ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

ಬೇಸಿಗೆ ಬರುತ್ತಿದೆ! ಶಾಲಾ ಮಕ್ಕಳಿಗೆ ಏಳು ವಾರಗಳ ಬೇಸಿಗೆ ರಜೆ. ಉದ್ಯೋಗಸ್ಥರಿಗೆ ನಾಲ್ಕು ವಾರಗಳ ರಜೆ. ಎಲ್ಲರೂ ಹಾತೊರೆದು ಕಾಯುತ್ತಿರುವ ಬೇಸಿಗೆ ಕೈ ಬೀಸಿ ಹಾಯ್ ಎನ್ನುತ್ತಿದೆ. ಅದಾಗಲೇ ರಜೆಗೆಂದು ಪ್ರವಾಸ ದಿನಗಳು, ಪ್ರವಾಸ ಸ್ಥಳಗಳು ನಿಗದಿಯಾಗಿ ಮುಂಗಡ ಬುಕಿಂಗ್ ಭರ್ತಿಯಾಗಿದೆ. ನಮ್ಮ ರಾಣಿರಾಜ್ಯದ ಅತ್ಯಂತ ಹೆಸರುವಾಸಿ ಪ್ರವಾಸ ಸ್ಥಳಗಳಲ್ಲಿ ಒಂದು ರೇನ್ಬೋ ಬೀಚ್!

೨೦೦೦ದ ದಶಕದಲ್ಲಿ ಅದನ್ನು ಕೇಳಿದಾಗ ಭಲೇ, ಚೆನ್ನಾದ ಹೆಸರು ಎನ್ನಿಸಿತ್ತು. ಈ ಬೀಚ್ ಹೆಸರು ಎಷ್ಟು ಸುಂದರವಾಗಿದೆ. ಯಾಕಿದು, ಒಂದು ಸಮುದ್ರತೀರಕ್ಕೆ ಕಾಮನಬಿಲ್ಲು ಎಂಬ ಹೆಸರು ಹೇಗೆ ಬಂತು ಎಂದೆಲ್ಲ ಕೂತೂಹಲ ಮೂಡಿತ್ತು. ಆಗೆಲ್ಲ ಮಾತೆತ್ತಿದರೆ, ಕೂತರೆ, ನಿಂತರೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಗೂಗಲ್ ಡಾಕ್ಟರ್ ಮೊರೆ ಹೋಗಿ ಉತ್ತರ ಹುಡುಕುವ ಗೀಳಿರಲಿಲ್ಲ. ಕುತೂಹಲಕ್ಕೆ ಇನ್ನೂ ಅಪ್ಪಟತನವಿತ್ತು. ಸ್ಥಳಕ್ಕೆ ಹೋಗಿ ನೋಡಿದರೆ ಮಾತ್ರ ಅದರ ಇತಿಹಾಸದ ತುಣುಕುಗಳು, ಕಥೆಗಳನ್ನು ಕೇಳಿಸಿಕೊಂಡು ಸ್ಥಳ ಮಹಾತ್ಮೆ ತಿಳಿಯುವ ಅನುಭವ ಕಲಿಕೆಯ ಕಾಲವದು.

