ಕಳೆದ ಶನಿವಾರ ಅಕ್ಟೋಬರ್ ೧೪ ರ ಸಂಜೆ ಸೋಲೆಂಬುದು ಬಹುಬೇಗ ಬಂತು. ಅದೇನೋ ಅವಸರವಿದೆ ಎನ್ನುವ ರೀತಿ ಧಾವಿಸಿ ಬಂದಂತೆ, ಇಗೋ ತಗೊಳ್ಳಿ ಎಂಬಂತೆ ಇಡೀ ದೇಶವನ್ನೇ ಆವರಿಸಿ ಮಂಕು ಹಿಡಿಸಿಬಿಟ್ಟಿತು. ಇದೇನಿದು ಮತ ಎಣಿಕೆ ಈಗಷ್ಟೇ ಆರಂಭವಾಯ್ತಲ್ಲ ಎನ್ನುವ ಮಾತು ಗಾಳಿಯಲ್ಲಿ ಇನ್ನೂ ತೇಲಾಡುತ್ತಿರುವಾಗಲೇ ‘ನೋ ವೋಟ್’ ಹೆಚ್ಚಾಗಿ, ನಾನು ಟಿವಿ ಮುಂದೆ ಹಾಗೆಯೇ ಸ್ಥಬ್ಧಳಾಗಿದ್ದೆ. ಸೋತ ರೆಫೆರೆಂಡಮ್ ಕೈಮಾಡಿ ತೋರಿಸಿದ್ದು ಆಸ್ಟ್ರೇಲಿಯನ್ನರಿಗೆ ಇದು ಪರ್ಯಾಲೋಚನೆಯ ಸಮಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಒಪ್ಪಲಿಲ್ಲ ಅವರು. ರೆಫೆರೆಂಡಮ್ – ವಾಯ್ಸ್ ಟು ದಿ ಪಾರ್ಲಿಮೆಂಟ್ ಕಳಾಹೀನವಾಗಿ ಧರೆಗುರುಳಿತು. ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳನ್ನು ಸಂವಿಧಾನದಲ್ಲಿ ಹೆಸರಿಸಿ, ಸೇರಿಸಿ, ಸಂವಿಧಾನಕ್ಕೊಂದು ತಿದ್ದುಪಡಿ ತಂದು, ಪಾರ್ಲಿಮೆಂಟಿನಲ್ಲಿ ಅವರದ್ದೊಂದು ಪ್ರಾತಿನಿಧಿಕ ಸಲಹಾ ಸಮಿತಿಯನ್ನು ರಚಿಸುವ ನಿರ್ಣಾಯಕ ಪ್ರಯತ್ನಕ್ಕೆ ತಣ್ಣೀರೆರೆಚಿದಂತಾಗಿದೆ.

ಕಳೆದ ಶನಿವಾರ ಅಕ್ಟೋಬರ್ ೧೪ ರ ಸಂಜೆ ಸೋಲೆಂಬುದು ಬಹುಬೇಗ ಬಂತು. ಅದೇನೋ ಅವಸರವಿದೆ ಎನ್ನುವ ರೀತಿ ಧಾವಿಸಿ ಬಂದಂತೆ, ಇಗೋ ತಗೊಳ್ಳಿ ಎಂಬಂತೆ ಇಡೀ ದೇಶವನ್ನೇ ಆವರಿಸಿ ಮಂಕು ಹಿಡಿಸಿಬಿಟ್ಟಿತು. ಇದೇನಿದು ಮತ ಎಣಿಕೆ ಈಗಷ್ಟೇ ಆರಂಭವಾಯ್ತಲ್ಲ ಎನ್ನುವ ಮಾತು ಗಾಳಿಯಲ್ಲಿ ಇನ್ನೂ ತೇಲಾಡುತ್ತಿರುವಾಗಲೇ ‘ನೋ ವೋಟ್’ ಹೆಚ್ಚಾಗಿ, ನಾನು ಟಿವಿ ಮುಂದೆ ಹಾಗೆಯೇ ಸ್ಥಬ್ಧಳಾಗಿದ್ದೆ. ಸೋತ ರೆಫೆರೆಂಡಮ್ ಕೈಮಾಡಿ ತೋರಿಸಿದ್ದು ಆಸ್ಟ್ರೇಲಿಯನ್ನರಿಗೆ ಇದು ಪರ್ಯಾಲೋಚನೆಯ ಸಮಯ. ಈ ವಾರ ಆಸ್ಟ್ರೇಲಿಯಾದಲ್ಲಿ ‘mourning’ ಅಥವಾ ಶೋಕಾಚರಣೆಯ ಕಾಲ. ಜೊತೆಗೇ, ಇದು ಹೀಲಿಂಗ್ ಅಥವಾ ನೋವು, ದುಃಖಗಳ ಶಮನ ಕಾಲ.

