“ಆ ಕಪ್ಪು ಜನರನ್ನ ನೋಡಿದರೆ ಸಾಕು ನಮಗೆ ಬಿಳಿಯರಿಗೆ ಹೆದರಿಕೆಯಾಗುತ್ತದೆ. ಅವರು ನಮ್ಮಂತಿಲ್ಲವಲ್ಲ. ಅದಕ್ಕೆ, ಏನು ಮಾಡುವುದು, ಹೇಗೆ ವ್ಯವಹರಿಸಬೇಕು? ಅದೂ ಅಲ್ಲದೆ ಐದು ಜನರು ಒಟ್ಟಿಗೇ ಬಂದರೆ ಪ್ರಾಣಭಯವಾಗುತ್ತದೆ. ದಾಳಿಮಾಡಿದರೆ ಏನು ಮಾಡುವುದು?” ಅಂದಳು. ಸದ್ಯ, ಅಷ್ಟರಲ್ಲಿ ಅವಳು ಬಾಟಲಿಯಲ್ಲಿ ನನ್ನ ರಕ್ತವನ್ನು ತುಂಬಿಸಿದ್ದಳು. ನನ್ನ ಹೆಸರಿನ ಲೇಬಲ್ಲನ್ನೇ ಅದರ ಮೇಲೆ ಅಂಟಿಸಿದ್ದನ್ನು ಖಾತ್ರಿಪಡಿಸಿಕೊಂಡು ಜಾಗ ಖಾಲಿಮಾಡಿದೆ. ನಂತರ ಮುಂದೆ ಒಂದು ದಿನ ಕ್ಲಾಸಿನಲ್ಲಿ ಆ ಸಂಭಾಷಣೆಯನ್ನೇ ಒಂದು scenario ವಿಷಯವನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳ ಚರ್ಚೆಗೆ ಬಿಟ್ಟೆ. ಕ್ಲಾಸಿನ ಮುಕ್ಕಾಲು ವಿದ್ಯಾರ್ಥಿಗಳು ಆ ನರ್ಸಿನ ಅನುಭವವನ್ನು ಸಮರ್ಥಿಸಿ, ಅವಳ ಸ್ಥಾನದಲ್ಲಿ ತಾವಿದ್ದರೆ ತಮಗೂ ಅಂತಹದೇ ಭಾವನೆಯಾಗುತ್ತದೆ, ಅಂದರು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಆಸ್ಟ್ರೇಲಿಯಾದ ಜನರ ಜೀವನದಲ್ಲಿ ಜನವರಿ ೨೬ ಎಂಬ ತಾರೀಕು ವಿಶೇಷವಾದದ್ದು. ಅಂದು ಆಸ್ಟ್ರೇಲಿಯಾ ಡೇ. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರ ನೌಕಾಪಡೆಗೆ ಸೇರಿದ ಹಡಗೊಂದು ಈಗಿನ ಸಿಡ್ನಿ ನಗರದತ್ತ ಬಂದು ‘ಇಗೋ, ಈ ನೆಲಭಾಗ ನಮಗೆ ಸೇರಿದ್ದು’ ಎಂದು ತಮಗೆ ತಾವೇ ಹೇಳಿಕೊಂಡ ದಿನ. ಅನತಿದೂರದಲ್ಲೇ ಇದ್ದ ಫ್ರೆಂಚರು, ಆ ಮೊದಲೇ ಬಂದು ನೆಲೆಸಿ ಮೂಲನಿವಾಸಿಗಳೊಂದಿಗೆ ಶಾಂತಿಯಿಂದ ಬಾಳುತ್ತಿದ್ದ ಚೀನಿಯರು, ಇವರೆಲ್ಲರಿಗೂ ಮುಂಚೆ ಬಂದು ಹೋಗುತ್ತಿದ್ದ ಇತರೇ ದೇಶಗಳ ವಾಣಿಜ್ಯವಹಿವಾಟಿನ ವ್ಯಾಪಾರಿಗಳು, ಎಲ್ಲರನ್ನೂ ಪಕ್ಕಕ್ಕೆ ಸರಿಸಿ ಈ ನೆಲ ನಮಗೆ ಸೇರಿದ್ದು ಎಂದು ಘೋಷಣೆಯನ್ನು ಹೊರಡಿಸಿದ ಬ್ರಿಟಿಷರ ಜಾಣ್ಮೆಗೆ ಎಲ್ಲೆಯುಂಟೇ!! ನಿಜಕ್ಕೂ ಇರುವ ವಿಷಯವೆಂದರೆ ಇದೊಂದು ವಾರ್ಷಿಕ ದಿನ. ೧೭೮೮ರಲ್ಲಿ ಬ್ರಿಟಿಷರ ನಾವಿಕರು, ಫ್ರೆಂಚರ ಹಡಗನ್ನು ಹಿಂದಿಕ್ಕಿ, ಸಿಡ್ನಿ ಕೋವ್ ಎಂಬ ಜಾಗವನ್ನು ತಲುಪಿ ಲಂಗರು ಹಾಕಿದರು. ಆ ಕಾಲದಲ್ಲಿ ಯುರೋಪಿಯನ್ ಪಾಳೆಯಗಾರರ ಪದ್ಧತಿಯ ಪ್ರಕಾರ ಅವರವರ ಬಾವುಟ ಹಾರಿದರೆ ಆ ಪ್ರದೇಶ ಅವರಿಗೆ ಸೇರಿದ್ದು. ಬ್ರಿಟಿಷರ ಗವರ್ನರ್ ಆರ್ಥರ್ ಫಿಲಿಪ್ ಎಂಬಾತ ಬಾವುಟವನ್ನು ಹಾರಿಸಿದ. ಆ ಮೊತ್ತ ಮೊದಲ ನಾವಿಕಪಡೆ ಲಂಗರು ಹಾಕಿದ ದಿನವೇ ಈ ಜನವರಿ ೨೬. ಶಾಲಾ ಪಠ್ಯದಲ್ಲಿ ಹಾಗೆ ಇದೆ.

