ನದಿ

*********
ಒಂದೊಮ್ಮೆ ಎಳ್ಳಷ್ಟೂ
ಸದ್ದು ಮಾಡದಂತೆ
ಹರಿವ ಬಾಳ ನದಿಯ
ಹರಿವಿನಿಂದ ಬೇರ್ಪಟ್ಟು
ತಬ್ಬಿದೆದೆಯನು ನಿಂತಲ್ಲೇ ಬಿಟ್ಟುಕೊಟ್ಟು
ಉಟ್ಟಬಟ್ಟೆಯನು ಅಲ್ಲೇ ಒಕ್ಕೊಟ್ಟು
ವಿಲವಿಲನೇ ಮೀನಿನಂತೆ ಒದ್ದಾಡುತ್ತಾ,
ಬೇಡದ ಕಡೆಗೆ ತೆವಳುತ್ತಾ
ಈ ಇಳೆಗೆ
ಎದೆಯ ತೋಯಿಸುವ ಮಳೆಗೆ
ಕಾಪಿಟ್ಟ ಕಣ್ಣಿಗೆ
ಅನ್ನವಿಟ್ಟ ಮಣ್ಣಿಗೆ
ಕನಸ ಸುಟ್ಟ ಸೂರ್ಯರಿಗೆ
ಕತ್ತಲಲಿ ಬೆಳಕ ನೆಟ್ಟ ಚಂದ್ರರಿಗೆ
ಹಣ್ಣಾದವಂಗೆ ಹೂವಾದವಂಗೆ
ಎಲ್ಲದೆಲ್ಲದಕ್ಕೂ
ವಿದಾಯವನರ್ಪಿಸಿ ನಡೆದುಬಿಡಬೇಕೆಂದು
ಅದೆಷ್ಟು ಬಾರಿ ಅಂದುಕೊಳ್ಳುತ್ತಾಳವಳು;

ಹಾಗೆಂದುಕೊಂಡಾಗಲೆಲ್ಲ ಮುಂದಕ್ಕೆ ರಸ್ತೆ
ಕಾಣಿಸುವುದೇ ಇಲ್ಲ
ಎದೆಯಲ್ಲಿನ್ನೂ ಉಳಿದ
ಮುಡಿದ ಹೂವ ಕಂಪು
ಅವಳ ಸುತ್ತಮುತ್ತೆಲ್ಲ ಹರಡಿ
ಕಣ್ಣು ಮಂಜಾಗಿಬಿಡುತ್ತವೆ.

ಸಾಕಿನ್ನು… ಸಾಕಿನ್ನು ಸಹಿಸಿದ್ದೆಂದು
ಅವನು ಬಿಟ್ಟುಹೋದ ಪ್ಯಾಕೆಟ್ಟಿನಿಂದ
ಸಿಗರೇಟೊಂದನ್ನು ಎಳೆದು ತುಟಿಗಿಡುತ್ತಲೆ
ಜೋರು ಮಳೆ….

ಸಿಗರೇಟಿನೊಟ್ಟಿಗೆ ಅವಳೆದೆಯೊಳಗಿನ
ಬೆಂಕಿಯೂ ತಣ್ಣಗಾಗಿಬಿಡುತ್ತದೆ
ಎಂದೋ ಹೆಣೆದು ಮರೆತಿದ್ದ ಜಡೆಯ ತುಂಬೆಲ್ಲ
ಯಾರೋ ಕೈಯ ಪರಾಗಸ್ಪರ್ಶ ಉಳಿಸದಂತೆ
ಅತೀ ಮೆಲ್ಲಗೆ
ಸಂಪಿಗೆಯ ಹೂಗಳನ್ನು ಸಿಕ್ಕಿಸಿದ್ದಾರೆ.

ಹಿಂದೆಲ್ಲ ಎಂಥೆಂಥಾ ಬಾಚಣಿಗೆಗಳ
ದಾಳಿಗೂ ಬಗ್ಗಿರದ ಈ ಸಿಕ್ಕುಗಳೆಲ್ಲ
ಹೂವ ಕಂಪಿಗೆ ಮೆತ್ತಗಾದವೆ?

ಯಾರೋ ಎಲ್ಲೋ ಕುಳಿತು
ಇವಳ ತಲೆಗೂದಲ್ಲಿ ಮೆದುವಾಗಿ
ಬೆರಳಾಡಿಸುತ್ತಿರಬೇಕು,
ಮತ್ತೆ ನಿದ್ರೆಗೆ ಶರಣಾಗುತ್ತಿದ್ದಾಳೆ.
ದೀರ್ಘಕಾಲದ ಬಳಲಿಕೆಯ ನಂತರ

 

ಚಿತ್ರ: ರೂಪಶ್ರೀ ಕಲ್ಲಿಗನೂರ್