ಏನೇ ಹೇಳಿ, ಆ ಕಾಡು ಮಧ್ಯದ ಪುಟ್ಟ ಶಾಲೆಯಲ್ಲಿ ಓದುವಾಗಿನ ಆ ನೆನಪುಗಳು ನಿಜಕ್ಕೂ ಚಿರಸ್ಮರಣೀಯ. ನಮ್ಮನೆಯಿಂದ ಶಾಲೆ ಸುಮಾರು ಎರಡು ಕಿ.ಮೀ. ನಷ್ಟು ದೂರವಿತ್ತು. ಎರಡು ಸೊಪ್ಪಿನ ಬೆಟ್ಟ ದಾಟಿ, ಒಂದು ಗುಡ್ಡ ಏರಿಳಿದರೆ, ನಮ್ಮ ಶಾಲೆ. ಮಳೆಗಾಲದಲ್ಲಿ ಒಂದು ಪುಟ್ಟ ಕಾಲುವೆ ದಾಟಬೇಕಾಗುತ್ತಿತ್ತು. ಹೆಚ್ಚು ಕಮ್ಮಿ ಮಾರಗಲವಿದ್ದ ಆ ಕಾಲುವೆ, ಅಂಥ ಭಯಂಕರ ಕಾಲುವೆಯೇನೂ ಆಗಿರಲಿಲ್ಲ. ಅದೂ ಕೂಡಾ ನಮ್ಮ ಬಾಲ್ಯದ ಸಂಗಾತಿಯಂತೇ ನಮ್ಮ ಖುಶಿಯಲ್ಲಿ ಪಾಲು ಪಡೆದಿತ್ತು.
ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಚೆಂದದ ಬಾಲ್ಯ ಕಳೆದ ಅಂದದ ಮಲೆನಾಡು
ಈ ವರ್ಷ, ಒಂದು ವಾರದ ಮೊದಲೇ ಮುಂಗಾರು ಪ್ರವೇಶ ಮಾಡಿ, ಉರಿ ಬಿಸಿಲ ಬೇಗೆಯಿಂದ ನೊಂದ ನಮ್ಮ ನಿಮ್ಮೆಲ್ಲರನ್ನೂ ತನ್ನ ತಂಪು ಹಸ್ತದಿಂದ ನೇವರಿಸಿ ಸಂತೈಸತೊಡಗಿದ್ದು, ನಿಜಕ್ಕೂ ಖುಶಿಯ ವಿಚಾರ. ಈ ಮಳೆ ಎಂದೊಡನೆ ನೆನಪಾಗೋದು ನಮ್ಮ ಸುಂದರ ಮಲೆನಾಡು. ಅದರ ಜೊತೆಗೇ ಅರಳುವ ಸುಂದರ ಬಾಲ್ಯದ ನೆನಪುಗಳು. ಈ ಹುಬ್ಬಳ್ಳಿಯೆಂಬ ಬಯಲು ನಾಡಲ್ಲಿ ನೆಲೆಸಿದಾಗಿನಿಂದ, ಅರೆ ಬಿಸಿಲು, ಅರೆ ಮಳೆಯ ನಡುವೆ, ಒಮ್ಮೆ ಬೆವರಿಳಿಸಿ, ಮತ್ತರೆಘಳಿಗೆ ತಂಪ ಅನುಭವಿಸುವ, ಹಾಗೇ ಒಮ್ಮೊಮ್ಮೆ ಧುತ್ತೆಂದು ಧರೆಗಿಳಿವ ಧಾರಾಕಾರ ಮಳೆಗೆ, ಇಡೀ ಊರೇ ಜಲಮಯವಾಗಿ, ಪರದಾಡುವ ಪರಿಪಾಠಕ್ಕೆ ಒಗ್ಗಿಕೊಂಡಾಗಿದೆ. ಅಂಥ ಕಿರಿ ಕಿರಿಯನ್ನೆಲ್ಲಾ ಸಹನೀಯವಾಗಿಸುವುದು ನನ್ನ ಸುಂದರ ಮಲೆನಾಡಿನ ಬಾಲ್ಯದ ನೆನಪುಗಳು.