ಹೊರದೇಶಗಳಿಂದ ಬಂದು ಇಲ್ಲಿ ನೆಲೆಸಿರುವ ವಲಸಿಗರಿಗೆ ಈ ಜನವರಿ ೨೬ ಎಂಬ ದಿನ ಆಸ್ಟ್ರೇಲಿಯಾದ ರಾಜಕೀಯ ಹುಟ್ಟುಹಬ್ಬದ ದಿನ. ಆಸ್ಟ್ರೇಲಿಯಾವನ್ನು ಆಕ್ರಮಿಸಿ, ತಳವೂರಿ, ಬೇರೂರಿ ನೆಲೆಸಿ ಈ ದೇಶವನ್ನು ತಮ್ಮ ಹೆಮ್ಮೆಯ ನಾಡಾಗಿಸಿಕೊಂಡ ಎಲ್ಲಾ ಬಿಳಿಯರಿಗೂ ಈ ದಿನ ‘ಆಸ್ಟ್ರೇಲಿಯಾವನ್ನು ಕಂಡುಹಿಡಿದ ದಿನ.’ ದೇಶದ ಉದ್ದಗಲಕ್ಕೂ ಅವರು ಅದನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಒಂದಷ್ಟು ಜನರು ಬೀಚ್ ಆರ್ ಬುಶ್ ಗೆ (ಇದು ಬ್ರಿಸ್ಬನ್ ನಗರವಾಸಿಗಳಿಗೆ ಪರಿಚಿತ ಪದಗಳು) ಹೋಗುತ್ತಾರೆ. ಸಾರ್ವಜನಿಕ ರಜಾ ದಿನ ಬಂತಲ್ಲಾ ಎಂದು ಹಲವರಿಗೆ ಖುಷಿ, ತಮ್ಮವರೊಂದಿಗೆ ಜೊತೆಗೂಡಿ ಪಿಕ್ನಿಕ್ ಹೋಗುತ್ತಾರೆ. ಎಂಥಾ Dayನೂ ಬೇಡ, ನಿದ್ದೆ ಜಾಸ್ತಿ ಮಾಡಿ ಬೆಳಗ್ಗೆ ನಿಧಾನವಾಗಿ ಎದ್ದು ದಿನವನ್ನು ಆರಾಮಾಗಿ ಕಳೆದರೆ ಸಾಕು ಅನ್ನುವವರೂ ಇದ್ದಾರೆ. ಜನವರಿ ಕಡೆಯ ವಾರ ಹೊಸ ಶಾಲಾ ವರ್ಷ ಆರಂಭವಾಗುವುದರಿಂದ ಅಮ್ಮಅಪ್ಪಂದರಿಗೆ ನಿರಾಳ. ಶಾಲಾಮಕ್ಕಳಿಗೆ ಬೇಸಿಗೆಯ ದೀರ್ಘ ರಜೆ ಮುಗಿಯಿತೆಂಬ ಬೇಸರ.

