ತರ್ಪಣ

ತರ್ಪಣ ಬಿಟ್ಟು ಬಿಟ್ಟು ಕೈಯೆಲ್ಲ ನಡುಕ
ಕಣ್ಣುಗಳು ಮಸಕು ಮಂಜು
ಕಾಲಿಲ್ಲದ ಮುಂಡ ಶಿರವಿರದ ದೇಹ
ಸುತ್ತೆಲ್ಲ ಆಕ್ರಂದನ ಮಹಾ’ಲಯ’ ತರ್ಪಣ ತಾನೇ ನೇಯ್ದ ಬಲೆಯಲ್ಲಿ ಬಂಧಿ
ಬಿದ್ದ ಮಿಕಗಳ ವಿರಾಟ್ ಸ್ವರೂಪ
ದಿಕ್ಕುಗಾಣದೆ ಜೇಡ ಅಬ್ಬೆಪಾರಿ ಕಂಗಾಲು

ಕೌರವೇಂದ್ರನ ಅಕ್ಷೋಹಿಣಿ ಅಳಿದಿದೆ ರಣರಂಗವೆಲ್ಲ ಮರುಳುಗಳ ನರ್ತನ
ಪ್ರತಿಷ್ಠೆಗೆ ಬಿದ್ದ ಆಘಾತ ಏಟಿಗೆ ಎದಿರೇಟು ಓಡಿದವರು
ಬೆರಸಿದವರು ಸುಸ್ತೋ ಸುಸ್ತು
ನೋಡುವ ಮಂದಿಗೆ ಆತಂಕ ದಿಗಿಲು

ಕಂಡವರ ಮಕ್ಕಳ ಬಾವಿಗೆ ತಳ್ಳಿ
ಆಳ ನೋಡುವ ಮಂದಿ
ಅಂಡಲೆಯುವ ಅಶ್ವತ್ಥಾಮರು
ಉಯ್ಯಾಲೆಯಲ್ಲಿ ಮೇಲೇರಿದವರು
ಕೆಳಗೆ ಇಳಿಯದೆ ಇರಲಾದೀತೇ