ಮಧ್ಯಪ್ರದೇಶದ ಭೋಜಪುರದಲ್ಲಿರುವ ಭೋಜೇಶ್ವರ, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಲಿಂಗ ನೆನಪಾಗುತ್ತದೆ. ಕೆಲವು ಮನೆತನಗಳ ಸಂಪ್ರದಾಯದಲ್ಲಿ ನದಿ ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಪ್ರತಿದಿವಸ ಅದೇ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿ ಸಿಗುವ ಮರಳಿನಲ್ಲಿ ಒಂದು ಲಿಂಗವನ್ನು ರಚಿಸಿ ಪೂಜಿಸಿ ಮತ್ತೆ ಅದನ್ನು ನೀರಿನಲ್ಲಿ ಅಂದೇ ವಿಸರ್ಜಿಸಿ ಮನೆಗೆ ಬರುವುದೂ ಉಂಟು. ಇದನ್ನು ವಿದ್ಯಾನಿವಾಸ್‌ ಮಿಶ್ರಾ ಒಂದು ಕಡೆ ಬರೆಯುತ್ತಾರೆ. ಮನುಷ್ಯ ಕಟ್ಟಿರುವ ಲಿಂಗಗಳಲ್ಲದೆ ಅನೇಕ ಕಡೆಗಳಲ್ಲಿ ಉದ್ಭವ ಲಿಂಗಗಳು ಸಿಗುತ್ತವೆ.
‘ದೇವಸನ್ನಿಧಿ’ ಅಂಕಣದಲ್ಲಿ ಶಿವನ ಹಲವು ರೂಪ, ರೂಪಕಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

ಕಾಡಿನ ನಡುವೆ ಒಂದು ಕಿ. ಮೀ ನಡೆದರೂ ಯಾವ ಶಿವಲಿಂಗಗಳೂ ಸಿಗಲಿಲ್ಲ. ಯಾರೋ ಹೇಳಿದ ಮಾತು ಕೇಳಿ ಬರಬಾರದಿತ್ತು ಅನಿಸಿತು. ಕಾಡಿನ ಕಾಲುದಾರಿಯಲ್ಲಿ ನಾವು ನಡೆಯುತ್ತಿದ್ದೆವು. ನನ್ನ ಜೊತೆ ಜಗದಾಲಪುರದಿಂದ ಕರೆದುಕೊಂಡು ಬಂದ ಒಬ್ಬ ಮಾರ್ಗದರ್ಶಿ ಹುಡುಗ ಇದ್ದ. ಅವನೂ ಎಂದೂ ಇಲ್ಲಿಗೆ ಬಂದಿರಲಿಲ್ಲ ಅಂತೆ. ನಾನು ತುಸು ಹೆಚ್ಚೇ ಉತ್ಸಾಹ ತೋರಿಸಿ ಬಂದೆನಾ ಅಂತ ಅನುಮಾನ ಆಯಿತು. ಅದು ಛತ್ತೀಸಗಢದ ಗೋಬ್ರಹೀನ್‌ ಅನ್ನುವ ಜಾಗ. ಅಲ್ಲಿ ಉತ್ಖನನದಲ್ಲಿ ಅನೇಕ ಶಿವಲಿಂಗಗಳು ಸಿಕ್ಕಿವೆ ಅಂತ ನೋಡಲು ಬಂದಿದ್ದೆ. ಅಲ್ಲಿನ ಒಂದು ಲಿಂಗವಂತೂ ೫ನೇ ಶತಮಾನದ ಸುಂದರ ಲಿಂಗ. ಅದರ ಮೇಲಿನ ಬ್ರಹ್ಮಸೂತ್ರ ನಿಚ್ಚಳವಾಗಿ ಕಾಣುತ್ತಿತ್ತು. ಒಂದು ಸಣ್ಣ ಗುಡ್ಡದ ಮೇಲಿರುವ ದೇವಾಲಯದ ಹಂಗಿಲ್ಲದೇ ಆಕಾಶದ ಕೆಳಗಿರುವ ಈ ಶಿವಲಿಂಗ ನೋಡಿದರೇ ಭಕ್ತಿ ಹುಟ್ಟುವ ಹಾಗಿತ್ತು. ಅದನ್ನು ನೋಡಿದ ಮೇಲೆ ಅದರ ಸುತ್ತ ಹಾಗೇ ನಡೆದುಕೊಂಡು ಹೋದರೆ ಜೋಡಿ ಲಿಂಗ ಸಿಗುತ್ತೆ ಅಂತ ಅಲ್ಲಿ ಸಿಕ್ಕಿದ ಯಾರೋ ಹೇಳಿದರು. ದಾರಿಯುದ್ದಕ್ಕೂ ಅನೇಕ ಲಿಂಗಗಳು ಕಾಣಸಿಕ್ಕವು. ಆದರೆ ಜೋಡಿ ಲಿಂಗ ಇನ್ನೂ ಸಿಕ್ಕಿರಲಿಲ್ಲ.

