ತಂದೆಯಂತಹವನೊಬ್ಬ ವ್ಯಾಪಾರಿ ತನ್ನ ಮಗಳ ವಯಸ್ಸಿನ ಮಗುವಿನಲ್ಲಿ ತನ್ನ ಮಗಳನ್ನು ಕಾಣುವುದನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ರವೀಂದ್ರರು. ಕಾಬೂಲ್ ಕಡೆಯವನಾದ್ದರಿಂದ ಅವನು ಕಾಬುಲೀವಾಲಾ. ಸಮಯದ ಸಮಯಸಾಧಕತನ ಎನ್ನುವಂತೆ ಕಾಬೂಲೀವಾಲಾ ಜೈಲಿಗೆ ಹೋಗುವ ಪ್ರಸಂಗ ಎದುರಾಗುತ್ತದೆ. ಏಳೆಂಟು ವರ್ಷಗಳ ಸೆರೆವಾಸದ ತರುವಾಯ ಅದೇ ಕಾಬುಲೀವಾಲ ಮಿನಿ ಎನ್ನುವ ಆ ಮಗುವಿಗಾಗಿ ಒಣ ದ್ರಾಕ್ಷಿ, ಗೋಡಂಬಿ, ಪುಟ್ಟ ಫ್ರಾಕು ಹಿಡಿದು ತರುವುದು, ಜೈಲಿನಿಂದ ಬಂದ ಅವನನ್ನು ಅನುಮಾನದ ಕಣ್ಣುಗಳಿಂದ ಕಂಡರೂ, ಅವನ ಕಣ್ಣಲ್ಲಿನ ಪ್ರಾಮಾಣಿಕ ತಂದೆಯ ಪ್ರೀತಿಯನ್ನು ಗುರುತಿಸಿ ಮಿನಿಯ ತಂದೆ ಹನಿಗಣ್ಣಾಗುವುದು ನಿಜಕ್ಕೂ ಭಾವುಕ.
ಆಶಾ ಜಗದೀಶ್ ಅಂಕಣ

 

ನನಗೆ ಚಿಕ್ಕಂದಿನಲ್ಲಿ “ಜನಗಣಮನ” ದ ಹೊರತಾಗಿ ರವೀಂದ್ರರ ಬಗ್ಗೆ ಗೊತ್ತಿದ್ದದ್ದು ಎಂದರೆ ಅವರು ಭಾರತಕ್ಕೆ ಮೊಟ್ಟ ಮೊದಲ ನೋಬೆಲ್ ಪ್ರಶಸ್ತಿ ಅದೂ ಸಾಹಿತ್ಯಕ್ಕೆ ತಂದು ಕೊಟ್ಟದ್ದು ಎನ್ನುವ ವಿಚಾರ. ನಂತರ ನಾನು ಅವರಿಗೆ ನಿಜಕ್ಕೂ ಆಕರ್ಷಿತಳಾಗಿದ್ದು ಅವರ “ಕಾಬುಲೀವಾಲ” ಕತೆಯಿಂದ.

ಜನಗಣಮನವನ್ನು ಚಿಕ್ಕಂದಿನಿಂದಲೂ ಹಾಡುತ್ತಿದ್ದೆವು. ಅದನ್ನು ಬರೆದವರ ಬಗ್ಗೆಯೂ ಗೊತ್ತಿತ್ತು. ಕಾಲಾಂತರದಲ್ಲಿ ಇದು ಪೂರ್ಣ ಕವಿತೆ ಅಲ್ಲ, ಕವಿತೆಯೊಂದರ ಆಯ್ದ ಭಾಗ ಎಂಬುದೂ ತಿಳಿಯಿತು. ಮತ್ತೆ ಜನಗಣಮನವನ್ನು ಸಂಸ್ಕೃತದಲ್ಲಿ “ಗುಣಗಣಮಂಡಿತ ಯದುವರ ಲಸಿತಾ ರಾಜತಿ ಭಾರತ ಮಾತಾ….” ಎಂದೂ ಕಲಿತು ಸಮಭ್ರಮದಿಂದ ಹಾಡಿದ್ದೆವು. ನಂತರ ಅವರಿಗೆ ನೋಬೆಲ್ ದೊರಕಿಸಿಕೊಟ್ಟ “ಗೀತಾಂಜಲಿ” ಯನ್ನು ಹುಡುಕಿ ಓದಿದ್ದೆ. ಅದೆಷ್ಟು ಚಂದದ ಕವಿತೆಗಳು ಅವು… ರವೀಂದ್ರರು ಯಾಕಿಷ್ಟು ಹತ್ತಿರವಾಗುತ್ತಾರೆ ಎಂದು ಹಲವಾರು ಬಾರಿ ಯೋಚಿಸಿದ್ದಿದೆ. ಅದು ಅವರ ಕರುಣಾ ಪೂರಿತ ಮನಸ್ಸಾ… ಬಹುಮುಖೀ ಪ್ರತಿಭೆಯಾ… ವಿರಕ್ತಿಯಾ… ಆಧ್ಯಾತ್ಮದಲ್ಲಿ ಅದ್ದಿದಂತಹ ವ್ಯಕ್ತಿತ್ವವಾ… ಸಂಪೂರ್ಣ ಸ್ವಾರ್ಥ ಚಿಂತನೆಯನ್ನು ಕಳೆದುಕೊಂಡ ಬದುಕಾ… ಗೊತ್ತಿಲ್ಲ… ಅವರದೊಂದು ಭಾವಚಿತ್ರ ಕಣ್ಮುಂದೆ ಬಂದರೂ ನಾನವರಿಗೆ ಸೋತುಬಿಡುತ್ತೇನೆ ಅನಿಸಲು ಶುರುವಾಗುತ್ತದೆ.