ಈ ೨೬ರಂದು ಎಲ್ಲಿ ನೋಡಿದರೂ ಸಂಗೀತ, ನೃತ್ಯ, BBQ ಪಾರ್ಟಿಗಳು, ಅಲ್ಲಲ್ಲಿ ವರ್ಣರಂಜಿತ ಪಟಾಕಿ ಬಾಣಬಿರುಸು (fireworks) ಷೋ ಕೂಡ ಇರುತ್ತದೆ. ಬ್ರಿಸ್ಬನ್ ನಲ್ಲಂತೂ ಬೆಳಗ್ಗೆ ಆರು ಗಂಟೆಯಿಂದಲೇ ಕೇಕೆ, ಕೂಗಾಟ ಶುರುವಾಗುತ್ತದೆ. ಅಲ್ಲಲ್ಲಿ ತೆರೆದ ಕಾರುಗಳಲ್ಲಿ, ಸೈಕಲ್, ಮೋಟಾರ್ ಬೈಕುಗಳ ಮೇಲೆ ಆಸ್ಟ್ರೇಲಿಯಾ ಬಾವುಟವನ್ನು ಸಿಕ್ಕಿಸಿ, ಬಿಳಿ ಯುವಕ, ಯುವತಿಯರು ಅದೇ ಬಾವುಟ ಚಿತ್ರವಿರುವ ಟೀ ಶರ್ಟ್, singlet, shorts, tops ಮುಂತಾದವನ್ನ ಧರಿಸಿ, ಬಿಯರ್ ಇನ್ನಿತರ ಅಲ್ಕೋ ಹಾಲ್ ಬಾಟಲಿಗಳನ್ನು ಹಿಡಿದು ನಗರದ ಬೀದಿಗಳಲ್ಲಿ ಓಡಾಡುತ್ತಾ ಅಬ್ಬರಿಸುತ್ತಾರೆ – “ಈ ದೇಶ ನಮ್ಮದು. ಆಸ್ಟ್ರೇಲಿಯಾ ನಮಗೆ ಸೇರಿದ್ದು. ಅದು ನಿಮಗೆ ಹಿಡಿಸಲಿಲ್ಲವೆಂದರೆ ನಮ್ಮ ದೇಶವನ್ನು ಬಿಟ್ಟು ಹೋಗಿ, ಹಿಂದಿರುಗಿ.” ನನ್ನಂಥ ಬಿಳಿಬಣ್ಣದ ಚರ್ಮವಿಲ್ಲದ ಜನರನ್ನು ಕಂಡರಂತೂ ಅಬ್ಬರ ಇನ್ನೂ ಹೆಚ್ಚುತ್ತದೆ. ನಮ್ಮ ಪಕ್ಕದ ಮನೆಯವರು ಮತ್ತು ಅವರ ಸ್ನೇಹಿತರು ಸೇರಿ ಹಿತ್ತಲಲ್ಲಿ BBQ ಪಾರ್ಟಿ ಮಾಡುತ್ತಾ ಅದೇ ಪದಗಳನ್ನ ಪದೇಪದೇ ಕೂಗಿ ಹೇಳುತ್ತಾರೆ. ನಾನು ಹಿತ್ತಲಿಗೆ ಹೋದರೆ ಸಾಕು, ಇನ್ನೂ ಜೋರಾಗಿ ಕೂಗುತ್ತಾರೆ- “ಗೋ ಬ್ಯಾಕ್ ಟು ವೇರ್ ಯು ಕೇಮ್ ಫ್ರಮ್.” ಹೌದಲ್ಲ, ಇವತ್ತು ಆಸ್ಟ್ರೇಲಿಯಾ ಡೇ ಎಂದು ನಾನು ವ್ಯಂಗ್ಯವಾಡುತ್ತೀನಿ.

ಆದರೆ, ಬಹುತೇಕ ಅಬರಿಜಿನಿಗಳಿಗೆ ಇದು ದುಃಖದ ದಿನ. ಶೋಕಾಚರಣೆಯ ದಿನ. ಅವರು ಈ ದಿನವನ್ನ ‘ಸೆಟ್ಲರ್ಸ್ ಡೇ’ (Settlers Day), ‘ಇನ್ವೇಷಿಯನ್ ಡೇ’ (Invasion Day), ‘ಆಕ್ಯುಪೇಷನ್ ಡೇ’ (Occupation Day) ಎಂದು ಕರೆಯುತ್ತಾರೆ. ಅದನ್ನು ಬಾಯಿಬಿಟ್ಟು ಹೇಳುವ ಧೈರ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದನ್ನು ವ್ಯಕ್ತಪಡಿಸುತ್ತಾ ಅಬರಿಜಿನಿಗಳು ಅಲ್ಲಲ್ಲಿ ಪ್ರತಿಭಟನಾ ನಡಿಗೆಯನ್ನು ಆಯೋಜಿಸುತ್ತಾರೆ. ಅವರನ್ನು ಬೆಂಬಲಿಸುವ ಜನರು ಹೆಚ್ಚುತ್ತಿದ್ದಾರೆ. ಅಬರಿಜಿನಲ್ ಬಾವುಟ ಮತ್ತು ದ್ವೀಪನಿವಾಸಿಗಳ ಬಾವುಟವನ್ನು ಅವರು ಎತ್ತಿ ಹಿಡಿಯುತ್ತಾರೆ. ಅಬರಿಜಿನಲ್ ಬಾವುಟದಲ್ಲಿ ಅವರ ಕಪ್ಪುಬಣ್ಣದ ಚರ್ಮ, ಅವರ ಕೆಂಪು ಭೂಮಿ ಮತ್ತು ಹಳದಿ ಸೂರ್ಯ ಇವೆ. ದ್ವೀಪನಿವಾಸಿಗಳ ಬಾವುಟದಲ್ಲಿ ಹಸಿರು ಭೂಮಿ, ನೀಲಿ ಸಮುದ್ರ, ಕಪ್ಪು ಜನರು, ಐದು ದ್ವೀಪಗಳ ಒಗ್ಗಟ್ಟನ್ನು ಮತ್ತು ಸಮುದ್ರಜೀವನವನ್ನು ಸೂಚಿಸುವ ಬಿಳಿ ನಕ್ಷತ್ರ, ಅವರು ಧರಿಸುವ ತಲೆಮೇಲಿನ ಪೇಟ, ಮತ್ತು ಶಾಂತಿಯನ್ನು ಹೇಳುತ್ತದೆ. ಈ ಎರಡೂ ಬಾವುಟಗಳು ಅಧಿಕೃವಾಗಿ ಬಳಸಲ್ಪಡುತ್ತವೆ.

