ಗುರುಪುರದ ಲಾಮಾ ಕ್ಯಾಂಪಿಗೆ ಹೋದಾಗ ಈ ದುಃಖ ನೋವುಗಳೆಲ್ಲಾ ಇನ್ನು ಯಾರಿಗೂ ಕಾಣದು ಎನ್ನುವ ಹಾಗೆ ಅಲ್ಲಿನ ಆಕಾಶದಂತೆ ಶುಭ್ರವಾಗಿತ್ತು.  ಲಾಮಾಗಳು ಓಡಾಡುತ್ತಿದ್ದರು. ಕೆಲವರು ರಸ್ತೆಯ ಮಧ್ಯ ಸುಮ್ಮನೆ ಕೂತಿದ್ದರು. ಕೆಲವರು ಸಾಲು ಮನೆಯ ಮುಂದೆ  ಸುತ್ತ ಕುಳಿತುಕೊಂಡು  ಪಿಂಗಾಣಿ ಪಾತ್ರೆಗಳ ತುಂಬಾ ಅನ್ನವನ್ನು ಗುಡ್ಡೆಯ ಹಾಗೆ ಹಾಕಿಕೊಂಡು ತಿನ್ನುತ್ತಿದ್ದರು. ನಾವು ಯಾರು? ಎತ್ತ? ಯಾಕೆ ಬಂದೆವು? ಎನ್ನುವುದು ಅವರಿಗೇನೂ ಬೇಕಾಗಿರಲಿಲ್ಲ. ಮತ್ತೂ ಕೆಲವರು ಎಲ್ಲೋ ಕಳೆದು ಹೋದ ಹಾಗೆ, ಈ ಲೋಕದ ವಿಚಾರಗಳನ್ನು ಎಲ್ಲರಿಗಿಂತ ತಡವಾಗಿ ಅರ್ಥಮಾಡಿಕೊಳ್ಳುವ ಹಾಗೆ, ಅಥವಾ ತಮಗೆ ಅದರ ಗೋಷ್ಠಿಯೇ ಬೇಡ ಎನ್ನುವ ಹಾಗಿದ್ದರು. ಅವರು ಧರಿಸುವ ಬಟ್ಟೆಯಂತೆ ನಿರಾಕಾರವಾಗಿ, ಮುಖದ ಯಾವ ಗೆರೆಗಳೂ ಏನನ್ನೂ ಹೇಳದೆ ಶಾಂತಿಯುತ ಸಾಧುವಿನಂತೆ ಕಾಣುತ್ತಿದ್ದರು.

