ಗಲೀನಾ ಹೇಳಿದ ಮೊದಲ ಪ್ರಸಂಗವೆಂದರೆ ತಾಯಿಯೊಬ್ಬಳು ತನ್ನ ಕೂಸನ್ನು ನೀರಲ್ಲಿ ಮುಳುಗಿಸಿದ ಹೃದಯವಿದ್ರಾವಕ ಘಟನೆ. ಹಿಟ್ಲರನ ಸೈನ್ಯ ಸೋವಿಯತ್ ದೇಶದ ಹಳ್ಳಿಯೊಂದನ್ನು ಸುತ್ತುವರಿದಿತ್ತು. ರಾತ್ರಿಯ ಗಾಢಾಂಧಕಾರ ಕಳೆದ ಕೂಡಲೆ ಆ ದಟ್ಟ ಅರಣ್ಯದ ಮಧ್ಯದಲ್ಲಿನ ಹಳ್ಳಿಯ ಮೇಲೆ ಬೆಳಗಿನ ಜಾವ ದಾಳಿ ಮಾಡುವ ಯೋಜನೆಯನ್ನು ಹಿಟ್ಲರನ ಸೈನ್ಯ ರೂಪಿಸಿತ್ತು. ಈ ಸುದ್ದಿ ಗೊತ್ತಾಗಿದ್ದರಿಂದ ಆ ಹಳ್ಳಿಗರು ರಾತ್ರಿಯೆ ಹಳ್ಳಿಯನ್ನು ಬಿಟ್ಟು ಬೇರೆಕಡೆ ಹೋಗಬೇಕಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 53ನೇ ಕಂತು ನಿಮ್ಮ ಓದಿಗೆ.

ಬೈಲೊರಷ್ಯಾ ರಾಜಧಾನಿ ಮಿನ್ಸ್ಕ್ ನಗರದಿಂದ ಲೆನಿನ್‌ಗ್ರಾಡ್‌ಗೆ ಬಂದು ಹೊಟೇಲ್ ಸೇರಿ ರೆಡಿ ಆದಮೇಲೆ, ರಾತ್ರಿಯ ದುಂಡುಮೇಜಿನ ಸಭೆ ಮತ್ತು ಡಿನ್ನರ್‌ಗೆ ಇನ್ನೂ ಒಂದು ಗಂಟೆ ಸಮಯವಿತ್ತು. ಮನಸ್ಸಿನಲ್ಲಿ ಬೈಲೋರಷ್ಯಾದ ನೆನಪುಗಳೇ ತುಂಬಿಕೊಂಡಿದ್ದವು. ಅವೆಲ್ಲವುಗಳಲ್ಲಿ ನಮ್ಮ ಗೈಡ್ ಗಲೀನಾ ನನಗೆ ಹೇಳಿದ ಎರಡು ಪ್ರಸಂಗಗಳು ನನ್ನನ್ನು ಬಹಳ ಕಾಡತೊಡಗಿದವು. ಸೋವಿಯತ್ ದೇಶದ ಜನ ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ನ ಕ್ರೌರ್ಯಕ್ಕೆ ಬಲಿಯಾದ ಪ್ರಸಂಗಗಳು ಸಹಸ್ರ ಸಹಸ್ರ ಇವೆ. ಆ ಎಲ್ಲ ಪ್ರಸಂಗಗಳಿಗೆ ಸಾಂಕೇತವಾಗಿ ಈ ಎರಡು ಪ್ರಸಂಗಗಳಿವೆ ಎಂದು ಅನಿಸತೊಡಗಿತು.

ಗಲೀನಾ ಹೇಳಿದ ಮೊದಲ ಪ್ರಸಂಗವೆಂದರೆ ತಾಯಿಯೊಬ್ಬಳು ತನ್ನ ಕೂಸನ್ನು ನೀರಲ್ಲಿ ಮುಳುಗಿಸಿದ ಹೃದಯವಿದ್ರಾವಕ ಘಟನೆ. ಹಿಟ್ಲರನ ಸೈನ್ಯ ಸೋವಿಯತ್ ದೇಶದ ಹಳ್ಳಿಯೊಂದನ್ನು ಸುತ್ತುವರಿದಿತ್ತು. ರಾತ್ರಿಯ ಗಾಢಾಂಧಕಾರ ಕಳೆದ ಕೂಡಲೆ ಆ ದಟ್ಟ ಅರಣ್ಯದ ಮಧ್ಯದಲ್ಲಿನ ಹಳ್ಳಿಯ ಮೇಲೆ ಬೆಳಗಿನ ಜಾವ ದಾಳಿ ಮಾಡುವ ಯೋಜನೆಯನ್ನು ಹಿಟ್ಲರನ ಸೈನ್ಯ ರೂಪಿಸಿತ್ತು. ಈ ಸುದ್ದಿ ಗೊತ್ತಾಗಿದ್ದರಿಂದ ಆ ಹಳ್ಳಿಗರು ರಾತ್ರಿಯೆ ಹಳ್ಳಿಯನ್ನು ಬಿಟ್ಟು ಬೇರೆಕಡೆ ಹೋಗಬೇಕಿತ್ತು.