ಆದರೂ ಇಷ್ಟು ದೂರ ಬಂದು ವಾಪಸ್‌ ಹೋಗುವ ಮೊದಲು ಇನ್ನೊಂದೆರಡು ಹೆಜ್ಜೆ ಹಾಕೇ ಬಿಡೋಣ ಅಂತ ಮುಂದುವರೆದೆ. ಇನ್ನೊಂದು ಕಿ. ಮೀ. ನಡೆಯುವುದರಲ್ಲಿ ಒಂದು ಗೇಟ್‌ ಅದರ ಒಳಗೆ ಒಂದು ಹುಲ್ಲಿನ ತಡಿಕೆ ಕಾಣಿಸಿತು. ಅದರ ಒಳಗೆ ಹೋದರೆ ಅಲ್ಲಿ ಮತ್ತೊಬ್ಬರಿರಲಿಲ್ಲ. ಅಪೂರ್ವವಾದ ಶಾಂತಿ ಅಲ್ಲಿ ನೆಲೆಸಿತ್ತು. ಹುಲ್ಲಿನ ತಡಿಕೆಯ ಕೆಳಗೆ ಎರಡು ಶಿವಲಿಂಗಗಳು. ಅವುಗಳ ಮೇಲಿದ್ದ ಹೂವುಗಳನ್ನು ನೋಡಿ ಯಾರೋ ಪೂಜೆ ಮಾಡಿ ಹೋಗಿದ್ದಾರೆ ಅಂತ ಗೊತ್ತಾಯಿತು. ಆ ಎರಡು ಲಿಂಗಗಳಲ್ಲಿ ಒಂದು ಚಿಕ್ಕದಿದ್ದು ಅದಕ್ಕೆ ಬಟ್ಟೆ ಹೊದೆಸಿದ್ದರು. ಎರಡೂ ಲಿಂಗಗಳ ಪಕ್ಕ ತ್ರಿಶೂಲ ನೆಟ್ಟಿದ್ದರೂ ಚಿಕ್ಕ ಲಿಂಗದ ತ್ರಿಶೂಲಕ್ಕೆ ಮಾತ್ರ ಬಳೆ ಸಿಗಿಸಿದ್ದರು. ಕಣ್ಣಿಗೆ ಕಾಣುವ ಹಾಗೆ ಒಂದನ್ನು ಸ್ತ್ರೀ ಸಂಕೇತವನ್ನಾಗಿ ಹಾಗೂ ಮತ್ತೊಂದನ್ನು ಪುರುಷ ಲಿಂಗ ಸಂಕೇತವನ್ನಾಗಿ ಪೂಜಿಸುತ್ತಾರೆ ಅಂತ ತಿಳೀತು. ಇಂತಹ ಜೋಡಿ ಲಿಂಗಗಳನ್ನು ಸ್ತ್ರೀ ಪುರುಷ ಅಂತ ಪೂಜಿಸುತ್ತಾರೆ ಅಂತ ನನ್ನ ಜೊತೆ ಬಂದ ಹುಡುಗನೂ ತಿಳಿಸಿದ. ಈ ಕಲ್ಪನೆಯೇ ನನಗೆ ಹೊಸದಾಗಿ ಕಂಡಿತು. ಇದೇ ಮೊದಲ ಬಾರಿ ಶಿವನ ಜೊತೆ ಸೇರಿಕೊಂಡ ಇಂತಹ ಕಲ್ಪನೆಯನ್ನು ನಾನು ಕೇಳಿದ್ದು. ಅಂದ ಹಾಗೆ ಇಲ್ಲಿ ಸಿಕ್ಕ ಶಿವಲಿಂಗಗಳು ೫ ನೇ ಶತಮಾನಕ್ಕೆ ಸೇರಿದವು. ಮೊದಲು ನೋಡಿದ ಶಿವಲಿಂಗಕ್ಕೆ ಇದ್ದಂತೆ ಇದಕ್ಕೆ ಬ್ರಹ್ಮಸೂತ್ರ ಇರಲಿಲ್ಲ. (ಬ್ರಹ್ಮ ಸೂತ್ರ ಶಿವಲಿಂಗದ ಮೇಲಿರುವ ರೇಖೆಗಳು. ಆಗಮಗಳ ಪ್ರಕಾರ ಶಿವಲಿಂಗವನ್ನು ಪೂಜಾರ್ಹವಾಗಿ ಮಾಡಲು ಬ್ರಹ್ಮ  ಸೂತ್ರಗಳನ್ನು ಕೆತ್ತಿರಬೇಕು)