ನಾ ಹುಟ್ಟಿದ್ದು, ಬೆಳೆದಿದ್ದು, ಮಲೆನಾಡ ಮಡಿಲಲ್ಲಿರುವ ಶಿರಸಿ ತಾಲ್ಲೂಕಿನ ಪುಟ್ಟ ಹಳ್ಳಿ (ದಾನಂದಿ) ಯಲ್ಲಿ. ಆ ಕಾಲದಲ್ಲಿ, ಟಾರು ರಸ್ತೆ, ವಿದ್ಯುತ್ ಸಂಪರ್ಕ ಇವೆಲ್ಲ ಸೌಲಭ್ಯಗಳಿಂದ ನಮ್ಮೂರು ದೂರವೇ ಇತ್ತು. ಅದೇನೇ ಇರಲಿ. ಉಳಿದೆಲ್ಲವರ ಕಣ್ಣಿಗೆ ಅದು ಕುಗ್ರಾಮವಾಗಿ ಕಂಡರೂ, ನನ್ನ ಬದುಕಿನ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಆ ಊರು ನನ್ನ ಸರ್ವಸ್ವ. ಸುಂದರ ಸ್ವರ್ಗ.
ಈಗ ನಾನು ಹೇಳುವ, ವರ್ಣಿಸುವ ಮಲೆನಾಡಿನ ಚಿತ್ರಣಗಳೆಲ್ಲ, ಸುಮಾರು ೪೫-೫೦ ವರ್ಷಗಳ ಹಿಂದಿನವು. ದಟ್ಟವಾದ ಕಾಡಿನ ನಡುವೆ, ಆ ಕಾಲದಲ್ಲಿ ಫ್ಯಾಶನ್ ಮಾಡುವ ಯುವತಿಯರು ತೆಗೆಯುವ ಬೈತಲೆಯನ್ನು ನೆನಪಿಸುವಂಥ ಸೊಟ್ಟ ಪಟ್ಟ ಕಿರು ದಾರಿಗಳು. ಆ ದಾರಿಗುಂಟ ಒಂದಷ್ಟು ದೂರ ಸಾಗಿದರೆ, ಅದರ ಕೊಟ್ಟ ಕೊನೆಯಲ್ಲಿ ಮಣ್ಣು ಗೋಡೆಯಿಂದ ಆವೃತವಾಗಿ, ಅಡಿಕೆ ಸೋಗೆಯಿಂದ ಬೆಚ್ಚಗೆ ತಲೆ ಮುಚ್ಚಿಕೊಂಡು ನಿಂತ ಪರ್ಣ ಕುಟೀರದಂಥ ಮನೆಗಳು. ಆ ಮನೆಯ ನೆತ್ತಿಯಂಥ ಭಾಗದಿಂದ ಹೊರಹೊಮ್ಮುವ ಸಣ್ಣನೆಯ ಹೊಗೆಯ ಸುಳಿ, ಅಲ್ಲಿ ಮನುಷ್ಯರ ವಾಸವನ್ನು ಖಚಿತ ಪಡಿಸುತ್ತದೆ. ಮನೆಯ ಸುತ್ತ ರಚಿತವಾದ ಹಸಿರ ಬೇಲಿಯ ಹೃದಯ ಭಾಗದಲ್ಲೊಂದು Y ಆಕಾರದ ದಣಪೆ. ಹತ್ತು ಮಾರು ದೂರದಿಂದಲೇ ಅಪರಿಚಿತರ ಬರುವಿಕೆಯನ್ನು ಮೂಗಾಳಿಯಿಂದ ಕಂಡು ಹಿಡಿದು, ಭೌ ಭೌ ಎಂದು ಬೊಗಳುತ್ತ, ಓಡಿಬರುವ ಆ ಮನೆಯ ಕಾವಲುಗಾರ ದೇಸಿ ನಾಯಿಯ ಆರ್ಭಟಕ್ಕೆ, ಸುಂದರ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಧ್ಯಾನಸ್ಥ ಸ್ಥಿತಿಯಲ್ಲೇ ಹೆಜ್ಜೆ ಹಾಕುತ್ತ ಹೊರಟವರು ಗಕ್ಕನೆ ಬೆಚ್ಚಿ ನಿಂತರೆ, ಆಶ್ಚರ್ಯವಿಲ್ಲ. ಈಗ, ಮೊಣಕಾಲು ಮೇಲೆ ಪಾಣಿ ಪಂಚೆಯನ್ನೋ, ಟವಲ್ಲನ್ನೋ ಸುತ್ತಿಕೊಂಡ ಮನೆಯ ಯಜಮಾನ ಮನೆಯಿಂದ ಅಂಗಳಕ್ಕಿಳಿದು, ಬಾಯಲ್ಲಿ ತುಂಬಿದ ಕವಳ (ತಾಂಬೂಲ) ದ ಕೆಂಪು ರಸವನ್ನು ಪಿಚಕ್ಕನೆ ಉಗಿಯುತ್ತ, “ಹಚಾ ಹಚಾ” ಎಂದು ನಾಯಿಗೆ ಗದರಿ, “ಹ್ವಾಯ್ ಬರ್ರೋ ವಳಗೆ” ಎಂದು ದೇಸೀ ಶೈಲಿಯಲ್ಲಿ ಅತಿಥಿಯನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾನೆ. ಆ ದಣಪೆ ದಾಟುವುದೂ ಒಂದು ಕಲೆಯೇ. ಕೈ ಬೀಸಿ ನಡೆಯುತ್ತ ವಿಶಾಲ ಗೇಟು ದಾಟಿ ಹೋಗುವ ಪೇಟೆಯವರಿಗೆ ಇದು ತುಂಬ ಹೊಸದೆನ್ನಿಸಿ ಬಿಡುತ್ತದೆ. ದಣಪೆಯೆದುರು ನಿಂತು, ಒಂದೊಂದೇ ಕಾಲು ಎತ್ತಿಹಾಕುತ್ತ ದಾಟುವುದೂ ಒಂದು ಕಲೆಯೇ. ಮುಂದೆ ಒಂದಿಷ್ಟು ಮೆಟ್ಟಿಲು ಇಳಿದರೆ, ವಿಶಾಲವಾದ ಮಣ್ಣಿನ ಅಂಗಳ. ಬೇಸಿಗೆಯಲ್ಲಾದರೆ, ಸಗಣಿ ಹಾಕಿ ಸಾರಿಸಿದ ಶುಭ್ರನೆಲ. ಮಳೆಗಾಲದಲ್ಲಾದರೆ, ಹಸಿರು ಚಿಗುರೊಡೆದು, ನೆಲದ ಮೇಲೆ ಮೆತ್ತನೆಯ ಹುಲ್ಲುಹಾಸು ಹಾಸಿದಂತೆ ಅನ್ನಿಸುತ್ತದೆ. ಅಂಗಳದ ಅಂಚಲ್ಲಿ ಬಣ್ಣ ಬಣ್ಣದ ಹೂವರಳಿಸಿ ನಗುವ ವಿವಿಧ ಹೂಗಿಡಗಳು. ಇವಿಷ್ಟು ನನ್ನ ಬಾಲ್ಯದ ಮಲೆನಾಡ ಪ್ರತಿ ಮನೆಗಳ ಸಾಮಾನ್ಯ ಚಿತ್ರಣ.
ನಮ್ಮೂರಲ್ಲಿದ್ದುದು ಬೆರಳೆಣಿಕೆಯಷ್ಟು ಮನೆಗಳು ಮಾತ್ರ. ಪಕ್ಕದ ಮನೆಯೆಂದರೆ, ಅರ್ಧ ಕಿಲೋಮೀಟರ್‌ನಷ್ಟು ದೂರದ್ದು. ಅದನ್ನು ನಮ್ಮಲ್ಲಿ ಕೂಗಳತೆಯ ದೂರ ಅಂತಲೇ ಲೆಕ್ಕಹಾಕುವುದು. ಬಡ ಮಧ್ಯಮ ವರ್ಗದವರೇ ತುಂಬಿದ್ದ ನಮ್ಮೂರಲ್ಲಿ, ಎತ್ತಿನ ಗಾಡಿ ಇದ್ದವರೇ ಶ್ರೀಮಂತರೆನ್ನಿಸಿಕೊಂಡಿದ್ದ ಕಾಲ ಅದು. ಆ ಎತ್ತಿನ ಗಾಡಿ ಹೋಗಲೆಂದು ಮಾಡಿದ್ದ “ಬಂಡೀ ರಸ್ತೆ” ಯ ಮೇಲೆ ನಡೆದು ಹೋಗುವುದೆಂದರೆ, ಏನೋ ಒಂಥರಾ ಖುಶಿ ನಮಗೆ. ಆಗೆಲ್ಲ ಈಗಿನಂತೇ ನಮ್ಮೂರಿಗೆ ಸಾರಿಗೆ ವ್ಯವಸ್ಥೆ ಇರಲೇ ಇಲ್ಲ. ಬೇಸಿಗೆಯಲ್ಲಿ ಎರಡು ತಿಂಗಳು ಮಾತ್ರ, ಎರಡು ಹೊತ್ತು ಕೆಂಪು ಬಸ್ಸು, ಶಿರಸಿಯಿಂದ ನಮ್ಮೂರಿಗೆ, ದಾರಿಗುಂಟ ಕೆಂಧೂಳು ಎಬ್ಬಿಸುತ್ತ, ಅಕ್ಕ ಪಕ್ಕ ಹಾದುಹೋಗುವವರ ಮೈ ತುಂಬ ಧೂಳಿನ ಪ್ರೋಕ್ಷಣ್ಯ ಮಾಡುತ್ತ ಬರುತ್ತಿತ್ತು. ಒಂದು ಮಳೆ ಬಿದ್ದರೆ ಸಾಕು, ಬಸ್ಸು ದಾರಿಯ ಕೆಸರಲ್ಲಿ ಹುಗಿದು ಹೋಗುವ ಭಯದಿಂದ, ತನ್ನ ಓಡಾಟವನ್ನೇ ನಿಲ್ಲಿಸಿ ಬಿಡುತ್ತಿತ್ತು . ಹಾಗಾಗಿ, ಜನ ಎಲ್ಲೆಡೆಗೆ ಹೋಗಬೇಕೆಂದರೂ ಕಾಲು ನಡಿಗೆಯಲ್ಲೇ ಓಡಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು.

