ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ ಸ್ಥಳೀಯ ಸಮುದಾಯ ತಮ್ಮನ್ನು ಬೇರೆ ಇಟ್ಟ ನೋವನ್ನು ತೋಡಿಕೊಂಡ ವಲಸೆಗಾರ ಕುಟುಂಬದ ಅಳಲು….
ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ರಾಣಿರಾಜ್ಯದ ಬುಡಕ್ಕೆ ಅಕ್ಷರಶಃ ಬೆಂಕಿ ಬಿದ್ದಿದೆ. ರಾಣಿಗೇನೂ ನಷ್ಟವಾಗಿಲ್ಲ, ಪಾಪದ ಪ್ರಜೆಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಬೆಂಕಿ ಹತ್ತಿರುವುದು ಒಂದೆರಡು ಕಡೆ ಅಲ್ಲ. ಸಣ್ಣಪುಟ್ಟ, ದೊಡ್ಡ, ಧಡಿಯ ಎಂಬಂತೆ ಸುಮಾರು ಎಂಭತ್ತರಿಂದ ತೊಂಭತ್ತು ಕಡೆ ಆಸ್ಟ್ರೇಲಿಯನ್ ಬುಷ್ ಹತ್ತಿ ಉರಿಯುತ್ತಿದೆ. ಅದು ಆವರಿಸಿರುವುದು ರಾಣಿರಾಜ್ಯವನ್ನಷ್ಟೇ ಅಲ್ಲ; ಕೆಳಗೆ ಅಂಟಿಕೊಂಡಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಮೇಲ್ಭಾಗದ ಛಾವಣಿ ಕೂಡ ಬೆಂಕಿಯ ಚೇಷ್ಟೆಗೆ ಸಿಲುಕಿ ಪರಿತಪಿಸುತ್ತಿವೆ. ಆಗಸ್ಟ್ ತಿಂಗಳ ಕಡೆವಾರದಲ್ಲಿ ಹವಾಮಾನ ಬದಲಾಯಿಸಿ ಚಳಿ ಕಡಿಮೆಯಾಗಿ ವಸಂತಋತು ಕಾಲಿಟ್ಟು, ಬಿಸಿಲು-ಶಾಖ ಹೆಚ್ಚಾಗಿ ಮುಂದಿನ ತಿಂಗಳುಗಳಲ್ಲಿ ಬರಲಿರುವ ಘೋರ ಬೇಸಗೆಯ ತಾಪವನ್ನು ನೆನಪಿಸಿತ್ತು. ಅಲ್ಲಲ್ಲಿ ಬೆಂಕಿ ಹತ್ತಿ ಪೊದೆಗಳು ಆಹುತಿಯಾಗಿರುವುದು ವರದಿಯಾಗಿತ್ತು. ಆಯಾ ರಾಜ್ಯಸರ್ಕಾರಗಳು ಜನರನ್ನು ಎಚ್ಚರಿಸಿ ಮನೆಬಿಟ್ಟು ಹೋಗಿ ಜೀವ ಉಳಿಸಿಕೊಳ್ಳಿ, ಎಂದು ಸೂಚಿಸಿತ್ತು.