ದೇಶದಲ್ಲಿರುವ ಆರು ರಾಜ್ಯಗಳಲ್ಲೂ ನೋ ಎಂದವರೇ ಹೆಚ್ಚು. ಅವರ ಒಟ್ಟೂ ಮತ ಶೇಕಡಾ ೬೦ ರಷ್ಟು. ದೇಶದಾದ್ಯಂತ ಯೆಸ್ ಎಂದು ತಮ್ಮ ಮತ ಚಲಾಯಿಸಿದವರು ಶೇಕಡಾ ೪೦. ರೆಫೆರೆಂಡಮ್ ಪರವಾಗಿ ಬಹುಮತ ನೀಡಿದ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟೊರಿ ಅದೊಂದು ರಾಜ್ಯವಲ್ಲ, ಕೇಂದ್ರಸರ್ಕಾರದ ಆಡಳಿತ ಪ್ರದೇಶ ಎನ್ನುವ ಕಾರಣಕ್ಕಾಗಿ ಆ ಬಹುಮತಕ್ಕೆ ಮನ್ನಣೆ ಇಲ್ಲ. ಉತ್ತರದ ನೊರ್ತೆರ್ನ್ ಟೆರಿಟೊರಿ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಿಸುವ ಮೂಲನಿವಾಸಿಗಳ ಯೆಸ್ ಮತ ಕುರಿತು ಇದ್ದ ಆಶಾದಾಯಕ ಭರವಸೆ ಕೂಡ ಸುಳ್ಳಾಯಿತು. ಈ ಬಗೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ವಾಯ್ಸ್ ಟು ದಿ ಪಾರ್ಲಿಮೆಂಟ್ ಸೋಲುತ್ತದೆಯೆನ್ನುವ ಅಂದಾಜು ಅಷ್ಟೊಂದು ಮಟ್ಟಿಗೆ ಇದ್ದಿರಲಿಲ್ಲ. ಅಂಕಿಅಂಶಗಳ ಪ್ರಕಾರ, ಆಧಾರಸಹಿತ ಇರುವ ಮಾಹಿತಿಯಂತೆ ಅಸಮಾನತೆ, ತಾರತಮ್ಯತೆ, ಕಡೆಗಣನೆ (marginalisation), ಮತ್ತು ರೇಸಿಸಮ್ ಹೆಚ್ಚಿನ ಮಟ್ಟದಲ್ಲಿರುವ ರಾಜ್ಯಗಳಾದ ಕ್ವೀನ್ಸ್‌ಲ್ಯಾಂಡ್ ಮತ್ತು ವೆಸ್ಟೆರ್ನ್ ಆಸ್ಟ್ರೇಲಿಯಾಗಳಲ್ಲಿ ರೆಫೆರೆಂಡಮ್ ಸೋಲುವ ಸ್ಪಷ್ಟ ಚಿಹ್ನೆಗಳಿದ್ದವು. ಆದರೆ ಪ್ರಗತಿಪರ ರಾಜ್ಯಗಳಾದ ವಿಕ್ಟೋರಿಯಾ, ನ್ಯೂ ಸೌತ್ ವೇಲ್ಸ್, ಸೌತ್ ಆಸ್ಟ್ರೇಲಿಯಾ ಮತ್ತು ಟಾಸ್ಮೆನಿಯಾ ರಾಜ್ಯಗಳಲ್ಲೂ ಕೂಡ ಅದೇ ಸೋಲಿನ ಛಾಯೆ. ಇದು ಬಹುಶಃ ನೋ ವೋಟ್ ಪರವಾಗಿ ಪ್ರಚಾರ ಮಾಡಿದ್ದ ವಿರೋಧ ಪಕ್ಷದವರಿಗೂ ಆಶ್ಚರ್ಯ ತಂದಿರಬೇಕು. ಸಮಾಧಾನಕರ ವಿಷಯವೆಂದರೆ ಈ ನಾಲ್ಕೂ ರಾಜ್ಯಗಳಲ್ಲಿನ ಮತಗಳು ಶೇಕಡಾ ೪೦ ಎನ್ನುವ ಲಕ್ಷ್ಮಣರೇಖೆಯನ್ನು ದಾಟಿ, ೫೦ ರ ಅಂಚನ್ನು ತಲುಪಲು ಬಲು ಕಷ್ಟಪಟ್ಟಿದ್ದವು ಎನ್ನುವುದು ಕೂಡ ಸ್ಪಷ್ಟವಾಗಿತ್ತು. ಅಂದರೆ ಅನೇಕರು ಬದಲಾವಣೆ ಬೇಕು, ನಮ್ಮ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳನ್ನು ಸಂವಿಧಾನದಲ್ಲಿ ಹೆಸರಿಸಬೇಕು ಎಂದು ನಿರ್ಧರಿಸಿದ್ದರು. ಇದರಿಂದ ಅಲ್ಪಸ್ವಲ್ಪ ಸಮಾಧಾನವಾಗಿದೆ.