ವರ್ಷಕ್ಕೊಮ್ಮೆ ಊರಿಗೆ ಬರುವ ಆ ಅಪರೂಪದ ಅತಿಥಿಯಾದ ಬಸ್ಸನ್ನು ನೋಡುವುದೇ ಕುತೂಹಲ ನಮಗೆ. ಅದರ ಸಪ್ಪಳವಾದೊಡನೆ, ಶಾಲೆಯಿಂದ ಹೊರಗೋಡಿ ಬಂದು ನಿಂತು ಹೋ ಎಂದು ಕೂಗುತ್ತ ಬಸ್ಸಿನತ್ತ ಕೈಬೀಸುತ್ತ ಕುಣಿದಾಡುತ್ತಿದ್ದೆವು. ನಮ್ಮ ಮಾಸ್ತರ್ರು ಕೂಡಾ ನಮ್ಮ ಜೊತೆ ನಿಂತು ನೋಡುತ್ತಿದ್ದರು. ನಮ್ಮೂರಲ್ಲಿ ಇರುವ ಏಕೋಪಾಧ್ಯಾಯ ಶಾಲೆಯಲ್ಲಿ ಕೇವಲ ನಾಲ್ಕನೆ ತರಗತಿಯವರೆಗೆ ಮಾತ್ರ ಶಿಕ್ಷಣ ದೊರೆಯುತ್ತಿತ್ತು. ಮತ್ತೆ ಓದಬೇಕಾದರೆ, ೫-೬ ಮೈಲು ನಡೆದು ಹೋಗಬೇಕು. ಅದೂ ದಟ್ಟಾರಣ್ಯದ ನಡುವಿನ ರಸ್ತೆಯಲ್ಲಿ ಸಾಗಬೇಕು. ಹಾಗಾಗಿ, ಬಹುತೇಕರ ಓದು, ನಾಲ್ಕನೇ ತರಗತಿಗೇ ನಿಂತು ಹೋಗುತ್ತಿತ್ತು. ಬೆರಳೆಣಿಕೆಯಷ್ಟು ಪಾಲಕರು, ತಮ್ಮ ಮಕ್ಕಳನ್ನು ಬಂಧುಗಳ ಮನೆಯಲ್ಲಿ ಬಿಟ್ಟು ಮುಂದೆ ಓದಿಸುತ್ತಿದ್ದರು ಅನ್ನಿ.