ಆ ಏರು ಬಿಸಿಲಿನಲ್ಲೂ ತಣ್ಣಗೆ ಬೀಸುತಿದ್ದ ಗಾಳಿಗೆ  ಹತ್ತಿರ ಸುಳಿಯುತ್ತಿದ್ದ ಎಲ್ಲವೂ ಹಿತವಾಗಿತ್ತು. ಅಲ್ಲಿ ಸಿಕ್ಕಿದವರೂ ಹಾಗೆಯೇ ಇದ್ದರು. ಬದುಕಿನಲ್ಲಿ ಏನೇನೋ ಅವತಾರಗಳನ್ನು ಎತ್ತಿ, ಈಗ ಇರುವ ಅವತಾರವೇ ಕೊನೆಯೋ ಎಂಬಂತಿದ್ದ ಅಮೆರಿಕನ್ ಲಾಮಾ ಟೆನ್ಜಿನ್ ತರ್ಪಾ ಸಿಕ್ಕಿದ್ದು ಅಲ್ಲಿಯೇ. ಅಮೆರಿಕಾದಲ್ಲಿ ಹುಟ್ಟಿದ್ದ ಟೆನ್ಜಿನ್ ಈಗ ಸದ್ಯಕ್ಕಿರುವ ಲಾಮಾವತಾರದಲ್ಲಿ, ಪಕ್ಕಾ ಟಿಬೆಟಿಯನ್ ಹಾಗೆಯೇ ಕಾಣುತ್ತಿದ್ದ. ಅಮೆರಿಕಾದಲ್ಲಿ ಸ್ವಂತ ಉದ್ಯಮ, ಕೃಷಿ ಮಾಡಿಕೊಂಡಿದ್ದು, ನಂತರ ಮಾರ್ಕೆಟಿಂಗ್, ಫಂಡ್ ರೈಸಿಂಗ್, ಕಂಪ್ಯೂಟರ್ ಡಿಸೈನ್, ಎಂದು ಇನ್ನೇನೋ ಮಾಡಿಕೊಂಡು, ಜೊತೆಗೆ ಪಿಯಾನೋ ಟೀಚರ್ ಆಗಿ ಮಕ್ಕಳಿಗೆ ಸಂಗೀತ ಪಾಠವನ್ನೂ ಹೇಳಿಕೊಡುತ್ತಿದ್ದನಂತೆ.  ಮೊದಲ ಬಾರಿಗೆ ಬೌದ್ಧ ಧರ್ಮದ ಕುರಿತಾದ ಪುಸ್ತಕದ ಬಗ್ಗೆ ಓದಿದಾಗ  ಮನಪರಿವರ್ತನೆಯಾಗಿ ಅದರಲ್ಲಿರುವ ವಿನಯ, ಸರಳತೆ, ಪರೋಪಕಾರ ಇದೇ ತನ್ನ ಜೀವನದ ಪರಮಾನಂದವೆನಿಸಿ ಈಗ ಭಾರತಕ್ಕೆ ಬಂದು ಈ ಲಾಮಾ ಕ್ಯಾಂಪಿನಲ್ಲಿದ್ದಾನೆ.

ಅಂತೂ ಅಲ್ಲಿಂದ ಹೊರಟಾಗ   ಬದುಕು ಇದ್ದ ಹಾಗಯೇ ಇತ್ತು. ಸಿಕ್ಕಾಪಟ್ಟೆ ಹಸಿವಾಗಿತ್ತು. ಫಿಲಾಸಫಿ ಮರೆತು ಹೋಗಿತ್ತು. ಅವರ ಗೆಳೆಯರೊಬ್ಬರು ಬಂದಿದ್ದವರು ಹೋಮ್ ಮೇಡ್ ಚಾಕಲೇಟ್ ಕೊಟ್ಟಿದ್ದನ್ನು ತಿಂದು ಅವರಿಗೆ ಮತ್ತೆ ಬರುವೆನೆಂದು ಹೇಳಿ ಬಂದೆ. ಬರುವಾಗ ಟಿಬೆಟಿಯನರ ಅಚ್ಚರಿಯಾಗುವಂತಹ ಪುಟ್ಟ ಸಾಮ್ರಾಜ್ಯವನ್ನು ನೋಡುತ್ತಿದ್ದೆ.

ಟಿಬೆಟ್ ಮೇಲೆ ಚೀನಾ ನಡೆಸಿದ ಆಕ್ರಮಣದಿಂದ ಭಾರತಕ್ಕೆ ವಲಸೆ ಬಂದ ಟಿಬೆಟಿಯನ್ ನಿರಾಶ್ರಿತರು ಇಲ್ಲಿ ತಮ್ಮದೇ ರೀತಿಯಲ್ಲಿ, ತಮ್ಮ ಜಗತ್ತನೇ ಸೃಷ್ಟಿಸಿಕೊಂಡಿದ್ದಾರೆ. ಕೃಷಿ, ಉಣ್ಣೆ ಬಟ್ಟೆ ತಯಾರಿಕೆ ಮುಂತಾದ ಕಸುಬುಗಳಲ್ಲಿ ಸಾವಿರಾರು ಬೌದ್ಧ ಕುಟುಂಬಗಳು ತೊಡಗಿಕೊಂಡಿದ್ದು ಬೌಧ್ಧ ಧರ್ಮ ಶಿಕ್ಷಣ ಹಾಗೂ ಧಾರ್ಮಿಕ ವಿಧಿಗಳಲ್ಲಿ ತೊಡಗಿರುವ ಸಾವಿರಾರು ಭಿಕ್ಷುಗಳು ನೆಲೆಸಿದ್ದಾರೆ. ಶಾಲೆಗಳು, ಆಸ್ಪತ್ರೆಗಳು ಬೌದ್ಧ ವಿಹಾರಗಳು, ರೆಸ್ಟೋರೆಂಟ್ ಗಳು, ಎಲ್ಲವೂ ಇಲ್ಲಿದೆ.