ನೋಡನೋಡುತ್ತಿದ್ದಂತೆ ಸೆಪ್ಟೆಂಬರ್ ಮೊದಲ ವಾರದಿಂದ ಬೆಂಕಿಕಾವು ಜೋರಾಗಿದೆ. ಅದರ ಜೊತೆಗೆ ಸುಮಾರು ವಾರಗಳಿಂದ ಮಳೆ ಬಿದ್ದಿಲ್ಲ. ಹಸಿರಾಗಿದ್ದು ನಳನಳಿಸುತ್ತಿದ್ದ ಆಸ್ಟ್ರೇಲಿಯನ್ ಬುಷ್ ಬಾಡಿಬಿಟ್ಟಿದೆ. ಸುಡುವುದಕ್ಕೆ ಪ್ರಶಸ್ತವಾದ ಒಣಗಿದ ಕಂದುಬಣ್ಣದ ಪ್ರಕೃತಿ ಕಣ್ಣಿಗೆ ರಾಚಿ ಅಲ್ಲಿಯವರೆಗೆ ಚಳಿಗಾಲವನ್ನು ಸವಿಯುತ್ತಿದ್ದ ನಾವುಗಳು ಬೆಚ್ಚಿಬಿದ್ದಿದ್ದೀವಿ. ಹಗಲೂ, ಇರುಳೂ ರೇಂಜರ್ ಗಳು ನಗರದ ಹೊರವಲಯದಲ್ಲಿರುವ ಮೀಸಲು ಅರಣ್ಯ ಪ್ರದೇಶಗಳಲ್ಲಿ ಕಣ್ಣಿಟ್ಟು ಕಾಯುವಂತಾಗಿದೆ. ಕಂದು ಮಿಶ್ರಿತ ಬೂದುಬಣ್ಣದ ಆಕಾಶ ಆಗಾಗ ನಗರದ ನೆತ್ತಿಯನ್ನು ಚುಂಬಿಸುತ್ತಾ ಕಣ್ಣಾಮುಚ್ಚಾಲೆಯಾಡುತ್ತಿದೆ. ಉಬ್ಬಸ ರೋಗವಿರುವ ಜನರು ಮತ್ತಷ್ಟು ಬಳಲುವಂತಾಗಿದೆ. ಬ್ರಿಸ್ಬನ್ ನಗರದ ಉತ್ತರಭಾಗದಲ್ಲಿರುವ Sunshine Coast ವಾಸಿ ಸ್ನೇಹಿತೆ ‘ಅಯ್ಯಯ್ಯೋ, ನಮ್ಮನೆಯಿಂದ ಇಪ್ಪತ್ತು ನಿಮಿಷದ ಡ್ರೈವ್ ದೂರದಲ್ಲಿರುವ ಬೆಟ್ಟಗಳಲ್ಲಿ ಬೆಂಕಿಹತ್ತಿ ಉರಿಯುತ್ತಿರುವುದು ಮನೆಕಿಟಕಿಯಿಂದಲೇ ಕಾಣುತ್ತಿದೆ, ಈ ಕಡೆ ಬರಲೇಬೇಡಿ,’ ಎಂದು ಎಚ್ಚರಿಸಿದ್ದರು.

ಆಸ್ಟ್ರೇಲಿಯನ್ ಬುಷ್ ಈ ಥರ ಬೆಂಕಿ ಪ್ರಸಂಗಗಳಿಂದ ನಲುಗುವುದು ಹೊಸದೇನಲ್ಲ. ಜನರಿಗೂ ಅಷ್ಟೇ, ಅಭ್ಯಾಸವಾಗಿದೆ. ಇದು ಪ್ರತಿವರ್ಷ ನಡೆಯುವ ಪ್ರಕೃತಿವಿಕೋಪ. ಆದರೂ ಕೂಡ ಆಸ್ತಿಪಾಸ್ತಿ ನಷ್ಟ, ಜಾನುವಾರುಗಳು ಸಾಯುವುದು, ಜನರು ಕೋಪಿಸಿಕೊಳ್ಳುವುದು, ತಾವು, ತಮ್ಮವರು ಬೆಂಕಿಪ್ರಸಂಗದ ಪರಿಣಾಮಗಳಿಗೆ ಈಡಾದರೆ ಇನ್ನಿಲ್ಲದಷ್ಟು ನೋವನ್ನು ತೋರಿಸಿಕೊಂಡು ಎಗರಾಡುವುದು, ಸರ್ಕಾರವನ್ನು ದೂಷಿಸುವುದು, ಕಣ್ಣೀರು ಸುರಿಸುತ್ತಾ ಪರಸ್ಪರರಿಗೆ ಸಹಾಯಹಸ್ತವನ್ನು ಚಾಚುವುದು, ಎಲ್ಲ ಥರದ ನಿಜಜೀವನದ ನಾಟಕಗಳು ಈ ಸಮಯದಲ್ಲಿ ನಡೆಯುತ್ತವೆ. ಕೆಲವರು ಅವನ್ನು ಪರದೆಯ ಮೇಲೆ ನೋಡುತ್ತಾರೆ, ಕೆಲವರು ಪ್ರತ್ಯಕ್ಷವಾಗಿ ಅನುಭವಿಸುತ್ತಾರೆ.

