ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.

ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ನಾಗರಾಜ ವಸ್ತಾರೆ ಬರೆದ ದಿನದ ಕವಿತೆ ಇದೆ.

ಸಾರ್ವಕಾಲಿಕ

ಸೂರ್ಯ ನಕ್ಷತ್ರ ಕಪ್ಪುರಂಧ್ರಗಳ
ಬಿಗ್‍ಬ್ಯಾಂಗ್ ಗೊತ್ತಿದ್ದರೆ
ಸಾರ್ವಕಾಲಿಕ ಎಂಬುದು ಎಷ್ಟರ ಮಟ್ಟಿಗಿನ ಸತ್ಯ?
ಅದರ ತುಣುಕು ನಿಯತಿಯೊಳಗಿನ ಮಿತಿ
ನಾವು, ನಮ್ಮ ತಿಳಿವು, ಸ್ಥಿತಿಗತಿ ಎಲ್ಲ

ಕಾಗದ ಕೆತ್ತುವ ಊಹೆಯ ಮೊನೆಗೆ
ಮುಟ್ಟಿದರೆ ಚುಕ್ಕಿ ಕಟ್ಟಿದರೆ ಅಸೀಮ ಸಿದ್ಧಿ
ಅಣುವಲ್ಲಿ ನೆಟ್ಟು ಅನೂಹ್ಯ ನಿಲುಕುಗಳಲ್ಲಿ
ಬೆರಳು ಹೊರಳಿಸುವ ವಾಂಛೆ

ಗುಟುಕು ಬಿಯರು ಗೀತೆ ಗುಟುರು
ಬ್ರಹ್ಮದ ಹೊಸ ವ್ಯಾಖ್ಯಾನ.
Ever expanding universe ಅಂತೆ
ಆದಿಯಿಲ್ಲ ಅಂತ್ಯವಿಲ್ಲವಂತೆ-
ಅಂತಾದರೆ ಸೃಷ್ಟಿಕರ್ತ ದೇವರು ಮಾಡಿದ್ದಾದರೂ
ಏನು ಬರೇ ಮಣ್ಣಂಗಟ್ಟಿ! -ಅಂತ
ಹಿಂದಿನ ಸಾಲಲ್ಲೊಂದು ಗಟ್ಟಿ ಸ್ವಗತ.

ಓರಗೆಯವನೊಬ್ಬ ಎದೆಯೊಡೆದು ಸತ್ತರೆ
ವಧುವಾಗಿ ಬಂದವಳು ಕದ್ದು ಕೈಕೊಟ್ಟರೆ
ಒಲುಮೆ ಮತ್ತೊಮ್ಮೆ ನಲುಗಿ ಹಲುಬಿದರೆ
ಬುಡ ಅಲುಗಿದ ಮರದಂತೆ
ಇರವು ಘಾಸಿ
ಧೊಪ್ಪನೆ ಉರುಳಿದರೆ
ವಿಧಿವತ್ತು ಸೊನ್ನೆ-
ಬದುಕು.

ವಿಚಿತ್ರ ನೋಡಿ
ಅಸೀಮದ ಪರಿವೆಯಲ್ಲೂ
ಲೋಕವೆಂದರೆ ಕೈಗೆಟುಕುವ ಸೀಮೆ
ನಾ ಒಂದರ ಸುತ್ತಲ
ನಾ
ನಾ
ರೀತಿ-
ಪ್ರೀತಿ ಅನುರಕ್ತಿ ಕೆಲವು ಪ್ರಣಯಭಂಗ
ವಿರಸ ವಿಷಾದಕ್ಕೋ ನಾನಾ ಭಂಗಿ

ಲೋಕವೆಂದರೆ ಅಸೀಮದಲ್ಲಿ
ಎಟುಕಿದ್ದು, ಎಟುಕಿಯೂ ತಪ್ಪಿದ್ದು

ತಪ್ಪದ್ದು
ಯಾರೋ ಇಟ್ಟ ಹೆಸರ ವಾಂಛೆ
ನಮ್ಮ ಕಾಲದಲ್ಲೇ
ಎಷ್ಟನ್ನೋ ನಾವೇ ಮರೆತರೂ
all time great ಎಂಬ ಲಗತ್ತು
ಒಮ್ಮೆ ಇರುವಾಗಲೇ
ಹತ್ತು ಜೀವಿತದ ಮೊತ್ತ
ತೆಗೆದ ಕೆಲವಕ್ಕೆ ಮಾತ್ರ.

ಅರವತ್ತರ ಪಡಿಯಲ್ಲೂ
ಮತ್ತೆ ಉತ್ತುಂಗ ಸಾಧಿಸಿದ
ಬಚ್ಚನ್‍ಗೆ ಪೈಪೋಟಿ
ಅಂಗಿ ಕಳಚುವ ಬಾಲಿವುಡ್ ಗಂಡುಗಳ
ದಿನದಿನದ ಹೆಸರು…

ಇಲ್ಲಿ
ಮಹಾತ್ಮಾಗಾಂಧಿ
ರಸ್ತೆ
ಅಶೋಕ ಚಾಲುಕ್ಯ
ಹೋಟೆಲುಗಳು
ಅನಿಲ್ ಕುಂಬ್ಳೆಯೊಂದು
ವೃತ್ತ

ಸಾಧ್ಯವಾದಲ್ಲಿ ಉಳಿದುಕೊಳ್ಳಲಿ
ಹೆಸರು, ನನಗಿಂತ
ಸೋತ ಎಲ್ಲ ಪ್ರೀತಿಗಳದ್ದು

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)