“ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.” ನಾನು ಹೇಳಬೇಕು ಅಂದುಕೊಂಡಿದ್ದನ್ನ ಆದಷ್ಟು ಎಚ್ಚರಿಕೆಯಿಂದ ಹೇಳೋಕೆ ಪ್ರಯತ್ನ ಪಟ್ಟಿದ್ದೆ. ಸಾಗರ್ ತುಸು ನಿರಾಳರಾದಂತೆ ಅನಿಸಿತು.
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ “ಪ್ರೈವೆಸಿ” ನಿಮ್ಮ ಓದಿಗೆ

ಅದು ಮೇ ತಿಂಗಳು. ನಾನು ಹುಟ್ಟಿದ ಮಾಸ. ಪ್ರತಿ ಸಲದಂತೆ ಜನುಮದಿನದ ಹತ್ತಿರ ಹತ್ತಿರ ರಕ್ತದಾನ ಮಾಡೋದು ನಾ ರೂಢಿಸಿಕೊಂಡು ಬಂದ ಅಭ್ಯಾಸ. ಅದರ ಬಗ್ಗೆ ನಂಗೆ ಒಂದು ತೆರನಾದ ಹೆಮ್ಮೆ ಕೂಡ ಇತ್ತು. ಅದನ್ನ ಸ್ವಲ್ಪ ಜನರ ಬಳಿ ಹೇಳಿಕೊಳ್ಳುತ್ತಾ ಇದ್ದೆ. ನಾನೂ ಸಹ ಹಲವು ವರ್ಷಗಳ ಹಿಂದೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ನೋಡಿ, ನನ್ನ ಬರ್ತ್ ಡೆ ದಿನ ಕೂಡ ಹೀಗೆ ಮಾಡಬಹುದಲ್ಲ ಅನಿಸಿ ಅದನ್ನ ರೂಢಿಸಿಕೊಳ್ಳೋಕೆ ಶುರು ಮಾಡಿದ್ದೆ. ರಕ್ತದಾನ ಮಾಡೋದು ಒಳ್ಳೆಯದೆ. ಎಷ್ಟು ಸಲ ಮಾಡಿದ್ದೇನೆ ಅಂತ ಲೆಕ್ಕ ಇರಲಿ ಅಂತ ಪ್ರಮಾಣಪತ್ರ (ಸರ್ಟಿಫಿಕೇಟ್) ಮರೆಯದೇ ಪಡೆದು ತರುತ್ತಾ ಇರ್ತಿನಿ. ರಕ್ತ ಪಡೆದವರ ಸಂಬಂಧಿಕರು ಇದ್ದರೆ, ಅವರು ಥ್ಯಾಂಕ್ಸ್ ಸಹ ಹೇಳೋದು ಪ್ರತಿಯಾಗಿ ನಾ ಅವರಿಗೆ ಒಂದಷ್ಟು ಸಮಾಧಾನದ ಮಾತು ಹೇಳೋದು ಕೂಡ ನಡೆಯುತ್ತದೆ. ಒಂದೆರಡು ವರ್ಷದ ಹಿಂದೆ ಇದರಿಂದಾಗಿ ನನ್ನಲ್ಲಿ ಮೂಡಿದ ಅಹಂಕಾರ ನೀರಿನ ಗುಳ್ಳೇ ಒಡೆದು ಹೋಗೋ ಪ್ರಸಂಗವೊಂದು ನಡೆಯಿತು.