ನನ್ನ ಆಸ್ಟ್ರೇಲಿಯನ್ ಜೀವನದ ಮೊಟ್ಟಮೊದಲ ವರ್ಷದ ಡಿಸೆಂಬರ್ ತಿಂಗಳಿನಲ್ಲೇ ಆಸ್ಟ್ರೇಲಿಯನ್ ಬುಷ್ ಫಯರ್ ನನ್ನ ಮುಂದೆ ಥಕಥೈ ಮಾಡಿ ಗಾಬರಿ ಹುಟ್ಟಿಸಿತ್ತು. ನನ್ನ ಆಪ್ತಸ್ನೇಹಿತರೊಂದಿಗೆ ಅವರ ನೆಂಟರ ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಮುಗಿಸಿಕೊಂಡು ಸಂಜೆ ವಲೊಂಗೊಂಗ್ ಕಡೆ ಧಾವಿಸುತ್ತಿದ್ದೆವು. ಕಾರಿನ ರೇಡಿಯೋಸ್ಟೇಷನ್ ಬೆಂಕಿ ಉರಿಯುತ್ತಿದ್ದ ಪ್ರದೇಶಗಳ ಬಗ್ಗೆ ವರದಿಮಾಡುತ್ತಿತ್ತು. ನೋಡನೋಡುತ್ತಲೇ ಕಾರಿನಾಚೆ ಅರ್ಧ ಕಿಲೋಮೀಟರು ದೂರದಲ್ಲಿ ಬೆಂಕಿರಾಯನ ನಾಲಗೆಯ ಮೊನಚು ಕಂಡಿತು. ಕಾರಿನ ಸಮೇತ ನಮ್ಮನ್ನು ನೆಕ್ಕಿಬಿಡಲು ಅಗ್ನಿದೇವ ಬರುತ್ತಿದ್ದನೇನೋ ಅನ್ನುವಂತೆ ನಮಗೆಲ್ಲ ಭಾಸವಾಯಿತು. ಕಾರಿನ ಕಿಟಕಿಯನ್ನು ಇಳಿಸಿದರೆ ಹೊರಗೆ ಅಯ್ಯೋ ಇದು ಸಾಧ್ಯವೇ ಅನ್ನುವಷ್ಟು ಬೆಂಕಿಬಿಸಿ. ಅದೇ ದಾರಿಯಲ್ಲಿ ಸಾಗಿದರೆ ನೇರ ಬೆಂಕಿ ಉರಿಯುತ್ತಿದ್ದ ಪ್ರದೇಶಕ್ಕೆ ಕಾಲಿಡುವುದು ಖಚಿತವಾಗಿತ್ತು. ಕಾರು ನಿಲ್ಲಿಸುವಂತೆಯೂ ಇಲ್ಲ, ಅದು ಇನ್ನೂ ಅಪಾಯಕಾರಿ. ಬುಷ್ ಫಯರ್ ಬಗ್ಗೆ ಅಷ್ಟೇನೂ ಗೊತ್ತಿರದಿದ್ದ ನನಗೆ ಗಾಬರಿಯಾಗಬಾರದು ಎಂದು ನನ್ನ ಸ್ನೇಹಿತೆ ಸಾವಧಾನವಾಗಿ ರೋಡ್ ಮ್ಯಾಪ್ ಪುಸ್ತಕವನ್ನು ತೆರೆದುನೋಡಿ ಅವರ ಗಂಡನಿಗೆ ಬೇರೆ ಹಾದಿ ಹಿಡಿಯಲು ಸೂಚಿಸಿದರು. ಅಲ್ಲಿಂದ ಪಾರಾದೆವು.

ಇದಾದ ಮರುವಾರದಲ್ಲೇ ನಾನು ವಾಸವಿದ್ದ ಬಾಡಿಗೆಮನೆಯ ಮಾಲೀಕರು ಬಂದು ಎಚ್ಚರಿಸಿದರು. ಮನೆಹಿಂದಿನ ಪ್ರದೇಶದ ಬೆಟ್ಟಗಳ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮೂರು, ನಾಲ್ಕು ದಿನಗಳಲ್ಲಿ ನಮ್ಮ ಕಡೆಗೆ ಹರಡುವ ಸಾಧ್ಯತೆಯಿತ್ತು. ಮಾಲೀಕರು ‘ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಿ, ನಿಮಗೇನಾದರೂ ಆದರೆ ನಾವು ಹೊಣೆಯಲ್ಲ,’ ಎಂದರು. ಮಾರನೇದಿನ ಪೊಲೀಸರು, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಬಂದು ಅದೇ ರೀತಿ ಎಚ್ಚರಿಕೆ ನೀಡಿ ಹೋದರು. ಅದೊಂದು ಥರ ರೋಮಾಂಚನದ, ಭಯದ, ನಿರೀಕ್ಷೆ, ಗಲಿಬಿಲಿಯ ಹೊಸ ಅನುಭವ. ಆಗಾಗಲೇ ‘ನಮ್ಮಲ್ಲಿಗೆ ಬಂದುಬಿಡು’ ಎಂದು ಹೇಳಿದ್ದ ಹಲವಾರು ಆಸ್ಟ್ರೇಲಿಯನ್ ಸ್ನೇಹಿತರ ಸಹಾಯಹಸ್ತ ಚಾಚಿ ಬಂದಿತ್ತು. ಅವರಿಗೆಲ್ಲ ಇದು ವರ್ಷಕ್ಕೊಮ್ಮೆ ಬರುವ ‘ಅತಿಥಿ’ ಪ್ರಸಂಗಗಳು.

