ಯೋಗೀಂದ್ರರ ಬರವಣಿಗೆಗಿರುವ ಒಂದು ವಿಶೇಷ ಗುಣವೆಂದರೆ ಅದರ ಇಂದ್ರಿಯಗಮ್ಯತೆ. ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಹಾಗೆ ಪ್ರಚೋದಿಸುವ ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.  ಈ ಪುಸ್ತಕದ ಶೀರ್ಷಿಕೆಯಾಗಿರುವ ‘ಮುರಿದ ಸೈಕಲ್ ಮತ್ತು ಹುಲಾಹೂಪ್ ಹುಡುಗಿ’ ನನ್ನ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಪ್ರಬಂಧ.
ಯೋಗೀಂದ್ರ ಮರವಂತೆ ಅವರ ‘ಮುರಿದ ಸೈಕಲ್, ಹುಲಾಹೂಪ್ ಹುಡುಗಿ’ ಎಂಬ ಕೃತಿಗೆ ಹಿರಿಯ ಲೇಖಕ ಎಸ್. ದಿವಾಕರ್ ಬರೆದ ಮುನ್ನುಡಿ ಇಲ್ಲಿದೆ.

ಗೆಳೆಯ ಯೋಗೀಂದ್ರ ಮರವಂತೆಯವರ ಈ ಕೃತಿಯಲ್ಲಿ ಕೊರೋನ ಎಂಬ ಭೀಕರ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಲಂಡನ್ನಿನ, ಅಷ್ಟೇಕೆ ಇಡೀ ಯು.ಕೆ.ಯ, ಚಿತ್ರವಿದೆ. ಅವರೇ ಹೇಳಿರುವಂತೆ ಇದು “ಕೋವಿಡ್ ಹೋರಾಟದ ನೆಪದಲ್ಲಿ ಯು.ಕೆ.ಯ, ದೈನಿಕದ ಒಳನೋಟಗಳನ್ನು ತಿಳಿಯುವ, ಖುಲಾಸೆಗೊಳಿಸುವ ಪ್ರಯತ್ನವೂ ಹೌದು.”

ಉದ್ಯೋಗ ನಿಮಿತ್ತ ಯುನೈಟೆಡ್ ಕಿಂಗ್ಡಮ್‌ನಲ್ಲಿರುವ ಯೋಗೀಂದ್ರ ಅಲ್ಲಿನ ದೈನಂದಿನ ಜೀವನದ ಪ್ರತ್ಯಕ್ಷದರ್ಶಿಯಾಗಿರುವುದರಿಂದ ಅವರಿಲ್ಲಿ ನಿರೂಪಿಸಿರುವ ವಿದ್ಯಮಾನಗಳು, ಪ್ರಸಂಗಗಳು, ವ್ಯಕ್ತಿವಿಶೇಷಗಳು, ಸಮಾಜದ, ಸರಕಾರದ ಪ್ರಯತ್ನಗಳು, ಇವುಗಳಿಗೆಲ್ಲ ಅಧಿಕೃತತೆಯ ಒಂದು ಮುದ್ರೆ ಬಿದ್ದಂತಾಗಿದೆ. ಬಡವರ ಪರವಾಗಿ ಹೋರಾಡಿ ಜಯಿಸಿದ ಮಾರ್ಕಸ್ ರಾಷ್ಫೊರ್ಡ್ ಎಂಬ ಕ್ರೀಡಾಪಟುವಿನಿಂದ ಹಿಡಿದು ಗಮ್ಯವನ್ನು ತಲಪುವ ಮೊದಲೇ ಬಲಿಯಾಗುವ ವಲಸೆಗಾರರವರೆಗೆ ಇಪ್ಪತ್ತು ಲೇಖನಗಳಲ್ಲಿ ಹರಡಿಕೊಂಡಿರುವ ಕಣ್ಣಿಗೆ ಕಟ್ಟುವಂಥ ಒಂದಿಡೀ ಜಗತ್ತು ಇಲ್ಲಿ ತನ್ನೆಲ್ಲ ಬಣ್ಣ ವಾಸನೆಗಳೊಡನೆ ಓದುಗರನ್ನು ಆವರಿಸಿಕೊಳ್ಳುತ್ತದೆ.