ಶಿವನನ್ನು ಅನೇಕ ರೂಪಗಳಲ್ಲಿ ಪೂಜಿಸಿದರೂ ಅತ್ಯಂತ ಸರಳಾತಿಸರಳ ರೂಪ ಅಂದರೆ ಲಿಂಗ. ಅದನ್ನು ಗುಂಡುಕಲ್ಲು, ಉರುಳುಕಲ್ಲಿನ ರೂಪ ಅಂತಲಾದರೂ ಕರೆಯಿರಿ ಶಿವಲಿಂಗ ಅನ್ನಿರಿ. ಇದಕ್ಕಿಂತ ಇನ್ಯಾವ ದೇವರೂ ಸರಳವಾಗಿರಲಾರ. ಆ ಸರಳತೆಯನ್ನೂ ಕೂಡ ಎಷ್ಟು ಬಗೆಬಗೆಯಾಗಿ ಕೆತ್ತಿದ್ದಾರೆ, ಪೂಜಿಸುತ್ತೇವೆ ಎಂದು ಯೋಚಿಸುತ್ತಿದ್ದೆ. ನನ್ನ ಅಲೆದಾಟದಲ್ಲಿ ಕಂಡ ಹಲವು ಬಗೆಗಳ ಬಗ್ಗೆ ಇಡಿಯಾಗಿ ನೋಡಿದಾಗ ಶಿವಲಿಂಗವೇ ಒಂದು ಅಮೂರ್ತತೆಗೆ ಕೊಟ್ಟ ಆಕಾರ. ಆ ಆಕಾರಕ್ಕೆ ಮತ್ತದೆಷ್ಟು ರೂಪಗಳು ಅನ್ನಿಸುತ್ತದೆ.

ಛತ್ತೀಸಗಢದಲ್ಲಿಯೇ ಒಂದು ಹಳೆಯ ದೇವಾಲಯದಲ್ಲಿ ರುದ್ರಾಕ್ಷ ಶಿವಲಿಂಗವನ್ನು ನೋಡಿದ್ದೆ. ಅದು ಪುಟ್ಟ ಆದರೆ ಮೂರು ಭಾಗವಿರುವ ಸಣ್ಣ ಲಿಂಗ. ಭಾರತೀಯ ಪುರಾತತ್ವ ಇಲಾಖೆಯವರ ಪ್ರಕಾರ ಅದು ಅಪರೂಪದ, ಪ್ರಾಚೀನವಾದ ಲಿಂಗವಂತೆ. ಅದೇ ರೀತಿಯ ರುದ್ರಾಕ್ಷ ಲಿಂಗ ಮಹಾಬಲೇಶ್ವರದಲ್ಲಿ ಇದೆ ಅಂತ ಕೇಳಿದ್ದೇನೆ.