ಮೇ ಕೊನೆಯ ವಾರ ರಕ್ತದಾನ ಮಾಡ್ಬೇಕು ಅಂತ ನಿರ್ಧಾರ ಮಾಡ್ಕೊಂಡಿದ್ದೆ. ಕೆಲಸ ಮಾಡೋವಾಗ ನಾನು ಸದಸ್ಯನಾಗಿದ್ದ ವಾಟ್ಸಪ್ಪು ಗುಂಪಿನಲ್ಲಿ ಟಿ ಹೆಚ್ ಎಸ್ ಹಾಸ್ಪಿಟಲ್‌ನಲ್ಲಿ ಅನನ್ಯ ಅನ್ನೋ ಅಪಘಾತವಾದ ರೋಗಿಗೆ ಓ+ ರಕ್ತದ ತುರ್ತು ಅವಶ್ಯಕತೆ ಇದೆ ಎಂದು ಮೆಸೇಜು ಬಂದು ಗುದ್ದಿತು. ಕಾಂಟ್ಯಕ್ಟ್ ನಂಬರಿಗೆ ಕರೆಮಾಡಿದಾಗ ಸಾಗರ್ ಎನ್ನುವವರು ಮಾತನಾಡತೊಡಗಿದರು. “ಸಂಜೀವಿನಿ ಬ್ಲಡ್ ಬ್ಯಾಂಕ್ ಹತ್ತಿರ ಬರೋಕೆ ಆಗುತ್ತಾ ಸಾರ್. ಸ್ವಲ್ಪ ಅರ್ಜೆಂಟ್ ಇದೆ” ಅಲವತ್ತುಕೊಂಡರು. ಬ್ಲಡ್ ಬ್ಯಾಂಕಿನ ಬಳಿ ಹೋದಾಗ ಅಲ್ಲಿ ವಿಚಾರಿಸಿ ಬ್ಲಡ್ ಬ್ಯಾಂಕಿನ ಹಾಸಿಗೆ ಮೇಲೆ ಮಲಗಿದೆ. ಹದಿನೈದು ಇಪ್ಪತ್ತು ನಿಮಿಷದಲ್ಲಿ ರಕ್ತ ಸಂಗ್ರಹನೆ ಮುಗಿದು ನಾನು ಹೊರಬಂದೆ. ರಿಸೆಪ್ಷನಿಸ್ಟನನ್ನು ಕೇಳಿದಾಗ ಸಾಗರ್ ಎನ್ನುವವರು ಅಲ್ಲಿರಲಿಲ್ಲ. ರೋಗಿಯ ತಂದೆ ತಾಯಿ ಬಾಗಿಲ ಬಳಿ ನಿಂತಿದ್ದರು. ಅವರು ಅತೀವ ದುಃಖದಲ್ಲಿದ್ದಂತೆ ಕಂಡಿತು. ನಾನು ಅವರ ಬಳಿ ಹೋಗಿ “ನಿಮ್ಮ ಮಗಳು ಬೇಗ ಹುಷಾರಾಗುತ್ತಾಳೆ. ಆ ದೇವರು ಒಳ್ಳೇದು ಮಾಡ್ಲಿ” ಎಂದು ಹೊರಡಲು ಅಣಿಯಾಗುತ್ತಿದ್ದೆ. ಆಗ ಆಳುತ್ತಿದ್ದ ಅವರಮ್ಮ ಅಳು ನಿಲ್ಲಿಸಿ “ ಅವ್ಳು ಬದ್ಕಿ ಇನ್ನು ಎಷ್ಟ್ ಜನದ್ ಮಾನ ಮರ್ಯಾದೆ ಹರಾಜ್ ಹಾಕ್ಬೇಕು ಅಂತ ಇದಾಳೋ. ಹಂಗೆ ಹೊರಗೆ ಸತ್ರೆ ನಮಗೆಲ್ಲ ನೆಮ್ಮದಿ” ಎನ್ನುತ್ತಾ ಸೆರಗಿನಿಂದ ಬಾಯಿ ಮುಚ್ಚಿಕೊಂಡು ಅಳಲು ಶುರುಮಾಡಿದರು. ನನಗೆ ತುಸು ಕಸಿವಿಸಿಯಾಯಿತು. ಔಪಚಾರಿಕವಾಗಿ ಒಂದಷ್ಟು ಮಾತುಕತೆಯ ನಿರೀಕ್ಷೆಯಲ್ಲಿದ್ದವನ ಮೇಲೆ ಬುಲ್ಡೋಜರೊಂದು ಹಾದು ಹೋದಂತಾಯಿತು. ನನಗೇನು ಮಾತನಾಡಬೇಕೆಂದು ತಿಳಿಯದೆ ಅಲ್ಲೆ ನಿಂತಿದ್ದೆ. ಅವರ ಗಂಡನೂ ಏನೊಂದನ್ನೂ ಮಾತನಾಡದೇ ಒತ್ತರಿಸಿ ಬರುತ್ತಿದ್ದ ಅಳುವನ್ನ ನಿಗ್ರಹಿಸಲು ಕಷ್ಟಪಡುತ್ತಿದ್ದರು.

ಕೃಷ್ಣ ಪರಮಾತ್ಮನ ಹಾಗೆ ಸಾಗರ್ ಬಂದು ನಾವು ಮೂರು ಜನರನ್ನು ಒಮ್ಮೆ ನೋಡಿದರು. ಮೂವತ್ತರ ಆಸುಪಾಸಿನ ವಯಸ್ಸು. ಹಾಸನದ ಅರಸಿಕೆರೆ ಕಡೆಯವರು. ನಾನು ಅಲ್ಲಿ ಕೆಲಸ ಮಾಡಿದ್ದಾಗೆ ಹೇಳಿದೆ. ಆ ಹುಡುಗಿಯ ದೊಡ್ಡಪ್ಪನ ಮಗ. ಅಳುತ್ತಿದ್ದ ಚಿಕ್ಕಮ್ಮನನ್ನು ಸಂತೈಸಿ ಅವರಿಬ್ಬರನ್ನು ಒಳಗೆ ಕುಳಿತುಕೊಳ್ಳಲು ಹೇಳಿ, ನಾವಿಬ್ಬರು ನನ್ನ ಬೈಕ್ ಬಳಿ ಬಂದೆವು. ವಿಷಯ ತಿಳಿದು ಸಾಗರ್ ನೊಂದುಕೊಂಡು ಕ್ಷಮಾಪಣೆ ಕೇಳಿದರು. “ನನ್ನಪ್ಪ ಅಮ್ಮ ಹೋದಮೇಲೆ ಚಿಕ್ಕಪ್ಪ-ಚಿಕ್ಕಮ್ಮನೆ ನನ್ನ ನೋಡಿಕೊಂಡಿದ್ದರು. ಅವರ ಹೊಟ್ಟೆಯಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ರೆ, ನಾನು ಅವರಿಗೆ ಸ್ವಂತ ಮಗನೆ. ತಂಗಿ ಇದ್ದ ಪಿ.ಜಿ. ಮೇಲಿಂದ ಬಿದ್ದು ಆತ್ಮಹತ್ಯೆ ಪಯತ್ನ ಮಾಡಿಕೊಂಡಿದ್ದಾಳೆ. ತಂಗಿ ವಿಚಾರವಾಗಿ ಸ್ವಲ್ಪ ನೊಂದುಕೊಂಡಿದ್ದಾರೆ. ನೀವೇನು ಬೇಜಾರ್ ಮಾಡ್ಕೋಬೇಡಿ. ನಾನು ನಿಮ್ಮ ಹತ್ತಿರ ಮಾತಾಡ್ತೀನಿ.” ಎನ್ನುತ್ತಾ ಮತ್ತಿಬ್ಬರು ರಕ್ತದಾನ ಮಾಡುವವರ ಕಡೆ ಹೊರಟರು. ನಾನು ಮತ್ತೆ ಆಫೀಸಿಗೆ ಬಂದು ದಿನದ ಕೆಲಸವನ್ನು ಮುಗಿಸಿದೆ.

