ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ ದೃಷ್ಟಿ ಹಾಯಿಸುತ್ತಾ ಎರಡರ ನಡುವಿನ ತುಲನೆ ಮತ್ತು ಸಂತುಲನೆಯ ನ್ಯಾಯಬದ್ಧ ತಕ್ಕಡಿಯಲ್ಲಿಟ್ಟು ತೂಗಿನ ಮುಳ್ಳ ಇಶಾರೆಯಂತೆ ನಡೆಯಬೇಕಿರುತ್ತದೆ. ಈ ಎಲ್ಲ ತಿಳುವಳಿಕೆಯೂ ಕಲಿಕೆ ಎನ್ನುವುದಕ್ಕಿಂತ ಹೃದ್ಗತವಾದದ್ದರ ಒಟ್ಟಾರೆ ಫಲಿತಾಂಶ ಎನ್ನಬಹುದೇನೋ….
ಇತ್ತೀಚೆಗಷ್ಟೇ ಬಿಡುಗಡೆಯಾದ ರಾಜು ಸನದಿಯವರ ಕವನ ಸಂಕಲನ “ದುಗುಡದ ಕುಂಡ” ಪುಸ್ತಕದ ಕುರಿತು ಆಶಾ ಜಗದೀಶ್ ಲೇಖನ

 

ಈ ಹೊತ್ತಿನಲ್ಲಿ ರಾಜ್ಯದ ಕೆಲವೇ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಜಲಪ್ರಳಯಕ್ಕೀಡಾಗಿವೆ. ಕಣ್ಣಿಗೆ ಕಾಣಿಸಿದಷ್ಟೂ ನೀರು… ನೀರು ನೀರೆಂಬ ಹಾಹಾಕಾರ… ಎದೆಗೆ ಬೈರಿಗೆಯನಿಟ್ಟು ಕೊರೆದು ಕುಡಿದ ನೀರೆಲ್ಲ ಸೇಡು ತೀರಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಸಧ್ಯಕ್ಕೆ ಪ್ರಕೃತಿಯ ಅಟ್ಟಹಾಸಕ್ಕೆ ಸಿಕ್ಕಿ ನಲುಗುತ್ತಿರುವ ಮನುಷ್ಯನ ಬಗ್ಗೆ ಅನುಕಂಪದಿಂದ ಸಂತಾಪ ಸೂಚಿಸಬೇಕೋ, ಅವರದೇ ಸ್ವಯಂಕೃತ ಅಪರಾಧವಿದೆಂದು ನ್ಯಾಯ ತೀರ್ಮಾನ ಮಾಡಬೇಕೋ ಅಥವಾ ಪ್ರಕೃತಿಯ ಮೇಲೆ ಮನುಷ್ಯ ಮಾಡಿದ ಅತ್ಯಾಚಾರದ ಪರಿಣಾಮವನ್ನು ಅವನೇ ಉಣ್ಣಬೇಕಿತ್ತು ಮತ್ತು ಉಣ್ಣುತ್ತಿದ್ದಾನೆ ಎಂದು ಕೈಚೆಲ್ಲುವುದೋ…. ಏನೂ ಮಾಡಲಾಗದ, ಮಾತಾಡಲಾಗದ, ದಿಕ್ ಕಾಣದ ಸ್ಥಿತಿ…

ನಮ್ಮ ಸಾಹಸ, ಮಹತ್ವಾಕಾಂಕ್ಷೆ, ಸಾಧನೆ ಎಂಬೆಲ್ಲವೂ ಶೂನ್ಯವಾಗುವ ಏನೂ ಅಲ್ಲವೆನ್ನಿಸಿಕೊಳ್ಳುವ ಪರಿಸ್ಥಿತಿ… ಇದಕ್ಕೆ ಸ್ಪಂದಿಸುವುದಾದರೂ ಹೇಗೆ… ಬರಹ ಒಂದು ಸಾಧ್ಯತೆ ಅನಿಸುತ್ತಿದೆ. ಒಂದು ಕವಿತೆ, ಒಂದು ಕತೆ ತಪ್ಪು ಮಾಡುವವರಿಗೊಂದು ಪಾಠ ಹೇಳಬಹುದು, ಇತಿಹಾಸ ತಿರುವು ಹಾಕುವವರಿಗೆ ಸಾಕ್ಷಿ ಹಿಡಿಯಬಹುದು,  ನೊಂದ ಮನಸುಗಳಿಗೆ ಸಾಂತ್ವನದ ಮುಲಾಮು ಹಚ್ಚಬಹುದು….