ಸಹಸ್ರಲಿಂಗದ ಕಲ್ಪನೆಯಂತೂ ನಮ್ಮ ದೇಶದ ಉದ್ದಗಲಕ್ಕೂ ಇದೆ. ಕರ್ನಾಟಕದ ಶಿರಸಿಯ ಶಾಲ್ಮಲಾ ನದಿಯಲ್ಲಿ ಅನೇಕ ಲಿಂಗಗಳನ್ನು ಶಿಲೆಗಳ ಮೇಲೆ ಕೆತ್ತಿದ್ದಾರೆ. ಅವೆಲ್ಲಕ್ಕೂ ಜೊತೆಯಲ್ಲಿ ನಂದಿಯಿರುವುದು ವಿಶೇಷ. ಕಾಲಾಂತರದಲ್ಲಿ ನದಿಯ ಹರವಿಗೆ ಸಿಕ್ಕು ಅನೇಕ ಲಿಂಗಗಳು ಹಾಳಾಗಿವೆ. ಅಲ್ಲಿರುವ ಅನೇಕ ಲಿಂಗಗಳನ್ನು ಸಹಸ್ರಲಿಂಗ ಅನ್ನುತ್ತಾರೆ. ಇದೇ ರೀತಿ ಕಾಂಬೋಡಿಯಾ ದೇಶದಲ್ಲಿ ಕೂಡ ಒಂದು ಸಹಸ್ರಲಿಂಗದ ಸ್ಥಳವಿದೆ. ನಮ್ಮ ಶಾಲ್ಮಲಾ ನದಿಯಂತೆ ಇಲ್ಲಿಯೂ ಕೂಡ ನದಿಯ ಪಾತ್ರದಲ್ಲೇ ನೂರಾರು ಲಿಂಗಗಳನ್ನು ಕೆತ್ತಿದ್ದಾರೆ. ಭಾರತೀಯ ಸಂಸ್ಕೃತಿ ಎಲ್ಲೆಲ್ಲಿ ಹರಡಿತೋ ಅಲ್ಲೆಲ್ಲಾ ಅವರ ದೇಶಗಳ ನದಿಗಳು ಗಂಗೆಯಾದವು, ಪಕ್ಕದ ಬೆಟ್ಟ ಅಥವಾ ಕಲ್ಲಿನ ಆಕೃತಿಗಳು ಶಿವನಾದವು. ಹೀಗೆ ಅಲ್ಲೆಲ್ಲಾ ಶಿವಸಂಸ್ಕೃತಿಯ ಕುರುಹುಗಳು ಈಗಲೂ ಇವೆ. ಮಳೆಯ ಹರಿವು ಜಾಸ್ತಿ ಇದ್ದಾಗ ಸಹಸ್ರಲಿಂಗವನ್ನು ನೋಡಲಾಗುವುದಿಲ್ಲ. ನೀರು ಕಡಿಮೆಯಾದ ಮೇಲೆ ಲಿಂಗಗಳು ಕಾಣಸಿಗುತ್ತವೆ. ಶಾಲ್ಮಲಾ ನದಿಯಂತೆ ಇವು ೩ಡಿ ಇಮೇಜ್‌ ಇಲ್ಲ. ಇಲ್ಲಿನ ಲಿಂಗಗಳನ್ನು ಕೆಳಗಿನ ಕಲ್ಲಿನ ಮೇಲೆ ಉಬ್ಬು ಚಿತ್ರಗಳಂತೆ ಕೆತ್ತಿದ್ದಾರೆ. ಒಂದೊಂದು ಕಲ್ಲು ಚಪ್ಪಡಿಯ ಮೇಲೆ ನೂರಾರು ಲಿಂಗಗಳು. ಇಲ್ಲಿ ಹರಿಯುವ ನದಿಯೇ ದೇವಾಲಯ. ಜಂಗಮ ದೇವಾಲಯ ಅಂತ ಬೇಕಾದರೆ ಕರೆಯಬಹುದು.