ಮಾರನೇ ದಿನ ಸಾಗರ್ ಅವರೇ ಕರೆ ಮಾಡಿದ್ದರು. ಯಾವುದೋ ತುರ್ತು ಕೆಲಸ ಇದ್ದ ಕಾರಣ ರಿಸೀವ್ ಮಾಡಿರಲಿಲ್ಲ. ಆಮೇಲೆ ನಾನೆ ಕರೆ ಮಾಡಿದೆ. “ನಿಮ್ಮ ತಂಗಿ ಹೇಗಿದ್ದಾರೆ” ಅವರು ಮಾತನಾಡುವ ಮುಂಚೆ ನಾನೇ ಕೇಳಿದೆ. “ಐ.ಸಿ.ಯು ಇಂದ ಜನರಲ್ ವಾರ್ಡಿಗೆ ಶಿಫ್ಟ್ ಮಾಡಿದ್ದಾರೆ. ಪ್ರಾಣಾಪಾಯ ಏನಿಲ್ಲ ಅಂತ ಹೇಳಿದ್ದಾರೆ. ನಿಮ್ಮ ಹಾಗೆ ಹಲವು ಜನ ಸಹಾಯ ಮಾಡಿದ್ರು. ಅವತ್ತು ಸರಿಯಾಗಿ ಮಾತನಾಡೋಕೆ ಆಗಲಿಲ್ಲ. ದಯವಿಟ್ಟು ಏನೂ ಅಂದುಕೋಬೇಡಿ.”

“ಅಯ್ಯೋ ಅದಕ್ಕೆಲ್ಲಾ. ಯಾಕೆ ನೊಂದುಕೋತೀರಾ. ನನಗೇನು ಸಮಸ್ಯೆಯಿಲ್ಲ. ಬೇಗ ಹುಷಾರಾಗಿ ಊರಿಗೆ ಹೋಗುವಂತೆ ಆದರೆ ಆಯ್ತು”

“ಚಿಕ್ಕಮ್ಮನಿಗೆ ಮಗಳನ್ನು ಊರಿಗೆ ಕರೆದೊಯ್ಯುವ ಮನಸಿಲ್ಲ. ನನಗೆ ತಂಗಿಯನ್ನು ಬಿಟ್ಟು ಕೊಡುವ ಹಾಗಿಲ್ಲ. ಅದೆಲ್ಲಾ ಇನ್ನು ಅವಳು ಹುಷಾರಾದ ಮೇಲೆ ನಿರ್ಧರಿಸಬೇಕು” ತಡೆ ತಡೆದು ಮಾತನಾಡುತ್ತಿದ್ದುದು ಗಮನಿಸಿದಾಗ, ಅವರು ಏನೋ ಹೇಳಬೇಕು ಅಂತೆಲ್ಲಾ ಪ್ರಯತ್ನ ಪಡ್ತಿದಾರೆ ಅನಿಸಿತು.

ಏನಾಯ್ತು ಅಂತೆಲ್ಲಾ ಕೇಳಬೇಕು ಅನಿಸಿದರೂ, ವಿಷಯದ ಗಂಭೀರತೆ ಅರಿಯದೆ, ಕೇಳೋದು ಅಷ್ಟು ಸಮಂಜಸವಲ್ಲ ಅನಿಸಿ ಸುಮ್ಮನಾದೆ. ಅವರಾಗಿ ಹೇಳಲಿ ಎನ್ನುತ್ತಾ ಕಾಯುತ್ತಿದ್ದೆ ಅಥವಾ ನಾನಾಗೆ ಕೇಳುವಷ್ಟು ಕುತೂಹಲ ನನ್ನಲ್ಲಿ ಬೇರು ಬಿಟ್ಟಿರಲಿಲ್ಲ.