ನನಗಾದರೋ, ಹೊಚ್ಚಹೊಸ ಅನುಭವವನ್ನು ಸವಿಯಲೂ ಬೇಕು ಆದರೆ ಸವಿಯುವಂತಿಲ್ಲ ಅನ್ನೋ ಪೀಕಲಾಟ. ಕಣ್ಣಿಗೆ ಇನ್ನೂ ಕಾಣಿಸದೆ ಇರುವ ಬೆಂಕಿ ಅಲ್ಲೆಲ್ಲೋ ತಾನೇ ಇರೋದು, ನಾವಿಲ್ಲಿ ಮನೆಯಲ್ಲಿ ಆರಾಮಾಗಿದ್ದೀವಿ, ಮತ್ಯಾಕೆ ಯೋಚನೆ ಅನ್ನೋ ಮನೋಭಾವವೂ ಇತ್ತು. ಬೆಂಕಿ ಹತ್ತಿರ ಬಂದರೆ ಮನೆಯಿಂದ ಕೆಲಕಾಲ ದೂರವಿರಲೇಬೇಕು, ಸರಿ. ಆದರೆ ಏನೆಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗುವುದು? ಈ ಸಂದಿಗ್ದದಲ್ಲೇ ವಾರಪೂರ್ತಿ ಮುಳುಗಿ ದೂರದಲ್ಲೇ ಠಿಕಾಣಿ ಹೂಡಿದ್ದ ಬೆಂಕಿಯ ತಾಪವನ್ನು ಮಾತ್ರ ಅನುಭವಿಸಿದ್ದಾಯ್ತು. ಅದ್ಯಾಕೋ ಏನೋ, ನಮ್ಮ ಮೇಲೆ ಬೆಂಕಿರಾಯ ಕರುಣೆ ತೋರಿ ಬೇರೆಲ್ಲೋ ಹೋಗಿಬಿಟ್ಟ. ಆ ವರ್ಷದ ನಂತರ ಬುಷ್ ಫಯರ್ ಬಗ್ಗೆ ಯಾವಾಗಲೋ ಒಮ್ಮೊಮ್ಮೆ ಕೇಳುವುದು, ಮಾತನಾಡುವುದು ಅಭ್ಯಾಸವಾಯ್ತು.

ಕಳೆದವರ್ಷ ೨೦೧೮ ಡಿಸೆಂಬರ್ ತಿಂಗಳಲ್ಲಿ ಈ ಬುಷ್ ಫಯರ್ ಪ್ರಸಂಗ ಬೇರೊಂದು ರೂಪದಲ್ಲಿ ಎದುರಾಯಿತು. ನಾನು ಪೂರ್ಣಪ್ರಮಾಣದ ಸಮಯ ಸಮುದಾಯ ಸೇವಾಕ್ಷೇತ್ರದಲ್ಲಿ ತೊಡಗಬೇಕು ಎಂದು ಉದ್ಯೋಗಗಳಿಗೆ ಅರ್ಜಿ ಹಾಕುತ್ತಿದ್ದೆ. ಅದೇ ಸಮಯದಲ್ಲಿ ಆಸ್ಟ್ರೇಲಿಯನ್ ರೆಡ್ ಕ್ರಾಸ್ ಸಂಸ್ಥೆಯ Queensland ರಾಜ್ಯಕಚೇರಿ ತಮಗೆ ಅತ್ಯಂತ ತುರ್ತಾಗಿ ಸ್ವಯಂಸೇವಕರು ಬೇಕಾಗಿದ್ದಾರೆ, ಬನ್ನಿ, ನಮ್ಮ ತುರ್ತುಸೇವೆ ವಿಭಾಗದ ಸಿಬ್ಬಂದಿಗೆ ಸಹಾಯ ಮಾಡಿ, ಎಂದು ಸಾರ್ವಜನಿಕರನ್ನು ಕೇಳಿಕೊಂಡಿತ್ತು. ರಾಜ್ಯದಲ್ಲಿ ಸಮಸ್ಯೆಯಾಗಿದ್ದ ಬರ ಮತ್ತು ಬುಷ್ ಫಯರ್ ಪರಿಸ್ಥಿತಿಯನ್ನು ಒಂದು ಹದಕ್ಕೆ ತರಲು ಅವರ ತುರ್ತುಸೇವೆ ಸಿಬ್ಬಂದಿ ಹಗಲುರಾತ್ರಿ ದುಡಿಯುತ್ತಿದ್ದರು. ಅವರಿಗೆ ಹೆಚ್ಚಿನ ಸಹಾಯ ಬೇಕಿತ್ತು. ರಾಣಿರಾಜ್ಯದಲ್ಲಿ ಪ್ರತಿವರ್ಷದ ‘Queensland is happening’ ಎಂಬ ತುರ್ತುಪರಿಸ್ಥಿತಿ (ಬರ, ಪ್ರವಾಹ, ಬೆಂಕಿ, ಬಿರುಗಾಳಿ, ಮರಗಿಡಗಳು ಉರುಳುವುದು ಇತ್ಯಾದಿ ಪ್ರಕೃತಿವಿಕೋಪಗಳು) ಹೆಚ್ಚುಕಡಿಮೆ ಒಂದು ತಮಾಷೆಯಾಗಿಬಿಟ್ಟಿದೆ.