ಪ್ರಾಚೀನ ಕಳಿಂಗ ಅಥವಾ ಈಗಿನ ಒರಿಸ್ಸಾದಲ್ಲಿ ಕೂಡ ಸಹಸ್ರಲಿಂಗ ಕಲ್ಪನೆ ಇದೆ. ಅದು ಕರ್ನಾಟಕದ ಸಹಸ್ರಲಿಂಗ ಕಲ್ಪನೆಗಿಂತ ಭಿನ್ನ. ಇಲ್ಲಿ ಒಂದು ಲಿಂಗದ ಮೇಲ್ಮೈ ಮೇಲೆ ಸುತ್ತಲೂ ಹಾಗೂ ಉದ್ದಕ್ಕೂ ಅನೇಕ ಸಣ್ಣ ಲಿಂಗಗಳನ್ನು ಕೆತ್ತಿರುತ್ತಾರೆ. ಅವೆಲ್ಲವನ್ನು ಸೇರಿಸಿದರೆ ಸಾವಿರವಾಗುತ್ತದೆ ಅನ್ನುವ ಅರ್ಥದಲ್ಲಿ ಅದನ್ನು ಸಹಸ್ರಲಿಂಗ ಎನ್ನುತ್ತಾರೆ. ನಾನು ಎಣಿಸಲು ಹೋಗಲಿಲ್ಲ. ಆದರೆ ಸಾವಿರ ಇರಬಹುದು ಅನ್ನಿಸಿತು. ಒಂದು ಲಿಂಗವನ್ನು ಪ್ರದಕ್ಷಿಣೆ ಮಾಡಿದರೆ ಸಾವಿರ ಲಿಂಗ ದರ್ಶನ ಮತ್ತು ಸಾವಿರ ಲಿಂಗಗಳನ್ನು ಪ್ರದಕ್ಷಿಣೆ ಮಾಡಿದ ಪುಣ್ಯ. ಇಂತಹ ಲಿಂಗಗಳನ್ನು ಸಿದ್ದೇಶ್ವರ ದೇವಾಲಯ(ಒರಿಸ್ಸಾದ ಜಾಜಪುರ), ಪರಶುರಾಮ ಮಂದಿರ, ಪಾತಾಳೇಶ್ವರದ ಸೂರ್ಯದೇವ ಸಹಸ್ರಲಿಂಗ (ಭುವನೇಶ್ವರ), ಲಿಂಗರಾಜ ದೇವಾಲಯ(ಭುವನೇಶ್ವರ) ಮುಂತಾದ ಕಡೆಗಳಲ್ಲಿ ನೋಡಬಹುದು. ಇವೆಲ್ಲವೂ ಸರಿಸುಮಾರು ೯ ರಿಂದ ೧೧ನೆಯ ಶತಮಾನದ ಕಾಲದಲ್ಲಿ ನಿರ್ಮಿತವಾಗಿರುವ ಲಿಂಗಗಳು.

ಇದಲ್ಲದೆ ಒರಿಸ್ಸಾದ ಕೋರಟಪುರದ ಬಳಿ ಕೋಟಿಲಿಂಗ ಪರ್ವತ ಅಂತ ಒಂದು ಗುಡ್ಡವೆ ಇದೆ. ಅಲ್ಲಿ ಒಂದು ಗುಹೆಯೊಳಗೆ ನೂರಾರು ವಿಧವಿಧ ಗಾತ್ರದ ಶಿವಲಿಂಗಗಳಿವೆ. ಅಲ್ಲಿ ಅಗೆದಲ್ಲೆಲ್ಲಾ ಶಿವಲಿಂಗಗಳು ಸಿಗುತ್ತಾ ಇವೆಯಂತೆ.

ಮಧ್ಯಭಾರತದಲ್ಲಿ ಹೆಚ್ಚಾಗಿ ಮುಖಲಿಂಗಗಳನ್ನು ಪೂಜಿಸುತ್ತಾರೆ. ಇವು ಬೇರೆಕಡೆ ಕಾಣಸಿಕ್ಕರೂ ಮಧ್ಯಭಾರತದಲ್ಲಿ ಅನೇಕ ಸಂಖ್ಯೆಯಲ್ಲಿ ನೋಡಬಹುದು. ಲಿಂಗದಲ್ಲಿ ಶಿವನ ಮುಖವನ್ನು ಕೆತ್ತಿರುತ್ತಾರೆ. ಸಾಮಾನ್ಯವಾಗಿ ಇವು ಒಂದರಿಂದ ಐದು ಮುಖಗಳವರೆಗೆ ಕಾಣಸಿಗುತ್ತವೆ. ಏಕಮುಖ ಲಿಂಗ ಅಂದರೆ ನೆನಪಾಗುವುದು ಉದಯಗಿರಿಯ ಗುಹೆಯಲ್ಲಿರುವ ಗುಪ್ತರ ಕಾಲದ ೪ ನೇ ಶತಮಾನದ ಲಿಂಗ. ಪಂಚಶಿವತತ್ವಗಳನ್ನು ಬಿಂಬಿಸುವ ಪಂಚಮುಖಿ ಶಿವಲಿಂಗಗಳು ಮುಖಲಿಂಗಗಳಲ್ಲೆಲ್ಲಾ ಸಾಮಾನ್ಯವಾಗಿ ಸಿಗುವಂತಹವು.