ಸ್ವಲ್ಪ ಮೌನದ ನಂತರ ಅವರೆ ಶುರು ಮಾಡಿದರು; “ನೋಡಿ ನಾನು ಚಿಕ್ಕವಯಸ್ಸಿಂದ ನನ್ನ ತಂಗಿನಾ ನೋಡಿದಿನಿ. ಅವಳು ಇಂಥ ತಪ್ಪೆಲ್ಲಾ ಮಾಡಿದ್ದಾಳೆ ಅಂತ ನನಗೆ ಅನಿಸೋದಿಲ್ಲ.”

“……”

“ಅದ್ಯಾವುದೋ ರೀಲ್ಸ್ ವೀಡಿಯೋ ಅಂತೆ, ಅದು ಬಂದು ಚಿಕ್ಕಪ್ಪ ಚಿಕ್ಕಮ್ಮ ಊರಲ್ಲಿ ತಲೆ ಎತ್ತಿ ಓಡಾಡೋಕೆ ಆಗ್ತಿಲ್ಲ ಅಂತ ನೊಂದುಕೊಂಡಿದ್ದಾರೆ. ಅವಳು ತಂಗಿಯಷ್ಟೆ ಅಲ್ಲ ನಂಗೆ, ಮಗಳು ಕೂಡ. ನಾನು ಎತ್ತಾಡಿಸಿದ ಮಗಳು. ಶಾಲೆಗೆ ಹೋಗುವಾಗ ಸೈಕಲ್ಲು ಕಂಬಿ ಮೇಲೆ ಕುಳಿತು ಜಗತ್ತು ನೋಡಿದ್ದಾಳೆ. ಅವಳು ತಪ್ಪೆಸಗಿದ್ದಾಳೆ ಅಂತ ಊರೆಲ್ಲಾ ಹೇಳೋವಾಗ ಹೊಟ್ಟೆಗೆ ಸಂಕಟವಾಗುತ್ತದೆ” ದನಿ ಒಡೆದು ಅಳುವಿನ ತಿರುವಲ್ಲಿ ಇರೋದು ನನ್ನ ಅರಿವಿಗೆ ಬಂತು.

“…….”

“ಬಿಡಿ ಹೋಗಲಿ. ನಿಮಗೆ ಅರಸಿಕೆರೆಯಲ್ಲಿ ಶೇಷಣ್ಣ ಪರಿಚಯ ಅಂತ ಅಂದಿದ್ರಿ. ಬ್ಲಡ್ ಬ್ಯಾಂಕ್ ಹತ್ತಿರ. ಅವರು ಕೂಡ ನಮಗೆ ಪರಿಚಯ. ಕಾಲೇಜಲ್ಲಿ ಅವರ ಪಾಠ ಕೇಳಿದ್ದೇನೆ. ಅವರ ಮೇಲೆ ನಮಗೆ ತುಂಬಾ ಗೌರವ”

ಶೇಷಣ್ಣ ಎಂದಾಗ ಮಾತು ಬೇರೆ ಹಳಿಯ ಕಡೆ ಸಾಗಿತು. ನಾನು ಅಲ್ಲಿದ್ದ ಸಮಯ ಎಲ್ಲಾ ಹೇಳಿದೆ. ಇಬ್ಬರು ಹೊಸದಾಗಿ ಪರಿಚಯವಾದಾಗ ಸ್ವಲ್ಪ ಆರಂಭದಲ್ಲಿ ಉಂಟಾಗೋ ನಿರ್ವಾತವನ್ನು ಹೀಗೆ ಪರಸ್ಪರ ಗೌರವಿಸುವವರು ಮಾತಿನ ಮಧ್ಯೆ ಸಿಕ್ಕರೆ ಒಂದು ತೆರನಾದ ಆತ್ಮೀಯತೆ ಇಬ್ಬರ ನಡುವೆ ಬೆಳೆಯುತ್ತದೆ. ಸ್ವಲ್ಪ ಸಮಯವಾದ ಮೇಲೆ ಮತ್ತೊಮ್ಮೆ ಕರೆಮಾಡುವುದಾಗಿ ಹೇಳಿದರು. ನಾನು ಸುಮ್ಮನಾದೆ.

ವಿಷಯ ತಿಳಿದು ಸಾಗರ್ ನೊಂದುಕೊಂಡು ಕ್ಷಮಾಪಣೆ ಕೇಳಿದರು. “ನನ್ನಪ್ಪ ಅಮ್ಮ ಹೋದಮೇಲೆ ಚಿಕ್ಕಪ್ಪ-ಚಿಕ್ಕಮ್ಮನೆ ನನ್ನ ನೋಡಿಕೊಂಡಿದ್ದರು. ಅವರ ಹೊಟ್ಟೆಯಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ರೆ, ನಾನು ಅವರಿಗೆ ಸ್ವಂತ ಮಗನೆ. ತಂಗಿ ಇದ್ದ ಪಿ.ಜಿ. ಮೇಲಿಂದ ಬಿದ್ದು ಆತ್ಮಹತ್ಯೆ ಪಯತ್ನ ಮಾಡಿಕೊಂಡಿದ್ದಾಳೆ. ತಂಗಿ ವಿಚಾರವಾಗಿ ಸ್ವಲ್ಪ ನೊಂದುಕೊಂಡಿದ್ದಾರೆ. ನೀವೇನು ಬೇಜಾರ್ ಮಾಡ್ಕೋಬೇಡಿ. ನಾನು ನಿಮ್ಮ ಹತ್ತಿರ ಮಾತಾಡ್ತೀನಿ.” ಎನ್ನುತ್ತಾ ಮತ್ತಿಬ್ಬರು ರಕ್ತದಾನ ಮಾಡುವವರ ಕಡೆ ಹೊರಟರು.