ಆಸ್ಟ್ರೇಲಿಯನ್ ಮುಖ್ಯವಾಹಿನಿಯ ಯೂನಿಯನ್ ಜಾಕ್ ಮತ್ತು ಕಾಮನ್ವೆಲ್ತ್ ಒಕ್ಕೂಟವನ್ನು ಸೂಚಿಸುವ ಏಳು ನಕ್ಷತ್ರಗಳಿರುವ ನೀಲಿ ಬಾವುಟ ಎಷ್ಟು ಅಧಿಕೃತವೋ ಅಷ್ಟೇ ಅಧಿಕೃತವಾದದ್ದು ಅವು. ಆದರೆ ಅವುಗಳ ಬಗ್ಗೆ ಬಹುತೇಕ ಬಿಳಿಜನರಲ್ಲಿ ಅಸಡ್ಡೆ, ಅಗೌರವ ಮತ್ತು ತಿರಸ್ಕಾರವಿದೆ. ಅಬರಿಜಿನಲ್ ಬಾವುಟವನ್ನು ನೋಡಿದರಂತೂ ಮುಖ ತಿರುವುತ್ತಾರೆ. ಕೆಲವೆಡೆ ಯೂನಿಯನ್ ಜಾಕ್ ನೀಲಿ ಬಾವುಟವನ್ನು ಮಾತ್ರ ಇಟ್ಟುಕೊಂಡಿದ್ದಾರೆ. ‘ಆ ಬೇರೆ ಎರಡು ಬಾವುಟಗಳನ್ನ ನಾವು ಒಪ್ಪಿಕೊಳ್ಳುವುದಿಲ್ಲ,’ ಎಂದು ಬಾಯಿಬಿಟ್ಟೇ ಹೇಳುತ್ತಾರೆ. ಯೂನಿವರ್ಸಿಟಿ ವಿದ್ಯಾರ್ಥಿಗಳಲ್ಲೂ ಅದೇ ಧೋರಣೆಯನ್ನು ನಾನು ಕೇಳಿದ್ದೀನಿ, ಕಂಡಿದ್ದೀನಿ. ಖ್ಯಾತ ಅಬರಿಜಿನಲ್ ಕ್ರೀಡಾಪಟು ಕ್ಯಾತಿ ಫ್ರೀಮನ್ ೨೦೦೦ ಇಸವಿಯ ಒಲಂಪಿಕ್ಸ್ ಕ್ರೀಡೆಗಳಲ್ಲಿ ೨೦೦ ಮೀಟರ್ ಓಟದಲ್ಲಿ ಗೆದ್ದರು. ನಂತರ ತಮ್ಮ ವಿಜಯದ ಓಟದಲ್ಲಿ ಮೈದಾನ ಸುತ್ತುವಾಗ ಯೂನಿಯನ್ ಜಾಕ್ ನೀಲಿ ಬಾವುಟ ಮತ್ತು ಅಬರಿಜಿನಲ್ ಬಾವುಟಗಳನ್ನ ಪ್ರದರ್ಶಿಸಿದ್ದರು. ಅದು ಕಟು ಟೀಕೆಗೆ ಒಳಗಾಗಿತ್ತು. ತುಂಬಾ ಜನರು ಆಕೆ ಅಬರಿಜಿನಲ್ ಬಾವುಟವನ್ನು ಹಿಡಿದಿದ್ದು ದೊಡ್ಡ ಅಪರಾಧ ಎಂದು ಕೂಗಾಡಿದ್ದರು.

