ಚೆಪಾವ್ಸಕಾಯ್ಟೆಯವರು ನೆಲದ ಮೇಲೆ ಭದ್ರವಾಗಿ ನಿಂತಿರುವ ಕವಿ. ಅವರ ರೂಪಕಗಳು ಒರಟಾಗಿರುತ್ತವೆ, ಮಣ್ಣಿನ ಕಂಪು ಸೂಸುತ್ತವೆ, ಕೆಲವೊಮ್ಮೆ ಸರ್ವೇಸಾಮಾನ್ಯವಾಗಿರುತ್ತವೆ. ಯಾವ ವಿಷಯವೂ ಅವರನ್ನು ಬುಡಸಮೇತ ಕಿತ್ತುಹಾಕಲು ಅಥವಾ ಸ್ವರ್ಗಕ್ಕೆ ಏರಿಸಲು ಸಾಧ್ಯವಿಲ್ಲ. ಅವರ ಕಾವ್ಯ ಪ್ರಪಂಚ ವಿಶೇಷವಾಗಿ ಬೆಚ್ಚನೆಯ ಹಿತವಾದ ಪ್ರಪಂಚ. ಒಂದು ಬೆಕ್ಕನ್ನು ಪಳಗಿಸುವಂತೆ ಆ ಪ್ರಪಂಚದ ಪ್ರತಿಯೊಂದು ಅಂಶವನ್ನು ಪಳಗಿಸಿದ್ದಾರೆ. ಕಾವ್ಯದಲ್ಲಿ ಹಿತಕರವೆನ್ನುವುದು ಒಂದು ಸದ್ಗುಣ ಅಂತಲ್ಲ, ಆದರೆ ಅದನ್ನು ಹೇಗೆ ನಿರ್ವಹಿಸಬೇಕೆಂದು ಚೆಪಾವ್ಸಕಾಯ್ಟೆಯವರಿಗೆ ಗೊತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಡಾಯಿವ ಚೆಪಾವ್ಸಕಾಯ್ಟೆ (Daiva Čepauskaitė) ಯವರ ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಡಾಯಿವ ಚೆಪಾವ್ಸಕಾಯ್ಟೆಯವರು ವೈದ್ಯಕೀಯಶಾಸ್ತ್ರದಲ್ಲಿ ಪದವಿ ಪಡೆದಿದ್ದರೂ, ನಟರಾಗಿ ವೃತ್ತಿಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದರು. ಕಾವ್ಯದಲ್ಲಿ ಆಸಕ್ತಿ ಇದ್ದು ಕವನಗಳನ್ನು ಬರೆಯುತ್ತಾ ಇದ್ದರು. ಅವರ ಕವನ ಸಂಕಲನಗಳು ಒಂದರ ನಂತರ ಒಂದರಂತೆ ಪ್ರಕಟವಾಗುತ್ತಿದ್ದ ಹಾಗೆ (1992-ರಲ್ಲಿ Bevardžiai [The Nameless], 1998-ರಲ್ಲಿ Suvalgiau Vieną Spanguolę [I Ate One Cranberry], ಮತ್ತು 2004-ರಲ್ಲಿ Nereikia Tikriausiai Būtina [Not Necessary, Probably Urgent]), ಅವರ ಸಾಹಿತ್ಯದೊಂದಿಗಿನ ನಂಟು ಹೆಚ್ಚುತ್ತಾ ಹೋಯಿತು. ಹೀಗಾಗಿ, ಅವರು ರಂಗಭೂಮಿಯನ್ನು ಬಿಟ್ಟು ಸಾಹಿತ್ಯದಲ್ಲೇ ಸಂಪೂರ್ಣವಾಗಿ ಸಕ್ರಿಯರಾಗಿರಲು ನಿರ್ಧರಿಸಿದರು.

ಡಾಯಿವ ಚೆಪಾವ್ಸಕಾಯ್ಟೆಯವರು 2000-ರ ನಂತರದ ವರ್ಷಗಳ ಹೊಸ ಪೀಳಿಗೆಯ ಲಿಥುವೇನಿಯನ್ ಕವಿಗಳಲ್ಲಿ ಅತ್ಯಂತ ಗಮನಾರ್ಹವಾದ ಕವಿ ಎಂದು ಹೆಸರು ಗಳಿಸಿದರು. ಕೆಲ ವರ್ಷಗಳ ನಂತರ ಅವರು ರಂಗಭೂಮಿಗೆ ಮರಳಿದರು, ಆದರೆ ಈ ಬಾರಿ ನಾಟಕಕಾರರಾಗಿ. ಚೆಪಾವ್ಸಕಾಯ್ಟೆಯವರು ಹಿಂದಿನ ವರ್ಷಗಳಲ್ಲಿ ನಾಟಕಗಳನ್ನು ಬರೆದಿದ್ದರೂ, 2012-ರಲ್ಲಿ ಅವರು ಬರೆದ Duobė (The Pit) ನಾಟಕ ಅವರಿಗೆ ತುಂಬಾ ಹೆಸರುಗಳಿಸಿಕೊಟ್ಟಿತು. ಈ ನಾಟಕಕ್ಕಾಗಿ ಅವರು 2012-ರಲ್ಲಿ ಸುಗಿಹರಾ ಡಿಪ್ಲೋಮ್ಯಾಟ್ಸ್ ಫಾರ್ ಲೈಫ್ ಫೌಂಡೇಶನ್‌ನಿಂದ (Sugihara Diplomats For Life Foundation) ಪರ್ಸನ್ ಆಫ್ ಟಾಲರೆನ್ಸ್ (Person of Tolerance) ಎಂಬ ಬಿರುದನ್ನು ಪಡೆದರು.