(ನೇವಾ ನದಿ ದಂಡೆಯ ಮೇಲಿರುವ ಚಳಿಗಾಲದ ಅರಮನೆ)

ಇಡೀ ಹಳ್ಳಿಯನ್ನು ಫ್ಯಾಸಿಸ್ಟರು ಸುತ್ತುವರಿದಿದ್ದರು. ಹಳ್ಳಿಗರು ಹೋಗಲು ಇರುವ ಒಂದೇ ದಾರಿಯೆಂದರೆ ಹಳ್ಳಿಯ ಪಕ್ಕದಲ್ಲಿ ಹರಿಯುತ್ತಿರುವ ನದಿಯನ್ನು ದಾಟುವುದು. ಆ ಭಯಂಕರ ಚಳಿಯಲ್ಲಿ ಮಧ್ಯರಾತ್ರಿಯ ವೇಳೆ ಹಳ್ಳಿಯ ಜನರು ಸೂಜಿ ಬಿದ್ದರೂ ಕೇಳಿಸುವಂಥ ಮೌನದಲ್ಲಿ ನದಿ ದಾಟುತ್ತಿದ್ದರು. ಒಬ್ಬ ತಾಯಿ ತನ್ನ ಕೂಸನ್ನು ಎತ್ತಿಕೊಂಡು ದಾಟುತ್ತಿದ್ದಳು. ಈ ಕೂಸಿನ ಕಾಲ ಬೆರಳಿಗೆ ನದಿಯ ತಣ್ಣನೆಯ ನೀರು ತಾಗಿತು. ಕೂಡಲೆ ಆ ಕೂಸು ಚಿಟ್ಟನೆ ಚೀರಿತು. ಆ ತಾಯಿ ಕ್ಷಣಾರ್ಧದಲ್ಲಿ ತನ್ನ ಕೂಸನ್ನು ನದಿಯಲ್ಲಿ ಮುಳುಗಿಸಿಬಿಟ್ಟಳು! ಫ್ಯಾಸಿಸ್ಟರಿಗೆ ಸುಳಿವು ಸಿಕ್ಕಿದ್ದರೆ ಗುಂಡಿನ ಸುರಿಮಳೆಗೆರೆದು ಇಡೀ ಹಳ್ಳಿಗರನ್ನು ಕೊಲ್ಲುತ್ತಿದ್ದರು. ಆ ತಾಯಿ ಹೀಗೆ ತನ್ನ ಕೂಸನ್ನೇ ಬಲಿಕೊಟ್ಟು ಹಳ್ಳಿಗರನ್ನು ರಕ್ಷಿಸಿದಳು.

ಇನ್ನೊಂದು ಘಟನೆಯಲ್ಲಿ ಸೋವಿಯತ್ ದೇಶದ ಕೆಂಪುಸೈನ್ಯದ ಯುವ ಸೈನಿಕನೊಬ್ಬ ಫ್ಯಾಸಿಸ್ಟರ ಬಾಂಬುದಾಳಿಗೆ ಈಡಾದ ಯುದ್ಧಟ್ಯಾಂಕ್ ಒಳಗಡೆ ಕುಳಿತಿದ್ದಾನೆ. ಅದರೊಳಗಿದ್ದವರೆಲ್ಲ ಸತ್ತಿದ್ದಾರೆ ಎಂದು ವೈರಿಗಳು ಭಾವಿಸಿ ಅಕ್ಕಪಕ್ಕದಲ್ಲಿ ಬಾಂಬಿಗೀಡಾದ ರಷ್ಯನ್ ಯುದ್ಧಟ್ಯಾಂಕುಗಳ ಕಡೆಗೆ ಹೋದರು. ಯುವಕ ಆ ಹಾಳಾದ ಯುದ್ಧ ಟ್ಯಾಂಕೊಳಗೇ ಕುಳಿತಿರಬೇಕಾಯಿತು. ಟ್ಯಾಂಕಿನ ಕೊಳವೆಯ ಮೂಲಕ ಮಾತ್ರ ಆತ ಹೊರಗಿನ ಜಗತ್ತನ್ನು ನೋಡುವ ಸಾಧ್ಯತೆ ಇತ್ತು. ಆ ಕೊಳವೆಯನ್ನು ತಿರುಗಿಸುವ ಸ್ಥಿತಿಯೂ ಇರಲಿಲ್ಲ. ಅಂಥ ಭಯಾನಕ ಸ್ಥಿತಿಯಲ್ಲೂ ಆ ಕೊಳವೆಯಿಂದಲೇ ಆತ ಸೃಷ್ಟಿಯ ಸೌಂದರ್ಯವನ್ನು ಸವಿಯುತ್ತಿದ್ದ. “ಈ ಸುಂದರ ಜಗತ್ತಿನಲ್ಲಿ ನನ್ನ ಜನ ಬದುಕಲೆಂಬ ಬಯಕೆಗಾಗಿ ನಾನು ಸಾಯಲೂ ಸಿದ್ಧನಿದ್ದೇನೆ” ಎಂದು ತನ್ನಲ್ಲಿದ್ದ ಹಾಳೆಯ ತುಣುಕೊಂದರಲ್ಲಿ ಬರೆದ. ಫ್ಯಾಸಿಸ್ಟರು ಅವನನ್ನು ಕೊನೆಗೂ ಪತ್ತೆ ಹಚ್ಚಿ ಕೊಂದರು. ಆತನ ಮೃತದೇಹದ ಬಳಿ ಈ ಚೀಟಿ ಇತ್ತು!

(ಲೆನಿನ್‍ಗ್ರಾಡ್ (ಸೇಂಟ್ ಪೀಟರ್ಸ್‍ಬರ್ಗ್)

ಲೆನಿನ್‌ಗ್ರಾಡ್‌ನ ಆ ಹೋಟೆಲ್‌ನಲ್ಲೇ ರಾತ್ರಿಯ ಸಭೆ ಮತ್ತು ಊಟದ ವ್ಯವಸ್ಥೆಯಾಗಿತ್ತು. ವಿಮಾನ ಇಳಿಯುವಾಗಿನ ಮೋಡಮುಸುಕಿದ ವಾತಾವರಣ ಹೋಗಿ ಬೆಳಕು ಮೂಡಿತ್ತು.