ಆಸ್ಟ್ರೇಲಿಯದ ಪೂರ್ವ ದಿಕ್ಕಿನ ಪೂರ್ತಿ ಬಹು ಸುಂದರ ಸಮುದ್ರತೀರಗಳಿವೆ. ಅವುಗಳ ಸ್ವಚ್ಛ ನಿರ್ಮಲ ಸೌಂದರ್ಯಕ್ಕೆ ಮಾರುಹೋಗಿ ಮರುಳಾಗಿ ಬ್ರಿಟಿಷರು ಹೆಚ್ಚಿನ ನಗರಗಳನ್ನು ಪೂರ್ವತೀರದಲ್ಲಿಯೆ ನಿರ್ಮಿಸಿದರು ಎಂದು ಇಲ್ಲಿನ ಇತಿಹಾಸ ಪುಟಗಳು ಹೇಳುತ್ತವೆ. ಆದರೆ ಪಟ್ಟಣಗಳ ಮತ್ತು ನಗರಗಳ ಅಂಚಿನಲ್ಲಿದ್ದ ಸಮುದ್ರತೀರದ ಸೌಂದರ್ಯವನ್ನು ಬಿಂಬಿಸುವ ಆಕರ್ಷಕ ಹೆಸರುಗಳನ್ನು ಅಲ್ಲಿನ ಬೀಚುಗಳಿಗೆ ಕೊಡುವಲ್ಲಿ ಸೋತಿದ್ದಾರೇನೋ ಎನ್ನುವ ಅನುಮಾನವಾಗುತ್ತದೆ. ಉದಾಹರಣೆಗೆ ಸಿಡ್ನಿ ನಗರದ ದಕ್ಷಿಣದಲ್ಲಿರುವ ವಲೊಂಗಾಂಗ್ ಪಟ್ಟಣವನ್ನು ದಾಟಿ ಹೋದರೆ ಅಲ್ಲಿನ ಒಂದು ಸಮುದ್ರತೀರಕ್ಕೆ ‘ಏಳು ಮೈಲಿ ಬೀಚ್’ ಎಂಬ ಹೆಸರು. ಇದಕ್ಕೆ ಸ್ಥಳೀಯ ಅಬೊರಿಜಿನಲ್ ಭಾಷೆಯ ಹೆಸರಿದ್ದರೂ ಅದು ಯಾರಿಗೂ ತಿಳಿದಿಲ್ಲ! ಏಳು ಮೈಲಿಗುಂಟ ಮೈ ಚಾಚಿರುವುದಕ್ಕೆ ‘ಏಳು ಮೈಲಿ ಬೀಚ್’ ಎಂಬ ಸಪ್ಪೆತನವೇ?

ಆದರೆ, ಸಪ್ಪೆತನವನ್ನು, ಬ್ರಿಟಿಷರ ಹೆಸರುಗಳನ್ನು ತನ್ನ ಮೈಗಂಟಿಸಿಕೊಳ್ಳದೆ ಅಪ್ಪಟ ಸ್ಥಳೀಯ ಸೊಗಡನ್ನು ಪಡೆದಿರುವುದು Rainbow Beach! ಏಕೆಂದರೆ ಆ ಹೆಸರು ಬಂದಿರುವುದು ಎರಡು ಮೂಲಗಳಿಂದ. ಅಬೊರಿಜಿನಲ್ ಸಂಸ್ಕೃತಿಯ ಸಂಕೇತವಾದ Dreamtime Stories ಕತೆಯಲ್ಲಿ ಸ್ಥಳೀಯ ಜನಪಂಗಡವಾದ ಕಬಿ ಕಬಿ ಜನರ ಒಂದು ದೈವಶಕ್ತಿಯ ಹೆಸರು ಯಿನಿಂಗೀ ಎಂದು. ಯಿನಿಂಗೀ ತನ್ನನ್ನು ಕಾಮನಬಿಲ್ಲಿನ ಬಣ್ಣಗಳಿಂದ ಗುರುತಿಸಿಕೊಂಡಿತ್ತು. ಒಂದು ಬಾರಿ ಯಾವುದೋ ದುಷ್ಟಶಕ್ತಿಯ ಜೊತೆ ನಡೆದ ಕಾಳಗದಲ್ಲಿ ಈ ಯಿನಿಂಗೀ ಮಡಿದು ಅಲ್ಲಿನ ಸಮುದ್ರದಂಚಿನಲ್ಲಿದ್ದ ಮರಳುದಿಬ್ಬಗಳ ಮೇಲೆ ಜೀವ ಚೆಲ್ಲಿತ್ತು. ಹಾಗಾಗಿ ಮರಳುದಿಬ್ಬಗಳು ಕಾಮನಬಿಲ್ಲಿನ ಬಣ್ಣಗಳನ್ನು ಪ್ರತಿನಿಧಿಸುತ್ತವೆ. ನಿಜಕ್ಕೂ ಮರಳುದಿಬ್ಬಗಳಲ್ಲಿ ಆ ಬಣ್ಣಗಳು ಕಾಣುತ್ತವೆ. ಇದು ಅಲ್ಲಿನ ಸ್ಥಳಪುರಾಣ. ಭೂವಿಜ್ಞಾನಿಗಳು ಗುರುತಿಸಿದಂತೆ ಆ ಬಣ್ಣಗಳು ಕಾಣುವುದು ಮರಳಿನಲ್ಲಿರುವ ಖನಿಜಗಳಿಂದ. ಇದೆ ಕಾರಣದಿಂದ ಇಲ್ಲಿನ ಮರಳುದಿಬ್ಬಗಳಿಗೆ Coloured Sands ಎಂಬ ಹೆಸರಿದೆ. ನಾವು ಸಾಮಾನ್ಯರು ಕತೆಯನ್ನೂ ನಂಬಬೇಕು, ವಿಜ್ಞಾನವನ್ನೂ ನಂಬಬೇಕು. ಆಗಲೆ ಈ ಸುಂದರವಾದ ಸ್ಥಳದ ಜೊತೆ ನಮ್ಮ ಸಾಂಗತ್ಯ ಬೆಳೆಯುತ್ತದೆ.

ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!

ರೇನ್ಬೋ ಬೀಚ್ ಇರುವುದು ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ. ರಾಜಧಾನಿ ಬ್ರಿಸ್ಬೇನ್ ನಗರದಿಂದ ಉತ್ತರಕ್ಕೆ ಸುಮಾರು ಮೂರೂವರೆ ತಾಸುಗಳ ಕಾರಿನ ಪಯಣ, ೨೪೦ ಕಿಮೀ ದೂರ. ಬ್ರೂಸ್ ಹೆದ್ದಾರಿಯಲ್ಲಿ ೧೦೦ ಕಿಮೀ ವೇಗದಲ್ಲಿ ಚಲಿಸುವುದರಿಂದ ನಡುವೆ ಒಂದಷ್ಟು ವಿಶ್ರಾಂತಿ ಪಡೆದು ಮತ್ತೆ ಸಾಗಿ ಅಷ್ಟು ಶೀಘ್ರವಾಗಿ ತಲುಪುತ್ತೀವಿ. ಮಧ್ಯೆ ಕಾರು ನಿಲ್ಲಿಸಿ ಸುಧಾರಿಸಿಕೊಳ್ಳಲು ಬೇಕಾದಷ್ಟು ತಂಗುದಾಣಗಳಿವೆ, ಪೆಟ್ರೋಲ್ ಸ್ಟೇಷನ್ನುಗಳಿವೆ, ಅಂಗಡಿಮಳಿಗೆಗಳಿವೆ. ಅವು ಬೇಡ ಎನ್ನುವುದಾದರೆ, ಬ್ರಿಸ್ಬೇನ್ ನಗರದಿಂದ ಹೊರಟು ಒಂದೂಮುಕ್ಕಾಲು ಗಂಟೆಯಲ್ಲಿ ಬಹುಸುಂದರ ಮತ್ತು ಲೋಕಪ್ರಸಿದ್ಧವಾದ ನೂಸಾ (Noosa) ಪಟ್ಟಣವನ್ನು ತಲುಪಿ ಅಲ್ಲಿರುವ ಸಮುದ್ರತೀರದಲ್ಲಿ ಕಾಲಾಡಿಸಿ ಮತ್ತೆ ಅಲ್ಲಿಂದ ಹೊರಟು Gympie ಪಟ್ಟಣವನ್ನು ತಲುಪಬಹುದು. ಈ ಪಟ್ಟಣದ ಬಳಿಯಿರುವುದೆ, ಅಂದರೆ ಸುಮಾರು ಐವತ್ತು ನಿಮಿಷಗಳ ಕಾರು ಪಯಣದ ದೂರದಲ್ಲಿರುವುದು ರೇನ್ಬೋ ಬೀಚ್ ಸಮುದ್ರತೀರ. ಇಲ್ಲಿಗೆ ಸಮೀಪದಲ್ಲಿರುವುದು ಮತ್ತೊಂದು ಜಗತ್‌ಪ್ರಸಿದ್ಧ ತಾಣ Fraser Island. ಕಾಲಾವಕಾಶ ಮಾಡಿಕೊಂಡು ಈ ಮೂರೂ ಪ್ರವಾಸಿ ಸ್ಥಳಗಳ ಭೇಟಿಯನ್ನು ಮೊದಲೆ ನಿಗದಿಪಡಿಸಿಕೊಂಡು ಹೊರಟರೆ ಅನುಭವದ ಆಳ-ಅಗಲ ಹೆಚ್ಚುವುದರಲ್ಲಿ ಸಂದೇಹವೆ ಇಲ್ಲ.