ತಮ್ಮ ಸರಕಾರದ ಮುಂದಾಳತ್ವದಲ್ಲಿ ನಡೆದ ರೆಫೆರೆಂಡಮ್ ೨೦೨೩ ಪ್ರಯತ್ನ ವಿಫಲವಾದ ಫಲಿತಾಂಶ ಹೊರಬಿದ್ದಾಗ ಪ್ರಧಾನಿ ಆಂಟೊನಿ ಅಲ್ಬಾನೀಸಿ ಮತ್ತು ಇಂಡೀಜಿನಸ್ ಅಫೇರ್ಸ್ ಮಂತ್ರಿ ಲಿಂಡಾ ಬರ್ನಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದು ‘ಆಸ್ಟ್ರೇಲಿಯನ್ನರ ನಿರ್ಧಾರವನ್ನು ಗೌರವಿಸುತ್ತೀವಿ. ಇದು ಹೊಸ ದಾರಿ, ಪರ್ಯಾಯಗಳ ಹುಡುಕುವಿಕೆಯ ಕಾಲ. ಈ ಘಳಿಗೆಯಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವೀ ಹ್ಯಾವ್ ಟು ಲಿಸನ್ ಅಂಡ್ ರೆಸ್ಪೆಕ್ಟ್. ನಮ್ಮೆಲ್ಲರ ನೋವು ಶಮನವಾಗಬೇಕಿದೆ’.

ರೆಫೆರೆಂಡಮ್ ೨೦೨೩ ಪ್ರಯತ್ನ ವಿಫಲವಾದದ್ದು ಅನೇಕರಿಗೆ ನೋವುಂಟು ಮಾಡಿದೆ. ‘We are hurting’ ಅನ್ನುವ ಮಾತು ಕೇಳುತ್ತಿದೆ. ನನ್ನನ್ನೂ ಒಳಗೊಂಡಂತೆ ಮಿಲಿಯನ್ ಗಟ್ಟಲೆ ಜನರಿಗೆ ಅತ್ಯಂತ ನಿರಾಸೆಯಾಗಿದೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಬದುಕಿ, ಬಾಳುತ್ತಿರುವ ಈ ನಾಡಿನ ಜನರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳನ್ನು ಈಗಲೂ ಪರಕೀಯರಂತೆ ಸಂವಿಧಾನದಿಂದ ಹೊರಗಿಟ್ಟಿರುವುದು ನಾಚಿಕೆಗೇಡು. ವಸಾಹತುಶಾಹಿಗಳಾಗಿ ನೆಲೆಯೂರಿದ ಬ್ರಿಟಿಷರು ತಾವು ೧೯೦೧ ನೇ ಇಸವಿಯಲ್ಲಿ ರಚಿಸಿದ ಸಂವಿಧಾನದಲ್ಲಿ ಈ ನೆಲದ ಮಕ್ಕಳನ್ನು ಹೇಳಹೆಸರಿಲ್ಲದಂತೆ ಮಾಡಿರುವ ಪರಿಸ್ಥಿತಿ ತಪ್ಪು. ಮೂಲನಿವಾಸಿಗಳು ಇದನ್ನು ಸರಿಪಡಿಸಿ ಎಂದು ಕೇಳಿ ದಶಕಗಳಿಂದ ಕೇಳುತ್ತಿದ್ದರೂ, ಹಿಂದಿನ ಸರಕಾರಗಳು ‘ಸರಿ ಮಾಡುತ್ತೀವಿ, ಸಂವಿಧಾನಕ್ಕೆ ತಿದ್ದುಪಡಿ ತರಲು ರೆಫೆರೆಂಡಮ್ ಏರ್ಪಡಿಸುತ್ತೀವಿ’ ಎಂದಿದ್ದರೂ ಯಾವ ಸರಕಾರವೂ ಅದನ್ನು ಕೈಗೆತ್ತಿಕೊಳ್ಳುವ ಧೈರ್ಯ ಮಾಡಲಿಲ್ಲ. ಇದರ ಹಿಂದಿದ್ದ ಕಾರಣ ಎಲ್ಲರಿಗೂ ಗೊತ್ತಿದ್ದೇ – ಮಾನಸಿಕವಾಗಿ ಅಲ್ಪಸಂಖ್ಯಾತರಾದ ಮೂಲನಿವಾಸಿಗಳ ಅಸ್ಮಿತೆಯನ್ನು ಒಪ್ಪಿಕೊಳ್ಳುವುದು ಕಷ್ಟ.

