ಹನಿ ಜಾರಿ
ಹನಿಗೆ
ಅದರೊಳಗಿನ
ನೀರೇ ಭಾರ.
ಜೊತೆಗೀಗ
ಸುತ್ತ ಸುಳಿವ
ತೇವದುಸಿರ
ಸಂಗಾತ.

ದಯಾಳು
ಉಸಿರ ಹೆಗಲಿಗೆ
ನಾಜೂಕಿನಲಿ
ತನ್ನ ಭಾರವಾನಿಸಿ,
ಒದ್ದೊದ್ದೆ
ತೆಳ್ಳಾನೆ ಹನಿಯೀಗ
ಕೆನ್ನೆ ಗಲ್ಲ ಎದೆ…..
ಕರುಳು ಪಾದ….
ತೋಯಿಸಿ ಜಾರುತ್ತಾ
ಮಣ್ಣು ಸೋಕಿ
ತಟ್ಟನೆ ಮಾಯ!

ಹುಡುಕುತ್ತಿದೆ ಕಣ್ಣು…..
ಬೆತ್ತಲೆ ಹನಿಗಾಗಿ!

ನೋವೀಗ….ಮೊದಲಿನಂತಿಲ್ಲ

ನೋವೆಂದರೆ….
ಈಗ ಮೊದಲಿನಂತಿಲ್ಲ
ಅನುಭವಿಸಲೇಬೇಕೆಂದೇನಿಲ್ಲ
ನಾವೂ… ಅವರೂ

ತಾತ್ಕಾಲಿಕ ನೋವು ನಿವಾರಕಗಳಿವೆ
ನಿಶ್ಚೇತಗೊಳಿಸುವ ಅನಸ್ತೇಶಿಯಾವಿದೆ
ನೋವು ಮರಗಟ್ಟಿಸುವ,
ಮರೆಸುವ ಮಾಂತ್ರಿಕ ಮದ್ದಿದೆ.
ಸದ್ಯ ನೋವೀಗ
ಕೋಮಾ ತಲುಪಿದೆ.
ಮೇಲೆ ಕಾಣಲಂತೂ ಸತ್ತಿದೆ!

ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ

ನಾವೀಗ
ನೋವು ಅನುಭವಿಸಲೇಬೇಕಿಲ್ಲ
ಒಂದಿಷ್ಟೂ ಕಷ್ಟವಿಲ್ಲದೇ ಮರಗಟ್ಟಿಸಿ
ಕೋಮಾದಲ್ಲಿಡುವುದನ್ನವರು ಕಲಿತಿದ್ದಾರೆ
ನೋವನ್ನೂ!
ಎಂಥಹಾ ಧನ್ಯತೆಯೀಗ!
ನಮ್ಮ ನೋವೀಗ ಹಿಂಸೆಯಾಗುವುದಿಲ್ಲ ಯಾರಿಗೂ!

ನಮಗೂ ಅವರಿಗೂ….