ಸಿಡ್ನಿ ನಗರದ ದಕ್ಷಿಣದಲ್ಲಿರುವ ವಲೊಂಗಾಂಗ್ ಪಟ್ಟಣವನ್ನು ದಾಟಿ ಹೋದರೆ ಅಲ್ಲಿನ ಒಂದು ಸಮುದ್ರತೀರಕ್ಕೆ ‘ಏಳು ಮೈಲಿ ಬೀಚ್’ ಎಂಬ ಹೆಸರು. ಇದಕ್ಕೆ ಸ್ಥಳೀಯ ಅಬೊರಿಜಿನಲ್ ಭಾಷೆಯ ಹೆಸರಿದ್ದರೂ ಅದು ಯಾರಿಗೂ ತಿಳಿದಿಲ್ಲ! ಏಳು ಮೈಲಿಗುಂಟ ಮೈ ಚಾಚಿರುವುದಕ್ಕೆ ‘ಏಳು ಮೈಲಿ ಬೀಚ್’ ಎಂಬ ಸಪ್ಪೆತನವೇ?

ಪ್ರಸಿದ್ಧವಾದ ಗ್ರೇಟ್ ಸ್ಯಾಂಡಿ ನ್ಯಾಶನಲ್ ಪಾರ್ಕ್ ಪರಿಧಿಯ ದಕ್ಷಿಣಕ್ಕೆ Cooloola ಪ್ರದೇಶಕ್ಕೆ ರೇನ್ಬೋ ಬೀಚ್ ಸೇರುತ್ತದೆ. ಆದ್ದರಿಂದ ಹೆಸರೆ ಹೇಳುವಂತೆ ಯಥೇಚ್ಚ ಮರಳು ತುಂಬಿದ ಪ್ರದೇಶವದು. ಈ ಪ್ರದೇಶದಲ್ಲಿರುವ ಕೆಲ ಮನೋಹರ ಸ್ಥಳಗಳಿಗೆ ಹೋಗಲು ನಮ್ಮಲ್ಲಿ ಸುಭದ್ರವಾದ ನಾಲ್ಕುಚಕ್ರ / ಫೋರ್ ವೀಲ್ ಡ್ರೈವ್ ವಾಹನವಿರಬೇಕು. ಸಾಮಾನ್ಯ ಕಾರಿದ್ದರೆ ಎಚ್ಚರಿಕೆಯಿರಲಿ – ಅದು ಮರಳಿನಲ್ಲಿ ಹೂತುಕೊಂಡು ನಾವು ನಮ್ಮ ಕಾರನ್ನು ಸಂರಕ್ಷಿಸಿಕೊಳ್ಳಲೆಂದೆ ಬಹು ಸಮಯ ಹಿಡಿಯುತ್ತದೆ. ಈ ರೀತಿಯ ಮರಳು ಹೆದ್ದಾರಿಯಲ್ಲಿ ಡ್ರೈವ್ ಮಾಡಿ ಸಾಗುವ ಚಪಲಚಿತ್ತರ ಕಾರುಗಳು ಮರಳಿನಲ್ಲಿ ಹೂತುಕೊಂಡು ಅವರು ಬಾಲಸುಟ್ಟ ಬೆಕ್ಕಿನಂತೆ ಪರದಾಡುವುದನ್ನು ನೋಡುತ್ತಾ ಸಾಗುವವರು ಕೆಲವರಾದರೆ, ತಮ್ಮ ವಾಹನವನ್ನು ನಿಲ್ಲಿಸಿ ಅವರಿಗೆ ನೆರವಾಗುವವರು ಅನೇಕರಿದ್ದಾರೆ. ನಾವು ಎರಡನೆ ಬಾರಿ ರೇನ್ಬೋ ಬೀಚ್‌ಗೆ ಹೋದಾಗ ಹಾಗೆ ಸುಮ್ಮನೆ ಫ್ರೇಸರ್ ಐಲ್ಯಾಂಡ್ ಮರಳು ತೀರಕ್ಕೆ ಹೋದೆವು. ಅಲ್ಲಿ ನಮ್ಮ ನಾಲ್ಕುಚಕ್ರಗಳ ವಾಹನವು ಮರಳಿನ ಸೆಳೆತಕ್ಕೆ ಸಿಕ್ಕಿ ‘ಉಹುಂ, ಇಲ್ಲಿಂದ ಹೊರಡಲಾರೆ’ ಎಂದು ಮರಳಿನಲ್ಲಿ ಹೂತುಹೋಯ್ತು. ಅದೇ ಪರಿಸ್ಥಿತಿಯಲ್ಲಿ ನಮ್ಮಂತೆಯೆ ಇನ್ನೂ ಕೆಲವರು ಅಲ್ಲಿದ್ದರು. ಒಂದಷ್ಟು ಹೊತ್ತು ಕಾದನಂತರ ಬಲಾಢ್ಯವಾದ ವಾಹನವೊಂದು ಬಂದು ರಕ್ಷಿಸಿ ನಮ್ಮಗಳ ವಾಹನಗಳನ್ನು ಮರಳಿನಿಂದ ಹೊರಗೆಳೆದು ಬಿಡುಗಡೆ ಮಾಡಿತು.

ರೇನ್ಬೋ ಬೀಚ್ ತಲುಪಲು ಬ್ರೂಸ್ ಹೆದ್ದಾರಿಯಲ್ಲದೆ ಇನ್ನೊಂದು ದಾರಿಯಿದೆ. ಇದು ಬಹಳ ವಿಶೇಷವಾದದ್ದು ಮತ್ತು ರೋಮಾಂಚನಕಾರಿಯಾದದ್ದು. ಆಗಲೆ ಹೇಳಿದ Noosa ಪಟ್ಟಣದ ಸಮುದ್ರದಂಚಿನಿಂದ ಹೊರಟು ನಾವು ನಾಲ್ಕು ಚಕ್ರ ವಾಹನದಲ್ಲಿ ಕೂತು ಸಮುದ್ರದಂಚಿನಲ್ಲೇ ಚಲಿಸುತ್ತ ರೇನ್ಬೋ ಬೀಚ್ ಸೇರಬಹುದು. ಆ ಕಡೆ ಮರಳುದಿಬ್ಬಗಳು, ಈ ಕಡೆ ಅಳತೆಗೆ ಸಿಕ್ಕದ ಜಲರಾಶಿಯ ಭೋರ್ಗರೆತ. ಕಾರಿನ ಕಿಟಕಿಗಳನ್ನು ತೆರೆದಿಟ್ಟುಕೊಂಡು ಸಮುದ್ರದ ಗಾಳಿಯನ್ನು ಹೀರುತ್ತಾ ನೀರಿನ ಅಲೆಗಳಲ್ಲಿ ಸಾಗುವುದು ಬಲು ಖುಷಿಕೊಡುವ ಅನುಭವ. ಮೈಮನ ಹುಚ್ಚೆದ್ದು ಕುಣಿಯಲು ಮತ್ತೇನು ಬೇಕು? ಆದರೆ ಈ ರೀತಿ ಅನೇಕ ವಾಹನಗಳು ಸಮುದ್ರತೀರದಲ್ಲಿ ಸಾಗಿ ಅಲ್ಲಿನ ಸೂಕ್ಷ್ಮಜೀವಿಗಳನ್ನು, ಪರಿಸರವನ್ನು ಹಾಳುಮಾಡುವ ಸಾಧ್ಯತೆಯೂ ಹೆಚ್ಚಿದೆ. ಇದೊಂದು ಅರಿವು ನಮ್ಮಲ್ಲಿ ಸದಾ ಜಾಗೃತವಾಗಿರಬೇಕು.