ಮಾರನೇ ದಿನ ಸಹೋದ್ಯೋಗಿಗಳೆಲ್ಲಾ ಕೂತು ಮಾತಾಡುವಾಗ ಹತ್ತೊಂಬತ್ತು ವರ್ಷದ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಸುದ್ದಿಯನ್ನ ಸಹೋದ್ಯೋಗಿಯೊಬ್ಬರು ತುಮಕೂರು ಸ್ಥಳೀಯ ಪತ್ರಿಕೆ ಹಿಡಿದು “ಈಗಿನ ಕಾಲದ ಮಕ್ಕಳಿಗೆ ಬುದ್ದಿ ಇಲ್ಲ ಕಣ್ರಿ. ಎಲ್ಲದಕ್ಕೂ ಬೇಗ ರಿಯಾಕ್ಟು ಮಾಡೋದು. ಕೆಮ್ಮಿದ್ರು ಕ್ಯಾಕರಿಸಿದರೂ ಸಾಯ್ತಿವಿ ಅನ್ನೋದು… ಇದೆ ಆಗೋಯ್ತು. ಇಗೋ ಮೊನ್ನೆ ಫೋನ್‌ ಚಾರ್ಜರ್ ಕೊಟ್ಟಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದ್ಯಾವುದೋ ಹುಡುಗಿ ಪಿ.ಜಿ. ಮೇಲಿಂದ ಬಿದ್ದು ಸಾಯೋಕೆ ಹೋಗಿದ್ಯಂತೆ. ಏನ್ ಕಾರಣ ಇರಲ್ಲಾರಿ” ಅಂದರು. ಪೇಪರು ಕಸಿದು ನೋಡಿದೆ. ನಾ ಅಂದುಕೊಂಡಂತೆ ನಾ ರಕ್ತ ದಾನ ಮಾಡಿದವರೆ ಆಗಿದ್ದರು. ಕುತೂಹಲವೆನಿಸಿ ತುಮಕೂರು ಸ್ಥಳೀಯ ಪೇಪರಿನ ಅಂತರ್ಜಾಲ ಆವೃತ್ತಿ ಹಾಗೂ ವಾರ್ತಾ ಜಾಲತಾಣ ತಡಕಾಡಿದೆ.

ಒಂದೆರಡು ಬ್ಲರ್ ಮಾಡಿದ ಫೋಟೊಗಳು. ಎಲ್ಲಾ ಮೊಬೈಲ್‌ನಲ್ಲಿ ತೆಗೆದ ವೀಡಿಯೋದಿಂದ ಕತ್ತರಿಸಿ ತೆಗೆದ ಚಿತ್ರಗಳು. ತುಮಕೂರಿನ ಪಿ.ಜಿ. ಒಂದರಲ್ಲಿ ಸೆಕ್ಸ್ ಟಾಯ್ಸ್ ಬಳಸುತ್ತಿದ್ದಾಳೆ ಎಂದು ಗೆಳತಿಯರೇ ರೂಮಿಗೆ ನುಗ್ಗಿ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದರು. ಅದರಲ್ಲಿ ಏಕಾ ಏಕಿ ರೂಮಿಗೆ ನುಗ್ಗಿದವರನ್ನು ನೋಡಿ ದಿಗ್ಭ್ರಾಂತಗೊಂಡು ವೇಲಿನಿಂದ ತನ್ನ ಅರೆ ನಗ್ನ ಮೈ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವ ಒಬ್ಬಳು ಟೀನೇಜಿನ ಹುಡುಗಿ, ಮೂಲೆಯಲ್ಲೆಲ್ಲೋ ಅವಳದು ಎನ್ನಲಾದ ಪರಿಕರಗಳ ಬ್ಲರ್ ಫೋಟೋ ಕೂಡ ಒಂದು, ಕಮೆಂಟು ಸೆಕ್ಷನ್ನಿನ ತುಂಬೆಲ್ಲಾ ಮೊಬೈಲ್ ನಂಬರು ಹಾಕಿ Call Me ಎಂದು ಘೀಳಿಡುತ್ತಿದ್ದ ಕ್ರಿಮಿಗಳು. ಇಂತಹ ನ್ಯೂಸಿನ ಮಧ್ಯೆಯೂ ಜಾಹಿರಾತು ತಂದು ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯಸಾಧಕರು. ನೈತಿಕತೆ, ಪರಾನೂಭೂತಿ ಎಲ್ಲಾ ಸುಮ್ಮನೆ ಅಕ್ಷರಗಳ ಗುಂಪು ಅನಿಸಿತು. ನನಗೆ ಈಗ ಎಲ್ಲವೂ ಅರ್ಥವಾಗಿತ್ತು. ತಂದೆ ತಾಯಿಯ ಸಿಟ್ಟು, ಅಣ್ಣನಾಗಿ ಸಾಗರ್ ಅಸಹಾಯಕತೆ, ಸಾಮಾಜಿಕವಾಗಿ ಕೆಲಕಾಲದವರೆಗೂ ಇವರು ಅನುಭವಿಸುವ ಸಂಕಟ ನೆನಪಿಗೆ ಬಂದು ಕನಿಕರವುಂಟಾಯಿತು. ಸಾಗರ್‌ಗೆ ಕರೆ ಮಾಡಿ ಮಾತಾಡಬೇಕೆನಿಸಿದರೂ ಏನ್ ಮಾತಾಡ್ಲಿ ಅಂತ ಗೊಂದಲ ಶುರುವಾಯಿತು. ಮೂರನೆಯವನಾಗಿ ಇಷ್ಟು ಖಾಸಗಿ ವಿಚಾರದ ಬಗ್ಗೆ ಏನು ಹೇಳೋದು ತಿಳಿಯಲಿಲ್ಲ. ಮತ್ತೆ ಸಾಗರ್ ಕರೆ ಮಾಡಿದ್ದರೂ ನಾ ಏನೊಂದು ಕೇಳುವ-ಹೇಳುವ ಸಾಹಸ ಮಾಡಲಿಲ್ಲ.