ನಮ್ಮೊಳಗೆ ರಾಗ ದ್ವೇಷಗಳನ್ನು ಕಳೆದುಕೊಂಡು ಮೀಟಿ ಬಿಟ್ಟ ತಂತಿಯೊಂದಿದ್ದರೆ ಅದೇ ನಮ್ಮ ಮೈ ಮನಸ್ಸನ್ನು ಶ್ರುತಿಗೊಳಿಸುತ್ತದೆ. ಯಾವುದು ಕಾಲದೊಂದಿಗೆ ಮಾಸುತ್ತದೋ ಅದರ ಆಸೆ ತೊರೆದರೆ ಬಹುಶಃ ನಮ್ಮೊಳಗಿನ ಪುಟ್ಟ ಶಕ್ತಿಗೆ ಜಗದ ಶಕ್ತಿಯನ್ನು ಸೇರುವ ದಾರಿ ಸಿಕ್ಕುತ್ತದೆ. ಮೈಮರೆತು ಗುನುಗುವ ಹಾಡಿನಲ್ಲಿ, ಪರಿವೆ ಕಳೆದುಕೊಂಡು ಹಾಕಿದ ಹೆಜ್ಜೆಗಳಲ್ಲಿ, ಸ್ವಚ್ಛಂದ ನಗುವಿನಲ್ಲಿ ಜಗದ ಏಕ ಸೂತ್ರವಿದೆ. ಮತ್ತದನ್ನು ನಮ್ಮ ನೇರಕ್ಕೆ ಎಳೆದು ಹರಿಯುವುದಕ್ಕಿಂತ ಹೇಗೆ ಯಾವುದಕ್ಕೆ ನಮ್ಮ ಸೃಷ್ಟಿಯಾಗಿದೆ ಎನ್ನುವುದನ್ನು ಅರಿಯಬಹುದಾದ ತಿಳಿವು ಬೇಕು ಪ್ರತಿಯೊಬ್ಬರಿಗೂ. ಇದೆಲ್ಲದರ ಸಾರವನ್ನು ಎರಕ ಹೊಯ್ದಂತೆ ಇದೆ ರವೀಂದ್ರರ ಬರಹ.

ಬಹುಶಃ ಮತ್ತೊಂದು ಬಲವಾದ ಕಾರಣ, ಅವರ ಕತೆ ಮತ್ತು ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳ ಪೋಷಣೆ. ಅದೆಂತಹ ಪರಕಾಯ ಪ್ರವೇಶ ಅದು?! “ಅವಳ” ಆಂತರ್ಯವನ್ನು ನಿಖರವಾಗಿ ಚಿತ್ರಿಸುವಷ್ಟೇ ಸಮರ್ಥವಾಗಿ ಸಮಾಜದ ನಡುವೆ ಅವಳದೆಂತಹ ಸ್ಥಿತಿ ಮತ್ತು ಪುರುಷ ಪ್ರಧಾನ ಸಮಾಜ ಅವಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ರೀತಿಯನ್ನು ಚಿತ್ರಿಸುತ್ತಾರೆ ರವೀಂದ್ರರು. ಇವತ್ತು ನಾವೇನು ಸ್ತ್ರೀ ಸಮಾನತೆ, ಸ್ತ್ರೀ ಸಬಲೀಕರಣ ಎಂದು ಬೊಬ್ಬೆ ಹಾಕುತ್ತಿದ್ದೇವೋ (ಮತ್ತದಕ್ಕಾಗಿ ಏನನ್ನೂ ಮಾಡುತ್ತಿಲ್ಲವೆನ್ನುವ ವಿಷಾದವೂ…) ಅದನ್ನು ರವೀಂದ್ರರು ಆ ಕಾಲದಲ್ಲಿಯೇ ತಮ್ಮ ಬರಹದ ಮೂಲಕ ಮಾಡಿದ್ದಾರೆ ಎನ್ನುವುದಕ್ಕೆ ಬೇಕಾದ ಪುರಾವೆಯೂ ಅವರ ಬರಹದಲ್ಲಿದೆ. ಹೆಣ್ಣನ್ನು ಚಿತ್ರಿಸುವಾಗ ರವೀಂದ್ರರು ಸಾಕ್ಷಾತ್ ಹೆಣ್ಣೆ ಆಗಿಬಿಡುತ್ತಾರೆ. ಹಾಗಾಗಿಯೇ ಅವರು ಹೆಣ್ಣು ಹೃದಯದ ಋಜುವಾತು. ಅವರು ಅವಳ ಭಾವವನ್ನು ಆಡಬಲ್ಲರು, ಆಡಿಸಲೂ ಬಲ್ಲರು.