ಆದರೆ, ಏನೇ ಹೇಳಿ, ಆ ಕಾಡು ಮಧ್ಯದ ಪುಟ್ಟ ಶಾಲೆಯಲ್ಲಿ ಓದುವಾಗಿನ ಆ ನೆನಪುಗಳು ನಿಜಕ್ಕೂ ಚಿರಸ್ಮರಣೀಯ. ನಮ್ಮನೆಯಿಂದ ಶಾಲೆ ಸುಮಾರು ಎರಡು ಕಿ.ಮೀ. ನಷ್ಟು ದೂರವಿತ್ತು. ಎರಡು ಸೊಪ್ಪಿನ ಬೆಟ್ಟ ದಾಟಿ, ಒಂದು ಗುಡ್ಡ ಏರಿಳಿದರೆ, ನಮ್ಮ ಶಾಲೆ. ಮಳೆಗಾಲದಲ್ಲಿ ಒಂದು ಪುಟ್ಟ ಕಾಲುವೆ ದಾಟಬೇಕಾಗುತ್ತಿತ್ತು. ಹೆಚ್ಚು ಕಮ್ಮಿ ಮಾರಗಲವಿದ್ದ ಆ ಕಾಲುವೆ, ಅಂಥ ಭಯಂಕರ ಕಾಲುವೆಯೇನೂ ಆಗಿರಲಿಲ್ಲ. ಅದೂ ಕೂಡಾ ನಮ್ಮ ಬಾಲ್ಯದ ಸಂಗಾತಿಯಂತೇ ನಮ್ಮ ಖುಶಿಯಲ್ಲಿ ಪಾಲು ಪಡೆದಿತ್ತು. ಸ್ವಲ್ಪ ಜೋರಾಗಿ ಮಳೆ ಬಂದರೆ, ಕಾಲುವೆ ತುಂಬ ಕೆಂಪು ಹಾನದಂಥ ನೀರು ರಭಸದಿಂದ ಹರಿದು ಹೋಗುತ್ತಿತ್ತು. ಆಗೆಲ್ಲ ನಾವು ಆದರ ಆಚೆ ನಿಂತು, ಅದರ ಹರಿಯುವಿಕೆಯನ್ನು ವೀಕ್ಷಿಸುತ್ತ ನಿಲ್ಲುತ್ತಿದ್ದೆವು. ಅದರಲ್ಲಿ ಕಸಕಡ್ಡಿಗಳು, ಕಟ್ಟಿಗೆ ತುಂಡುಗಳು ತೇಲಿಬಂದರೆ, “ಏ… ಅಲ್ನೋಡು.. ಅಲ್ನೋಡು” ಅಂತ ಕೈ ತೋರಿಸಿ, ಒಂಥರಾ, ದಿಗಿಲು, ಒಂಥರಾ ರೋಮಾಂಚನದಿಂದ ಕಣ್ಣರಳಿಸಿ ನೋಡುತ್ತ ಕೇ ಕೇ ಹಾಕಿ ಕುಣಿದಾಡುತ್ತಿದ್ದೆವು. ರಭಸ ಕಡಿಮೆ ಆದೊಡನೇ ಅದರಲ್ಲಿ ಇಳಿದು ಜಿಗಿದಾಡುತ್ತಿದ್ದೆವು. ಅದೆಷ್ಟೋ ದಿನ ಅರ್ಧ ದಿನಗಳಷ್ಟು ಸಮಯ ಅಲ್ಲೇ ನಿಂತು, “ದಾಟಿ ಹೋಗಲಾಗದು” ಅಂತ ಕುಂಟು ನೆಪ ತೆಗೆದು, ಮನೆಗೆ ತಿರುಗಿ ಹೋಗುತ್ತಿದ್ದುದೂ ಇತ್ತು. ಆಗೆಲ್ಲ ಶಾಲೆ ತಪ್ಪಿಸೋದು ತಪ್ಪು ಅಂತ ಯಾರೂ ಗಣಿಸುತ್ತಲೇ ಇರಲಿಲ್ಲ ಬಿಡಿ.
ಆಗೆಲ್ಲ ನಮ್ಮ ಮಲೆನಾಡ ಮಳೆ ಎಂದರೆ, ಅಷ್ಟು ಭಯಂಕರ. “ಮುಸಲ ಧಾರೆ” ಎನ್ನುತ್ತಾರಲ್ಲಾ ಹಾಗೆ. ಜೂನ್ ಒಂದನೇ ತಾರೀಖಿಗೆ ಕರಾರುವಾಕ್ಕಾಗಿ ಆರಂಭವಾಗುವ ಮಳೆ, ಮುಂದಿನ ನಾಲ್ಕು ತಿಂಗಳೂ ಎಡಬಿಡದೇ ಸುರಿಯುತ್ತಿತ್ತು. ಆ ಕಾಲದಲ್ಲಿ ಸೂರ್ಯನ ದರ್ಶನವೇ ಅಪರೂಪವಾಗಿ ಬಿಡುತ್ತಿತ್ತು. ಎಷ್ಟೋ ಸಾರಿ ಆ ರಭಸದ ಮಳೆಯ ಜೊತೆ ಗಾಳಿಯೂ ಒಂದಾಗಿಬಿಡುತ್ತಿತ್ತು. ನಾವೆಲ್ಲ ಮಳೆಗಾಲದಲ್ಲಿ ಮೇಣಗಪಟದ (ರೆಕ್ಸಿನ್) ಕೊಪ್ಪೆಗಳನ್ನು ಧರಿಸಿ ಶಾಲೆಗೆ ಹೋಗುವ ವಾಡಿಕೆಯಿತ್ತು. ಬೆನ್ನಿಗೆ ಪಾಟೀ ಚೀಲ ಹಾಕಿಕೊಂಡು, ಕೋನಾಕಾರವಾಗಿ ಮಡಚಿ ಹೊಲಿದ ಭಾಗವನ್ನು ತಲೆಗೆ ಹಾಕಿ, ಕೆಳಭಾಗವನ್ನು ಎರಡೂ ಕೈಲಿ ಎಳೆದು ಮೈಗೆ ಹೊದ್ದುಕೊಂಡು ಹೊರಟರೆ, ಎಂಥ ಮಳೆಯಲ್ಲೂ ಮೈಗೆ ಒಂದು ಹನಿ ನೀರೂ ತಾಕುತ್ತಿರಲಿಲ್ಲ. ಇದು ಮಕ್ಕಳಿಗೆ ಮಾತ್ರವಾಗಿತ್ತು. ದೊಡ್ಡವರೆಲ್ಲಾ ಕಂಬಳಿ ಕೊಪ್ಪೆ ಹೊದ್ದು ಮಳೆಯಲ್ಲಿ ದಿನ ನಿತ್ಯದ ಕೆಲಸ, ತಿರುಗಾಟ ಎಲ್ಲ ಮಾಡುತ್ತಿದ್ದರು. ಆಗೆಲ್ಲ ಈ ಕೊಡೆಯೆಂಬುದು, ಶ್ರೀಮಂತರು ಮಾತ್ರ ಬಳಸುವ ಸಾಧನವಾಗಿತ್ತು. ಹೀಗೇ ಹಗಲಿಡೀ ಮಳೆಯಲ್ಲಿ ತೊಯ್ದ ಕಂಬಳಿಗಳು ರಾತ್ರಿಯೆಲ್ಲ ಒಣಗಿ, ಮರುದಿನ ಮತ್ತೆ ಹೊದ್ದು ತಿರುಗಲು ಸಿದ್ಧವಾಗಬೇಕಲ್ಲಾ. ಅದಕ್ಕಾಗಿಯೇ ಪ್ರತಿಯೊಬ್ಬರ ಮನೆಯ ಹೊರ ಜಗುಲಿಯ ಮೂಲೆಯಲ್ಲೊಂದು ಅಗ್ಗಷ್ಟಿಕೆಯನ್ನು ಉರಿಸುತ್ತಿದ್ದರು. ಅದನ್ನು ನಮ್ಮಲ್ಲಿ “ಹೊಡತಲು” ಎಂದು ಕರೆಯುತ್ತಿದ್ದರು. ಮಣ್ಣ ನೆಲವನ್ನು ಸ್ವಲ್ಪ ತಗ್ಗಾಗಿಸಿ, ಅದರಲ್ಲಿ ಬೆಂಕಿ ಉರಿಸುತ್ತಿದ್ದರು. ಅದಕ್ಕೆ ಸುತ್ತ ಕಡೆಯಿಂದಲೂ ಬಲವಾದ ಕಟ್ಟಿಗೆ, ಕುಂಟೆ ಕೂಡಿ, ಎಷ್ಟೊತ್ತಿಗೂ ನಿಗಿ ನಿಗಿ ಕೆಂಡ ಇರುವಂತೆ ನೋಡಿಕೊಳ್ಳುತ್ತಿದ್ದರು. ಅದರ ಮೇಲ್ಭಾಗದಲ್ಲಿ ಸುಮಾರು ಅರ್ಧ ಆಳು ಎತ್ತರದಲ್ಲಿ ಬಿದಿರ ತಟ್ಟಿಯನ್ನು ತೂಗಿಬಿಟ್ಟಂತೆ ಕಟ್ಟುತ್ತಿದ್ದರು. ಆ ತಟ್ಟಿಯ ಮೇಲೆ ರಾತ್ರಿ ಹೊತ್ತು ಕಂಬಳಿಗಳು ಒಣಗಿದರೆ, ಹಗಲು ಹೊತ್ತು ನಿತ್ಯದ ಬಟ್ಟೆಗಳನ್ನು ಕೂಡಾ ಒಣಹಾಕಲಾಗುತ್ತಿತ್ತು. ಹಾಗೇ ಅದೆಷ್ಟೋ ಸಲ, ನಮ್ಮ ಶಾಲೆಯ ಸಮವಸ್ತ್ರಗಳು ಕೂಡಾ ಅಲ್ಲೇ ಒಣಗುತ್ತಿದ್ದವು. ಅದೆಷ್ಟೋ ಸಾರಿ, ಆ ಕರ್ರನೆಯ ಕಮಟು ಹೊಗೆಯಲ್ಲಿ ಮುಳುಗೆದ್ದ ನಮ್ಮ ಬಟ್ಟೆಗಳು ಅದರದ್ದೇ ಬಣ್ಣ, ವಾಸನೆ ಹೊತ್ತು ನಮ್ಮ ಮೈಯೇರುತ್ತಿದ್ದವು. ಈಗಿನಂತೆ ಆಗೆಲ್ಲ ಶುಭ್ರತೆ, ಬಣ್ಣ ಎಂದೆಲ್ಲ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೈ ಮೇಲೆ ಅರಿವೆ ಇದ್ದರಾಯ್ತು ಅಷ್ಟೇ.