*****

ಸ್ವಲ್ಪ ದಿನಗಳಾದ ಮೇಲೆ ಅಚಾನಕ್ಕಾಗಿ ಸುಧಾ ಟಿ ಹೌಸಿನಲ್ಲಿ ನನ್ನ ಧ್ವನಿ ಗುರುತಿಸಿ ಸಾಗರ್ ಅವರೇ ಮಾತಾಡಿಸಿದರು. ಒಂದೆರಡು ಬಾರಿ ಕರೆ ಮಾಡಿದ್ದರಿಂದ ಹೊಸ ಪರಿಚಯದ ಸಂಕೋಚ ತುಸು ಕಡಿಮೆಯಾಗಿತ್ತು. ತಂಗಿಯ ಆರೋಗ್ಯವು ಸುಧಾರಿಸಿದ್ದರಿಂದ ಕೆಲವೇ ದಿನದಲ್ಲಿ ಡಿಸ್ಚಾರ್ಜಿನ ನಿರೀಕ್ಷೆಯಲ್ಲಿದ್ದರು. ಎರಡು ಟೀ ಹೇಳಿ ಇಬ್ಬರೂ ಕುಳಿತೆವು. ತಂದೆ ತಾಯಿಯ ಬಗ್ಗೆ ವಿಚಾರಿಸಿದೆ.

“ಅವರಿನ್ನೂ ಸಿಟ್ಟಲ್ಲಿ ಇದ್ದಾರೆ. ಅವರಿಗೂ ಇದೆಲ್ಲಾ ಹೇಗೆ ನಿಭಾಯಿಸಬೇಕು ಅಂತ ಗೊತ್ತಿಲ್ಲ. ತಂಗಿಯೊಂದಿಗೆ ಮಾತಾಡೊಕೆ ಕೂಡ ಇಷ್ಟ ಪಡ್ತಿಲ್ಲ. ನಮ್ಮನೆ ಹುಡುಗಿ ಹೀಗೆಲ್ಲಾ ತಪ್ಪು ಮಾಡೋಲ್ಲ ಅಂತ ಹೇಳಿದ್ದೀನಿ. ನೋಡೋಣ ದಿನಕಳೆದಂತೆ ಪರಿಸ್ಥಿತಿ ಸುಧಾರಿಸಬಹುದು”

“ನೀವು ಹೇಳೋದು ಸರಿ. ಇದೆಲ್ಲಾ ನಿಭಾಯಿಸೋದು ಕಷ್ಟ. ಮಗನಾಗಿ ತಂದೆ ತಾಯಿ ಜೊತೆ ಈ ಟೈಮಲ್ಲಿ ಇದ್ದು ನಿಭಾಯಿಸೋದನ್ನ ಚನ್ನಾಗಿ ಮಾಡ್ತಿದ್ದಿರಾ. ಇದರಿಂದಾನೆ ನಿಮ್ಮ ಮೇಲೆ ನನಗೆ ತುಂಬಾ ಗೌರವ ಇದೆ. ಬೇರೆಯವರು ಯಾರೇ ಇದ್ದರೂ ನಿಮ್ಮಷ್ಟೆ ತಾಳ್ಮೆಯಿಂದ ಮಾಡುತ್ತಿದ್ದರು ಅಂತ ನನಗೆ ಅನಿಸೋಲ್ಲ” ನನ್ನ ಮಾತು ಕೇಳಿ ಸಾಗರ್ ಸ್ವಲ್ಪ ತಿಳಿಯಾದಂತೆ ಅನಿಸಿತು. ಅಷ್ಟೊತ್ತಿಗೆ ಟೀ ಬಂತು. ನನ್ನ ಮಾತು ಮುಂದುವರೆಯಿತು. ಕೆಲವಷ್ಟನ್ನು ನಾನು ಹೇಳಲೇಬೇಕಿತ್ತು. ಶಿಷ್ಟಾಚಾರದ ಬ್ಯಾರಿಕೇಡನ್ನು ಮುರಿಯಲು ಅಣಿಯಾದೆ.

