“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.ಒಂದೆಡೆ ಹಸಿರನ್ನು ಹತ್ತಿಕ್ಕಿ ಕಾಲುವೆ,ಕೆರೆ,ಕೊಳವಾಗಿಸಿದ ಮಳೆನೀರು,ಇನ್ನೊಂದೆಡೆ ಮಳೆಯ ಸುಳಿವೇ ಇಲ್ಲದೆ ಬಟಾಬಯಲಾದ ಹೊಲಗಳು.ರೈತರು ಬೆಳೆಯುವ ಆಹಾರವನ್ನು ಮಣ್ಣು ಪಾಲಾಗಿಸಿದ ಮಳೆ ಮತ್ತು ನೀರಿನ ದಶಾವತಾರಗಳು ನಮ್ಮ ಅಹಂಗೆ ಸವಾಲೆಸೆದಿದೆ.”
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಆಲಸ್ಯದಿಂದ ಮೈ ಚಾಚಿಕೊಂಡಿರುವ ಕೆಂಪುಮಣ್ಣು ಭೂಮಿಯನ್ನಪ್ಪುತ್ತಿಲ್ಲ. ಮಣ್ಣು ಧೂಳಾಗಿ ಹಾರಾಡುತ್ತಿದೆ. ಹಲವು ತಿಂಗಳುಗಳು, ವರ್ಷಗಳಿಂದ ಒಣಗಿದ ನೆಲಕ್ಕೆ ಈ ವರ್ಷದ ತೀವ್ರ ಚಳಿ ನೆಗಡಿ ಹಿಡಿಸಿದೆ. ಕಾದ ನೆಲ ಅಕ್ಷಿ, ಅಕ್ಷಿ ಎನ್ನುತ್ತಾ, ಸೀನುತ್ತಾ ಬಾಯಿಬಿಡುವಂತಾಗಿದೆ. ಬರಡು ಬೆಂಗಾಡು ಬಿರುಕಿನಿಂದ ಪ್ರಾಣಪಕ್ಷಿ ಹಾರಿಹೋಯಿತೇನೋ ಅನ್ನಿಸುತ್ತದೆ. ಅದಕ್ಕೇ ಇರಬೇಕು, ಹಸಿರು ಹುಟ್ಟುತ್ತಿಲ್ಲ. ಬೆಳೆ ಬೆಳೆಯುತ್ತಿಲ್ಲ. ಜಾನುವಾರು ನೆಲದ ತಂಪಿಗೆ ಹಪಹಪಿಸುತ್ತಿವೆ. ರೈತಕುಟುಂಬಗಳು ಆಕಾಶದತ್ತ ನೋಡಿ ನೋಡಿ ಸಾಕಾಗಿ ಯಾರಾದರೂ ಏನಾದರೂ ಮಾಡಿರಯ್ಯ ಎನ್ನುತ್ತಿದ್ದಾರೆ. ಚದುರಿಹೋಗುತ್ತಿರುವ ಆ ಮೋಡಗಳನ್ನು ನಿಲ್ಲಿಸಿ, ತರಲಿ ಅವು ಮಳೆಯನ್ನ, ಬರಲಿ ನಮ್ಮೊಡಲಿಗೆ ಒಂದಷ್ಟು ನೆಮ್ಮದಿ ಎನ್ನುತ್ತಿದ್ದಾರೆ. ಅಪರೂಪವೆಂಬಂತೆ ಮೈ ಕೊರೆಯುವ ಚಳಿಗಾಲದಲ್ಲೂ ಕ್ವೀನ್ಸ್ ಲ್ಯಾಂಡ್ ನಲ್ಲಿ ಬರಗಾಲದ ಬಿಸಿ ಕುದಿಯುತ್ತಿದೆ.

ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ. ಹಾಗೇ ಬರಗಾಲ ಅಪರೂಪವೇನಲ್ಲ. ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ. ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ. ಒಂದೆಡೆ ಹಸಿರನ್ನು ಹತ್ತಿಕ್ಕಿ ಕಾಲುವೆ, ಕೆರೆ, ಕೊಳವಾಗಿಸಿದ ಮಳೆನೀರು, ಇನ್ನೊಂದೆಡೆ ಮಳೆಯ ಸುಳಿವೇ ಇಲ್ಲದೆ ಬಟಾಬಯಲಾದ ಹೊಲಗಳು. ರೈತರು ಬೆಳೆಯುವ ಆಹಾರವನ್ನು ಮಣ್ಣು ಪಾಲಾಗಿಸಿದ ಮಳೆ ಮತ್ತು ನೀರಿನ ದಶಾವತಾರಗಳು ಜೀವನದ ಮೇಲಿನ ನಮ್ಮ ಹತೋಟಿಗೆ, ನಮ್ಮ ಅಹಂಗೆ ಸವಾಲೆಸೆದಿದೆ.

ರಾಣಿ ಇದ್ದರೂ ಸರಿಯೇ, ಇಲ್ಲದಿದ್ದರೂ ಸರಿಯೇ ಎಂಬಂತೆ ಮಳೆಯ ಅತಿವೃಷ್ಟಿ, ಮಳೆಯಿಲ್ಲದ ಅನಾವೃಷ್ಟಿ ಈ ರಾಜ್ಯಗಳ ರಾಜಕೀಯ ನಾಯಕತ್ವಕ್ಕೆ ತಲೆನೋವಾಗಿದೆ. ಮೊನ್ನೆಯಷ್ಟೇ ಕ್ಷಿಪ್ರಗತಿಯಲ್ಲಿ ದಾಳಗಳನ್ನು ಉರುಳಿಸಿ ಆಸ್ಟ್ರೇಲಿಯಾ ದೇಶಕ್ಕೆ ಹೊಸ ಪ್ರಧಾನಮಂತ್ರಿ ನೇಮಕಗೊಂಡಿದ್ದಾರೆ. ಅದೇನೂ ಅಷ್ಟೊಂದು ಆಶ್ಚರ್ಯ ತರಿಸಲಿಲ್ಲ. ‘ಅಯ್ಯೋ, ಈ ಪ್ರಧಾನಮಂತ್ರಿ ಬದಲಾಗುವುದು ‘ಹೋದ ಪುಟ್ಟ ಬಂದ ಪುಟ್ಟ’ಎನ್ನುವಂತಾಗಿದೆ ಬಿಡಿ. ನಾಚಿಕೆಯ ವಿಷಯ,’ ಎಂದು ಅಂಗಡಿಯಲ್ಲಿ ಒಬ್ಬ ಮಹಿಳೆ ಹೇಳಿದರು.

ತಮ್ಮದೇ ಸಹೋದ್ಯೋಗಿಯನ್ನು ಕೆಳಗಿಳಿಸಿ ಪಟ್ಟ ಏರಿರುವ, ಅಷ್ಟೇನೂ ಹೊಸಬರಲ್ಲದ ಈ ಪ್ರಧಾನಿ ವಿರಮಿಸುವಂತಿಲ್ಲ. ಬರಗಾಲವನ್ನು ಆಪತ್ತಿನ ಸಮಯವೆಂದು ರಾಷ್ಟ್ರೀಯಮಟ್ಟದಲ್ಲಿ ಘೋಷಿಸಿ, ಈ ವಿಷಯಕ್ಕೆ ಅತ್ಯಂತ ತುರ್ತಿನ ಗಮನವನ್ನು ಕೊಡಿ ಎಂದು ಅವರನ್ನು ರಾಣಿರಾಜ್ಯ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯದ ರೈತರು ಆಗ್ರಹಿಸಿದ್ದಾರೆ. ಧಾರಾಳವಾಗಿ ಗಮನ ಕೊಡೋಣ, ಆದರೆ ಇಂತಹ ಬರಗಾಲ ಈ ಪ್ರದೇಶಗಳಿಗೆ ಹೊಸದೇನಲ್ಲ, ನೋಡಿ, ರೈತರು ಸಾಕಷ್ಟು ತಯಾರಿ ನಡೆಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆಹಾರಬೆಳೆ ನಷ್ಟವಾಗಿದೆ ನಿಜ, ಬೇರೆ ಥರದ ಹಾನಿಗಳು ಅಷ್ಟೇನೂ ಆಗಿಲ್ಲ, ಪರಿಸ್ಥಿತಿಯನ್ನು ಎದುರಿಸೋಣ, ರೈತರ ಹಿತಾಸಕ್ತಿ ನಮ್ಮೆಲ್ಲರದ್ದೂ ಹೌದು. ಹವಾಮಾನ ಬದಲಾವಣೆಯ ಬಗ್ಗೆ ಸದ್ಯಕ್ಕೆ ಮಾತನಾಡುವುದು ಬೇಡ. ಪರಿಸ್ಥಿತಿಯನ್ನು ಎಷ್ಟು ಸಮರ್ಥವಾಗಿ ನಾವು ನಿಭಾಯಿಸಬಹುದು ಅನ್ನೋದನ್ನ ಗಮನಿಸಿ, ಎಂದು ಹೊಸ ಪ್ರಧಾನಮಂತ್ರಿಗಳು ಹೇಳಿಕೊಂಡಿದ್ದಾರೆ.

