ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 51ನೇ ಕಂತು ಇಲ್ಲಿದೆ.

ಸೋವಿಯತ್ ಅಧಿಕಾರಿಗಳು ೧೯೮೩ರ ಆಗಸ್ಟ್ ಮೂರನೇ ವಾರದಲ್ಲಿ ಭಾರತೀಯ ದೂತಾವಾಸದ ಸಿಬ್ಬಂದಿ ಜೊತೆಗೆ ಔತಣಕೂಟ ಏರ್ಪಡಿಸಿದ್ದರು. ಮಾಸ್ಕೋದಲ್ಲಿ ಪ್ರೇಕ್ಷಣೀಯ ಸ್ಥಳಗಳು ಮತ್ತು ವಿವಿಧ ಸಭೆಗಳು ಮುಗಿದ ಮೇಲೆ, ಮೊದಲೇ ತಿಳಿಸಿದಂತೆ ನಮ್ಮ ನಿಯೋಗದ ಸದಸ್ಯರು ವಿವಿಧ ಗುಂಪುಗಳಾಗಿ ಬೇರ್ಪಟ್ಟರು.

ಬೈಲೊರಷ್ಯಾ (ಬೆಲಾರುಸ್) ರಾಜಧಾನಿ ಮಿನ್ಸ್ಕ್‌ಗೆ ಕರೆದೊಯ್ಯುವುದಾಗಿ ನನಗೆ ಮತ್ತು ಡಾ|| ಪಿ.ಎಸ್. ಶಂಕರ್ ಅವರಿಗೆ ಅಧಿಕಾರಿಗಳು ಮೊದಲೇ ತಿಳಿಸಿದ್ದರು. ಉಳಿದವರು ಬೇರೆ ಕಡೆ ಹೋದರು. ಮುಂದೆ ನಮ್ಮಲ್ಲಿ ಕೆಲವರು ಲೆನಿನ್‌ಗ್ರಾಡ್‌ನಲ್ಲಿ ಸೇರುವುದಾಗಿ ಅಧಿಕಾರಿಗಳು ತಿಳಿಸಿದರು. ನಮಗೆಲ್ಲ ಕಾಣಿಕೆಗಳನ್ನು ಕೊಟ್ಟು ಬೀಳ್ಕೊಡಲಾಯಿತು. ನಮಗೆ ರಷ್ಯನ್ ರೈಲಿನ ಅನುಭವ ಆಗಲಿ ಎಂಬ ಉದ್ದೇಶದೊಂದಿಗೆ ಅಂದು ರಾತ್ರಿ ರೈಲು ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು.

ನಮ್ಮ ಮಾಸ್ಕೋ ಗೈಡ್ ಎಲ್ಲ ರೀತಿಯ ವ್ಯವಸ್ಥೆ ಮಾಡಿ ಬೀಳ್ಕೊಟ್ಟರು. ಅದು ಒಂದು ರಾತ್ರಿಯ ಪ್ರಯಾಣ. ನಮ್ಮಿಬ್ಬರಿಗೂ ಪ್ರತ್ಯೇಕ ಕೂಪೆಯ ವ್ಯವಸ್ಥೆ ಮಾಡಲಾಗಿತ್ತು. ಆ ಕೂಪೆ ಪುಟ್ಟ ಪಂಚತಾರಾ ಹೊಟೇಲ್ ರೂಮಿನ ಹಾಗೆ ವ್ಯವಸ್ಥಿತವಾಗಿತ್ತು. ಚಳಿ ತಡೆಯಲು ಡಬಲ್ ರಗ್ ಮತ್ತು ಓವರ್ ಕೋಟ್‌ಗಳೂ ಇದ್ದವು. ಎಲ್ಲವನ್ನೂ ಕಬರ್ಡ್‌ನಲ್ಲಿ ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು. ಪ್ರತಿ ಬೋಗಿಗೆ ಒಬ್ಬ ಸಿಬ್ಬಂದಿ ಮತ್ತು ರಾತ್ರಿ ಬಯಸಿದಾಗಲೆಲ್ಲ ಟಿ ಮತ್ತು ಕಾಫಿ ಪೂರೈಸುವ ಯುವತಿ ಹೀಗೆ ಎಲ್ಲ ರೀತಿಯ ವ್ಯವಸ್ಥೆ ಇದ್ದದ್ದು ನೋಡಿ ಆಶ್ಚರ್ಯವೆನಿಸಿತು.

ರೈಲು ಬೆಳಿಗ್ಗೆ ರಾಜಧಾನಿ ಮಿನ್ಸ್ಕ್ ರೈಲು ನಿಲ್ದಾಣ ತಲುಪಿದಾಗ ಚಾಲಕ ಮತ್ತು ಒಬ್ಬ ಸ್ವಾಗತಕಾರರು ಕಾಯುತ್ತಿದ್ದರು. ಅವರು ನಮ್ಮ ಲಗೇಜ್ ತೆಗೆದುಕೊಳ್ಳಲು ಬಂದರು. ನಾನು ನಿರಾಕರಿಸಿದೆ. ಆದರೆ ಆ ಸ್ವಾಗತಕಾರರು “ನೀವು ನಮ್ಮ ಅತಿಥಿ. ನಿಮ್ಮ ಲಗೇಜ್ ಎತ್ತಿಕೊಂಡು ಸ್ವಾಗತಿಸುವುದು ನಮ್ಮ ಸಂಸ್ಕೃತಿ” ಎಂದರು. ಅನಿವಾರ್ಯವಾಗಿ ಲಗೇಜ್ ಕೊಡಬೇಕಾಯಿತು. ಫುಲ್ ಸೂಟಿನಲ್ಲಿದ್ದ ಅವರು ನನ್ನ ಸೂಟ್‌ಕೇಸ್ ಹಿಡಿದುಕೊಂದು ನಡೆದರು. ಚಾಲಕ ಇನ್ನೊಂದು ಲಗೇಜ್ ಎತ್ತಿಕೊಂಡರು. ನಮ್ಮನ್ನು ಅಲ್ಲಿನ ಪ್ರಸಿದ್ಧ ಹೋಟೆಲ್ ಪ್ಲನೋತಾ(ಪ್ಲ್ಯಾನೆಟ್)ದಲ್ಲಿ ಇಳಿಸಿದರು. ಅಲ್ಲಿ ನಮ್ಮ ಯುವ ಗೈಡ್ ಗಲೀನಾ ಕಾಯುತ್ತಿದ್ದರು. ನನ್ನ ಲಗೇಜ್ ಹಿಡಿದವರು ಎರಡನೇ ಮಹಾಯುದ್ಧದಲ್ಲಿ ವೀರೋಚಿತವಾಗಿ ಹೋರಾಡುತ್ತ ಹಿಟ್ಲರ್‌ನ ನಾಜಿ ಪಡೆಗಳನ್ನು ಹಿಮ್ಮೆಟ್ಟಿಸಿದ್ದಕ್ಕಾಗಿ ಉನ್ನತ ಪ್ರಶಸ್ತಿ ಪಡೆದವರು ಎಂಬುದು ಗಲೀನಾ ನನಗೆ ನಂತರ ತಿಳಿಸಿದರು!