ಸಭಾಸ್ಥಾನಕ್ಕೆ ಹೋಗುವಾಗ ರಿಷೆಪ್ಷನ್‌ನಲ್ಲಿ ಯುವತಿಯೊಬ್ಬಳು ಎಡಗೈ ಮುಷ್ಟಿ ಮಾಡಿಕೊಂಡು, ಮುಷ್ಟಿಯಿಂದಾದ ಗಂಟುಗಳ ಮೇಲೆ ಬಲಗೈ ಬೆರಳುಗಳನ್ನು ಆಡಿಸುತ್ತ ಲೆಕ್ಕ ಮಾಡಿ ಬಿಲ್ ತಯಾರಿಸುತ್ತಿದ್ದುದನ್ನು ನೋಡಿ ಆಶ್ಚರ್ಯವೆನಿಸಿತು. ಚಿಕ್ಕ ಕಟ್ಟಿಗೆ ಮಣಿಗಳಿಂದ ಕೂಡಿದ ತಂತಿಯ ಸಾಲುಗಳನ್ನು ಹೊಂದಿರುವ ಪುಟ್ಟ ಚೌಕಟ್ಟಿನಲ್ಲಿ ಆ ಮಣಿಗಳನ್ನು ಸರಿಸಾಡುತ್ತ ಲೆಕ್ಕ ಮಾಡುವುದನ್ನು ಮಾಸ್ಕೋದಲ್ಲಿ ನೋಡಿದ್ದೆ. ಆದರೆ ಇಲ್ಲಿ ನೋಡಿದ್ದು ಅದಕ್ಕಿಂತ ಆಶ್ಚರ್ಯಕರವಾಗಿತ್ತು. ಆ ವೇಳೆಗಾಗಲೇ ಕಡು ಬಡರಾಷ್ಟ್ರಗಳು ಕೂಡ ಕ್ಯಾಲ್ಕುಲೇಟರ್ ಬಳಸುತ್ತಿದ್ದವು. ಆದರೆ ಸೋವಿಯತ್ ದೇಶದಲ್ಲಿ ಎಲ್ಲೂ ಕ್ಯಾಲ್ಕುಲೇಟರ್ ಕಾಣಲಿಲ್ಲ!

(ಟ್ರ್ಯಾಮ್ (ರಸ್ತೆ ರೈಲು)

ಸಭೆಗೆ ಬಂದವರಲ್ಲಿ ಒಬ್ಬರು ಇತಿಹಾಸದ ಪ್ರಾಧ್ಯಾಪಕಿ ಇದ್ದರು. ಆಕೆಯ ಹೆಸರು ಲುಡ್ಮಿಲಾ. ತನ್ನ ಗಂಡನ ಹೆಸರು ಯಾಜ್ಞವಲ್ಕೋವ್ ಎಂದು ಮಾತನಾಡುವ ಪ್ರಸಂಗದಲ್ಲಿ ತಿಳಿಸಿದಳು. ನನಗೆ ಆಶ್ಚರ್ಯವೆನಿಸಿತು. ಇದು ನಮ್ಮ ದೇಶದ ಯಾಜ್ಞವಲ್ಕ್ಯ ಎಂಬ ಋಷಿಯ ಹೆಸರು. ಆತನ ಕೃತಿ ‘ಯಾಜ್ಞವಲ್ಕ್ಯ ಸ್ಮೃತಿ’ ಆ ಸ್ಮೃತಿಯನ್ನು ಮಿತಗೊಳಿಸಿ ಮಿತಾಕ್ಷರ ಎಂಬ ನ್ಯಾಯಶಾಸ್ತ್ರ ರಚಿಸಿದ ಕೀರ್ತಿ ೧೧ನೇ ಶತಮಾನದಲ್ಲಿ ಕಲ್ಯಾಣದ ೬ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರನಿಗೆ ಸಲ್ಲುತ್ತದೆ ಎಂದು ಹೇಳಿದಾಗ ಅವಳು ಆಶ್ಚರ್ಯಪಟ್ಟಳು. ರಷ್ಯನ್ ಮತ್ತು ಸಂಸ್ಕೃತ ಸಹೋದರಿ ಭಾಷೆಗಳೆಂದು ವಿವರಿಸಿದೆ.

