ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ನಾಗರಾಜ ವಸ್ತಾರೆ ಬರೆದ ಕವಿತೆ ಇದೆ.

ಅನಂಗಸೂತ್ರ

ನೆಲ ಮೆಟ್ಟಿಯೂ ಆಕಾಶದಲ್ಲಿ
ಚಾಚಿ ಆಡೇ ಆಡುವ
ಈ ಮೈ ಮೈಥುನಕ್ಕೂ ನನ್ನದಲ್ಲ.
ಆಕಳಿಸಿದ್ದನ್ನು ಆಗಾಗ್ಗೆ ತೂಕಡಿಸುವುದನ್ನು
ಎದ್ದಿರುವಾಗಲೆಲ್ಲ ಅದೂ ಇದೂ ಮಾಡುತ್ತಿರುವುದನ್ನು
ನೋಡಿ- ಇದೇ ನಾನೆಂದುಕೊಂಡುಬಿಟ್ಟೀರಿ!
ಅರವತ್ತೊಂಬತ್ತು ಅಂಗುಲದ ಎತ್ತರ
ಸರಾಸರಿ ಮೂವ್ವತ್ತಾರು ಸುತ್ತಳತೆಯನ್ನು
ಬೆಳೆದು ತೊಳೆದು ತೀಡಿ ಆರೈಸಿ
ಮುಚ್ಚಿ ಬೆಚ್ಚಗೆ ಹೊಚ್ಚಿ ಸಾವರಿಸುವ ರೇಜಿಗೆ
ಅಸಾಧ್ಯ ಅಸಹನೆ ಹುಟ್ಟಿಸುತ್ತದೆ.
ಮುಚ್ಚಿದೆವೆಗಳ ಸಮಾ ಬಂಡೇಳುವ ಬಣ್ಣಗಳು
ತುಪಾಕಿ ಸಿಡಿಸಿ ವೃಥಾ ಕಾಡುವಾಗ
ಹಗಲಿನ ಗುಟ್ಟೆಲ್ಲ ಕತ್ತಲಿಗೆ ಚೆಲ್ಲಿ ಬರಿದಾಗಿ
ಮೈ- ತುಂಬ ಹೇಡಿ ಅನಿಸುತ್ತದೆ.
ಒಮ್ಮೆ ಎಲ್ಲೆಲ್ಲೂ ಪುಳಕಿಸಿ ಚಿಗಿತದ್ದು
ಗುಂಡಗೆ ನೆತ್ತಿಯನ್ನೇ ನುಣ್ಣಗೆ ಕೆತ್ತಿ ಸದ್ಯ-
ಕಿವಿಯಲ್ಲಿ ಗರಿಗೆದರಿ ಹೇಸಿಗೆ ತರುತ್ತದೆ.

ಇಲ್ಲಿ- ಊರಿಕೊಂಡಿರುವ ಊರಿನಲ್ಲಿ
ಈ ಬಗ್ಗೆ, ಆರೈಸುವ ಬಗ್ಗೆ
ಸುಕ್ಕು ಮುಕ್ಕು ಸೊಕ್ಕು ತೀರಿಕೊಳ್ಳುವ ಬಗ್ಗೆ
ಬರೆಯುತ್ತಾರೆ ದುಬಾರಿ ಶಿಬಿರ ನಡೆಸುತ್ತಾರೆ
ಪುರವಣಿಗಳ ನಡುವೆ ಮಡಿಕೆ ತೂರುತ್ತಾರೆ

ಇವರನ್ನು ಕರೆದು ಕೇಳಿದ್ದೇನೆ- ಇದೆಯೋ ನಿಮ್ಮಲ್ಲಿ
ಈ ಮೈಯ ಗೊಡವೆ ತೀರಿಸುವ ಸರಳ ಸೂತ್ರ?
ನಾನು ನಾನಾಗಲಿಕ್ಕೊಂದು ಪರಿಹಾರ
ಮೈಯಲ್ಲದ ನನಗೆ ಅಶರೀರದ ಹಾದಿ
ಒಂದು ಅನಂತ್ಯಸಂಸ್ಕಾರ!!

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)