ವರ್ಷಗಳ ಹಿಂದೆ ವಲೊಂಗೊಂಗ್ ನಲ್ಲಿ ನನ್ನ ಮಗುವನ್ನು ಒಂದು ಚೈಲ್ಡ್ ಕೇರ್ ಸೆಂಟರ್ ಗೆ ಸೇರಿಸಲು ಹೋಗಿದ್ದೆ. ಮಗುವಿಗೆ ಹೊಸ ಸ್ಥಳವನ್ನು ಪರಿಚಯಿಸಲು, ಒಗ್ಗಿಸಲು ವಾರಕ್ಕೊಂದು ಬಾರಿ ಅಲ್ಲಿಗೆ ಹೋಗುತ್ತಿದ್ದೆ. ಒಮ್ಮೆ ಅಲ್ಲಿನ ಒಬ್ಬಳು ಕೇರ್ ವರ್ಕರ್ (ಇಪ್ಪತ್ತರ ಯುವತಿ) ಪುಟ್ಟಮಕ್ಕಳ ಗುಂಪಿನ ಮುಂದೆ ಕೂತು ಆಫ್ರಿಕಾದ ಬಗ್ಗೆ ಕತೆಯೊಂದನ್ನು ಓದುತ್ತಿದ್ದಳು. ಮಕ್ಕಳ ಪಕ್ಕ ನಾನು, ನನ್ನ ಮಗು ಕೂತೆವು. ಪುಸ್ತಕದಿಂದ ತನ್ನ ಮುಖವನ್ನು ಸರಿಸಿ ಮಕ್ಕಳನ್ನು ಉದ್ದೇಶಿಸಿ ಅವಳು “ಯು ನೋ, ಆಫ್ರಿಕನ್ ಪೀಪಲ್ ಆರ್ ನಾಟ್ ಲೈಕ್ ಅಸ್; ಕಪ್ಪುಬಣ್ಣದ ಅವರು ನೋಡಲು ಭಯಾನಕವಾಗಿರುತ್ತಾರೆ. ಇಲ್ಲಿನ ಅಬರಿಜಿನಿ ಜನರ ಥರ ಅವರೂ ಕೂಡ ಬಟ್ಟೆ ಹಾಕಿಕೊಳ್ಳುವುದಿಲ್ಲ,” ಅಂದಳು.

ಅಬರಿಜಿನಲ್ ಬಾವುಟದಲ್ಲಿ ಅವರ ಕಪ್ಪುಬಣ್ಣದ ಚರ್ಮ, ಅವರ ಕೆಂಪು ಭೂಮಿ ಮತ್ತು ಹಳದಿ ಸೂರ್ಯ ಇವೆ. ದ್ವೀಪನಿವಾಸಿಗಳ ಬಾವುಟದಲ್ಲಿ ಹಸಿರು ಭೂಮಿ, ನೀಲಿ ಸಮುದ್ರ, ಕಪ್ಪು ಜನರು, ಐದು ದ್ವೀಪಗಳ ಒಗ್ಗಟ್ಟನ್ನು ಮತ್ತು ಸಮುದ್ರಜೀವನವನ್ನು ಸೂಚಿಸುವ ಬಿಳಿ ನಕ್ಷತ್ರ, ಅವರು ಧರಿಸುವ ತಲೆಮೇಲಿನ ಪೇಟ, ಮತ್ತು ಶಾಂತಿಯನ್ನು ಹೇಳುತ್ತದೆ. ಈ ಎರಡೂ ಬಾವುಟಗಳು ಅಧಿಕೃವಾಗಿ ಬಳಸಲ್ಪಡುತ್ತವೆ.

ಕೆಲವರ್ಷಗಳ ಹಿಂದೆ ವೈದ್ಯರು ಹೇಳಿದಂತೆ ರಕ್ತಪರೀಕ್ಷೆ ಮಾಡಿಸಲು ಹೋಗಿದ್ದೆ. ನಾನು ಕೆಲಸ ಮಾಡುತ್ತಿದ್ದ ಯೂನಿವರ್ಸಿಟಿ ಕ್ಯಾಂಪಸ್ ನಲ್ಲೆ ಕ್ಲಿನಿಕ್ ಇದ್ದದ್ದು. ಅಲ್ಲಿನ ನರ್ಸ್ ಹಾಗೇ ಮಾತನಾಡುತ್ತಾ ನಾನು ಯಾವ ದೇಶದವಳು ಎಂದೆಲ್ಲಾ ಕೇಳಿದಳು. ಬಿಳಿಯರಲ್ಲದ ಇತರೇ ಬಣ್ಣದ ಜನ ಬಂದರೆ ತಾನು ಹೇಗೆ ಹೆಚ್ಚು ಜಾಗರೂಕತೆಯನ್ನ ವಹಿಸಬೇಕಾಗುತ್ತದೆ, ಎಂದಳು. ಕೂತೂಹಲವೆನಿಸಿ ಯಾಕೆಂದು ಕೇಳಿದೆ. ಬೇರೆ ಸಂಸ್ಕೃತಿ, ಇಂಗ್ಲಿಷ್ ಭಾಷೆ ಸರಿಯಾಗಿ ಮಾತನಾಡುವುದಿಲ್ಲ, ಹಲವಾರು ಕಾರಣಗಳಿಗಾಗಿ, ಎನ್ನುತ್ತಾ ಅವಳು ಹಿಂದಿನ ತಿಂಗಳು ಐದು ಮಂದಿ ಅಬರಿಜಿನಲ್ ಜನರ ಗುಂಪೊಂದು ತನ್ನ ಈ ಪುಟ್ಟ ಕ್ಲಿನಿಕ್ ಗೆ ಬಂದಿತ್ತು, ಅಂದಳು. ಸುಮ್ಮನಿದ್ದೆ. ಧೈರ್ಯ ಬಂದು ಅವಳು ಮಾತು ಮುಂದುವರೆಸಿದಳು. ಕಡುಕಪ್ಪು ಚರ್ಮದ, ಗುಂಗರು ಕೂದಲಿನ ಅವರನ್ನು ನೋಡಿ ಅವಳು ಗಾಬರಿಬಿದ್ದಳಂತೆ. ಬೆನ್ನಲ್ಲಿ ಬೆವರು ಹರಿಯಿತಂತೆ. ನಗರದ ಈ ಭಾಗದಲ್ಲಿ ಅವರ ಜನರು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ, ಎಲ್ಲಾ ಬಿಟ್ಟು ತನ್ನ ಕ್ಲಿನಿಕ್ಕಿಗೇ ಯಾಕೆ ಬಂದರು ಅನ್ನಿಸಿತಂತೆ. ಅವರಲ್ಲಿ ಇಬ್ಬರು ದಢೂತಿ ಗಂಡಸರು. ಒಬ್ಬ ಹೆಂಗಸು ಅವಳ ಟೀಶರ್ಟ್ ಒಳಗೆ ಬ್ರಾ ಹಾಕಿರಲಿಲ್ಲ. ಈ ಜನರ ಬಳಿ ಹೇಗೆ ಮಾತನಾಡುವುದೆಂದು ತೋಚಲಿಲ್ಲವಂತೆ. ನಾನು ಸುಮ್ಮನಿರದೆ ‘ಯಾಕೆ’ ಎಂದು ಪ್ರಶ್ನಿಸಿದೆ. “ಆ ಕಪ್ಪು ಜನರನ್ನ ನೋಡಿದರೆ ಸಾಕು ನಮಗೆ ಬಿಳಿಯರಿಗೆ ಹೆದರಿಕೆಯಾಗುತ್ತದೆ. ಅವರು ನಮ್ಮಂತಿಲ್ಲವಲ್ಲ. ಅದಕ್ಕೆ, ಏನು ಮಾಡುವುದು, ಹೇಗೆ ವ್ಯವಹರಿಸಬೇಕು? ಅದೂ ಅಲ್ಲದೆ ಐದು ಜನರು ಒಟ್ಟಿಗೇ ಬಂದರೆ ಪ್ರಾಣಭಯವಾಗುತ್ತದೆ. ದಾಳಿಮಾಡಿದರೆ ಏನು ಮಾಡುವುದು?” ಅಂದಳು. ಸದ್ಯ, ಅಷ್ಟರಲ್ಲಿ ಅವಳು ಬಾಟಲಿಯಲ್ಲಿ ನನ್ನ ರಕ್ತವನ್ನು ತುಂಬಿಸಿದ್ದಳು. ನನ್ನ ಹೆಸರಿನ ಲೇಬಲ್ಲನ್ನೇ ಅದರ ಮೇಲೆ ಅಂಟಿಸಿದ್ದನ್ನು ಖಾತ್ರಿಪಡಿಸಿಕೊಂಡು ಜಾಗ ಖಾಲಿಮಾಡಿದೆ. ನಂತರ ಮುಂದೆ ಒಂದು ದಿನ ಕ್ಲಾಸಿನಲ್ಲಿ ಆ ಸಂಭಾಷಣೆಯನ್ನೇ ಒಂದು scenario ವಿಷಯವನ್ನಾಗಿ ಪರಿವರ್ತಿಸಿ (ಗೋಪ್ಯತೆಯನ್ನು ಕಾಪಾಡಿಕೊಂಡು) ವಿದ್ಯಾರ್ಥಿಗಳ ಚರ್ಚೆಗೆ ಬಿಟ್ಟೆ. ಕ್ಲಾಸಿನ ಮುಕ್ಕಾಲು ವಿದ್ಯಾರ್ಥಿಗಳು ಆ ನರ್ಸಿನ ಅನುಭವವನ್ನು ಸಮರ್ಥಿಸಿ, ಅವಳ ಸ್ಥಾನದಲ್ಲಿ ತಾವಿದ್ದರೆ ತಮಗೂ ಅಂತಹದೇ ಭಾವನೆಯಾಗುತ್ತದೆ, ಅಂದರು.