ರಷ್ಯನ್ ಭಾಷೆ ಸ್ಲಾವ್ ಭಾಷಾ ಗುಂಪಿಗೆ ಸೇರುತ್ತದೆ. ಆ ಭಾಷಾ ಗುಂಪು ಇಂಡೋ ಯುರೋಪಿನ್ ಭಾಷಾ ಕುಟುಂಬದ ಭಾಗವಾಗಿದೆ. ಇದು ಜಗತ್ತಿನಲ್ಲಿ ಅತ್ಯಂತ ದೊಡ್ಡ ಭಾಷಾ ಕುಟುಂಬ. ಈಸ್ಟ್ ಇಂಡಿಯಾ ಕಂಪನಿಯ ರಾಜಧಾನಿಯಾಗಿದ್ದ ಕಲ್ಕತ್ತಾದಲ್ಲಿನ ಸುಪ್ರೀಂ ಕೋರ್ಟಿಗೆ ೧೭೮೩ರಲ್ಲಿ ನ್ಯಾಯಮೂರ್ತಿಗಳಾಗಿ ಬಂದ ಸರ್ ವಿಲಿಯಂ ಜೋನ್ಸ್ (೧೭೪೬ – ೧೭೯೪) ಅವರು ೨೮ ಭಾಷೆಗಳನ್ನು ಮಾತನಾಡುವ ಬಹುಭಾಷಾ ಪಂಡಿತರಾಗಿದ್ದರು. ಅವರು ಲ್ಯಾಟಿನ್, ಗ್ರೀಕ್, ಪಾರ್ಸಿ, ಸ್ಲಾವ್, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳು ಇಂಡೋ ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ ಸಹೋದರಿ ಭಾಷೆಗಳು ಎಂಬುದನ್ನು ಕಂಡು ಹಿಡಿದ ಮೊದಲಿಗರು. ಅಂತೆಯೆ ಅವರಿಗೆ “ತೌಲನಿಕ ಭಾಷಾವಿಜ್ಞಾನದ ಮೂಲಪುರುಷ” ಎಂದು ಕರೆಯಲಾಗುತ್ತಿದೆ. ಈ ಭಾಷೆಗಳ ಜೊತೆ ಹೀಬ್ರೂ, ಅರೆಬಿಕ್, ಚೈನೀಸ್ ಮುಂತಾದ ಭಾಷೆಗಳನ್ನು ಬಲ್ಲವರಾಗಿದ್ದರು. ಭಾರತೀಯರಿಗೆ ನ್ಯಾಯ ಒದಗಿಸಲು ಅವರ ಧರ್ಮಗ್ರಂಥಗಳನ್ನು ಓದುವುದಕ್ಕಾಗಿ ಸಂಸ್ಕೃತ ಕಲಿತರು. ಆಗ ಅವರು ಇಂಡೋ ಯುರೋಪಿಯನ್ ಭಾಷೆಗಳ ಅಂತರ್ ಸಂಬಂಧದ ಬಗ್ಗೆ ಅರಿತುಕೊಂಡು ಭಾಷಾವಿಜ್ಞಾನಕ್ಕೆ ಬಹುದೊಡ್ಡ ಉಪಕಾರ ಮಾಡಿದರು. ೧೭೮೪ರಲ್ಲಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸ್ಥಾಪಿಸಿ ಓರಿಯಂಟಲ್ ಅಧ್ಯಯನಕ್ಕೆ ಚಾಲನೆ ನೀಡಿದರು.

ಈ ಹಿನ್ನೆಲೆಯಲ್ಲಿ ಸಂಸ್ಕೃತ ಭಾರತದ ಮೂಲ ಭಾಷೆಯಾಗಲು ಸಾಧ್ಯವಿಲ್ಲ. ‘ಗೋಪಾಲಕರಾದ ಆರ್ಯರು ದನಗಳನ್ನು ಮೇಯಿಸುತ್ತ ಏಷ್ಯಾ ಮೈನರ್‌ನಿಂದ ಭಾರತಕ್ಕೆ ಬಂದರು’ ಎಂದು ಇತಿಹಾಸಕಾರರ ಒಂದು ಗುಂಪು ಹೇಳುವುದು ಸರಿ ಎನಿಸುತ್ತದೆ. ಏಷ್ಯಾ ಮೈನರ್ ಇಂದಿನ ಟರ್ಕಿಯ ಏಷ್ಯಾಭಾಗವಾದಲ್ಲಿರುವ ಅನಾಟೊಲಿ ಪ್ರದೇಶವಾಗಿದೆ. ಹೀಗೆ ಏಷ್ಯಾ ಮತ್ತು ಯುರೋಪ್ ಭಾಗವಾಗಿರುವ ಟರ್ಕಿದೇಶದ ಟರ್ಕಿಷ್, ಪಾರ್ಸಿ, ರಷ್ಯನ್, ಇಂಗ್ಲಿಷ್, ಸಂಸ್ಕೃತ ಮುಂತಾದವು ಒಂದೇ ಭಾಷಾ ಕುಟುಂಬಕ್ಕೆ ಸೇರಿದ್ದರಿಂದಲೇ ರಷ್ಯಾದಲ್ಲಿ ಯಾಜ್ಞವಲ್ಕ್ಯ ಹೆಸರು ಇರಲು ಸಾಧ್ಯವಾಯಿತು. ರಷ್ಯನ್ ವ್ಯಾಕರಣ ಮತ್ತು ಸಂಸ್ಕೃತ ವ್ಯಾಕರಣದ ಮೂಲ ರಚನೆ ಒಂದೇ ತೆರನಾಗಿದೆ. ಹೀಗೆ ತರ್ಕಿಸುತ್ತ ಹೋದಂತೆಲ್ಲ ಮೊಹೆಂಜೋದಾರೊ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯಾಗಿದ್ದು ಆರ್ಯರು ಹೊರಗಿನಿಂದ ಬಂದವರು ಎಂಬ ವಾದಕ್ಕೆ ಪುಷ್ಟಿ ಸಿಕ್ಕಂತಾಗುತ್ತದೆ.

ದ್ರಾವಿಡ ಮೂಲದ ಕನ್ನಡ ಭಾಷೆಯ ಸಹೋದರಿ ಭಾಷೆಯಾದ ಬ್ರಾಹೂಇ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿದೆ. ಬಲೂಚಿಸ್ತಾನದಲ್ಲಿ ಬ್ರಾಹೂಇ ಮಾತನಾಡುವ ಪ್ರದೇಶ ಮೊಹೆಂಜೊದಾರೊಗೆ ಹತ್ತಿರದಲ್ಲೇ ಇದೆ. ಆ ಭಾಗದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಬ್ರಾಹೂಇ ಭಾಷೆಯನ್ನು ಮಾತನಾಡುತ್ತಾರೆ. ಪಾಕಿಸ್ತಾನದಲ್ಲಿ ದ್ರಾವಿಡ ಮೂಲದ ಭಾಷೆ ಇದೊಂದೇ. ಮಹೆಂಜೋದಾರೊ ಮತ್ತು ಬ್ರಾಹೂಇ ಭಾಷಾ ಸಂಬಂಧದ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕಿದೆ.