ಹೊಟೇಲ್ ಪ್ರವೇಶಿಸುತ್ತಿದ್ದಂತೆ ಒಬ್ಬ ಯುವಕ ರಿಸೆಪ್ಷನ್ ಎದುರಿನ ಫ್ಲೋರ್ ಕ್ಲೀನ್ ಮಾಡುತ್ತಿದ್ದ. ಆಗ ಕ್ಲೀನಿಂಗ್ ಮಷೀನ್ ಇದ್ದಿದ್ದಿಲ್ಲ. ಉದ್ದನೆ ಕೋಲಿನ ಹ್ಯಾಂಡ್ ಕ್ಲೀನರ್‌ನಿಂದ ಕ್ಲೀನ್ ಮಾಡುತ್ತಿದ್ದ. ಅವನ ತಲ್ಲೀನತೆ ಖುಷಿ ಕೊಟ್ಟರೂ ಆ ಯುವಕ ಓದುವುದನ್ನು ಬಿಟ್ಟು ಇದನ್ನೇಕ್ಕೆ ಮಾಡುತ್ತಿದ್ದಾನೆ ಎಂದು ಕೇಳುವ ಕುತೂಹಲ ನನಗೆ. ಆದರೆ ಗೈಡ್ ಮುಂತಾದವರ ಮುಂದೆ ಕೇಳುವುದು ತರವಲ್ಲ ಎಂದು ಸುಮ್ಮನಾದೆ. ನನಗೆ ಕಾದಿರಿಸಿದ ರೂಮಿಗೆ ಹೋಗಿ ಪೂರ್ವ ನಿಗದಿತ ಅರ್ಧ ಗಂಟೆಯೊಳಗೆ ರೆಡಿಯಾಗಿ ತಿಂಡಿತಿನ್ನಲು ಹೋದೆ. ರಿಸಪ್ಷನ್‌ನಲ್ಲಿ ಗಲೀನಾ ಕಾಯುತ್ತಿದ್ದರು. ಎಲ್ಲರೂ ಕೂಡಿ ತಿಂಡಿ ತಿಂದ ಮೇಲೆ, ಒಂದು ಗಂಟೆ ಬಿಟ್ಟು ಬರುವುದಾಗಿ ಹೇಳಿ ಗಲೀನಾ ಹೋದರು. ಅದೇ ವೇಳೆಗೆ ಆ ಯುವಕ ಕೆಲಸ ಮುಗಿಸಿ ಹೊರಗೆ ಹೊರಟಿದ್ದ. ನಾನು ಮಾತನಾಡಿಸಿದೆ. ನಿನ್ನದು ಕಲಿಯುವ ವಯಸ್ಸು, ಈ ಕೆಲಸವೇಕೆ ಮಾಡುತ್ತಿರುವಿ ಎಂದು ಅರ್ಧಮರ್ಧ ರಷ್ಯನ್ ಭಾಷೆಯಲ್ಲಿ ಒದ್ದಾಡುತ್ತ ಕೇಳಿದೆ. ಆತನಿಗೆ ಒಂದಿಷ್ಟು ಇಂಗ್ಲಿಷ್ ಬರುವುದು ಗೊತ್ತಾಗಿ ಸಂತೋಷವಾಯಿತು. ಆತ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ. ಈ ಕೆಲಸದ ಅವಧಿ ಕಡಿಮೆ ಮತ್ತು ಸಂಬಳ ಜಾಸ್ತಿ. ಹೀಗಾಗಿ ಇದನ್ನೇ ಆಯ್ಕೆ ಮಾಡಿಕೊಂಡೆ. ಇದರಿಂದ ನನ್ನ ಸಂಶೋಧನೆಗೆ ಹೆಚ್ಚಿನ ಸಮಯ ಮತ್ತು ಹೆಚ್ಚಿನ ಹಣದ ವ್ಯವಸ್ಥೆಯಾಗುವುದು ಎಂದು ತಿಳಿಸಿದ! ಸೋವಿಯತ್ ದೇಶದಲ್ಲಿ ಕೆಲಸ ಮಾಡಿಸುವವರಿಗಿಂತ ಕೆಲಸ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಿದ್ದುದನ್ನು ಕೇಳಿ ಆಶ್ಚರ್ಯವೆನಿಸಿತು.

ಅರ್ಧ ಗಂಟೆಯೊಳಗೆ ನಾವು ರೆಡಿಯಾಗಿದ್ದೆವು. ಸರಿಯಾದ ಸಮಯಕ್ಕೆ ಗಲೀನಾ ಬಂದರು. ಜೊತೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ ಲಿಡಿಯಾ ಇದ್ದರು. ಅವರು ನಮ್ಮನ್ನು ಅಲ್ಲಿನ ವಾರ್ ಮ್ಯೂಜಿ಼ಯಮ್‌ಗೆ ಕರೆದುಕೊಂಡು ಹೋದರು. ಎರಡನೇ ಮಹಾಯುದ್ಧದ ಕ್ರೌರ್ಯವನ್ನು ಕಣ್ಣಿಗೆ ಕಟ್ಟುವಂಥ ಮ್ಯೂಜಿ಼ಯಂ ಅದಾಗಿತ್ತು. ಲಿಡಿಯಾ ಅವರ ವಿದ್ಯಾರ್ಥಿನಿ ಅಲ್ಲಿನ ಮ್ಯೂಜಿ಼ಯಂ ಗೈಡ್ ಆಗಿದ್ದಳು. ಅವಳು ಬಹಳ ಖುಷಿಯಿಂದ ಮ್ಯೂಜಿ಼ಯಂ ಕುರಿತು ವಿವರಿಸಿದಳು.

ನಂತರ ನಾವು ಹಿಂದೆ ಎಂದೂ ಕಾಣದಂಥ ಭಾರಿ ವಾಹನ ಉತ್ಪಾದನಾ ಸ್ಥಳಕ್ಕೆ ಮತ್ತು ಕಸದಿಂದ ಗೊಬ್ಬರ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದೆವು. ವಾಪಸ್ ಬರುವಾಗ ನಾನು ಎರಡು ದೃಶ್ಯಗಳನ್ನು ನೋಡಿ ಚಕಿತನಾದೆ. ಒಬ್ಬ ಯುವತಿ ಎಲೆಕ್ಟ್ರಿಕ್ ಕಂಬದ ಮೇಲೆ ಹತ್ತಿ ಲೈನ್ ರಿಪೇರಿ ಮಾಡುತ್ತಿದ್ದಳು. ಇನ್ನೊಬ್ಬಳು ಯುವತಿಯ ಪ್ಯಾಂಟ್ ಷರ್ಟ್ ಸ್ವಲ್ಪ ರಾಡಿ ಆಗಿದ್ದವು. ಆಕೆ ಪಾರ್ಕಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಅಗೆಯುವ ಉಪಕರಣವೊಂದನ್ನು ಹಿಡಿದುಕೊಂಡು ಇನ್ನಿಬ್ಬರ ಜೊತೆ ಮಾತನಾಡುತ್ತ ನಗುತ್ತ ಬರುತ್ತಿದ್ದಳು. ಆ ಇಬ್ಬರೂ ಯುವತಿಯರು ಪುರುಷ ಅಹಂಕಾರಕ್ಕೆ ಸವಾಲೆಂಬಂತೆ ಕಾಣಿಸಿದರು.

ನಾವು ಮರುದಿನ ಬೇಗ ಯುದ್ಧವಿರೋಧಿ ಖತಿನ ಸ್ಮಾರಕ ಸಮುಚ್ಚಯಕ್ಕೆ ಹೋಗಬೇಕಿತ್ತು. ಬೆಳಿಗ್ಗೆ ಗಲೀನಾ ಸರಿಯಾದ ಸಮಯಕ್ಕೆ ಬಂದರು. ನಾವು ಅವರ ಕೂಡ ಕಾರು ಹತ್ತಿ ೬೪ ಕಿಲೊ ಮೀಟರ್ ದೂರದ ಖತಿನ್ ಸ್ಮಾರಕ ಸಮುಚ್ಚಯ ನೋಡಲು ಹೊರಟೆವು.