ಇನ್ನೊಂದು ಎಚ್ಚರಿಕೆಯ ಮಾತು. ಹಾಗೇನಾದರೂ ನಾವು ಮರಳುದಾರಿಯಲ್ಲಿ ಪಯಣಿಸಲು ನಿರ್ಧಸಿದರೆ ವಾಹನಚಾಲಕರಿಗೆ ಗಟ್ಟಿ ಗುಂಡಿಗೆಯಿರಬೇಕು. ವಾಹನವು ಒಳ್ಳೆ ಆರೋಗ್ಯ ಸ್ಥಿತಿಯಲ್ಲಿರಬೇಕು. ನಾವು ಮುನ್ನೆಚ್ಚರಿಕೆ ತೆಗೆದುಕೊಂಡು ದಾರಿಮಧ್ಯೆಯಲ್ಲಿ ಏನಾದರೂ ವಾಹನ ನಿಂತುಹೋದರೆ ಅಲ್ಲಿಂದ ಹೊರಬೀಳಲು ಪರ್ಯಾಯ ವ್ಯವಸ್ಥೆಯನ್ನು ಮುಂಚೆಯೇ ಆಲೋಚಿಸಿ ತಯಾರಾಗಿರಬೇಕು. ಏಕೆಂದರೆ ಸಮುದ್ರದ ಉಬ್ಬರವು ವಾಹನವನ್ನು ನೀರಿಗೆಳೆಯುವ ಸಾಧ್ಯತೆಯಿದೆ. ಗಾಡಿಯಲ್ಲಿ ಒಂದಷ್ಟು ರಿಪೇರಿ ಸಾಧನ-ಸಲಕರಣೆಗಳ ಜೊತೆಗೆ ಬಲಾಢ್ಯವಾದ ಕಬ್ಬಿಣದ ಸರಪಳಿ ಇರಬೇಕು. ಮರಳಿನಲ್ಲಿ ಸಿಕ್ಕಿಕೊಂಡ ನಮ್ಮ ವಾಹನವನ್ನು ಮತ್ತೊಂದು ವಾಹನವು ಎಳೆಯುತ್ತ ಸುರಕ್ಷಿತ ಜಾಗಕ್ಕೆ ಸೇರಿಸಲು ಅದು ಅಗತ್ಯವಿರುವ ಸಾಧನ. ನಮ್ಮ ಪಯಣವನ್ನು ಮುಗಿಸಿದ ನಂತರ ಮರೆಯದೆ ಕಾರಿನ ಭಾಗಗಳನ್ನು ಉಪ್ಪು ನೀರು ಕೊರೆಯದಂತೆ ವಾಹನವನ್ನು ಚೆನ್ನಾಗಿ ಸಿಹಿನೀರಿನಿಂದ ತೊಳೆಯಬೇಕು.

