ಪ್ರತಿಫಲನ

ಅಮ್ಮನಂಥ ಅಗಾಧ ಹೆಮ್ಮರ
ಸುಲಭಕ್ಕೆ ಸೋತು ಬಗ್ಗುವುದಲ್ಲ
ಆಕ್ರಮಣ, ಅತಿಕ್ರಮಣ ಇನ್ನೇನು ಮುಗಿಲು ಮುಟ್ಟಲಿದೆ
ಕೊರೆದು, ಬಗೆದು ವಿಕಾರಗೊಂಡಿರುವ ಅದರ ದೇಹ ಛಿದ್ರ ಛಿದ್ರವಾಗಲಿದೆ
ಅಲ್ಲಿ ಹುಲ್ಲು ಸಹ ಹುಟ್ಟಲಾರದು

ಹೂ ಹಣ್ಣುಗಳೆಲ್ಲ ಕಾಲಕ್ಕೆ ಕಾದು ಮಾಗುವಂತಿಲ್ಲ ಈಗ
ಇವರೋ, ಅವರೋ..  ಯಾರು ಬಂದಾಗಲೂ ಫಲ ಕೊಡಬೇಕು
ಮದ್ದುಗಳಿವೆ ಅವರಲ್ಲಿ.. ಇಲ್ಲವೆನ್ನಲಾಗದು
ಕಾಲ ಮೂಡುವ ಮುನ್ನವೇ ದೇಹ ಮಾಗಲಿದೆ
ಹೆತ್ತ ನೋವಾರುವ ಮುನ್ನವೇ, ಮತ್ತೆ ಗರ್ಭ ಹೊತ್ತು ನಿಲ್ಲಬೇಕು.
ಹಡೆಹಡೆದು ಒಡಲ ಚೀಲವೇ
ಹರಿದು ಹೋಗುವವರೆಗೂ ಹೆರಬೇಕು

ನಿಶ್ಯಬ್ಧವನ್ನು ಜೀವಂತ ಸುಟ್ಟ ಇಲ್ಲಿನ
ಕೋಗಿಲೆಗಳ ಹಾಡು ಇತಿಹಾಸ ಸೇರಲಿದೆ
ಹಕ್ಕಿಗಳ ಗೂಡು ಹರಾಜಿಗಿಡಲಾಗಿದೆ
ಹೂವು ದುಂಬಿಗಿಲ್ಲ: ಹಣ್ಣು ಹಕ್ಕಿಗಲ್ಲ

 

 

 

 

ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ

ಎದೆ ಬಗೆಯುವಾಗ ಸಿಕ್ಕ ಬೇರುಗಳಿಗೆ ಮರಣ ಪ್ರಾಪ್ತಿ
‘ಚೀ ಚೀ.. ಎಷ್ಟು ಬಿಸ್ಲು..
ಮಳಿಗಾಲದಾಗ ಹನಿ ನೀರೂ ಸಿಗವಲ್ದು..’
ಕಾಡು ಕಡಿದು ಕಾರು ಕೊಂಡಾತನೊಬ್ಬ
ನಡು ಬೀದಿಯಲ್ಲಿ ನಿಂತು ಅರಚುತ್ತಿದ್ದಾನೆ
ಗಂಜಿ ಹಾಕಿದ ಅವನ ಬಿಳಿ ಬಟ್ಟೆಗೆ
ಒಣಭೂಮಿಯ ಮೇಲ್ಮಣ್ಣು ಮೋಹಕಗೊಂಡು ಮುತ್ತಿಕ್ಕುತ್ತಿದೆ

ವಜ್ರದ್ಹರಳಿನ ಗಡಿಯಾರದಲ್ಲಿ ಸಮಯ ಹೇಗಿದೆ?
ದಾರಿ ಹೋಕನೊಬ್ಬ ಅವನನ್ನು ಪ್ರಶ್ನಿಸಿದ್ದಾನೆ
ಮತ್ತು ಉತ್ತರಕ್ಕೂ ಕಾಯದೇ ಮುನ್ನಡೆದಿದ್ದಾನೆ
ಠಾರಿಲ್ಲದ ಅವನೂರ ಹಾದಿಯಲ್ಲಿ ಕೆಟ್ಟು ನಿಂತ ಕಾರು
ತೆಗ್ಗು ದಿಣ್ಣೆಗಳಿಗಂಜಿ ಮಿಕಿಮಿಕಿ ನೋಡುತ್ತಿದೆ..