ನಿಸರ್ಗ ಸೌಂದರ್ಯದ ಮಧ್ಯೆ ಇದ್ದ ಪುಟ್ಟ ಖತಿನ್ ಗ್ರಾಮದ ಒಟ್ಟು ೨೬ ಮನೆಗಳಲ್ಲಿ ೧೫೭ ಜನ ವಾಸಿಸುತ್ತಿದ್ದರು. ಹಿಟ್ಲರನ ಸೈನ್ಯದ ವಿರುದ್ಧ ಹೋರಾಡುತ್ತಿದ್ದ ಕೆಂಪುಸೈನ್ಯಕ್ಕೆ ಸಹಾಯಕರಾಗಿದ್ದ ಪಾರ್ಟಿಸಾ಼ನ್ ಗೆರಿಲ್ಲಾ ಹೋರಾಟಗಾರರಿಗೆ ಈ ಹಳ್ಳಿಯವರು ಸಹಕಾರ ನೀಡುತ್ತಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಹಿಟ್ಲರ್‌ನ ಮುನ್ನೂರು ನಾಜಿ ಸೈನಿಕರು ೨೨ನೇ ಮಾರ್ಚ್ ೧೯೪೩ ರಂದು ಬೆಳಿಗ್ಗೆ ಈ ಹಳ್ಳಿಯನ್ನು ಸುತ್ತುವರಿದರು. ಸೇನಾಧಿಕಾರಿ ದಿರ್ಲೆವ್ಯಾಂಗರ್‌ನ ಆಜ್ಞೆಯಂತೆ ಅಲ್ಲಿನ ೨೬ ಮನೆಗಳ ೧೫೨ ಜನರನ್ನು ಸೆರೆಹಿಡಿದರು. ಉಳಿದ ಇಬ್ಬರು ಬಾಲಕರು ಮತ್ತು ಒಬ್ಬ ಬಾಲಕಿ ತಪ್ಪಿಸಿಕೊಂಡಿದ್ದರು. ಇಬ್ಬರು ಮಹಿಳೆಯರು ಪರವೂರಲ್ಲಿದ್ದರು.

ಹಿಟ್ಲರನ ಸೈನಿಕರು ಸೆರೆ ಹಿಡಿದವರನ್ನು ಎಳೆದು ತಂದರು. ಹಲಗೆಗಳಿಂದ ನಿರ್ಮಿಸಿದ ಧಾನ್ಯಾಗಾರದಲ್ಲಿ ಅವರನ್ನೆಲ್ಲ ನೂಕಿ ಬಾಗಿಲು ಹಾಕಿದರು. ಮಕ್ಕಳು, ಮುದುಕರು, ಕೂಸು ಹೊತ್ತ ತಾಯಂದಿರು, ಹೆಂಗಸರು ಮತ್ತು ಗಂಡಸರು ಹೀಗೆ ಬಂಧಿಸಿದ ೧೫೨ ಜನರನ್ನೆಲ್ಲ ಧಾನ್ಯಾಗಾರದಲ್ಲಿ ಕುರಿಗಳ ಹಾಗೆ ತುಂಬಿದರು. ಏನೋ ಭಯಂಕರವಾದುದು ಕಾದಿದೆ ಎಂಬುದು ಎಲ್ಲರಿಗೂ ಗೊತ್ತಾಯಿತು. ಆದರೆ ಕಲ್ಪನೆಗೂ ಮೀರಿದ ದುರಂತವನ್ನು ಅವರು ಅನುಭವಿಸಿದರು.

ಸೇನಾಧಿಕಾರಿಯ ಆಜ್ಞೆಯಾಯಿತು. ಹಲಗೆಗಳಿಂದ ನಿರ್ಮಿಸಿದ ಧಾನ್ಯಾಗಾರಕ್ಕೆ ನಾಜಿ ಸೈನಿಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ೧೪೯ ಜನರ ಮಾರಣಹೋಮವಾಯಿತು. ಅವರಲ್ಲಿ ೭೫ ಮಕ್ಕಳಿದ್ದರು. ಅಲ್ಲಿ ವಿಚಾರಣೆ ಇರಲಿಲ್ಲ. ಇದ್ದದ್ದು ದ್ವೇಷದ ಬೆಂಕಿ ಮಾತ್ರ. ನಂತರ ಆ ನಾಜಿಗಳು (ಫ್ಯಾಸಿಸ್ಟರು) ಖತಿನ್ ಗ್ರಾಮವನ್ನು ಲೂಟಿ ಮಾಡಿದ ಮೇಲೆ ಸುಟ್ಟು ಬೂದಿಮಾಡಿದರು.

೧೫೨ ಜನರಲ್ಲಿ ಬದುಕುಳಿದವರೆಂದರೆ ೫೬ ವರ್ಷದ ಕಮ್ಮಾರ ಯುಸಿ಼ಫ್ ಕಮಿನ್‌ಸ್ಕಿ ಮತ್ತು ಇಬ್ಬರು ಬಾಲಕರು. ಬಾಲಕ ಅಂತೋನ್‌ನ ಎರಡೂ ಕಾಲುಗಳು ಸುಟ್ಟಿದ್ದು ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ವಿಕ್ಟರ್ ಎಂಬ ಬಾಲಕ ತನ್ನ ತಾಯಿಯ ಹೆಣದ ಕೆಳಗೆ ಬದುಕುಳಿದಿದ್ದ!

ಯುಸಿ಼ಫ್ ಧಾನ್ಯಾಗಾರದೊಳಗಿನ ಭಯಾನಕ ಕ್ಷಣಗಳನ್ನು ಹೀಗೆ ವಿವರಿಸಿದ:

‘ಮೊದಲು ಚಾವಣಿಯಿಂದ ಕಿಡಿ ಏಳತೊಡಗಿತು. ನಂತರ ಉರಿಯುತ್ತಿರುವ ಹುಲ್ಲು ಬೀಳಲಾರಂಭಿಸಿತು. ಬಾಗಿಲನ್ನು ಮುರಿದು ಹೊರಗೆ ಓಡುವುದರ ಬಗ್ಗೆ ಜನ ಮೊದಲಿಗೆ ಯೋಚಿಸಿದರು. ಹಾಗೆ ಮಾಡಿದರೆ ಮಷಿನ್‌ಗನ್‌ಗಳಿಗೆ ಆಹುತಿಯಾಗುವುದನ್ನು ಅವರು ಅರಿತಿದ್ದರು…… ಧಾನ್ಯಾಗಾರ ಅಗ್ನಿಕುಂಡವಾಯಿತು. ಕೂದಲು ಸುಡಲಾರಂಭಿಸಿದವು. ಚರ್ಮ ಸುಲಿದು ಬಟ್ಟೆಗಳಲ್ಲಿ ಹೊಗೆಯಾಡಲಾರಂಭಿಸಿತು.’

ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.