ಸೆಪ್ಟೆಂಬರ್ ಬಂತೆಂದರೆ storm season ಬರುತ್ತಿದೆ, ತಯಾರಾಗಿ ಎಂಬ ಸಾರ್ವಜನಿಕ ಕೂಗು ಕೇಳುತ್ತದೆ. ಎಲ್ಲೆಲ್ಲೂ ಜಾಹಿರಾತುಗಳು ಏಳುತ್ತವೆ – plumber, tree doctor, gutter cleaning, handyman ಎಂಬಂತೆ tradesmen ಗಳಿಗೆ ಕೈತುಂಬಾ ಕೆಲಸ.

ಇದು ಪ್ರತಿವರ್ಷ ನಡೆಯುವ ಪ್ರಕೃತಿವಿಕೋಪ. ಆದರೂ ಕೂಡ ಆಸ್ತಿಪಾಸ್ತಿ ನಷ್ಟ, ಜಾನುವಾರುಗಳು ಸಾಯುವುದು, ಜನರು ಕೋಪಿಸಿಕೊಳ್ಳುವುದು, ತಾವು, ತಮ್ಮವರು ಬೆಂಕಿಪ್ರಸಂಗದ ಪರಿಣಾಮಗಳಿಗೆ ಈಡಾದರೆ ಇನ್ನಿಲ್ಲದಷ್ಟು ನೋವನ್ನು ತೋರಿಸಿಕೊಂಡು ಎಗರಾಡುವುದು, ಸರ್ಕಾರವನ್ನು ದೂಷಿಸುವುದು, ಕಣ್ಣೀರು ಸುರಿಸುತ್ತಾ ಪರಸ್ಪರರಿಗೆ ಸಹಾಯಹಸ್ತವನ್ನು ಚಾಚುವುದು, ಎಲ್ಲ ಥರದ ನಿಜಜೀವನದ ನಾಟಕಗಳು ಈ ಸಮಯದಲ್ಲಿ ನಡೆಯುತ್ತವೆ.