ನಿಜ, ನಿಸರ್ಗವೆಂಬ ಮಹಾತಾಯಿ ಮುನಿಸಿಕೊಂಡರೆ ಏನು ಮಾಡುವುದು? ಹೇಗಾದರೂ ಮಾಡಿ ಜೀವನ ಸಾಗಿಸಬೇಕಲ್ಲವೇ ಎನ್ನುವ ಮುಂದಾಲೋಚನೆಯನ್ನಿಟ್ಟುಕೊಂಡು ಬದುಕುವ ಅನೇಕ ರೈತರು ಆಸ್ಟ್ರೇಲಿಯಾ ದೇಶದ ತುಂಬಾ ಇದ್ದಾರೆ. ಹೆಚ್ಚಿನವರು ನೂರಾರು, ಸಾವಿರಾರು ಎಕರೆ ಹೊಲಗಳ ಒಡೆಯರು. ಬೆಳೆ ಬೆಳೆಯುವುದರ ಜೊತೆ ಬಿಸಿನೆಸ್ ನಡೆಸುವ, ನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಹಿರಿಯರಿಗಿಂತಲೂ ಚತುರರಾದ ಹೊಸ ಪೀಳಿಗೆಗಳ ರೈತಾಪಿ ಕುಟುಂಬಗಳು ತಾಂತ್ರಿಕ ಕುಶಲತೆ, ಆಧುನಿಕತೆಗಳ ಸಮ್ಮಿಶ್ರಣವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಂಡಿದ್ದಾರೆ. ಪ್ರಕೃತಿಯಲ್ಲಿ (ಹವಾಮಾನ) ಆಗುತ್ತಿರುವ ವೈಪರಿತ್ಯಗಳನ್ನು ಗಮನಿಸುತ್ತಿದ್ದಾರೆ. ತಮ್ಮ ಮುಂದಿನ ಬಳಕೆದಾರರು ಯಾರು, ಆಹಾರ ಪೂರೈಕೆಯ ಹರಿವು ಯಾವ ದಿಕ್ಕಿನತ್ತ ಇರಬೇಕು, ಸುಸ್ಥಿರ ಅಭಿವೃದ್ಧಿ ಪರವಾಗಿ ನಡೆಯಬೇಕಾದ ಬೆಳವಣಿಗೆಗಳು ಯಾವುವು, ತಾಂತ್ರಿಕತೆಯ ಪ್ರಯೋಜನ, ಲಾಭ ಪಡೆಯುವುದಷ್ಟೇ ಅಲ್ಲ, ಜನರ ಆರೋಗ್ಯ ಮತ್ತು ಸೌಖ್ಯವನ್ನೂ ಮುಖ್ಯಗುರಿಯಾಗಿಸಿಕೊಳ್ಳಬೇಕು ಎಂಬೆಲ್ಲಾ ಮಾತುಗಳು ರೈತ ವರ್ಗಗಳಲ್ಲಿ, ವ್ಯಾಪಾರೀ ಮತ್ತು ರಾಜಕೀಯ ವರ್ಗಗಳಲ್ಲಿ ಓಡಾಡುತ್ತಿವೆ.