(ಹಿಟ್ಲರನ ನಾಜಿ (ಫ್ಯಾಸಿಸ್ಟ್) ಸೈನ್ ಬೈಲೋರಷ್ಯದ ೧೮೬ ಗ್ರಾಮಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದರ ಸಂಕೇತ)

ಎರಡನೆಯ ಮಹಾಯುದ್ಧದಲ್ಲಿ ಸೋವಿಯತ್ ದೇಶ ೨ ಕೋಟಿ ೨೦ ಲಕ್ಷ ಜನರನ್ನು ಕಳೆದುಕೊಂಡಿದೆ. ೧೯೪೧ ರಿಂದ ೧೯೪೪ರ ಅವಧಿಯಲ್ಲಿ ನಾಜಿಗಳು ಬೈಲೋರಷ್ಯಾ ಒಂದರಲ್ಲೇ ೨೨ ಲಕ್ಷ ೩೦ ಸಾವಿರ ಜನರ ಕೊಲೆ ಮಾಡಿದ್ದಾರೆ. ೨೦೯ ಪಟ್ಟಣ ಮತ್ತು ೯,೨೦೦ ಗ್ರಾಮಗಳನ್ನು ಸುಟ್ಟಿದ್ದಾರೆ. ಅವುಗಳಲ್ಲಿ ೪೩೩ ಗ್ರಾಮಗಳು ಸಂಪೂರ್ಣವಾಗಿ ಪುನರ್ನಿರ್ಮಿಸದಷ್ಟು ಹಾಳಾಗಿದ್ದವು. ಖತಿನ್ ರೀತಿಯಲ್ಲಿ ನಾಶವಾದ ೧೮೬ ಗ್ರಾಮಗಳಿಗೆ ಮತ್ತೆ ಜೀವ ಕೊಡಲಾಗಲಿಲ್ಲ.

ನಾಶದ ನಂತರ ಖತಿನ್ ಗ್ರಾಮವಾಗಿ ಉಳಿಯದೆ ಎರಡನೆಯ ಮಹಾಯುದ್ಧದಲ್ಲಿ ಬೈಲೋರಷ್ಯಾದ ಒಟ್ಟು ಸಾವು ನೋವು ಹಾಗೂ ವಿಧ್ವಂಸದ ಸ್ಮಾರಕವಾಗಿ ೫೦ ಹೆಕ್ಟೇರ್ ಪ್ರದೇಶದಲ್ಲಿ ನಿಂತಿದೆ. ವಾಸ್ತುಶಿಲ್ಪಿಗಳಾದ ವೈ. ಗ್ರಾದೊವ್, ವಿ. ಜಂಕೋವಿಚ್, ಎಲ್. ಲೆವಿನ್ ಅವರು ಮೂರ್ತಿಶಿಲ್ಪಿ ಎಸ್. ಸೆಲಿಕನೊವ್ ಮತ್ತು ಮುಖ್ಯ ವಿನ್ಯಾಸಗಾರ ವಸ್ಸಿಲಿ ಮತರವಿಚ್ ಅವರ ಜೊತಗೂಡಿ ಖತಿನ್ ಸ್ಮಾರಕದ ನೆಪದಲ್ಲಿ ಕಲ್ಲು ಕಾಂಕ್ರಿಟ್ ಮತ್ತು ಮಿಶ್ರಲೋಹಗಳಿಂದ ಯುದ್ಧವಿರೋಧಿ ಮಹಾಕಾವ್ಯವನ್ನೇ ರಚಿಸಿದ್ದಾರೆ.

ವಿಶಾಲವಾದ ಖತಿನ್ ಸ್ಮಾರಕ ಸಮುಚ್ಚಯ ತಲುಪಲು ಮಿನ್‌ಸ್ಕ್ನಿಂದ ೫೪ ಕಿಲೊ ಮೀಟರ್ ಹೆದ್ದಾರಿ ಕ್ರಮಿಸಿದ ನಂತರ ಉಳಿದ ೧೦ ಕಿಲೋ ಮೀಟರ್ ದೂರನ್ನು ಕಾಡಿನ ದಾರಿಯಿಂದ ಕ್ರಮಿಸಬೇಕಾಗುವುದು. ಅದು ಖತಿನ್ ಸ್ಮಾರಕ ಬೀದಿ. ಆ ತಿರುವಿನಲ್ಲೇ ಕಾಂಕ್ರಿಟ್‌ನಿಂದ ತಯಾರಿಸಿದ ಬೃಹತ್ ಅಕ್ಷರಗಳಿಂದ ಖತಿನ್ ಎಂದು ಬರೆಯಲಾಗಿದೆ. ಆ ಪುಟ್ಟ ಹಳ್ಳಿ ಜೀವಂತವಿದ್ದಾಗ ಈ ಬೃಹತ್ ಹೆಸರು ಇದ್ದಿಲ್ಲ!

ಶಿಲಾಶಾಸನದಿಂದ ಸ್ಮಾರಕ ಸಮುಚ್ಚಯ ಪ್ರಾರಂಭವಾಗುತ್ತದೆ. ಸ್ವಲ್ಪ ಮುಂದೆ ಹೋದರೆ ಬಲಗಡೆಗೆ ಧಾನ್ಯಾಗಾರ ಇದ್ದ ಸ್ಥಳದಲ್ಲಿ ಉರಿದು ಬೀಳುತ್ತಿರುವ ಅವಶೇಷಗಳನ್ನು ಸೂಚಿಸುವ ಧಾನ್ಯಾಗಾರದ ಸ್ಮಾರಕವಿದೆ. ಎಡಗಡೆಗೆ ಜೀವಂತ ಸುಟ್ಟುಹೋದ ಖತಿನ್ ನಿವಾಸಿಗಳನ್ನು ಸಾಮೂಹಿಕವಾಗಿ ಹೂಳಿದ ಸ್ಥಳವಿದೆ. ಯುಸಿ಼ಫ್ ಕಮಿನ್‌ಸ್ಕಿಯ ಕಪ್ಪುಶಿಲೆಯ ೨೦ ಅಡಿ ಎತ್ತರದ ಮೂರ್ತಿ ಇವೆರಡರ ಮಧ್ಯೆ ಎದ್ದು ಕಾಣುವುದು. ಅರೆಸುಟ್ಟ ಬಟ್ಟೆಯಲ್ಲಿ ಆತನ ಎದೆ ಕಾಣುತ್ತಿದೆ. ವಿಶ್ವಕ್ಕೇ ತೋರಿಸುವ ರೀತಿಯಲ್ಲಿ ಸತ್ತ ಮಗನನ್ನು ಎತ್ತಿ ಹಿಡಿದಿದ್ದಾನೆ. ತಂದೆಯ ಇಚ್ಛೆಯಂತೆ ಬದುಕಲು ಹೋಗಿ ಮಗ ಸತ್ತ. ಸತ್ತ ಮಗ ಮತ್ತು ಒಟ್ಟು ದುರಂತವನ್ನು ನೋಡಲು ತಂದೆ ಬದುಕಿದ! ಶಿಲ್ಪಿ ಸೆಲಿಕನೊವ್ ಈ ಸಂಕೀರ್ಣವನ್ನು ಮನಸೂರೆಗೊಳ್ಳುವಂತೆ ಸೃಷ್ಟಿಸಿದ್ದಾರೆ.

(ಖತಿನ ಸ್ಮಾರಕ ಸಮುಚ್ಚಯದ ವಿಹಂಗಮ ನೋಟ.)

ವಾಪಸ್ ಬರುವಾಗ ನಾನು ಎರಡು ದೃಶ್ಯಗಳನ್ನು ನೋಡಿ ಚಕಿತನಾದೆ. ಒಬ್ಬ ಯುವತಿ ಎಲೆಕ್ಟ್ರಿಕ್ ಕಂಬದ ಮೇಲೆ ಹತ್ತಿ ಲೈನ್ ರಿಪೇರಿ ಮಾಡುತ್ತಿದ್ದಳು. ಇನ್ನೊಬ್ಬಳು ಯುವತಿಯ ಪ್ಯಾಂಟ್ ಷರ್ಟ್ ಸ್ವಲ್ಪ ರಾಡಿ ಆಗಿದ್ದವು. ಆಕೆ ಪಾರ್ಕಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಅಗೆಯುವ ಉಪಕರಣವೊಂದನ್ನು ಹಿಡಿದುಕೊಂಡು ಇನ್ನಿಬ್ಬರ ಜೊತೆ ಮಾತನಾಡುತ್ತ ನಗುತ್ತ ಬರುತ್ತಿದ್ದಳು. ಆ ಇಬ್ಬರೂ ಯುವತಿಯರು ಪುರುಷ ಅಹಂಕಾರಕ್ಕೆ ಸವಾಲೆಂಬಂತೆ ಕಾಣಿಸಿದರು.