(ಮುಖ ಲಿಂಗ)

ಹುಲ್ಲಿನ ತಡಿಕೆಯ ಕೆಳಗೆ ಎರಡು ಶಿವಲಿಂಗಗಳು. ಅವುಗಳ ಮೇಲಿದ್ದ ಹೂವುಗಳನ್ನು ನೋಡಿ ಯಾರೋ ಪೂಜೆ ಮಾಡಿ ಹೋಗಿದ್ದಾರೆ ಅಂತ ಗೊತ್ತಾಯಿತು. ಆ ಎರಡು ಲಿಂಗಗಳಲ್ಲಿ ಒಂದು ಚಿಕ್ಕದಿದ್ದು ಅದಕ್ಕೆ ಬಟ್ಟೆ ಹೊದೆಸಿದ್ದರು. ಎರಡೂ ಲಿಂಗಗಳ ಪಕ್ಕ ತ್ರಿಶೂಲ ನೆಟ್ಟಿದ್ದರೂ ಚಿಕ್ಕ ಲಿಂಗದ ತ್ರಿಶೂಲಕ್ಕೆ ಮಾತ್ರ ಬಳೆ ಸಿಗಿಸಿದ್ದರು. ಕಣ್ಣಿಗೆ ಕಾಣುವ ಹಾಗೆ ಒಂದನ್ನು ಸ್ತ್ರೀ ಸಂಕೇತವನ್ನಾಗಿ ಹಾಗೂ ಮತ್ತೊಂದನ್ನು ಪುರುಷ ಲಿಂಗ ಸಂಕೇತವನ್ನಾಗಿ ಪೂಜಿಸುತ್ತಾರೆ ಅಂತ ತಿಳೀತು.

ಇವುಗಳಲ್ಲಿ ನನಗೆ ಇಷ್ವವಾದದ್ದು ಖಜುರಾಹೋದಲ್ಲಿರುವ ಬ್ರಹ್ಮ ದೇವಾಲಯ. ಅಸಲಿಗೆ ಅದು ಬ್ರಹ್ಮ ದೇವಾಲಯ ಅಲ್ಲ. ಅದು ಶಿವ ದೇವಾಲಯ. ನಾಲ್ಕು ತಲೆಗಳನ್ನು ಕಂಡು ಬ್ರಹ್ಮ ಅಂತ ಕರೆಯಲು ಶುರು ಮಾಡಿ ಈಗ ಅದು ಬ್ರಹ್ಮ ದೇವಾಲಯ ಅಂತಲೇ ಆಗಿದೆ. ಇಲ್ಲಿ ಶಿವಲಿಂಗಕ್ಕೆ ನಾಲ್ಕು ಮುಖಗಳಿವೆ. ಇವು ಶಿವನ ವಿವಿಧ ತತ್ವಗಳನ್ನು ಬಿಂಬಿಸುತ್ತವೆ. ಪೂರ್ವಕ್ಕೆ ಮುಖ ಮಾಡಿರುವವ ಸದ್ಯೋಜಾತ. ಪಶ್ಚಿಮ- ತತ್ಪುರುಷ, ಉತ್ತರ- ವಾಮದೇವ, ದಕ್ಷಿಣ ಅಘೋರ. ಇನ್ನೊಂದು ಕಾಣದ ಆಕಾಶಕ್ಕೆ ಮುಖ ಮಾಡಿರುವವ ಈಶಾನ್ಯ. ಪೃಥ್ವಿ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಂಬ ಪಂಚಭೂತಗಳ ಸಂಕೇತ ಇವು. ಇಲ್ಲಿನ ದೇವಾಲಯದಲ್ಲಿ ನಾಲ್ಕೂ ಮುಖಗಳು ಮುಖಭಾವಗಳಲ್ಲಿ ಭಿನ್ನವಾಗಿವೆ. ದಕ್ಷಿಣದ ಅಘೋರ ಕೋಪದಲ್ಲಿ ಇರುವಂತಿದೆ. ಉಳಿದ ಮುಖಗಳು ಶಾಂತವಾಗಿವೆ.