ರೆಡ್ ಕ್ರಾಸ್ ಸಂಸ್ಥೆ ತಾವೇ Emergency Services ವಿಷಯದಲ್ಲಿ ತರಬೇತಿ ಕೊಟ್ಟು ಸ್ವಯಂಸೇವಕರಿಗೆ ಹೊಸ ಕೌಶಲವನ್ನು ಕಲಿಸಿ ಅವರ ಸೇವೆಯನ್ನು ಉಪಯೋಗಿಸಿಕೊಳ್ಳುವ ಉದ್ದೇಶವನ್ನು ಪ್ರಕಟಿಸಿದ್ದರು. ಹೊಸ ವಿಷಯ, ಕೌಶಲವನ್ನು ಕಲಿಯುವ ಕುತೂಹಲದಿಂದ ನಾನೂ ಅರ್ಜಿ ಹಾಕಿಕೊಂಡೆ. ಅವರಿನ್ನೂ ಬೆಂಕಿಪ್ರಸಂಗಗಳನ್ನ ನಿವಾರಿಸಲು ಹೆಣಗಾಡುತ್ತಿದ್ದರೆ ಆ ಕಡೆ ಆಗಲೇ ಇದ್ದಕ್ಕಿದ್ದಂತೆ ರಾಣಿರಾಜ್ಯದ ಉತ್ತರ ಭಾಗಗಳಲ್ಲಿ ಪ್ರವಾಹ, ನೆರೆ ಕಾಣಿಸಿಕೊಂಡುಬಿಟ್ಟಿತು. ರೆಡ್ ಕ್ರಾಸ್ ಸಂಸ್ಥೆಗೆ ಇನ್ನಿಲ್ಲದಷ್ಟು ಕೆಲಸದ ಹೊರೆಯಾಗಿ, ಅವರು ನನ್ನನ್ನು ಸಂಪರ್ಕಿಸುವ ಹೊತ್ತಿಗೆ ಎರಡು ತಿಂಗಳಾಗಿತ್ತು.

ಸಂಪರ್ಕಿಸಿದ ಕೂಡಲೇ ಪಟಪಟನೇ ಮೂರು ಹಂತದ ಮೊದಲನೇ ತರಬೇತಿ ಕೊಟ್ಟು ಕಂಪ್ಯೂಟರ್ ಮುಂದೆ ಕೂರಿಸಿ, ತಲೆಗೆ ಹೆಡ್ ಫೋನ್ ಮತ್ತು ಮೈಕ್ ಇರುವ ಸಾಧನವನ್ನು ತಗುಲಿಸಿದರು. ಏನಪ್ಪಾ ವಿಷಯ ಅಂದರೆ ಪ್ರವಾಹ ಮತ್ತು ನೆರೆಗೆ ಸಿಲುಕಿ ಅದರ ಪರಿಣಾಮವನ್ನು ಅನುಭವಿಸಿದ್ದ ಸಾವಿರಾರು ಜನರನ್ನು ನಾವು ಸ್ವಯಂಸೇವಕರು ಮತ್ತು ಸಿಬ್ಬಂದಿ ಸಂಪರ್ಕಿಸಬೇಕಿತ್ತು. ಅವರ ಯೋಗಕ್ಷೇಮ ಕೇಳಿ, ಸರ್ಕಾರ ಘೋಷಿಸಿದ್ದ ಧನಸಹಾಯ ಅವರಿಗೆ ಸಿಕ್ಕಿತೇ, ಅವರಿಗೆ ಆದ ನಷ್ಟಗಳು ಏನೇನು, ಅವರಿಗೆ ಮುಂದೆ ಯಾವ ರೀತಿಯ ಸಹಾಯ ಬೇಕು ಎಂದು ಕೇಳಿ ಸರಿಯಾದ ಮಾಹಿತಿ ಕೊಟ್ಟು, ಎಲ್ಲವನ್ನೂ ದಾಖಲಿಸಬೇಕಿತ್ತು. ಮೂರು ವಾರಗಳ ಮಟ್ಟಿಗೆ ಕೆಲಗಂಟೆಗಳ ಕಾಲ ಮಾತ್ರ ಮಾಡಿದ ಈ ‘ಫೋನ್ ಇನ್ ಸೈಕಲಾಜಿಕಲ್ ಫಸ್ಟ್ ಏಡ್’ ಕೆಲಸ ನನ್ನನ್ನು ಸುಸ್ತುಹೊಡೆಸಿತು. ಕಾಲ್ ಸೆಂಟರಿನಲ್ಲಿ ಕೆಲಸ ಮಾಡುವವರ ಬಗ್ಗೆ ಹೊಸ ಅನುಕಂಪ ಹುಟ್ಟಿತು.