1967-ರಲ್ಲಿ ಜನಸಿದ ಡಾಯಿವ ಚೆಪಾವ್ಸಕಾಯ್ಟೆ ಕೌನಾಸ್ ಮೆಡಿಕಲ್ ಅಕಾಡೆಮಿಯಿಂದ ವೈದ್ಯಶಾಸ್ತ್ರ ಪದವಿ ಪಡೆದರು. ಅವರು ಕೌನಾಸ್ ಯೂತ್ ಮ್ಯೂಸಿಕಲ್ ಸ್ಟುಡಿಯೋದಲ್ಲಿ ರಂಗಭೂಮಿ ನಟನೆಯ ಅಭ್ಯಾಸವನ್ನೂ ಪಡೆದರು. 1990-ರಿಂದ ಅವರು ಕೌನಾಸ್ ಚೇಂಬರ್ ಥಿಯೇಟರ್‌ನಲ್ಲಿ ನಟಿಯಾಗಿ ಪೂರ್ಣಕಾಲಿಕ ಉದ್ಯೋಗಿಯಾಗಿದ್ದರು. ಇಲ್ಲಿಯವರೆಗೆ ಅವರು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ಜೊತೆಗೆ ನಾಟಕಕಾರರಾಗಿಯೂ ಹೆಸರು ಗಳಿಸಿದ್ದಾರೆ. ಅವರು ಮಕ್ಕಳಿಗಾಗಿ ಮತ್ತು ವಯಸ್ಕರಿಗೆ ಬರೆದ ನಾಟಕಗಳನ್ನು ಹಲವಾರು ಲಿಥುವೇನಿಯನ್ ಥಿಯೇಟರ್‌ಗಳು ಪ್ರದರ್ಶಿಸಿವೆ ಮತ್ತು ಲಿಥುವೇನಿಯನ್ ರೇಡಿಯೊದಿಂದ (Lithuanian Radio) ಬಹುಮಾನಗಳನ್ನು ಗೆದ್ದಿವೆ. ರಂಗಭೂಮಿಯಲ್ಲಿ ನಟನೆಗಾಗಿ ಸಹ ಇವರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2005-ರಲ್ಲಿ ನಡೆದ ವಾರ್ಷಿಕ ಕಾವ್ಯ ವಸಂತ ಉತ್ಸವದ (Poetry Spring Festival) ಶ್ರೇಷ್ಠ ಕವಿಯ (Poet Laureate) ಗೌರವ ಸ್ಥಾನ ನೀಡಿ ಅವರನ್ನು ಸನ್ಮಾನಿಸಲಾಯಿತು. 2005-ರಲ್ಲಿ ನಡೆದ ಅಂತರರಾಷ್ಟ್ರೀಯ ಕಾವ್ಯ ಉತ್ಸವದಲ್ಲಿ Nereikia Tikriausiai Būtina ಕವನ ಸಂಕಲನಕ್ಕಾಗಿ ‘ಕಾವ್ಯ ವಸಂತ’ (Poetry Spring) ಪ್ರಶಸ್ತಿ, 2017-ರಲ್ಲಿ ಗೋಲ್ಡನ್ ಸೀನ್ ಕ್ರಾಸ್ (Golden Scene Cross), 2018-ರಲ್ಲಿ Baisiai Gražūs Eilėraščiai ಸಂಕಲನಕ್ಕಾಗಿ Poetic Druskininkai Fall Yotvingian ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಚೆಪಾವ್ಸಕಾಯ್ಟೆಯವರು ಸಾಮಾನ್ಯವಾಗಿ ಪ್ರಾಸಬದ್ಧ ಚೌಪದಿಗಳಲ್ಲಿ ಬರೆಯುತ್ತಿದ್ದರೂ, ಲಯಕ್ಕೆ ಅವರ ಕಟ್ಟುನಿಟ್ಟಾದ ಅನುಸರಣೆಯಿಂದಾಗಿ ಅವರ ಕಾವ್ಯದಲ್ಲಿ ಕಂಡುಬರುವ ಸಂಭಾಷಣೆಯ ಭಾಷೆ ಅಥವಾ ಅನ್ಯೋನ್ಯ ಸಂವಾದದ ಪ್ರಜ್ಞೆಗೆ ಇದರಿಂದ ಕುಂದು ಬರುವುದಿಲ್ಲ. ಅವರ ಪ್ರಾಸಗಳು ಹೊಸದಾಗಿ, ಅನಿರೀಕ್ಷಿತ ಹಾಗೂ ಅನನ್ಯವಾಗಿ ಕಾಣುತ್ತವೆ. ಲಿಥುವೇನಿಯಾದ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ರಿಮಾಂತಸ್ ಕ್‌ಮಿತಾರ ಪ್ರಕಾರ (Rimantas Kmita), “ಸಮಕಾಲೀನ ಲಿಥುವೇನಿಯನ್ ಕಾವ್ಯದಲ್ಲಿ, ಚೆಪಾವ್ಸಕಾಯ್ಟೆಯವರು ವಿಶಿಷ್ಟವಾದ ಕಾವ್ಯಾತ್ಮಕ ‘ಕಿವಿ’ಯನ್ನು ಹೊಂದಿದ್ದಾರೆ; ಹಾಗೂ ಲಿಥುವೇನಿಯನ್ ಸಾಹಿತ್ಯಿಕ ಇತಿಹಾಸದ ಸಮಗ್ರ ಸನ್ನಿವೇಶದಲ್ಲಿ ನೋಡಿದಾಗ ಅವರ ಭಾಷೆಯ ಮೇಲಿನ ನಿಯಂತ್ರಣ, ವ್ಯಂಗ್ಯ ಮತ್ತು ಆಡುಮಾತುಗಳ ಪ್ರಯೋಗ, ಹಾಗೂ ರಚನಾತ್ಮಕ ಪದ್ಯಪಂಕ್ತಿಗಳ ಸಂಯೋಜನೆಯು ಹಿಂದಿನ ತಲೆಮಾರಿನ ಪ್ರಭಾವಿ ಕವಿ ಹಾಗೂ ಅನುವಾದಕ ವ್ಲಾದಸ್ ಸಿಮ್ಕುಸ್ ಅವರ (Vladas Šimkus) ಕಾವ್ಯವನ್ನು ನೆನಪಿಸುತ್ತದೆ. ಚೆಪಾವ್ಸಕಾಯ್ಟೆಯವರ ಕವನ-ಭಾಷೆಗೆ ಯಾವುದೇ ವಿಶೇಷ ಕಾವ್ಯಾತ್ಮಕ ಸಾಧನಗಳ ಢಣಾರುಗಳಿಂದ ಮುಕ್ತವಾದ ಒಂದು ನೈಸರ್ಗಿಕ ಧ್ವನಿಯಿದೆ. ಭಾಷೆಯ ಬಗ್ಗೆ ಸ್ವಾಭಾವಿಕ ಪ್ರಜ್ಞೆಯು ಅವರಿಗೆ ಅವರ ಬಾಲ್ಯದಿಂದ ಬಂದಿದೆ. ಕವಿಯೇ ಹೇಳಿದಂತೆ:

“ಇಂದಲ್ಲ ನಾಳೆ, ಪ್ರತಿಯೊಬ್ಬ ತರುಣ-ತರುಣಿ ತನ್ನನ್ನು ಮತ್ತು ತನ್ನ ಸುತ್ತಲಿನ ಪ್ರಪಂಚವನ್ನು ತನಗಾಗಿ ಗ್ರಹಿಸಿಕೊಳ್ಳಲು, ತನ್ನನ್ನು ಮತ್ತು ತನ್ನ ಸುತ್ತಲೂ ನಡೆಯುತ್ತಿರುವ ಎಲ್ಲವನ್ನೂ ವ್ಯಕ್ತಪಡಿಸುವ ಸಹಜ ಬಯಕೆಯನ್ನು ಅನುಭವಿಸುತ್ತಾರೆ. ಕೆಲವರು ಗಿಟಾರ್ ನುಡಿಸಲು ಕಲಿಯುತ್ತಾರೆ, ಇತರರು ಮೈಕನ್ನು ಅಥವಾ ಕುಂಚವನ್ನು ಎತ್ತಿಕೊಳ್ಳುತ್ತಾರೆ – ನಾನು ಬರೆಯಲು ತೊಡಗಿದೆ. ನನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು ಮತ್ತು ನನ್ನೊಳಗೆ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಇದು ಸುಲಭವಾದ ಮಾರ್ಗ ಎಂದು ನಾನು ಕಂಡುಕೊಂಡೆ. ನನಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಗಳನ್ನು ಹುಡುಕಿದೆ ಮತ್ತು ನಾನು ಜಗತ್ತನ್ನು ಹೇಗೆ ಕಲಿಯಲು ಮತ್ತು ಪಳಗಿಸಲು ಪ್ರಯತ್ನಿಸಿದೆ, ಅದನ್ನು ನನ್ನ ಜತೆ ಹೊಂದಿಸಿಕೊಳ್ಳಲು, ನನ್ನದಾಗಿಸಿಕೊಳ್ಳಲು ಯತ್ನಿಸಿದೆ – ಸಹನೀಯವಾಗುವಂತೆ ಮತ್ತು ನನಗೆ ಅರ್ಥವಾಗುವಂತೆ. ಆ ವಯಸ್ಸಿನಲ್ಲಿ, ಪ್ರಪಂಚವು ಸಾಮಾನ್ಯವಾಗಿ ವಿಶಾಲವಾಗಿ, ಅಗ್ರಾಹ್ಯವಾಗಿ ತೋರುತ್ತದೆ, ಅನಿಶ್ಚಿತತೆಯಿಂದ ತುಂಬಿದಂತೆ ಕಾಣುತ್ತದೆ. ಜಗತ್ತನ್ನು ಸಣ್ಣದಾಗಿಸಿ, ಅದನ್ನು ಕಾವ್ಯಾತ್ಮಕ ರೂಪದಲ್ಲಿ ಮರುಸೃಷ್ಟಿಸುವ ಮೂಲಕ, ಅದರ ಭಯಂಕರತೆ ಮತ್ತು ಅನ್ಯತೆಯನ್ನು ಸಣ್ಣದಾಗಿಸಿದೆ. ನಾನು ನನ್ನ ಆಲೋಚನೆಗಳು ಮತ್ತು ಮನಸ್ಸಿನ ಸ್ಥಿತಿಗಳನ್ನು ದಾಖಲಿಸುತ್ತಿದ್ದೆ; ಇದು ನನ್ನೊಂದಿಗೆ ಮತ್ತು ನನ್ನ ಸುತ್ತಲಿನ ಪ್ರಪಂಚದೊಂದಿಗೆ ಮಾತನಾಡಲು ನನಗೆ ಸ್ವೀಕಾರಾರ್ಹ ಮಾರ್ಗವಾಗಿತ್ತು. ನಾನು ಇದನ್ನು ಕಲೆ ಎಂದು ಕರೆಯಲಾರೆ. ಇದು ಜೀವನ – ಕೆಲವೊಮ್ಮೆ ಭಾಷೆಯ ರೂಪದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವಂತಹ ಜೀವನ. ಆದ್ದರಿಂದ ಆರಂಭದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ಆಯ್ಕೆಯನ್ನು ಮಾಡಲಿಲ್ಲ – ಮೀನು ತಾನು ಈಜಬೇಕೋ ಅಥವಾ ಹಾರಬೇಕೋ ಅಥವಾ ಹಸು ಹಾಲು ಕೊಡಬೇಕೋ ಬೇಡವೋ ಎಂದು ಹೇಗೆ ಆಯ್ಕೆ ಮಾಡುವುದಿಲ್ಲವೋ ಹಾಗೆ. ಪ್ರಕೃತಿಯು ನಮಗೆ ಕೆಲವು ಅಂಗಾಂಗಳನ್ನು ನೀಡುತ್ತದೆ, ಇವು ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಪ್ರಕೃತಿ ಬಹುಶಃ ನನಗೆ ಕೆಲವು ಕಾವ್ಯಾತ್ಮಕ ಅಂಗಾಂಗಳನ್ನು ನೀಡಿದೆ ಮತ್ತು ನಾನು ಅವುಗಳನ್ನು ತಮ್ಮ ಕಾರ್ಯನಿರ್ವಹಿಸಲು ಬಿಡುತ್ತೇನೆ. ಮತ್ತು ನನ್ನಲ್ಲಿರುವ ಸೃಜನಶೀಲ ಅಂಗವನ್ನು ಏನು ಅಥವಾ ಯಾವುದು ಜಾಗೃತಗೊಳಿಸಿತು ಎಂದು ನನಗೆ ತಿಳಿದಿಲ್ಲ. ಬಹುಶಃ ಯಾವುದೂ ಏನೂ ಮಾಡಿಲ್ಲ – ನಾನು ಹುಟ್ಟಿದ್ದೇ ಹೀಗೆ ಅಂತನಿಸುತ್ತೆ ನನಗೆ, ಅಷ್ಟೆ.”

ಚೆಪಾವ್ಸಕಾಯ್ಟೆ ಅವರ ಕಾವ್ಯವು ಸ್ವಭಾವಕ್ಕನುಗುಣವಾಗಿ ನಾಟಕೀಯವಾಗಿದೆ. ಅವರ ಚೊಚ್ಚಲ ಸಂಕಲನವಾದ Bevardžiai-ದಲ್ಲಿ (The Nameless, 1992) ಅವರು ಸಾಂಪ್ರದಾಯಿಕ ಚೌಪದಿ ಮತ್ತು ಭಾವಗೀತಾತ್ಮಕ ಸ್ವರಗಳೊಂದಿಗೆ ಸೃಜನಾತ್ಮಕವಾಗಿ ಮತ್ತು ವ್ಯಂಗ್ಯಾತ್ಮಕವಾಗಿ ವಿನೋದವಾಡುತ್ತಾರೆ. ಆಶ್ಚರ್ಯಕರವಾದ ಜೋಡಣೆಗಳು, ದೈನಂದಿನ ಜೀವನದ ವಿವರಗಳು ಮತ್ತು ತಮಾಷೆಯ ಪ್ರಾಸಗಳಿಂದ ಕೂಡಿದ ಇಲ್ಲಿನ ಕವನಗಳನ್ನು ಓದುವುದೇ ಒಂದು ರೋಮಾಂಚಕ ಸಾಹಸಕಾರ್ಯದ ಅನುಭವ ನೀಡುತ್ತದೆ. ಈ ಕವನಗಳಲ್ಲಿ ಉದ್ವೇಗ, ಚಲನೆ, ರೂಪಾಂತರ, ಒಳಸಂಚು ಮತ್ತು ಮನೋರಂಜನಾತ್ಮಕ ಅಂತ್ಯಪರಿಣಾಮಗಳು ತುಂಬಿರುವುದರಿಂದ ಇವುಗಳನ್ನು ಕಿರು-ನಾಟಕಗಳು ಎಂದು ವಿಮರ್ಶಕರು ವರ್ಣಿಸಿದ್ದಾರೆ.