ಅವರ “ಕಾಬುಲೀವಾಲಾ”ವಂತೂ ಒಂದು ಹಂತವನ್ನು ಏರಿ ಬೆಳೆದ ಕತೆ. ತಂದೆಯಂತಹವನೊಬ್ಬ ವ್ಯಾಪಾರಿ ತನ್ನ ಮಗಳ ವಯಸ್ಸಿನ ಮಗು(ಮಿನಿ)ವಿನಲ್ಲಿ ತನ್ನ ಮಗಳನ್ನು ಕಾಣುವುದನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ರವೀಂದ್ರರು. ಕಾಬೂಲ್ ಕಡೆಯವನಾದ್ದರಿಂದ ಅವನು ಕಾಬುಲೀವಾಲಾ. ಸಮಯದ ಸಮಯಸಾಧಕತನ ಎನ್ನುವಂತೆ ಕಾಬೂಲೀವಾಲಾ ಜೈಲಿಗೆ ಹೋಗುವ ಪ್ರಸಂಗ ಎದುರಾಗುತ್ತದೆ. ಏಳೆಂಟು ವರ್ಷಗಳ ಸೆರೆವಾಸದ ತರುವಾಯ ಅದೇ ಕಾಬುಲೀವಾಲ ಮಿನಿ ಎನ್ನುವ ಆ ಮಗುವಿಗಾಗಿ ಒಣ ದ್ರಾಕ್ಷಿ, ಗೋಡಂಬಿ, ಪುಟ್ಟ ಫ್ರಾಕು ಹಿಡಿದು ತರುವುದು, ಜೈಲಿನಿಂದ ಬಂದ ಅವನನ್ನು ಅನುಮಾನದ ಕಣ್ಣುಗಳಿಂದ ಕಂಡರೂ, ಅವನ ಕಣ್ಣಲ್ಲಿನ ಪ್ರಾಮಾಣಿಕ ತಂದೆಯ ಪ್ರೀತಿಯನ್ನು ಗುರುತಿಸಿ ಮಿನಿಯ ತಂದೆ ಹನಿಗಣ್ಣಾಗುವುದು ನಿಜಕ್ಕೂ ಭಾವುಕ. ಕೊನೆಗೆ ಅವನಿಗೆ “ನಿನ್ನ ದೇಶಕ್ಕೆ ಮೊದಲು ಹೋಗು, ನಿನ್ನ ಕುಟುಂಬವನ್ನು ಸೇರಿಕೋ…” ಎಂದು ಹೇಳಿ ಅವನ ಕೈಗೊಂದಷ್ಟು ದುಡ್ಡು ಕೊಡುವ ಮಿನಿಯ ತಂದೆಯ ಮನದಲ್ಲಿ ಒಂದು ಕಡೆ ಮಗಳನ್ನು ಮದುವೆ ಮಾಡಿಕೊಡುತ್ತಿರುವ ದುಃಖ ಮತ್ತು ಕಾಬೂಲಿವಾಲಾ ಅವನ ಮಗಳನ್ನು ಸೇರುವುದಕ್ಕೆ ತಾನು ಕಾರಣನಾದೆ ಎನ್ನುವ ಸಾರ್ಥಕತೆ… ಮಕ್ಕಳ ಮನೋಲೋಕದ ಅನಾವರಣದೊಟ್ಟಿಗೆ ದೂರ ದೇಶದಲ್ಲಿ ಮಾನಸಿಕವಾಗಿ ದುರ್ಬಲನಾಗುವ ವ್ಯಕ್ತಿ ಹೇಗೆ ಭಾವನೆಗಳಿಗೆ ಸೋಲುತ್ತಾನೆ ಮತ್ತು ತನ್ನವರಿಗಾಗಿ ಹಂಬಲಿಸುತ್ತಾ ಎಲ್ಲರಲ್ಲೂ ಅವರನ್ನೇ ಕಾಣಲು ಪ್ರಯತ್ನಿಸುತ್ತಾನೆ ಎನ್ನುವುದನ್ನು ಬಹಳ ಸುಂದರವಾಗಿ ಸಂಯಮದಿಂದ ಚಿತ್ರಿಸುತ್ತಾರೆ ರವೀಂದ್ರರು. ಆ ಸಂಯಮವೇ ಓದುಗರ ಮನದಲ್ಲಿ ಭಾವನೆಗಳು ಪುಟಿಯಲು ಸಿಗುವ ಅವಕಾಶ.