ದುಃಖದ ಸಂಕೇತದಂತೆ ಕಾಣುವ ಈ ಮೂರ್ತಿಯನ್ನು ಅಕ್ಕಪಕ್ಕದ ಮತ್ತು ಹಿಂದೆ ಹಬ್ಬಿರುವ ವಿವಿಧ ಸ್ಮಾರಕಗಳ ಹಿನ್ನೆಲೆಯಲ್ಲಿ ನೋಡಿದಾಗ ‘ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ’ ಎಂಬ ಸಂದೇಶವನ್ನು ಸಾರುವ ಕಾವ್ಯಪ್ರತಿಮೆ ಎನಿಸುತ್ತದೆ. ಯಾವ ರಾಗದ್ವೇಷವನ್ನೂ ಸೂಚಿಸದ ಅದು ಎಂಥ ಕೊಲೆಗಡುಕನ ಹೃದಯವನ್ನೂ ತಲ್ಲಣಿಸುತ್ತದೆ. ಶಿಲ್ಪಿಯ ಹೃದಯದಲ್ಲಿ ಅಡಗಿದ ಸತ್ವಶಾಲಿ ಕವಿಯೊಬ್ಬ ಈ ಮೂರ್ತಿಯನ್ನು ಕೆತ್ತಿದ್ದಾನೆ ಎನ್ನುವಷ್ಟು ಕಾವ್ಯಮಯವಾಗಿದೆ. ಅದರ ನಯನಾಜೂಕೇ ಬೇರೆ. ಕಣ್ಣಿಗಿಂತ ಹೆಚ್ಚಾಗಿ ಹೃದಯಕ್ಕೆ ಕಾಣುವಂಥದ್ದು. ಯೋಚಿಸಿದಂತೆಲ್ಲ ‘ಧ್ವನಿ’ಯಾಗಿ ನಮ್ಮ ಆತ್ಮದೊಳಗೇ ಮನೆ ಮಾಡಿ ಸದಾ ಮಿಡಿಯುವಂಥದ್ದು.

ಮಾನವ ದುರಂತಗಳನ್ನು ಇಷ್ಟೊಂದು ಆತ್ಮೀಯವಾಗಿ ರಕ್ಷಿಸುವ ಸನ್ನಿವೇಶ ಮರುಕಳಿಸದಿರಲಿ. ಬುದ್ಧಿ ಹೃದಯಕ್ಕೆ ಮೋಸಮಾಡುವಂತೆ ನಾಗರೀಕತೆ ಬೆಳೆಯದಿರಲಿ. ತಾನೇ ನಿರ್ಮಿಸಿದ ವಸ್ತುಗಳ ಮುಂದೆ ಮಾನವ ಕುಬ್ಜನಾಗಿ ನಿಲ್ಲುವುದು ನಿಜವಾದ ದುರಂತ. ಪ್ರೇಮಭಾವ ಕಳೆದ ಮೇಲೆ ಇದೇ ಆಗೋದು. ಬದುಕು ಎಲ್ಲಕ್ಕಿಂತ ಸುಂದರವಾಗಿದೆ. ಶಾಂತಿ ನೆಲೆಸಿದ ಸಮಾಜದಲ್ಲಿ ಮಾತ್ರ ಮಾನವ ಎಲ್ಲಕ್ಕಿಂತ ವಿಶಾಲವಾಗಿ ಬೆಳೆಯಲು ಸಾಧ್ಯ. ಯುದ್ಧದ ವಿರುದ್ಧ ಪ್ರಬಲ ಯುದ್ಧ ಸಾರುವುದೆಂದರೆ ಶಾಂತಿಗಾಗಿ ಎಲ್ಲವನ್ನೂ ಅರ್ಪಿಸುವುದು. ಹೀಗೆ ಆ ಪ್ರತಿಮೆ ಕಾವ್ಯಧ್ವನಿಯಾಗಿ ಹೇಳುತ್ತಲೇ ಇರುವುದು.

(ಸಾವಿನ ಶಿಬಿರದ ಗೋಡೆಗಳ ಪ್ರತಿಕೃತಿ)

ಆದಮ್‌ನನ್ನು ಯುಸಿ಼ಫ್ ಹಿಡಿದ ರೀತಿ, ಎರಡನೆಯ ಮಹಾಯುದ್ಧದಲ್ಲಿ ಕೋಟಿಗಟ್ಟಲೆ ಯುವಕರನ್ನು ಕಳೆದುಕೊಂಡ ಸೋವಿಯತ್ ದೇಶದ ನೋವನ್ನು ನೆನಪಿಗೆ ತರುತ್ತದೆ. ವಿಶಾಲವಾದ ಸಮುಚ್ಚಯದ ಯಾವ ಕಡೆಯಿಂದ ನೋಡಿದರೂ ಈ ಅದಮ್ಯ ಚೈತನ್ಯಮೂರ್ತಿ ಎದ್ದು ಕಾಣುತ್ತದೆ. ಎಲ್ಲ ರೀತಿಯ ದುರಂತಗಳನ್ನು ವೀಕ್ಷಿಸುವಾಗೆಲ್ಲ ‘ದೃಢನಿರ್ಧಾರದಿಂದ ಇದನ್ನೆಲ್ಲ ತಡೆಗಟ್ಟಲು ಸಾಧ್ಯ’ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ.

ಖತಿನ್ ಸ್ಮಾರಕಕ್ಕೆ ದೇಶದ ‘ಕಹಿ ಸ್ವಾಭಿಮಾನ’ ಎಂದೂ ಕರೆಯುವುದುಂಟು. ಫ್ಯಾಸಿಸ಼ಂ ಮೇಲೆ ವಿಜಯ ಸಾಧಿಸಿದ್ದನ್ನು ಅವರು ಕೊಚ್ಚಿಕೊಳ್ಳುವುದಿಲ್ಲ. ಆದರೆ ಯುದ್ಧದ ದುರಂತದ ಬಗ್ಗೆ ತೋಡಿಕೊಳ್ಳುತ್ತಾರೆ. ಶಾಂತಿ ಮತ್ತು ಶ್ರಮದ ಮಹತ್ವವನ್ನು ಸಾರಲು ತವಕಿಸುತ್ತಾರೆ. ಅಂತೆಯೆ ಗೆಲುವು ಪಡೆದ ಆ ದೇಶದ ಅತಿದೊಡ್ಡ ಸ್ಮಾರಕಗಳು ಸಾವು ನೋವಿನ ಸ್ಮಾರಕಗಳೇ ಆಗಿವೆ. ಮೂರ್ತಿಗೆ ಎದುರಾಗಿ ನಿಂತರೆ ಬಲಗಡೆ ಧಾನ್ಯಾಗಾರದ ಸ್ಮಾರಕ ಮತ್ತು ಎಡಗಡೆ ಸಾಮೂಹಿಕ ಶವಸಂಸ್ಕಾರದ ಸ್ಥಳವಿದ್ದು, ಮುಂದೆ ಹೆಜ್ಜೆ ಇಟ್ಟರೆ ಉದ್ದಗಲ ಹಬ್ಬಿದ ೨೬ ಮನೆಗಳ ಸ್ಮಾರಕಗಳು ಕಾಣುವವು. ಬಿಡಿ ಬಿಡಿಯಾಗಿರುವ ಅವು ಇಡೀ ಸ್ಮಾರಕ ಸಮುಚ್ಚಯದ ತುಂಬ ಹಬ್ಬಿದ ಹಾಗೆ ಕಾಣುವವು.

