ತಿರುವ ವಿಭಾವಗಳ ಸರಣಿ ಇದಲ್ಲವೇನು? ಅಥವಾ, ಇನ್ನೂ ಮೂಲಭೂತವಾದ ಪ್ರಶ್ನೆ ಎತ್ತೋಣ – ಮಾನವಭಾವದ ಉತ್ತುಂಗಾವಸ್ಥೆಯಾದ ಪ್ರೇಮವೆಂಬುದರ ಕುರಿತು ಅಚೇತನವಾದ ಮೋಡದೊಡನೆ ಮಾತಾಡುವುದು ಅಸಂಗತವಲ್ಲವೆ? ಇಂಥ ಅಸಂಭವನೀಯ ತಂತ್ರದ ಮೂಲಕ ಈ ಕಾವ್ಯಕ್ಕೆ ತಾನಾಗಿಯೇ ಸಿಗಬಹುದಾದ ಒಂದಿಷ್ಟು ವಾಸ್ತವತೆಯೂ ನಷ್ಟವಾಗುತ್ತದಲ್ಲವೆ?

ಸ್ವಾರಸ್ಯದ ಸಂಗತಿಯೆಂದರೆ, ನಮಗಿಂತ ಒಂದೂವರೆ ಸಹಸ್ರಮಾನದಷ್ಟು ಹಿಂದೆ ಬದುಕಿದ್ದ ಕಾಳಿದಾಸನಿಗೂ ಈ ಸಂದೇಹಗಳು ಕಾಣಿಸಿಕೊಂಡಿರಬೇಕು; ಮುಂದೊಂದು ಶತಮಾನದಲ್ಲಿ ತನ್ನ ಈ ಆಯ್ಕೆಯನ್ನು ಕುರಿತು ಏಳಬಹುದಾದ ಈ ಬಗೆಯ ತಕರಾರುಗಳೂ ಗೋಚರಿಸಿರಬೇಕು. ಇಲ್ಲದಿದ್ದರೆ, ಮೇಘದೂತದ ಐದನೆಯ ಪದ್ಯದಲ್ಲಿಯೇ ಆತ ಈ ಕೆಳಕಂಡ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿರಲಿಲ್ಲ:

ಧೂಮಜ್ಯೋತಿಃ ಸಲಿಲಮರುತಾಂ ಸಂನಿಪಾತಃ ಕ್ವ ಮೇಘಃ
ಸಂದೇಶಾರ್ಥಾಃ ಕ್ವ ಪಟುಕರಣೈಃ ಪ್ರಾಣಿಭಿಃ ಪ್ರಾಪಣೀಯಾಃ
ಇತ್ಯೌತ್ಸುಕ್ಯಾದಪರಿಗಣಯನ್ ಗುಹ್ಯಕಸ್ತಂ ಯಯಾಚೇ
ಕಾಮಾರ್ತಾ ಹಿ ಪ್ರಕೃತಿಕೃಪಣಾಶ್ಚೇತನಾಚೇತನೇಷು
ಬೆಂಕಿ ಹೊಗೆ ಜಲ ಗಾಳಿಗೂಡಿದ
ಮೋಡವೆಲ್ಲೈ? ಚುರುಕು ಕರಣದ
ಜೀವಭಾವದ ಮಾತುಗಳ ತಾನೊಯ್ಯಬಹುದೇನು?
ಇಂಥ ಪ್ರಶ್ನೆಯ ಕೇಳಿಕೊಳ್ಳದೆ
ಬೇಡಿಕೊಂಡನು ಯಕ್ಷನಾತನ
ಕಾದು ನಿಂತಿಹ ಬಯಕೆ ಮರುಳಗೆ ಜೀವಜಡವೇನು? |೫|