ರವೀಂದ್ರರ ಎಷ್ಟೋ ಕತೆಗಳ ನಡುವೆ ಇದೊಂದು ಕತೆ ಭಿನ್ನವಾಗಿ ನಿಲ್ಲುತ್ತದೆ. ಒಂದು ಸುಂದರ ಚೌಕಟ್ಟಿನಲ್ಲಿ ಹೆಣೆದ ಅತ್ಯದ್ಭುತ ಪರಿಣಾಮಕಾರಿ ಕತೆ. ಹಾಗಾಗಿಯೇ ಈ ಮಟ್ಟಿಗಿನ ಪ್ರಸಿದ್ಧಿ ಪಡೆದಿದೆ.

ರವೀಂದ್ರರ An astrologers day ಎನ್ನುವ ಕತೆ ಸಹ ನನ್ನ ಬಹಳಾ ಇಷ್ಟದ ಕತೆಗಳಲ್ಲೊಂದು. ಇದೊಂದು ವಿಚಿತ್ರ ತಿರುವುಗಳಿರುವ ಸಸ್ಪೆನ್ಸ್ ಕತೆ. ಅಂತಹ ಕತೆಗಳಿಗೆ ಬೇಕಾದ ರೋಚಕತೆ, ನಿಗೂಢತೆ ಮತ್ತು ಕತೆಯನ್ನು ಗೆಲ್ಲಿಸಬಹುದಾದ ಒಳಕತೆ ಎಲ್ಲವೂ ಈ ಕತೆಯಲ್ಲಿದೆ. ಮತ್ತು ಮಾನವ ಸಹಜ ಗುಣಗಳು ಹೇಗೆ ಸಮಯದ ಜೊತೆ ಮಾಗುತ್ತಾ ಹೋಗುತ್ತವೆ ಮತ್ತು ದ್ವೇಷ ನಮ್ಮನ್ನು ಎಂತಹ ಅತಿರೇಕದ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿಬಿಡುತ್ತದೆ ಎನ್ನುವುದನ್ನು ಒಂದು ಕಾಲ್ಪನಿಕ ಕತೆಯ ಮೂಲಕ ರವೀಂದ್ರರು ಹೇಳುತ್ತಾರೆ. ಅಷ್ಟಕ್ಕೂ ರವೀಂದ್ರರ ಒಟ್ಟಾರೆ ಬರಹದ ಮೂಲ ಕಾಳಜಿಯೂ ಮಾನವತ್ವವೇ… ಹಾಗಾಗಿಯೇ ಅವರ ಬರಹಗಳೆಲ್ಲವಕ್ಕೂ ತಟ್ಟುವ ಗುಣವೊಂದು ತಾನೇ ತಾನಾಗಿ ಮೈಗೂಡಿಬಿಡುತ್ತದೆ.

ರವೀಂದ್ರರು ಬಂಗಾಳದಲ್ಲಿ ಅಷ್ಟೊಂದು ಪ್ರಚಲಿತವಿಲ್ಲದಿದ್ದ ಕಾಲದಲ್ಲಿ ಪ್ರಸಿದ್ಧವಲ್ಲದ ಸಣ್ಣ ಕತಾ ಪ್ರಕಾರವನ್ನು ಮುನ್ನಲೆಗೆ ತಂದಂಥವರು. ಮತ್ತು ಬಹಳ ವಿಭಿನ್ನ ರೀತಿಯ ಪ್ರಯೋಗವನ್ನು ತಮ್ಮ ಕತೆಗಳಲ್ಲಿ ಮಾಡಿದಂಥವರು. ಈ ನೆಲೆಯಲ್ಲಿ ಅವರ A wrong man in a workers paradise ಒಂದು ಅತ್ಯುತ್ತಮವಾದ ಕತೆ.