ಹೊಸಕಲಿಕೆ ಏನೆಂದರೆ ರಾಣಿರಾಜ್ಯದ ವಿವಿಧ ರೀತಿಯ ಜನರ, ಜನಜೀವನದ ಪರಿಚಯವಾಯ್ತು. ಫೋನಿನಲ್ಲಿ ನೂರಾರು ಮಂದಿಯನ್ನು ಮಾತನಾಡಿಸಿ ‘ಏನ್ರಿ, ಪ್ರವಾಹದಿಂದ ಏನೇನಾಯಿತು’ ಎಂದು ಕೇಳಿದರೆ ಬಿಚ್ಚಿಕೊಂಡ ಕಥೆಗಳಲ್ಲಿ ಕೋಪ, ಆವೇಶ, ಬೈಗಳು, ಆಪಾದನೆ, ಉಪೇಕ್ಷೆ, ಸಿಟ್ಟುಸಿಡುಕು, ಅಳು, ಕಣ್ಣೀರು, ನಗು, ಜೋಕುಗಳು, ಸ್ವಲ್ಪ ಫ್ಲರ್ಟಿಂಗು, ಏನೆಲ್ಲಾ ಅನುಭವವಾಯ್ತು. ಅವರಲ್ಲಿ ಫೋನ್ ಕುಕ್ಕಿದವರಿದ್ದರು, ‘ಅಯ್ಯೋ ಫೋನ್ ಇಡಬೇಡ ಇನ್ನೂ ಮಾತನಾಡುವುದಿದೆ’ ಎಂದವರಿದ್ದರು, ‘ಆಸ್ಟ್ರೇಲಿಯನ್ accent ನಲ್ಲಿ ಮಾತಾಡು’ ಎಂದು ಗುಡುಗಿದವರಿದ್ದರು, ‘ನಾನೊಬ್ಬ ರೈತ, ಟ್ರ್ಯಾಕ್ಟರ್ ಓಡಿಸುತ್ತಿದ್ದೀನಿ, ಸಂಜೆ ಫೋನ್ ಮಾಡು’ ಎಂದವರಿದ್ದರು. ಒಟ್ಟಾರೆ ಅನುಭವ ಜೀವನ ಬೇವುಬೆಲ್ಲ ಹಾಡನ್ನು ಕೇಳಿದಂತಾಗಿತ್ತು.

ಎರಡನೇ ತರಬೇತಿಯ ವಿಷಯ ‘ತುರ್ತು ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು’ ಅನ್ನುವುದರ ಬಗ್ಗೆ. ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಏನಾದರೂ ಅವಗಢ ಸಂಭವಿಸಿದರೆ ಯಾರನ್ನು ಸಂಪರ್ಕಿಸಬೇಕು, ಪ್ರಕೃತಿವಿಕೋಪ ಸಂದರ್ಭದ ಬಗ್ಗೆ ಮಾಹಿತಿ ಯಾವ್ಯಾವ ಮೂಲಗಳಿಂದ ಸಿಗುತ್ತದೆ, ಮನೆತೊರೆದು evacuation ಸೆಂಟರಿಗೆ (ಸ್ಥಳಾಂತರ ಕೇಂದ್ರ) ಹೋಗಲು ಸಿದ್ಧತೆ, ಹೋದರೆ ಅಲ್ಲಿ ಏನು ನಡೆಯುತ್ತದೆ, ಇತ್ಯಾದಿ. ಇವುಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ನನಗಾಗ ಸ್ಪಷ್ಟವಾಯಿತು. ರೆಡ್ ಕ್ರಾಸ್ ಸಂಸ್ಥೆ ಹೊಸದಾಗಿ ಆರಂಭಿಸಿದ್ದ ಪ್ರಾಜೆಕ್ಟ್ ಬಗ್ಗೆ ತಿಳಿಯಿತು. ಮಕ್ಕಳು ಅಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ, ಅವರಿಗೆ ಯಾವ ರೀತಿಯಲ್ಲಿ ಸಿದ್ಧತಾ ತರಬೇತಿಯನ್ನು ಕೊಡುವುದು ಅನ್ನೋ ಪ್ರಾಜೆಕ್ಟ್. ಎಷ್ಟೆಲ್ಲಾ ಕೆಲಸ ನಡೆಯುತ್ತಿದೆ ಎನ್ನಿಸಿ ಆಶ್ಚರ್ಯವಾಯಿತು.

ಮೂರನೇ ತರಬೇತಿಯಿದ್ದದ್ದು ಬೇರೆ ವಿಷಯದ ಬಗ್ಗೆ. Evacuation ಸೆಂಟರ್ ಅಂದರೆ ಏನು, ಪ್ರಕೃತಿವಿಕೋಪ ಸನ್ನಿವೇಶದಲ್ಲಿ ಅಂತಹ ಒಂದು ಕೇಂದ್ರವನ್ನು ತೆರೆಯಲು ಬೇಕಾಗಿರುವ ಸಂಪನ್ಮೂಲಗಳೇನು, ಅದು ಹೇಗಿರುತ್ತದೆ, ಅಲ್ಲಿಗೆ ಬರುವವರು ಯಾರು, ಅವರ ಅಗತ್ಯಗಳೇನು, ತುರ್ತುಸೇವಾ ಸಿಬ್ಬಂದಿ ಮತ್ತು ಸ್ವಯಂಸೇವಕರು ಏನೆಲ್ಲಾ ರೀತಿಯ ಬಹುಪಾತ್ರಗಳನ್ನ ನಿರ್ವಹಿಸಬೇಕಾಗುತ್ತದೆ, ಅವರಿಗೆ ಎಂತೆಂತಹ ಸವಾಲುಗಳು ಎದುರಾಗುತ್ತವೆ – ಹೀಗೆ ಬೇಕಾದಷ್ಟು ಹೊಸ ವಿಷಯಗಳು.