ಅದೇ ಕ್ಯಾಂಪಿನಲ್ಲಿ ಸಿಕ್ಕಿದ  ಸೋಮವಾರಪೇಟೆಯ ಸ್ವಾತಿಯ ಟಿಬೆಟಿಯನ್ ಗಂಡನ ಹೆಸರೂ ಟೆನ್ಜಿನ್. ಲಾಮಾ ಕ್ಯಾಂಪಿನ ಸೆರಾ ಆಸ್ಪತ್ರೆಯ ಹೂದೋಟದ ಅಂಗಳದಲ್ಲಿ ಅದೇ ಹೂದೋಟವನ್ನು ನೋಡಿಕೊಳ್ಳುತ್ತಿದ್ದ ಟೆನ್ಜಿನ್, ಸ್ವಾತಿ ನೀರು ತರಲು ಹೋಗಿದ್ದಾಳೆಂದೂ ಈಗ ಬರುವಳೆಂದೂ ಹೇಳಿ, ನನ್ನೊಡನೆ ಅವರೂ ಕಾಯುತ್ತಿದ್ದ. ಸ್ವಲ್ಪ ಹೊತ್ತಲ್ಲಿ, ಅರಳಿದ ಹೂದೋಟದ ನಡುವೆ ಸ್ವಾತಿ ತಲೆಯ ಮೇಲೆ ನೀರು ತುಂಬಿದ ಬಿಂದಿಗೆ ಹಿಡಿದು ನಡೆದು ಬಂದಳು. ಬೇಡಬೇಡವೆಂದರೂ ಆಸ್ಪತ್ರೆಯ ಬಳಿಯಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಹೋಗಿ, ತಿನ್ನಲ್ಲಿಕ್ಕೆ ಕೊಡಲು ಏನೂ ಇಲ್ಲವೆನ್ನುತ್ತಾ, ಹೊಟ್ಟೆತುಂಬಾ ಟೀ ಕೊಟ್ಟು, ಸಾಕೆನ್ನುವಷ್ಟು ಪ್ರೀತಿಯನ್ನೂ ಕೊಟ್ಟು ತನ್ನ ಕತೆ ಹೇಳಿ ಕಳುಹಿಸಿದ್ದಳು.

ಅವರ ಕಷ್ಟದ ಕತೆಯನ್ನು ತನ್ನ ಕತೆಯೇ ಅಲ್ಲವೆಂಬಂತೆ, ಯಾರದೋ ಕತೆಯನ್ನು ನಗುತ್ತಾ ನಗುತ್ತಾ ಹೇಳುವವರಂತೆ, ಹೇಳುತ್ತಿದ್ದರು. ಟೀ ಕುಡಿಯುತ್ತಾ ಕತೆ ಕೇಳಲು ರೆಡಿಯಾಗಿ ಕುಳಿತಿದ್ದೆ. ಕನ್ನಡ ಬಾರದ ಅವಳ ಗಂಡನೂ ಹೆಂಡತಿಯನ್ನೇ ನೋಡುತ್ತಾ  ಹೊಸದಾಗಿ ಕತೆ ಹೇಳುತ್ತಿರುವಳು ಎಂಬಂತೆ ಕೂತಿದ್ದ.