ಖತಿನ್ ಗ್ರಾಮದ ಪ್ರತಿಯೊಂದು ಮನೆಯ ಬೂದಿಯನ್ನು ಅದೇ ಸ್ಥಳದಲ್ಲಿ ಕಾಂಕ್ರಿಟ್ ಚೌಕಟ್ಟಿನ ಮಧ್ಯೆ ರಕ್ಷಿಸಿಡಲಾಗಿದೆ. ಸುಟ್ಟ ಮನೆಗಳ ದೃಢವಾದ ಸಿಮೆಂಟ್ ಗೇಟ್‌ಗಳನ್ನು ನೋಡುವಾಗ ಎದೆ ತುಂಬಿಬರುತ್ತದೆ. ನಮ್ಮ ಮನದಲ್ಲಿ ಎಂದೂ ಯುದ್ಧ ನುಗ್ಗಿ ಬಾರದಿರಲಿ ಎಂಬ ಕಾರಣದಿಂದ ನಮ್ಮೊಳಗೇ ಚಿರಂತನವಾಗಿ ಉಳಿಯುವಂತೆ ವಾಸ್ತುಶಿಲ್ಪಿಗಳು ಈ ಗೇಟುಗಳನ್ನು ರಚಿಸಿರಬಹುದು.

ಗೇಟು ಒರಟಾಗಿವೆ, ಸದೃಢವಾಗಿವೆ, ಕಲಾತ್ಮಕವಾಗಿವೆ. ಪ್ರತಿ ಗೇಟಿನ ಒಳಗಡೆ, ಚೌಕಟ್ಟಿನ ಮಧ್ಯೆ ಸ್ಮಾರಕಸ್ತಂಭದ ಮೇಲೆ ಗಂಟೆ ಅಳವಡಿಸಲಾಗಿದೆ. ನಾಶವಾದ ಎಲ್ಲಾ ಮನೆಗಳ ಸ್ಥಳಗಳಲ್ಲಿ ಹೀಗೆ ಒಂದೇ ತೆರನಾದ ಸ್ಮಾರಕಗಳಿವೆ. ಅವು ಇಡೀ ಸಮುಚ್ಚಯಕ್ಕೆ ಅದ್ಭುತವಾದ ಕಳೆ ಕೊಟ್ಟಿವೆ.

ಅಲ್ಲಿ ಎಲ್ಲೆಡೆ ನಿಶ್ಶಬ್ದ. ಕಣ್ಣೀರು ಕೂಡ ಸದ್ದುಗದ್ದಲವಿಲ್ಲದೆ ಬರುತ್ತದೆ. ಅಲ್ಲಿ ಯಾರೂ ಮಾತನಾಡಲು ಇಚ್ಛಿಸುವುದಿಲ್ಲ. ಗಂಟೆಗಳು ಮಾತನಾಡುವುದನ್ನು ಎಲ್ಲರೂ ಕೇಳಬಯಸುತ್ತಾರೆ. ಅವು ಸತ್ತವರ ಸ್ಮಾರಕಗಳಲ್ಲಿರುವ ಗಂಟೆಗಳು. ಆದರೆ ಸಾವಿನ ಗಂಟೆಗಳಲ್ಲ. ‘ಆ ಗಂಟೆಗಳು ಯಾರಿಗಾಗಿ ಬಾರಿಸುತ್ತಿವೆ’ ಎಂದು ಪ್ರಶ್ನಿಸಿಕೊಳ್ಳುವ ಅಗತ್ಯವಿಲ್ಲ. ಅವು ನಮಗಾಗಿಯೆ ಬಾರಿಸುತ್ತಿವೆ. ನಾವು ಬದುಕಲೆಂದು ಅಸು ನೀಗಿದವರ ಆತ್ಮಗಳು ನಮ್ಮ ಯೋಗಕ್ಷೇಮಕ್ಕಾಗಿ ಮಾತನಾಡುವಂತೆ ಅವು ಬಾರಿಸುತ್ತವೆ. ಅವು ನಮ್ಮ ಬದುಕಿನ ಗಂಟೆಗಳು!

ಈ ಗಂಟೆಗಳು ಪ್ರತಿ ೩೦ ಸೆಕೆಂಡಿಗೆ ತಾವೇ ತಾವಾಗಿ ಬಾರಿಸುತ್ತವೆ. ಆ ನಾದ ಕೋಮಲವಾಗಿದೆ, ಆತ್ಮೀಯವಾಗಿದೆ. ನಮಗೆ ಮತ್ತೆ ಏನೋ ಹೇಳುವಂತಿದೆ. ‘ಯುದ್ಧ ಬೇಡ’ ಎನ್ನುವಂತಿದೆ.

(ಗಂಟೆಯೊಂದರ ಸಮೀಪದ ದೃಶ್ಯ)

ಒಂದು ಗಂಟೆ ಬಾರಿಸಿದ ನಂತರ ಮೌನ ಆವರಿಸುತ್ತದೆ. ಮತ್ತೆ ಇನ್ನೊಂದು ಘಂಟಾನಾದ, ಆಮೇಲೆ ಮೌನ. ಹೀಗೆ ನಾದ ಮೌನಗಳನ್ನು ನಮ್ಮ ನೋವಿನ ಎಳೆಯಲ್ಲಿ ಪೋಣಿಸಿದಂತಾಗುತ್ತದೆ. ಆ ಹಾರವನ್ನು ದೈತ್ಯಾಸ್ತ್ರಗಳ ಕೊರಳಿಗೆ ಕಟ್ಟಿದಂತೆ ಭಾಸವಾಗುತ್ತದೆ. ಅಂತೆಯೆ ಖತಿನ್ ಸ್ಮಾರಕಕ್ಕೆ ಭೇಟಿ ನೀಡಿದ ಪ್ರತಿಯೊಬ್ಬನೂ ಯುದ್ಧಕ್ರೌರ್ಯದ ಬಗ್ಗೆ ಸದಾ ಜಾಗೃತನಾಗಿರುತ್ತಾನೆ.