ಮಳೆಗಾಲದ ಎಲ್ಲಕ್ಕಿಂತ ಗಮ್ಮತ್ತಿನ ವಿಷಯವೆಂದರೆ, ಹೊರಗಿನ ಮಳೆ ಆಲಿಸುತ್ತ ಆ ಹೊಡತಲ ಮುಂದೆ ಕೈ ಒಡ್ಡಿ ಕುಳಿತು ಮೈ ಕಾಯಿಸುವುದು. ಮನೆಯೊಡತಿ ಅದೇ ಹೊಡತಲ ಕೆಂಡದಲ್ಲಿ ಹಲಸಿನ ಹಪ್ಪಳ ಸುಟ್ಟು ಒಂದು ಚೂರು ಕೊಬ್ಬರಿ ಎಣ್ಣೆ ಸವರಿ, ಎಲ್ಲ ಮಕ್ಕಳ ಕೈಗೂ ಕೊಡುವ ಪರಿಪಾಠವೂ ಇತ್ತು. ಹಾಗೇ ಕಿರಿಯರೊಡಗೂಡಿ, ಹಿರಿಯರೂ ಕೈ ಒಡ್ಡಿ, ಹಪ್ಪಳ ಮೆಲ್ಲುತ್ತಿದ್ದರು. ಆ ಜೊರ ಜೊರ ಮಳೆಯಲ್ಲಿ ಬಿಸಿ ಬಿಸಿ, ಗರಿ ಗರಿ ಹಪ್ಪಳ ತಿನ್ನುವ ಮಜವೇ ಮಜ. ಒಬ್ಬೊಬ್ಬರು ಅದೆಷ್ಟು ಹಪ್ಪಳ ‘ಸ್ವಾಹಾ’ ಮಾಡುತ್ತಿದ್ದರೋ.. ನಾವೆಲ್ಲಾ ಈ ಕೆಂಡದ ನಡುವಿನ ಬಬ್ಬೂದಿ (ಬಿಸಿ ಬೂದಿ) ಯಲ್ಲಿ ಅದೆಷ್ಟೋ ಸಲ ಹಲಸಿನ ಬೀಜ ಹುಗಿದು ಸುಟ್ಟು ತಿನ್ನುತ್ತಿದ್ದೆವು. ಈ ಬೀಜವನ್ನು ಒಲೆಗೆ ಹಾಕುವಾಗ ಒಂಚೂರು ಜಜ್ಜಿ ಹಾಕಿದರೆ ಬಚಾವು. ಇಲ್ಲವಾದರೆ, ಅದು ‘ಢಂ’ ಎಂದು ಸಿಡಿದು ಬಿಡುವ ಭಯವಿದೆ. ಹಾಗೆ ಆದಾಗೆಲ್ಲ ಹಿರಿಯರಿಂದ ಬೈಗುಳದ ಜೊತೆ, ಹಸಿ ಬರಲಿನ (ಕೋಲು) ‘ದಕ್ಷಿಣೆ’ ಯಂತೂ ಪಕ್ಕಾ. ಹಾಗೇ ಸ್ವಲ್ಪ ದೊಡ್ಡ ಹುಡುಗರಾದರೆ, ಗೇರು ಬೀಜ ಸುಡುವ ಸಾಹಸಕ್ಕೂ ಕೈ ಹಾಕುತ್ತಿದ್ದರು. ದಿನಾ ಸಂಜೆ ನಮ್ಮ ಬಾಯಿ ಪಾಠ, ಸ್ತೋತ್ರ, ಭಜನೆ ಎಲ್ಲವೂ ಹೊಡತಲ ಮುಂದೇ ನಡೆದು ಹೋಗುತ್ತಿದ್ದವು. ಮನೆಯಲ್ಲಿ ಅಜ್ಜ, ಅಜ್ಜಿಯರಿದ್ದರೆ, ಹೊಡತಲು ಕಾಸುತ್ತ ಮಕ್ಕಳಿಗೆ ಕಥೆ ಹೇಳುತ್ತಿದ್ದರು.