(ಅಲೆಕ್ಸಾಂಡರ್ ಪುಷ್ಕಿನ್)

ದುಂಡುಮೇಜಿನ ಸಭೆ ಪ್ರಾರಂಭವಾದಾಗ ಅಲ್ಲಿನ ಹಿರಿಯ ಸಾಹಿತಿಯೊಬ್ಬರು ಆಧುನಿಕ ರಷ್ಯನ್ ಸಾಹಿತ್ಯದ ಹರಿಕಾರ ಅಲೆಕ್ಸಾಂಡರ್ ಪುಷ್ಕಿನ್ (೧೭೯೯-೧೮೩೭) ಕುರಿತು ಮಾತನಾಡಿದರು. ನಾನು ೧೦ನೇ ಶತಮಾನದ ಪಂಪ ಮಹಾಕವಿಯ ಕುರಿತು ಮಾತನಾಡಿದೆ. ಕನ್ನಡ ಸಾಹಿತ್ಯದ ಆರಂಭ ಕಾಲಘಟ್ಟದಲ್ಲೇ ಪಂಪ ಎಂಥ ವೈಚಾರಿಕ ಪ್ರಜ್ಞೆಯ ಕವಿಯಾಗಿದ್ದ ಎಂಬುದನ್ನು ವಿವರಿಸಿದೆ. ಜೈನ ಸಿದ್ಧಾಂತದ ಮಾನವ ಏಕತೆಯ ಪ್ರಜ್ಞೆಯನ್ನು ಕನ್ನಡ ಸಾಹಿತ್ಯದಲ್ಲಿ ಒಡಮೂಡಿಸಿದ ಆತನ ಪ್ರತಿಭೆಯ ಕುರಿತು ಹೇಳಿದೆ. ಸಭೆಯಲ್ಲಿನ ಪುರಾತತ್ವ ತಜ್ಞರು ಪ್ರಾಚೀನ ಇಮಾರತುಗಳನ್ನು ಸೋವಿಯತ್ ದೇಶದಲ್ಲಿ ಸಂರಕ್ಷಿಸಿದ ಬಗೆಯ ಕುರಿತು ತಿಳಿಸಿದರು.

ಸಭೆ ಕೊನೆಗೊಂಡು ಊಟವಾದ ನಂತರ ತಿರುಗಾಡಲು ಹೋದೆವು. ಆಗ ರಾತ್ರಿ ೧೦ ಗಂಟೆಯಾಗಿತ್ತು. ನಮ್ಮಲ್ಲಿ ಸಾಯಂಕಾಲ ೪ ಗಂಟೆ ಆದ ಹಾಗೆ ಕಾಣುತ್ತಿತ್ತು. ರಾತ್ರಿ ೧೧ ಗಂಟೆಯವರೆಗೆ ಸುತ್ತುತ್ತಿದ್ದೆವು. ಆಗ ಮೂವರು ಹುಡುಗಿಯರು ಎದುರಾದರು. ಅವರು ಅರ್ಧಮರ್ಧ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಅವರು ವಿದ್ಯಾರ್ಥಿನಿಯರು ಎಂಬುದು ಗೊತ್ತಾಯಿತು. ನಾವು ಪ್ರವಾಸಿಗರು ಎಂಬುದು ನಮ್ಮನ್ನು ನೋಡುತ್ತಲೇ ಅವರಿಗೆ ತಿಳಿಯಿತು. ‘ಕಮ್, ಓನ್ಲಿ ೫೦ ಡಾಲರ್’ ಎಂದು ಒಬ್ಬ ಹುಡುಗಿ ಹೇಳಿದಳು. ನಾವು ಹಾಗೇ ಮುಂದೆ ಬಂದೆವು. ಮರುದಿನ ನಮ್ಮ ಅಲ್ಲಿನ ಗೈಡ್ ತಾನ್ಯಾಗೆ ಈ ಕುರಿತು ತಿಳಿಸಿದೆ. ಈ ಹುಡುಗಿಯರು ಒಳನಾಡುಗಳಿಂದ ಓದಲು ಬರುತ್ತಾರೆ. ಅವರಲ್ಲಿ ಕೆಲವರು ವಿದೇಶಿ ವಸ್ತುಗಳ ಆಸೆಗಾಗಿ ಇಲ್ಲಿನ ಯುರೋಪಿಯನ್ ಪ್ರವಾಸಿಗರ ಜೊತೆ ಸಂಬಂಧ ಬೆಳೆಸುತ್ತಾರೆ. ಅವರಿಂದ ಪಡೆದ ಡಾಲರ್ ತೆಗೆದುಕೊಂಡು ಹೋಗಿ ಡಾಲರ್ ಶಾಪ್‌ಗಳಲ್ಲಿ ವಿದೇಶಿ ವಸ್ತುಗಳನ್ನು ಖರೀದಿಸುತ್ತಾರೆ. ಇಂಥ ಸಂಬಂಧ ಕೆಲವೊಂದು ಕಡೆ ಗುಟ್ಟಾಗಿ ನಡೆಯುತ್ತದೆ ಎಂದರು.

ಚಿಕ್ಕ ಕಟ್ಟಿಗೆ ಮಣಿಗಳಿಂದ ಕೂಡಿದ ತಂತಿಯ ಸಾಲುಗಳನ್ನು ಹೊಂದಿರುವ ಪುಟ್ಟ ಚೌಕಟ್ಟಿನಲ್ಲಿ ಆ ಮಣಿಗಳನ್ನು ಸರಿಸಾಡುತ್ತ ಲೆಕ್ಕ ಮಾಡುವುದನ್ನು ಮಾಸ್ಕೋದಲ್ಲಿ ನೋಡಿದ್ದೆ. ಆದರೆ ಇಲ್ಲಿ ನೋಡಿದ್ದು ಅದಕ್ಕಿಂತ ಆಶ್ಚರ್ಯಕರವಾಗಿತ್ತು. ಆ ವೇಳೆಗಾಗಲೇ ಕಡು ಬಡರಾಷ್ಟ್ರಗಳು ಕೂಡ ಕ್ಯಾಲ್ಕುಲೇಟರ್ ಬಳಸುತ್ತಿದ್ದವು. ಆದರೆ ಸೋವಿಯತ್ ದೇಶದಲ್ಲಿ ಎಲ್ಲೂ ಕ್ಯಾಲ್ಕುಲೇಟರ್ ಕಾಣಲಿಲ್ಲ!