(ರಾಜು ಸನದಿ)

ಇಂತಹ ತೀವ್ರ ಮರುಗುವ ಮನಸ್ಥಿತಿಯಲ್ಲಿ ರಾಜು ಸನದಿಯವರ ಕವಿತೆಗಳನ್ನು ಓದಲು ಕೂತದ್ದು. ಹಿನ್ನಲೆಯಷ್ಟೇ ರಾಜುರವರ ಕವಿತೆಗಳೂ ಭಾವುಕ ನೆಲೆಯಲ್ಲಿ ಹುಟ್ಟಿದ ಹೂಗಳಾಗಿದ್ದವು. ತಾವು ಕಂಡದ್ದು ಮತ್ತು ಅನುಭವಿಸಿದ್ದನ್ನು ಕವಿತೆಯಾಗಿಸುವ ಹಸಿಹಸಿ ಪ್ರಯತ್ನ ಇಲ್ಲಿ ಕಾಣುತ್ತದೆ. ಕವಿಯಾದವನು ಸುತ್ತಲ ಆಗುಹೋಗುಗಳಿಗೆ ಸ್ಪಂದಿಸಲೇ ಬೇಕಿರುತ್ತದೆ. ಹಾಗಂತ ಕಂಡದ್ದನ್ನು ಕಂಡಂತೆ ಬರೆದರೆ ಅದು ಕಾವ್ಯವಾಗುತ್ತದಾ ಅಥವಾ ಕಾವ್ಯ ಮತ್ತೇನನ್ನೋ ಬೇಡುತ್ತದಾ ಮತ್ತೆ ಕವಿತೆಯೇ ಏಕೆ ಬೇಕು ಎನ್ನುವುದನ್ನು ಕವಿಯಾದವನು ಸೂಕ್ಷ್ಮಗ್ರಾಹಿಯಾಗಿ ತಿಳಿದಿರಬೇಕು.

ಕವಿತೆ ಏಕೆ ಬೇಕು ಹಾಗಾದರೆ… ನಮ್ಮೆಲ್ಲ ಹೇಳಿಕೊಳ್ಳಲಾಗದ ನೋವು ಸಂಕಟ ತಕರಾರು ಬಾಗಿಲು ಪಡೆದುಕೊಳ್ಳಲು ಕವಿತೆ ಬೇಕು. ರಾಜೂರವರೂ ಸಹ ತಮ್ಮ ಈ ಸಂಕಲನದಲ್ಲಿ ತಮ್ಮದೊಂದು ಬಾಗಿಲು ಹುಡುಕಿಕೊಂಡಿದ್ದಾರೆ.