ಇಲ್ಲಿ ಕಲೆಯಿಲ್ಲದ ಬದುಕು ಒಂದು ಬದುಕೇ ಅಲ್ಲ ಅನ್ನುವಂಥ ವ್ಯಕ್ತಿಯೊಬ್ಬ ಅಚಾನಕ್ ವರ್ಕರ್ಸ್ ಪ್ಯಾರಡೈಸ್ ಗೆ ಬಂದುಬಿಡುತ್ತಾನೆ. ಅಲ್ಲಿನ ಕೆಲಸಗಾರರೋ, ಅವರ ಬದುಕು ಉಸಿರು ಎಲ್ಲವೂ ಕೆಲಸವೇ. ಒಂದೇ ಒಂದು ಸೆಕೆಂಡನ್ನೂ ಅನವಶ್ಯಕವಾಗಿ ಕಳೆಯಲಾರರು. ಇಂತಹ ಎರೆಡು ಎಕ್ಸ್ಟ್ರೀಮ್ ಗಳು ಒಂದೆಡೆ ಸೇರಿದಾಗ ಆಗುವ ಘರ್ಷಣೆ, ಒಂದರ ಮೇಲೊಂದರ ಮೇಲಾಟ… ಕೊನೆಗು ಬದುಕು ಎನ್ನುವುದು ಏನನ್ನು ನಿರೀಕ್ಷಿಸುತ್ತದೆ ಎನ್ನುವುದು ಇಲ್ಲಿ ಬಹಳ ಚಂದ ಮಾರ್ಮಿಕವಾಗಿ ನಿರೂಪಣೆಗೊಂಡಿದೆ. ಇಂತಹ ನೈಜವಲ್ಲದ ಚಿತ್ರಣಗಳ ಮೂಲಕ ಉದಾತ್ತ ಚಿಂತನೆಯನ್ನು ಓದುಗರ ಮುಂದೆ ತೆರೆದಿಡುವ ರವೀಂದ್ರರ ಕಥೆಗಳು ಓದುಗರ ಹೃದಯದಲ್ಲಿವೆ.

ರವೀಂದ್ರರ ಬಹಳಷ್ಟು ಕಾದಂಬರಿಗಳೂ ಸಹ ಬಹಳ ವಿಚಾರಾತ್ಮಕ ಮತ್ತು ವಿಶ್ಲೇಷಣಾತ್ಮಕ. “ಗೋರಾ” ಅವರ ಪ್ರಸಿದ್ಧ ಕಾದಂಬರಿಯಾಗಿದ್ದರೂ ನನ್ನ ಯೋಗಾಯೋಗವೋ ಏನೋ, ನಾನು ಮೊದಲು ಓದಿದ್ದು ಅವರ “ಯೋಗಾಯೋಗ” ಕಾದಂಬರಿಯನ್ನು. ಅದನ್ನು ಓದುವಾಗ ಅದರ ಕಥಾನಾಯಕಿ ಕುಮುದಿನಿ ನನ್ನನ್ನು ಅದೆಷ್ಟು ಕಾಡಿದ್ದಳೆಂದರೆ ಆ ತೀವ್ರತೆಯೇ ರವೀಂದ್ರರ ಪರಕಾಯ ಪ್ರವೇಶದ ನಿಜವಾದ ಶಕ್ತಿ ಅನಿಸಿಬಿಟ್ಟಿತ್ತು. ನಾನೇ ಕುಮುದಿನಿಯಾದಂತೆ ಅವಳು ಅತ್ತಾಗ ಅತ್ತು, ನಕ್ಕಾಗ ನಕ್ಕು, ಖಿನ್ನಳಾದಾಗ ಮ್ಲಾನಳಾಗಿ ಅದೆಷ್ಟೋ ಹೊತ್ತು ಕೂತದ್ದು ಇದೆ. ಅಹೋಬಲ ಶಂಕರರ ಅನುವಾದದಲ್ಲಿ ಯೋಗಾಯೋಗ ಎನ್ನುವ ಅದೇ ಹೆಸರಿನಲ್ಲಿ ಹೊರಬಂದಿರುವ ಈ ಪುಸ್ತಕವನ್ನು ಓದುವಾಗ ನಾನು ನಾನಾಗಿರಲಿಲ್ಲ. ಕುಮುದಿನಿಯೇ ನಾನಾಗಿದ್ದೆ ಬಹುಶಃ.

ಅವರ ಕತೆ ಮತ್ತು ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳ ಪೋಷಣೆ. ಅದೆಂತಹ ಪರಕಾಯ ಪ್ರವೇಶ ಅದು?! “ಅವಳ” ಆಂತರ್ಯವನ್ನು ನಿಖರವಾಗಿ ಚಿತ್ರಿಸುವಷ್ಟೇ ಸಮರ್ಥವಾಗಿ ಸಮಾಜದ ನಡುವೆ ಅವಳದೆಂತಹ ಸ್ಥಿತಿ ಮತ್ತು ಪುರುಷ ಪ್ರಧಾನ ಸಮಾಜ ಅವಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ರೀತಿಯನ್ನು ಚಿತ್ರಿಸುತ್ತಾರೆ ರವೀಂದ್ರರು.