ಸ್ವಾತಿಯ ಗಂಡನಿಗೂ ಭಾರತೀಯರೆಂದರೆ ಇಷ್ಟವಂತೆ. ಅವರ ಮೊದಲನೆಯ ಹೆಂಡತಿಯೂ ಕೊಡಗಿನವಳು. ಮೊದಲನೇ ಹೆಂಡತಿ ತೀರಿಕೊಂಡ ಮೇಲೆ ಸ್ವಾತಿಯನ್ನು ಮದುವೆಯಾಗಿದ್ದಾನೆ. ಸ್ವಾತಿಯೂ ತನ್ನ ಮೊದಲನೆಯ ಗಂಡ ತೀರಿಕೊಂಡ ಮೇಲೆ ಇವರನ್ನು ಮದುವೆಯಾಗಿದ್ದಾಳೆ.

ಕಷ್ಟದಿಂದ ಬೆಳೆದಿರುವ ಸ್ವಾತಿ ೭ ವರ್ಷದವಳಿರುವಾಗಲೇ ಬೆಂಗಳೂರಿನ ಸಂಬಂಧಿಕರ ಮನೆಗೆ ಮನೆಕೆಲಸಕ್ಕೆ ಹೋಗಿದ್ದಳು.  ಅಲ್ಲಿ ಹೋದಲ್ಲೂ ತಿನ್ನಲು ಕೊಡದೆ ಉಪವಾಸ ಕೆಡವುತ್ತಿದ್ದರು. ಒಂದು ಸಲ ಮನೆಯ ಪಕ್ಕದ ಅಂಗಡಿಗೆ ಹಾಲು ತರಲು ಹೋದವರು ಹಸಿವು ತಾಳಲಾರದೆ ಡಬ್ಬದೊಳಗಿದ್ದ ಬನ್ನು ಎತ್ತಿಕೊಂಡು, ಯಜಮಾನನ ಕೈಯ್ಯಲ್ಲಿ ಹೊಡೆಸಿಕೊಂಡಿದ್ದಳಂತೆ.  ಮುಂದೆ ಮದುವೆಯಾದ ಮೇಲೂ ಯಾವುದೇ ಸುಖ ಕಾಣಲಿಲ್ಲ. ಕುಡಿದು ಬಂದ ಗಂಡ ಹೊಡೆಯುತಿದ್ದ. ಕುಡಿದು ಕುಡಿದು ಸತ್ತೂ ಹೋದ. ನಂತರ ಸಂಬಂಧಿಕರೊಬ್ಬರು ಲಾಮಾ ಕ್ಯಾಂಪಿನಲ್ಲಿ ಕೆಲಸ ಕೊಡಿಸಿದರು. ಅಷ್ಟರಲ್ಲಿ ಟೆನ್ಜಿನ್ ಅವರಿಗೂ ಮೊದಲ ಹೆಂಡತಿ ತೀರಿಹೋಗಿದ್ದರು. ಅವರ ಮೊದಲ ಹೆಂಡತಿಯ ತಾಯಿಯೇ, ಒತ್ತಾಯ ಮಾಡಿ ಸ್ವಾತಿಯ ಜೊತೆ ಮದುವೆ ಮಾಡಿಸಿದರಂತೆ.

ಮದುವೆಯಾಗಿ ಕೆಲವು ವರ್ಷ ಇಬ್ಬರೂ ಸುಖವಾಗಿದ್ದರು. ಒಂದು ದಿನ ಇದಕ್ಕಿದ್ದಂತೆ ಸ್ವಾತಿಗೆ ಏನೋ ತೊಂದರೆ ಕಾಣಿಸಿಕೊಂಡು ಸರ್ಜರಿ ಮಾಡಬೇಕಾಯಿತು. ಗಂಡನಿಗೆ ಯಾರೋ ತಲೆಕೆಡಿಸಿ ಇವಳು ಸಾಯುತ್ತಾಳೆಂದು ಹೇಳಿ ಸ್ವಲ್ಪ ಸಮಯ ಹೇಗೋ ಇಬ್ಬರು ದೂರವಾಗಿದ್ದರು. ಈಗ ಜೊತೆಯಲ್ಲೇ ಖುಷಿಯಾಗಿದ್ದಾರೆ.

ಅವರ ಮನೆಯಲ್ಲಿ ಟಿಬೇಟಿನ ದೇವರೂ ಭಾರತದ ದೇವರೂ ಒಟ್ಟೊಟ್ಟಿಗೆ ಬೆಚ್ಚಗೆ ಕುಳಿತುಕೊಂಡಿದ್ದರು. ‘ನಾನು ಅವರ ದೇವರಿಗೂ ಕೈಮುಗಿಯುತ್ತೇನೆ, ನಮ್ಮ ದೇವರಿಗೂ ಕೈ ಮುಗಿಯುತ್ತೇನೆ.  ಅವರು ಧರಿಸುವಂತಹ ಬಟ್ಟೆಯನ್ನೂ  ಧರಿಸುತ್ತೇನೆ’ ಎನ್ನುತ್ತಿದ್ದಳು. ಗಂಡನಿಗೆ ಸ್ವಾತಿಯನ್ನು ಟಿಬೆಟ್ ಗೆ ಕರೆದುಕೊಂಡು ಹೋಗಬೇಕೆಂಬ ಆಸೆಯೂ ಇದೆ. ಅಲ್ಲಿ ತನಗೆ ದೊಡ್ಡ ಮನೆ ಇದೆಯೆಂದೂ ತನ್ನ ಜೊತೆ ಇನ್ನೂ ಸುಖವಾಗಿ ಇರಬಹುದೆಂದೂ ಹೇಳುತ್ತಾನಂತೆ. ಆದರೆ ಸ್ವಾತಿಗೆ ಅಲ್ಲಿಗೆ ಹೋಗುವ ಮನಸ್ಸೇನೋ ಇದ್ದಂತಿರಲಿಲ್ಲ.

ಅವರಿಬ್ಬರ ಸುಖದ ಮುಖಗಳು ಅಲ್ಲಿಯ ತಣ್ಣಗಿನ ಗಾಳಿಯಲ್ಲಿ ಏನನ್ನೋ ಹೇಳುತ್ತಿದ್ದವು. ಒಂದು ಕ್ಷಣಕ್ಕೆ ಸುಖವನ್ನು ಅದರ ಪಾಡಿಗೆ ಬಿಟ್ಟು, ಅಲ್ಲಿಯೇ ಇದ್ದ ರೆಸ್ಟೋರೆಂಟ್ ಗೆ ಹೋಗಿದ್ದೆ. ಯಾರೂ ಅಂತಹ ಗಿರಾಕಿಗಳಿರಲಿಲ್ಲ. ಹೋಟೇಲಿನ ಹುಡುಗರು  ಸುಮಾರು ಹೊತ್ತಿನ ನಂತರ ಮೋಮೋ ತಂದಿಟ್ಟು , ಮುಖವನ್ನೂ ನೋಡದೆ ತಮ್ಮಷ್ಟಕ್ಕೆ ಕೂತಿದ್ದರು. ಸೀಳುಗಣ್ಣಿನ ಬಿಳಿ ಬಣ್ಣದ ಎಳೆಯ ಹುಡುಗಿಯರು, ವಯಸ್ಸಾದ ಹರೆಯದ ಮುದುಕನೊಬ್ಬ ಒಳಗೆ ಬಂದು ತಮ್ಮಷ್ಟಕ್ಕೆ ತಮ್ಮದೇ ಸಾಮ್ರಾಜ್ಯದ ಒಳ ಹೊಕ್ಕಿ ಹರಟೆ ನಗುವಲ್ಲಿ ತೊಡಗಿದ್ದರು. ಒಂದು ಕ್ಷಣಕ್ಕೆ ನಾನಿದ್ದ ಕಾಲ ದೇಶ ಯಾವುದು ಎಂದು ನನಗೆ ಗೊತ್ತಾಗಿರಲಿಲ್ಲ.  ಅವರ ಸಂತೋಷವನ್ನು, ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಂಡು ಬದುಕುವ ಛಲವನ್ನು ನಾನು ಅಲ್ಲಿ ಆಗಂತುಕಳಂತೆ ನೋಡುತ್ತಿದ್ದೆ.