2004-ರಲ್ಲಿ ಪ್ರಕಟವಾದ ಅವರ ಮೂರನೆಯ ಕವನ ಸಂಕಲನದ ಶೀರ್ಷಿಕೆ, Nereikia Tikriausiai Būtina (Not Necessary Probably Urgent; ಅಗತ್ಯ ಇಲ್ಲ, ಆದರೆ ಜರೂರಿದೆ), ಅನಿವಾರ್ಯದ ವಿರೋಧಾಭಾಸವಾಗಿದೆ – ಜೀವನ ಮತ್ತು ಅದರ ಮೂಲಭೂತ ತತ್ವಗಳ ಬಗ್ಗೆ ಸರಳವಾದ ಮನೋವೃತ್ತಿಗಳಿಂದ ಮತ್ತು ಜಗತ್ತಿನ ಪ್ರತಿ ಒಂದು ತರಹದ ವಿಧೇಯತೆಯಿಂದ ಹೊರಹೊಮ್ಮುವ ಅನಿವಾರ್ಯತೆ: “ಬದುಕುವ ಇಚ್ಛೆಯಿದ್ದರೆ, ಬದುಕಿ, ಇಲ್ಲವಾದರೂ – ಬದುಕಿ” – ವಿಮರ್ಶಾತ್ಮಕ ಮತ್ತು ವಿನೋದದ ಮೌಲ್ಯಮಾಪನದ ಸಾಮರ್ಥ್ಯವನ್ನು ಮತ್ತೂ ನಿರ್ವಹಿಸುವ ವಿಧೇಯತೆ.

2017-ರಲ್ಲಿ ಪ್ರಕಟವಾದ ಅವರ ಇತ್ತೀಚಿನ ಸಂಗ್ರಹದಲ್ಲಿ, Baisiai Gražūs Eilėraščiai (Terribly Beautiful Poems, 2017), ಚೆಪಾವ್ಸಕಾಯ್ಟೆಯವರು ಮಕ್ಕಳ ಕವಿತೆ ಹಾಗೂ “ವಯಸ್ಕ,” ಅಥವಾ ಗಂಭೀರವಾದ ಕವಿತೆಗಳ ನಡುವಿನ ಗಡಿಗಳನ್ನು ಅಳಿಸಿಹಾಕಿದ್ದಾರೆ. ಈ ಸಂಕಲನವನ್ನು ರೂಢಿಯಂತೆ ಮಕ್ಕಳಿಗಾಗಿ ಉದ್ದೇಶಿಸಿ ಪ್ರಸ್ತುತಪಡಿಸಲಾಗಿದ್ದರೂ, ಕವಿಯು ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಾಗಿ ಕಂಡುಬರುವ ಭಾಷೆ ಮತ್ತು ವಿಷಯದ ಸರಳೀಕರಣವನ್ನು ಯಶಸ್ವಿಯಾಗಿ ತಪ್ಪಿಸುತ್ತಾರೆ. ಸಾಂಪ್ರದಾಯಿಕ ರೂಪಗಳನ್ನು ಒಳಗೊಂಡಿರುವ ಈ ಕವನಗಳು ವಿನೋದಾತ್ಮಕವಾಗಿದ್ದುಕೊಂಡೂ ಭಯ, ದೈನಂದಿನ ಜೀವನದ ನೀರಸತೆ, ಕಾವ್ಯದ ಸ್ವರೂಪ ಮತ್ತು ಮಾನವ ಸಂವಹನದ ದುರ್ಬಲತೆಗಳ ಆಳವಾದ ಮತ್ತು ಕೌಶಲ್ಯಪೂರ್ಣ ಪರಿಶೋಧನೆಗಳನ್ನು ನೀಡುತ್ತವೆ. “ಭಯಾನಕ” ಎಂದು ಕರೆಯಲ್ಪಡುವ ಈ ಕವನಗಳು ಮಕ್ಕಳ ಸಾಹಿತ್ಯಕ್ಕೆ ಮೀಸಲಾದ “ಸಂತೋಷದ ಅಂತ್ಯ”ವನ್ನು ನೀಡುವುದಿಲ್ಲ – ಬದಲಾಗಿ, ಭಯದಿಂದ ಬಚಾವಾಗುತ್ತಾ ಭಯವನ್ನು ದಾಟುವ ಹಾಗೂ ನಮ್ಮ ಮನಸ್ಸಿನಲ್ಲಿ ಭಯಕ್ಕೆ ಹಾಸ್ಯದ ಆಕರ್ಷಕ ವೇಷವನ್ನು ಹಾಕಿ ಭಯದಿಂದ ಹೊರಬರುವ ಅಂತ್ಯವನ್ನು ತೋರಿಸುತ್ತದೆ.

ಚೆಪಾವ್ಸಕಾಯ್ಟೆಯವರು ನೆಲದ ಮೇಲೆ ಭದ್ರವಾಗಿ ನಿಂತಿರುವ ಕವಿ. ಅವರ ರೂಪಕಗಳು ಒರಟಾಗಿರುತ್ತವೆ, ಮಣ್ಣಿನ ಕಂಪು ಸೂಸುತ್ತವೆ, ಕೆಲವೊಮ್ಮೆ ಸರ್ವೇಸಾಮಾನ್ಯವಾಗಿರುತ್ತವೆ. ಯಾವ ವಿಷಯವೂ ಅವರನ್ನು ಬುಡಸಮೇತ ಕಿತ್ತುಹಾಕಲು ಅಥವಾ ಸ್ವರ್ಗಕ್ಕೆ ಏರಿಸಲು ಸಾಧ್ಯವಿಲ್ಲ. ಅವರ ಕಾವ್ಯ ಪ್ರಪಂಚ ವಿಶೇಷವಾಗಿ ಬೆಚ್ಚನೆಯ ಹಿತವಾದ ಪ್ರಪಂಚ. ಒಂದು ಬೆಕ್ಕನ್ನು ಪಳಗಿಸುವಂತೆ ಆ ಪ್ರಪಂಚದ ಪ್ರತಿಯೊಂದು ಅಂಶವನ್ನು ಪಳಗಿಸಿದ್ದಾರೆ. ಕಾವ್ಯದಲ್ಲಿ ಹಿತಕರವೆನ್ನುವುದು ಒಂದು ಸದ್ಗುಣ ಅಂತಲ್ಲ, ಆದರೆ ಅದನ್ನು ಹೇಗೆ ನಿರ್ವಹಿಸಬೇಕೆಂದು ಚೆಪಾವ್ಸಕಾಯ್ಟೆಯವರಿಗೆ ಗೊತ್ತು. ಅವರ ಕಾವ್ಯದಲ್ಲಿ ಮಾನವೀಯ ಸುಖೋಷ್ಣತೆ (humane warmth) ಕಂಡುಬರುತ್ತದೆ; ಈ ಸುಖೋಷ್ಣತೆ ಕಣ್ಣನ್ನು ಕೆರಳಿಸುವ ಬದಲು ನಾವದನ್ನು ನೋಡಿದಾಗ ಅದೊಂದು ಆನಂದಿತ ಬೆಕ್ಕಿನಂತೆ ಪರಗುಟ್ಟುತ್ತಿದೆ ಎಂದನಿಸುತದೆ. ಅವರ ಅತಿ ಯಾತನೆಯ ಕವನಗಳಲ್ಲಿ ಕೂಡ ನೋವನ್ನು ಅವರು ಪ್ರದರ್ಶನಕ್ಕೆಂದು ಇಟ್ಟ ಅಥವಾ ಶೂಲದ ಮೇಲೆ ಏರಿಸಿದ ನೋವಲ್ಲ. ಚೆಪಾವ್ಸಕಾಯ್ಟೆಯವರು ಯಾವುದೇ ರೀತಿಯಲ್ಲಿ ಪ್ರದರ್ಶನ ಸ್ವಭಾವದವರಲ್ಲ. ನಿಜವಾಗಿ ನೋಡಿದರೆ, ಕೆಲವೊಮ್ಮೆ ಅವರು ‘ಏನೂ ಹೇಳಲು ಬಯಸುವುದಿಲ್ಲ, ಆದರೆ ಅದು ತುಂಬಾ ಶಾಂತವಾಗಿಬಿಡುತ್ತದೆ.’