೨೫೦ ಕ್ಕೂ ಹೆಚ್ಚು ಮೂಲನಿವಾಸಿ ಕುಲಪಂಗಡಗಳ ಹಿರಿಯರು ಇಚ್ಚಿಸಿದಂತೆ, ೨೦೧೭ರಲ್ಲಿ ಬರೆದ ಊಲುರೂ ಸ್ಟೇಟ್ಮೆಂಟ್ ಫ್ರಮ್ ದಿ ಹಾರ್ಟ್ ಉಲ್ಲೇಖಿಸಿದ್ದು ವಾಯ್ಸ್, ಟ್ರೀಟಿ, ಟ್ರುಥ್ ಟೆಲ್ಲಿಂಗ್ (Voice, Treaty, Truth-telling) ನಡೆಯಬೇಕೆಂದು. ಸಂವಿಧಾನದಲ್ಲಿ ತಿದ್ದುಪಡಿ ತಂದು ತಮ್ಮದೊಂದು ಸಲಹಾ ಸಮಿತಿಯಾದರೆ (Voice) ಆಗ ನಾವು ನಮ್ಮ ಜನರ ಮತ್ತು settler ಆಡಳಿತದ ನಡುವೆ ಹಕ್ಕು, ಸ್ವಾಯತ್ತತೆಗೆ ಸಂಬಂಧಿಸಿದ ಶಾಶ್ವತ ಒಡಂಬಡಿಕೆಯನ್ನು (Treaty) ಜಾರಿಗೆ ತರಬಹುದು. ಆ ಮೂಲಕ ಕಳೆದ ಎರಡೂವರೆ ಶತಮಾನಗಳಲ್ಲಿ ನಮ್ಮ ಜನರಿಗಾದ ಅನ್ಯಾಯಗಳ ಬಗ್ಗೆ ಕಾನೂನುಬದ್ಧವಾಗಿ ‘ಸತ್ಯ ಸಂಶೋಧನೆ’ (Truth-telling) ಜಾರಿಗೆ ತರಬಹುದು ಎಂದು. ಉತ್ತರ ಯೂರೋಪಿನ ಸಾಮಿ ಮೂಲನಿವಾಸಿಗಳು ಮತ್ತು ನ್ಯೂಝಿಲ್ಯಾಂಡ್ ಮಾಓರಿ ಜನರು ವಾಯ್ಸ್ ಮತ್ತು ಟ್ರೀಟಿ ಸಫಲವಾಗಿ ಪಡೆದಿದ್ದು ಉದಾಹರಣೆಯಾಗಿವೆ. ಆದರೆ ಇವು ಯಾವುದೂ ಇಲ್ಲದಿರುವುದು ಆಸ್ಟ್ರೇಲಿಯಾ ದೇಶದಲ್ಲಿ ಮಾತ್ರ. ಈ ಪರಿಸ್ಥಿತಿ ಅನೇಕ ಗೊಂದಲಗಳನ್ನು ಹುಟ್ಟಿಸಿವೆ.