ಅವರನ್ನೆಲ್ಲಾ ಬಿಟ್ಟು ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರ ಪಾತ್ರ ಕೂಡ ಅಷ್ಟೇ ಮಹತ್ತರವಾದದ್ದು. ನಮ್ಮ ದೈನಂದಿನ ಜೀವನಕ್ರಮದಲ್ಲಿ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಲೇಬೇಕು. ಶುದ್ಧ ನೀರಿನ ಬಳಕೆ ಮಿತವಾಗಿರಬೇಕು, ಬೆಳಗ್ಗೆ ಮತ್ತು ಸಂಜೆ ಮಾತ್ರ ಗಿಡಗಳಿಗೆ ನೀರುಣಿಸಬೇಕು, ಪ್ರತಿಮನೆಯಲ್ಲೂ ಮಳೆನೀರಿನ ಸಂಗ್ರಹಣೆ ಟ್ಯಾಂಕ್ ಗಳಿರಬೇಕು, ನಲ್ಲಿಯಿಂದ ಬರುವ ನೀರಿನ ಹರಿವು ನಿಧಾನವಾಗಿರುವಂತೆ ಸೂಕ್ತವಾದ ಫಿಲ್ಟರ್ ಗಳನ್ನು ಅಳವಡಿಸಿಕೊಳ್ಳಬೇಕು, ಎಲ್ಲರೂ ಶವರ್ ಸಮಯ ನಾಲ್ಕರಿಂದ ಐದು ನಿಮಿಷವೆಂದು ನಿಗದಿಪಡಿಸಿರಿ, ಹಸಿರು ವಲಯವನ್ನು ಹೆಚ್ಚಿಸಿ – ಹೀಗೆ ಎಷ್ಟೊಂದು ಕ್ರಮಗಳು ಮತ್ತು ಸೂಚನೆಗಳು ಇವೆ. ಅವನ್ನು ಬಹುತೇಕ ಎಲ್ಲರೂ ಪಾಲಿಸುತ್ತಾರೆ. ಇವೆಲ್ಲವೂ ಈ ದೊಡ್ಡ ಒಣಭೂಮಿಯ ದೇಶ-ಖಂಡವನ್ನು, ಈ ರಾಣಿರಾಜ್ಯವನ್ನು ಜೀವಂತವಾಗಿಟ್ಟಿವೆ. ಆಕಾಶದಿಂದ ಬೀಳುವ ಸ್ವಲ್ಪಮಳೆಯನ್ನು ಎಲ್ಲರೂ ಜತನದಿಂದ ಅದೊಂದು ವರವೆಂದೇ ಗೌರವಿಸುತ್ತಾರೆ, ಸಂಭ್ರಮಿಸುತ್ತಾರೆ. ನಾವೆಲ್ಲರೂ ನಮ್ಮ ವಾತಾವರಣ, ಹವಾಮಾನ, ಪರಿಸರ, ನಿಸರ್ಗಗಳ ಭಾಗ ತಾನೇ!

ಆಸ್ಟ್ರೇಲಿಯನ್ನರಿಗೆ ದೊಡ್ಡ ವರವಾದ ಈ ಮಳೆಯನ್ನು ಕಾಪಾಡುವ ಅವರ ದೃಷ್ಟಿಕೋನವನ್ನು ನೋಡಿ ನಾನು ಮೊದಲಲ್ಲಿ ಅಚ್ಚರಿಗೊಂಡಿದ್ದೆ. ಆಗಲೇ ನನಗೆ ಅರಿವಾಗಿದ್ದು, ನಾವು ಭಾರತದಲ್ಲಿ (ಮಳೆ ಧಾರಾಳವಾಗಿ ಬೀಳುವ ಪ್ರದೇಶಗಳಲ್ಲಿ) ಮಳೆಯನ್ನು ಟೇಕನ್ ಫಾರ್ ಗ್ರಾಂಟೆಡ್ ಅನ್ನೋ ಥರ ನೋಡ್ತೀವಿ. ಮಳೆಗೆ ಸಂಬಂಧಿಸಿದ ಏಳು, ಬೀಳುಗಳು ಬಹುತೇಕ ರೈತಾಪಿ ಜನರಿಗೆ ಸೇರಿತ್ತೇ ಹೊರತು ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ವಾಸಿಸುವ ಮಂದಿಗೆ ಆ ಬಗ್ಗೆ ಅಷ್ಟೊಂದು ಚಿಂತೆ ಇರಲಿಲ್ಲ. ಮೊಟ್ಟ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದಾಗ ಮೇ ತಿಂಗಳ ಮೊದಲಮಳೆ ಬಿದ್ದಿತ್ತು. ಆಹಾ, ಆ ಮಣ್ಣಿನ ವಾಸನೆಯ ಘಮ! ತಕ್ಷಣಕ್ಕೆ ಅನ್ನಿಸಿದ್ದು