ಹೊರಟಾಗ ಆಕಾಶದಲ್ಲಿ ಸೂರ್ಯನಿರಲಿಲ್ಲ. ಸೂರ್ಯಾಸ್ತದ ಬಣ್ಣಗಳು ಮಾತ್ರ ಕಾಣುತ್ತಿದ್ದವು.

ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ ಆಗಷ್ಟೇ ತನ್ನ ನೇಪಾಳದ ಪುಟ್ಟ ಹಳ್ಳಿಗೆ ಹೋಗಿ ವಾಪಾಸು ಬಂದಿದ್ದ. ಅಲ್ಲಿನ ಕಷ್ಟಗಳನ್ನು ಹೇಳಿಕೊಂಡ. ಆದಷ್ಟು ಬೇಗ ಅಲ್ಲಿಗೆ ಮರಳುವುದಾಗಿ ಹೇಳುತ್ತಿದ್ದ. ತಾನು ಇಲ್ಲಿ ಇರುವುದೇ ಸುಳ್ಳೆಂದು, ಕೊರಗುತ್ತಾ, ಇಲ್ಲಿ ಒಂದು ಅವತಾರದಂತೆ ಇರುತ್ತಿದ್ದ. ಇನ್ನು ನಾಳೆಗೆ ಯಾರಿಗೆ ಏನೆಲ್ಲಾ ಅವತಾರವನ್ನು ಧರಿಸಬೇಕೋ ಎಂದುಕೊಳ್ಳುತ್ತಾ ಅಂತೂ ಎಲ್ಲರ ಅವತಾರಗಳೂ ಅವರವರಿಗೆ  ಖುಷಿಕೊಟ್ಟರೆ ಸಾಕು, ಸತ್ಯ ಸುಳ್ಳಿನ ಮನೆ ಹಾಳಾಗಲಿ, ಎಂದುಕೊಳ್ಳುತ್ತಿದ್ದೆ.

ಬೌದ್ಧ ಧರ್ಮದ ಒಂದು ಕಥೆಯಲ್ಲಿ, ಗುರು, ಶಿಷ್ಯರಿಗೆ ಕೈಯ್ಯಲ್ಲಿರುವ ಒಂದು ಕೋಲು ತೋರಿಸುತ್ತಾನೆ. ನೋಡೀ, ಈ ಕೋಲನ್ನು ನೋಡೀ, ಈಗ ನೀವು ಇದನ್ನು ಕೋಲು ಎಂದರೆ ಆಸ್ತಿ ಎಂದ ಹಾಗೆ, ಅಲ್ಲ, ಎಂದರೆ ನಾಸ್ತಿ ಎಂದ ಹಾಗೆ. ಆಸ್ತಿ ನಾಸ್ತಿಗಳೆನ್ನದೆ ಇದೇನು ಹೇಳಿ, ತಟ್ಟನೆ ಹೇಳಿ ಎಂದು ಕೇಳುತ್ತಾನೆ. ಆ ಸಮಯದಲ್ಲಿ ಉತ್ತರಿಸಬೇಕಾದ ತುರ್ತಿನಲ್ಲಿ ಸಾಧಕರು ಸತ್ಯವನ್ನು ಹೇಳಲಾಗದೆ ಎಡವುತ್ತಿದ್ದರಂತೆ. ಈ ಲೋಕದ ತೆಕ್ಕೆಯಲ್ಲಿ ನಾವು ಎಂತಹ ಅನಾಥರು ಅನ್ನಿಸುತ್ತಿತ್ತು.