ಈ ಸಂಕಲನದ ಮೊದಲ ಕವಿತೆಯಲ್ಲಿ ರಾಜುರವರು ಮಹಾದೇವಿ ಅಕ್ಕನನ್ನು ತನ್ನಕ್ಕನ ಜೊತೆಗಿಟ್ಟುಕೊಂಡು ಹೋಲಿಸುವ ರೀತಿ ಹೃದ್ಯವಾಗಿದೆ. ಸಣ್ಣ ಪುಟ್ಟ ವಿವರಣೆ ಕ್ಲೀಷೆ ಅನ್ನಿಸಿದರೂ ಹೊಸ ನೋಟ ಮತ್ತು ಹೊಳಹಿನಿಂದಾಗಿ ಇದೊಂದು ವಿಶೇಷವಾದ ಕವಿತೆ. ವಸ್ತ್ರದ ಹಂಗನ್ನು ತೊರೆದ ಅಕ್ಕ ಮತ್ತು ಬುರ್ಖಾ-ನಕಾಬ್ ನೊಳಗೆ ಆತ್ಮವನ್ನು ಬಚ್ಚಿಟ್ಟುಕೊಂಡ ಅಕ್ಕ ಇಲ್ಲಿ ಕಂಡುಬರುವ ಎರೆಡು ಎಕ್ಸ್ಟ್ರೀಮ್ ಗಳು. ಇವು ಹಲವು ಸ್ಪಷ್ಟ ವ್ಯತ್ಯಾಸ ಮತ್ತು ಸಾಧ್ಯತೆಗಳನ್ನು ಬಗೆದು ತೋರುತ್ತವೆ ಮತ್ತು ಯೋಚಿಸಲು ಹಚ್ಚುತ್ತವೆ.

“ಮಾಳಿಗೆಯ ಮೇಲಿರುವ ಪಾರಿವಾಳಗಳು
ಕಾತರಿಸುತ್ತವೆ
ಅಕ್ಕನನ್ನು ಹೊರಬರುವಳೆಂದು
ಕಾಳು ಹಾಕುವಳೆಂದು

ಅಕ್ಕ ಕಾಣೆಯಾಗಿದ್ದಾಳೆ
ಸಕಲ ಜೀವರಾಶಿಯ ಕಣ್ಣಿಗೆ ಕಾಣದಂತೆ”
(ಅಕ್ಕ ಕಾಣೆಯಾಗಿದ್ದಾಳೆ ೧)

“ಕನ್ನಡಿಯಲ್ಲಿ ಕನಸ ಕಾಣುವಳು
ಹೊರ ಕಾಲಿಟ್ಟಾಗ 
ಆಕೆಯ ಸುತ್ತಲೂ 
ಮತ್ತೇ ಬರಿ ಕತ್ತಲು…”
(ಅಕ್ಕ ಕಾಣೆಯಾಗಿದ್ದಾಳೆ ೨)

ರಾಜುರವರು ಮಹಾದೇವಿ ಅಕ್ಕನನ್ನು ತನ್ನಕ್ಕನ ಜೊತೆಗಿಟ್ಟುಕೊಂಡು ಹೋಲಿಸುವ ರೀತಿ ಹೃದ್ಯವಾಗಿದೆ. ಸಣ್ಣ ಪುಟ್ಟ ವಿವರಣೆ ಕ್ಲೀಷೆ ಅನ್ನಿಸಿದರೂ ಹೊಸ ನೋಟ ಮತ್ತು ಹೊಳಹಿನಿಂದಾಗಿ ಇದೊಂದು ವಿಶೇಷವಾದ ಕವಿತೆ. ವಸ್ತ್ರದ ಹಂಗನ್ನು ತೊರೆದ ಅಕ್ಕ ಮತ್ತು ಬುರ್ಖಾ-ನಕಾಬ್ ನೊಳಗೆ ಆತ್ಮವನ್ನು ಬಚ್ಚಿಟ್ಟುಕೊಂಡ ಅಕ್ಕ ಇಲ್ಲಿ ಕಂಡುಬರುವ ಎರೆಡು ಎಕ್ಸ್ಟ್ರೀಮ್ ಗಳು.

ಅಕ್ಕ ಐಹಿಕ ಬಂಧನದ ಕುರುಹೆಂದು ಭಾವಿಸಿ ವಸ್ತ್ರದ ಸಮೇತ ಎಲ್ಲವನ್ನೂ ತೊರೆದು ತನ್ನ ಮಲ್ಲಿಕಾರ್ಜುನನನ್ನು  ಹುಡುಕಿ ಹೊರಟವಳು. ಆಗಿನ ಕಾಲಕ್ಕೆ ಇದೊಂದು ಕ್ರಾಂತಿಕಾರಿ ನಡೆಯೇ. ಆದರೆ ರಾಜೂರವರ ಅಕ್ಕ ಇಂದಿನ ಪರಿಸ್ಥಿತಿಯಲ್ಲೂ ಆಳೆತ್ತರದ ಗೋಡೆಗಳ ನಡುವೆ ಬುರ್ಖಾ ನಕಾಬು ತೊಟ್ಟು ತನ್ನ ಆತ್ಮಿಕ ಮತ್ತು ದೈಹಿಕ ಅಸ್ತಿತ್ವವನ್ನು ಮರೆಮಾಚುತ್ತಾ ಬದುಕುತ್ತಿರುವವಳು.