ಹಿಂದಿನ ಲೇಖನದಲ್ಲಿ ಹೇಳಿದಂತೆ ಈ ಚಿಕ್ಕ, ಚೊಕ್ಕ ನಗರದ ಹೊರವಲಯಕ್ಕೆ ಕಾಲಿಟ್ಟರೆ ಸಾಕು, ನೇರವಾಗಿ ಪ್ರಕೃತಿಯ ಮಡಿಲಲ್ಲೇ ಇರುತ್ತೇವೆ. ಒಳ್ಳೆ ಉದಾಹರಣೆ ಎಂದರೆ ನಗರದಂಚಿನಲ್ಲೇ ಇರುವ ಮೌಂಟ್ ಕೂಠ (Mt Cootha). ಈ ಚಿಕ್ಕ ಬೆಟ್ಟ ಬಲು ಹೆಸರುವಾಸಿ. ನಗರದ ಪಶ್ಚಿಮದಿಕ್ಕಿನಲ್ಲಿ ಇರುವ ಹಚ್ಚ ಹಸಿರು ವಲಯದಲ್ಲಿ ಇದೆ. ನಗರವಾಸಿಗೆಳಿಗೆ ಇದು ಚಿರಪರಿಚಿತ. ಪ್ರಸಿದ್ಧ ಪ್ರವಾಸಿ ತಾಣ. ಚಾರಣಿಗರಿಗೆ, ಮ್ಯಾಪ್ ಹಿಡಿದು orienteering ಮಾಡುವವರಿಗೆ, ಸಾಮಾನ್ಯ ನಡಿಗೆಗಾರರಿಗೆ, ಓಟಗಾರರಿಗೆ, ಪಕ್ಷಿವೀಕ್ಷಣೆಗೆ, ಸಣ್ಣಪುಟ್ಟ ಪ್ರಾಣಿಗಳನ್ನು ನೋಡುವುದಕ್ಕೆ ಎಲ್ಲದಕ್ಕೂ ಇದು ಹೇಳಿಮಾಡಿಸಿದಂತಿದೆ. ಬೆಟ್ಟದ ಮೇಲಿರುವ ತಂಗುದಾಣಕ್ಕೆ ಹೋದರೆ ಇಡೀ ನಗರದ ವಿಹಂಗಮ ನೋಟ ಸಿಗುತ್ತದೆ. ಇಳಿ ಸಂಜೆಯ ಹೊತ್ತಿನಲ್ಲಿ ಅಲ್ಲಿ ಕೂತರೆ ದೂರದಲ್ಲಿ ಹಾವಿನಂತೆ ಸುರಳಿ ಸುರಳಿಯಾಗಿ ಹರಿಯುತ್ತಿರುವ ಬ್ರಿಸ್ಬನ್ ನದಿ, ಆಚೀಚೆ ಇರುವ ಸಣ್ಣ ಪುಟ್ಟ ತೊರೆಗಳು, ಇನ್ನೂ ಆಚೆ ಇರುವ ಹಸಿರು ಕಣ್ಣ ತುಂಬುತ್ತವೆ.

ಈ ಬೆಟ್ಟದ ಹೆಸರನ್ನು (Coo-tha), ಸ್ಥಳ ಚರಿತ್ರೆಯನ್ನು, ಬೆಟ್ಟದ ಜೊತೆ ಬೆಸೆದಿರುವ ಮೂಲನಿವಾಸಿಗಳ ನಂಟನ್ನೂ ಸರಕಾರ ಚೆನ್ನಾಗಿಯೇ ಪ್ರಚಾರ ಮಾಡಿದೆ. ಬೆಟ್ಟದ ಮೇಲೆ ಇರುವ ವೀಕ್ಷಣಾ ತಾಣಕ್ಕೆ ಬರುವ ಜನರು ಆ ನಂಟನ್ನು ಹೇಳುವ ಫಲಕವನ್ನು ನೋಡಿ ಓದುತ್ತಾರೆ. ಬ್ರಿಟಿಷರು ಆಸ್ಟ್ರೇಲಿಯಾವನ್ನು ಆಕ್ರಮಿಸುವ ಮುಂಚೆ, ಆಕ್ರಮಣದ ಆರಂಭ ಹಂತಗಳಲ್ಲಿ ಕೂಡ ಇನ್ನೂ ಜೀವಂತವಾಗಿದ್ದ ಮೂಲನಿವಾಸಿಗಳ ಉತ್ತಮ ಜೀವನವನ್ನು ಇಲ್ಲಿ ಚಿತ್ರಗಳಲ್ಲಿ ತೋರಿಸಿದ್ದಾರೆ. ಬೆಟ್ಟದ ಅರ್ಧದಲ್ಲಿ ಮತ್ತೊಂದು ಕಡೆ ಪ್ಲಾನಿಟೇರಿಯಂ ಇದೆ. ಇಲ್ಲೂ ಕೂಡ ಮೂಲನಿವಾಸಿಗಳ ಪ್ರಕೃತಿಜ್ಞಾನವನ್ನೂ, ಆಕಾಶದಲ್ಲಿನ ನಕ್ಷತ್ರಗಳ, ಖಗೋಳಶಾಸ್ತ್ರದ ಬಗ್ಗೆ ಇದ್ದ ಅವರ ತಿಳುವಳಿಕೆಯನ್ನೂ, ಅವರ ಡ್ರೀಮ್ ಟೈಮ್ ಸ್ಟೋರಿಸ್ (Dreamtime Stories) ಬಗ್ಗೆ ಇರುವ ಮಾಹಿತಿಯನ್ನು ಚಿತ್ರಗಳಲ್ಲಿ ಹೇಳಿದ್ದಾರೆ. ಅದನ್ನೆಲ್ಲಾ ನೋಡಿದರೆ, ಓದಿದರೆ ಯಾರಿಗೇ ಆಗಲಿ ಜನವರಿ ೨೬ರ ಆಸ್ಟ್ರೇಲಿಯಾ ಡೇ-ಆಸ್ಟ್ರೇಲಿಯಾ ದೇಶದ ಹುಟ್ಟುಹಬ್ಬವನ್ನು ಆಚರಿಸುವ ಪರಿಪಾಠದ ಬಗ್ಗೆ, ಧೋರಣೆಯ ಕುರಿತು ಪ್ರಶ್ನೆಗಳೇಳುತ್ತವೆ. ಆದರೆ ಎಷ್ಟೋ ಮಂದಿ ಬಿಳಿಜನರಿಗೇ ಅಂತಹ ಆಚರಣೆಯ ಬಗ್ಗೆ ಕೀಳರಿಮೆ ಮತ್ತು ನಾಚಿಕೆ ಇದೆ ಎನ್ನುವುದೂ ಕೂಡ ಸತ್ಯ. ಇದು ಎಲ್ಲರಿಗೂ ಸಲ್ಲುವ ದಿನ ಅಲ್ಲ ಎನ್ನುವುದು ಸ್ಪಷ್ಟವಾಗಿ ಮೇಲ್ನೋಟಕ್ಕೇ ಕಾಣುತ್ತದೆ.