ರೇನ್ಬೋ ಬೀಚ್ ಭೇಟಿಯನ್ನು ಅನುಭವಿಸಲು ನಾವು ಅಲ್ಲೇ ಕೆಲದಿನ ಮೊಕ್ಕಾಂ ಹೂಡಬೇಕು, ಇಲ್ಲವಾದರೆ ನಮ್ಮ ಭೇಟಿ ಅರ್ಧಂಬರ್ಧವಾಗುತ್ತದೆ. ಮೊಕ್ಕಾಂ ಹೂಡಲು ಬೇಕಾದಷ್ಟು ಬಾಡಿಗೆ ವಸತಿ ಮತ್ತು ಹೊಟೆಲ್, ರೆಸಾರ್ಟ್ ಅನುಕೂಲ, ಕ್ಯಾಂಪ್ ಸೈಟ್, ಕ್ಯಾಬಿನ್ ವ್ಯವಸ್ಥೆಗಳಿವೆ. ಒಮ್ಮೆ ಅಲ್ಲಿ ಠಿಕಾಣಿ ಹೂಡಿದರೆ ಸಾಕು ಅಲ್ಲಿಂದ ಮುಂದೆ ಯಥೇಚ್ಛವಾಗಿ ಪ್ರಕೃತಿ ಸೌಂದರ್ಯವನ್ನು, ಸಮುದ್ರವನ್ನು ಆನಂದಿಸಬಹುದು. ಇಡೀ Cooloola ಪ್ರದೇಶದಲ್ಲಿರುವ ಹಲವಾರು ನಡಿಗೆ ದಾರಿಗಳಲ್ಲಿ ನಡೆಯಲು ಡೇ-ಪಿಕ್ನಿಕ್ ಯೋಜನೆ ಹಾಕಿಕೊಳ್ಳಬಹುದು. ಅಲ್ಲಿರುವ ಪಕ್ಷಿ-ಪ್ರಾಣಿಗಳನ್ನು ಹುಡುಕುತ್ತಾ ದಿನ ಕಳೆಯಬಹುದು. ಅಲ್ಲಲ್ಲಿರುವ ಅಬೊರಿಜಿನಲ್ ಆರ್ಟ್ ಗ್ಯಾಲರಿಗಳನ್ನು, ಸಂಗ್ರಹಾಲಯಗಳನ್ನು ಹೊಕ್ಕಿನೋಡಿ ಸ್ಥಳಪುರಾಣಗಳನ್ನು ಅರಿಯಬಹುದು. ಧೈರ್ಯವಿದ್ದರೆ ಆ ವಿಶಾಲ ಪ್ರದೇಶದಲ್ಲಿ ಅಡಗಿರುವ ಬೆತ್ತಲಿಗರ ಬೀಚ್ ಎಲ್ಲಿದೆ ಎಂದು ಹುಡುಕಿ ಅಲ್ಲಿಗೆ ಹೋಗುವ (ದು)ಸಾಹಸವನ್ನೂ ಮಾಡಬಹುದು.

ನಿಜವಾದ ಸಾಹಸಗಳನ್ನು ಮಾಡುವುದಾದರೆ ಸ್ನೋರ್ಕೆಲಿಂಗ್, ಸ್ಕೂಬಾ ಡೈವಿಂಗ್, ರಾಫ್ಟಿಂಗ್, ವಿಂಡ್ ಸರ್ಫಿಂಗ್, ಕೈಟ್ ಸರ್ಫಿಂಗ್‌ಗಳಿವೆ. ಕುಟುಂಬಸಮೇತ ಡಾಲ್ಫಿನ್ ವಾಚ್, ವೇಲ್ ವಾಚಿಂಗ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು. ಅವೆಲ್ಲ ಸಾಹಸಗಳು ಬೇಡವಾದರೆ, ಸಮುದ್ರತೀರದಲ್ಲಿ ಕೂತು ಮರಳು ಅರಮನೆಗಳನ್ನು ನಿರ್ಮಿಸಿ ಆನಂದಿಸಬಹುದು. ಸಮುದ್ರದಲ್ಲಿ ಬಳುಕುತ್ತ ನಾಟ್ಯವಾಡುವ ಸರ್ಫಿಂಗ್ ವೀರ-ವೀರೆಯರನ್ನು ವೀಕ್ಷಿಸುತ್ತಾ ಸಮಯ ಕಳೆಯಬಹುದು. ಒಟ್ಟಾರೆ, ಎಲ್ಲ ವಯಸ್ಸಿನವರಿಗೂ ಎಲ್ಲಾ ಸಾಮರ್ಥ್ಯಗಳಿಗೂ, ಹಲವಾರು ವಿಧಗಳ ಆಸಕ್ತಿಗಳನ್ನು ಕೆರಳಿಸುತ್ತ ರೈನ್ ಬೀಚ್ ಚಿತ್ತಾಕರ್ಷಕವಾಗಿದೆ.