ರೂಮಿಗೆ ಬಂದ ಮೇಲೂ ಸೂರ್ಯ ಮುಳುಗಿರಲಿಲ್ಲ. ಆಗ ಕತ್ತಲೆಯ ಮಹತ್ವ ಗೊತ್ತಾಯಿತು. ಅಲ್ಲಿನ ಕಿಟಕಿಗಳಿಗೆ ದಪ್ಪನೆಯ ಮತ್ತು ತೆಳ್ಳನೆಯ ಕರ್ಟನ್‌ಗಳಿರುತ್ತವೆ. ಎರಡೂ ಕರ್ಟನ್‌ಗಳನ್ನು ಹಾಕಿದಾಗ ಮಾತ್ರ ಕತ್ತಲೆ ಆವರಿಸುತ್ತದೆ. ಆಗ ನಿದ್ದೆ ಮಾಡಲು ಸಾಧ್ಯ. ಕೆಲವೊಂದು ಸಮಯದಲ್ಲಿ ಕೇವಲ ಒಂದೆರಡು ಗಂಟೆಗಳವರೆಗೆ ಮಾತ್ರಿ ರಾತ್ರಿಗಳು ಇರುತ್ತವಂತೆ. ಬೆಳಕೂ ಕತ್ತಲೆಯೂ ಸುಖದ ಬದುಕಿನ ಅವಿಭಾಜ್ಯ ಅಂಗಗಳಾಗಿವೆ.

ಮರುದಿನ ಪುಷ್ಕಿನ್ ಮನೆಗೆ ಭೇಟಿ ಕೊಟ್ಟೆವು. ಚೈಕಾ ಕಾರಲ್ಲಿ ಕೂಡುವುದೇ ಖುಷಿ. ಆದರೆ ಪ್ರತಿ ಸಲ ಕಾರು ನಿಂತಾಗ ಡ್ರೈವರ್ ಬಂದು ಕಾರಿನ ಬಾಗಿಲು ತೆಗೆಯುತ್ತಿದ್ದರು. ಅವರು ಹಿರಿಯ ವಯಸ್ಸಿನ ಎತ್ತರದ ವಿನಮ್ರ ವ್ಯಕ್ತಿಯಾಗಿದ್ದರು. ‘ನೀವು ಹೀಗೆ ಬಂದು ಕಾರಿನ ಬಾಗಿಲ ತೆಗೆಯುವುದು ನನಗೆ ಮುಜುಗರ ಎನಿಸುತ್ತಿದೆ. ಬಾಗಿಲು ತೆಗೆಯುವುದರಲ್ಲಿ ನನಗೆ ಯಾವ ಸಮಸ್ಯೆಯೂ ಇಲ್ಲ.’ ಎಂದೆ. ಅದಕ್ಕೆ ಅವರು ಮುಗುಳ್ನಗುತ್ತ ನನಗೆ ನನ್ನ ಕೆಲಸವನ್ನು ಪೂರ್ತಿಯಾಗಿ ಮಾಡಿದಾಗಲೇ ಸಂತೋಷ ಎಂದು ಹೇಳಿದ್ದನ್ನು ತಾನ್ಯಾ ಇಂಗ್ಲಿಷ್‌ಗೆ ಅನುವಾದ ಮಾಡಿ ತಿಳಿಸಿದಳು. ಅವರ ಘನತೆವೆತ್ತ ವ್ಯಕ್ತಿತ್ವ ನನಗೆ ಹಿಡಿಸಿತು.

(ಪುಷ್ಕಿನ್ ಹೌಸ್)

ನಂತರ ನಾವು ವಾರ್ ಮ್ಯೂಜಿಯಮ್‌ಗೆ ಹೋದೆವು. ಆ ಯುದ್ಧ ವಸ್ತು ಸಂಗ್ರಹಾಲಯ ಫ್ಯಾಸಿಸ಼ಂ ಕ್ರೌರ್ಯವನ್ನು ಮತ್ತು ರಷ್ಯನ್ನರ ಶೌರ್ಯವನ್ನು ತೋರಿಸುವಂಥದ್ದಾಗಿತ್ತು. ಅಲ್ಲಿ ಅನೇಕ ವೀರರ ತೈಲವರ್ಣದ ಚಿತ್ರಗಳಿದ್ದವು. ಅವುಗಳಲ್ಲಿ ಆ ದಿನದ ನಮ್ಮ ಚಾಲಕರ ಚಿತ್ರವೂ ಇತ್ತು. ಮಿಲಿಟರಿ ಸಮವಸ್ತ್ರದಲ್ಲಿದ ಅವರ ಫುಲ್ ಸೈಜ಼್ ಚಿತ್ರ ಅದಾಗಿತ್ತು. ಆ ಚಿತ್ರ ತೋರಿಸಿದ ತಾನ್ಯಾ ಈ ಚಿತ್ರ ಇದೇ ಚಾಲಕರದು ಎಂದು ವಿವರಿಸಿದರು. ಅವರು ಎರಡನೇ ಮಹಾಯುದ್ಧದಲ್ಲಿ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದವರಾಗಿದ್ದರು. ಈಗ ಈ ಇಳಿವಯಸ್ಸಿನಲ್ಲೂ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ಎಲ್ಲವನ್ನೂ ಸಮಾನ ಕಾಯಕ ಎಂದೇ ಪರಿಗಣಿಸಲಾಗುತ್ತದೆ. ಯಾವುದೂ ಮೇಲಲ್ಲ, ಕೀಳಲ್ಲ ಎಂಬುದು ಅವರ ಚಿಂತನಾಕ್ರಮವಾಗಿರುವುದನ್ನು ತಾಷ್ಕೆಂಟಿಂದಲೂ ನೋಡುತ್ತ ಬಂದಿದ್ದರಿಂದ ಈಗ ಇನ್ನೂ ಹೆಚ್ಚಿನ ಖುಷಿಯಾಯಿತು. ತಾನ್ಯಾಳ ಸಹಾಯದಿಂದ ಆ ಹಿರಿಯ ವ್ಯಕ್ತಿಯ ಕೂಡ ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಿದ್ದೆ.