“Poezija” (ಇಂಗ್ಲಿಷ್ ಅನುವಾದದಲ್ಲಿ ’Poetry;’ ಇಲ್ಲಿ ನನ್ನ ಕನ್ನಡ ಅನುವಾದದಲ್ಲಿ ‘ಕಾವ್ಯ’ ಎಂಬ ಕವನ) ಎಂಬ ಕವನದಲ್ಲಿ, ಒಂದು ಆಕಳು ಓದುಗರನ್ನು ಸಂಬೋಧಿಸುತ್ತದೆ – ಒಂದು ಸಾಧಾರಣ ಆಕಳು, ಇತರ ಆಕಳುಗಳಿಗಿಂತ ಭಿನ್ನವೇನಲ್ಲ, ಆದರೆ ಹೇಗೋ ಏನೋ ಪರಿಚಿತವಾದ, ಇದರ ಹತ್ತಿರ ಹೋಗಬಹುದು ಎಂದನಿಸುವ ಆಕಳು, ಕಾವ್ಯದ ಪರವಾಗಿ ನಮ್ಮೊಂದಿಗೆ ಮಾತನಾಡುತ್ತಿದೆ:

ಛಳಿಗಾಲದಲ್ಲಿ, ಸೆಗಣಿಯಿಟ್ಟಾಗ ನಾನು,
ಬರಿಗಾಲಲ್ಲಿ ಆ ಗುಪ್ಪೆಯ ಮೇಲೆ ಏರು,
ನಿನ್ನ ಪಾದಗಳಿಂದ ಉಚ್ಚಿಯವರೆಗೆ
ಹೇಗೆ ಬಿಸಿ ಏರುತ್ತೆ ನೊಡು.

“ಕಾವ್ಯದ ಸುಖೋಷ್ಣತೆ”ಯನ್ನು ಇಂತಹ ಹೊಸ ತರಹದ ರೂಪಕದಲ್ಲಿ ನಿರೂಪಿಸಲ್ಪಟ್ಟಾಗಲೂ, ಅದರ ಸತ್ಯತೆಯನ್ನು ನಂಬದಿರುವುದು ಕಷ್ಟ. ಚೆಪಾವ್ಸಕಾಯ್ಟೆಯವರು ತಮ್ಮ ಕಾವ್ಯವನ್ನು ದಿಗಿಲುಹುಟ್ಟಿಸಲಿಕ್ಕೆ ಬಳಸುವುದಿಲ್ಲ – ಇದಕ್ಕೆ ವಿರುದ್ಧವಾಗಿ, ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಾಯವಾಗುವಂತಹ ಸಮಾನವಾದ ಭಾಷೆಯನ್ನು ಹುಡುಕುತ್ತಿರುತ್ತಾರೆ. ದೈನಂದಿನ ಜೀವನದ ವಾಡಿಕೆಯ ಮತ್ತು ನೀರಸ ಸನ್ನಿವೇಶಗಳ ಹಿಂದೆ ಅಸ್ಪಷ್ಟವಾಗಿರುವ ನಮ್ಮ ಚಡಪಡಿಕೆಗಳನ್ನು ಹಾಗೂ ಅತೃಪ್ತಿಗಳನ್ನು ನಾವು ಹಲವು ಸಲ ಕಾಣುತ್ತೇವೆ, ಅಥವಾ ನಮ್ಮನ್ನು ಕ್ಷಮಿಸುವ ಮತ್ತು ನಗುವ ನಮ್ಮದೇ ಬಿಂಬವನ್ನು ಕಾಣುತ್ತೇವೆ. ನಮ್ಮ ಭಾವಗೀತಾತ್ಮಕ ಸ್ವಂತ ವ್ಯಕ್ತಿತ್ವ ಆಗಾಗ್ಗೆ ದುರ್ಬಲಗೊಂಡಿದ್ದರೂ, ದೈನಂದಿನ ಜೀವನದ ಹರಿವನ್ನು ವಿರೋಧಿಸುವ ಶಕ್ತಿಯ ಕೊರತೆಯಿದ್ದರೂ, ಅದು ಎಂದಿಗೂ ಅತಿ ಮುಖ್ಯವಾಗಿರುವ ನೈತಿಕ ಅಗತ್ಯತೆಗಳು ಮತ್ತು ಮೌಲ್ಯಗಳನ್ನು ಕಳೆದುಕೊಳ್ಳುವುದಿಲ್ಲ: ನಮ್ರತೆ, ಸಂಯಮ, ಮಾನವ ಸಂಪರ್ಕ, ಅನ್ಯೋನ್ಯ ಸಂವಾದ, ಮತ್ತು ಪ್ರೀತಿ – ಇವು ನಿಸ್ಸಂದಿಗ್ಧವಾದ ಸದ್ಗುಣಗಳಾಗಿ ಉಳಿಯುತ್ತದೆ.