ಒಂದಷ್ಟು ನೈಜ ಘಟನೆಗಳ ವಿಡಿಯೋಗಳನ್ನ ತೋರಿಸಿ ಅನೇಕ ಚಟುವಟಿಕೆಗಳನ್ನು ನಡೆಸಿದರು. ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ ಸ್ಥಳೀಯ ಸಮುದಾಯ ತಮ್ಮನ್ನು ಬೇರೆ ಇಟ್ಟ ನೋವನ್ನು ತೋಡಿಕೊಂಡ ವಲಸೆಗಾರ ಕುಟುಂಬದ ಅಳಲು, ಜನಾಂಗೀಯ ವಿಭಜನೆಗಳಿದ್ದ ಮನೋಭಾವ, ಗೆಳತಿಯನ್ನು ನೋಡಲು ಬಂದರೆ ದುರಾದೃಷ್ಟವಶಾತ್ ಆಗಲೇ ಪ್ರವಾಹ ಬಂದು ವಾಹನ ಸಂಚಾರವಿಲ್ಲದೆ ಅಲ್ಲೇ ಸ್ಥಗಿತಗೊಂಡು ತನ್ನ ಕೆಲಸವನ್ನೇ ಕಳೆದುಕೊಂಡ ಯುವತಿಯ ಬೇಸರ… ಇವರೆಲ್ಲರಿಗೂ ಸಮಾಧಾನ ಹೇಳುತ್ತಾ, ಅವರ ಕನಿಷ್ಠ ಅಗತ್ಯಗಳನ್ನು ಪೂರೈಸುತ್ತಾ ಇಪ್ಪತ್ತನಾಲ್ಕು ಗಂಟೆ ದುಡಿಯುತ್ತಿರುವ ತುರ್ತುಸೇವೆ ಸ್ವಯಂಸೇವಕರ ಮತ್ತು ಸಿಬ್ಬಂದಿಯ ಪಾತ್ರ… ಈ ಕಥಾಚಿತ್ರಗಳನ್ನು ನೋಡಿದಾಗ ಅಬ್ಬಬ್ಬಾ ಅನ್ನಿಸಿಬಿಟ್ಟಿತು.

ಸ್ವಯಂಸೇವಕರಲ್ಲಿ ನಿವೃತ್ತ ಶಾಲಾಶಿಕ್ಷಕರು, ಪಾರ್ಟ್ ಟೈಮ್ ಕೆಲಸದಲ್ಲಿದ್ದವರು, ಯೂನಿವರ್ಸಿಟಿ ವಿದ್ಯಾರ್ಥಿಗಳು, ಹೊಸದಾಗಿ ವಲಸೆ ಬಂದಿದ್ದವರು, ನಿರಾಶ್ರಿತರು, ಗೃಹಿಣಿಯರು ಇದ್ದರು. ಕೆಲವರು ಸ್ಥಳಾಂತರ ಕೇಂದ್ರವನ್ನು ನೋಡಿಬಂದವರು. ಅವರ ಸೇವಾ ಅನುಭವಗಳಲ್ಲಿ ಸಾರ್ಥಕತೆಯಿತ್ತು. ಕಳೆದ ಕೆಲವಾರಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ‘ಸ್ಥಳಾಂತರ ಕೇಂದ್ರಕ್ಕೆ ಹೋಗಲು ಸಿದ್ಧರಿದ್ದೀರಾ’ ಎಂದು ನನ್ನನ್ನು ಕೇಳಿದೆ. ಹೂಂ ಇದೀನಿ, ಎಂದು ಮನಃಪೂರ್ವಕವಾಗಿ ಹೇಳಲು ಧೈರ್ಯ, ಸಮಯ ಇನ್ನೂ ಒಗ್ಗೂಡಿಲ್ಲ.