(ಯೋಗೀಂದ್ರ ಮರವಂತೆ)

ಯೋಗೀಂದ್ರರ ಬರವಣಿಗೆಗಿರುವ ಒಂದು ವಿಶೇಷ ಗುಣವೆಂದರೆ ಅದರ ಇಂದ್ರಿಯಗಮ್ಯತೆ. ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಹಾಗೆ ಪ್ರಚೋದಿಸುವ ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.

ಈ ಪುಸ್ತಕದ ಶೀರ್ಷಿಕೆಯಾಗಿರುವ ‘ಮುರಿದ ಸೈಕಲ್ ಮತ್ತು ಹುಲಾಹೂಪ್ ಹುಡುಗಿ’ ನನ್ನ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಪ್ರಬಂಧ. ಇಂಗ್ಲೆಂಡಿನ ನಾಟಿಂಗ್ಹ್ಯಾಮ್  ನಗರದ ಹಾಗೂ ಆ ನಗರದಲ್ಲಿದ್ದನೆನ್ನಲಾದ ‘ರಾಬಿನ್ ಹುಡ್’ ಎಂಬ ಜನಾನುರಾಗಿ ಬಂಡುಕೋರನ ಪ್ರಸ್ತಾಪದಿಂದ ಪ್ರಾರಂಭವಾಗುವ ಈ ಪ್ರಬಂಧ ಹತ್ತೊಂಭತ್ತನೆಯ ಶತಮಾನದ ಕೊನೆಯಲ್ಲಿ ನಾಟಿಂಗ್ಹ್ಯಾಮ್ ನಲ್ಲಿ ಆರಂಭವಾಗಿ ಹೊರಜಗತ್ತಿನಲ್ಲಿ ತನ್ನ ರ‍್ಯಾಲಿ ಸೈಕಲ್’ನಿಂದ ಹೆಸರುವಾಸಿಯಾದ ಫ್ಯಾಕ್ಟರಿ, ವರ್ತಮಾನ ಕಾಲದಲ್ಲಿ ಅತಿ ವೇಗವಾಗಿ ಹರಡಿದ ಕೋವಿಡ್ ಸೋಂಕು, ಗೋಡೆಯ ಮೇಲೆ ಚಿತ್ರಗಳ ಮೂಲಕ ಸಂದೇಶವೊಂದನ್ನು ಕೊಡುವ ಗ್ರಾಫಿಟಿ ಕಲೆ, ಅಂಥ ಕಲೆಯಲ್ಲಿ ನಿಷ್ಣಾತನಾದ ಕಲಾವಿದ ‘ಬ್ಯಾಂಕ್ಸಿ’, ಇತ್ಯಾದಿ ಹಿನ್ನೆಲೆಯಲ್ಲಿ ಒಂದು ಭಿತ್ತಿಚಿತ್ರವನ್ನೂ, ಅದಕ್ಕೆ ಕಾರಣವಾದ ಒಂದು ವಿಶಿಷ್ಟ ಪ್ರಸಂಗವನ್ನೂ ತುಂಬ ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ. “ಈಗಿನ ಬದುಕು ಮುರಿದ ಸೈಕಲಿನಂತಿದೆ. ಅದೇ ಮುರಿದ ಬದುಕಿನೊಳಗಿನಿಂದ ಒಂದು ಸರಳ ಸಾಮಾನ್ಯ ನಿರುಪಯೋಗಿ ಎಂದು ಕಾಣುವ ವಸ್ತುವನ್ನು ತೆಗೆದು ಆಟಿಕೆಯಂತೆ ಬಳಸಿ ಉಲ್ಲಾಸದಲ್ಲಿರುವ ಬಾಲಕಿಯಂತೆ ನಾವೂ ಇರೋಣ ಎಂಬ ಅರ್ಥ ಸಂದೇಶ ಈ ಕಲಾಕೃತಿಯಲ್ಲಿ ಅಡಗಿರಬಹುದು” ಎಂಬ ಪ್ರೊಫೆಸರರೊಬ್ಬರ ವ್ಯಾಖ್ಯಾನದಿಂದ ಈ ಪ್ರಬಂಧ ಸ್ವತಃ ಒಂದು ಕಲಾತ್ಮಕ ಸ್ಥಿರಚಿತ್ರದಂತೆ (ಸ್ಟಿಲ್-ಲೈಫ್) ಗಮನ ಸೆಳೆಯುತ್ತದೆ.