ಅಂತಿಮವಾಗಿ, ಚೆಪಾವ್ಸಕಾಯ್ಟೆ ಅವರ ಕಾವ್ಯವು ಅನಿಶ್ಚಿತತೆ ಮತ್ತು ಅಂತರ್ಬೋಧೆಯ ಆಂತರಿಕ ವರ್ತನೆಗಳ ನಡುವೆ ಇರುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ದ್ವಂದ್ವವೇ, ವಿಮರ್ಶಕಿ ರೀಟಾ ಟೂಟ್ಲೈಟೆ-ಯವರ ಪ್ರಕಾರ, “ಅವರ ಕಾವ್ಯದ ತಿರುಳನ್ನು ರೂಪಿಸುತ್ತದೆ ಮತ್ತು ಅವರ ಸುಂದರವಾದ ಕವಿತೆಗಳ ಕಾವ್ಯಾತ್ಮಕತೆಯನ್ನು ನಿರ್ಧರಿಸುತ್ತದೆ. ಇದು ಒಟ್ಟಾರೆಯಾಗಿ, ಚೆಪಾವ್ಸಕಾಯ್ಟೆಯವರಿಂದ ಪರಿಶೋಧಿಸಲ್ಪಟ್ಟ ಅತ್ಯಂತ ವಿಶಿಷ್ಟವಾದ ವಿಷಯಗಳಲ್ಲಿ ಒಂದಾಗಿದೆ. ದೈನಂದಿನ ಜೀವನದ ಕಠಿಣ ಮತ್ತು ಹಾಸ್ಯಮಯ ವಿವರಗಳಿಂದ ಅವರು ಜೀವನದ ದುರ್ಬಲತೆ ಮತ್ತು ವಿರೋಧಾಭಾಸದ ಪ್ರತಿರೋಧದ ಜೀವಿಗಳನ್ನು ಸೃಷ್ಟಿಸುತ್ತಾರೆ, ದೈನಂದಿನ ಜೀವನ ಮತ್ತು ಅಸ್ತಿತ್ವದ ನಡುವಿನ ಸ್ವರೂಪ ಮತ್ತು ವ್ಯತ್ಯಾಸಗಳನ್ನು ಬಹಿರಂಗಪಡಿಸುತ್ತಾರೆ.”

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಡಾಯಿವ ಚೆಪಾವ್ಸಕಾಯ್ಟೆಯವರ ಆರು ಕವನಗಳಲ್ಲಿ ಮೊದಲ ನಾಲ್ಕು ಕವನಗಳನ್ನು ಯುಗೇನ್ಯಸ್ ಅಲಿಶಾಂಕ ಹಾಗೂ ಕೆರಿ ಶಾನ್ ಕೀಸ್-ರವರು ಜಂಟಿಯಾಗಿ (Eugenijus Alisanka and Kerry Shawn Keys) ಹಾಗೂ ನಂತರದ ಎರಡು ಕವನಗಳನ್ನು ಯೋನಸ್ ಜ಼್ಡನ್ಯಿಸ್-ರವರು (Jonas Zdanys) ಲಿಥುವೇನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1. ಒಂದ್ಚೂರು ಸೂರ್ಯಾಸ್ತ
ಮೂಲ: A Little Bit of Sunset

ಒಂದ್ಚೂರು ಸೂರ್ಯಾಸ್ತ
ಉಗುರುಗಳಡಿಯಲ್ಲಿ,
ಹಳೆಯ ರಕ್ತವೇನೊ.
ಒಂದೆರಡು ನೆನಪುಗಳು,
ಒಂದ್ಚೂರೂ ಪ್ರಾರ್ಥನೆ,
ಸಂಜೆಯನ್ನು
ಅಂತ್ಯಗೊಳಿಸಲು.
ಆಕಾಶದಲ್ಲಿ
ತನ್ನ ಬೆನ್ನ ಮೇಲೆ
ತೇಲುತ್ತಿರುವ
ಸ್ವಾಲೋ ಹಕ್ಕಿಯಂತೆ.

2. ಮಾಟಗಾತಿ
ಮೂಲ: The Witch

ನಿನ್ನ ಪ್ರೇಯಸಿಯೊಬ್ಬಳು ಮಾಟಗಾತಿ.
ಕೆಂಪು ನಂಜಿನ ನಾಯಿಕೊಡೆಯಡಿಯಲ್ಲಿ ಕೂತಿರುತ್ತಾಳೆ,
ಅದರ ಚುಕ್ಕೆಯೊಂದನ್ನು ನೋಡುತ್ತಾ ಮೈಮರೆತು.
ಬೆರಳನ್ನು ಕೊಯ್ಯಿಸಿಕೊಳ್ಳುತ್ತಾಳೆ
ನೀನು ನೋವು ಅನುಭವಿಸಬೇಕೆಂದು,
ತಲೆಗೆ ಬ್ಯಾಂಡೇಜು ಸುತ್ತಿಕೊಳ್ಳುತ್ತಾಳೆ
ನಿನ್ನನ್ನು ದಂಡಿಸಲೆಂದು,
ಫೋಟೋಗಳಲ್ಲಿ ಚೆನ್ನಾಗಿ ಕಾಣುವುದಿಲ್ಲ ಅವಳು,
ನೀನು ಫೋಟೋಗಳಲ್ಲಿ ಚೆನ್ನಾಗಿ ಕಾಣಲೆಂದು,
ಅವಳು ಮೌನವಾಗಿರುತ್ತಾಳೆ, ಪ್ರಶ್ನೆಗಳಿಗೆ ಉತ್ತರಿಸಲ್ಲ
ಯಾಕೆಂದರೆ ಅವಳಿಗೆ ಬಿಡುವಿಲ್ಲ –
ಅವಳು ಪ್ರೇಮಪರವಶಳಾಗಿದ್ದಾಳೆ,
ರಸ್ತೆಯಲ್ಲಿ ಕಂಡದ್ದನ್ನೆಲ್ಲಾ ಎತ್ತಿಕೊಳ್ಳುತ್ತಾಳೆ,
ನೀನೆಲ್ಲೋ ಅವನ್ನೆಲ್ಲಾ ಕಳೆದಿರಬೇಕೆಂದು,
ಏನನ್ನೋ ಶಾಶ್ವತವಾಗಿ ಕಳೆಯುತ್ತಾಳೆ,
ನೀನದನ್ನು ಹುಡುಕಲೆಂದು,
ಎಲ್ಲರಿಂದ ಎಲ್ಲ ವಸ್ತುಗಳನ್ನು ಕಡ ತರುತ್ತಾಳೆ,
ನಿನಗೆ ತಿರುಗಿ ಕೊಡಲೆಂದು,
ಎಲ್ಲವನ್ನೂ ಮರೆಯುತ್ತಾಳೆ,
ನೀನವನ್ನೇಲ್ಲಾ ನೆನಪಿಡಬೇಕೆಂದು,
ಬೇರೆಯವರ ಹೆಸರುಗಳನ್ನು
ನಿನ್ನ ಹೆಸರೆಂಬಂತೆ ತಪ್ಪಿ ಹೇಳುತ್ತಾಳೆ,
ನೀನು ನಿನ್ನ ಹೆಸರನ್ನು ಮತ್ತೆ ಮತ್ತೆ ಹೇಳಲೆಂದು,
ನಿನಗಾಗಿ ಆರು ಕೈಗಳುಳ್ಳ
ಒಂದು ಸ್ವೆಟರ್ ಹೆಣೆಯುತ್ತಾಳೆ,
ನೀನವಳನ್ನು ಇನ್ನೂ ಬಿಗಿಯಾಗಿ ಅಪ್ಪಿಕೊಳ್ಳಬೇಕೆಂದು,
ರಾತ್ರಿಯಲ್ಲಿ ಅವಳು ನಿದ್ರಿಸುತ್ತಾಳೆ
ನೀನವಳನ್ನು ನೋಡಲಿಯೆಂದು,
ಅವಳು ಹತ್ತಿರದಲ್ಲಿದ್ದಾಳೆ
ಅವಳಿಗೆ ಸಮಿಪದೃಷ್ಟಿಯೆಂದು,
ಮತ್ತೆ ಅವಳು ದೂರವೆಲ್ಲಾದರೂ ಹೋದರೆ
ಯಾವಾಗಲೂ ದಾರಿತಪ್ಪುತ್ತಾಳೆ,
ಆಗ ಅವಳು ಕೆಂಪು ನಂಜಿನ ನಾಯಿಕೊಡೆಯಡಿಯಲ್ಲಿ ಕೂರುತ್ತಾಳೆ,
ನೀನವಳನ್ನು ಹುಡುಕುವವರೆಗೂ ಕಾಯುತ್ತಾಳೆ,
ಅವಳೆಷ್ಟು ತಾಳ್ಮೆಯಿಂದ ಏಕಾಗ್ರತೆಯಿಂದ
ಕಾಯುತ್ತಿರುತ್ತಾಳೆಂದರೆ
ಇರುವೆಯೊಂದು ಅವಳ ಪಾದದಿಂದ
ಕಪೋಲದವರೆಗೆ ಚಲಿಸುತ್ತೆ
ಮತ್ತೆ ತಿರುಗಿ ಬರುತ್ತೆ
ಹೀಗೆ ಸುಮಾರು ಆರು ಬಾರಿ.