“ಅಂದಹಾಗೆ ನಮ್ಮ ಭೇಟಿಯಾದಾಗಿಂದ ಗಮನಿಸ್ತಾ ಇದ್ದೇನೆ. ತಪ್ಪು ತಪ್ಪು ಅಂತ ಹೇಳ್ತಿದ್ದಿರಾ. ನೀವು ಒಂದೆರಡು ವರ್ಷ ನನಗಿಂತ ದೊಡ್ಡವರು. ಜಗತ್ತನ್ನ ಹೆಚ್ಚೇ ಕಂಡಿದ್ದಿರಾ. ನಾನೂ ಈ ಘಟನೆ ಬಗ್ಗೆ ಪೇಪರಲ್ಲಿ ಓದಿದೆ. ಅವರು ಇದರಲ್ಲಿ ಪಾತ್ರವಹಿಸಿದ್ದಾರ ಇಲ್ಲವಾ ಅನ್ನೋದು ಇಲ್ಲಿ ಮುಖ್ಯ ಅಲ್ಲವೇ ಅಲ್ಲ” ನನ್ನ ಮಾತುಗಳು ಸ್ಪಷ್ಟವಾಗಿತ್ತು. ಅಚಾನಕ್ಕಾಗಿ ಇದಿರಿಗೆ ಬಂದ ಮಾತುಗಳಿಂದ ಕೊಂಚ ಗಲಿಬಿಲಿಗೊಂಡರು. ತುಸು ಹೆಚ್ಚೆ ಟೀ ಕುಡಿದು ಬಿಸಿ ತುಟಿ ತಾಕಿದಂತಾಗಿ ಕಪ್ಪು ಕೆಳಗಿಟ್ಟು ಮಾತು ಆಲಿಸತೊಡಗಿದರು.

“ಒಂದು ಸಂದಿಗ್ಧ ಸಂದರ್ಭದಲ್ಲಿ ಒಬ್ಬರ ಇರುವಿಕೆ ಆ ಕ್ಲಿಷ್ಟ ಸನ್ನಿವೇಶವನ್ನು ಸಹನೀಯಗೊಳಿಸಬಲ್ಲುದು ಅಂತ ಗೊತ್ತಿದ್ರೂ ಅ ಸಮಯಕ್ಕೆ ತಮ್ಮನ್ನ ಅಲಭ್ಯರನ್ನಾಗಿಸಿಕೊಳ್ಳೋದು ಒಬ್ಬರು ಎದುರಿಸೋ ಅತೀ ಕೆಟ್ಟ ಸಂದರ್ಭ. ಇಂತ ಸಂದರ್ಭದಲ್ಲಿ ನಿಮ್ಮ ಸಿಸ್ಟರ್ ಇದಾರೆ‌. ಈಗ ಅವರ ಜೊತೆ ನೀವು ಇರೋದು ತುಂಬಾ ಮುಖ್ಯ. ಅದನ್ನ ನೀವು ಸಮರ್ಥವಾಗಿ‌ ಮಾಡ್ತಾ ಇದ್ದಿರಾ. ಅದರ ಜೊತೆ…” ಇಬ್ಬರ ಟೀ ಕಪ್ಪುಗಳು ಟೇಬಲ್ಲಿನ ಮೇಲೆ ಅನಾಥವಾಗಿದ್ದವು. ಸ್ಪರ್ಧೆಗೆ ಬಿದ್ದವಂತೆ ಎರಡು ಕಪ್ಪಿನ ಮೇಲ್ಪದರದಲ್ಲಿ ಕೆನೆಕಟ್ಟಲು ಶುರುವಾಯಿತು. “ಅದರ ಜೊತೆ ಕೆಲವು ವಿಚಾರಗಳನ್ನ ಅರ್ಥ ಮಾಡ್ಕೊಳ್ಳೋದು ಒಳ್ಳೇದು. ನಮಗೆ ನಮ್ಮ ದೇಹದ ಮೇಲೆ ನಮಗೆ ಎಲ್ಲಾ ತೆರನಾದ ಹಕ್ಕು ಇರುತ್ತದೆ. ಮತ್ತೊಬ್ಬರಿಗೆ ತೊಂದರೆ ಕೊಡದೇ ನಮ್ಮಷ್ಟಕ್ಕೆ ನಾವು ಖುಷಿಯಿಂದ ಇರಬಲ್ಲ ಎಲ್ಲಾ ಅವಕಾಶಗಳನ್ನು ಈ ನೆಲದ ಕಾನೂನು ನಮ್ಮೆಲ್ಲರಿಗೂ ಕೊಟ್ಟಿದೆ. ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.” ನಾನು ಹೇಳಬೇಕು ಅಂದುಕೊಂಡಿದ್ದನ್ನ ಆದಷ್ಟು ಎಚ್ಚರಿಕೆಯಿಂದ ಹೇಳೋಕೆ ಪ್ರಯತ್ನ ಪಟ್ಟಿದ್ದೆ. ಸಾಗರ್ ತುಸು ನಿರಾಳರಾದಂತೆ ಅನಿಸಿತು. ಇದನ್ನೆಲ್ಲಾ ತಂದೆ ತಾಯಿಗೆ ಅರ್ಥ ಮಾಡಿಸುವಷ್ಟು ಶಕ್ತಿಯನ್ನು ನಾ ನಂಬದ ಆ ದೇವರುಗಳು ಇವರಿಗೆ ನೀಡಲಿ ಅಂತ ಮನಸಲ್ಲೇ ಕೇಳಿಕೊಂಡೆ.