ಈ ಕಾದಂಬರಿಯ ನಾಯಕಿಯೇ ಕುಮುದಿನಿ. ಹಿಂದೆ ಅತ್ಯಂತ ಶ್ರೀಮಂತರಾಗಿದ್ದರೂ ಈಗ ಆ ಶ್ರೀಮಂತಿಕೆ ಇಳಿಮುಖವಾಗಿರುವ ಕುಟುಂಬದಲ್ಲಿ ಹುಟ್ಟಿದವಳು. ಅದೃಷ್ಟವೋ ದುರದೃಷ್ಟವೋ… ತನ್ನ ಶತ್ರು ಮನೆತನದ ಶ್ರೀಮಂತ ಕುಟುಂಬದ ಮಧುಸೂಧನನ ಕೈ ಹಿಡಿಯುತ್ತಾಳೆ. ಇದೇ “ಯೋಗಾಯೋಗ”. ಮಧುಸೂಧನನ ದರ್ಪಾಭಿಮಾನಗಳ ಎದಿರು ಕೋಮಲ ಮನಸ್ಥಿತಿಯ ಕುಮುದಿನಿ ನಲುಗುವುದು ಮತ್ತು ಅವಳ ಅಣ್ಣ ಅನುಭವಿಸುವ ಅಪಮಾನಗಳು ಕಾದಂಬರಿಯಲ್ಲಿ ಅಷ್ಟೇ ತೀಕ್ಷ್ಣವಾಗಿ ಕರುಣಾಜನಕವಾಗಿ ಚಿತ್ರಿಸಲ್ಪಟ್ಟಿವೆ. ಆದರೆ ಕೊನೆಗೆ ಕತೆ ಸುಖಾಂತ್ಯವಾದಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅದಷ್ಟೇ ಸಮಾಧಾನ. ಕುಮುದಿನಿ ಮಧುಸೂಧನರ ನಡುವಿನ ಅಂತಸ್ತುಗಳ ವ್ಯತ್ಯಾಸ, ತಾರತಮ್ಯ, ಅಹಂ, ಪ್ರೇಮ… ಈ ಎಲ್ಲವುಗಳ ಹದವಾದ ಪಾಕ ಈ ಕಾದಂಬರಿ.

“ಯೋಗಾಯೋಗ ರವೀಂದ್ರರ ಕಥೆಗಳೆಲ್ಲೆಲ್ಲ ಬಹು ಸುಂದರವಾದುದು, ಅತ್ಯುತ್ತಮವಾದುದು. ಇಲ್ಲಿ “ನೌಕಾಘಾತ”ದ ಆಕಸ್ಮಿಕ ಸನ್ನಿವೇಶಗಳ ಪರಂಪರೆಯಿಲ್ಲ, “ವಿನೋದಿನಿ”ಯಲ್ಲಿ ಕಂಡುಬರುವ ಸಮಾಜ ಸುಧಾರಣೆಯ ತೊಡಕಿನ ವಿಪರೀತ ಪರಿಸ್ಥಿತಿಗಳಿಲ್ಲ. ಮನೆಜಗತ್ತಿನ ಅತೀವವಾದ ಮನೋವಿಶ್ಲೇಷಣೆಯಿಲ್ಲ. “ಗೋರಾ”ದ ಮತೀಯ ರಾಜಕೀಯ ಗೊಂದಲಗಳ ಭಾರವಿಲ್ಲ. ಸಂಸಾರದಲ್ಲಿ ಸಾಮಾನ್ಯವಾಗಿ ಏಳಬಹುದಾದ ಸಮಸ್ಯೆಯೊಂದರ ಸಹಜ, ಸರಳ, ಸುಂದರ ಚಿತ್ರಣವಿದೆ. ಕಾಲದಿಂದ ಮಾಸದ ಸ್ವಾರಸ್ಯವುಳ್ಳ ಕಥಾಬೀಜವೊಂದು ಇಲ್ಲಿ ಕಲಾತ್ಮಕವಾಗಿ ಹೃದಯಾಹ್ಲಾದಕರವಾಗಿ ವಿಕಾಸ ಹೊಂದಿದೆ…” ಎನ್ನುತ್ತಾರೆ ಪ್ರಕಾಶಕರು.

ಇದರ ಹೊರತಾಗಿಯೂ ಓದುಗರ ಮನಸಿನಲ್ಲಿ ಇಂತಹುದೇ ಅಭಿಪ್ರಾಯ ಮೂಡುತ್ತದೆ. ಹೆಣ್ಣಾಗಿ ಈ ಕಾದಂಬರಿಯನ್ನು ಓದುವಾಗ ರವೀಂದ್ರರೊಳಗಿನ ಹೆಣ್ತನ (ಪರಕಾಯ ಪ್ರವೇಶ) ಬೆರಗುಗೊಳಿಸಿತ್ತು. ಪ್ರತಿ ಗಂಡಿನೊಳಗೂ ಒಬ್ಬ ಹೆಣ್ಣಿರುತ್ತಾಳೆ, ಹಾಗೆಯೇ ಪ್ರತಿ ಹೆಣ್ಣಿನೊಳಗೂ ಒಬ್ಬ ಗಂಡಿರುತ್ತಾನೆ. ಆದರೆ ತಮ್ಮತನದೊಳಗಿನ ಆ ಅನ್ಯ ಅಂಶವನ್ನು ಜಾಗೃತವಾಗಿಟ್ಟುಕೊಂಡು ತಾವು ತಾವಾಗಿ ಉಳಿಯುತ್ತಾ ಹೋಗುವುದು ಸಾಮಾನ್ಯ ವಿಷಯವಲ್ಲ. ಮತ್ತದು ಎಲ್ಲರಿಗೂ ಸುಲಭ ಸಾಧ್ಯವೂ ಅಲ್ಲ.