ನೀವು ಸುಖಪುರಷರ ಹಾಗೆ ಕಾಣುತ್ತೀರಿ ಎಂದು ಆ ಡ್ರೈವರ್‌ಗೆ ಹೇಳಿದೆ. ಅವರು ನಗುತ್ತ ಹೇಳಿದರು. “ನಾನು ನಿಜವಾಗಿಯೂ ಸುಖಪುರುಷ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ನಾನು ನನ್ನ ದೇಶದ ರಕ್ಷಣೆಗಾಗಿ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ. ಎರಡನೆಯದಾಗಿ ನಾನು ಮತ್ತು ನನ್ನ ಹೆಂಡತಿ ಕಳೆದ ೪೦ ವರ್ಷಗಳಿಂದ ಸಂತೋಷದಿಂದ ಬದುಕುತ್ತಿದ್ದೇವೆ. ನನಗೆ ಒಬ್ಬಳು ಮಗಳಿದ್ದಾಳೆ. ಅವಳಿಗೆ ಒಂದು ಹೆಣ್ಣುಮಗು ಇದೆ. ಎಲ್ಲರೂ ಅನ್ಯೋನ್ಯವಾಗಿದ್ದೇವೆ. ಎಂದು ತಿಳಿಸಿದರು. ಆಶ್ಚರ್ಯವೆಂದರೆ ಸಿಗ್ನಲ್ ಬಂದಾಗ ಅವರ ಮಗಳು ಮತ್ತು ಮೊಮ್ಮಗಳು ರಸ್ತೆ ದಾಟುತ್ತಿದ್ದರು. ಡ್ರೈವರ್ ಅವರಿಗೆ ಕೈ ಬೀಸಿದರು. ಅವರೂ ಖುಷಿಯಿಂದ ಕೈ ಬೀಸಿದರು. ವಿಶ್ವದಲ್ಲೇ ಅತಿಹೆಚ್ಚು ವಿವಾಹ ವಿಚ್ಛೇದನವಾಗುವ ದೇಶದಲ್ಲಿ, ಮದುವೆಯಾಗದೆ ಮಕ್ಕಳನ್ನು ಪಡೆಯುವುದಕ್ಕೆ ಕಾನೂನಿನ ರಕ್ಷಣೆ ಮತ್ತು ಸಾಮಾಜಿಕ ಮನ್ನಣೆ ದೊರೆತ ದೇಶದಲ್ಲಿ ಇಂಥ ಒಂದು ಸುಂದರ ಕುಟುಂಬ ಸ್ತ್ರೀ ಪುರುಷ ಸ್ವಾತಂತ್ರ್ಯ ಮತ್ತು ಸಮಾನತೆಗೆ ದಾರಿ ತೋರಿಸಬಹುದಲ್ಲ ಎಂದು ಅನಿಸಿತು.

ನಾನು ಸೋವಿಯತ್ ದೇಶಕ್ಕೆ ಹೋಗುವಾಗ ಕೀ ಚೈನ್, ರಿಂಗ್, ಇಯರ್ ರಿಂಗ್, ಮೈಸೂರು ಸ್ಯಾಂಡಲ್ ಸೋಪ್ ಮುಂತಾದ ಚಿಕ್ಕ ಚಿಕ್ಕ ಕಾಣಿಕೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಅಷ್ಟೊತ್ತಿಗಾಗಲೆ ಎಲ್ಲ ಕಾಣಿಕೆಗಳನ್ನು ಕೊಟ್ಟಾಗಿತ್ತು. ಇಯರ್ ರಿಂಗ್ ಮಾತ್ರ ಉಳಿದಿದ್ದವು. ಹೀಗಾಗಿ ಅವರಿಗೆ ಒಂದು ರೂಪಾಯಿ ಕ್ವಾಯಿನ್ ಅನ್ನು ನೆನಪಿಗಾಗಿ ಕೊಡಲು ಹೋದೆ. ಹಾಗೆ ತೆಗದುಕೊಳ್ಳುವುದು ಅಪರಾಧವಾಗುತ್ತದೆ ಎಂದು ಅವರು ಹೇಳಿದರು. ಇದರ ಬಳಕೆಯಾಗದು. ಇದು ನೆನಪಿಗಾಗಿ ಮಾತ್ರ ಎಂದು ಹೇಳಿದಾಗ ತೆಗೆದುಕೊಂಡರು. ಅವರು ನರ್ಗಿಸ್ ಬಗ್ಗೆ ಕೇಳಿದರು. ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದಕ್ಕೆ ಖೇದ ವ್ಯಕ್ತಪಡಿಸಿದರು.