ನಮ್ಮ ಕಾಲಕ್ಕೆ ತುಂಬ ಚೆನ್ನಾಗಿ ಪ್ರತಿಧ್ವನಿಸುವ ಪ್ರಶ್ನೆ ಇದು: ಹೊಗೆ-ಬೆಂಕಿ-ಗಾಳಿ-ನೀರು ಈ ಮೊದಲಾದ ಜಡವಸ್ತುಗಳ ಸಂಯೋಗದಿಂದ ಹುಟ್ಟಿದ ಮೋಡಕ್ಕೆ ಇಂದ್ರಿಯಪಟುತ್ವವನ್ನೂ ಪ್ರಜ್ಞೆಯನ್ನೂ ಬೆಳೆಸಿಕೊಂಡಿರುವ ಜೀವಭಾವದ ಸಂದೇಶಗಳನ್ನು ಒಯ್ಯುವ ಸಾಮರ್ಥ್ಯವುಂಟೆ? ಕವಿಯ ಸ್ವಗತವೋ ಎಂಬಂತಿರುವ ಈ ಪ್ರಶ್ನೆಯನ್ನು ಕಾಳಿದಾಸ ತುಂಬ ಸರಳವಾದ ಒಂದು ಮೇಲುಸ್ತರದಲ್ಲೂ ಗಹನವಾದ ಇನ್ನೊಂದು ಬಗೆಯಲ್ಲೂ ಒಟ್ಟಿಗೇ ಉತ್ತರಿಸಿದ್ದಾನೆ.

ಮೊದಲಿಗೆ ಪದ್ಯದ ದ್ವಿತೀಯಾರ್ಧದಲ್ಲಿ ಕಾಳಿದಾಸನು ಕೊಟ್ಟಿರುವ ‘ಸರಳ’ ಉತ್ತರದಿಂದಲೇ ಆರಂಭ ಮಾಡಿಕೊಳ್ಳೋಣ. ‘ಇಂಥ ಪ್ರಶ್ನೆಯ ಕೇಳಿಕೊಳ್ಳದೆ, ಬೇಡಿಕೊಂಡನು ಯಕ್ಷನಾತನ…’ ಅಂದರೆ, ಕಾಳಿದಾಸ ಹೀಗೆ ಅನ್ನುತ್ತಿದ್ದಾನೆ – ‘ತನ್ನ ಪ್ರಿಯತಮೆಯಿಂದ ದೂರವಾಗಿರುವ ಯಾವ ಪ್ರೇಮಿಯೂ ತನ್ನ ಆವೇಗವನ್ನು ಆಕಾಶದಲ್ಲಿ ಓಡುವ ಮೋಡಕ್ಕೆ ಹೇಳಿಕೊಂಡು ಪ್ರಯೋಜನವಿಲ್ಲ; ಮತ್ತು ಹಾಗೆ ಹೇಳಿಕೊಂಡದ್ದು ಆಕೆಗೆ ತಲುಪುತ್ತದೆಂದು ಆಶಿಸುವುದಂತೂ ಅತಾರ್ಕಿಕ. ಆದರೇನು ಮಾಡೋಣ, ನಮ್ಮ ನಾಯಕ ಮೋಹದ ಮುಸುಕು ಮತ್ತು ಬಯಕೆಯ ತುರ್ತುಗಳಲ್ಲಿ ಸಿಲುಕಿಕೊಂಡು, ಚೇತನ ಮತ್ತು ಅಚೇತನಗಳ ನಡುವಿನ ವ್ಯತ್ಯಾಸ ಗೊತ್ತಾಗದಂತೆ ಆಗಿದ್ದಾನೆ; ನಮನಿಮಗೆ ಕಾಣುವ ಸಾದಾ ಸಂಗತಿಯನ್ನೂ ಕಾಣಲಾರದವನಾಗಿದ್ದಾನೆ.’ – ಇದು ಕವಿಯ ಸಮರ್ಥನೆಯಲ್ಲವೆ?

ಗಮನಿಸಿ: ಈ ಸಮರ್ಥನೆಯ ಮೂಲಕ ಪರೋಕ್ಷವಾಗಿ, ಕವಿ ಇನ್ನೂ ಒಂದು ಉಪಾಯ ಮಾಡುತ್ತಿದ್ದಾನೆ – ಇದು ತನ್ನ ಸಮಸ್ಯೆಯಲ್ಲ, ತನ್ನ ನಾಯಕನ ಸಮಸ್ಯೆ ಎಂದಾತ ಸೂಚಿಸುತ್ತಿದ್ದಾನೆ! ಮತ್ತು, ಆ ಮೂಲಕ ಈ ಸಂದರ್ಭವನ್ನು ಯಾವ ಸ್ತರದಲ್ಲಿ ಸ್ವೀಕರಿಸಬೇಕೆಂಬ ಜವಾಬ್ದಾರಿಯನ್ನು ಓದುಗರಿಗೆ ದಾಟಿಸುತ್ತಿದ್ದಾನೆ! ಉದಾಹರಣೆಗೆ, ಕವಿಯ ಸಂದೇಶ ಹೀಗಿರಬಹುದೆ? – ಮೋಡಗಳೊಂದಿಗೆ ಮಾತಾಡುವುದೂ ಅವುಗಳ ಮೂಲಕ ಸಂದೇಶ ಕಳಿಸುವುದೂ ಅ-ವಾಸ್ತವಿಕವೆಂದು ಓದುಗರಲ್ಲಿ ಯಾರಾದರೂ ಭಾವಿಸುವವರಿದ್ದರೆ ಅಂಥವರು ಈ ಉತ್ತರವನ್ನೂ ಇಟ್ಟುಕೊಳ್ಳಬಹುದು! ಆದರೆ, ಈ ಉತ್ತರವು ಎರಡು ಬಾಯಿಯ ಕತ್ತಿ – ಮುಂದೆ ಪ್ರಸ್ತಾಪಿಸಲಿಕ್ಕಿರುವ ಈ ಪದ್ಯದ ಗಹನಾರ್ಥವನ್ನು ಅರಿಯಬಲ್ಲ ಓದುಗರಿಗೆ ಇದೊಂದು ವಕ್ರೋಕ್ತಿಯ ಉಡುಗೊರೆ; ಮತ್ತು, ‘ವಾಸ್ತವವಾದವೇ ಬೇಕು’ ಎಂದು ಹಠ ಮಾಡುವ ಆಧುನಿಕ ಬಾಲಕರಿಗೆ ಇದು ಪ್ರಬುದ್ಧ ಪ್ರಜ್ಞೆಯ ಕವಿಯು ತೆಗೆಸಿಕೊಟ್ಟಿರುವ ಒಂದು ಮಿಠಾಯಿ!

ಹಳೆಗಾಲದ ಕವಿಯೊಬ್ಬನ ಮಾತುಗಳನ್ನು ಹೀಗೆಲ್ಲ ಮನಬಂದಂತೆ ಉಚಾಯಿಸಿ ಉಲ್ಲೇಖಿಸಿ ನಾನು ಅತಿ-ವ್ಯಾಖ್ಯಾನ ಮಾಡುತ್ತಿದ್ದೇನೆ ಎಂದು ಭಾವಿಸಬಹುದಾದ ಓದುಗರಿಗಾಗಿ ನನ್ನ ಬಳಿ ಹೊಸಗಾಲದ್ದೇ ಇನ್ನೊಂದು ಸಾಕ್ಷ್ಯವೂ ಇದೆ. ಆ ಸಾಕ್ಷಿಯನ್ನು ಈಗ ಹಾಜರುಪಡಿಸುತ್ತೇನೆ. ಕಾಳಿದಾಸನ ಸಂಪ್ರದಾಯಕ್ಕೇ ಸೇರಿರುವ, ಆದರೆ ಕಾಲದೇಶಗಳಲ್ಲಿ ನಮಗೆ ಸಮೀಪರಾಗಿರುವ ಕವಿ ಬೇಂದ್ರೆಯವರು ತಮ್ಮ ‘ಹೊಸ ಸಂಸಾರ’ ನಾಟಕದ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ:

…ಈಗ ಕಲ್ಪನೆಯ ಹಾದಿಯನ್ನು ಬಿಟ್ಟು ವಾಸ್ತವದ ಬೀದಿಯಲ್ಲಿ ಅಲೆದಾಡುವ ಬಯಕೆ ಹುಟ್ಟಿದೆ ಜನರ ಅಂತಃಕರಣದಲ್ಲಿ. ನಿನ್ನೆ ಮೊನ್ನೆಯ ಇತಿಹಾಸ, ಇಂದಿನ ನಾಳಿನ ಸಮಾಜ ಇವು ವಿಷಯವಾಗುತ್ತಿವೆ ನಾಟಕಗಳಲ್ಲಿ. ವಿಷಯಗಳು ಬದಲಾದರೇನು, ಭಾಷೆ ಬೇರೆಯಾದರೇನು, ರಚನಾ ಪದ್ಧತಿಯಲ್ಲಿ ಪಲ್ಲಟವಾದರೇನು, ದೃಶ್ಯಕಾವ್ಯದ ಮೂಲೋದ್ದೇಶವು ಅದೇ ಇದೆ. ದೃಶ್ಯಕಾವ್ಯಗಳ ದರ್ಶನಯೋಗವು ಒಂದು ಜಾಗೃತ ಸಮಾಧಿಯಿದ್ದಂತೆ. ಕೆಲಹೊತ್ತು ನಾಟಕವೊಂದನ್ನು ಬಿಟ್ಟು ಉಳಿದ ಪ್ರಪಂಚದ ಮರೆವಾಗಿ, ತಮ್ಮ ಸಂಸಾರದ ಚಿತ್ರವೇ ತಮ್ಮಿದಿರಿದ್ದೂ ಪ್ರೇಕ್ಷಕ ಪದವಿಯ ಮೂಲಕವಾಗಿ ಬರುವ ತಾಟಸ್ಥ್ಯದಿಂದ ನಿರ್ಲಿಪ್ತ ದೇವತೆಗಳ ಪದವಿಯುಂಟಾಗಿ, ರಂಜನೆಯ ತನ್ಮಯತೆಯಲ್ಲಿ ಅಂತಃಕರಣದ ವೈಷಮ್ಯವು ಕಡಿಮೆಯಾಗುವುದು… ಅದರಲ್ಲಿಯೂ ಸಾಮಾಜಿಕ ನಾಟಕಗಳಲ್ಲಿ ಒಂದು ವಿಶೇಷವಿದೆ. ಕಾಲ್ಪನಿಕ ನಾಟಕಗಳೊಳಗಿನ ಅಸಂಭವನೀಯತೆಯು ಇವುಗಳೊಳಗಿಲ್ಲ. ಆದ ಕಾರಣ ಇವುಗಳ ದರ್ಶನದಿಂದಾದ ಸಂಸ್ಕಾರಗಳು ಹೆಚ್ಚು ದೃಢವಾಗುವವು. ಕಲಿಯುವ ಜಾಣನಿಗೆ ಕೋಣನಿಂದಲೂ ಕಲಿಯಲಾಗುವುದು. ಆದರೆ ಕೆಲವರಿಗೆ ಮಾನುಷಚರಿತದಿಂದಲೇ ಬೋಧವಾಗುವುದು. ಸದ್ಯಕ್ಕೆ ಅಂತಹ ಕಾಲ ಬಂದಿದೆ.

ಈಗ, ಮೇಲ್ಕಂಡ ಪದ್ಯದ ಪ್ರಥಮಾರ್ಧದಲ್ಲಿ ಕಾಳಿದಾಸನು ಕೊಟ್ಟಿರುವ ಇನ್ನೊಂದು ಗಹನ ಉತ್ತರದ ಕಡೆಗೆ ತಿರುಗೋಣ. ಈ ಸಾಲುಗಳಲ್ಲಿ ಕವಿಯು ಮೋಡದ ಚಹರೆಯನ್ನು ಗುರುತಿಸುವುದು ಹೇಗೆ? ಹೊಗೆ-ಬೆಂಕಿ-ನೀರು-ಗಾಳಿಗಳ ‘ಸನ್ನಿಪಾತ’ವಾಗಿರುವ ಜಡವಸ್ತು ಅದು. ಹಾಗಿರುವಾಗ, ಪ್ರಾಣಕ್ಕೆ ಕಾರಣವಾಗುವ ಇಂದ್ರಿಯಪಟುತ್ವವನ್ನೊಳಗೊಂಡ ಜೀವಭಾವದ ಮಾತುಗಳನ್ನು ಅದು ಅರ್ಥ ಮಾಡಿಕೊಂಡು ಸಂವಹನೆ ಮಾಡಲು ಶಕ್ತವೆ? ಈ ಪ್ರಶ್ನೆಯನ್ನು ಸೂಕ್ಷ್ಮವಾಗಿ ಬಿಡಿಸಿದರೆ, ಉತ್ತರ ಅದರೊಳಗೇ ಅಡಗಿದೆ.

ಭಾರತದ ದರ್ಶನಗಳಲ್ಲಿ ತುಸು ಪ್ರವೇಶ ಇರುವವರಿಗೂ ಗೊತ್ತು, ಈ ಪದ್ಯದಲ್ಲಿ ಉಕ್ತವಾಗುತ್ತಿರುವ ವಸ್ತುಗಳು ಅಂಥಿಂಥವಲ್ಲ; ಈ ಲೋಕದ ನಿರ್ಮಾಣಕ್ಕೆ ಆಧಾರವೆಂದು ತಿಳಿಯಲಾಗುವ ಪಂಚಭೂತಗಳಲ್ಲಿ ಸೇರಿದ ಪದಾರ್ಥಗಳವು. ಬೇರೆಬೇರೆ ದರ್ಶನಗಳೊಳಗೆ ಈ ಮೂಲಾಂಶಗಳ ಸಂಖ್ಯೆಯು ನಾಲ್ಕರಿಂದ ನಲವತ್ತರವರೆಗೆ ಎಷ್ಟೂ ಆಗಬಹುದು – ಆದರೆ ಮೇಲಿನ ನಾಲ್ಕು ಮಾತ್ರ ಬಹುತೇಕರ ಪ್ರಕಾರ ಈ ಲೋಕದ ಪದಾರ್ಥಗಳಿಗೂ ಜೀವಕ್ಕೂ ಕಾರಣವಾಗುವಂಥ ಮೂಲವಸ್ತುಗಳು. ಹಾಗಿರುವುದರಿಂದ, ಅವು ‘ಜಡ’ ಎಂದು ತಿಳಿಯುವುದು ಸೀಮಿತವಾದ ಭೌತಿಕ ವ್ಯಾಪ್ತಿಯ ಒಂದು ವ್ಯಾವಹಾರಿಕ ರೂಢಿ; ಅಥವಾ, ಅದೊಂದು ಸಾಪೇಕ್ಷ ಸ್ವರೂಪದ ಲೌಕಿಕ ‘ಕವಿಸಮಯ’ ಎಂದರೂ ಸರಿಯೇ. ನಿಜ, ಮನುಷ್ಯರಿಗಿರುವ ಚೈತನ್ಯ ಪ್ರಾಣಿಗಳಿಗಿಲ್ಲ, ಪ್ರಾಣಿಗಳಿಗರುವಷ್ಟು ಪ್ರಜ್ಞೆ ಸಸ್ಯಗಳಿಗಿಲ್ಲ, ಸಸ್ಯಗಳಿಗಿರುವಷ್ಟು ಜೀವ ಕಲ್ಲುಗಳಿಗಿಲ್ಲ. ಆದರೆ, ಇದಕ್ಕೆಲ್ಲ ಮೂಲವಾದ ಪಾರಭೌತಿಕ ಸ್ತರದಲ್ಲಿ ಹೊಗೆ-ಬೆಂಕಿ-ನೀರು-ಗಾಳಿಗಳೆಲ್ಲವೂ ಚಿತ್-ಅಂಶಗಳೇ. ಆದ್ದರಿಂದ, ಇವಕ್ಕೆ ಚೇತನದ ಮಾತುಗಳನ್ನೂ ಹೊತ್ತೊಯ್ಯುವ ಪ್ರಜ್ಞೆ ಇರಬೇಕೆಂದು ಕಾವ್ಯವು ಭಾವಿಸಿಕೊಳ್ಳುತ್ತಿದೆ – ಇದು ಕಾಳಿದಾಸ ಸೂಚಿಸುತ್ತಿರುವ ಇನ್ನೊಂದು ಗಹನ ಉತ್ತರವಾಗಿರಬಹುದಲ್ಲವೆ?

ಇದನ್ನೂ ಯಾರಾದರೂ ಅತಿ-ವ್ಯಾಖ್ಯಾನ ಎನ್ನುತ್ತಾರಾದರೆ, ಅದಕ್ಕೆ ಸಮರ್ಥನೆಯಾಗಿ ಸ್ವತಃ ಕಾಳಿದಾಸನೇ ತನ್ನ ಇನ್ನೊಂದು ಪಠ್ಯದಲ್ಲಿ ಕೊಟ್ಟ ಸಾಕ್ಷ್ಯವನ್ನು ಗಮನಿಸಬೇಕು. ‘ಅಭಿಜ್ಞಾನ ಶಾಕುಂತಲ’ದ ನಾಂದಿಯು ಎಂಟು ವಸ್ತುಗಳ ಪಟ್ಟಿ ಕೊಟ್ಟು, ಅದೇ ಈ ಲೋಕದ ಸೃಷ್ಟಿಕರ್ತನ ದೇಹವೆಂದು ಕರೆಯುತ್ತದೆ:

ಯಾ ಸೃಷ್ಟಿಃ ಸೃಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ದ್ವೇ ಕಾಲಂ ವಿಧತ್ತಃ ಶ್ರುತಿವಿಷಯಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಮ್
ಯಾಮಾಹುಃ ಸರ್ವಬೀಜಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ
ಹುಟ್ಟು ಹುಟ್ಟುವ ಮೊದಲೆ ಹುಟ್ಟಿರುವ ಆ ನೀರು
ಕೊಟ್ಟ ಆಹುತಿಗಳನು ಮುಟ್ಟಿಸುವ ಆ ಅಗ್ನಿ
ಕೊಡುಕೊಳೆಯ ಮಧ್ಯಸ್ಥರಾ ಯಜ್ಞನಾಯಕರು
ಕಾಲವನು ಕಾಣಿಸುವ ಆ ಸೂರ್ಯ ಚಂದಿರರು
ಸಕಲವನು ಆವರಿಸಿ ನಿಂತಿರುವ ಆಕಾಶ
ಎಲ್ಲ ಬೀಜವು ಮೊಳೆವ ಆಧಾರವದು ಭೂಮಿ
ಜೀವದುಸುರಿಗೆ ಮೂಲವಾಗಿರುವ ಆ ಗಾಳಿ
ಈ ಎಂಟು ರೂಪಗಳ ಧರಿಸಿರುವ ಮಹದೇವ
ಕೊಡಲೆಮಗೆ ಎಲ್ಲವನು ವರವನಿತ್ತು
ರಕ್ಷಿಸಲಿ ಎಲ್ಲರನು ಕರುಣೆ ಹೊತ್ತು

ಅಂಥ ಈಶನನ್ನೇ ಸೃಷ್ಟಿಸಿರುವ ಈ ಹೊಗೆ-ಬೆಂಕಿ-ಗಾಳಿ-ನೀರುಗಳು ಯಃಕಶ್ಚಿತ್ ಮಾನವ ಪ್ರೀತಿಯ ಸಂವಹನೆಯ ಕೆಲಸ ಮಾಡಲಾರವೆ? – ಎಂಬುದು ಕಾಳಿದಾಸನ ಪೂರ್ವೋಕ್ತ ಪದ್ಯದ ಧ್ವನಿ ಎಂದಿಟ್ಟುಕೊಂಡು ಆ ಬೆಳಕಲ್ಲಿ ಓದಲಾರಂಭಿಸಿದರೆ, ಮೇಘದೂತದ ಆ ಐದನೆಯ ಪದ್ಯವು ಇಡಿಯ ಕಾವ್ಯಕ್ಕೇ ಇನ್ನೊಂದು ಕೀಲಿಕೈಯನ್ನು ನಮಗೆ ಕೊಡುತ್ತದೆ – ಈ ‘ಪ್ರೇಮ-ಕಾವ್ಯ’ವು ನಿಜವಾಗಿ ಗಂಡು-ಹೆಣ್ಣಿನ ಒಂದು ಜೋಡಿಯ ನಡುವೆ ಸಂಭವಿಸಿದ ಮಿಲನ-ವಿರಹಗಳಿಗೆ ಸಂಬಂಧಿಸಿದ್ದೇ ಅಲ್ಲ; ಅಥವಾ, ಕಡೆಯ ಪಕ್ಷ ಅಷ್ಟಕ್ಕೆ ಮಾತ್ರ ಸಂಬಂಧಿಸಿದ್ದಂತೂ ಖಂಡಿತ ಅಲ್ಲ. ಅದು – ಜಡದಿಂದ ಜೀವ ಹುಟ್ಟುವ, ಕರಣಗಳ ಸಹಯೋಗದಿಂದ ಮನಸ್ಸು ಉದ್ಭವಿಸುವ, ಹಾಗೂ ಜೀವಜೀವಗಳು ಕೂಡಿ ಪ್ರಕೃತಿಯಾಗಿ ಹೆಣೆದು ರೂಪುಗೊಳ್ಳುವ ಒಂದು ನಕ್ಷೆಯನ್ನು ಕಾಣಿಸುತ್ತಿರಬಹುದೆ? ಮತ್ತು, ಇಂಥ ಜೀವ-ಕಾವ್ಯ ವಿಕಾಸಮಾರ್ಗದ ತುದಿಗೆ, ಜೀವದಿಂದ ಭಾವ ಉದ್ಭವಿಸುವ ಪ್ರಕ್ರಿಯೆಯನ್ನೇ ಬಿಚ್ಚುತ್ತಹೋಗುವ ಕಾವ್ಯಪ್ರಯತ್ನಕ್ಕೆ ಕೈ ಹಾಕಿರಬಹುದೆ?

(ಕೃತಿ: ಮೋಡದೊಡನೆ ಮಾತುಕತೆ, ಕನ್ನಡ ಭಾವಾನುವಾದ: ಅಕ್ಷರ ಕೆ.ವಿ., ಪ್ರಕಾಶನ : ಬಹುವಚನ ಪ್ರಕಾಶನ, ಬೆಲೆ:  220/-)