ರೆಫೆರೆಂಡಮ್ ೨೦೨೩ ನಡೆಸುವುದು ಬೇಡ, ಆದರೆ ಈಗಿರುವ ಪರಿಸ್ಥಿತಿಯಲ್ಲಿ ಬದಲಾವಣೆ ತರೋಣವಂತೆ ಎಂದು ಹೇಳಿ ಕೆಲ ಅಬೊರಿಜಿನಲ್ ಮುಖಂಡರು, ರಾಜಕೀಯ ನಾಯಕರು ಬೇರೆಬೇರೆ ದಾರಿಗಳನ್ನು ಹಿಡಿದಿದ್ದರು. ಕೆಲವರು ಕೇಳಿದ್ದು, ಹೇಳಿದ್ದು, ಆಗ್ರಹಿಸಿದ್ದು ‘treaty first’ ಮತ್ತು ‘truth telling first’ ನಂತರ ‘ವಾಯ್ಸ್ ಟು ದಿ ಪಾರ್ಲಿಮೆಂಟ್’ ನಡೆಯಬೇಕು ಎಂದು. ಇನ್ನೂ ಕೆಲವರು ಇದ್ಯಾವುದನ್ನೂ ಒಪ್ಪದೇ ಈಗ ನಡೆಯುತ್ತಿರುವ ಮೂಲನಿವಾಸಿಗಳ ಪರಿಸ್ಥಿತಿಗಳನ್ನು ಸುಧಾರಿಸುವ ಪ್ರಯತ್ನಗಳಿಗೆ ಮತ್ತಷ್ಟು ಇಂಬು ಕೊಡೋಣ ಎಂದರು. ಆದರೆ, ಇವೆಲ್ಲದರ ಮುಂದಾಳತ್ವವನ್ನು ವಹಿಸಿಕೊಳ್ಳುವವರು ಯಾರು? ಯಾರಲ್ಲಿ ಅಂತಹುದೊಂದು ದೃಢತೆ, ಸ್ಪಷ್ಟತೆ ಮತ್ತು ಆತ್ಮವಿಶ್ವಾಸವಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ನಿನ್ನೆ ಸಂಜೆ ನಾನು ‘Rekindle the Campfires’ ಎನ್ನುವ ಒಂದು ಹಾಡು-ಕಥಾನಕ ಶೋ ನೋಡಲು ಹೋದೆ. ಇದೊಂದು CobbleStone Band ಶೋ. ಇದರ ಕರ್ತೃ Jon Vea Vea. ಆರು ಜನರ ಬ್ಯಾಂಡ್ ಹಾಡುಗಳ ಮತ್ತು ಕಥೆಗಳ ಮೂಲಕ ಆಸ್ಟ್ರೇಲಿಯಾದ ವಸಾಹತುಶಾಹಿ ಇತಿಹಾಸವನ್ನು ಹೇಳುತ್ತಾ ಅಬೊರಿಜಿನಲ್ ಜನರು ನಡೆಸುತ್ತಾ ಬಂದಿರುವ ಸಂಧಾನಗಳು, ರಾಜಿ ಮತ್ತು ಸಮನ್ವಯತೆ ಪ್ರಯತ್ನಗಳ ಕುರಿತು ಹಾಡಿದರು. ಕಥೆ ಹೇಳಿದರು. ಸಂವಾದ ನಡೆಸಿದರು. ಪಾಳೆಯಗಾರ-ನೆಲೆಸಿಗರು (Colonial-Settler) ಮತ್ತು ತಮ್ಮ ಜನರ ಸಂಬಂಧಗಳಲ್ಲಿರುವ ಶಾಶ್ವತ ನೋವು ಶಮನವಾಗಬೇಕಿದೆ, ಎಂದರು. ವಸಾಹತುಶಾಹಿಗಳು ತಮ್ಮ campfire ಅನ್ನು ತುಳಿದು ನಾಶಪಡಿಸಿದರೂ ಆ ಬೆಂಕಿ ನಶಿಸಲಿಲ್ಲ, ಅದು ಮರುಜೀವ ಪಡೆದು ಇನ್ನೂ ಉರಿಯುತ್ತಲೇ ಇದೆ. ಆ ಬೆಂಕಿಯಲ್ಲಿದೆ ನಮ್ಮ ನಿಮ್ಮೆಲ್ಲರ ಸಾಮರಸ್ಯದ ಆಶೆಗಳು, ಭರವಸೆಗಳು ಎಂದರು. ಕಳೆದ ಶನಿವಾರದಿಂದ ಬಾಧಿಸುತ್ತಿದ್ದ ನೋವು ಸ್ವಲ್ಪ ಶಮನವಾದಂತಾಯ್ತು.