“ನೀವು ಹೇಳೋದು ಸರಿ ಎನಿಸುತ್ತದೆ‌. ನಿಜವಾಗಿಯೂ ನಮ್ಮ ಮಗಳು ಏನೊಂದು ತಪ್ಪು ಮಾಡಿಲ್ಲ. ಅವಳ ಜೊತೆ ನಾನು ಇರ್ಬೇಕು ಯಾವಾಗಲೂ. ಅದು ತುಂಬಾ ಮುಖ್ಯ ಅಂತಾನು ನಂಗೆ ಗೊತ್ತಿದೆ‌. ಅಗತ್ಯ ಬಿದ್ದರೆ ಒಳ್ಳೆ‌ ಕೌನ್ಸಿಲರ್ ಬಳಿಯೂ ಹೋಗೋಣ ಅಂತ ಅಂದುಕೊಳ್ತಾ ಇದ್ದೆ. ಇದೆಲ್ಲಾ ಕಳೆದು ಬದುಕು ಮೊದಲಿನಂತಾದರೆ ಸಾಕು. ಹಳೆಯದೆಲ್ಲಾ ಅಷ್ಟು ಮುಖ್ಯವಲ್ಲ ಕೂಡ. ಅಮ್ಮ ಏನೇ ಅಂದರೂ ದುಃಖ ಕೋಪದ ಬಿಸುಪಲ್ಲಿ ಮಾತಾಡುತ್ತಾರೆ. ಅಂತರಾಳದಲ್ಲಿ ಮಗಳ ಪ್ರೀತಿ ಸಾಗರವೇ ಕಟ್ಟಿದ್ದಾಳೆ” ಸಾಗರ್ ಹನಿಗಣ್ಣಾದರು. ನಾನು ಸಮಾಧಾನ ಮಾಡಲಿಲ್ಲ. ಟೀ ಕಪ್ಪಿನಲ್ಲಿ ಅಳಿದುಳಿದಿದ್ದ ಟೀ ಕಡುಕಂದು ಬಣ್ಣದ ಕೆನೆ ಹೊದ್ದು ನಿದ್ರೆಗೆ ಜಾರಿತ್ತು. ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಹೊರಡಲು ಅಣಿಯಾದೆವು.

ಅವರೇ ಕೌಂಟರಿನಲ್ಲಿ ಬಿಲ್ಲು ಕೊಡಲು ಹೋದರು. ನಾ ತಡೆಯಲಿಲ್ಲ. ಅಲ್ಲೆ ಇದ್ದ ಹೋಟೆಲು ಓನರು ದುಡ್ಡು ನಿರಾಕರಿಸಿ. “ಬೇರೆಯವರ ಹತ್ತಿರ ತಗೊಳೋ ಹಾಗಿಲ್ಲ. ಬ್ಯಾಂಕಿನವರು ಕೋಪ ಮಾಡ್ಕೋತಾರೆ. ಆಗಲೇ ನಮಗೆ ಸ್ಟಾಂಡಿಂಗ್ ಇನ್ಸ್ಟ್ರಾಕ್ಷನ್ ಇದೆ” ಎನ್ನುತ್ತಾ ತಡೆದರು‌. “ಹೌದೌದು” ಎನ್ನುತ್ತಾ ನಾನು ಹ್ಞೂ ಗುಟ್ಟಿದೆ‌. ಅವರ ದುಡ್ಡು ವಾಪಸ್ಸು ಕೊಡಿಸಿ ನಾ ದುಡ್ಡು ಕೊಟ್ಟು ಸಾಗರ್ ಜೊತೆ ಬಿ ಹೆಚ್ ರಸ್ತೆ ಕಡೆಗೆ ಹೆಜ್ಜೆ ಹಾಕಿದೆ. ಇಬ್ಬರ ಎದೆಯ ಭಾರ ತುಸು ಇಂಗಿತ್ತು‌. ಅವರು ಎಡಕ್ಕೆ ಹಾಸ್ಪಿಟಲ್ ಕಡೆ ಹೆಜ್ಜೆ ಹಾಕಿದ್ರು. ನಾ ಎಮ್.ಜಿ ರೋಡಿನ ಕಡೆ ಬಂದೆ‌.