(ಬ್ಲಡಿ ಸಂಡೆ ಸ್ಕ್ವಯರ್)

ನಂತರ ‘ಬ್ಲಡಿ ಸಂಡೇ ಸ್ಕ್ವಯರ್’ಗೆ ಹೋದೆವು. ೧೯೦೫ನೇ ಜನವರಿ ೨೨ರಂದು ಭಾನುವಾರ ಆ ಜಾಗದಲ್ಲಿ ಝಾರ್ (Tsar) ದೊರೆಯ ಸೈನಿಕರು ಕಾರ್ಮಿಕರ ಮೇಲೆ ಗುಂಡಿನ ದಾಳಿ ಮಾಡಿದ ಸ್ಥಳವದು. (ಆಗ ಲೆನಿನ್‌ಗಾರ್ಡ್ ಹೆಸರು ಸೇಂಟ್ ಪೀಟರ್ಸ್‌ಬರ್ಗ್ ಎಂದಿತ್ತು. ಕ್ರಾಂತಿಯ ನಂತರ ಲೆನಿನ್‌ಗಾರ್ಡ್ ಆಯಿತು. ಈಗ ಮತ್ತೆ ಆ ಹಳೆಯ ಹೆಸರೇ ಬಂದಿದೆ.) ಲೆನಿನ್‌ಗ್ರಾಡಿನ ಆ ಚೌಕ್, ರಷ್ಯದ ಝಾರ್ ದೊರೆಗಳ ಚಳಿಗಾಲದ ಅರಮನೆಯ ಬಳಿ ಇದೆ.

ಕಡಿಮೆ ವೇತನ, ೮ ಗಂಟೆಗೆ ಸೀಮಿತವಾಗದ ವಿಪರೀತ ಕೆಲಸ, ಕಾರ್ಖಾನೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದ ಸ್ಥಿತಿ ಮತ್ತು ಕಾರ್ಮಿಕರ ಜೊತೆಗೆ ಅಸಭ್ಯ ನಡವಳಿಕೆಯನ್ನು ವಿರೋಧಿಸಿ, ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು ಕಾರ್ಮಿಕರು ಅರಮನೆಯ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಡಿಸಿದ್ದರು. ಭಾನುವಾರ ಬೆಳಿಗ್ಗೆ ಪ್ರಾರಂಭವಾದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಕಾರ್ಖಾನೆಗಳ ೧.೫ ಲಕ್ಷ ಕಾರ್ಮಿಕರು ಭಾಗವಹಿಸಿದ್ದರು. ಮೊದಲೇ ನಿಗದಿಪಡಿಸಿದ ಆರು ಸ್ಥಳಗಳಲ್ಲಿ ಜಮಾಯಿಸಿದ ಅವರೆಲ್ಲ ಚಳಿಗಾಲದ ಅರಮನೆಯ ಕಡೆಗೆ ಬಂದು ರಾಜನಿಗೆ ತಮ್ಮ ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸುವ ಉದ್ದೇಶವನ್ನು ಹೊಂದಿದ್ದರು.

(ಕ್ರಾಂತಿಕಾರಿ ಪಾದ್ರಿ ಜಾರ್ಜಿ ಗಪೋನ್)

ಕಡುಸಂಪ್ರದಾಯನಿಷ್ಠ ಚರ್ಚಿನ ಪಾದ್ರಿ ಜಾರ್ಜಿ ಗಪೋನ್ ಕ್ರಾಂತಿಕಾರಿಯಾಗಿ ಈ ಹೋರಾಟದ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ಝಾರ್ ದೊರೆ ಇಮ್ಮಡಿ ನಿಕೊಲಸ್ ಅರಮನೆಯಲ್ಲಿ ಇರಲಿಲ್ಲ. ಪ್ರತಿಭಟನಾ ಚಳವಳಿ ಚಳಿಗಾಲದ ಅರಮನೆಯಿಂದ ಇನ್ನೂ ದೂರವಿದ್ದಾಗಲೇ ಸೈನಿಕರು ನಿಶ್ಶಸ್ತ್ರ ಕಾರ್ಮಿಕರ ಮೇಲೆ ಗುಂಡಿನ ಸುರಿಮಳೆಗೆರೆದರು. ಆಗ ೨೦೦ ಕಾರ್ಮಿಕರು ಹುತಾತ್ಮರಾದರು. ೮೦೦ ಕಾರ್ಮಿಕರು ಗಾಯಗೊಂಡರು. ಗಪೋನ್ ಮುನ್ನಡೆಸುತ್ತಿದ್ದ ಒಂದು ಗುಂಪಿನಲ್ಲಿ ೪೦ ಜನ ಕಾರ್ಮಿಕರು ಗುಂಡಿಗೆ ಆಹುತಿಯಾದರು. “There is no God anymore, there is no Tsar” ಎಂದು ಗಪೋನ್ ಚೀರಿ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆ “ಬ್ಲಡಿ ಸಂಡೆ” ಎಂದು ಪ್ರಸಿದ್ಧವಾಯಿತು. ದೇಶದ ಎಲ್ಲೆಡೆ ಕ್ರಾಂತಿಯ ಮನೋಭಾವ ಬೆಳೆಯತೊಡಗಿತು. ಸರ್ಕಾರಿ ಏಜೆಂಟ್‌ನಿಂದ ಗಪೋನ್ ಕೊಲೆಯಾಯಿತು. ಅದೇ ವರ್ಷ (೧೯೦೫) ರಷ್ಯಾದಲ್ಲಿ ನಡೆದ ಮೊದಲ ಕ್ರಾಂತಿಗೆ ಕಾರಣವಾದ ಘಟನೆಗಳಲ್ಲಿ ಈ ಕಾರ್ಮಿಕ ಹೋರಾಟ ಪ್ರಮುಖವಾದುದು. ತದನಂತರ ೧೯೧೭ನೇ ಅಕ್ಟೋಬರ್ ೨೫ರಂದು ನಡೆದ ಅಕ್ಟೋಬರ್ ಮಹಾಕ್ರಾಂತಿಯವರೆಗೆ ಇಂಥ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿದವು.