ಒಂದಿಡೀ ಹಗಲು

ಒಂದಿಡೀ ಹಗಲು ಬೇಕಿತ್ತು
ಅಮ್ಮನ ಗರ್ಭದಲ್ಲಿ ಬೆಚ್ಚಗೆ
ಕೈಕಾಲು ಮಡಿಸಿ ಮಲಗಿದಂತೆ
ನಿದ್ರಿಸಿಬಿಡಬೇಕಿತ್ತು …

ಹಕ್ಕಿಹಾಡಿಗೆ ಹೂಹೊರಳಿಗೆ
ಬೇಲಿಯ ಮುಳ್ಳುಕಂಟಿಗಳಿಗೆ
ನೀರವಕ್ಕೆ ನದಿಗೆ ಕಡಲಿಗೆ
ಕಿವುಡಾಗಿ ಕುರುಡಾಗಿ ಮೂಕಾಗಿ
ನಿದ್ರಿಸಿಬಿಡಬೇಕಿತ್ತು

ಬರುವವರು ಹೋದವರು
ಅಳುವವರು ನಗುವವರು
ಕಾಲೆಳೆವವರು ಕತ್ತುಸೀಳುವವರು
ನರಕದವರು ಸ್ವರ್ಗದವರು
ನೆಗೆದುಬಿದ್ದಳೆಂದು ಖುಷಿಪಡುವಷ್ಟು
ನಿದ್ರಿಸಿಬಿಡಬೇಕಿತ್ತು

ಬಣ್ಣಗಳ ಹಾಸಿ ಹೊದ್ದು
ರೇಖೆ ಕನಸುಗಳ ಬಿಡಿಸುತ್ತ
ಸುಪ್ತಮನಸಿನ ಅಯೋಮಯ
– ಗಳಲ್ಲಿ ನಾನ್ಯಾರು ನೀನ್ಯಾರೆಂದು
ಜಪ್ತಿಗೆ ಬರದಂತೆ …..
ನಿದ್ರಿಸಿಬಿಡಬೇಕಿತ್ತು !