ಅರೆ, ಈ ಮಳೆ ನೀರನ್ನು ಸಂಗ್ರಹಿಸಿ ಇಟ್ಟರೆ ನೀರಿನ ಅಭಾವದ ಸಮಸ್ಯೆ ಕಡಿಮೆಯಾಗುತ್ತಲ್ಲವೇ. ಮಳೆ ನೀರನ್ನು ಸಂರಕ್ಷಣೆ ಮಾಡಬೇಕು ಅನ್ನೋ ಮಾತು ಆ ಕಾಲದಲ್ಲಿ ಪರಿಸರವಾದಿಗಳ ಬಾಯಲ್ಲಿ ಮಾತ್ರ ಕೇಳುತ್ತಿದ್ದದ್ದು. ಸೂರ್ಯನ ಶಾಖವನ್ನು ಬಳಸಿ ಸೋಲಾರ್ ಶಕ್ತಿ ಉತ್ಪನ್ನದ ಬಗ್ಗೆ ಆಗ ಭಾರಿ ಉತ್ಸಾಹ ಇತ್ತು. ಆದರೆ ಈ ದಶಕದ ಪರಿಸ್ಥಿತಿಯೇ ಬೇರೆ. ಎಲ್ಲರೂ “ಮಳೆ ನೀರು ಕೊಯ್ಲು” (rain water harvesting) ಬಗ್ಗೆ ಮಾತನಾಡುತ್ತಾರೆ. ನಗರ, ಊರು, ಕೇರಿಗಳಲ್ಲಿ ನೀರಿನ ಸೆಲೆಗಳೇ ಬತ್ತಿಹೋಗಿವೆ. ಒಂದು ಕಾಲದಲ್ಲಿ ಬೆಂಗಳೂರಿನ ಮಾನ್ಸೂನ್ ಮಳೆ ಮೇ ತಿಂಗಳ ಕಡೆಯರ್ಧದಲ್ಲಿ ಶುರುವಾದರೆ ದೀಪಾವಳಿ ಮುಗಿದು, ತುಳಸಿಹಬ್ಬ ನಡೆದು ನವೆಂಬರ್ ಕೊನೆಗೆ ಪೂರ್ಣ ವಿರಾಮ ಹಾಕುತ್ತಿತ್ತು.

ಆಸ್ಟ್ರೇಲಿಯನ್ನರಿಗೆ ದೊಡ್ಡ ವರವಾದ ಈ ಮಳೆಯನ್ನು ಕಾಪಾಡುವ ಅವರ ದೃಷ್ಟಿಕೋನವನ್ನು ನೋಡಿ ನಾನು ಮೊದಲಲ್ಲಿ ಅಚ್ಚರಿಗೊಂಡಿದ್ದೆ. ಆಗಲೇ ನನಗೆ ಅರಿವಾಗಿದ್ದು, ನಾವು ಭಾರತದಲ್ಲಿ (ಮಳೆ ಧಾರಾಳವಾಗಿ ಬೀಳುವ ಪ್ರದೇಶಗಳಲ್ಲಿ) ಮಳೆಯನ್ನು ಟೇಕನ್ ಫಾರ್ ಗ್ರಾಂಟೆಡ್ ಅನ್ನೋ ಥರ ನೋಡ್ತೀವಿ.

(1893ರಲ್ಲಿ ಬಿಸ್ಬೇನ್ ನಲ್ಲಿ ಘಟಿಸಿದ ಪ್ರವಾಹ)

ಹಾಗೆ ನೋಡಿದರೆ ಭಾರತದಲ್ಲಿ ನೀರಿನ ಬಳಕೆ ಮಿತವಾಗಿಯೇ ಇದೆ. ಅಂತರ್ಜಲದ ಮಟ್ಟ ಕಡಿಮೆಯಾಗಲು, ನೀರಿನ ಅಭಾವ ಹೆಚ್ಚಾಗಲು ಇರುವ ಕಾರಣಗಳು ಎಲ್ಲರ ಕಣ್ಣ ಮುಂದೆಯೇ ಇವೆ. ಈಗಲೂ ಬೆಂಗಳೂರಿನಲ್ಲಿ ಬೇಕಾದಷ್ಟು ಮಳೆ ಬೀಳುತ್ತಿದೆ. ಆದರೆ ಮಳೆಯನ್ನು ಸ್ವಾಗತಿಸಿ ಸಂಭ್ರಮಿಸುವ ಮನಸ್ಥಿತಿಗಿಂತಲೂ ಗಾಬರಿ, ಚಿಂತೆಯೇ ಜಾಸ್ತಿಯಾಗುತ್ತಿದೆ. ಯರ್ರಾಬರ್ರಿ, ಉದ್ದಗಲಕ್ಕೆ ಹೇಗೆ ಹೇಗೋ ಬೆಳೆಯುವ ಆತುರದಲ್ಲಿ ಬೆಂಗಳೂರು ನಗರ ಮಳೆಯನ್ನ ಮರೆತೇಬಿಟ್ಟಿತು. ಬೀದಿಯಲ್ಲಿ ನೆಲೆನಿಂತು, ಮನೆಗಳಿಗೆ ಹೊಕ್ಕು, ಚರಂಡಿಯಲ್ಲಿ ಕೋಡಿಹರಿದು, ಅಲ್ಲಿಲ್ಲಿ ಜನರಿಗೆ ಡಿಕ್ಕಿ ಹೊಡೆದು, ಬೀಳಿಸಿ, ಸಾಯಿಸಿ, ನಾನಿದ್ದೀನಿ ಅಂತ ಮಳೆ ಈಗ ತನ್ನ ಪರಿಚಯ ಮಾಡಿಕೊಳ್ಳುವ ಪರಿ ಜನರಿಗೆ ಅಪಥ್ಯವಾಗಿದೆ.