ಹೆಣ್ಮನಸಿನ ಈ ಕಾದಂಬರಿ ಬಹಳಷ್ಟು ಪಾತ್ರಗಳಲ್ಲಿ ನಿಂತು ನಿಂತು ಹರಿಯುತ್ತದೆ. ಕುಮುದಿನಿಯ ಮಾತು ಮತ್ತು ಸ್ವಗತಗಳು ಆಗಿನ ಸಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣಿನ ಸ್ಥಿತಿ ಏನಾಗಿದ್ದೀತೆಂಬುದರ ಪುರಾವೆಯಾಗುತ್ತಲೇ ಇಂದಿನ ಸ್ಥಿತಿಯನ್ನೂ ಪ್ರಶ್ನಿಸುತ್ತವೆ. ಕುಮುದಿನಿಯ ಕೆಲವು ಮಾತುಗಳನ್ನೇ ನೋಡಿ,

“ಹೆಚ್ಚು ನೋಡಿದ ಹಾಗೆಲ್ಲಾ ಹೆಚ್ಚು ತಿಳಿದುಕೊಳ್ಳುವಂತಹ ಬೆಲೆ ಯಾವುದೂ ನನ್ನಲ್ಲಿಲ್ಲವಲ್ಲ? ನನ್ನ ಒಳಗಡೆ ಬರೀ ಶೂನ್ಯವೆಂದು ನನಗೇ ಕಾಣುತ್ತೆ. ಆ ಟೊಳ್ಳೇ ಬರಬರುತ್ತಾ ಚೆನ್ನಾಗಿ ಕಾಣಿಸುತ್ತಾ ಇದೆ. ಅದಕ್ಕೋಸ್ಕರವೇ ಅವರು ಖುಷಿಯಾಗಿರುವುದನ್ನು ಹಠಾತ್ತಾಗಿ ನೋಡಿದಾಗಲೆಲ್ಲ ಅಯ್ಯೋ ಮೋಸಹೋಗಿದಾರೆ ಅಂತ ಅನ್ನಿಸುತ್ತೆ. ಹಾಗಂತ ಅವರಿಗೇ ತಿಳಿದುಬಿಟ್ಟರೆ ತಕ್ಷಣ ಅವರ ಕೋಪ ಹೆಚ್ಚಾಗುತ್ತೆ. ಆದರೆ ಆ ಕೋಪವೇ ಸತ್ಯ ಎಂದುಕೊಂಡರೆ ನನಗೆ ಅದರಿಂದೇನು ಅಷ್ಟು ಭಯವಾಗುವುದಿಲ್ಲ.”

ಇಷ್ಟು ಸತ್ಯವನ್ನು ಒಪ್ಪಿಕೊಂಡಂತಹ ಸರಳ ಆತ್ಮ ಮತ್ತೊಂದಿರಲು ಸಾಧ್ಯವಾ ಅನಿಸುತ್ತದೆ ಈ ಮಾತುಗಳನ್ನು ಓದುವಾಗ….
“ನನ್ನನ್ನೇ ಸ್ವಲ್ಪವಾದರೂ ಮರೆಮಾಡಿಕೊಳ್ಳೋಣವೆಂದರೆ ಮರೆಯಾದ ಜಾಗ ಎಲ್ಲೂ ಒಂದಿಷ್ಟೂ ಉಳಿದಿಲ್ಲ. ಸಾವನ್ನು ಬಿಟ್ಟರೆ ಹೆಂಗಸರಿಗೆ ಏಕಾಂತವಾಗಿ ಒಂದಿಷ್ಟು ಹಾಯಾಗಿರುವುದಕ್ಕೆ ಬೇರೆ ಯಾವ ಸ್ಥಳವೂ ಇಲ್ಲವೇ? ಅವರ ಪ್ರಪಂಚವನ್ನೇಕೆ ಬ್ರಹ್ಮ ಇಷ್ಟು ಇಕ್ಕಟ್ಟಾಗಿರುವಂತೆ ಮಾಡಿದ್ದಾನೆ?”

ನಮ್ಮ ಮುಕ್ಕಾಲುವಾಸಿ ಹೆಣ್ಮಕ್ಕಳ ಸ್ಥಿತಿ ಇದು. ಇದು ಇಂದಿಗೂ ಹೆಚ್ಚೇನೂ ಬದಲಾಗಿಲ್ಲ. ನಮ್ಮೆಲ್ಲ ಸ್ಥಿತಿಗೂ ದೇವರನ್ನು ಹೊಣೆಮಾಡುವ ದೈನೇಸಿತನ ಇಂದು ಇಲ್ಲ. ಆ ಸ್ಥಿತಿಗೆ ಕಾರಣ ಯಾರು ಎನ್ನುವುದೂ ತಿಳಿದಿದೆ ನಮಗೆ. ಮತ್ತವರನ್ನು ವಿರೋಧಿಸುವ ಶಕ್ತಿ ಮತ್ತು ಅವಕಾಶ ಎರಡೂ ಇದೆ. ಆದರೂ ಆಗಿನ ಆ ಸ್ಥಿತಿ ಹೆಚ್ಚು ಬದಲಾಗಿಲ್ಲ ಎನ್ನುವುದು ದುರಂತವೇ.