ಆಗೆಲ್ಲ ಮನೆಯಲ್ಲಿ ಯಾವ ಮನರಂಜನಾ ಮಾಧ್ಯಮಗಳೂ ಇಲ್ಲದ ಕಾಲ. ಟಿ.ವಿಯ ಕಲ್ಪನೆ ಕೂಡಾ ಇರಲಿಲ್ಲ. ರೇಡಿಯೋ ದೊಡ್ಡವರ ಮನೆಯ ಸೊತ್ತಾಗಿತ್ತು. ಇಡೀ ದಿನ ಆಡಿ, ಓಡಿ ದಣಿವ ನಮಗೆ, ಸೂರ್ಯ ಕಂತುವ ಹೊತ್ತಿಗೇ ಕಣ್ಣೆಳೆಯ ತೊಡಗುತ್ತಿತ್ತು. ಆಯಿಯ ಭಯಕ್ಕೆ, ಆಕಳಿಸುತ್ತಲೇ, ಮಗ್ಗಿ, ಬಳ್ಳಿ, ಭಜನೆ ಎಲ್ಲ ಹೇಳಿ, ಅಲ್ಲಲ್ಲೇ ಉರುಟಿಕೊಳ್ಳಲು ಹಾತೊರೆಯುತ್ತಿದ್ದೆವು. ಆದರೆ, ಊಟ ಮಾಡದೇ ಮಲಗಲು ಆಯಿ ಬಿಡುತ್ತಿರಲಿಲ್ಲ. ಅಂತೂ ಊಟದ ಶಾಸ್ತ್ರ ಮುಗಿಸಿ, ಕಂಬಳಿಯೊಳಗೆ ಬೆಚ್ಚಗೆ ತೂರಿಕೊಂಡು ಬಿಡುತ್ತಿದ್ದೆವು. ಗದ್ದೆಯಲ್ಲಿ ಚಿತ್ರ ವಿಚಿತ್ರ ದನಿ ತೆಗೆದು ಕೂಗುವ ನೂರಾರು ಕಪ್ಪೆಗಳು, ತೋಟದಾಚೆಯ ಹೊಳೆಯಲ್ಲಿ “ನೆಗಸು” ಹಾಯುವ ಭೋರ್ಗರೆತ ಆಲಿಸುತ್ತ, ಕಣ್ಣು ಮುಚ್ಚಿದ್ದೊಂದೇ ಗೊತ್ತು. ತಿರುಗಿ ಕಣ್ಣು ತೆಗೆಯುವಾಗ, ಬೆಳಗಾಗಿರುತ್ತಿತ್ತು.
ಮುಂದುವರೆಯುವುದು….

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

ಚೆನ್ನಾಗಿ ಬಂದಿದೆ ಲೇಖನ ರೂಪಾ, ಬಾಲ್ಯದ ಮೆಲುಕು ತೀವ್ರವಾಗಿ ಒಡಮೂಡಿದೆ, ಮುಂದುವರೆಸಿ.. ಆಲ್ ದಿ ಬೆಸ್ಟ್🌹
ಮಲೆನಾಡಿನ ಮಳೆಯ ಚಿತ್ರಣ ತುಂಬ ಚೆನ್ನಾಗಿ ಮೂಡಿ ಬಂದಿದೆ. ಎಂದೆಂದಿಗೂ ಸಿಹಿ ಶಾಲಾ ದಿನಗಳ ನೆನಪುಗಳು.ಮಲೆನಾಡಿನ ಸುಂದರ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳುವದು ಒಂದು ದೊಡ್ಡ ಭಾಗ್ಯವೇ ಸರಿ. ಈಗಲೂ ನಮಗೆ ಅಲ್ಲಿ ಪ್ರವಾಸ ಮಾಡುವದು ದೊಡ್ಡ ಖುಷಿ. ಓದಿನ ಖುಷಿ ಕೊಡುತ್ತಿರುವ ಸರಣಿ 🙏🙏