3. ಇದೊಂದು ಆಟ ನೋಡಿ
ಮೂಲ: There is a game 

ಇದೊಂದು ಆಟ ನೋಡಿ –
ಹೊಳೆಯುವುದು ಯಾವುದೆಂದು,
ಕತ್ತಲೆಗಿಂತಲೂ ಹೆಚ್ಚಾಗಿ
ಹೊಳೆಯುವುದು ಯಾವುದೆಂದು
ಕಂಡುಹಿಡಿಯಬೇಕು.
ನಾನೇನೇನು ಕಂಡುಹಿಡಿದೆನೊ, ಇಲ್ಲಿವೆ ನೋಡಿ:
ಬಾಗಿಲುಗಳ ಸ್ಟೀಲ್ ಹಿಡಿಗಳು,
ವೈನ್ ಬಾಟಲಿಗಳ ಬಿಳಿ ಕಾರ್ಕಿನ ಮುಚ್ಚಳ,
ನನ್ನ ಪ್ರಿಯನ ಅಂಗಾಲುಗಳು,
ಕಪ್ಪೆಯ ಹೊಟ್ಟೆ,
ಕೋರಿಂದೆಯ ಎಲೆ,
ಚಂಡಕ ನರಿ,
ಪ್ರಯೋಗಶಾಲೆಯ ಬಿಳಿ ಇಲಿ,
ನೀರು,
ತಿಳಿಯಾಗೇನೂ ಇಲ್ಲ,
ಕಣ್ಣುಗಳು,
ಮಂಕಾಗೇನೂ ಇಲ್ಲ,
ಮತ್ತೆ ಇವು ವಿಶೇಷ ಹೊಳಪುಳ್ಳಂತಹವು:
ಹೇರ್-ಪಿನ್ನುಗಳು, ಸೂಜಿಗಳು,
ನಾಯಿಯ ನಾಲಗೆ,
ಅರ್ಧ ಚೀಪಿದ ಸಕ್ರೆಮಿಠಾಯಿ,
ಇನ್ನೂ ಕೆಲವು ಇವೆ:
ಬೆಂಕಿ, ನ್ಯುಮೋನಿಯ
ಮತ್ತು ತಾಯಿಹಾಲು,
ಇನ್ನೂ ಕೆಲವು ಇವೆ:
ನಮ್ಮ ಆರಂಭ ಹಾಗೂ ಅಂತ್ಯ,
ಇನ್ನೂ ಕೆಲವು ಇವೆ:
ಕವನಕ್ಕಾಗಿ ಕಾಯುತ್ತಿರುವ
ಖಾಲಿ ಕಾಗದದ ಹಾಳೆ.

4. ವಸಂತಮಾಸವೇನೋ ಎಂಬಂತಿದೆ
ಮೂಲ: As though it’s spring

ವಸಂತಮಾಸವೇನೋ ಎಂಬಂತಿದೆ.
ಅಂಗಳಗಳಲ್ಲಿ ಆಡುತ್ತಿರುವ
ಮಕ್ಕಳು ಹೆಚ್ಚಾಗಿದ್ದಾರೆ,
ಮಣ್ಣಂಟಿದ ಅವರ ಪುಟ್ಟ
ಅಂಗೈಗಳ ಬೊಗಸೆಯಲ್ಲಿ
ಹೊಯಿಗೆ ಬೆಚ್ಚಗಾಗುತ್ತಿದೆ.
ಓಡೋಡುತ್ತಾ ಬರುತ್ತೆ ನದಿ
ಓಡಿಯೇ ಹೋಗಿಬಿಡುತ್ತೆ.
ಅದರಲ್ಲಿತ್ತೊಂದು ಮೀನು
ಹಿಡಯಲಿಲ್ಲ ನೀನದನು.
ತೇಲಿ ಹೋಗಲಿ ಅದು,
ನಾನಿಲ್ಲೇ ನಿಲ್ಲುವೆ ಸ್ವಲ್ಪ ಹೊತ್ತು
ಸೋಂಪು ಬೀಜಗಳ ಜಗಿಯುತ್ತಾ.
ನನ್ನ ಬಲಕ್ಕೆ ಒಂದು ಬೆಂಚು ಇದೆ
ಅಲ್ಲಿ ಕೂತಿದ್ದ ಮೂವರು ಮುದುಕಿಯರು
ಆಗ್ನೇಯ ದಿಕ್ಕಿನಿಂದ ಬೀಸುತ್ತಿರುವ
ಗಾಳಿಯ ಎದುರು
ಪುಡಿಪುಡಿಯಾಗಿ ಉದುರಿದರು
ನಾಜೂಕು ಬಿಸ್ಕತ್ತುಗಳಂತೆ.

5. ಕಾವ್ಯ
ಮೂಲ: Poetry

ಕಾವ್ಯವೆಂಬ ಹೆಸರಿನ ಆಕಳು ನಾನು,
ಸ್ವಲ್ಪ ಹಾಲು ಕೊಡುವೆ ನಾನು,
ಸುಮಾರಾಗಿ 2.5% ಜಿಡ್ಡು ಇರುತ್ತೆ,
ಕೆಲವೊಮ್ಮೆ 3% ವರಗೂ ಹಿಂಡಬಲ್ಲೆ ನಾನು,
ಹೆಮ್ಮೆಯಿಂದ ಹೇಳಬಲ್ಲೆ ನಾನು
ಅತಿ ಉನ್ನತ ತಂತ್ರಜ್ಞಾನ ಬಳಸಿ
ಪರಿಷ್ಕರಿಸಲಾಗಿದೆ ಅದನ್ನು,
ಟೆಟ್ರಾಪ್ಯಾಕ್-ಗಳಲ್ಲಿ ತುಂಬಿಸಿ
ತಗಾದೆ ಎತ್ತದ ಬಳಕೆದಾರರ ಬಳಿ ಸೇರುತ್ತೆ ಅದು.