ಮುನ್ನಡೆದರೆ ಗ್ರಾಮವಾಸಿಗಳ ಸಮೇತ ಸರ್ವನಾಶವಾದ ೧೮೬ ಬೈಲೋರಷ್ಯನ್ ಗ್ರಾಮಗಳ ಸ್ಮಾರಕವಿದೆ. ಸಮಾಧಿಗೆ ಮೊದಲು ಬೃಹತ್ತಾದ ೧೮೬ ಸಂಖ್ಯೆಯಿಂದ ಕೂಡಿದ ಭಿತ್ತಿಯ ಮೇಲೆ ಕ್ರೂರ ನಾಶದ ಬಗ್ಗೆ ಸಿಮೆಂಟ್ ಅಕ್ಷರಗಳನ್ನು ಕೊರೆಯಲಾಗಿದೆ. ಪ್ರತಿಯೊಂದು ಸ್ಮಾರಕದಲ್ಲಿ ಆಯಾ ಸುಟ್ಟ ಗ್ರಾಮಗಳಿಂದ ತಂದ ಬೂದಿಮಣ್ಣನ್ನು ಇಡಲಾಗಿದೆ. ಅವುಗಳಿಗಿರುವ ಚೌಕಟ್ಟಿನ ಒಂದು ಕಡೆ ಆಯಾ ಗ್ರಾಮಗಳ ಹೆಸರುಗಳನ್ನು ಬರೆಯಲಾಗಿದೆ. ಚೌಕಟ್ಟಿನ ಮಧ್ಯೆ ಪುಟ್ಟ ಶಿಲಾಕೃತಿ ಮತ್ತು ಗುಲಾಬಿ ಗಿಡಗಳಿವೆ. ಸೋವಿಯತ್ ಜನ ತಮ್ಮ ಗೆಲುವನ್ನು ಮರೆತಾರು, ಆದರೆ ಮಾನವೀಯತೆಗೆ ಉಂಟಾದ ನೋವನ್ನು ಎಂದೂ ಮರೆಯುವುದಿಲ್ಲ. ಅವರಿಗೆ ವಿಜಯದ ಉನ್ಮಾದವಿಲ್ಲ. ಆದರೆ ಬದುಕಿನ ಆಕಾಂಕ್ಷೆ ಇದೆ. ಅವರ ಬದುಕಿನ ಪ್ರಜ್ಞೆ ವಿಶ್ವವ್ಯಾಪಿಯಾಗಿದೆ. ಗ್ರಾಮಸಮಾಧಿಗಳ ಕೊನೆಯಲ್ಲಿ ಬೆಂಕಿಕಟ್ಟೆಯಿದೆ. ಎರಡನೆಯ ಮಹಾಯುದ್ಧದಿಂದಾಗಿ ಬೈಲೋರಷ್ಯದಲ್ಲಿ ಸತ್ತ ಒಟ್ಟು ಕಾಲುಭಾಗ ಜನತೆಯ ನೆನಪಿಗಾಗಿ ಅಲ್ಲಿನ ಗ್ಯಾಸ್ ಜ್ವಾಲೆ ನಿರಂತರವಾಗಿ ಉರಿಯುತ್ತಿದೆ. ಆ ಕಟ್ಟೆಯ ಮೇಲೆ ಅವರ ಸಂಸ್ಕೃತಿಯ ಪ್ರತೀಕವಾದ ಮೂರು ಬರ್ಚ್ ಮರಗಳಿವೆ. ಅವು ಯುದ್ಧದಲ್ಲಿ ಬದುಕುಳಿದ ಮುಕ್ಕಾಲು ಪಾಲು ಜನತೆಯ ಸಂಕೇತಗಳಾಗಿವೆ.

ಬೆಂಕಿಕಟ್ಟೆಯ ಹಿಂದುಗಡೆ ಪುನರ್ನಿರ್ಮಿಸಲಾಗದ ೪೩೩ ಗ್ರಾಮಗಳಿಗೆ ಸಂಬಂಧಿಸಿದ ವಿವರಗಳುಳ್ಳ ಸ್ಮಾರಕವಿದೆ. ಬೆಂಕಿಕಟ್ಟೆಯ ಎಡಗಡೆ ನಿಂತಾಗ ಎದುರುಗಡೆ ಕಾಣುವುದು ‘ನೆನಪಿನ ಗೋಡೆ’. ಸಾವಿನ ಶಿಬಿರಗಳಲ್ಲಿ ಹುತಾತ್ಮರಾದವರ ಗೌರವಾರ್ಥ ಅದನ್ನು ಕಟ್ಟಲಾಗಿದೆ.

ಬೈಲೋರಷ್ಯದಲ್ಲಿ ನಾಜಿಗಳು ನಿರ್ಮಿಸಿದ ಸಾವಿನ ಶಿಬಿರಗಳ ಸಂಕೇತವಾದ ಈ ಗೋಡೆ ೧೨೬ ಮೀಟರ್ ಉದ್ದವಿದ್ದು ಮೂರರಿಂದ ಆರು ಮೀಟರ್‌ವರೆಗೆ ಎತ್ತರವಾಗಿದೆ. ಗೋಡೆಯನ್ನು ಒಳಗೆ ವಾಲಿದಂತೆ ಕಟ್ಟಲಾಗಿದೆ. (ಸೆರೆಯಾಳುಗಳು ಓಡಿಹೋಗದಂತೆ ಸಾವಿನ ಶಿಬಿರಗಳ ಗೋಡೆಗಳನ್ನು ಇದೇ ರೀತಿ ರಚಿಸಲಾಗುವುದು.)

ಗೋಡೆಯಲ್ಲಿ ಕಬ್ಬಿಣದ ಕಟಕಟೆಯಿಂದ ಕೂಡಿದ ಮಾಡುಗಳಿವೆ. ಅವುಗಳಲ್ಲಿ ೨೬೦ ಫ್ಯಾಸಿಸ್ಟ್ ಯಾತನಾ ಶಿಬಿರಗಳ ಹೆಸರು ಮತ್ತು ಅವುಗಳನ್ನು ನೋಡಿಕೊಳ್ಳುತ್ತಿದ್ದ ನಾಜಿಗಳ ಸಂಖ್ಯೆಗಳನ್ನೊಳಗೊಂಡ ಸ್ಮಾರಕ ಫಲಕಗಳಿವೆ.

ಈ ಸಾವಿನ ಶಿಬಿರಗಳನ್ನು ಪ್ರವೇಶಿಸುವ ಜಾಗದಲ್ಲಿ ಸಾಮೂಹಿಕ ಶಿಲುಬೆಗಳನ್ನು ನೆನಪಿಗೆ ತರುವ ರೀತಿಯಲ್ಲಿ ಹಾಸುಹೊಕ್ಕಾಗಿ ಕೂಡಿಕೊಂಡ ಸಿಮೆಂಟ್ ಕಂಭಗಳನ್ನು ರಚಿಸಲಾಗಿದೆ. ಒಳಗಿದ್ದವರೆಲ್ಲ ಸತ್ತಿದ್ದಾರೆ. ಈ ಸಾಮೂಹಿಕ ಸಾವಿಗೆ ಕಾರಣರಾದವರನ್ನು ವಿಚಾರಿಸಿಕೊಳ್ಳಲು ಹೋಗುವಂತೆ ಜನ ಒಳಗಡೆ ಹೋಗುತ್ತಾರೆ. ಮೌನಭಾಷೆಯನ್ನು ಮೀರದ ಈ ವಿಚಾರಣೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಬಲು ಕಷ್ಟದ ಕೆಲಸ. ಗೋಡೆಯ ಮುಂದೆ ಬೆಣಚು ಕಲ್ಲುಗಳಿಂದ ತುಂಬಿದ ವಿಶಾಲವಾದ ಬರಡು ಪ್ರಾಂಗಣವಿದೆ. ಗೋಡೆಯ ಹೊರಗಡೆ ಸುಂದರ ಕಾಡಿದೆ!

ಹಿಮ ಬೀಳುವಾಗ ಮತ್ತು ಮಳೆ ಬರುವಾಗ ಕೂಡ ಜನ ಇಲ್ಲಿ ಸಾಲು ಸಾಲಾಗಿ ಬರುತ್ತಾರೆ. ಆ ಬೃಹತ್ ಸಮುಚ್ಚಯದ ತುಂಬೆಲ್ಲ ಜನ ದುಃಖತಪ್ತರಾಗಿ ಹರಿದಾಡುತ್ತಾರೆ. ಇಲ್ಲಿ ಅವರು ಬದುಕುವ ಪ್ರತಿಜ್ಞೆ ಮಾಡುತ್ತಾರೆ. ಇಲ್ಲಿ ಹುತಾತ್ಮರೆಲ್ಲ ಪೂಜನೀಯ ಎನಿಸುತ್ತಾರೆ. ಬದುಕುಳಿದವರೆಲ್ಲ ಆತ್ಮೀಯರಾಗಿ ಕಾಣುತ್ತಾರೆ.