ಇತ್ತೀಚೆಗೆ ರವೀಂದ್ರರ ಸ್ತ್ರೀ ಭೂಮಿಕೆಯ ಕತೆಗಳನ್ನು ಓದುತ್ತಿದ್ದೆ. ಜಿ.ಎನ್.ರಂಗನಾಥ ರಾವ್ ಅವರು ರವೀಂದ್ರರ ಆಯ್ದ ಹತ್ತು ಅತ್ಯುತ್ತಮ ಸ್ತ್ರೀ ಭೂಮಿಕೆಯ ಕಥೆಗಳನ್ನು “ಅವಳು” ಎನ್ನುವ ಹೆಸರಿನಲ್ಲಿ ನಮಗಿಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಇಲ್ಲಿನ ಪ್ರತಿಯೊಂದು ಕತೆಯೂ ನಮ್ಮನ್ನು ತೀವ್ರವಾಗಿ ಕಾಡುತ್ತವೆ.

“ಬಂಗಾಳಿ ಸ್ತ್ರೀಯರು ಏಕೆ ತಮ್ಮ ಸೀರೆಗೆ
ಬೆಂಕಿ ಹಚ್ಚಿಕೊಂಡು ಸಾಯುವ ನಾಟಕ
ಆಡ್ತಾರೆ? ಅವರೇಕೆ ಬಂಗಾಳದ ಪುರುಷ ಸಿಂಹಗಳ
ಧೋತಿಗಳೊಟ್ಟಿಗೆ ಬೆಂಕಿಹಚ್ಚಿಕೊಂಡು
ಸಾಯುವುದಿಲ್ಲ…”

ಎಂದು “ಹೆಂಡತಿಯ ಪತ್ರ” ಎನ್ನುವ ಕತೆಯಲ್ಲಿ ಮೃಣಾಲಿನಿ ಕೇಳುವ ಮಾತು ಇಂದಿಗೂ ಸುಸಂಗತ. ಹೆಣ್ಣು ತನ್ನ ಆಂತರ್ಯವನ್ನು ಬಗೆದು ಬರೆದರೆ ಫೆಮಿನಿಸ್ಟ್, ಫೆಮಿನಿಸಂ ಎಂದು ಹಣೆಪಟ್ಟಿ ಹಚ್ಚುವ ನಾವೆಲ್ಲ ರವೀಂದ್ರರ ಬರಹಗಳನ್ನು ಆಳಕ್ಕಿಳಿದು ಓದಬೇಕಿದೆ, ಅವಲೋಕಿಸಿ ಅನುಸಂಧಾನಿಸಿ ಅರ್ಥೈಸಿಕೊಳ್ಳಬೇಕಿದೆ.

ಮೊನ್ನೆ ಎರಡನೇ ತರಗತಿಯಲ್ಲಿರುವ ನನ್ನ ಪುಟ್ಟ ಮಗನೊಂದಿಗೆ ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ “ನಿನಗೆ ಜನಗಣಮನ ರಾಷ್ಟ್ರಗೀತೆಯನ್ನು ಬರೆದವರು ಯಾರು ಗೊತ್ತಾ?” ಎಂದು ಕೇಳಿದೆ. “ಹಾ ಗೊತ್ತು ಗೊತ್ತು ಗೊತ್ತು … ಅವರು ರವೀಂದ್ರನಾಥ ಟ್ಯಾಗೋರ್.. ಫಸ್ಟ್ ಮೊಬೈಲ್ ಪ್ರೈಜ಼್ ಪಡೆದವರು…” ಎಂದ. ಉಕ್ಕಿ ಬಂದ ನಗು ತಡೆಯುತ್ತಾ “ಅದು ಮೊಬೈಲ್ ಪ್ರೈಜ಼್ ಅಲ್ಲ ಮಗನೇ, ನೋಬೆಲ್ ಪ್ರೈಜ಼್…” ಎಂದೆ. ಪಾಪ ಪೆಚ್ಚಾದ ಅವನು “ಮ್ಯಾಮೇ ಹೇಳಿದ್ದು ನಂಗೆ. ಅದು ಮೊಬೈಲ್ ಅಂತಾನೇ ನಂಗೆ ಕೇಳ್ಸಿದ್ದು…” ಅಂದ ಗಲ್ಲ ಊದಿಸಿಕೊಳ್ಳುತ್ತಾ….