ಇದಲ್ಲದೆ ದಕ್ಷಿಣ ಭಾರತದಲ್ಲಿ ಇದೇ ಪಂಚತತ್ವಗಳನ್ನು ಸಾರುವ ಐದು ಶಿವ ದೇವಾಲಯಗಳು ಪ್ರಸಿದ್ಧ. ಆಕಾಶ ತತ್ವಕ್ಕೆ (ಇಂದ್ರ ಲಿಂಗ) ಚಿದಂಬರಮ್‌ನ ನಟರಾಜ ದೇವಾಲಯ, ಶ್ರೀಕಾಳಹಸ್ತಿಯಲ್ಲಿ ವಾಯುಲಿಂಗ, ತಿರುವಣ್ಣಾಮಲೈನ ಅರುಣಾಚಲೇಶ್ವರದಲ್ಲಿ ಅಗ್ನಿ ಲಿಂಗ, ತಿರುವನ್ನೈಕಾವಲ್‌ನಲ್ಲಿರುವ ಜಂಬುಕೇಶ್ವರದಲ್ಲಿ ವರುಣ ಲಿಂಗ ಹಾಗೂ ಕಂಚೀಪುರಂನ ಏಕಾಂಬರೇಶ್ವರ ದೇವಾಲಯದಲ್ಲಿ ಭೂಮಿಲಿಂಗ, ಹೀಗೆ ಐದು ದೇವಾಲಯಗಳು ಶಿವನ ಐದು ತತ್ವಗಳನ್ನು ಮತ್ತು ಪಂಚಭೂತಗಳು ಶಿವನಿಗೆ ಅಧೀನ ಎಂಬುದನ್ನು ಸಾರುತ್ತವೆ.

(ಕೈಲಾಸ ಪರ್ವತ)

ದ್ವಾದಶ (೧೨) ಲಿಂಗಗಳಂತೂ ಎಲ್ಲರಿಗೂ ಗೊತ್ತಿರುವ, ಅನೇಕರ ತೀರ್ಥಯಾತ್ರೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ತೀರ್ಥಕ್ಷೇತ್ರಗಳು. ಅವುಗಳಲ್ಲೂ ಒಂದೊಂದೂ ಒಂದೊಂದು ಕಾರಣಕ್ಕೆ ಭಿನ್ನ ಮತ್ತು ವಿಶಿಷ್ಟ. ಕೇದಾರದ ಶಿವನು ಲಿಂಗರೂಪದಲ್ಲೇ ಇಲ್ಲ. ಅದು ಒಂದು ಸಾಮಾನ್ಯ ಬಂಡೆಯಂತಿದೆ. ಸೋಮನಾಥದಿಂದ ಘುಶ್ಮೇಶದವರೆಗೆ ಹರಡಿ ಹಬ್ಬಿರುವ ಶಿವಲಿಂಗಗಳ ಈ ತೀರ್ಥಗಳನ್ನು ಕಾಲ್ನಡಿಗೆಯಲ್ಲಿ ಅಥವಾ ವಾಹನದ ಮೂಲಕ ಬಳಿಸಾರುವ ಹೊತ್ತಿಗೆ ನಮ್ಮ ಹೃದಯದಲ್ಲಿ ಶಿವಭಕ್ತಿ ಮತ್ತು ಭಾರತಭಕ್ತಿ ಎರಡೂ ಅದ್ವೈತವಾಗಿರುತ್ತವೆ. ದೇಶದ ವಿವಿಧ ಭಾಗಗಳ ಜನರ ದೇಶಚಾರ, ಕುಲಾಚಾರ, ಕಾಲಾಚಾರ, ಸಂಪ್ರದಾಯಗಳನ್ನು ಪರಸ್ಪರ ಬೆರೆಸುವ, ಮಿಲಾಯಿಸಿ ಏಕತೆಯನ್ನು ಅಧ್ಯಾತ್ಮದ ಆಧಾರದ ಮೇಲೆ ಕಟ್ಟುವ ಒಂದು ಸುಂದರ ಕಲ್ಪನೆ ಈ ತೀರ್ಥಯಾತ್ರೆಗಳು. ಬೃಹತ್‌ ಲಿಂಗಗಳನ್ನು ಕಡೆಯುವ ಸಂಪ್ರದಾಯವೂ ಕಂಡುಬರುತ್ತದೆ.