ಆಕಾಶ ನೀಲಿಯಾಗಿಯೆ ಇರಬೇಕು. ಅಲ್ಲಿ ಆಹ್ಲಾದಕರ ಬಿಳಿಮೋಡಗಳು, ಮಳೆ ಕೊಡುವ ಕರಿ ಮೋಡಗಳು ಮತ್ತು ಹಾರಾಡುವ ಹಕ್ಕಿಗಳು ಇರಬೇಕು. ದೇಶಗಳ ಸಂಬಂಧಗಳನ್ನು ಕಲ್ಪಿಸುವ ವಾಯುಮಾರ್ಗಗಳು ಮಾತ್ರ ಇರಬೇಕು. ಬಾಂಬುಗಳ ಉತ್ಪಾದನೆಗಾಗಿ ಭೂಮಿಯನ್ನು ಬಳಸಕೂಡದು. ಈ ಭೂಮಿ ಇರುವುದು ಹಸಿರನ್ನು ಹರಡುವುದಕ್ಕಾಗಿ, ಬದುಕನ್ನು ಮಿಡಿಸುವುದಕ್ಕಾಗಿ. ಹಕ್ಕಿಗಳ ಚಿಲಿಪಿಲಿ ಧ್ವನಿ, ಮನುಷ್ಯನ ಕುಲುಕುಲು ನಗೆ, ಪ್ರೀತಿಯ ಮಾತು ಮತ್ತು ಹಸಿರೆಲೆ ಈ ಪೃಥ್ವಿಯ ಅತ್ಯಂತ ಮಹತ್ವದ ಉತ್ಪಾದನೆಗಳು. ಒಂದು ತುಣುಕು ರೊಟ್ಟಿ ವಿಶ್ವದ ಎಲ್ಲ ಮಾರಕಾಸ್ತ್ರಗಳಿಗಿಂತ ಶ್ರೇಷ್ಠವಾಗಿದೆ. “ಜಗತ್ತಿನ ಜನರೇ ನೀವು ಶ್ರೇಷ್ಠವಾದುದನ್ನು ಆರಿಸಿಕೊಳ್ಳಿರಿ ಮತ್ತು ಅದು ಎಲ್ಲರಿಗೂ ಸಿಗುವಂತೆ ಮಾಡಿರಿ.” ಎಂದು ಹೇಳುವವರೆಲ್ಲ ಸುಂದರವಾಗಿ ಕಾಣುತ್ತಾರೆ. ಆಫ್ರಿಕಾದ ಕರಿಯರು, ಅಮೆರಿಕದ ಬಿಳಿಯರು, ಬೊಜ್ಜು ಮೈಯವರು, ಮೊಂಡು ಮೂಗಿನವರು ಯಾರೇ ಇರಲಿ, ಹೀಗೆ ಪ್ರತಿಪಾದಿಸುವವರು ಸುಂದರವಾಗಿ ಕಾಣುತ್ತಾರೆ.

ಪ್ರತಿಯೊಬ್ಬರಿಗಾಗಿ ಇರುವ ಬದುಕಿನ ಪಾಠಶಾಲೆ ಈ ಸಮುಚ್ಚಯ ಎನಿಸುವುದು. ಎರಡನೇ ಮಹಾಯುದ್ಧದ ನಂತರ ಜನಿಸಿದ ಸೋವಿಯತ್ ಯುವಕ ಇಂಥ ಪಾಠಶಾಲೆಗಳಿಂದಲೇ ಅದಮ್ಯ ಇಚ್ಛಾಶಕ್ತಿ ಮತ್ತು ಮಾನವ ಪ್ರೇಮದ ಬಗ್ಗೆ ಕಲಿಯುತ್ತಾನೆ. ಅಂತೆಯೆ ಅವನನ್ನು ವಿನಾಶದ ಕಡೆಗೆ ಆಕರ್ಷಿಸಲು ಯಾರಿಂದಲೂ ಸಾಧ್ಯವಿಲ್ಲ.

ಫ್ಯಾಸಿಸಂ ವಿರುದ್ಧ ಯುದ್ಧದಲ್ಲಿ ಭಾಗವಹಿಸಿ ಕಹಿ ಅನುಭವಗಳನ್ನು ಇಂದಿಗೂ ಮೆಲುಕು ಹಾಕುತ್ತಿರುವ ವಯೋವೃದ್ಧರು ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬರುತ್ತಾರೆ. ಗೆಳೆಯರನ್ನು, ಬಂಧುಗಳನ್ನು ಮತ್ತು ಮಕ್ಕಳನ್ನು ಕಳೆದುಕೊಂಡವರು ಇಂದಿಗೂ ಇಲ್ಲಿಗೆ ಬರುತ್ತಾರೆ. ಏಕೆಂದರೆ ಇದು ಎಲ್ಲ ಪ್ರದೇಶಗಳ ಯುದ್ಧವಿನಾಶದ ಪ್ರತೀಕವಾಗಿದೆ. ಫ್ಯಾಸಿಸಮ್‌ಗೆ ತುತ್ತಾದವರನ್ನು ಚಿರಸ್ಮರಣೀಯಗೊಳಿಸಲಾಗಿದೆ.

ಇಂದಿನ ಪರಿಸ್ಥಿತಿ: ಇಂದು ಸೋವಿಯತ್ ದೇಶ ಇಲ್ಲ. ಒಡೆದು ೧೫ ದೇಶಗಳಾಗಿವೆ. ದೊಡ್ಡ ದೇಶ ರಷ್ಯಾ, ಪುಟ್ಟ ದೇಶ ಯುಕ್ರೇನ್ ಮೇಲೆ ಹರಿಹಾಯ್ದಿದೆ. ನಿತ್ಯ ಸಾವುನೋವುಗಳು ಸಂಭವಿಸುತ್ತಿವೆ. ಈಗ ಎರಡೂ ಕಡೆ ಯುದ್ಧದಲ್ಲಿ ತೊಡಗಿರುವವರ ಅಜ್ಜಂದಿರು ಒಂದಾಗಿ ಹಿಟ್ಲರ್‌ನ ಫ್ಯಾಸಿಸ಼ಂ ವಿರುದ್ಧ ಹೋರಾಡಿದವರು.


ರಷ್ಯಾ ಬಂಡವಾಳಶಾಹಿಯಾಗಿದೆ. ಯುಕ್ರೇನ್ ಕೂಡ ಬಂಡವಾಳಶಾಹಿಯಾಗಿದೆ. ಯುಕ್ರೇನ್ ಚಿಕ್ಕ ದೇಶವಾಗಿರುವುದರಿಂದ ದೊಡ್ಡ ಬಂಡವಾಳಶಾಹಿಗಳ ಜೊತೆ ಸಂಬಂಧ ಬೆಳೆಸುತ್ತಿದೆ. ಇದರಿಂದ ರಷ್ಯಾ ಸಿಟ್ಟಿಗೇಳುತ್ತಿದೆ. ಯುದ್ಧ ಅನಿವಾರ್ಯವಾಗಿದೆ. ಸೋವಿಯತ್ ದೇಶ ಸೃಷ್ಟಿಸಿದ ಮೌಲ್ಯಗಳೆಲ್ಲ ಇಂಥ ಯುದ್ಧಗಳು ನಾಶ ಮಾಡುತ್ತಿವೆ.