ಮೊನ್ನೆಮೊನ್ನೆ ಪಶ್ಚಿಮಘಟ್ಟಗಳಲ್ಲಿ ಬಿದ್ದ ಅಪಾರ ಮಳೆ ಪ್ರಕೃತಿಗೇ ಆದ ಅಪಥ್ಯವೇನೋ, ಅದು ನಾವು ಮನುಷ್ಯರು ನಿಸರ್ಗಕ್ಕೆ ತೋರಿದ ಅಪಮಾನ, ನಿರ್ಲಕ್ಷ್ಯವೇನೋ ಅನ್ನಿಸುತ್ತದೆ. ಬೆಂಗಳೂರಿನಲ್ಲಿರುವ ನಮ್ಮಪ್ಪನ ಬಳಿ ಮಾತು ಆರಂಭಿಸಿದರೆ ಅವರು ಕೇಳಿದ ಪ್ರಶ್ನೆ – ‘ಕೊಡಗು, ಕೇರಳದ ಮಳೆ ಸುದ್ದಿ ನಿಂಗೆ ಗೊತ್ತಾಯ್ತಾ? ಅಯ್ಯೋ, ಅದೇನು ವಿಪರೀತ ಮಳೆ, ಟಿವಿ ಚಾನ್ನೆಲ್ ಗಳಲ್ಲಿ ಅದನ್ನೇ ಮೂರ್ ಹೊತ್ತೂ ತೋರಿಸ್ತಾ ಇದಾರೆ. ಯಾವ್ ಪಾಟಿ ಹಾನಿ ಆಗಿದೆ, ಜನ ಸತ್ತಿದ್ದಾರೆ, ಆಸ್ತಿಹೋಗಿದೆ. ಅದೆಲ್ಲ ಇರ್ಲಿ, ಬೆಳೆ ಬೆಳೆಯುವ ಭೂಮಿಯೆಲ್ಲವನ್ನೂ ಈ ಮಳೆ ಆಪೋಶನ ತೊಗೊಂಡು ಬಿಟ್ಟಿದೆ. ಪಾಪ, ಆ ರೈತರನ್ನ ಕೇಳೊವ್ರು ಯಾರು ಈಗ’, ಎಂದು ಬೇಸರಿಸಿಕೊಂಡರು.