ಅವಳು ಬೆಳಕಿಗೆ ಬಂದರೂ ಅವಳ ಸುತ್ತಲೂ ಕವಿದಿದೆ ಕತ್ತಲು! ತನಗಿರುವ ಸಣ್ಣ ಕಿಂಡಿಯಲ್ಲಿಯೇ ಜೈವಿಕ ಬದುಕಿಗೆ ಬೇಕಾಗುವಷ್ಟು ಹಿಡಿ ಬೆಳಕು ತುಣುಕು ಗಾಳಿಯನ್ನು ಬೊಗಸೆಯಲ್ಲಿ ತುಂಬಿಕೊಳ್ಳುವವಳು… ಈ ಕವಿತೆ ಯೋಚಿಸಿದಷ್ಟೂ ಚಿಂತನೆಗೆ ಹಚ್ಚಿದ ಕವಿತೆ…

ಮತ್ತೆ ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ ದೃಷ್ಟಿ ಹಾಯಿಸುತ್ತಾ ಎರಡರ ನಡುವಿನ ತುಲನೆ ಮತ್ತು ಸಂತುಲನೆಯ ನ್ಯಾಯಬದ್ಧ ತಕ್ಕಡಿಯಲ್ಲಿಟ್ಟು ತೂಗಿನ ಮುಳ್ಳ ಇಶಾರೆಯಂತೆ ನಡೆಯಬೇಕಿರುತ್ತದೆ. ಈ ಎಲ್ಲ ತಿಳುವಳಿಕೆಯೂ ಕಲಿಕೆ ಎನ್ನುವುದಕ್ಕಿಂತ ಹೃದ್ಗತವಾದದ್ದರ ಒಟ್ಟಾರೆ ಫಲಿತಾಂಶ ಎನ್ನಬಹುದೇನೋ…. ಇವೆಲ್ಲ ರಾಜುರವರ ಮುಂದಿನ ಕವಿತೆಯ ಹಾದಿಯಲ್ಲಿ ಅವರನ್ನು ಬಹಳ ದೂರ ನಡೆಸಬಹುದು.

ಧಾರ್ಮಿಕ ಕಟ್ಟುಪಾಡುಗಳು, ಮನುಷ್ಯನ ಇಬ್ಬಗೆಯ ನೀತಿ, ಆತ್ಮವಂಚನೆ, ದೌರ್ಜನ್ಯ, ಪ್ರೀತಿ, ಪ್ರೇಮ ಎಲ್ಲವೂ ರಾಜುರವರನ್ನು ಕಾಡಿವೆ. “ನನ್ನ ಕವಿತೆ” ಕವಿಯ ಮನಸಿಗೆ ಹಿಡಿದ ಕನ್ನಡಿ. ಏನೆಲ್ಲ ಆಶೋತ್ತರಗಳಿವೆ ಈ ಕವಿತೆಗೆ… ಉದಾತ್ತವೆನಿಸುತ್ತದೆ. ಇದು ಕವಿ ಮನಸಿನ ಪ್ರಾಮಾಣಿಕ ದನಿ. ಹಾಗಾಗಿ ಇದು ನೆರವೇರಲಿ ಎಂದು ಹಾರೈಸುತ್ತದೆ ಓದುಗರ ಮನಸ್ಸು.

