ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು. ಚೈನಾ ದೇಶದ ರೇಶ್ಮೆ, ನಮ್ಮ ಸೀಮೆಯ ಹತ್ತಿ ಬಟ್ಟೆ, ಅರಬ್ಬರ ಮಸ್ಲಿನ್, ಪರ್ಶಿಯಾದವರ ಡಮಾಸ್ಕ್ ಬಟ್ಟೆಗಳನ್ನು ಸೇರಿಸಿ ಕುಲಾವಿಗಳನ್ನು ಸುಂದರವಾಗಿ ಮಾಡಿದ್ದೇನೆ. ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತದೆ. ಇನ್ನು ನಿಮ್ಮ ದೇಶದ ಉಣ್ಣೆ ಬಟ್ಟೆಯನ್ನು ಬಳಸುವುದು ಕಷ್ಟವೆ?’ ಎನ್ನುತ್ತಾಳೆ.
ಕತೆಗಾರ ವಸುಧೇಂದ್ರ ಅವರ ತೇಜೋ=ತುಂಗಭದ್ರಾ ಕಾದಂಬರಿಯ ಕುರಿತು ಎಚ್.ಆರ್. ರಮೇಶ್ ಲೇಖನ

 

ಪ್ರೀತಿ ನದಿಯಂತೆ ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಇದು ವಸುಧೇಂದ್ರ ಅವರ ಇತ್ತೀಚಿನ ತೇಜೋ-ತುಂಗಭದ್ರಾ ಕಾದಂಬರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸರಿಯಾದ ಮಾತು. ಹಾಗೆ ಬದುಕೂ ಸಹ. ಇಡೀ ಕಾದಂಬರಿಯ ಉದ್ದಕ್ಕೂ ಇತಿಹಾಸದ ಒಂದು ಕಾಲಘಟ್ಟದಲ್ಲಿ ಅಂದರೆ 1492-1518 ನಡೆದಿರಬಹುದಾದ ಮತ್ತು ನಡೆದಿರುವ ಕ್ರೌರ್ಯ ಮತ್ತು ಹಿಂಸೆಗಳ ನಡುವೆ ಜೋಡಿಯೊಂದು ತಮ್ಮ ಪ್ರೀತಿಯನ್ನು ಸಾಫಲ್ಯಗೊಳಿಸಿಕೊಳ್ಳಲಾಗದೆ ಬದುಕಿನ ಅನಿವಾರ್ಯ ಕಾರಣಗಳಿಂದಾಗಿ ಬೇರ್ಪಡುವ ನೋವಿನ, ದುಃಖದ ಕತೆಯನ್ನು ಕಾಣುತ್ತೇವೆ. ಜೊತೆಗೆ ಈ ಕದಾಂಬರಿಯು ತನ್ನ ಒಡಲೊಳಗೆ ಮಧ್ಯಕಾಲೀನ ಅಂದರೆ ಹದಿನೈದು-ಹದಿನಾರನೇ ಶತಮಾನದ ಕರ್ನಾಟಕ ಮುಖ್ಯವಾಗಿ ವಿಜಯನಗರ, ಗೋವ ಮತ್ತು ಪೋರ್ಚುಗಲ್ ನ ರಾಜಕೀಯ ಚಿತ್ರಣವನ್ನು ಕೊಡುತ್ತದೆ.

ಈ ಕಾದಂಬರಿಯ ಉದ್ದೇಶ ಕೇವಲ ಆ ಕಾಲಘಟ್ಟದ ರಾಜಕೀಯ ಚಿತ್ರಣವನ್ನಷ್ಟೇ ಕೊಡುವುದಲ್ಲ; ಬದಲಿಗೆ ಸಾಮಾನ್ಯರ ಬದುಕು ಹೇಗೆ ಇತ್ತು ಎನ್ನುವುದನ್ನು ಆ ಕಾಲದ ಸಂಸ್ಕೃತಿ, ಆಚರಣೆ, ನಂಬಿಕೆ, ರೀತಿ-ರಿವಾಜುಗಳ ಮೂಲಕ ನೋಡಲು ಪ್ರಯತ್ನಿಸುತ್ತದೆ. ಪ್ರಭುತ್ವದ ಹಿಂಸೆಯ ವಿರಾಟ್ ಸ್ವರೂಪ ಮತ್ತು ಆಚರಣೆಗಳ ಹೆಸರಿನಲ್ಲಿ ನಡೆಯುವ ಹೆಣ್ಣಿನ ಮೇಲಿನ ಶೋಷಣೆಯನ್ನೂ ಸಹ ತುಂಬಾ ಮಾರ್ಮಿಕವಾಗಿ ಚಿತ್ರಿಸುತ್ತದೆ. ಮಿಶಿಲ್ ಫೂಕೋ ನ ಪ್ರಭುತ್ವ ಮತ್ತು ಹಿಂಸೆಯ ಕುರಿತಾಗಿ ಇರುವ ಚರ್ಚೆಯ ಆಧಾರದ ಮೇಲೆ ಇನ್ನಷ್ಟು ಗಂಭೀರವಾಗಿ ಈ ಸಂಗತಿಗಳ ಮೇಲೆ ಬೆಳಕನ್ನು ಚೆಲ್ಲಬಹುದು. ಧಾರ್ಮಿಕ ಆಚರಣೆಯ ಮೂಲಕ ಹೆಣ್ಣನ್ನು ಸೈಕಾಲಾಜಿಕಲ್ ಆಗಿ ಡಿಸ್ಟರ್ಬ್ ಮಾಡಿ, ಸಾವಿನ ಕೂಪಕ್ಕೆ ತಳ್ಳುವುದನ್ನು ವಿಸ್ತೃತವಾಗಿ ಚರ್ಚಿಸಲು ಈ ಕಾದಂಬರಿಯಲ್ಲಿ ಬರುವ ಕೆಲವು ಘಟನೆಗಳು ಹೆಚ್ಚಿನ ಒತ್ತನ್ನು ಕೊಡುತ್ತವೆ.

(ವಸುಧೇಂದ್ರ)

ಸುಮಾರು ಇಪ್ಪತ್ತಾರು ವರ್ಷಗಳ ಕಾಲ ನಡೆಯುವ ಈ ಕಾದಂಬರಿಯ ಅಂತ್ಯವು ಅನಿರೀಕ್ಷಿತ ಮತ್ತು ಆ ದೃಶ್ಯ ಕನ್ನಡ ಕಾದಂಬರಿಲೋಕದಲ್ಲಿ ಒಂದು ಬಹುಮುಖ್ಯವಾದಂತಹದ್ದಷ್ಟೇ ಅಲ್ಲ, ಅದು ಒಂದು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹದ್ದಾಗಿದೆ. ಇದರ ಆರಂಭ ಭಾರತದ ಮಸಾಲೆ ಪದಾರ್ಥಗಳು ಯುರೋಪಿನ ದೇಶಗಳನ್ನು ಹೇಗೆಲ್ಲ ತಲೆಕೆಡಿಸಿದವು ಮತ್ತು ವಸಾಹತುಕರಣಕ್ಕೆ ನಾಂದಿಹಾಡಿದವು ಎನ್ನುವುದನ್ನು ಸೂಚ್ಯವಾಗಿ ಒಂದು ಎಳೆಯನ್ನಷ್ಟೇ ಬಿಚ್ಚಿ, ನಂತರ ವಸಾಹತುಕರಣದ ಹಿಂಸೆಯ ವಿರಾಟ್ ಸ್ವರೂಪವನ್ನು ನಿಧಾನ ಬಿಚ್ಚತೊಡಗುತ್ತದೆ. ಮಧ್ಯಕಾಲೀನ ಯುಗದಲ್ಲಿ ಭಾರತದ ಮಸಾಲೆ ವಾಸನೆಯು ಯುರೋಪಿನ ಅನೇಕ ರಾಷ್ಟ್ರಗಳ ನಿದ್ದೆಯನ್ನು ಕೆಡಿಸಿದ್ದಷ್ಟೇ ಅಲ್ಲದೆ ಅನೇಕ ರಾಜಕೀಯ ಪಲ್ಲಟಗಳಿಗೂ ಸಾಕ್ಷಿಯಾಗಿದೆ.

ಇಂಗ್ಲಿಷ್ ಕವಿ ಡನ್ ಸಹ ತನ್ನ ಒಂದು ಕವಿತೆಯಲ್ಲಿ ‘ಇಂಡಿಯಾಸ್ ಸ್ಪೈಸ್’ ಎನ್ನುವ ಪದ ಪುಂಜವನ್ನು ಬಳಸುತ್ತಾನೆ. ಕಾದಂಬರಿ ಆರಂಭವಾಗುವುದೇ ಹೆಣ್ಣೊಬ್ಬಳು ಅರಮನೆಯ ಅಡುಗೆ ಮನೆಯಿಂದ ಮಸಾಲೆ ಪದಾರ್ಥಗಳನ್ನು ಕದ್ದು, ಸಿಕ್ಕಿಬಿದ್ದು ಧಾರುಣವಾಗಿ ಸಾಯುವುದರ ಮೂಲಕ. ಇದು ಕಾದಂಬರಿಯಲ್ಲಿ ಮುಂದೆ ಕಾಣಬಹುದಾದ ರಕ್ತಸಿಕ್ತ ಹಿಂಸೆಯ ಮತ್ತು ಅಮಾನುಷ ಕ್ರೌರ್ಯಗಳ ರೋಚಕ ಕತೆಯ ಮುನ್ನುಡಿಯಂತಿದೆ.

ಅದು ಮುಂದೆ ಪಡೆದುಕೊಳ್ಳುವ ತಿರುವು ಮೇಲೆ ಹೇಳಿದ ಹಾಗೆ ನದಿಯ ಹಾದಿಯಂತೆ. ಹಾಗಾಗಿಯೇ ಇರಬೇಕು ಇದರ ಶೀರ್ಷಿಕೆಯೂ ಸಹ ನದಿಗಳ ಹೆಸರನ್ನು ಪೆಡೆದುಕೊಂಡಿದೆ. ನದಿ ನಡೆದದ್ದೇ ಹಾದಿ. ಅದರ ಚಲನೆಯ ಬಳೂಕು, ಲಾಸ್ಯ, ವಿಲಾಸ ಈ ಕಾದಂಬರಿಯ ಪಾತ್ರಗಳಿಗೂ ಅನ್ವಯಿಸುತ್ತದೆ. ಇತಿಹಾಸದ ಅಥವ ಒಂದು ಕಾಲಘಟ್ಟದ ಚಿತ್ರಣವನ್ನು ಫ್ಯಾಕ್ಟ್ಸ್ ಮತ್ತು ಫಿಗರ್ಸ್ ಗಳ ಹಿನ್ನೆಲೆಯ ಬೆಂಬಲ ಪಡೆದುಕೊಂಡು ಕಲ್ಪನೆಯ ಬೆನ್ನೇರಿ ಮನುಷ್ಯರ ಬದುಕಿನ ಕಥನವನ್ನು ಕಟ್ಟಿರುವ ಕ್ರಮ ಚೇತೋಹಾರಿಯಾಗಿದೆ. ಮತ್ತು ಕೆಲವು ದೃಶ್ಯಗಳಂತೂ ಹೃದಯ ಕಲಕುವಂತೆ ಮೂಡಿಬಂದಿವೆ.

ಪೋಸ್ಟ್ ಕಲೋನಿಯಲ್ ಕಾಲಘಟ್ಟವು ಮತ್ತು ಪೋಸ್ಟ್ ಮಾಡ್ರನ್ ಕಥನ ಕ್ರಮಗಳು ಯಾವುದನ್ನು ಮೆಟಾನೆರೇಟಿವ್ಸ್ ಎಂದು ಗುರುತಿಸಿ ಅಂತವುಗಳನ್ನು ಪಕ್ಕಕ್ಕೆ ಇಟ್ಟು ಅಲಕ್ಷಿತ ಸಂಗತಿಗಳನ್ನು ಮತ್ತು ಸಮುದಾಯಗಳ ಮೇಲೆ ಬೆಳಕನ್ನು ಚೆಲ್ಲಿ ಬೌದ್ಧಿಕ ವಲಯದಲ್ಲಿ ಚರ್ಚಿಗೆ ಆಸ್ಪದಕೊಡಲು ಕಾಳಜಿಯನ್ನು ತೋರಿಸುತ್ತದೆಯೋ ಅಂತಹ ಒಂದು ಪ್ರಯತ್ನವನ್ನು ಇಂದಿನ ಪೋಸ್ಟ್ ಟ್ರುತ್ ಕಾಲ ಘಟ್ಟದ ಈ ಕೃತಿ ಮಾಡಿರುವುದು ಒಂದು ಮೈಲಿಗಲ್ಲು ಎಂದು ಹೇಳಬಹುದು.

‘ಹೇಗಿದಿಯಾ?’ ಎಂದು ಬೆಲ್ಲಾ ಸೋತ ಧ್ವನಿಯಲ್ಲಿ ಕೇಳಿದಳು./ ಅಮ್ಮದಕಣ್ಣ ಏನೆಂದು ಉತ್ತಿರಸಬಲ್ಲ, ಸುಮ್ಮನೆ ಗೋಣಲ್ಲಾಡಿಸಿದ ‘ನಿನ್ನ ಪ್ರಿಯತಮನನ್ನು ಕಿತ್ತುಕೊಂಡ ಈ ದೇಶಕ್ಕೆ ನೀನು ಶಾಪ ಕೊಟ್ಟಿದ್ದೆ. ಆದರೆ ಆ ಶಪಿತ ದೇಶಕ್ಕೆ ನೀನೇ ಏಕೆ ಬಂದೆ ಬೆಲ್ಲಾ?’ ಎಂದು ಸಂಕಟದಿಂದ ಕೇಳಿದೆ. ‘ಎಷ್ಟೇ ದ್ವೇಷಿಸಿದರೂ ಈ ದೇಶದ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಗೇಬಿ. ಈ ದೇಶವೊಂದು ಉರಿಉರಿಯುವ ದೀಪ. ಜಗತ್ತಿನ ಯುವಕ ಯುವತಿಯರೆಲ್ಲ ಇದರ ಆಕರ್ಷಣೆಗೆ ಬಲಿಯಾಗುವ ಹುಳುಗಳು. ರೆಕ್ಕೆಗಳು ಸುಟ್ಟು ಹೋಗುತ್ತವೆ ಎಂದು ಗೊತ್ತಿದ್ದರೂ ಇದರತ್ತ ನಾವೆಲ್ಲ ನುಗ್ಗಿ ಬರುತ್ತಿದ್ದೇವೆ’ ಎಂದು ಬೆಲ್ಲಾ ಹೇಳಿದಳು.

ಇವು ಕಾದಂಬರಿಯ ಕೊನೆಯಲ್ಲಿ ಯಾರೂ ಊಹಿಸಲಾರದಂತಹ ಸಂದರ್ಭದಲ್ಲಿ ಬರುವಂತಹ ಮಾತುಗಳು. ಈ ಮಾತುಗಳು ಬರುವ ಹೊತ್ತಿಗೆ ಬದುಕಿನಲ್ಲಿ ಅನೇಕ ಬಗೆಯ ಸ್ಥಿತ್ಯಂತರಗಳು ಮತ್ತು ಪಲ್ಲಟಗಳು ಜರುಗಿಹೋಗಿರುತ್ತವೆ. ಇವು ಇಡೀ ಕಾದಂಬರಿಯ ಮುಖ್ಯ ಧ್ವನಿಯನ್ನು ಹೇಳಿದಂತಿದೆ.

ಈ ಮೇಲಿನ ಮಾತುಗಳಿಗೆ ಕಾದಂಬರಿಯ ಮೊದಲಲ್ಲಿ ಈ ಇಬ್ಬರ ನಡುವೆ ಗೇಬ್ರಿಯಲ್ ಲಿಸ್ಬನ್ ನಿಂದ ಭಾರತಕ್ಕೆ ಹೊರಡುವ ಮುನ್ನ ಈ ಇಬ್ಬರಲ್ಲಿ ನಡೆವ ಸಂಭಾಷಣೆಯನ್ನು ನೆನಪಿಸಿಕೊಂಡರೆ ಕಾದಂಬರಿಯ ಅತಿ ಮುಖ್ಯವಾದ ಒಂದು ಅಂಶವನ್ನು ಗುರುತಿಸಿದಂತಾಗುತ್ತದೆ. ಇದು ಕಾದಂಬರಿಯ ಒಳಹೋಗಲು ಒಂಥರದ ಸರ್ಚ್ ಲೈಟ್ ನಂತೆ ಇದೆ. ‘ನಾನು ಭಾರತಕ್ಕೆ ಹೋಗ್ತೀನಿ’ ಎಂದು ನಿಧಾನಕ್ಕೆ ಗೇಬ್ರಿಯಲ್ ಹೇಳಿದ. ಈ ನಿರ್ಧಾರ ಬೆಲ್ಲಾಳಿಗೆ ಅತ್ಯಂತ ಅನಿರೀಕ್ಷಿತವಾಗಿತ್ತು. ಅವನನ್ನು ಅಚ್ಚರಿಯ ಕಂಗಳಿಂದ ನೋಡಿದಳು./ ‘ಗಾಮನ ಜೊತೆಗೆ ಹೋದ ನನ್ನ ಗೆಳೆಯರೆಲ್ಲರೂ ಈಗ ದೊಡ್ಡ ಶ್ರೀಮಂತರಾಗಿ ಹೋಗಿದ್ದಾರೆ. ಅವರಿಗೆಲ್ಲ ಮ್ಯಾನ್ಯುಯಲ್ ಮಹಾಪ್ರಭು ಹಿಡಿಹಿಡಿ ಹಣ ಕೊಟ್ಟಿದ್ದಾನೆ. ಹಲವು ದೇಶಗಳಲ್ಲಿ ಅವರು ಕೊಳ್ಳೆ ಹೊಡೆದು ತಂದ ಸಂಪತ್ತೆಲ್ಲ ಅವರಿಗೇ ಅನುಭವಿಸಲು ಮಹಾಪ್ರಭು ಬಿಟ್ಟಿದ್ದಾನೆ. ಈಗ ಅರಮನೆಯಲ್ಲಿ ಒಳ್ಳೆಯ ಹುದ್ದೆಯನ್ನು ಕೊಟ್ಟಿದ್ದಾನೆ. ನನ್ನ ಬಳಿ ಹಣವಿಲ್ಲವೆಂಬುದಷ್ಟೇ ನಿಮ್ಮಪ್ಪನ ಕುಹಕಕ್ಕೆ ಕಾರಣವಲ್ಲವೆ? ನಾನು ಹಣ ಸಂಪಾದಿಸಿ ತರುತ್ತೇನೆ. ಆಗ ನಿನ್ನನ್ನು ಮದುವೆಯಾಗುತ್ತೇನೆ’ ಎಂದು ವಿವರಿಸಿದ.

ಅವನ ನಿರ್ಧಾರ ಗಟ್ಟಿಯಾಗಿ ಹೋಗಿದೆ ಎನ್ನುವುದು ಬೆಲ್ಲಾಳಿಗೆ ಮನವರಿಕೆಯಾದಾಗ, ನಿರಾಶೆಯಿಂದ ಅವಳು ಹೀಗೆ ಹೇಳುತ್ತಾಳೆ: ‘ತನ್ನ ಶ್ರೀಮಂತಿಕೆಯ ಸೊಕ್ಕಿನಿಂದ ಆ ಭಾರತವೆಂಬ ದೇಶ ನನ್ನ ಪ್ರಿಯಕರನನ್ನು ನನ್ನಿಂದ ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ನಾನು ಭಾರತವನ್ನು ದ್ವೇಷಿಸುತ್ತೇನೆ. ಸಿರಿತನ ಯಾವತ್ತೂ ಪ್ರೀತಿಗಿಂತಲೂ ಮಿಗಿಲಾದುದ್ದಲ್ಲ. ಆದರೂ ತನ್ನ ಸಿರಿತನ ಅಹಂಕಾರ ಆ ದೇಶಕ್ಕಿದೆ. ಈ ದೇಶದ ಬಡ ಯುವಕರನ್ನೆಲ್ಲ ತನ್ನಡೆಗೆ ಕರೆಸಿಕೊಳ್ಳುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅದು ಅನುಭವಿಸುತ್ತದೆ. ಇಕೋ ಆ ದೇಶಕ್ಕೆ ಈ ನೊಂದ ಪ್ರೇಮಿಯ ಶಾಪವಿದೆ.’

ಕೇವಲ ವ್ಯಾಪಾರಕ್ಕಾಗಿ, ಅತಿಮುಖ್ಯವಾಗಿ ಮಸಾಲೆ ಪದಾರ್ಥಗಳ ಆಕರ್ಷಣೆಗೆ ಒಳಗಾಗಿ ಯೂರೋಪಿನ ಒಂದು ದೇಶ ಪೋರ್ಚ್ಗಲ್, ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದುಕೊಂಡು ಬರುವ ಸಂದರ್ಭದಲ್ಲಿ ಹೇಳುವಂತಹದ್ದು. ವ್ಯಾಪಾರದ ಉದ್ದೇಶದಿಂದ ಹೊರಟು ಅಷ್ಟಕ್ಕೇ ನಿಲ್ಲದೆ ರಾಜಕೀಯಕ್ಕೂ ತನ್ನ ರೆಕ್ಕೆಗಳನ್ನು ಚಾಚಿ ಸಾಮಾಜಿಕ ಮತ್ತು ಧರ್ಮಕ್ಕೂ ಕೈ ಹಾಕಿ ಇಲ್ಲಿ ಅನೇಕ ಬಗೆಯ ಹಿಂಸೆಯನ್ನು ನಡೆಸುತ್ತದೆ.

ಈ ಮಾತುಗಳು ಯಾಕೆ ಮುಖ್ಯ ಅಂದರೆ ಇವು ಕಾದಂಬರಿಯ ಬಂಧಕ್ಕೆ ಒಂದು ಸಾವಯವವಾದ ಒಂದು ಸಂಪರ್ಕವನ್ನು ಕೊಟ್ಟು, ಕಥಾಹಂದರವನ್ನು ಬಿಗಿಗೊಳಿಸುತ್ತವೆ. ಈ ಎರಡು ಸಂದರ್ಭಗಳಲ್ಲಿನ ಸಂಭಾಷಣೆಗಳ ನಡುವೆ ಇಲ್ಲೂ ಮತ್ತು ಅಲ್ಲೂ ಅನೇಕ ಬಗೆಯ ಬದಲಾವಣೆ ಮತ್ತು ಸ್ಥಿತ್ಯಂತರಗಳು ಕಾಲದಲ್ಲಿ ಜರುಗುತ್ತವೆ. ಅದಕ್ಕೆ ಇತಿಹಾಸ ಮತ್ತು ಅಂದಿನ ಜನಸಾಮಾನ್ಯರು ಸಾಕ್ಷಿಯಾಗುತ್ತಾರೆ.

ಕಾದಂಬರಿ ಆರಂಭವಾಗುವುದೇ ಹೆಣ್ಣೊಬ್ಬಳು ಅರಮನೆಯ ಅಡುಗೆ ಮನೆಯಿಂದ ಮಸಾಲೆ ಪದಾರ್ಥಗಳನ್ನು ಕದ್ದು, ಸಿಕ್ಕಿಬಿದ್ದು ಧಾರುಣವಾಗಿ ಸಾಯುವುದರ ಮೂಲಕ. ಇದು ಕಾದಂಬರಿಯಲ್ಲಿ ಮುಂದೆ ಕಾಣಬಹುದಾದ ರಕ್ತಸಿಕ್ತ ಹಿಂಸೆಯ ಮತ್ತು ಅಮಾನುಷ ಕ್ರೌರ್ಯಗಳ ರೋಚಕ ಕತೆಯ ಮುನ್ನುಡಿಯಂತಿದೆ.

ಕಥಾನಾಯಕ ಅಂದರೆ ಗೇಬ್ರಿಯಲ್ (ಹಾಗೆ ನೋಡಿದರೆ ಇಲ್ಲಿ ಅನೇಕರು ಕಥಾನಾಯಕರಿದ್ದಾರೆ. ಆದರೆ ಬಹಳಷ್ಟು ಸಂದರ್ಭದಲ್ಲಿ ಕಾದಂಬರಿ ಇವನ ಸುತ್ತ ಜರುಗುತ್ತದೆ. ಲಿಸ್ಬನ್ ನಿಂದ ಭಾರತದ ಆಕರ್ಷಣೆಗೆ ಒಳಪಟ್ಟು ಬರುವಾಗ ತನ್ನ ಪ್ರೇಯಸಿ ಬೆಲ್ಲಾ ತನ್ನ ಪ್ರಿಯಕರ ತನಗೆ ಸಿಗುವುದಿಲ್ಲವೆನ್ನುವ ಆತಂಕೆ, ನಿರಾಸೆ ಅವಳ ಮಾತಿನಲ್ಲಿ ವ್ಯಕ್ತವಾಗುತ್ತದೆ. ಮತ್ತು ಮುಂದೆ ಜರುಗಬಹುದಾದ ಹಿಂಸೆ, ಕ್ರೌರ್ಯಗಳು ಅವಳ ಮಾತಿನಲ್ಲಿ ಕಾಲಜ್ಞಾನದಂತೆ, ಕಾರಣಿಕದಂತೆ ಹೊರಬರುತ್ತವೆ.
ಬೆಲ್ಲಾ ಒಬ್ಬಳು ಯಹೂದಿ ಹುಡುಗಿ. ಅವಳ ಅಪ್ಪ ಬೆಲ್ಶಾಮ್. ಪೋರ್ಚುಗಲ್ ದೇಶಕ್ಕೆ ಮೊದಲ ಮುದ್ರಣಯಂತ್ರವನ್ನು ಪರಿಚಯಿಸಿರುವವನು. ಗೇಬ್ರಿಯಲ್ ಒಬ್ಬ ಕ್ರೈಸ್ತ ಹಡುಗ. ಅಪ್ಪ ಆಂಟೋನಿಯೋ ಒಬ್ಬ ಶಿಲ್ಪಿ. ಗ್ಯಾಬ್ರಿಯಲ್ ಬೈಬಲ್ ತಿದ್ದುವ ಕೆಲಸದಲ್ಲಿ ತೊಡಗಿ, ಅದರ ಮುದ್ರಣ ಕಾರ್ಯದಲ್ಲಿ ಬೆಲ್ಲಾಳ ಅಪ್ಪನ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ಯಹೂದಿ ಹುಡುಗಿಯನ್ನು ಮದುವೆಯಾಗಬೇಕೆಂದರೆ ಸಂಪತ್ತು ಗಳಿಸಬೇಕು ಎಂದು ಹೇಳುವ ಬೆಲ್ಲಾಳ ತಂದೆಯ ಮಾತು ಅವನ ಬದುಕಿನಲ್ಲಿ ನಡೆದಂತಹ ಮಹತ್ವದ ತಿರುವು. ಇದು ಅವನನ್ನು ಅವಮಾನ ಮಾಡುವುದರ ಜೊತೆಗೆ ಅವನ ಆತ್ಮಾಭಿಮಾನವನ್ನು ಪರೀಕ್ಷೆಗೆ ಒಡ್ಡುತ್ತದೆ. ತಾನು ಪ್ರೀತಿಸಿದ ಹುಡುಗಿಯನ್ನು ಸಂಪತ್ತು ಗಳಿಸಿದ ನಂತರ ಮದುವೆಯಾಗುವ ಸಲುವಾಗಿ ಶ್ರೀಮಂತನಾಗಲು ಭಾರತಕ್ಕೆ ಬರುತ್ತಾನೆ.

ಮುಂದೆ ಅವನು ನಿರೀಕ್ಷಿಸಿದಂತೆ ಬದುಕು ಸಾಗದೆ, ಬದುಕಿನ ತಿರುವು, ವ್ಯೂಹಗಳಿಗೆ ಸಿಕ್ಕು ವಾಪಸ್ಸು ಮರಳಲು ಆಗುವುದಿಲ್ಲ, ತನ್ನ ಪ್ರಿಯತಮೆಯನ್ನು ಮದುವೆಯಾಗುವುದರ ಮೂಲಕ ಪ್ರೇಮದ ಸಾಫಲ್ಯತೆಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಕಾದಂಬರಿಯ ಒಂದು ಘಟ್ಟದಲ್ಲಿ ಇವಳನ್ನು ಹಲವು ವರ್ಷಗಳ ನಂತರ ಮುಖಾಮುಖಿಯಾಗುವ ಸಂದರ್ಭ ಒದುಗುತ್ತದೆ. ಅವಳು ಯಾವ ದೇಶಕ್ಕೆ ಶಾಪಕೊಟ್ಟಿರುತ್ತಾಳೋ ಅದೇ ದೇಶಕ್ಕೆ ಬರುತ್ತಾಳೆ. ಗೇಬ್ರಿಯಲ್ ಭಾರತಕ್ಕೆ ಬಂದನಂತರ ಬದುಕಿನ ಜೀವನ್ಮರಣದ ಸಂದರ್ಭದಲ್ಲಿ ತನ್ನ ಧರ್ಮವನ್ನು ಬದಲಿಸಿಕೊಂಡು ಅಹಮದ್ ಖಾನ ಆಗಿ ಮುಂದಿ ಅಮದಕಣ್ಣನಾಗಿ ರೂಪಾಂತರವಾಗುತ್ತ ಏನೆಲ್ಲ ಪಾಡನ್ನು ಪಡುತ್ತಾನೆ ಎನ್ನುವುದನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ, ಅಂದರೆ ವಿಜಯನಗರದಲ್ಲಿ..

ನಾಗವ್ವೆ ಮತ್ತು ಗಣಪಯ್ಯಗೌಂಡರ ಮಗಳು ಹಂಪಮ್ಮ. ಮಾಪಳ ನಾಯಕ ವ್ಯಾಪಾರಸ್ಥರಿಗೆ ರಕ್ಷಣೆಕೊಡುವ ಕಾವಲುಗಾರನ ಕೆಲಸ. ತೆಂಬಕ್ಕ ಎಂಬುವಳನ್ನು ಮದುವೆಯಾಗಿರುತ್ತಾನೆ. ಮತ್ತು, ಈಶ್ವರಿ ಎನ್ನುವ ಮಗಳು ಇರುತ್ತಾಳೆ. ಹಂಪಕ್ಕನ್ನು ಮಾಪಳನಾಯಕ ಮತ್ತು ದ್ವಾರಸಮುದ್ರದ ಕಡೆಯ ಕೇಶವ ಎನ್ನುವ ಶಿಲ್ಪಿಯೂ ಹಂಪಕ್ಕಳನ್ನು ಇಷ್ಟಪಡುತ್ತಾರೆ, ಇವಳನ್ನು ಪಡೆಯುವ ಸಲುವಾಗಿ ಇಬ್ಬರ ನಡುವೆ ಕುಸ್ತಿ ಏರ್ಪಟ್ಟು ಕೊನೆಗೆ ಮಾಪಳನಾಯಕ ಸೋತು ಸಾವನ್ನಪ್ಪುತ್ತಾನೆ. ಅವನ ಜೊತೆ ಅವನ ಹೆಂಡತಿ ತೆಂಬಕ್ಕಳು ಸತಿಯಾಗುತ್ತಾಳೆ. ಮಗಳು ಈಶ್ವರಿಯನ್ನು ಗೆಳತಿ ಹಂಪಕ್ಕಳಿಗೆ ಕೊಟ್ಟು, ಮಾಪಳನಾಯಕನನ್ನು ಸಾಯಿಸಿದ ಗಿಲ್ಟ್ ಕೊನೆಯವರೆಗೂ ಇವನನ್ನು ಬಿಡುವುದಿಲ್ಲ. ಕೇಶವ ಲೆಂಕನಾಗುತ್ತಾನೆ. ಅಂದರೆ ರಾಜನಿಗೆ ಗಂಡುಮಗುವಾದರೆ ಒಬ್ಬ ಕ್ಷತ್ರಿಯ ಗಂಡಸನ್ನು ಬಲಿಕೊಡುವುದು. ಇವನ ಬಲಿಯನ್ನು ವೀರಮರಣವಾಗಿ ಪರಿಗಣಿಸುತ್ತಾರೆ, ಅದರ ದ್ಯೋತಕವಾಗಿ ಅಂದಿನ ಪದ್ಧತಿಯಂತೆ ಅವನ ಹೆಂಡತಿ ಹಂಪಕ್ಕಳು ಸಹ ಸತಿಯಾಗುವ ಸಂದರ್ಭ ಒದುಗತ್ತದೆ. ಆದರೆ ಆ ಸಂದರ್ಭದಲ್ಲಿ ಅವಳು ಮೂರು ತಿಂಗಳ ಬಸುರಿ. ಧರ್ಮ ಸಂಕಟಕ್ಕೆ ಬಿದ್ದ ಅವಳು ಕೊನೆಗೆ ಬದುಕುವ ಆಸೆಯಿಂದಾಗಿ ಉಪಾಯದಿಂದ ತಪ್ಪಿಸಿಕೊಳ್ಳುತ್ತಾಳೆ (ಇದು ಒಂದು ರೀತಿಯಲ್ಲಿ ಸಿನಿಮೀಯವಾಗಿ ಮತ್ತು ಡ್ರಮಾಟಿಕ್ ಆಗಿ ಕಾಣುತ್ತದೆ, ಇರಲಿ ಅದೇನು ಅಂತಹ ದೋಷವಲ್ಲ) ತಪ್ಪಿಸಿಕೊಂಡು ಅಮ್ಮದಕಣ್ಣ ಅಂದರೆ ಗೇಬ್ರಿಯಲ್ ನ ಕೈಗೆ ಸಿಗುತ್ತಾಳೆ.

ಅವನ ಪರಿಚಯವಾಗಲೇ ಅವಳಿಗೆ ಆಗಿರುತ್ತದೆ, ಏಕೆಂದರೆ ಅವನು ಗೋವಾದಿಂದ ಬಂದು, ವಿಜಯನಗರದಲ್ಲಿಯೇ ವಾಸಿಸುತ್ತಿರುತ್ತಾನೆ. ನಂತರ ಅವರು ಗೋವಾದ ಕಡೆ ಪಯಣ ಬೆಳೆಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಪುರಂದರ ದಾಸರನ್ನು ಭೇಟಿಯಾಗುವ ಅವಕಾಶ ಮಾರ್ಗಮಧ್ಯದಲ್ಲಿ ಸಿಗುತ್ತದೆ. ಅವರೇ ಸ್ವತಃ ತಮ್ಮ ಪ್ರಸಿದ್ಧ ಕೀರ್ತನೆಯಾದ ‘ಲೊಳಲೊಟ್ಟೆ’ಯನ್ನು ಹಾಡುವುದು ಕೃತಿಯಲ್ಲಿ ಚಿತ್ರಿತವಾಗಿರುವ ಹಿಂಸೆ, ಕ್ರೌರ್ಯ, ಪ್ರಭುತ್ವದ ಹಿಪಕ್ರಸಿಗಳನ್ನು ಟೀಕೆ ಮಾಡಿದಂತಿದೆ.

ಯಾರನ್ನು ತೊರೆದು ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿರುತ್ತಾನೋ ಮತ್ತೆ ಅದೇ ವ್ಯಕ್ತಿಯನ್ನು ಮತ್ತೆ ಭಾರತದಲ್ಲಿ ಕಾಣುವ ಪ್ರಸಂಗ ಕಾದಂಬರಿಯಲ್ಲಿ ಕಂಡು ಬರುವ ಕಟು ವ್ಯಂಗ್ಯ. ಆ ವ್ಯಕ್ತಿ ಇವನ ಪ್ರೇಯಸಿ ಬೆಲ್ಲಾ. ಇವಳು ಭಾರತದಲ್ಲಿ ನಿಯೋಜನೆಗೊಂಡಿರುವ ಪೋರ್ಚ್ಗಲ್ ಅಧಿಕಾರಿ ಕ್ರಸ್ಟಾವೋನ ಹೆಂಡತಿ. ಒಂದು ಮಗುವೂ ಇರುತ್ತದೆ. ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು. ಚೈನಾ ದೇಶದ ರೇಶ್ಮೆ, ನಮ್ಮ ಸೀಮೆಯ ಹತ್ತಿ ಬಟ್ಟೆ, ಅರಬ್ಬರ ಮಸ್ಲಿನ್, ಪರ್ಶಿಯಾದವರ ಡಮಾಸ್ಕ್ ಬಟ್ಟೆಗಳನ್ನು ಸೇರಿಸಿ ಕುಲಾವಿಗಳನ್ನು ಸುಂದರವಾಗಿ ಮಾಡಿದ್ದೇನೆ. ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತದೆ. ಇನ್ನು ನಿಮ್ಮ ದೇಶದ ಉಣ್ಣೆ ಬಟ್ಟೆಯನ್ನು ಬಳಸುವುದು ಕಷ್ಟವೆ?’ ಎನ್ನುತ್ತಾಳೆ.

ಇಷ್ಟು ವರ್ಷಗಳು ಕಳೆದರೂ ಜಾತಿಯ ಕಂದಕವಿನ್ನೂ ನಾಶಹೊಂದಿರದ ಭಾರದಲ್ಲಿ ಈ ಕಾದಂಬರಿ ಪ್ರಸ್ತುತವಾಗುತ್ತದೆ. ವರ್ತಮಾನದ ತಲ್ಲಣಗಳಿಗೆ ಭೂತಕಾಲದ ವಿದ್ಯಮಾನಗಳ ಮೂಲಕ ಸ್ಪಂದಿಸಿರುವುದು ಇದರ ಒಂದು ವಿಶೇಷವೆಂದೇ ಹೇಳಬಹುದು.

ಬದುಕಿನ ವಿವರಣೆಗಳು ಅಷ್ಟೊಂದು ಸಾಂದ್ರವಾಗಿ ಮೂಡಿಬಂದಿಲ್ಲದಿದ್ದರೂ ಪಾತ್ರಗಳ ಒಳ ಲೋಕಗಳ ಅನಾವರಣ ಕೆಲವು ಸಂದರ್ಭಗಳಲ್ಲಿ ಓದುಗರನ್ನು ಬೆಚ್ಚಿ ಬೀಳಿಸುತ್ತದೆ ಮತ್ತು ಚಿಂತನೆಗೆ ಹಚ್ಚುತ್ತದೆ. ಐತಿಹಾಸಿಕ ಕಾದಂಬರಿಗೆ ಸಾಕ್ಷಾಧಾರಗಳು ಎಷ್ಟು ಮುಖ್ಯನೋ ಅಷ್ಟೇ ಫ್ಯಾಂಟಸಿ ಮತ್ತು ಇಮ್ಯಾಜಿನೇಷನ್ ಗಳೂ ಸಹ ಅವಶ್ಯಕ. ಈ ಕಾದಂಬರಿಯಲ್ಲಿ ವಾಸ್ತವವಾದಿ ನೆಲೆಯ ನಿರೂಪಣೆಯನ್ನು ಬಹುವಾಗಿ ನೆಚ್ಚಿಕೊಂಡು ಆ ಕ್ರಮದಲ್ಲಿಯೇ ಕತೆಯನ್ನು ಕಟ್ಟಲು ತುಂಬಾ ಶ್ರಮಪಟ್ಟಿರುವುದು ಕಾದಂಬರಿಯ ಪ್ರತಿ ಪುಟದಲ್ಲಿ ಅವ್ಯಕ್ತವಾಗಿ ವ್ಯಕ್ತವಾಗುತ್ತ ಹೋಗುತ್ತದೆ. ಮನುಷ್ಯರ ಛಿದ್ರಗೊಂಡ ಬದುಕು ಅದರ ದಾರುಣತೆ, ಸಾವು-ನೋವುಗಳನ್ನು ತುಂಬಾ ಸೂಕ್ಷ್ಮವಾಗಿ ಹಿಡಿದಿಡಲಾಗಿದೆ.

ಈ ಬೃಹತ್ ಕಾದಂಬರಿಯಲ್ಲಿ ‘ಚಿಟಿಕೆ’ಯಷ್ಟು ಸಂತೋಷ ಮತ್ತು ‘ಮೊಗೆ’ದಷ್ಟು ಸಿಗುವ ನೋವು, ಹತಾಶೆ, ಸಾವು, ಹಿಂಸೆ, ಮೋಸಗಳು ತುಂಬಿವೆ. ಇತಿಹಾಸ ಚಿತ್ರಿಸುವ ವ್ಯಕ್ತಿಗಳು ಇಲ್ಲಿ ಗೌಣವಾಗಿ, ಕೆಲವೊಮ್ಮೆ ತಮ್ಮ ನೀಚತನಗಳಿಂದ ಖಳನಾಯಕರಾಗಿ, ಅಲಕ್ಷಿತ ವ್ಯಕ್ತಿಗಳು ಮತ್ತು ಅವರ ಬದುಕು ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ.

ಎರಡು ನಗರಗಳ ಕಥೆ, ಎರಡು ದೇಶಗಳ, ಸಂಸ್ಕೃತಿಗಳ ನಾಗರೀಕತೆಗಳ ಕತೆಯಾಗಿ ಅಷ್ಟೇ ಅಲ್ಲದೆ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಗುತ್ತೆ. ಇಲ್ಲಿ ಮನಕಲುಕುವ ಪ್ರೀತಿ, ಪ್ರೇಮಗಳ ಜೊತೆ ವಿಷಾದ ನಿರಾಸೆಗಳು ಇವೆ. ಪಾತ್ರಗಳ ‘ಮಾತು’ಗಳ ಮೂಲಕವೇ ನಿರೂಪಕ ಕಥನದ ಹಾದಿಯಲ್ಲಿ ಬದುಕಿನ ಸತ್ಯಗಳನ್ನು ವಿಕ್ಷಿಪ್ತ ಸನ್ನಿವೇಶಗಳಿಗೆ ಮುಖಾಮುಖಿಯಾಗಿಸುತ್ತಾನೆ. ಮಾತು, ಸಂಭಾಷಣೆಗಳ ಮೂಲಕವೇ ಕಾದಂಬರಿಯು ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ.

ಅವಧೇಶ್ವರಿ ಅಥವ ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ ಬರುವ ಸಾಂದ್ರವಾದ ಮತ್ತು ದಟ್ಟವಾದ ಬದುಕಿನ ಮತ್ತು ಪ್ರದೇಶಗಳ ವಿವರಣೆಯಿಲ್ಲದಿದ್ದರೂ, ಬದುಕಿನ ಸತ್ಯಗಳನ್ನು ದರ್ಶನಮಾಡಿಸುವ ಆ ಕಾದಂಬರಿಗಳು ಮುಟ್ಟುವ ಎತ್ತರಗಳನ್ನು ಇದೂ ಸಹ ಮುಟ್ಟಲು ಪ್ರಯತ್ನಪಡುವುದರ ಮೂಲಕ ಅವುಗಳ ಪಕ್ಕದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಲು ತುಡಿಯುತ್ತದೆ. ಪ್ರಯತ್ನದ ಫಲಿತಾಂಶವನ್ನು ಕಾಲ ನಿರ್ಧರಿಸುತ್ತದೆ. ಆಧುನಿಕೋತ್ತರ ಕಾಲಘಟ್ಟದ ಎಲ್ಲವೂ ಇಸ್ಟಂಟ್ ಆಗಿ ಸಂತೆಗೆ ಮೂರು ಮೊಳ ನೇಯ್ದುಕೊಂಡ ಮಾರಾಟಮಾಡುವ ಈ ಧಾವಂತದ ಯುಗದಲ್ಲಿ ಇದರ ಒಂದು ದೊಡ್ಡ ಕ್ಯಾನ್ವಾಸ್ ಇಂದಿನ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಗಮನಸಳೆಯುತ್ತದೆ. ಮತ್ತು ಪ್ರಸ್ತುತವಾಗುತ್ತ ಹೋಗುತ್ತದೆ. ಸಾಹಿತ್ಯದ ಮೌಲ್ಯವನ್ನು ಹೆಚ್ಚುಸುತ್ತದೆ. ಮತ್ತು ಅವಸರವು ಸಾವಧಾನದ ಬೆನ್ನೇರಬೇಕು ಎಂಬುದನ್ನು ನೆನಪಿಸುತ್ತದೆ.

ನಿರೂಪಕನ ಅನಿಸಿಕೆಗಳು, ಕಾಮೆಂಟು(ರಿ)ಗಳು ಒಮ್ಮೊಮ್ಮೆ ಕಥನಕ್ರಮಕ್ಕೆ ಅಡ್ಡಿಯನ್ನು ಉಂಟುಮಾಡುತ್ತವೆ. ಮತ್ತು, ಘಟನೆಗಳನ್ನು ‘ಹೀಗೆ’ ಎಂದು ಓದುಗರಿಗಿಂತ ಮುಂಚೆಯೇ ಇಂಟರ್ ಪ್ರಿಟ್ ಮಾಡುವುದು ಔಚಿತ್ಯಪೂರ್ಣವೆನ್ನಿಸುವುದಿಲ್ಲ.

ನಡೆದ ಇತಿಹಾಸದ ಘಟನೆಗಳನ್ನು ಇಟ್ಟುಕೊಂಡು ಕಲ್ಪಿತ ಸಾಮಾನ್ಯರ ಬದುಕನ್ನು ನಿಜವೆಂಬಂತೆ ವಾಸ್ತವವಾದಿ ಧೋರಣೆಯಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿಗೆ ತುಸು ಮ್ಯಾಜಿಕಲ್ ರಿಯಲಿಸಮ್ ನ ನಿರೂಪಣೆಗಳಲ್ಲಿ ಕಾಣುವ ಕಾವ್ಯಾತ್ಮಕ ಶಕ್ತಿ ದಕ್ಕಿದ್ದಿದ್ದರೆ ಇದು ಇನ್ನಷ್ಟು ಮೋಹಕವಾಗಿ ಬೆಳಗುತ್ತಿತ್ತೇನೋ ಎನ್ನಿಸುತ್ತದೆ. ಇದು ವೈಯಕ್ತಿಕ ಅನಿಸಿಕೆ.

ಆಧುನಿಕ ಭಾರತೀಯ ಕಾದಂಬರಿ ಸಾಹಿತ್ಯದ ಸಂದರ್ಭದಲ್ಲಿ ಅಮಿತಾವ್ ಘೋಶ್ ಇತಿಹಾಸದಿಂದ ವಿಷಯಗಳನ್ನು ಆರಿಸಿಕೊಂಡು ತಮ್ಮ ಸಟಲ್ ಆದಂತಹ ದೃಷ್ಟಿಕೋನದಿಂದ ಕಾದಂಬರಿಯ ಪ್ರಕಾರಕ್ಕೆ ಹೊಸ ಹೊಸ ಆಯಾಮಗಳನ್ನು ತಂದುಕೊಟ್ಟಿರುವುದು ನೆನಪಿಗೆ ಬರುತ್ತದೆ. ಘೋಶ್ ತಮ್ಮ ವಿಶಿಷ್ಟ ನಿರೂಪಣಾ ಶೈಲಿ, ಭೂತ-ವರ್ತಮಾನಗಳನ್ನು ಬೆಸೆದುಕೊಂಡು ‘ಲೇಯರ್ಡ್’ ಎನ್ನುವಂತಹ ಕಥನಕ್ರಮಗಳಿಂದ ಗಮನಸೆಳೆದಷ್ಟು ಈ ಕಾದಂಬರಿಯಲ್ಲಿ ಕಾಣದಿದ್ದರೂ ಪ್ರಸ್ತುತ ಭಾರತದ ಸನ್ನಿವೇಶದಲ್ಲಿನ ಜಾತಿಯತೆ, ಮತೀಯತೆ, ಧರ್ಮಾಂದತೆ ಹಾಗೂ ಕ್ರೌರ್ಯ ಮತ್ತು ಹಿಂಸೆಗಳಿಂದ ಪಾರಾಗಲು ಇತಿಹಾಸದಿಂದ ಸಾಕಷ್ಟಿದೆ ಕಲಿಯುವುದಕ್ಕೆ ಎನ್ನುವುದನ್ನು ತೇಜೋ=ತುಂಗಭದ್ರಾ ತುಂಬಾ ಮಾರ್ಮಿಕವಾಗಿ ತೋರಿಸಲು ಪ್ರಯತ್ನಿಸಿದೆ. ಅದಕ್ಕಾಗಿ, ಮತ್ತು ‘ಛಂಧ’ವಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಮನಸ್ಸು ಕನ್ನಡಕ್ಕೆ ಒಂದು ‘ಚಂದ’ವಾದ ಕೃತಿ ಕೊಟ್ಟಿದ್ದಕ್ಕೆ ಒಂದು ಪ್ರೀತಿಯ ಹ್ಯಾಟ್ಸಾಫ್.