(ಮಳೆ ನೀರು ಕೊಯ್ಲು)

ಪಶ್ಚಿಮಘಟ್ಟದಲ್ಲಿ, ಕೇರಳದಲ್ಲಿ ಮಳೆ ಮಾಡಿದ ತಾಂಡವ ನೃತ್ಯ ರುದ್ರ ರಮಣೀಯವೇ ಸರಿ. ನನಗೆ ಅದರಲ್ಲಿ ನಿಸರ್ಗದ ಸೌಂದರ್ಯ, ರೌದ್ರ, ಅವಸಾನ, ಉಗಮ, ಸಾವು-ಹುಟ್ಟು, ಕೋಪ, ಕರುಣೆ ಎಲ್ಲವೂ ಕಂಡಿದೆ. ಕೊಡಗಿನ ಕೆಲ ಹಿರಿಯರು, ನಾವು ಮನುಷ್ಯರು ಎಗ್ಗುತಗ್ಗಿಲ್ಲದೆ ಪ್ರಕೃತಿಯನ್ನು ಶೋಷಿಸಿದ್ದೇ ಈ ವಿಪರೀತಕ್ಕೆ, ಅನಾಹುತಕ್ಕೆ ಕಾರಣ ಎಂದಿದ್ದಾರೆ. ಘಟ್ಟಗಳನ್ನು ಒಡೆದು, ಹೊಡೆದು ಹಾಕಿ, ಛಿದ್ರಮಾಡಿ, ಕಟ್ಟಡಗಳನ್ನು ಕಟ್ಟಿ, ಪ್ರವಾಸಿತಾಣಗಳನ್ನಾಗಿ ಮಾಡಿ ನಮ್ಮ ಚಟುವಟಿಕೆಗಳನ್ನು ನಡೆಸಿದ ಫಲವೇ ಇದು ಎಂದು ಅಪರಾಧಿಪ್ರಜ್ಞೆ ಕಾಡುತ್ತದೆ. ಕಾಡುಗಳನ್ನು ನಾಶ ಮಾಡುತ್ತಾ, ಭೂಮಿಯನ್ನು ಸಡಿಲಗೊಳಿಸಿದ್ದರಿಂದ ಮಳೆ ನೀರಿಗೆ ದಿಕ್ಕಿಲ್ಲದೆ ಹೋಯ್ತು, ಎನ್ನುವ ಆ ಹಿರಿಯರ ಮಾತು ನಿಜವೇನೋ ಅನ್ನಿಸುತ್ತದೆ. ಪಶ್ಚಿಮಘಟ್ಟಗಳಿಗೆ ಭೇಟಿ ಕೊಡುವ ಪರವೂರಿನ ಮಂದಿಯಲ್ಲಿ ನಾನೂ ಒಬ್ಬಳಾದ್ದರಿಂದ ಆ ಸೂಕ್ಷ್ಮ ಪ್ರದೇಶವನ್ನು ಕಾಪಾಡುವ ಹೊಣೆ ನನ್ನದೂ ಕೂಡ. ವಿಶ್ವದ ಯಾವ ಮೂಲೆಯಲ್ಲಿದ್ದರೂ ಸರಿಯೇ, ನಮ್ಮ ಆಧುನಿಕ ಜೀವನದ ಚಟುವಟಿಕೆಗಳು ಭೌಗೋಳಿಕವಾಗಿ ವ್ಯಾಪಿಸಿದ್ದು ಅವುಗಳ ಪರಿಣಾಮವೂ ಎಲ್ಲರನ್ನೂ, ಎಲ್ಲವನ್ನೂ ಕಾಡುತ್ತದೆ. ಅಲ್ಲವೇ? ಅಂತಹ ಸಂದಿಗ್ಧ, ನಿರ್ಣಾಯಕ ಕಾಲದಲ್ಲಿ ನಾವೆಲ್ಲಾ ಇದ್ದೀವಿ.

ಒಮ್ಮೊಮ್ಮೆಆಲೋಚಿಸಿದರೆ ಮನುಷ್ಯರ ಚಟುವಟಿಕೆಗಳಿಗೆ ನೇರವಾಗಿ ಸಂಬಂಧವಿರುವ ಪರಿಸರ ಹಾನಿ, ಸಮಸ್ಯೆಗಳಿಗೆ ಮಾತ್ರ ನಾವು ಗಮನ ಕೊಡುತ್ತಿದ್ದೇವೆಯೇ ಅನ್ನಿಸುತ್ತದೆ. ಕಣ್ಣಿಗೆ ನಿಚ್ಚಳವಾಗಿ ಕಾಣುವ ಆಧಾರವಿದ್ದರೆ ಮಾತ್ರ ನಾವು ಸಮಸ್ಯೆಯಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇವೆಯೇ? ಮುಂದೆ ಒಂದು ದಿನ ಈ ಥರದ ಸಮಸ್ಯೆ ಹುಟ್ಟಿಕೊಳ್ಳಬಹುದು ಎನ್ನುವ ಪೂರ್ವಭಾವಿ ಮಾತು ಉಪೇಕ್ಷೆಗೊಳಗಾಗಿದೆಯೇ? ಆಹಾರ ಬೆಳೆಯುವ ಭೂಮಿಗೆ ಆಪತ್ತು ಬಂದಾಗ ಮಾತ್ರ ಅದು ನಮ್ಮ ಕಣ್ ಸೆಳೆಯುತ್ತದೆಯೇ? ಉಳಿದಂತೆ ನೇರವಾಗಿ, ಪರೋಕ್ಷವಾಗಿ ನಡೆಯುತ್ತಿರುವ, ಆಪತ್ತು ಉಂಟುಮಾಡುವ ನಮ್ಮ ಚಟುವಟಿಕೆಗಳ ಬಗ್ಗೆ ಹೇಗೆ? ಗಣಿಕಾರಿಕೆ, ಕಟ್ಟಡ ನಿರ್ಮಾಣ, ನದಿಗಳ ಪಾತ್ರಗಳನ್ನ ಬದಲಾಯಿಸುವುದು, ಹಸಿರು ವಲಯದ ನಿರ್ನಾಮ … ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ. ಈ ಎಲ್ಲವೂ ಎಲ್ಲರ ಸಮಸ್ಯೆ ಹೌದು, ಅಲ್ಲವೇ? ಆಸ್ಟ್ರೇಲಿಯಾದಲ್ಲಿ ನಾನು ಕಸವನ್ನು ಕಡಿಮೆ ಮಾಡಿದರೆ ಅದು ಭೂಮಿಗೆ ಒಳ್ಳೆಯದು, ಬರಿ ಒಂದು ದೇಶಕ್ಕಲ್ಲ. ಒಂದು ಕಡೆ ಹಸಿರನ್ನ ಹೆಚ್ಚಿಸಿದರೆ ಅದರ ಪರಿಣಾಮದ ವ್ಯಾಪ್ತಿ ಎಲ್ಲಾ ಕಡೆಯೂ ಹಬ್ಬುತ್ತದೆ. ಪ್ರವಾಸ ಹೋಗುವ ಸ್ಥಳ ಅದರ ಸಹಜ ಸ್ಥಿತಿಯಲ್ಲಿದ್ದರೆ ತಾನೇ ನಾನು ಇನ್ನೊಮ್ಮೆ ಅಲ್ಲಿಗೆ ಹೋಗಲು ಸಾಧ್ಯ?


ಪರಿಸರಕ್ಕೆ ಆಗುವ ಹಾನಿಗಳು ನಿಸರ್ಗದ ಭಾಗವಾದ ಮಾನವರ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ ಎಂದು ಇಕಲಾಜಿಕಲ್ ಮನೋವಿಜ್ಞಾನಿಗಳು ಕಳೆದ ನಲವತ್ತು ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಖಿನ್ನತೆ, ಒಬ್ಬಂಟಿತನದ ಭಾವನೆ, ಆತ್ಮವಿಶ್ವಾಸಕ್ಕೆ ಧಕ್ಕೆ, ತೀವ್ರ ಹತಾಶೆ, ಕ್ಲೇಶ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ, ಎನ್ನುತ್ತಾರೆ. ಆಹಾರ ಬೆಳೆಯುವ ಭೂಮಿಗೆ ಹಾನಿಯಾದರೆ ಅದು ಇಡೀ ಒಂದು ಸಮಾಜ ಬದುಕುತ್ತಿರುವ ಶೈಲಿಗೆ ಕನ್ನಡಿ ಹಿಡಿಯುತ್ತದೆ. ಬೆಳೆಯುವವರ ಜೊತೆ ಬಳಕೆದಾರರು ಇದ್ದಾರೆ. ಕೇವಲ ಒಂದೇ ಒಂದು ಪರಿಸ್ಥಿತಿ ಈಗಿನ ಆಧುನಿಕ ಕಾಲದಲ್ಲಿ ಬಹು ವಿಧದ ಮುಖಗಳನ್ನು ಹೊಂದಿರಬಹುದು. ಅದರ ಪರಿಣಾಮ ಕೂಡ ಬಗೆಬಗೆಯಲ್ಲಿ, ಜಾಗತಿಕವಾಗಿ ಕಾಣಿಸಿಕೊಳ್ಳಬಹುದು. ಅತಿ ಮಳೆ, ಅಭಾವದಮಳೆ ಎರಡೂ ನಮ್ಮ ಒಡಲನ್ನು ತಲ್ಲಣಗೊಳಿಸಬೇಕು. ಮರೆತುಹೋಗಿರುವ ‘ನೀನಾರಿಗಾದೆಯೋ ಎಲೆ ಮಾನವ’ ಎಂಬ ಮಾತು ನಮ್ಮ ದಿನನಿತ್ಯದ ಪಠಣವಾದರೆ ಹುಲ್ಲಿನ ಜೊತೆ ನಮ್ಮಗಳ ಹುಲು ಮಾನವರ ಜೀವನ ಕೂಡ ಸುಧಾರಿಸುತ್ತದೆ ಎನಿಸುತ್ತದೆ.