ಮಲಾಲ, ಸ್ವಾಗತ, ಪ್ರಜಾಪ್ರಭುತ್ವ… ಕವಿತೆಗಳು ವ್ಯವಸ್ಥೆಯೆಡೆಗಿನ ಆಕ್ರೋಶವನ್ನು ದಾಖಲಿಸ ಹೊರಟು ಕವಿತೆಯಾಗಿ ಸ್ವಲ್ಪ ಹಿಂದೆ ಉಳಿದಿವೆ ಅನಿಸುತ್ತದೆ. ಕವಿತೆಯ ವಿಷಯದಲ್ಲಿ ವಾಚ್ಯತೆ ಇಣುಕದಂತೆ  ಜಾಗ್ರತೆ ವಹಿಸುವುದು ಬಹಳ ಮುಖ್ಯ. ಕವಿತೆ ಯಾವಾಗಲೂ ಸೂಚ್ಯವಾಗಿರಬೇಕು. ಹೊಡೆದರೂ ನವಿಲುಗರಿಯ ಹೊಡೆತದಂತಿರಬೇಕು. ಎಲ್ಲವನ್ನೂ ಹೇಳುವುದಾದರೆ ಅದಕ್ಕೆ ಕವಿತೆಯೇ ಆಗಬೇಕಿಲ್ಲ. ಗದ್ಯದಲ್ಲಿ ಸಮಂಜಸವಾಗಿ ಹೇಳಬಹುದು. ಆದರೆ ಕವಿತೆ ಇರುವುದು ಅದಕ್ಕಲ್ಲ. ಕವಿತೆ ಒಂದು ಭಾಷೆಯ ಸೌಂದರ್ಯ ಸಾಧನ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಬೇಕು ಕವಿತೆ.

ರಾಜು ಅವರ ಕವಿತೆಗಳೂ ಅದನ್ನು ಪ್ರಾಮಾಣೀಕರಿಸುತ್ತವೆ. ಇನ್ನಷ್ಟು ಮಾಗಬೇಕು ಪ್ರಬುದ್ಧತೆ ಬೇಕು ಎನ್ನುವ ಸಣ್ಣ ತಕರಾರಿದ್ದರೂ ಅದು ಅವರ ಕವಿತೆಗಳನ್ನು ಮೆಚ್ಚಿದ ಮನಸುಗಳ ಪ್ರೀತಿಯ ತಕರಾರು ಎನ್ನುವುದನ್ನು ಗಮನದಲ್ಲಿಡಬೇಕು.

ಕೊನೆಗೆ ಏನೆಲ್ಲ ಹೇಳಿಯಾದ ಮೇಲೂ ಹೃದಯದ ಮಾತುಗಳನ್ನು ಮೀರಿದ್ದೊಂದು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅಂತಿಮಶಕ್ತಿಯ ಎದುರು ನಿಂತು ಅನಾಯಾಚಿತವಾಗಿ ಮಂಡಿಯೂರಿ ಶರಣಾದಾಗ ಹೊರಬರುವ ಮಾತುಗಳನ್ನೇ ಜಗತ್ತು ವಿಶ್ವಮಾನವ ಸಂದೇಶವೆಂದು ಬಗೆಯುತ್ತದೆ. ಇದು ನಮ್ಮೆಲ್ಲ ಶಾಸ್ತ್ರಗಳನ್ನು ಮೀರಿದ್ದು. ಇದೇ ನಮ್ಮೆಲ್ಲರಿಗೂ ದೀಪವಾಗಬೇಕು. ಕೊನೆಗೂ

ಪ್ರೀತಿಯನ್ನು
ನಾ ದೈವವೆಂದು ನಂಬಿದ್ದೆ
ದೈವದ ಎದುರು ವಾದಿಸಲಿಕ್ಕಾಗದು
ಕೈಯೊಡ್ಡಿ ಕಣ್ಣೀರ ಸುರಿಸಿ
ಪ್ರಾರ್ಥಿಸಬಹುದಷ್ಟೇ…
(ಕಣ್ಣೀರ ರಕ್ತ)

ಎಂಬುದೇ ಸತ್ಯ.