ಮಧ್ಯಪ್ರದೇಶದ ಭೋಜಪುರದಲ್ಲಿರುವ ಭೋಜೇಶ್ವರ, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಲಿಂಗ ನೆನಪಾಗುತ್ತದೆ. ಕೆಲವು ಮನೆತನಗಳ ಸಂಪ್ರದಾಯದಲ್ಲಿ ನದಿ ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಪ್ರತಿದಿವಸ ಅದೇ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿ ಸಿಗುವ ಮರಳಿನಲ್ಲಿ ಒಂದು ಲಿಂಗವನ್ನು ರಚಿಸಿ ಪೂಜಿಸಿ ಮತ್ತೆ ಅದನ್ನು ನೀರಿನಲ್ಲಿ ಅಂದೇ ವಿಸರ್ಜಿಸಿ ಮನೆಗೆ ಬರುವುದೂ ಉಂಟು. ಇದನ್ನು ವಿದ್ಯಾನಿವಾಸ್‌ ಮಿಶ್ರಾ ಒಂದು ಕಡೆ ಬರೆಯುತ್ತಾರೆ.

ಮನುಷ್ಯ ಕಟ್ಟಿರುವ ಲಿಂಗಗಳಲ್ಲದೆ ಅನೇಕ ಕಡೆಗಳಲ್ಲಿ ಉದ್ಭವ ಲಿಂಗಗಳು ಸಿಗುತ್ತವೆ. ಅಮರನಾಥದ ಹಿಮಲಿಂಗ ಸುಪ್ರಸಿದ್ಧ ಮತ್ತು ಅಚ್ಚರಿ. ಹಿಮ ಇದ್ದರೆ ಅಮರನಾಥ ಹಿಮ ಕರಗಿದ ಮೇಲೆ ಅವನೇ ಗುಹೇಶ್ವರ. ಇನ್ನು ಈ ಎಲ್ಲಾ ಲಿಂಗಗಳಿಗೂ ಕಲಶಪ್ರಾಯವಾದದ್ದೆಂದರೆ ಕೈಲಾಸ ಪರ್ವತ. ಪರ್ವತದ ಮೇಲೆ ಶಿವನ ಗುಡಿ ಅಲ್ಲ ಇಲ್ಲಿ ಪರ್ವತವೇ ಶಿವ.

ಶಿವ ಅಂದರೆ ಅನಂತ, ಅಸೀಮ, ರೂಪಾತೀತ, ಗಾತ್ರಾತೀತ, ಕಾಲಾತೀತ, ಕುಲಾತೀತ. ಎಲ್ಲವನ್ನು ಮೀರಿದ ನಿರಾಕಾರದ ಪರಮಾವಧಿ ಅವನು. ಈ ನಿರಾಕಾರಕ್ಕೊಂದು ಆಕಾರ ಕೊಡಲು ಮನುಷ್ಯರು ಮಾಡಿದ ಪ್ರಯತ್ನವೇ ಈ ಎಲ್ಲಾ ತರಹದ ಶಿವನ ರೂಪಗಳು. ಕಡೆಗೆ ಅಲ್ಲಮ ಹೇಳಿದಂತೆ ಮಾತೆಂಬುದು ಜ್ಯೋತಿರ್ಲಿಂಗವೇ. ಅರಿವಿನ ಘನರೂಪವೆ ಲಿಂಗ.