ಕಳೆದ ವರ್ಷ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಲಾಕ್‌ಡೌನ್ ಘೋಷಿಸಿದಾಗ ಬ್ರಿಟನ್ ಯೂರೋಪಿಯನ್ ಒಕ್ಕೂಟವನ್ನು ಬಿಡುವುದಕ್ಕೆ (ಬ್ರೆಕ್ಸಿಟ್) ಸಹಿ ಬಿದ್ದಿತ್ತು; ಎರಡನೆಯ ಮಹಾಯುದ್ಧ ಅಂತ್ಯಗೊಂಡ ೭೫ನೆಯ ವರ್ಷವನ್ನು ಆಚರಿಸಲಾಗಿತ್ತು. ಆ ನಂತರ ಆರೋಗ್ಯ ಕಾರ್ಯಕರ್ತರನ್ನು, ಪೌರ ಕಾರ್ಮಿಕರನ್ನು ನೆನಪುಮಾಡಿಕೊಳ್ಳಲೋಸುಗ ಸಾಮೂಹಿಕವಾಗಿ ಚಪ್ಪಾಳೆ ತಟ್ಟುವುದೊಂದು ಹೊಸ ಸಂಪ್ರದಾಯವಾಯಿತು. ನಿವೃತ್ತ ವೃದ್ಧ ಸೇನಾನಿ ಥಾಮ್ಸನ್ ಮೂರ್ ಮುನ್ನೂರು ಕೋಟಿ ರೂಪಾಯಿಗಳ ದೇಣಿಗೆ ಸಂಗ್ರಹಿಸಿದರು. ಪುಟ್‌ಬಾಲ್ ಆಟಗಾರ ಮಾರ್ಕಸ್ ರಾಷ್ಫೊರ್ಡ್ ಆಶಕ್ತ ಕುಟುಂಬಗಳ ಬಡ ಮಕ್ಕಳಿಗೆ ಊಟ ಒದಗಿಸಲು ಇನ್ನೂರು ಕೋಟಿ ರೂಪಾಯಿಗಳ ನಿಧಿ ಸಂಗ್ರಹಿಸಿದ. ಸರಕಾರ ತನ್ನ ಹೊಣೆಯರಿತು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅವೆಲ್ಲವನ್ನೂ ತೆಗೆದುಕೊಂಡಿತು.

ಅತ್ಯುತ್ತಮ ಆರೋಗ್ಯ ಸೇವೆಗಾಗಿ ಹೆಸರಾಗಿರುವ ಬ್ರಿಟನ್ ಕೋವಿಡ್ ಸಾಂಕ್ರಾಮಿಕವನ್ನು ದಿಟ್ಟತನದಿಂದ ಎದುರಿಸಿ, ಯಶಸ್ಸು ಗಳಿಸಿತು. ಅದಕ್ಕೆ ಒಂದು ಕಾರಣ ಆ ದೇಶದಲ್ಲಿ ಸ್ವಾಸ್ಥ್ಯ  ಸೇವೆಗಿರುವ ಒಂದು ಪರಂಪರೆ. ಎರಡನೆಯ ಮಹಾಯುದ್ಧದ ನಂತರ ೧೯೪೮ರಲ್ಲಿ ಬ್ರಿಟನ್ನಿನ ಆರೋಗ್ಯ ಸಚಿವನಾಗಿದ್ದ ನೈ ಬೆವನ್ ಉಚಿತ ಸ್ವಾಸ್ಥ್ಯ  ಸೇವೆ ಒದಗಿಸುವುದಕ್ಕಾಗಿ ೨೫೦೦ ಆಸ್ಪತ್ರೆಗಳನ್ನು ರಾಷ್ಟ್ರೀಕರಿಸಿದ ಮತ್ತು ‘ನ್ಯಾಷನಲ್ ಹೆಲ್ತ್ ಸರ್ವಿಸಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಅವನ ಆ ದೂರದೃಷ್ಟಿಯಿಂದ ಬಹುಮಟ್ಟಿಗೆ ಇವತ್ತಿನ ವಿಪತ್ತನ್ನು ನಿರ್ವಹಿಸಲು ಸಾಧ್ಯವಾಯಿತು, ನಿಜ. ಆದರೆ ಶತಮಾನಗಳ ಹಿಂದೆ ಪ್ಲೇಗಿನಂಥ ಸಾಂಕ್ರಾಮಿಕವನ್ನು ನಿಭಾಯಿಸುವ ಸಾಮರ್ಥ್ಯ, ಜಗತ್ತಿನ ಅನೇಕ ದೇಶಗಳಂತೆ, ಇಂಗ್ಲೆಂಡಿಗೂ ಇರಲಿಲ್ಲ.