ರೋಸಿ ಹೋಗಿದ್ದೇನೆ ನಾನು
ಎಲ್ಲ ಜಂತುಗಳಿಗೆ ತಿಳಿದೇ ಇರುವ,
ಪಶುವೈದ್ಯಕೀಯ ಪಠ್ಯಪುಸ್ತಗಳಲ್ಲಿ
ಮುತುವರ್ಜಿಯಿಂದ ವಿವರಿಸಿರುವ ರೋಗಗಳಿಂದ,

ಒಳ್ಳೆಯ ಮಂದೆಯ ಜತೆ ಮೇಯಲು ಹೋಗುವೆ ನಾನು
(ಆ ಮೇಳದಲ್ಲಿ ಸ್ನೇಹವಿದೆ,
ಭಾಷಾ ಬಿಕ್ಕಟ್ಟುಗಳಿಲ್ಲ),
ಕುದುರೆನೊಣಗಳು ಮತ್ತು ಮೃಗಾಲಯದ
ವೈದ್ಯನೆಂದರೆ ಭಯ ನನಗೆ,
ಬೇರೆ ತರದಲ್ಲೂ ಉಪಯೋಗಕ್ಕೆ ಬರುವೆ ನಾನು –
ಛಳಿಗಾಲದಲ್ಲಿ, ಸೆಗಣಿಯಿಟ್ಟಾಗ ನಾನು,
ಬರಿಗಾಲಲ್ಲಿ ಆ ಗುಪ್ಪೆಯ ಮೇಲೆ ಏರು,
ನಿನ್ನ ಪಾದಗಳಿಂದ ಉಚ್ಚಿಯವರೆಗೆ
ಹೇಗೆ ಬಿಸಿ ಏರುತ್ತೆ ನೊಡು.

6. ಹೇಗಿದ್ದಿಯಾ?
ಮೂಲ: How are you doing?

ಹೇಗಿದ್ದಿಯಾ?
– ಚೆನ್ನಾಗಿದ್ದೇನೆ, ನಾನನ್ನುತ್ತೇನೆ, ಚೆನ್ನಾಗಿದ್ದೇನೆ.
ಚೆನ್ನಾಗಿ ನಿದ್ದೆ ಮಾಡಿದೆ.
ಕನಸೇನೂ ಕಾಣಲಿಲ್ಲ.
ನಾನಾಗಿ ಎದ್ದೆ.
ಕನ್ನಡಿಯಲ್ಲಿ ನೊಡಿಕೊಂಡೆ.
ವಿಶೇಷವೇನೂ ಕಾಣಿಸಲಿಲ್ಲ.
ನೆನಪಾದರು ಒಂದಿಬ್ಬರು ಗೊತ್ತಿದ್ದವರು.
ಒಂದಿಬ್ಬರು ಗೊತ್ತಿಲ್ಲದವರು.
ಮೇಜಿನ ಮೇಲಿದ್ದ ಪುಡಿಚೂರುಗಳನ್ನು ಬಳಿದೆ.
ಒಣದ್ರಾಕ್ಷೆಯೊಂದು ಕಂಡಿತು.
ಕಿಟಕಿಯೊಂದನ್ನು ತೆರೆದೆ.
ಖುಷಿಯಾಯಿತು ಒಮ್ಮೆ.
ಬೇಜಾರಾಯಿತು ಎರಡು ಸಲ.
ಏನೂ ಅನಿಸಲಿಲ್ಲ ಮೂರು ಸಲ.
ಯೋಚಿಸಿದೆ ಜೀವನದ ಅರ್ಥದ ಬಗ್ಗೆ ಒಮ್ಮೆ.
ಅರ್ಥಶೂನ್ಯತೆಯ ಬಗ್ಗೆ ಎರಡು ಸಲ.
ಏನಿಲ್ಲದರ ಬಗ್ಗೆ ಮೂರು ಸಲ.
ಕೆಮ್ಮಿದೆ.
ನೋವೇನೂ ಅನಿಸಲಿಲ್ಲ.
ಕೊರತೆಯೇನೂ ಇಲ್ಲ.
ನನ್ನ ಬಗ್ಗೆ ಯಾರೂ ಚಿಂತಿಸಲಿಲ್ಲ.
ನ್ಯೂಸ್ ನೋಡಿದೆ.
ಉದ್ಘಾಟನೆ ಮಾಡಿದರು.
ಸಂದರ್ಶನ ನೀಡಿದರು.
ಬಾಂಬು ಸಿಡಿಯಿತು.
ಇಬ್ಬರು ಮಕ್ಕಳು ಮತ್ತೆ ಒಂದು ಕಾರು ಮುಳುಗಿತು
(ಬೇರೆ ಬೇರೆ ಕಡೆ).
ಮಕ್ಕಳಿಗಿಂತ ಹೆಚ್ಚಾಗಿ ಕಾರಿನ ಬಗ್ಗೆ ಮಾತಾಡಿದರು.
ಅಂಗಳದ ಕಡೆ ಕಣ್ಣುಹಾಯಿಸಿದೆ.
ಪರ್ಸಿನೊಳಗೆ ಒಂದ್ಸಲ ನೋಡಿದೆ.
ಕಳೆದಕಾಲದೊಳಗೆ ಇಣುಕಿದೆ.
ನಾನು ಕಳಕೊಂಡದ್ದನ್ನ ಲೆಕ್ಕಹಾಕಿದೆ.
ನಾನು ಕಂಡುಹಿಡಿದುದ್ದರ ಬಗ್ಗೆ ಖುಷಿಪಟ್ಟೆ.
ಘಟನೆಗಳನ್ನು ಸಮೀಕ್ಷಿಸಿದೆ.
ಸಂದರ್ಭವನ್ನು ಅವಲೋಕಿಸಿದೆ.
ವಿಷಯವನ್ನು ಪರಿಶೀಲಿಸಿದೆ.
ಸಂಬಂಧಗಳ ಕಂಡುಹಿಡಿದೆ.
ಕಾರಣಗಳ ಸ್ಪಷ್ಟಪಡಿಸಿದೆ.
ಮಡಿದವರ ನೆನಪಿನಲ್ಲಿ ಒಂದು ನಿಮಿಷ ಮೌನ ತಾಳಿದೆ.
ನನ್ನ ಪ್ರಿಯಕರನಿಂದಾಗಿ ನಿಟ್ಟುಸಿರು ಬಿಟ್ಟೆ.
ಅಮ್ಮನ ಬಗ್ಗೆ ಯೋಚಿಸಿದೆ.
ಬಟ್ಟೆ ಬದಲಾಯಿಸಿಕೊಂಡೆ.
ತಲೆ ತುರಿಸಿಕೊಂಡೆ.
ಚೆನ್ನಾಗಿದ್ದೇನೆ, ನಾನನ್ನುತ್ತೇನೆ, ಚೆನ್ನಾಗಿದ್ದೇನೆ.