ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪ ಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು.ಲೇಖಕರ ಉದ್ದೇಶದ ಬಗ್ಗೆ ತೋರುವ ಸಂಶಯವು ಕಳೆದ ಹತ್ತು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸಾಂಸ್ಕೃತಿಕ ವ್ಯವಸ್ಥೆಯನ್ನು ಕುರಿತ ಕಸಿವಿಸಿಯೇ ಆಗಿದೆ. ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಎರಡನೆಯ ಕಂತು.

 

ಓದುಗರೂ ಪತ್ರಕರ್ತರೂ ಕಳೆದ ಮೂವತ್ತು ವರ್ಷಗಳಲ್ಲಿ ಈ ಪ್ರಶ್ನೆಯನ್ನು ನನ್ನನ್ನು ಅನೇಕಬಾರಿ ಕೇಳಿದ್ದಾರೆ. ಯಾವ ಸ್ಥಳ, ಯಾವ ಹೊತ್ತಿನಲ್ಲಿ ಈ ಪ್ರಶ್ನೆ ಕೇಳುತ್ತಾರೆ, ಬರವಣಿಗೆಯ ಬಗ್ಗೆ ಅವರಿಗೆ ಆಸಕ್ತಿ ಎಷ್ಟು ಅನ್ನುವುದು ಈ ಪ್ರಶ್ನೆಯ ಉದ್ದೇಶವನ್ನು ನಿಯಂತ್ರಿಸುತ್ತದೆ. ಅದೇನೇ ಇದ್ದರೂ ಅವರ ದನಿಯಲ್ಲಿ ಸಂಶಯ, ಏನು ಉತ್ತರ ಹೇಳಿಯಾನು ಎಂಬ ಉದ್ಧಟತನ ಇವು ಮಾತ್ರ ಹಾಗೇ ಇರುತ್ತವೆ.

ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಈ ಪ್ರಶ್ನೆ ಕೇಳಿದಾಗ ಕಲೆ ಮತ್ತು ಸಾಹಿತ್ಯ ಇವು ಬಡ ದೇಶದಲ್ಲಿ ಅನುಪಯುಕ್ತ, ವ್ಯರ್ಥ; ಆಧುನಿಕ ಯುಗಕ್ಕೆ ಸೇರ್ಪಡೆಗೊಳ್ಳಲು ಹೋರಾಟ ನಡೆಸುತ್ತಿರುವ ಪಾಶ್ಚಾತ್ಯವಲ್ಲದ ದೇಶಕ್ಕಂತೂ ವ್ಯರ್ಥವಾದ ಲಕ್ಷುರಿ ಇದು ಎಂಬ ಧೋರಣೆ ಇರುತ್ತಿತ್ತು. ವಿದ್ಯಾವಂತನಾದವನು ಡಾಕ್ಟರೋ, ಎಂಜಿನಿಯರೋ ಆಗಿ ರೋಗ ವಾಸಿ ಮಾಡುತ್ತ, ಸೇತುವೆ ಕಟ್ಟುವ ಕೆಲಸದಲ್ಲಿ ತೊಡಗಿದರೆ ದೇಶಕ್ಕೆ ಒಳ್ಳೆಯದಲ್ಲವೇ ಅನ್ನುವ ಸೂಚನೆ ಈ ಮಾತಿನಲ್ಲಿ ಇರುತ್ತಿತ್ತು. ಜೀನ್ ಪಾಲ್ ಸಾತ್ರೆ ಎಪ್ಪತ್ತರ ದಶಕದಲ್ಲಿ ಹೇಳಿದ ಮಾತು ಇಂಥ ಧೋರಣೆಗೆ ಬಲ ತಂದಿತ್ತು. ತಾನೇನಾದರೂ ಆಫ್ರಿಕದ ಅತ್ಯಂತ ಬಡತನದ, ಹಿಂದುಳಿದ ಪುಟ್ಟ ದೇಶ ಬಯಾಫ್ರದ ಬುದ್ಧಿಜೀವಿಯಾಗಿದ್ದಿದ್ದರೆ ಕಾದಂಬರಿ ಬರೆಯುವ ಕೆಲಸಕ್ಕೇ ಕೈ ಇಕ್ಕುತ್ತಿರಲಿಲ್ಲ ಎಂದಿದ್ದ.

ಮುಂದಿನ ವರ್ಷಗಳಲ್ಲಿ ಈ ಪ್ರಶ್ನೆಯ ಹಿಂದೆ ‘ಸಮಾಜದ ಯಾವ ವರ್ಗ ನನ್ನ ಬರವಣಿಗೆಯನ್ನು ಓದಿ ಮೆಚ್ಚುತ್ತದೆ’ ಅನ್ನುವ ಕುತೂಹಲ ಇರುತ್ತಿತ್ತು. ನನ್ನನ್ನು ಸಿಕ್ಕಿಸಿಹಾಕುವ ಪ್ರಶ್ನೆ ಇದು. ‘ಸಮಾಜದ ಅತ್ಯಂತ ಬಡ, ಹಿಂದುಳಿದ, ತುಳಿತಕ್ಕೆ ಒಳಗಾದ ಜನರ ಪರವಾಗಿ ಬರೆಯುತ್ತಿದ್ದೇನೆ,’ ಎಂಬ ಉತ್ತರ ಹೇಳದಿದ್ದರೆ ನಾನು ಟರ್ಕಿಯ ಜಮೀನುದಾರರ, ಮಧ್ಯಮವರ್ಗದ ಪರವಾಗಿ ಇರುವವನು ಅನ್ನುವ ಆಪಾದನೆ ಹುಟ್ಟಿಕೊಳ್ಳುತ್ತಿತ್ತು. ಪರಿಶುದ್ಧ ಮನಸ್ಸಿನ, ಒಳಿತನ ಪರವಾಗಿರುವ ಯಾವನೇ ಲೇಖಕ ಬಹುಪಾಲು ಅನಕ್ಷರಸ್ಥರಾಗಿರುವ ಲೇಖಕ ರೈತರು, ಕಾರ್ಮಿಕರ, ದೇಸೀಯರ ಪರವಾಗಿಯೇ ಬರೆಯಬೇಕು ಎಂಬ ಎಚ್ಚರಿಕೆಯೂ ಅದರಲ್ಲಿ ಇರುತ್ತಿತ್ತು. ನನ್ನ ತಾಯಿ ಅದೇ ಎಪ್ಪತ್ತರ ದಶಕದಲ್ಲಿ ‘ಯಾರಿಗಾಗಿ ಬರೆಯುತ್ತೀಯಪ್ಪಾ’ ಎಂದು ಕೇಳಿದಾಗ ಅವಳ ಮಾತಿನಲ್ಲಿ ನನ್ನ ಜೀವನೋಪಾಯ ಹೇಗೋ ಏನೋ ಎಂಬ ಆತಂಕ ಕೇಳಿಸುತ್ತಿತ್ತು. ‘ಯಾರಿಗಾಗಿ ಬರೆಯುತ್ತೀಯ’ ಎಂದು ಗೆಳೆಯರು ಕೇಳಿದಾಗ ಅವರ ಮಾತಿನಲ್ಲಿ ನನ್ನಂಥವನೊಬ್ಬ ಬರೆದದ್ದನ್ನು ಯಾರು ತಾನೇ ಓದುತ್ತಾರೆ ಅನ್ನುವ ಅಣಕ ಕೇಳಿಸುತ್ತಿತ್ತು. ಮೂವತ್ತು ವರ್ಷಗಳ ನಂತರ ಈ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ನನ್ನ ಕಾದಂಬರಿಗಳು ನಲವತ್ತು ಭಾಷೆಗಳಿಗೆ ಅನುವಾದಗೊಂಡಿರುವುದು ಇಂಥ ಪ್ರಶ್ನೆಗೆ ಕಾರಣ. ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸಂದರ್ಶನಗಳಲ್ಲಿ ಈ ಪ್ರಶ್ನೆ ಎದುರಾಗುತ್ತಿದೆ. ಪ್ರಶ್ನೆಯನ್ನು ನಾನು ತಪ್ಪಾಗಿ ತಿಳಿದೇನು ಅನ್ನುವ ಆತಂಕದಲ್ಲಿ ಇನ್ನೊಂದು ಮಾತು ಸೇರಿಸುತ್ತಾರೆ. ‘ನೀವು ಟರ್ಕಿಶ್ ಭಾಷೆಯಲ್ಲಿ ಬರೆಯುತ್ತೀರಿ. ಅಂದರೆ ನೀವು ಕೇವಲ ಟರ್ಕಿಯ ಜನಕ್ಕಾಗಿ ಬರೆಯುತ್ತೀರೋ ಅಥವಾ ನಿಮ್ಮ ಅನುವಾದಗಳ ಮೂಲಕ ಹೆಚ್ಚು ವಿಸ್ತಾರವಾದ ಓದುಗರ ವಲಯಕ್ಕೆ ತಲುಪುವ ಉದ್ದೇಶವಿದೆಯೋ?’ ಎನ್ನುತ್ತಾರೆ. ಈ ಪ್ರಶ್ನೆ ಟರ್ಕಿಯಲ್ಲೇ ಕೇಳಲಿ, ಟರ್ಕಿಯ ಆಚೆಯೇ ಕೇಳಲಿ, ಧ್ವನಿ ಒಂದೇ: ನನ್ನ ಕೃತಿಗಳು ಪ್ರಾಮಾಣಿಕ ಅಧಿಕೃತ ಎಂದು ಪರಿಗಣಿತವಾಗಬೇಕಾದರೆ ‘ನಾನು ಕೇವಲ ಟರ್ಕಿಯವರಿಗಾಗಿ ಬರೆಯುತ್ತೇನೆ’ ಎಂಬ ಉತ್ತರವನ್ನೇ ನೀಡಬೇಕು.

ಈ ಪ್ರಶ್ನೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ, ಮರುಕವೂ ಇಲ್ಲ. ಈ ಪ್ರಶ್ನೆಯನ್ನು ಪರಿಶೀಲಿಸುವ ಮೊದಲು ನೆನಪಿನಲ್ಲಿಡಬೇಕಾದ ಸಂಗತಿಯೊಂದಿದೆ: ಕಾದಂಬರಿಯ ಉಗಮ ಮತ್ತು ಬೆಳವಣಿಗೆ ರಾಷ್ಟ್ರಪ್ರಭುತ್ವಗಳ ಹುಟ್ಟು ಬೆಳವಣಿಗೆಯ ಜೊತೆಜೊತೆಗೇ ಆಯಿತು. ಹತ್ತೊಂಬತ್ತನೆಯ ಶತಮಾನದ ಮಹಾನ್ ಕಾದಂಬರಿಗಳು ಸಂಪೂರ್ಣ ಅರ್ಥದಲ್ಲಿ ರಾಷ್ಟ್ರೀಯ ಕಲೆಯ ಉದಾಹರಣೆಗಳಾಗಿದ್ದವು. ಡಿಕಿನ್ಸ್, ದಾಸ್ತಯೇವ್ ಸ್ಕೀ, ಟಾಲ್ಸ್ ಟಾಯ್ ಇವರೆಲ್ಲ ಆಗತಾನೇ ತಲೆ ಎತ್ತುತಿದ್ದ ಮಧ್ಯಮವರ್ಗಕ್ಕಾಗಿ ಬರೆದರು, ಅವರ ಓದುಗರ ವರ್ಗ ತಮ್ಮ ‘ರಾಷ್ಟ್ರೀಯ’ ಲೇಖಕನ ಬರಹದಲ್ಲಿ ತಾವು ದಿನ ನಿತ್ಯದ ನಿಜ ಬದುಕಿನಲ್ಲಿ ಕಾಣುತಿದ್ದ ಅದೇ ನಗರ, ಬೀದಿ, ಮನೆ, ಕೋಣೆ, ಕುರ್ಚಿ, ತಾವು ಅನುಭವಿಸುತಿದ್ದಂಥದೇ ಸಂತೋಷ, ತಾವು ಚರ್ಚಿಸುತಿದ್ದಂಥದೇ ಪ್ರಶ್ನೆಗಳನ್ನೂ ಕಾಣುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಪ್ರಮುಖ ಲೇಖಕರ ಕಾದಂಬರಿಗಳು ಮೊದಲ ಬಾರಿಗೆ ಪ್ರಕಟವಾದದ್ದು ರಾಷ್ಟ್ರೀಯ ಪತ್ರಿಕೆಗಳ ಕಲೆ ಮತ್ತು ಸಂಸ್ಕೃತಿಯ ಪುರವಣಿಗಳಲ್ಲಿ. ಯಾಕೆಂದರೆ ಈ ಲೇಖಕರು ತಮ್ಮ ರಾಷ್ಟ್ರಕ್ಕಾಗಿ ಬರೆಯುತ್ತಿದ್ದರು. ತಮ್ಮ ದೇಶ ಏಳಿಗೆ ಹೊಂದಬೇಕು ಎಂಬ ಚಡಪಡಿಕೆ ಇದ್ದ ರಾಷ್ಟ್ರಭಕ್ತನ ದನಿ ಅವರ ಕಾದಂಬರಿಗಳ ನಿರೂಪಣೆಯಲ್ಲಿ ಕೇಳಿಸುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಕಾದಂಬರಿ ಓದುವುದು ಮತ್ತೆ ಬರೆಯುವುದು ಎಂದರೆ ರಾಷ್ಟ್ರೀಯ ಪ್ರಾಮುಖ್ಯವುಳ್ಳ ಸಂಗತಿಗಳ ಚರ್ಚೆಯಲ್ಲಿ ಭಾಗವಹಿಸುವುದು ಎಂದೇ ಅರ್ಥವಾಗುತ್ತಿತ್ತು.

ಇವತ್ತು ಕಾದಂಬರಿ ಬರೆಯುವುದಕ್ಕೂ ಓದುವುದಕ್ಕೂ ತೀರ ಬೇರೆಯದೇ ಅರ್ಥ ಬಂದಿದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಇಂಥ ಬದಲಾವಣೆ ಮೊದಲು ಸಂಭವಿಸಿತು. ಸಾಹಿತ್ಯಕ ಕಾದಂಬರಿಯು ಆಧುನಿಕತೆಯ ಪ್ರಶ್ನೆಗೆ ಮುಖಾಮುಖಿಯಾಯಿತು, ಆ ಮೂಲಕ ಕಾದಂಬರಿಗೆ ‘ಉನ್ನತವಾದ ಕಲೆ’ ಎಂಬ ಸ್ಥಾನ ದೊರೆಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಆಗಿರುವ ಸಂವಹನ ಕ್ಷೇತ್ರದ ಬದಲಾವಣೆಗಳೂ ಮುಖ್ಯವಾಗಿವೆ. ಈಗಿನ ವರ್ತಮಾನ ವಿಶ್ವವ್ಯಾಪಿಯಾಗಿರುವ ಮಾಧ್ಯಮದ ಕಾಲ. ಈಗಿನ ಸಾಹಿತಿಗಳು ತಮ್ಮ ತಮ್ಮ ದೇಶದ ಮಧ್ಯಮವರ್ಗವನ್ನಷ್ಟೇ ಉದ್ದೇಶಿಸಿ ಮಾತನಾಡುವವರಲ್ಲ; ಬದಲಾಗಿ ಜಗತ್ತಿನಾದ್ಯಂತ ಇರುವ ಸಾಹಿತ್ಯಕ ಕಾದಂಬರಿಗಳ ಓದುಗರೊಂದಿಗೆ ಮಾತಾಡಬಲ್ಲವರು, ತಕ್ಷಣದಲ್ಲೇ ಮಾತಾಡಬಲ್ಲವರು. ಇಂದಿನ ಸಾಹಿತ್ಯಕ ಓದುಗರು ಗಾರ್ಸಿಯ ಮಾಕ್ರ್ವೆಜ್, ಕೋಟ್ಸೀ ಅಥವ ಪಾಲ್ ಆಸ್ಟರ್ ಕೃತಿಗಳಿಗಾಗಿ ಕಾಯುತ್ತಾರೆ-ಹಿಂದಿನ ಕಾಲದ ಜನ ಡಿಕಿನ್ಸ್ ನ ಹೊಸ ಕಾದಂಬರಿಗೆ ಕಾಯುತ್ತಿದ್ದ ಹಾಗೆಯೇ. ಇಂಥ ‘ವಾಚಕ ದಳ’ದ ಸಂಖ್ಯೆ ಲೇಖಕರ ತಾಯಿನಾಡಿನ ಒಟ್ಟು ಓದುಗರ ಸಂಖ್ಯೆಗಿಂತ ಮಿಗಿಲಾಗಿರುತ್ತದೆ.

ಲೇಖಕರು ಯಾರಿಗಾಗಿ ಬರೆಯುತ್ತಾರೆ ಎಂದು ಈ ಪ್ರಶ್ನೆಯನ್ನು ತೀರ ಸರಳ, ವ್ಯಾಪಕ ಅರ್ಥದಲ್ಲಿ ತೆಗೆದುಕೊಂಡರೆ-ಆದರ್ಶ ಓದುಗನಿಗಾಗಿ, ತಮ್ಮ ಆಪ್ತ, ಪ್ರೀತಿಪಾತ್ರರಿಗಾಗಿ, ತಮಗಾಗಿ, ಯಾರಿಗಾಗಿಯೂ ಅಲ್ಲ ಎಂಬ ಉತ್ತರಗಳನ್ನು ಕೊಡಬಹುದು. ಇದು ಸತ್ಯ, ಆದರೆ ಪೂರ್ಣ ಸತ್ಯವಲ್ಲ. ಇಂದಿನ ಸಾಹಿತಿಗಳು ತಮ್ಮನ್ನು ಯಾರು ಓದುತ್ತಾರೋ ಅವರಿಗಾಗಿ ಬರೆಯುತ್ತಾರೆ. ಅಂದರೆ ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪ ಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು: ಲೇಖಕರ ಉದ್ದೇಶದ ಬಗ್ಗೆ ತೋರುವ ಸಂಶಯವು ಕಳೆದ ಹತ್ತು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸಾಂಸ್ಕೃತಿಕ ವ್ಯವಸ್ಥೆಯನ್ನು ಕುರಿತ ಕಸಿವಿಸಿಯೇ ಆಗಿದೆ.

ಪಾಶ್ಚಾತ್ಯವಲ್ಲದ ದೇಶಗಳಲ್ಲಿರುವ ಸಾಂಸ್ಕೃತಿಕ ಸಂಘಟನೆಗಳು, ಜನಾಭಿಪ್ರಾಯ ನಿರ್ಮಾಪಕರು ಹೆಚ್ಚು ಕಸಿವಿಸಿಗೆ ಒಳಗಾಗಿದ್ದಾರೆ. ಇಂದಿನ ಜಗತ್ತಿನಲ್ಲಿ ತಮ್ಮ ಸ್ಥಾನವೇನು ಎಂಬ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳಿವಳಿಕೆ ಅವರಿಗಿಲ್ಲ. ರಾಷ್ಟ್ರೀಯ ಬಿಕ್ಕಟ್ಟುಗಳನ್ನು ಚರ್ಚಿಸುವ ಮನಸ್ಸಿಲ್ಲ. ತಮ್ಮ ಚರಿತ್ರೆಯ ಕಪ್ಪು ಚುಕ್ಕೆಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವ ಇಚ್ಛೆ ಇಲ್ಲ. ರಾಷ್ಟ್ರೀಯ ಚರಿತ್ರೆಯನ್ನು ರಾಷ್ಟ್ರೀಯವಲ್ಲದ ದೃಷ್ಟಿಕೋನದಿಂದ ನೋಡಿ ಬರೆಯುವ ಕಾದಂಬರಿಕಾರರ ಬಗ್ಗೆ ಇಂಥ ವ್ಯಕ್ತಿಗಳು, ಸಂಘಟನೆಗಳು ಸಂಶಯ ತೋರುತ್ತವೆ. ತಮ್ಮ ರಾಷ್ಟ್ರೀಯ ಓದುಗರಿಗಾಗಿ ಬರೆಯದ ಲೇಖಕರು ತಮ್ಮ ದೇಶವನ್ನು ಕುರಿತು ವಿದೇಶೀ ಗ್ರಾಹಕರಿಗಾಗಿ ಬರೆಯುವವರಾಗಿ, ವಾಸ್ತವದಲ್ಲಿ ಇಲ್ಲದಿರುವ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಬರೆಯುವವರಾಗಿ ಇಂಥ ವ್ಯಕ್ತಿ ಮತ್ತು ಸಂಘಟನೆಗಳಿಗೆ ಕಾಣುತ್ತಾರೆ. ಇದಕ್ಕೆ ಸಮಾನಾಂತರವಾದ ಸಂಶಯ ಪಶ್ಚಿಮದ ಜಗತ್ತಿನಲ್ಲೂ ಇದೆ. ಸ್ಥಳೀಯ ಸಾಹಿತ್ಯಗಳು ಸ್ಥಳೀಯವಾಗಿ ಉಳಿಯಬೇಕು, ಶುದ್ಧವಾಗಿ ಉಳಿಯಬೇಕು, ತಮ್ಮ ರಾಷ್ಟ್ರೀಯತೆಯ ಬೇರು ಕಿತ್ತುಕೊಳ್ಳಬಾರದು ಎಂದು ಪಶ್ಚಿಮದ ಅನೇಕ ಓದುಗರು ನಂಬುತ್ತಾರೆ. ತನ್ನ ಸಂಸ್ಕೃತಿಯಾಚೆಗಿನ ಪರಂಪರೆಗಳನ್ನು ಬಳಸಿಕೊಂಡು ‘ವಿಶ್ವ’ವ್ಯಾಪಕ ಲೇಖಕನಾಗುವವನು ತನ್ನ ಅಧಿಕೃತತೆಯನ್ನು ಕಳೆದುಕೊಳ್ಳುತ್ತಾನೆ ಎಂಬ ಗುಟ್ಟಾದ ಭಯ ಅವರಿಗೆ ಇರುತ್ತದೆ. ಪಕ್ಕದ ಮನೆಯವರ ಜಗಳ ನೋಡಿ ಆನಂದಿಸುವ ಹಾಗೆಯೇ ಪುಸ್ತಕದ ಹಾಳೆ ತೆರೆಯುತ್ತಿದ್ದ ಹಾಗೆ ಜಗತ್ತಿನಿಂದ ಪ್ರತ್ಯೇಕವಾಗಿ ಉಳಿದಿರುವ ಅದ್ಭುತ ನಾಡಿಗೆ ಕಾಲಿಡುವ, ಅಲ್ಲಿನ ಒಳ ಜಗಳಗಳನ್ನು ನೋಡಿ ಆನಂದಿಸುವ ಆಸೆ ಇರುವ ಓದುಗರಿಗೆ ಇಂಥ ಭಯ ಹೆಚ್ಚಾಗಿ ಕಾಡುತ್ತದೆ. ಇತರ ನುಡಿಗಳನ್ನಾಡುವ, ಇತರ ಓದುಗರನ್ನೂ ಉದ್ದೇಶಿಸಿ ಬರೆಯುವ ಲೇಖಕ ಓದುಗರಲ್ಲಿರುವ ಇಂಥ ಭ್ರಮೆಯನ್ನು ಸಾಯಿಸಿಬಿಡುತ್ತಾನೆ.

ಅಧಿಕೃತವಾಗಿರಬೇಕು, ಅಥೆಂಟಿಕ್ ಆಗಿರಬೇಕು ಎಂಬ ಆಸೆ ಎಲ್ಲ ಲೇಖಕರಿಗೂ ಇರುತ್ತದೆ. ಹಾಗಾಗಿ ಇಷ್ಟೆಲ್ಲ ವರ್ಷ ಕಳೆದ ಮೇಲು ನಾನು ಯಾರಿಗಾಗಿ ಬರೆಯುತ್ತೇನೆ ಅನ್ನುವ ಪ್ರಶ್ನೆಗೆ ಎದುರಾಗುವುದು ನನಗೆ ಇಷ್ಟ. ತಾನು ಬದುಕಿರುವ ಲೋಕಕ್ಕೆ ಮುಖಾಮುಖಿಯಾಗುವ ಸಾಮರ್ಥ್ಯವನ್ನು ಅವಲಂಬಿಸಿ ಲೇಖಕನ ಅಧಿಕೃತತೆ ನಿರ್ಧಾರವಾಗುತ್ತದೆ. ಹಾಗೆಯೇ ಜಗತ್ತಿನಲ್ಲಿ ಬದಲಾಗುತ್ತಿರುವ ತನ್ನ ಸ್ಥಾನ ಕುರಿತ ತಿಳಿವಳಿಕೆಯೂ ಅಧಿಕೃತತೆಗೆ ಅಗತ್ಯವಾದ ಇನ್ನೊಂದು ಅಂಶ. ಸಾಮಾಜಿಕ ವಿಧಿನಿಷೇಧಗಳಿಂದ, ರಾಷ್ಟ್ರೀಯ ‘ಪುರಾಣ’ಗಳಿಂದ ಬಾಧಿತನಾಗದ ಆದರ್ಶ ಓದುಗನೆಂಬಾತ ಇಲ್ಲ. ಹಾಗೆಯೇ ರಾಷ್ಟ್ರೀಯವಾಗಿರಲಿ, ಅಂತಾರಾಷ್ಟ್ರೀಯವಾಗಿರಲಿ ಆದರ್ಶ ಕಾದಂಬರಿಕಾರನೂ ಇಲ್ಲ. ಆದರೂ ಎಲ್ಲ ಕಾದಂಬರಿಕಾರರೂ ಆದರ್ಶ ಓದುಗನನ್ನು ಉದ್ದೇಶಿಸಿಯೇ ಬರೆಯುತ್ತಾನೆ. ಮೊದಲು ಅವನನ್ನು ಕಲ್ಪಿಸಿಕೊಳ್ಳುತ್ತಾರೆ, ಆನಂತರ ಅವನನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಾನೆ.

 

(ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಮಾಡಿದ ಭಾಷಣ ಮಾಲಿಕೆಯನ್ನು ಕನ್ನಡದ ಅನನ್ಯ ಭಾಷಾಂತರಕಾರ ಓ.ಎಲ್. ನಾಗಭೂಷಣ ಸ್ವಾಮಿ ‘ಮುಗ್ಧ-ಪ್ರಬುದ್ಧ’ – ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಪ್ರಕಟಣೆಗೆ ಸಿದ್ದವಾಗಿರುವ ಈ ಪುಸ್ತಕದ ಆಯ್ದ ಅಧ್ಯಾಯಗಳು ಕೆಂಡಸಂಪಿಗೆಯಲ್ಲಿ ಪ್ರತಿ ವಾರ ಪ್ರತ್ಯಕ್ಷವಾಗಲಿವೆ)