ನನಗೀಗ ಇಂಗ್ಲಿಷ್ ಸಾಹಿತ್ಯದಲ್ಲಿ ‘ರಾಬಿನ್ಸನ್ ಕ್ರೂಸೊ’ ಎಂಬ ಕೃತಿ ಬರೆದು ಅಜರಾಮರನಾಗಿರುವ ಡೇನಿಯಲ್ ಡೀಫೊ ನೆನಪಾಗುತ್ತಾನೆ. ‘ಜರ್ನಲ್ ಆಫ್ ದಿ ಪ್ಲೇಗ್ ಯಿಯರ್’ ಎಂಬ ಅವನದೇ ಇನ್ನೊಂದು ಕೃತಿಯ ಬಗ್ಗೆ ನನಗೆ ಮೊದಲು ಗೊತ್ತಾಗಿದ್ದು ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್‌ನ ಒಂದು ಸಂದರ್ಶನದಲ್ಲಿ.

೧೬೬೪-೬೫ರಲ್ಲಿ ಲಂಡನ್ನಿನಲ್ಲಿ ಸಂಭವಿಸಿದ ಪ್ಲೇಗ್ ಮಹಾಮಾರಿಯನ್ನು ಕುರಿತ ಅರೆವಾಸ್ತವಿಕವೂ ಅರೆ ಕಾಲ್ಪನಿಕವೂ ಆದ ಕೃತಿ ಇದು. ಇದರಲ್ಲಿ ವೈಟ್‌ಚಾಪೆಲ್‌ನಲ್ಲಿರುವ ‘ಎಚ್.ಎಫ್.’ ಎಂಬ ಕುದುರೆಯ ಜೀನು ಮಾಡುವವನು ಪ್ಲೇಗು ಅಮರಿಕೊಂಡ ಕಾಲದುದ್ದಕ್ಕೂ ಲಂಡನ್ನಿನಲ್ಲೇ ಇದ್ದು, ಆ ಸಾಂಕ್ರಾಮಿಕಕ್ಕೆ ಜನರು ತೋರಿದ ಪ್ರತಿಕ್ರಿಯೆ, ಅಧಿಕಾರಿಗಳು ತೆಗೆದುಕೊಂಡ ಮುನ್ನೆಚ್ಚರಿಕೆಯ ಕ್ರಮಗಳು, ಕ್ರಮೇಣ ನಿರ್ಜನವಾಗುತ್ತಿದ್ದ ರಾಜಧಾನಿಯ ಬದಲಾದ ಪರಿಸ್ಥಿತಿ, ಇತ್ಯಾದಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾನೆ. ಪ್ಲೇಗಿಗೆ ಗುರಿಯಾದ ಜನರು ಮನೆಗಳಲ್ಲೇ ಬಂದಿಗಳಾದರೆ, ಇತರರು ಹಳ್ಳಿಗಾಡಿಗೆ ಓಡಿಹೋಗುತ್ತಾರೆ. ರಸ್ತೆಗಳಲ್ಲಿ ಹುಲ್ಲು ಬೆಳೆಯುತ್ತದೆ.

ವಾಸ್ತವವಾದಿಯೂ ಧ್ವನಿಪೂರ್ಣವೂ ಆದ ಈ ಕೃತಿಗೆ ಡೀಫೊ ಹೆಚ್ಚೇನೂ ಕಲ್ಪಿಸಿಕೊಳ್ಳಬೇಕಿರಲಿಲ್ಲ. ವಿಭಿನ್ನ ಮೂಲಗಳಿಂದ ಪಡೆದುಕೊಂಡ ವಿವರಗಳನ್ನು ಅವನು ಅತ್ಯಂತ ಸೂಕ್ಷ್ಮವಾಗಿ ನೆಯ್ದಿರುವ ಈ ಕೃತಿಯಲ್ಲಿ ಐತಿಹಾಸಿಕ ಕಥನಗಳು, ಸಾವುನೋವುಗಳು, ಅಂಕಿ ಅಂಶಗಳು, ವಿವಿಧ ಪ್ರಸಂಗಗಳು, ವದಂತಿಗಳು, ಎಲ್ಲವೂ ಸೇರಿವೆ. ಪ್ಲೇಗಿನಂಥ ಪಿಡುಗಿನ ಸಂದರ್ಭದಲ್ಲಿ ಜನರು ವದಂತಿಗಳಿಗೆ ಪಕ್ಕಾಗುವ ರೀತಿ, ಕೆಲವರು ಅಧಿಕಾರಿಗಳ ಅಸಾಮರ್ಥ್ಯ, ಕೋರ್ಟುಗಳ ಮತ್ತು ಚರ್ಚುಗಳ ನಿಲುವುಗಳು, ಕೆಲವರ ಸ್ವಾರ್ಥ, ಇನ್ನು ಕೆಲವರ ಮೂರ್ಖತನ, ಇವೆಲ್ಲ ತುಂಬ ಢಾಳಾಗಿ ಚಿತ್ರಣಗೊಂಡಿವೆ. ಇದು ಪ್ರತ್ಯೇಕವಾಗಿ ವಾಸಿಸಬೇಕಾದ ಮನುಷ್ಯರ ಅಧ್ಯಯನವಷ್ಟೇ ಅಲ್ಲ, ಒಂದು ನಗರದ ಜೀವನದಲ್ಲಾಗುವ ಅಸ್ತವ್ಯಸ್ತತೆಯ ವಿಶ್ಲೇಷಣೆಯೂ ಕೂಡ.

ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಹಾಗೆ ಪ್ರಚೋದಿಸುವ ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.

ಯೋಗೀಂದ್ರ ಅವರು ‘ಬ್ರಿಟನ್ನಿನ ಸಂಕಟ ಕಾಲದ ಎರಡು ಪತ್ರಗಳು’ ಎಂಬ ಮೊದಲ ಲೇಖನದಲ್ಲಿ “ಈ ದೇಶ ಕಂಡ ಹಿಂದಿನ ಎಲ್ಲ ಸುಂದರ ಭಯಂಕರ ಘಟನೆಗಳೂ ‘ಮಹಾನ್’ ಎಂದು ಕೊಂಡಾಡಲ್ಪಡುವಾಗ ನಾವು ಕಳೆಯುತ್ತಿರುವ ಈಗಿನ ಈ ದಿನಗಳೂ ಮುಂದೊಂದು ದಿನ ಆಂಗ್ಲರ ಇತಿಹಾಸದಲ್ಲಿ ‘ಗ್ರೇಟ್’ ಎನ್ನುವ ವಿಶೇಷಣದೊಂದಿಗೆ ಭೂಷಣ ಪಡೆಯುತ್ತವೆ” ಎಂದಿದ್ದಾರೆ. ಹಾಗೆ ಗ್ರೇಟ್ ಎನ್ನಬಹುದಾದ ಅನೇಕ ಪ್ರಸಂಗಗಳು ಈ ಕೃತಿಯಲ್ಲಿವೆ.

‘ವಲಸೆ ದುರಂತವೊಂದರ ತಾಜಾ ಖುಲಾಸೆಗಳು’ ಎಂಬ ಬರಹದಲ್ಲಿ ನಮ್ಮ ಗಮನ ಸೆಳೆಯುವುದು ಒಬ್ಬ ಸಮರ್ಥ ಸಣ್ಣಕತೆಗಾರನ ಕೌಶಲ. ಎಸೆಕ್ಸ್ ಪ್ರಾಂತ್ಯದ ಬಂದರಿನ ಮೂಲಕ ಬ್ರಿಟನ್ನನ್ನು ಪ್ರವೇಶಿಸಿ ಹೆಣಗಳಾಗಿಬಿಟ್ಟ ೩೯ ಮಂದಿಯ ದುರಂತ ಕಥನ ಇದು. ಇವರು ಸತ್ತದ್ದು ಉಸಿರಾಡಲು ಕೂಡ ಸಾಧ್ಯವಿಲ್ಲದ ಲಾರಿಯೊಂದರ ಕಂಟೇನರ್‌ನಲ್ಲಿ. ಹಲವು ಕಾರಣಗಳಿಗಾಗಿ ತಮ್ಮ ತಮ್ಮ ದೇಶಗಳನ್ನು ಬಿಟ್ಟು ಸಣ್ಣ ಸಣ್ಣ ಬೋಟುಗಳಲ್ಲಿ ಯಾನಮಾಡುತ್ತ ಮಾರ್ಗಮಧ್ಯದಲ್ಲೇ ಜಲಸಮಾಧಿಯಾಗುವ, ಒಮ್ಮೊಮ್ಮೆ ಜೀವವುಳಿಸಿಕೊಂಡು ತಮ್ಮ ಗಮ್ಯವನ್ನು ಮುಟ್ಟಿಯೂ ದಾರುಣ ಬದುಕನ್ನು ನಡೆಸುವ ನಿರಾಶ್ರಿತರ ಗೋಳು ನಿಜಕ್ಕೂ ನಡುಕ ಹುಟ್ಟಿಸುವಂಥದು. ಇದೇ ರೀತಿ ‘ವರ್ಷಾಂತ್ಯದಲ್ಲಿ ಸುಖಾಂತ್ಯದ ಕತೆ’ ಎಂಬ ಬರಹಕ್ಕೂ ಸಣ್ಣಕತೆಯ ಆಕೃತಿಯಿದೆ. ಇಲ್ಲಿನದು ಸೆರಾ ಮತ್ತು ಗ್ಯಾರಿ ದಂಪತಿ ತಮ್ಮ ವೃದ್ಧ ತಾಯಿಗೆ ಕೋವಿಡ್ ಸೋಂಕು ತಗಲದಂತೆ ಎಚ್ಚರ ವಹಿಸುವ, ಆ ವೃದ್ಧ ತಾಯಿ ಅವರ ಮನೆಯ ಬೀದಿಯಲ್ಲೇ ಒಂದು ‘ಕ್ಯಾರವಾನ್’ನಲ್ಲಿ ಸುರಕ್ಷಿತವಾಗಿ ಬದುಕಿ ಕಡೆಗೆ ಮನೆಗೆ ಹಿಂತಿರುಗುವ ಚೇತೋಹಾರಿ ಕತೆ.

(ಎಸ್.‌ ದಿವಾಕರ್‌)

ಹೀಗೆ ಸಾಹಿತ್ಯ ಪ್ರಕಾರಗಳ ಸೀಮೆಗಳನ್ನು ದಾಟಿ ಸೀಮಾತೀತವಾಗುವ ಪ್ರತಿಭೆ ಇಲ್ಲಿದೆ. ಅತ್ಯಂತ ಲವಲವಿಕೆಯ ಈ ಬರಹಗಳಲ್ಲಿ ಅನೇಕ ವ್ಯಕ್ತಿಗಳ, ಸ್ಥಳಗಳ, ಸಂದರ್ಭಗಳ ಸೂಕ್ಷ್ಮ  ಚಿತ್ರಣವಿದೆ; ತುಂಬ ಕಡಿಮೆ ಹೇಳಿ ಸಾಕಷ್ಟನ್ನು ಧ್ವನಿಸುವ ಶಕ್ತಿಯಷ್ಟೇ ಅಲ್ಲ, ಹೇಳಿದ್ದನ್ನು ಓದುಗರ ಮನಸ್ಸಿಗೆ ನಾಟಿಸುವಷ್ಟು ಭಾಷಿಕ ಶಕ್ತಿ, ಸೌಂದರ್ಯಗಳೂ ಇವೆ. ನಿದರ್ಶನಕ್ಕಾಗಿ ಈ ಎರಡು ತುಣುಕುಗಳನ್ನು ನೋಡಬಹುದು: ಒಂದು, ಹೆಸರು ಅನುಕೂಲ ಅಸ್ತಿತ್ವಗಳೇ ಇಲ್ಲದ ಪುಟ್‌ಪಾತ್‌ನಲ್ಲೇ ವಾಸಿಸುವ ‘ರಫ್ ಸ್ಲೀರ‍್ಸ್ಸ’ರನ್ನು ಕುರಿತದ್ದು: “ವಿಶೇಷಣಗಳಿಲ್ಲದ ತೀರಾ ಸರಳ ಸಾಮಾನ್ಯ ಶಬ್ದಗಳಲ್ಲಿ ಇವರನ್ನು ಪರಿಚಯಿಸುವುದಾದರೆ, ಇವರು ಮನೆಯಿಲ್ಲದವರು. ಬೀದಿ ಬದಿಯ ಕಾಲುಹಾದಿಯಲ್ಲಿ ಅಥವಾ ಫುಟ್‌ಪಾತಿನಲ್ಲಿಯೇ ಇವರ ವಾಸ. ಹಾಸಿಗೆಯಾಗಿಯೂ ಹೊದಿಕೆಯಾಗಿಯೂ ಕೆಲಸ ಮಾಡಬಲ್ಲ ನಿದ್ರಾಚೀಲ, ಚಪ್ಪಲಿ, ನೀರ ಬಾಟಲಿ, ಮದ್ಯಪಾನಪ್ರಿಯರಾದರೆ ಅದರದೊಂದು ಕ್ಯಾನ್ ಇತ್ಯಾದಿಗಳು ಇವರ ಖಾಯಂ ಸ್ಥಿರಾಸ್ತಿಗಳು. ಕೆಲವೊಮ್ಮೆ ಇವರ ಕೈಯಲ್ಲಿ ಇವರ ಬಗೆಗಿನ ಸಣ್ಣ ವಿವರದ ಫಲಕ ಮತ್ತೆ ಒಂದು ಭಿಕ್ಷಾ ತಟ್ಟೆ. ಇನ್ನು ಕೆಲವರ ಬಳಿ ಒಂದು ಸಾಕುನಾಯಿಯೂ ಜೊತೆಗಿರುವುದಿದೆ. ಯಾರಿಗೆ ಯಾರು ಆಧಾರ, ಯಾರಿಗೆ ಯಾರು ಯಜಮಾನರು ಎಂದು ಇವರೇ ತೀರ್ಮಾನಿಸಿ ಹೇಳಬೇಕು”. ಇನ್ನೊಂದು, ಲಾಕ್‌ಡೌನ್ ನಂತರ ಸಲೂನುಗಳನ್ನು ತೆರೆದ ಸಂದರ್ಭ: “ಲಂಡನ್ನಿನಲ್ಲಿ ಮಹಿಳೆಯೊಬ್ಬಾಕೆ ಮನೆಯಲ್ಲಿ ಕನ್ನಡಿಯ ಎದುರು ನಿಂತು ಹೇಗೇಗೋ ಕೂದಲು ಕತ್ತರಿಸಿಕೊಳ್ಳುತ್ತ ತಾನು ಯಾರ್ಯಾರಂತೆಯೋ ಕಾಣುತ್ತಿದ್ದೆ, ಇದೀಗ ತನ್ನ ಮಾಮೂಲಿ ಕಟ್ಟಿಂಗ್ ಶಾಪ್ನಲ್ಲಿ ತಾನು ಯಾವಾಗಲೂ ಏರುವ, ತಿರುಗುವ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತ ಮಾಡಿಕೊಂಡ ಕೇಶ ಸೇವೆಯಿಂದ ತನ್ನಂತೆಯೇ ಕಾಣಲು ಶುರು ಆಗಿದ್ದೇನೆ ಎಂದು ಖುಷಿಪಟ್ಟಿದ್ದಾಳೆ. ನಾವು ನಮ್ಮಂತೆ ಕಾಣಿಸಿಕೊಳ್ಳಲು ಬರೇ ನಮ್ಮ ಪ್ರಯತ್ನ ಪ್ರಯಾಸ ಸಾಕಾಗುವುದಿಲ್ಲ, ಇನ್ನೊಬ್ಬರ ಹಸ್ತಕ್ಷೇಪವೂ ಅಗತ್ಯ ಎನ್ನುವ ದೃಷ್ಟಾಂತ ಇದು.”
ಯೋಗೀಂದ್ರರು ಭಾರತ, ಯು.ಕೆ. ಎಂಬ ಎರಡು ದೇಶಗಳ ವಿದ್ಯಮಾನಗಳನ್ನು ಪರಸ್ಪರ ಹೋಲಿಸಿ ನೋಡುವುದಿಲ್ಲ, ಯಾವುದು ಸರಿ, ಯಾವುದು ತಪ್ಪು ಎಂಬ ತೀರ್ಮಾನವನ್ನೂ ಕೊಡುವುದಿಲ್ಲ. ಆದರೆ ಕೆಲವು ಬರಹಗಳನ್ನು, ಮುಖ್ಯವಾಗಿ “ಅತಿವೇಗದ ರೈಲಿನ ಪರವಿರೋಧದ ವಿಚಾರಗಳು” ಎಂಬ ಬರಹವನ್ನು, ಓದುವವರಿಗೆ ನಮ್ಮ ದೇಶದ ಅಂಥವೇ ವಿದ್ಯಮಾನಗಳು ಕಣ್ಮುಂದೆ ಸುಳಿಯುವುದು ಸಹಜ.

ಈ ಕೃತಿಯಿಂದ ನಮಗೆ ಯಾವುದೇ ಪತ್ರಿಕಾ ವರದಿಗಳಿಗಿಂತಲೂ ಮಿಗಿಲಾದ, ಆಳವಾದ ಅನುಭೂತಿಯುಳ್ಳ ಒಂದು ಜ್ವಲಂತ ಚಿತ್ರ ದೊರೆಯುತ್ತದೆ. ಇದಕ್ಕೆ ಕಾರಣ ಈ ಲೇಖಕರ ಮುಕ್ತ ಮನೋಧರ್ಮ. ಅದು ಕಂಡದ್ದನ್ನು ಹಲವು ಮಗ್ಗುಲುಗಳಿಂದ ಪರಿಶೀಲಿಸಿ ಕಡೆಗೆ ತನ್ನ ಗ್ರಹಿಕೆಗೆ ದಕ್ಕಿದ್ದನ್ನಷ್ಟು ಮಾತ್ರವೇ ದಾಖಲಿಸುವ ಮನೋಧರ್ಮ. ಈ ಮನೋಧರ್ಮದ ಆಳದಲ್ಲಿವುದು ವ್ಯಷ್ಟಿಯ ಮೂಲಕ ಸಮಷ್ಟಿಯನ್ನು ಪರಿಶೀಲಿಸುವ ಪ್ರತಿಭೆ. ಅಲ್ಲದಿದ್ದರೆ ‘ಸುದೀರ್ಘ ಸಂಚಾರದ ವಿಲಕ್ಷಣ ಅನುಭವಗಳು’ ಎಂಬ ಬರಹದಲ್ಲಿರುವ ಈ ವಾಕ್ಯಗಳಿಗೆ ಏನರ್ಥ?

“ನೂರಾರು ಮೈಲು ದೂರದ ಬಸ್ ಪ್ರಯಾಣ ಅಥವಾ ಸಾವಿರ ಮೈಲು ಕ್ರಮಿಸಬೇಕಾದ ರೈಲು ಯಾತ್ರೆಯಲ್ಲಿ ಇಡೀ ವಾಹನದ ಎಲ್ಲರೂ ಅನುಭವಿಸುವ ಒಂದಷ್ಟು ಸಾರ್ವತ್ರಿಕ ಅನುಭವಗಳ ಜೊತೆಗೆ ಅಲ್ಲಿನ ಒಬ್ಬೊಬ್ಬ ಯಾತ್ರಿಯದು ಅವರವರ ವ್ಯಕ್ತಿತ್ವ ಹಿನ್ನೆಲೆ ಹಾಗೂ ಸಂದರ್ಭಗಳನ್ನು ಹೊಂದಿಕೊಂಡ ವೈಯಕ್ತಿಕ ಅನುಭವಗಳೂ ಇರುತ್ತವೆ. ಸಾಗುತ್ತಿರುವ ವಾಹನ ಒಂದೇ ಆದರೂ ಒಬ್ಬ ವ್ಯಕ್ತಿಯ ಅನುಭವದಲ್ಲಿ ಏಕಕಾಲಕ್ಕೆ ಎರಡು ಯಾನಗಳು ಸಮಾನಾಂತರವಾಗಿ ನಡೆಯುತ್ತಿರುತ್ತವೆ. ಊರು ಪ್ರಾಂತ್ಯ ದೇಶ ಜಗತ್ತು ಹೀಗೆ ನಮಗಿರುವ ವಿಭಿನ್ನ ಗುರುತುಗಳಲ್ಲಿ ಗುಂಪುಗುಂಪುಗಳಾಗಿ ಚದುರಿಕೊಂಡು ನಾವು ಮಾಡುತ್ತಿರುವ ಈ ದೀರ್ಘ ಪಯಣದ ಅಡಿಯಲ್ಲಿ ನಮ್ಮ ನಮ್ಮ ವೈಯಕ್ತಿಕ ಒಳಹರಿವಿನ ಯಾನವೂ ಜೊತೆಜೊತೆಗೇ ನಡೆಯುತ್ತದೆ.”

(ಕೃತಿ: ಮುರಿದ ಸೈಕಲ್, ಹುಲಾಹೂಪ್ ಹುಡುಗಿ, ಲೇಖಕರು: ಯೋಗೀಂದ್ರ ಮರವಂತೆ,  ಬೆಲೆ: 125/-)