ಅವರ ಹಾಡುಗಳು ಮತ್ತು ಕಥೆಗಳು ಎರಡು ಭಾಷೆಗಳಲ್ಲಿದ್ದವು. ಇಂಗ್ಲಿಷ್ ಭಾಷೆ ಒಂದು. ಇನ್ನೊಂದು ಅನುಭವ ಕಥಾನಕವಾಗಿ ಹೊರಹೊಮ್ಮಿದ, ಹಾಡು ಹುಟ್ಟಿದ ಸ್ಥಳೀಯ ಅಬೊರಿಜಿನಲ್ ಭಾಷೆ. ಉದಾಹರಣೆಗೆ, ಪ್ರದರ್ಶನದ ಆರಂಭವನ್ನು ಮಾಡಿದ್ದು ಬ್ರಿಸ್ಬೇನ್ ನಗರದ ಟುರ್ಬಲ್ (Turrbal) ಜನಕುಲದ ಹಿರಿಯರೊಬ್ಬರಾದ (Elder) ಅಂಕಲ್ ಬಿಲ್ಲಿ ಕಮ್ಮಿನ್ಸ್ (Billy Cummings). ಇವರು ಇಂಗ್ಲಿಷ್ ಮತ್ತು ತಮ್ಮ ಟುರ್ಬಲ್ ಭಾಷೆಯಲ್ಲಿ ಈ Meanjin ಪ್ರದೇಶಕ್ಕೆ Acknowledgement of Country ಗೌರವ ಸಲ್ಲಿಸುತ್ತಾ ತಮ್ಮ Didgeridoo ವಾದ್ಯದಲ್ಲಿ ಅದ್ಭುತವಾಗಿ ಹಾಡು ಹೊಮ್ಮಿಸಿದರು. ಅವರ ನಂತರ ತಮ್ಮ ನೆಲಕ್ಕೆ, ಭೂಮಿತಾಯಿಗೆ, ಎಲ್ಲಾ ತಾಯಂದಿರಿಗೆ, ಹೆಂಗಸರಿಗೆ ಗೌರವ ಸಲ್ಲಿಸಿ ಲೀಸಾ ಹಾಡಿದ್ದು Butchulla ಭಾಷೆ ಮತ್ತು ಇಂಗ್ಲಿಷಿನಲ್ಲಿ. ಹೀಗೆ ಅವರುಗಳು ವಿವಿಧ ಅಬೊರಿಜಿನಲ್ ಭಾಷೆಗಳನ್ನು ಬಳಸಿದ್ದು ಬಲು ವಿಶೇಷವಾಗಿತ್ತು.

ತಮ್ಮ truth-telling ಪ್ರಯತ್ನವಾಗಿ ಕಥಾನಕಗಳಲ್ಲಿ ಅವರು ದಾಖಲೆಗಳೊಂದಿಗೆ ಇತಿಹಾಸದ ಪುಟಗಳನ್ನು ತೆರೆದಿಟ್ಟರು. ಅವಲ್ಲಿ ಹದಿನೈದನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೂ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರು ಹೊರನಾಡುಗಳಿಂದ ಬರುತ್ತಿದ್ದ ಸ್ಪ್ಯಾನಿಷ್, ಚೈನೀಸ್, ಏಷ್ಯನ್ಸ್ ಜನರ ಜೊತೆ ನಡೆಸುತ್ತಿದ್ದ ವ್ಯವಹಾರಗಳು ಇದ್ದವು. ಅವರುಗಳು ಸ್ಥಳೀಯ ಮೂಲನಿವಾಸಿಗಳ ಆತಿಥ್ಯವನ್ನು ಸ್ವೀಕರಿಸಿ, ಸಿಹಿನೀರು ತುಂಬಿಸಿಕೊಂಡು, ಸ್ಥಳೀಯ ಆಹಾರವನ್ನು ಶೇಖರಿಸಿಕೊಂಡು ಹೊರಟುಹೋಗುತ್ತಿದ್ದರು. ಹದಿನೆಂಟನೇ ಶತಮಾನದ ಕೊನೆಗೆ ಬಂದ ಫ್ರೆಂಚರು ಕೂಡ ಹೊರಟರು. ಆದರೆ ಅವರೊಡನೆ ಪೈಪೋಟಿ ಹೂಡಿ ಬಂದ ಬ್ರಿಟಿಷರು ವಾಪಾಸ್ ಹೋಗಲಿಲ್ಲ. ಈ ನಾಡು ತಮ್ಮದು, ಇಲ್ಲಿ ಮನುಷ್ಯರಾರೂ ಇಲ್ಲ (Terra Nullius) ಎಂದು ನಿಂತೇನಿಂತರು. ತಮ್ಮೊಡನೆ, ತಮ್ಮ ದೇಶದ ಕಾರಾಗೃಹಗಳಲ್ಲಿ ತುಂಬಿದ್ದ ಸಾವಿರಾರು ಕೈದಿಗಳನ್ನು ತಂದು ಆಸ್ಟ್ರೇಲಿಯಾದೊಳಗೆ ಇಟ್ಟರು. ನೋಡನೋಡುತ್ತಿದ್ದಂತೆ ದಾರುಣ ರೋಗಗಳು ಮೂಲನಿವಾಸಿಗಳನ್ನು ಆವರಿಸಿ ಅವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸತ್ತರು. ಇನ್ನೊಂದಿಷ್ಟು ಜನರನ್ನು ಕೊಲೆ ಮಾಡಲಾಯ್ತು. ಮುಂದಿನ ದಶಕಗಳಲ್ಲಿ Stolen Generations, Assimilation ಮುಂತಾದವು ನಡೆದು ೧೯೦೧ರಲ್ಲಿ ಸಂವಿಧಾನ ರಚನೆಯಾಗಿ ಪಾಳೆಯಗಾರ-ನೆಲೆಸಿಗರು (Colonial-Settler) ಪ್ರಜಾಪ್ರಭುತ್ವ ಪದ್ಧತಿಯಲ್ಲಿ ತಮ್ಮ ಆಡಳಿತವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇಷ್ಟೆಲ್ಲಾ ಆದರೂವೆ ಮೂಲನಿವಾಸಿಗಳ ಸಂಪೂರ್ಣ ನಿರ್ನಾಮವಾಗಲಿಲ್ಲ. ಕೈಲಾದ ಮಟ್ಟಿಗೆ ಬಹು ಅಲ್ಪಸಂಖ್ಯಾತರಾದ ಅವರುಗಳು ಸಂಧಾನಗಳನ್ನು ನಡೆಸಿಕೊಂಡು ಹೋಗಿ, ಪಾಳೆಯಗಾರ-ನೆಲೆಸಿಗರ ಜೀವನಪದ್ಧತಿಗಳಿಗೆ ಒಗ್ಗಿಕೊಂಡು, ಅದರೊಡನೆ ತಮ್ಮ ಅಸ್ಮಿತೆಗಳನ್ನು ಲೋಕದೃಷ್ಟಿಗಳನ್ನು ಉಳಿಸಿಕೊಂಡು ದೃಢತೆ, ಸಾಮರ್ಥ್ಯಗಳು, ಚೇತನವನ್ನು ಉಳಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ಹಾಸುಹೊಕ್ಕಾದ campfire ಬೆಂಕಿ ಉರಿಯುತ್ತಲೇ ಇದೆ.

ಒಂದೂವರೆ ಗಂಟೆ ಕಾಲ ನಡೆದ ಹಾಡು-ಕಥಾನಕ ಪ್ರದರ್ಶನದ ನಂತರ ನಾವೆಲ್ಲರೂ ತಂಡದೊಡನೆ ಬೆರೆತು ಮಾತನಾಡಿದೆವು. ಅವರು ಈ ಪ್ರದರ್ಶನ ತಮ್ಮ ಮೂರನೆಯದು ಎಂದಾಗ ಅಚ್ಚರಿಯಾಯ್ತು. ಇನ್ಯಾವುದೇ ಬುಕಿಂಗ್ ಇಲ್ಲ ಎಂದು ತಿಳಿದು ಬೇಸರವಾಯ್ತು. ಆದರೆ ಈಗಿನ ರೆಫೆರೆಂಡಮ್ ೨೦೨೩ ವಿಫಲತೆಯ ಹಿನ್ನೆಲೆಯಲ್ಲಿ ಇದೇನೂ ಆಶ್ಚರ್ಯವಲ್ಲ. ಇಂತಹ truth telling ಮತ್ತು reconciliation ಪ್ರಯತ್ನಗಳು ಇನ್ನಷ್ಟು ಜನರಿಗೆ ತಲುಪಲಿ.