ಇಲ್ಲಿನ ವಸಾಹತುಶಾಹಿ ಚರಿತ್ರೆಗೆ ಇನ್ನೊಂದು ಉದಾಹರಣೆ ಎಂದರೆ ಅಲ್ಲಲ್ಲಿ ಕಾಣಿಸುವ ಫಲಕಗಳು. ನಗರವನ್ನು ಸುತ್ತುತ್ತಾ ಉದ್ಯಾನವನಗಳಲ್ಲಿ ಇರುವ ಫಲಕಗಳನ್ನು ಗಮನಿಸಿದರೆ ಕೆಲವು ಆಯಾ ಸ್ಥಳದ ಚರಿತ್ರೆಯನ್ನು ದಾಖಲಿಸಿವೆ. ಒಂದೂ ಚಿಲ್ಲರೆ ಶತಮಾನದ ಹಿಂದೆ ಹೇಗೆ ಅಬರಿಜಿನಲ್ ಜನರು ಆ ಜಾಗದಲ್ಲಿ ಬಾಳಿ ತಮ್ಮ ಜೀವನವನ್ನು ಚೆನ್ನಾಗಿ ಬದುಕಿದ್ದರು, ನಂತರ ಅದು ಯಾವುದೋ ಬ್ರಿಟಿಷ್ ವ್ಯಕ್ತಿಯ ಕೈಸೇರಿತು, ಕಾಲಕ್ರಮೇಣ ಅವನ ಕುಟುಂಬದವರು ಆ ಜಾಗವನ್ನು ಸರಕಾರಕ್ಕೆ ದಾನ ಮಾಡಿ ಅದು ಹೀಗೆ ಒಂದು ಉದ್ಯಾನವನವಾಯ್ತು ಎಂಬ ಕತೆ ತಿಳಿಯುತ್ತದೆ. ಆಗ ಜನವರಿ ೨೬ ಎಂಬ ಆಸ್ಟ್ರೇಲಿಯಾದ ಹುಟ್ಟುಹಬ್ಬದ ಕಹಿ ಇನ್ನೂ ಜಾಸ್ತಿಯಾಗುತ್ತದೆ.

ಆದರೇನು, ಜಗತ್ತಿನಾದ್ಯಂತ ಇರುವ ತಿಳುವಳಿಕೆಯೆಂದರೆ ಜನವರಿ ೨೬ ಆಸ್ಟ್ರೇಲಿಯಾ ಡೇ, ಈ ದೇಶವನ್ನು ಬ್ರಿಟಿಷರು ‘ಕಂಡು ಹಿಡಿದ’ ದಿನ. ಈ ದಿನವನ್ನ ಬಿಳಿಯರು ಕಂಡಾಪಟ್ಟೆ ಪ್ರೀತಿಸುತ್ತಾರೆ. ಮೂಲನಿವಾಸಿಗಳು ತಿರಸ್ಕರಿಸುತ್ತಾರೆ. ಏನೇ ಆಗಲೀ, ‘ಅವರಂತೆ ನಾವಲ್ಲ; ನಮ್ಮಂತೆ ಅವರಿಲ್ಲ’ ಅನ್ನೋ ಮಾತು ಬಿಳಿಯರಿಗೆ, ಅಬರಿಜಿನಲ್ ಜನರಿಗೆ ಮತ್ತು ನನ್ನಂಥ ವಲಸಿಗರಿಗೆ ಬಹಳಾ ಪ್ರಸ್ತುತ! ಈ ಮೂವರು ಸೇರಿ ಸಂಧಿಸಿರುವ ತ್ರಿಕೋನದ ಮೇಲೆಯೇ ಆಸ್ಟ್ರೇಲಿಯನ್ multiculturalism ನಿಂತಿರುವುದು ಅನಿಸುತ್ತಿದೆ.